ಚಿತ್ತಾರ — ಸಣ್ಣ ಕಥೆಗಳು

ಚಿತ್ತಾರ 

ರಾತ್ರಿ ಕೆಲಸ ಮುಗಿಸಿಕೊಂಡು ಮನೆಗೆ ಬಂದ ಅಪ್ಪ ಆಗಲೇ ಮಲಗಲು ತಯಾರಾಗುತ್ತಿದ್ದ ಮಕ್ಕಳನ್ನು ಮುದ್ದಿಸಲು ಹೋದಾಗ, ಮಕ್ಕಳು ” ಅಪ್ಪ….  ಬೆವರು ವಾಸನೆ, ಹೋಗಿ ಮೊದಲು ಸ್ನಾನ ಮಾಡಿ” ಎಂದು ಕೂಗಿದರು.  ಅಪ್ಪ ನಸು ನಗುತ್ತಾ ಹಾಕಿದ್ದ ಅಂಗಿಯನ್ನು ಕಳಚಿ ಬಾಗಿಲ ಕೊಂಡಿಗೆ ಸಿಗಿಸಿ ಸ್ನಾನಕ್ಕೆ ಹೋದ.  ಮಕ್ಕಳು ಅಪ್ಪ ಹಾಕಿದ್ದ  ಅಂಗಿಯ ಮೇಲೆ ಬೆವರು ಒಣಗಿ ಬೆಳ್ಳಿಯ ಚಕ್ರಗಳಂತೆ ಮೂಡಿದ್ದ ಚಿತ್ತಾರದಲ್ಲಿ ಒಂದೊಂದೇ ಚಕ್ರಗಳನ್ನು ಎಣಿಸತೊಡಗಿದರು.  ಆದರೆ ಮಕ್ಕಳಿಗೆ ಅಂಗಿಯ ಮೇಲೆ ಆ ಚಕ್ರಗಳ ಚಿತ್ತಾರ  ಮೂಡಿದರೆ ಮಾತ್ರ ಅವರ ಜೀವನ ಚಕ್ರ ಮುಂದೆ ಸಾಗುವುದು  ಅನ್ನುವ ಸತ್ಯ ಅರ್ಥ ಮಾಡಿಕೊಳ್ಳುವಷ್ಟು ಬುದ್ದಿ ಇರಲಿಲ್ಲ. 

ಪದಕ 

“ನೋಡು, ಪರೀಕ್ಷೆ ಹತ್ತಿರ ಬಂತು, ಇನ್ನು ಆಟ ಎಲ್ಲ ಬಂದ್,  ಆಟದಿಂದ ನಿನ್ನ ಜೀವನ ಉದ್ದಾರ ಆಗಲ್ಲ, ನಾಲಕ್ಕು  ಅಂಕ ತೆಗೆದರೆ ಒಳ್ಳೆ ಕಾಲೇಜಿನಲ್ಲಿ ಸೀಟು ಸಿಗುತ್ತೆ, ಇಂಜಿನೀರೋ , ಡಾಕ್ಟರೋ ಆಗಬಹುದು, ಗೊತ್ತಾಯ್ತಾ ? ನೀನು ಗೆದ್ದ ಪದಕಗಳೆಲ್ಲ ನಿನಗೆ ಅನ್ನ ಹಾಕಲ್ಲ ”  ಎಂದು ಗದರಿ ಮಗನಿಗೆ  ಓದಲು ಹೇಳಿ,  ಅಪ್ಪ ಹೆಂಡ್ತಿಗೆ ಕಾಫಿ ಮಾಡಲು ಹೇಳಿ, ಅವತ್ತಿನ ಸುದ್ದಿ ಪತ್ರಿಕೆ ಓದಲು ಕುಳಿತ.  ಆಗ ಅವನ  ಸ್ನೇಹಿತರು ಮನೆಗೆ ಬಂದರು.  ಅವರ ಜೊತೆ  ಕಾಫಿ ಕುಡಿಯುತ್ತಾ , ಪೇಪರ್ನಲ್ಲಿ ಭಾರತಕ್ಕೆ ಒಲಂಪಿಕ್ ನಲ್ಲಿ ೭ ಪದಕ ಬಂದಿದ್ದ ಸುದ್ದಿ ಓದುತ್ತಾ , ” ಭಾರತದಲ್ಲಿ ೧೩೦ ಕೋಟಿ ಜನಸಂಖ್ಯೆ ಇದೆ, ಆದರೂ ನಮಗೆ ಬರಿ ೭ ಪದಕ ಅಷ್ಟೇ, ನಮ್ಮ ಯೋಗ್ಯತೆ ಇಷ್ಟೇನಾ ” ಅಂತ ಹೇಳುವಾಗ,  ಮನೆಯ ಶೋ ಕೇಸ್ನಲ್ಲಿ ಅವನ ಮಗ ಗೆದ್ದು ತಂದಿದ್ದ,  ಮಿರ ಮಿರ ಮಿಂಚುತ್ತಿದ್ದ ಪದಕಗಳು ಸಣ್ಣಗೆ ನಗುತ್ತಿದ್ದವು. 

ಆತಂಕ 

ಬೆಳಗ್ಗೆ ಎದ್ದಾಗಿನಿಂದ ಹೆಂಡತಿ ಎಂದಿನಂತೆ ಗುಂಡನನ್ನು  ಮಾತನಾಡಿಸಲಿಲ್ಲ.  ಕಾಫಿ ಮಾಡಿ ತಂದು ಅವನ ಮುಂದೆ ತಂದು ಕುಕ್ಕಿದಳು.  ಮುಖ ಸಿಕ್ಕಾಪಟ್ಟೆ ದಪ್ಪ ಮಾಡಿಕೊಂಡಿದ್ದಳು, ಕಣ್ಣಲ್ಲಿ ನೀರು ತುಂಬಿಕೊಂಡಿದ್ದಳು. ಗುಂಡ  ನಿಧಾನವಾಗಿ ” ಏನಾಯ್ತೆ?” ಎಂದ.  ಹೆಂಡತಿ ಮಾತಾಡಲ್ಲ ಎನ್ನುವಂತೆ  ಕೈ ಅಲ್ಲಾಡಿಸಿ ಒಳಗೆ ಹೋದಳು.    ಗುಂಡ ಕಾಫಿ ಕುಡಿಯುತ್ತ ” ಏನಾಯಿತಪ್ಪ,  ನಾನು ಏನು ಮರೆತೇ, ಇವತ್ತು ಅವಳ ಹುಟ್ಟಿದ ಹಬ್ಬ ಅಲ್ಲ , ನಾವು ಮದುವೆ ಆದ ದಿನವಲ್ಲ,  ಎಲ್ಲಿಗೋ ಕರೆದುಕೊಂಡು ಹೋಗುತ್ತೇನೆ ಅಂತ ಹೇಳಿಲ್ಲ,  ರಾತ್ರಿ ಆರಾಮಾಗೆ ಇದ್ದಳಲ್ಲ, ಏನು ತಪ್ಪು ಮಾಡಿದೆ ಅಂತ ಆತಂಕದಿಂದ ಯೋಚಿಸಲು   ಶುರು ಮಾಡಿದ. ಏನು ಯೋಚನೆ ಮಾಡಿದರು ಏನು ಅಂತ ಗೊತ್ತಾಗಲಿಲ್ಲ. ಸ್ವಲ್ಪ ಧೈರ್ಯ ಮಾಡಿ ಅಡುಗೆ ಮನೆಗೆ ಹೋಗಿ ” ಏನಾಯ್ತೆ, ನನ್ನಿಂದ ಏನಾದರು ತಪ್ಪಾಯ್ತೆ , ಹೇಳೇ… ನೀನು ಹೀಗೆ ಅತ್ತರೆ ನನಗೆ ಏನು ಗೊತ್ತಾಗಬೇಕು” ಎಂದು ಹೇಳಿದ.  ಅವನ ಹೆಂಡತಿ ” ರಾತ್ರಿ ಇಂದ ಹಲ್ಲು ನೋವು ಕಣ್ರೀ”  ಎಂದು ಅಳಲು ಶುರು ಮಾಡಿದಳು. ಗುಂಡನಿಗೆ ಅವಳ ಹಲ್ಲು ನೋವಿಗಿಂತ ತಾನೇನು ಮರೆತಿಲ್ಲ, ನನ್ನಿಂದ ಏನು ತಪ್ಪಾಗಿಲ್ಲ ಎಂದು ತಿಳಿದು ಮನಸ್ಸಿನಲ್ಲಿದ್ದ ಆತಂಕ ಕಮ್ಮಿ ಆಗಿ ಮನಸ್ಸಿಗೆ ಸಮಾಧಾನವಾಯಿತು. ಆದರೆ ಅದನ್ನು ತೋರಿಸಿಕೊಳ್ಳಲು ಆಗದೆ ಹೆಂಡತಿಗೆ ಸಮಾಧಾನ ಮಾಡಲು ಶುರುಮಾಡಿದ. 

ಸೆರಗು 

ಯಾವುದೇ ಕೆಲಸವಿಲ್ಲದೇ ಮನೆಯಲ್ಲಿ ಯಾವಾಗ್ಲೂ ಮಲಗಿಕೊಂಡು ಕಾಲ ಕಳೆಯುತ್ತಿದ್ದ ಮಗ ಮಲಗಿದ್ದ ಜಾಗದಿಂದಲೇ ” ಅಡುಗೆ ಇನ್ನು ಆಗಿಲ್ವಾ , ಹಸಿವಾಗ್ತಿದೆ ” ಎಂದು ಕೂಗು ಹಾಕಿದ.  ಒಳಗಿನಿಂದ ತಾಯಿಯ ಧ್ವನಿ ಕೇಳದೆ ಇದ್ದಾಗ ಮತ್ತೊಮ್ಮೆ ಜೋರಾಗಿ ” ಅಮ್ಮ, ಊಟ ಕೊಡೆ, ಬೇಗ” ಎಂದು ಕೂಗಿದ. ಆದರೂ ಯಾವುದೇ ಉತ್ತರ ಬಾರದ ಕಾರಣ ” ಅಪ್ಪ ಸತ್ತ ಮೇಲೆ, ಈ ಅಮ್ಮನ ಕಿವಿನೂ ಬಿದ್ದು ಹೋಯ್ತು ಅಂತ ಕಾಣುತ್ತೆ, ಎಲ್ಲ ನನ್ನ ಕರ್ಮ ” ಎಂದು ಗೊಣಗುತ್ತ ಅಡುಗೆ ಮನೆಗೆ ಹೋಗಿ ನೋಡಿದರೆ ಅಲ್ಲಿ ಅಮ್ಮ ಕಾಣಿಸಲಿಲ್ಲ.  ಆಗ ಹಿಂದಿನ ಬಾಗಿಲಿನಿಂದ ಸೆರಗು ಸರಿ ಮಾಡಿಕೊಳ್ಳುತ್ತಾ ಒಳಗಡೆ ಬರುತ್ತಿದ್ದ ಅಮ್ಮ ಕಾಣಿಸಿದಳು. ಅದನ್ನು ನೋಡಿ” ಈ ವಯಸ್ಸಿನಲ್ಲಿ ನಿನಗೆ ಇದೆಲ್ಲ ಬೇಕಿತ್ತಾ ? ತು ನಿನ್ನ ಜನ್ಮಕ್ಕೆ” ಎಂದು ಬೈದು ಮನೆಯಿಂದ ಹೊರಗೆ ಹೋದ.  ಮಗನ ಮಾತು ಕೇಳಿ, ಅಮ್ಮನ ಕಣ್ಣಲ್ಲಿ ನೀರು ತುಂಬಿ ಬಂದು,  ಹಾಗೆ ಸೆರಗು ಹಿಡಿದಿದ್ದ  ಕೈ ಬಿಟ್ಟು ನಿಂತಳು.  ಸೆರಗಿನಿಂದ ಪಕ್ಕದ ಮನೆಯಲ್ಲಿ ಇಸಿದುಕೊಂಡು ಬಂದಿದ್ದ ಅಕ್ಕಿ ಕೆಳಗೆ ಜಾರಿ ಬೀಳತೊಡಗಿತು.  

– ಶ್ರೀನಾಥ್ ಹರದೂರ ಚಿದಂಬರ 

2 thoughts on “ಚಿತ್ತಾರ — ಸಣ್ಣ ಕಥೆಗಳು

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s