ಅನ್ನದ ಋಣ

ಅನ್ನದ ಋಣ 

ಆ ದೇವಸ್ಥಾನದವರು ಅವನಿಗೆ ಭಿಕ್ಷೆ ಬೇಡುವ ಬದಲು ದೇವಸ್ಥಾನದ ಹೊರಗೆ ಚಪ್ಪಲಿ ಸ್ಟಾಂಡ್ ನಲ್ಲಿ ಕೆಲಸ ಮಾಡು ಎಂದು ಕೆಲಸ ಕೊಟ್ಟರು.   ಅನೇಕ ವರುಷಗಳ  ಕಾಲ ಅವನು ದೇವಸ್ಥಾನದಲ್ಲಿ  ಕೊಡುತ್ತಿದ್ದ ಅನ್ನ ಪ್ರಸಾದ ತಿಂದು,  ಹೊರಗೆ ಸ್ಟಾಂಡ್ ನಲ್ಲಿ ಕುಳಿತು   ಚಪ್ಪಲಿ ಕಾಯುತ್ತಿದ್ದ.   ಹತ್ತು ವರುಷಗಳಿಗೊಮ್ಮೆ ನಡೆಯುವ  ಆ  ದೇವಸ್ಥಾನದ ರಥೋತ್ಸವದ  ಹಿಂದಿನ ದಿನ ಚಪ್ಪಲಿ ಸ್ಟಾಂಡ್ ನಲ್ಲಿದ್ದ  ಅವನು ಕುಳಿತಲ್ಲೇ  ಸತ್ತುಹೋಗಿದ್ದ. ಅವನ  ದೇಹವನ್ನು ಮುನಿಸಿಪಾಲಿಟಿಯವರು  ತೆಗೆದುಕೊಂಡು ಹೋದ ಮೇಲೆ,  ಅವನು ಕೂರುತ್ತಿದ್ದ ಜಾಗದಲ್ಲಿದ್ದ ಗೋಣಿಚೀಲವನ್ನು ಎತ್ತಿ  ಕೊಡವಿದಾಗ ಅದರಲ್ಲಿದ್ದ ಒಂದು ರಶೀದಿ ಕೆಳಗೆ ಬಿತ್ತು .  ಆ ರಶೀದಿಯಲ್ಲಿ ರಥೊತ್ಸವದ ಪ್ರಯುಕ್ತ  ” ಅನ್ನದಾನಕ್ಕೆ – ಹತ್ತು ಸಾವಿರ ರೂಪಾಯಿಗಳು”  ಹಾಗು  ದಾನಿಗಳು  ಎಂಬ ಕಾಲಂ ನಲ್ಲಿ ಅವನ ಹೆಸರಿತ್ತು. 

ಲಂಚ 

ಅವನು ತನ್ನ ಕಚೇರಿಯಲ್ಲಿ  ಬಡವ, ಶ್ರೀಮಂತ ಎಂಬ ಬೇಧ ಭಾವ ಇಲ್ಲದೆ ಎಲ್ಲರ ಹತ್ತಿ ಲಂಚ ತೆಗೆದುಕೊಂಡು ಕೋಟಿಗಟ್ಟಲೆ ಆಸ್ತಿ ಮಾಡಿ ಆಗರ್ಭ ಶ್ರೀಮಂತ ಎಂದೆನಿಸಿಕೊಂಡಿದ್ದ.  ಲಂಚ ತೆಗೆದುಕೊಳ್ಳದೆ ಅವನು ಯಾವ ಕೆಲಸವನ್ನು ಮಾಡಿಕೊಡುತ್ತಿರಲಿಲ್ಲ. ಇತ್ತ ಹಳ್ಳಿಯಲ್ಲಿದ್ದ ಅವನ ಅಪ್ಪ  ” ನನ್ನ ಪೂರ್ತಿ ಸರ್ವಿಸ್ ನಲ್ಲಿ ಲಂಚ ತೆಗೆದುಕೊಂಡಿಲ್ಲ ಹಾಗು ಲಂಚ ಕೊಟ್ಟಿಲ್ಲ,  ಹಾಗಾಗಿ ತಾನು ಲಂಚ ಕೊಡದೆ  ಬರಬೇಕಿದ್ದ ಪಿಂಚಣಿ ಹಣವನ್ನು ಪಡೆಯುತ್ತೇನೆ ” ಎಂದು ದಿನವೂ ಪಿಂಚಣಿ  ಕಚೇರಿಗೆ  ಪಿಂಚಣಿ ಹಣ ಪಡೆಯಲಿಕ್ಕೆ ವರುಷದಿಂದ ಅಲೆಯುತ್ತಿದ್ದರು. 

ಅರಿವು 

ಕಾಲೇಜಿಗೆ ಹೋಗುತ್ತಿದ್ದ ಮಗ ತನಗೆ  ಹೊಸ ಸ್ಮಾರ್ಟ್ ಫೋನ್ ಬೇಕೇ ಬೇಕು ಎಂದು ಹಠ ಹಿಡಿದು ಊಟ ಮಾಡದೆ ಕುಳಿತ್ತಿದ್ದ.  ಮರುದಿನ ಅವನ ಅಪ್ಪ ಅವನಿಗೆ ಸ್ಮಾರ್ಟ್ ಫೋನ್ ತಂದು ಕೊಟ್ಟಾಗ ಖುಷಿಯಿಂದ ಅಪ್ಪ ಅಮ್ಮನ ಜೊತೆ ಒಂದು ಸೆಲ್ಫಿ ತೆಗೆದು,  “ನ್ಯೂ ಫೋನ್, ಥ್ಯಾಂಕ್ ಯು ಡ್ಯಾಡ್ ” ಎಂದು ಇನ್ಸ್ಟಾಗ್ರಾಮನಲ್ಲಿ ಪೋಸ್ಟ್ ಮಾಡಿ,  ಹಿಂದಿನ ತಿಂಗಳು ಅಪ್ಪ ಕೊಡಿಸಿದ ಬೈಕ್ ನಲ್ಲಿ ಕಾಲೇಜಿಗೆ ಹೊರಟ.  ಆದರೆ ಪಾರ್ಕಿಂಗ್ ಜಾಗದಲ್ಲಿ ಅಪ್ಪನ ಸ್ಕೂಟರು ಕಾಣದಿದ್ದುದು,   ಸ್ಮಾರ್ಟ್ ಫೋನಿಗೋಸ್ಕರ  ಅದನ್ನು ಮಾರಿದ್ದು  ಮಗನ  ಅರಿವಿಗೆ ಬರಲೇ ಇಲ್ಲ. 

ಕೊರಗು  

ಅಣ್ಣನಿಗೆ ಇಬ್ಬರು ಗಂಡು ಮಕ್ಕಳು ಆದರೆ ತಮ್ಮನಿಗೆ ಮಕ್ಕಳಿರಲಿಲ್ಲ. ಅಣ್ಣನ ಮಕ್ಕಳನ್ನೇ ತಮ್ಮ ಮಕ್ಕಳು ಎಂದುಕೊಂಡರು.  ಆದರೆ ಮಕ್ಕಳಿಲ್ಲ ಎಂಬ ಕೊರಗು ಅವರನ್ನು ಕಾಡುತ್ತಲೇ ಇತ್ತು.   ಆ ಗಂಡು ಮಕ್ಕಳು  ಮದುವೆಯಾದ ಮೇಲೆ, ಅವರ ಹೆಂಡತಿಯರ ಜೊತೆ ಅವರ ಅಪ್ಪ ಅಮ್ಮ ಹೊಂದಿಕೆಯಾಗುತ್ತಿಲ್ಲ ಎಂದು ವೃದ್ಧಾಶ್ರಮಕ್ಕೆ ಕಳುಹಿಸಲು ತಯಾರಿ ನಡೆಸಿದರು. ಅದನ್ನು ನೋಡಿದ  ತಮ್ಮ ತನ್ನ ಅಣ್ಣ ಅತ್ತಿಗೆಯನ್ನು ತನ್ನ ಜೊತೆಯಲ್ಲಿ ಇರಲು ಹೇಳಿದ.  ಅಂದಿನಿಂದ  ತಮ್ಮ ಮತ್ತು ಅವನ ಹೆಂಡತಿಗೆ  ತಮಗೆ  ಮಕ್ಕಳಿಲ್ಲ ಎಂಬ ಕೊರಗು ಹೊರಟು ಹೋಯಿತು. 

– ಶ್ರೀನಾಥ್ ಹರದೂರ ಚಿದಂಬರ 

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s