ಘನ ಘೋರ ಯುದ್ಧ ನಡೆಯುತ್ತಿತ್ತು. ಸಾವಿರಾರು ಜನ ಆ ಯುದ್ಧದಲ್ಲಿ ತಮ್ಮ ಪ್ರಾಣ ಕಳೆದುಕೊಳ್ಳುತ್ತಿದ್ದರು. ಆ ಯುದ್ಧದಲ್ಲಿ ಅನೇಕ ಸೈನಿಕರು ಸಾಯದೆ, ಕೈ, ಕಾಲು ಕಳೆದುಕೊಂಡು ಗಾಯಗೊಂಡು, ಯುದ್ಧ ಭೂಮಿಯಲ್ಲೇ ಬಿದ್ದು ಸಾವು ಬದುಕಿನ ಮದ್ಯೆ ಹೋರಾಡುತ್ತಿದ್ದರು. ಪ್ರತಿ ದಿನ ಯುದ್ಧ ವಿರಾಮ ಘೋಷಿಸಿದ ಮೇಲೆ ಅಂತಹವರನ್ನು ಕರೆದುಕೊಂಡು ಬಂದು ಅವರಿಗೆ ಶೂಶ್ರುಷೆ ಮಾಡಲು ರಾಜ ಒಂದು ತಂಡವನ್ನು ರಚಿಸಿದ. ಆ ತಂಡವು ದಿನವೂ ಯುದ್ಧ ಭೂಮಿಗೆ ಹೋಗಿ ಅಂತಹವರನ್ನು ಹುಡುಕಿ ಅವರನ್ನು ಅಲ್ಲಿಂದ ಕರೆದುಕೊಂಡು ಬಂದು ಅವರಿಗೆ ಬೇಕಾದ ಚಿಕಿತ್ಸೆ ಸಿಗುವಂತೆ ನೋಡಿಕೊಳ್ಳುತ್ತಿದ್ದರು. ಇತ್ತ ಯುದ್ಧ ಮಾತ್ರ ಮುಂದುವರೆಯುತ್ತಲೇ ಇತ್ತು. ಅದು ಮುಗಿಯುವ ಯಾವುದೇ ಸೂಚನೆ ಕಾಣುತ್ತಿರಲಿಲ್ಲ. ರಾಜ ಪ್ರತಿ ದಿನ ಎಷ್ಟು ಜನ ಸೈನಿಕರು ಗಾಯಾಳುಗಳು ಆಗಿದ್ದಾರೆ, ಎಷ್ಟು ಜನ ಸೈನಿಕರು ಪ್ರಾಣ ತೆತ್ತಿದ್ದಾರೆ ಎಂದು ಮಂತ್ರಿಯಿಂದ ವಿವರ ಕೇಳಿ ಪಡೆಯುತ್ತಿದ್ದ. ಮೊದ ಮೊದಲು ನೂರಾರು ಗಾಯಗೊಂಡ ಸೈನಿಕರು ಚಿಕಿತ್ಸೆ ಪಡೆಯುವ ವಿವರ ಸಿಕ್ಕುತ್ತಿತ್ತು. ಆದರೆ ಕೆಲವು ದಿನಗಳು ಕಳೆದ ಮೇಲೆ ಗಾಯಾಳು ಸೈನಿಕರ ಸಂಖ್ಯೆ ಕಮ್ಮಿಯಾಗಿ, ಗಾಯಾಳು ಸೈನಿಕರು ಯಾರು ಇಲ್ಲ, ಎಲ್ಲರು ಸತ್ತಿದ್ದಾರೆ ಎಂಬ ವಿವರ ಸಿಗತೊಡಗಿತು.
ರಾಜನಿಗೆ ಯಾಕೋ ಇದನ್ನು ನಂಬಲಾಗದೆ ಒಂದು ದಿನ ವೇಷ ಬದಲಿಸಿ, ಗಾಯಾಳುಗಳನ್ನು ಕರೆದುಕೊಂಡು ಬರುವ ತಂಡದ ಜೊತೆ ಸೇರಿಕೊಂಡ. ಆ ಯುದ್ಧ ಭೂಮಿಯಲ್ಲಿ ಅವತ್ತು ಆ ತಂಡ ಮಾಡುತ್ತಿದ್ದ ಕೆಲಸ ನೋಡಿ ರಾಜ ಒಮ್ಮೆ ದಿಗ್ಬ್ರಾಂತನಾಗಿಬಿಟ್ಟ. ಆ ತಂಡದ ಸೈನಿಕರು ಸಹಾಯಕ್ಕಾಗಿ ಅಂಗಲಾಚುತ್ತಾ ಮಲಗಿದ್ದ ತಮ್ಮ ಸೈನಿಕರ ಕುತ್ತಿಗೆ ಕತ್ತರಿಸಿ ಅವರ ಕೈ, ಕೊರಳಿನಲ್ಲಿ ಇದ್ದ ಚಿನ್ನವನ್ನು ಕದ್ದು ಅದನ್ನು ತಮ್ಮ ತಮ್ಮಲ್ಲೇ ಸಮನಾಗಿ ಹಂಚಿಕೊಳ್ಳುತ್ತಿದ್ದರು.
ಅವರೆನ್ನೆಲ್ಲ ಬಂಧಿಸಿ ವಿಚಾರಣೆ ಮಾಡಿದಾಗ ರಾಜನ ಶತ್ರುವು ಆ ಸೈನಿಕರಿಗೆ ಹಣದ ಆಮಿಷ ನೀಡಿ ಆ ರೀತಿ ಮಾಡಲು ಪ್ರೇರೇಪಿಸಿದ್ದರು. ದೋಚಿದ ಹಣದ ಜೊತೆಗೆ, ಶತ್ರು ರಾಜ ನೀಡುವ ಹಣದ ಆಮಿಷಕ್ಕೆ ಬಲಿಯಾಗಿ ಆ ಕೃತ್ಯ ನಡೆಸಿದ್ದರು.
ಸೈನಿಕರು ದುರಾಸೆಗೆ ಬಲಿಯಾಗಿದ್ದರು
ದುರಾಸೆಗೆ ತಮ್ಮವರನ್ನೇ ಬಲಿಕೊಟ್ಟಿದ್ದರು.
ನಿನ್ನೆ ನಡೆದ ಬೆಡ್ ಬ್ಲಾಕ್ ದಂದೆ ಕೂಡ ಹೀಗೆ…
– ಶ್ರೀನಾಥ್ ಹರದೂರ ಚಿದಂಬರ