ಓಡಿ ಹೋದವಳು !!

“ಗೋವಿಂದನ ಮಗಳು ಓಡಿ ಹೋದ್ಳಂತೆ ”  ಎಂಬ ಸುದ್ಧಿ ಪುಟ್ಟಳ್ಳಿಯಲ್ಲಿ  ಬೆಳಗ್ಗಿನಿಂದಲೇ  ಹರಿದಾಡಲು ಶುರುವಾಗಿತ್ತು.  ಪುಟ್ಟಳ್ಳಿ ಹೆಸರಿಗೆ ತಕ್ಕಂತೆ  ಕೇವಲ  ಮುನ್ನೂರು ಕುಟುಂಬಗಳಿದ್ದ ತುಂಬಾ ಸಣ್ಣ ಹಳ್ಳಿ.  ಪುಟ್ಟಳ್ಳಿಯಲ್ಲಿ ಇದ್ದದ್ದು  ಒಂದು ಮುಖ್ಯ ರಸ್ತೆ ಮತ್ತು  ಆ ರಸ್ತೆಯಲ್ಲಿ  ಒಂದು ಸಣ್ಣ ಕ್ಯಾಂಟೀನ್,  ದಿನಸಿ ಅಂಗಡಿ,  ಬಟ್ಟೆ ಅಂಗಡಿ,  ಕ್ಷೌರದ ಅಂಗಡಿ,  ಬೀಡಿ  ಅಂಗಡಿ, ಹೀಗೆ ನಾಲ್ಕೈದು ಅಂಗಡಿಗಳು ಮಾತ್ರ  ಇದ್ದವು. ಊರಿನ ಬಹುತೇಕ ಮಂದಿಯ ಕೆಲಸ ವ್ಯವಸಾಯವಾಗಿತ್ತು. ವಾರಕೊಮ್ಮೆ ಸಂತೆ ಆಗುವುದು ಬಿಟ್ಟರೆ ಬೇರೇನೂ  ವ್ಯವಹಾರ ವಹಿವಾಟ ಆಗುತ್ತಿರಲಿಲ್ಲ. ಪುಟ್ಟಳ್ಳಿಗೆ  ಹತ್ತಿರದ  ಜಗಳೂರಿನಿಂದ  ದಿನಕ್ಕೆ ಎರಡು ಬಾರಿ ಬಸ್ಸು ಬರುತ್ತಿತ್ತು.  ಬೆಳಗ್ಗೆ ಬಂದ ಬಸ್ಸೇ,   ವಾಪಸು  ಹೋಗಿ ಸಂಜೆ ಮತ್ತೆ ಬರುತ್ತಿತ್ತು.  ಬೆಳಿಗ್ಗೆ  ಯಾರಾದರೂ ಆ ಬಸ್ಸಿನಲ್ಲಿ  ಊರಿಗೆ ಹೋದರ,  ಮತ್ತೆ ಸಂಜೆ  ಅದೇ ಬಸ್ಸಿಗೆ ವಾಪಸು ಬರುತ್ತಿದ್ದರು.  ಪುಟ್ಟಳ್ಳಿಯಲ್ಲಿ  ಕೇವಲ ನಾಲಕ್ಕನೆ ತರಗತಿಯ ತನಕ ಇದ್ದ ಒಂದು ಸಣ್ಣ ಶಾಲೆ ಇತ್ತು.  ನಾಲಕ್ಕನೆ ತರಗತಿ ಮುಗಿದ ನಂತರ ಮಕ್ಕಳೆಲ್ಲ ಪಕ್ಕದ ಜಗಳೂರಿನ ಶಾಲೆಗೇ  ಹೋಗಿ ಬರುತ್ತಿದ್ದರು.  ಪುಟ್ಟಳ್ಳಿಯಲ್ಲಿ ಹೆಣ್ಣು ಮಕ್ಕಳನ್ನು ನಾಲಕ್ಕನೆ ತರಗತಿ ಆದ ಮೇಲೆ  ಮುಂದಿನ ಓದಿಗೆ ಶಾಲೆಗೇ ಕಳುಹಿಸುತ್ತಿರಲಿಲ್ಲ. ಅವರ ವಯಸ್ಸು ಹದಿನಾರು ತುಂಬುತ್ತಿದ್ದಂತೆ ಮದುವೆಗೆ ತಯಾರಿ ನಡೆಸುತ್ತಿದ್ದರು ಅಲ್ಲಿನ ಮನೆಯವರು.  ಅಲ್ಲಿನ ಹೆಣ್ಣು ಮಕ್ಕಳು ನಾಲಕ್ಕನೆ ತರಗತಿಯಾ ತನಕ  ಓದಿ, ಮನೆ ಕೆಲಸ ಮಾಡಿಕೊಂಡು,  ಮದುವೆ ಆಗುವ ತನಕ ಮನೆಯಲ್ಲಿದ್ದು ನಂತರ ಗಂಡನ ಮನೆಗೆ ಹೊರಟುಹೋಗುತ್ತಿದ್ದರು. ಹೆಣ್ಣು ಮಕ್ಕಳು ಆರು ತಿಂಗಳಿಗೊಮ್ಮೆ ಅಥವಾ ವರುಷಕ್ಕೆ ಒಮ್ಮೆ ಜಗಳೂರಿಗೆ ಅವರ ಅಪ್ಪ ಅಮ್ಮನ ಜೊತೆಯಲ್ಲಿ ಹೋಗಿಬರುತ್ತಿದ್ದುದು ಬಿಟ್ಟರೆ ಮನೆಯಿಂದ ಹೊರಗಡೆ ಕಾಲಿಡುತ್ತಿದ್ದುದೇ ಕಮ್ಮಿ. ಅಂತ ಪುಟ್ಟಳ್ಳಿಯಲ್ಲಿ ಗೋವಿಂದನ ಮಗಳು ಮನೆ ಬಿಟ್ಟು ಓಡಿ ಹೋಗಿದ್ದಾಳೆ ಅನ್ನುವ ವಿಷಯ ಅಲ್ಲಿನ ಜನಕ್ಕೆ ಅಷ್ಟು ಸುಲಭವಾಗಿ ಅರಗಿಸಿಕೊಳ್ಳಲು ಆಗಿರಲಿಲ್ಲ. 

ಪುಟ್ಟಳ್ಳಿಯಲ್ಲಿ  ಒಬ್ಬರ  ಮನೆಯ ವಿಷಯ ಇನ್ನೊಬ್ಬರಿಗೆ ತಿಳಿಯಲು ಅಂತ ಸಮಯ ಏನು ಬೇಕಾಗುತ್ತಿರಲಿಲ್ಲ. ಮನೆ ಜಗಳ, ಅತ್ತೆ ಸೊಸೆ ಜಗಳ, ಆಸ್ತಿಗಾಗಿ ಕಚ್ಚಾಟ ಇವೆಲ್ಲ ಮಾಮೂಲಿ ವಿಷಯಗಳಾಗಿದ್ದವು.   ಆದರೆ ಈ ವಿಷಯ ಮಾತ್ರ ಬಹಳ ದೊಡ್ಡದಾಗಿ ಹರಡಲು ಕಾರಣ ಏನೆಂದರೆ, ಈ ರೀತಿಯಾಗಿ ಆ ಹಳ್ಳಿಯಲ್ಲಿ ಒಂದು ಹೆಣ್ಣು ಮಗಳು ಮದುವೆ ಆಗದೆ ಊರು ಬಿಟ್ಟಿದ್ದು ಪುಟ್ಟಳ್ಳಿಯ  ಇತಿಹಾಸದಲ್ಲಿಯೇ ಇರಲಿಲ್ಲ.  ನೀರು ಹಿಡಿಯಲು ನಿಂತ ಹೆಂಗಸರು, ಗದ್ದೆಯಲ್ಲಿ ಕೆಲಸಕ್ಕೆ ಹೊರಟು  ನಿಂತ ಗಂಡಸರು, ಏನು ಅರ್ಥವಾಗದಿದ್ದರೂ ಆಟವಾಡುತ್ತಿದ್ದ ಮಕ್ಕಳು ಸಹಿತ “ಗೋವಿಂದನ ಮಗಳು ಓಡಿ ಹೋದ್ಳಂತೆ ” ಎಂದು ಗುಸುಪಿಸು ಮಾಡುತ್ತಾ ಇದ್ದರು. ಊರಿನ ಹೆಂಗಸರು ಗೋವಿಂದನ ಸಂಸಾರದ  ಹಳೆಯ ವಿಷಯ, ಅದಕ್ಕೆ ಸ್ವಲ್ಪ ಉಪ್ಪು ಕಾರ ಹಾಕಿ, ಬೇರೆಯದೇ ರೀತಿಯಲ್ಲಿ ಅದನ್ನು ವರ್ಣ ರಂಜಿತವಾಗಿ ಹೇಳಿ ” ಯಾರಿಗೂ ಹೇಳಬೇಡಿ” ಅಂತ ಮತ್ತೊಬ್ಬರಿಗೆ ಹೇಳುತ್ತಿದ್ದರು.  ಒಬ್ಬಳು  ” ಅಲ್ಲಾ, ಪುಟ್ಟಳ್ಳಿಯ ಯಾವ  ಹೆಣ್ಣು ಮಕ್ಕಳು ಊರು ಬಿಟ್ಟು ಹೊರಗಡೆ ಓದಲಿಕ್ಕೆ ಹೋಗಿಲ್ಲ  ಅಂತ ಗೊತ್ತಿದ್ರು ಗೋವಿಂದ ತನ್ನ ಮಗಳನ್ನು ಹೊರಗಡೆ ಕಳಿಸಿದಾಗ್ಲೇ ನಾನು ಹೇಳಿದ್ದೆ,  ಈ ಹೆಣ್ಣು ಮಗಳು ಕೈ ಬಿಟ್ಟಂಗೆ ಅಂತ, ಯಾರು ಕೇಳಲಿಲ್ಲ ಆಗ, ಈಗ ಅನುಭವಿಸಲಿ” ಅಂತ ಹೇಳಿದರೆ, ಇನ್ನೊಬ್ಬಳು  ” ಅಯ್ಯೋ, ನಮ್ಮೆಜಮಾನ್ರು ಆವಾಗಲೇ ಹೇಳಿದ್ರು,  ಬರಿ ಹುಡುಗರ ಹತ್ತಿರ ಮಾತಾಡ್ತಾ ನಿಂತಿರ್ತಾಳೆ ,  ನಂಗಂತೂ  ಇದು ಈ ರೀತಿ ಆಗುತ್ತೆ ಮೊದ್ಲೇ ಗೊತ್ತಿತ್ತು” ಅಂತ ಹೇಳುತ್ತಿದ್ದಳು. ಮತ್ತೊಬ್ಬಳು ” ಈ ವಿಷಯ ಹೊರಗಡೆ ಗೊತ್ತಾದ್ರೆ, ಇನ್ನು ನಮ್ಮ ಹೆಣ್ಣು ಮಕ್ಕಳಿಗೆ ಯಾರು ಗಂಡು ಕೊಡುತ್ತಾರೆ,  ಇವಳು ತನ್ನ ಜೀವನ ಹಾಳು ಮಾಡಿಕೊಳ್ಳೋದು ಅಲ್ದೆ ನಮ್ಮ ಹೆಣ್ಣು ಮಕ್ಕಳ ಜೀವನ ಹಾಳು ಮಾಡಿ ಬಿಟ್ಟಳಲ್ಲ, ಹಾಳಾಗಿ ಹೋಗಲಿ ”  ಎಂದು ಶಾಪ ಹಾಕಿದಳು. ” ಇದನ್ನು ನೋಡಿ, ನಮ್ಮ ಹೆಣ್ಣು ಮಕ್ಕಳು ಅದೇ ದಾರಿ ಹಿಡಿದರೆ ಏನಪ್ಪಾ ಮಾಡುವುದು, ಇಂತ ಮಗಳನ್ನು ಹೆತ್ತ ಗೋವಿಂದ ಮತ್ತು ಅವನ ಹೆಂಡತಿ ಹೇಗೆ ಮುಖ ಎತ್ತುಕೊಂಡು ಬಾಳುತ್ತಾರೋ, ಬದುಕೋ ಬದಲು ಸಾಯೋದು ಮೇಲು ಅಲ್ವಾ ?” ಅಂತ ಮಗದೊಬ್ಬಳು ನೆಟ್ಟಿಗೆ ಮುರಿದಳು. 

ಪುಟ್ಟಳ್ಳಿಯಲ್ಲಿ ಗೋವಿಂದ ಒಬ್ಬನೇ ಸ್ವಲ್ಪ ಮಟ್ಟಿಗೆ ಓದಿಕೊಂಡಿದ್ದ ವ್ಯಕ್ತಿ ಆಗಿದ್ದ. ಅವನ ಅಪ್ಪ ಚೆನ್ನಾಗಿ ಓದುತ್ತಾನೆಂದು ಒಂಬತ್ತನೇ ತರಗತಿ ತನಕ ಓದಿಸಿದ್ದರು.  ಆದರೆ ಯಾವುದೋ ರೋಗ ಬಂದು ಅಪ್ಪ  ತೀರಿಕೊಂಡಿದ್ದರಿಂದ ಗೋವಿಂದ ಓದು ಬಿಟ್ಟು ಅಪ್ಪ ಮಾಡುತ್ತಿದ್ದ ವ್ಯವಸಾಯ ಮುಂದುವರೆಸಿ,  ಅವನ ತಮ್ಮಂದಿರು ಹಾಗು ತಂಗಿಯಿಂದರ ಜವಾಬ್ಧಾರಿ  ಹೊತ್ತುಕೊಂಡಿದ್ದ.  ಓದು ಅರ್ಧದಲ್ಲಿಯೇ  ನಿಲ್ಲಿಸಿದ್ದು ಅವನಿಗೆ ಬಹಳ ಬೇಜಾರು ಇತ್ತು.  ಹಾಗಾಗಿ ಅವನು  ತನ್ನ ಇಬ್ಬರು ಮಕ್ಕಳನ್ನು ಚೆನ್ನಾಗಿ ಓದಿಸಲೇಬೇಕೆಂದು ಸಂಕಲ್ಪ ಮಾಡಿದ್ದ.  ಮಗಳು ರಾಜಿ ಹಾಗು ಮಗ ರಮಣ ಇಬ್ಬರನ್ನು ಹಳ್ಳಿಯಲ್ಲಿ ನಾಲಕ್ಕನೆ ತರಗತಿ ಆದ ಕೂಡಲೇ  ಮುಂದೆ ಓದಲು ಪಕ್ಕದ ಜಗಳೂರಿಗೆ  ಕಳಿಸಲು ಶುರು ಮಾಡಿದ್ದ.  ರಾಜಿ ರಮಣನಿಗಿಂತ ಮೂರು ವರುಷ ದೊಡ್ಡವಳು.  ಮೊದಲು ರಾಜಿ ಜಗಳೂರಿಗೆ ಓದಲು  ಬಸ್ಸಿನಲ್ಲಿ ಒಬ್ಬಳೇ ಹೋಗಿಬರುತ್ತಿದ್ದಳು.  ನಂತರ ರಮಣ ಕೂಡ ಐದನೇ ತರಗತಿಗೆ  ಬಂದ  ಮೇಲೆ,  ಜಗಳೂರಿನ ಶಾಲೆಗೇ   ಅವಳ ಜೊತೆಯಲ್ಲಿ ಹೋಗಿ ಬರುತ್ತಿದ್ದ. ರಾಜಿ ಓದಿನಲ್ಲಿ ತುಂಬಾ ಮುಂದು ಹಾಗು ಆಟದಲ್ಲಿಯೂ ಸಹ ಬಹಳ ಚುರುಕಿದ್ದಳು.  ಗೋವಿಂದ  ಮಕ್ಕಳ ಓದು ಮತ್ತು ಆಟಕ್ಕೆ ಬಹಳ ಪ್ರೋತ್ಸಾಹ ನೀಡುತ್ತಿದ್ದ.  ಅದಕ್ಕೆ ತಕ್ಕಂತೆ ಇಬ್ಬರು ಮಕ್ಕಳು ಚೆನ್ನಾಗಿ ಓದುತ್ತಿದ್ದರು ಮತ್ತು ಆಟದಲ್ಲಿಯೂ ಕೂಡ ಗೆದ್ದು  ಬಹುಮಾನವನ್ನು ತೆಗೆದುಕೊಂಡು ಬರುತ್ತಿದ್ದರು. ರಾಜಿ ಹತ್ತನೇ ತರಗತಿಯಲ್ಲಿ ಓದುತ್ತಿದ್ದಳು ಹಾಗು ರಮಣ ಏಳನೇ ತರಗತಿಯಲ್ಲಿ ಓದುತ್ತಿದ್ದ. ಪ್ರತಿ ದಿನವೂ ಬೆಳಿಗ್ಗೆ ಪುಟ್ಟಳ್ಳಿಗೆ  ಜಗಳೂರಿನಿಂದ ಬರುತ್ತಿದ್ದ ಬಸ್ಸಿಗೆ ಶಾಲೆಗೇ ಹೋಗಿ ಸಂಜೆ ಅದೇ ಬಸ್ಸಿಗೆ ವಾಪಸು ಬರುತ್ತಿದ್ದರು. ಅದೇ ಊರಿನ ಕೆಲವು ಗಂಡು ಮಕ್ಕಳು ಸಹ ರಾಜಿಯ ಸಹಪಾಠಿಗಳಾಗಿದ್ದರು.  ಜೊತೆಯಲ್ಲಿ ಬೇರೆ ಹೆಣ್ಣು ಮಕ್ಕಳು ಓದಲು ಬರದೇ ಇದ್ದುದರಿಂದ ರಾಜಿ ಆ ಗಂಡು ಮಕ್ಕಳ ಜೊತೆಗೇನೆ ಮಾತನಾಡಿಕೊಂಡು ಬರುತ್ತಿದ್ದಳು. ಅಲ್ಲಿಯವರೆಗೆ ಅವಳು ಗಂಡು ಮಕ್ಕಳ ಜೊತೆಯಲ್ಲಿ ಮಾತನಾಡಿಕೊಂಡು ಬರುತ್ತಿದ್ದುದು ಜನರಿಗೆ ಬೇರೆ ಯೋಚನೆ ತಂದಿರಲಿಲ್ಲ ಆದರೆ ಇವತ್ತು ಅದಕ್ಕೆ ಬೇರೆ ಅರ್ಥನೇ ಬಂದಿತ್ತು. 

ಇತ್ತ ಗಂಡಸರು  ಹೊಲ ಗದ್ದೆಗಳಲ್ಲಿ ಇದೆ ವಿಷಯವನ್ನು ಕೆಲಸ ಮಾಡುತ್ತಾ ಮಾತನಾಡಿಕೊಳ್ಳುತ್ತಿದ್ದರು.  ಒಬ್ಬ” ಗೋವಿಂದನ ಮಗಳು ನಿನ್ನೆ ಶಾಲೆಗೇ ಹೋದವಳು ಬರಲೇ ಇಲ್ಲವಂತೆ, ಮೊದಲೇ ಎಲ್ಲ ತಯಾರಿ ಮಾಡಿಕೊಂಡೆ ಓಡಿ  ಹೋಗಿದ್ದಾಳೆ ” ಅಂತ  ಅಂದರೆ, ಮತ್ತೊಬ್ಬ ” ಬಹಳ ದಿನಗಳಿಂದ ನಡೆಯುತ್ತಾ ಇತ್ತಂತೆ, ಗೋವಿಂದನಿಗೆ ವಿಷಯ ಗೊತ್ತಿದ್ರು ಸುಮ್ಮನಿದ್ದ, ಇವತ್ತು ನೋಡಿ ಸರಿಯಾಗೇ ಅವನಿಗೆ ಮರ್ಯಾದೆ ತಂದಿದಾಳೆ ಅಂತ ಅನ್ನುತ್ತಿದ್ದ.  ಅದಕ್ಕೆ ಇನ್ನೊಬ್ಬ ” ಅಲ್ಲಾ ,  ಮಗಳು ರಾತ್ರಿ ಇಡೀ ಬರದೇ ಇದ್ದರೂ ಗೋವಿಂದ ಹುಡುಕೋದು ಬಿಟ್ಟು ಏನು ಮಾಡ್ತಾ ಇದ್ದಾ ?  ಬೆಳೆಗ್ಗೆ ತನಕ ಯಾತಕ್ಕೆ ಕಾಯುತ್ತ ಕುಳಿತ್ತಿದ್ದ ಅಂತ ಗೊತ್ತಾಗಲಿಲ್ಲ,  ಏನೋ ನಡೆದಿದೆ, ಇವತ್ತು ಸಂಜೆ ಗೋವಿಂದ ವಾಪಸು ಬಂದ ಮೇಲೇನೆ ಗೊತ್ತಾಗೋದು” ಅಂತ ಅಂದ.  ” ಏನೇ ಆಗಲಿ, ಗೋವಿಂದ ಮಗಳನ್ನು ಕರೆದುಕೊಂಡು ಬರಲಿ, ಬಿಡಲಿ ಅವರು ಮಾತ್ರ ನಮ್ಮ ಹಳ್ಳಿಯಲ್ಲಿ ಇರೋದು ಬೇಡ, ಏನಂತೀರಿ ಎಲ್ಲರೂ ?” ಅಂತ ಮಗದೊಬ್ಬ ಪ್ರಶ್ನೆ ಮಾಡಿದ. 

ಅವತ್ತು ಬೆಳಗ್ಗೆ ಪುಟ್ಟಳ್ಳಿಗೆ  ಜಗಳೂರಿನಿಂದ ಬರುತ್ತಿದ್ದ ಬಸ್ಸನ್ನು ಹಿಡಿದು ಜಗಳೂರಿಗೆ ಹೋಗಲು  ಬಹಳ ಗಡಿಬಿಡಿಯಿಂದ ಗೋವಿಂದ ಮತ್ತು ಅವನ ಹೆಂಡತಿ ಹಾಗು ಜೊತೆಯಲ್ಲಿ ಅವನ ಮಗ ರಮಣ ಹೊರಟ್ಟಿದ್ದರು. ದಾರಿಯಲ್ಲಿ ಸಿಕ್ಕ ಯಾರೋ ” ಏನು ಗೋವಿಂದ, ಬಹಳ  ಅವಸರದಲ್ಲಿ ಹೋಗುತ್ತಾ ಇದ್ದೀಯ ” ಅಂತ ಕೇಳಿದ್ದಾನೆ.   ತುಂಬ ಗಡಿಬಿಡಿಯಲ್ಲಿದ್ದ ಗೋವಿಂದ ಅವರಿಗೆ  ವಿಷಯ ತಿಳಿಸಿ ಬಸ್ಸು ಹಿಡಿದು ಹೊರಟು ಹೋಗಿದ್ದಾರೆ. ಅಲ್ಲಿಂದ ಮುಂದೆ ವಿಷಯ ಕಾಳ್ಗಿಚ್ಚಿನಂತೆ ಇಡೀ ಹಳ್ಳಿ ಹರಡಿ, ವಿಷಯಕ್ಕೆ ರೆಕ್ಕೆ ಪುಕ್ಕ ಬಂದು ಯಾರಿಗೆ ಹೇಗೆ ಬೇಕೋ ಹಾಗೂ ವಿಷ್ಯವನ್ನು ತಮ್ಮದೇ ಶೈಲಿಯಲ್ಲಿ ಹೇಳಿಕೊಂಡು ಮಾತನಾಡತೊಡಗಿದ್ದರು. ಸಂಜೆ ಆಗುವಷ್ಟರಲ್ಲಿ ಇಡೀ ಗೋವಿಂದನ ಸಂಸಾರವನ್ನು ಹಳ್ಳಿಯಿಂದ ಬಹಿಷ್ಕಾರ ಹಾಕುವುದು ಎಂಬ ತೀರ್ಮಾನಕ್ಕೆ ಹಳ್ಳಿಯವರು ಬಂದುಬಿಟ್ಟಿದ್ದರು. ಇಡೀ ಹಳ್ಳಿಯ ಜನ ಸಂಜೆ  ಜಗಳೂರಿನಿಂದ ಬರುವ ಬಸ್ಸಿಗೆ ಕಾಯುತ್ತ ನಿಂತಿದ್ದರು. ಗೋವಿಂದ ಬಂದ ಮೇಲೆ ಅಲ್ಲಿಯೇ  ಅವನ ಜೊತೆ ಚರ್ಚೆ ಮಾಡಿ,  ಬಹಿಷ್ಕಾರ ಮಾಡುವ  ವಿಷಯ  ತಿಳಿಸಿವುದು ಎಂದು ಊರಿನ ಮುಖಂಡರು ನಿರ್ದರಿಸಿಬಿಟ್ಟಿದ್ದರು. 

ಮಾಮೂಲಿನಂತೆ ಸಂಜೆ  ಜಗಳೂರಿನಿಂದ ಬಸ್ಸು ಪುಟ್ಟಳ್ಳಿಗೆ ಬಂದು ನಿಂತಿತು. ನೆರೆದಿದ್ದ ಜನರೆಲ್ಲಾ ಬಸ್ಸಿನ ಸುತ್ತ ಬಂದು ನಿಂತರು.  ಬಸ್ಸಿನ ಒಳಗಡೆಯಿಂದ ಜನ ” ಗೋವಿಂದನಿಗೆ ಜೈ, ರಾಜಿ ಗೆ ಜೈ” ಎಂದು ಕೂಗುತ್ತಿದ್ದರು.  ಹೊರಗಡೆ ನಿಂತಿದ್ದ ಜನಕ್ಕೆ ಒಮ್ಮೆಗೆ ಏನು ಅಂತ ಅರ್ಥ ಆಗಲೇ ಇಲ್ಲ.  ಬಸ್ಸಿನಿಂದ ಆ ಊರಿನ ಕೆಲವು ಮಂದಿ ರಾಜಿಯನ್ನು ತಮ್ಮ ಭುಜದ ಮೇಲೆ ಹೊತ್ತುಕೊಂಡೇ ಬಸ್ಸಿನಿಂದ ಇಳಿದರು. ರಾಜಿಯಾ  ಕೊರಳಿಗೆ ದೊಡ್ಡ ಹೂವಿನ ಹಾರ ಹಾಕಿದ್ದರು. ಅವಳ ಕೈಯಲ್ಲಿ  ಮಿರ  ಮಿರ  ಮಿಂಚುತ್ತಿದ್ದ ಒಂದು ದೊಡ್ಡ ಕಪ್ ಇತ್ತು. ಅವರ ಹಿಂದೆ ಗೋವಿಂದ ಕೂಡ ಇಳಿದ. ಅವನ ಕೊರಳಿಗೂ ಕೂಡ ದೊಡ್ಡ ಹಾರ ಹಾಕಿದ್ದರು. ಕೆಳಗಡೆ ಇಳಿದ ಅವರೆಲ್ಲ ” ರಾಜಿಗೆ ಜೈ” ಎಂದು ಜೈಕಾರ ಹಾಕುತ್ತಲೇ ಇದ್ದರು.  ಗೋವಿಂದನಿಗೆ ಅಲ್ಲಿ ನೆರೆದಿದ್ದ ಜನರನ್ನು ನೋಡಿ ಒಂದು ಕ್ಷಣ  ಆಶ್ಚರ್ಯವಾಯಿತು. ಇವರಿಗೆಲ್ಲ ವಿಷ್ಯ ಯಾರು ತಿಳಿಸಿದರು ಎಂದು ಅವನಿಗೆ ಗೊತ್ತಾಗಲಿಲ್ಲ.  ಊರಿನ ಮುಖಂಡರು ಏನು ಹೇಳುವುದು ಅಂತ ಗೊತ್ತಾಗದೆ ಪೆಚ್ಚಾಗಿ, ಮೊದಲು ವಿಷಯ ಏನೆಂದು ತಿಳಿಯೋಣ ಅಂತ ಗೋವಿಂದನಿಗೆ ” ಏನಾಯ್ತು,  ಯಾಕೆ ರಾಜಿಗೆ ಹೂವಿನ ಹಾರ ಹಾಕಿದ್ದೀರಾ? ಏನದು ಅವಳ ಕೈಯಲ್ಲಿ ಕಪ್ಪು ” ಎಂದು ಕೇಳಿದರು.  ಆಗ ಗೋವಿಂದ ” ಇವತ್ತು ರಾಜ್ಯ ಮಟ್ಟದ ಕ್ರೀಡಾ ಕೂಟದಲ್ಲಿ ರಾಜಿ ನೂರು ಮೀಟರ್ ಓಟದಲ್ಲಿ  ಮೊದಲನೇ ಬಹುಮಾನ ಗೆದ್ದಿದ್ದಾಳೆ, ಅವಳು ಓಡಿದ ಹಾಗೆ ಯಾರು ಓಡಲಿಲ್ಲ , ನಮ್ಮ ರಾಜ್ಯ ಹಾಗು ನಮ್ಮ ಹಳ್ಳಿಗೆ ಹೆಮ್ಮೆ ತಂದಿದ್ದಾಳೆ” ಎಂದು ಹೇಳಿದನು. ನೆರೆದಿದ್ದ ಜನರೆಲ್ಲರಿಗೂ ತಾವು ಬೆಳೆಗ್ಗಿನಿಂದ ಅಂದುಕೊಂಡಿದ್ದೆಲ್ಲ ಸುಳ್ಳು ಅಂತ ಗೊತ್ತಾಗಿ ಪೆಚ್ಚಾದರು.  ಆದರೆ ತಾವು ಅಂದುಕೊಂಡಿದ್ದು ಗೋವಿಂದನಿಗೆ ಗೊತ್ತಾಗಬಾರದು ಎಂದು ಗೋವಿಂದ ಮತ್ತು ರಾಜಿಗೆ ಜೈಕಾರ ಹಾಕುತ್ತ ಅವರ ಮನೆಯವರೆಗೆ ಮೆರವಣಿಗೆ ಮಾಡುತ್ತಾ ಕರೆದುಕೊಂಡು ಹೋದರು. ಗೋವಿಂದನಿಗೆ ಜನರ ಆ ಪ್ರೀತಿ ಕಂಡು ಕಣ್ಣು ತುಂಬಿ ಬಂದಿತು.  ಮಗಳನ್ನು ಓದಿಸಿ ಅವಳ ಓಟಕ್ಕೆ ಪ್ರೋತ್ಸಾಹ ನೀಡಿದ್ದು ಸಾರ್ಥಕ ಎಂದುಕೊಂಡ. 

ಆ ದಿನ ಬೆಳಿಗ್ಗೆ, ಬಸ್ಸು ಹಿಡಿಯುವ  ಅವಸರದಲ್ಲಿದ್ದ ಗೋವಿಂದನಿಗೆ ದಾರಿಯಲ್ಲಿ ಹೋಗುತ್ತಿದ್ದ ಯಾರೋ ನಿಲ್ಲಿಸಿ ಕೇಳಿದಾಗ,  ಗಡಿಬಿಡಿಯಲ್ಲಿ  ” ರಾಜಿ ಇವತ್ತು ಓಡ್ತಾ ಇದ್ದಾಳೆ, ಬಸ್ ತಪ್ಪಿದ್ರೆ ಅವಳು ಓಡೋದು ನೋಡಕ್ಕೆ ಆಗಲ್ಲ” ಅಂತ ಮಾತ್ರ ಹೇಳಿ ಬಸ್ ಹತ್ತಿ ಹೊರಟು ಹೋಗಿದ್ದ. ಅದನ್ನು ಕೇಳಿದ  ವ್ಯಕ್ತಿ ಅಪಾರ್ಥ ಕಲ್ಪಿಸಿಕೊಂಡು ” ಗೋವಿಂದ ಮಗಳು ಓಡಿ ಹೋದಳಂತೆ ” ಎಂದು ಸುದ್ದಿ ಹಬ್ಬಿಸಿದ್ದ.  

ಬೆಳೆಗ್ಗಿನಿಂದ ಹಳ್ಳಿಯಲ್ಲಿ ನಡೆದ ಯಾವ ವಿಷಯವನ್ನು ಅರಿಯದ ಗೋವಿಂದ ಮತ್ತು ಅವನ ಹೆಂಡತಿ   ಮಗಳ ಸಾಧನೆಗೆ ಹೆಮ್ಮೆ ಪಡುತ್ತಾ ಹಾಗು ಜನರ ಪ್ರೀತಿಗೆ ಕರಗುತ್ತಾ, ನೆಮ್ಮದಿಯಿಂದ  ಮಲಗಿದರು. 

ಅವತ್ತು ರಾಜಿ ಓಡಿದ್ದಳು ಆದರೆ ಓಡಿ  ಹೋಗಿರಲಿಲ್ಲ. 

ರಾತ್ರಿ ಊಟ ಆದ ಮೇಲೆ ಅಕ್ಕ ಪಕ್ಕದ ಮನೆಯ  ಹೆಂಗಸರು ಮತ್ತೆ ಮಾತನಾಡತೊಡಗಿದರು.  ಒಬ್ಬಳು” ನಂಗೆ ಗೊತ್ತಿತ್ತು, ನಮ್ ಗೋವಿಂದನ ಮಗಳು ನಮ್ಮ ಹಳ್ಳಿಗೆ ಹೆಮ್ಮೆ ತರ್ತಾಳೆ ಅಂತ, ಅವತ್ತೇ ಹೇಳಿದ್ದೆ” ಎಂದು ಹೇಳಿದರೆ ಇನ್ನೊಬ್ಬಳು  ” ನಮ್ಮ ಹೆಣ್ಣು ಮಕ್ಕಳಿಗೆ ರಾಜಿನೆ ಮಾದರಿ ಅಲ್ವಾ ? ” ಅಂತ ಹೇಳಿದರೆ ಮತ್ತೊಬ್ಬಳು ” ರಾಜಿ… … 

ಮುಂದುವರೆದ ಅವರ  ಮಾತಿನ ಓಟಕ್ಕೆ ಕಡಿವಾಣವಿರಲಿಲ್ಲ. 

– ಶ್ರೀನಾಥ ಹರದೂರ ಚಿದಂಬರ 

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s