ಟ್ರುಥ್ ಅಂಡ್ ಡೇರಿಂಗ್

ಹರೀಶ, ಕವನ, ಜಯ ಹಾಗು ವಿಜ್ಞೇಶ್ ಬಹಳ ಒಳ್ಳೆಯ ಸ್ನೇಹಿತರು ಹಾಗು ಒಂದೇ ಕಾಲೇಜಿನಲ್ಲಿ ಓದುತ್ತಿದ್ದವರು. ಚಿಕ್ಕಂದಿನಿಂದಲೂ ಒಟ್ಟಿಗೆ ಆಡುತ್ತ, ಒಂದೇ ಶಾಲೆಯಲ್ಲಿ ಓದಿ,  ಜೊತೆಯಲ್ಲಿ ಬೆಳೆದವರು.  ಅವರಲ್ಲಿ ವಿಜ್ಞೇಶ್ ಹಾಗು ಜಯ ವಿಪರೀತ ಚಟುವಟಿಕೆಯಿಂದ ಇರುತ್ತಿದ್ದರು. ಏನೇ ಕೆಲಸ ಇದ್ದರು  ಅವರಿಬ್ಬರೂ ಯಾವಾಗಲೂ ಮುಂದೆ ಇರುತ್ತಿದ್ದರು.  ಕೆಲವೊಮ್ಮೆ  ಅವರು ಮಾಡುವ  ಕೆಲವು ಕೆಲಸಗಳಿಂದ ಉಳಿದವರು ತೊಂದರೆಗೆ ಸಿಕ್ಕಿ ಹಾಕಿಕೊಂಡರು,  ಇವರಿಬ್ಬರಿಗೆ ಬೆಂಬಲ ನೀಡುವುದನ್ನು ಮಾತ್ರ ನಿಲ್ಲಿಸಲಿರಲಿಲ್ಲ.  ಚಿಕ್ಕಂದಿನಿಂದಲೂ ಅವರೆಲ್ಲರ ಬಹಳ ಇಷ್ಟವಾದ ಆತ ಅಂದರೆ ಟ್ರುಥ್ ಅಂಡ್ ಡೇರ್ ಆಟ.  ಅದರಲ್ಲಿ ವಿಜ್ಞೇಶ್ ಮತ್ತು ಜಯ ಇವತ್ತಿನವರೆಗೂ ಡೇರ್ ಬಿಟ್ಟು ಟ್ರುಥ್ ಚಾಲೆಂಜ್ ತೆಗೆದುಕೊಂಡಿರಲೇ ಇಲ್ಲ.  ಉಳಿದವರು ಅವರಿಗೆ ಕೊಡುತ್ತಿದ್ದ ಡೇರ್ ಚಟುವಟಿಕೆಗಳು ಅವರೆಲ್ಲ ಬೆಳೆಯುತ್ತ ಹೋದಂತೆ  ಬದಲಾಗುತ್ತ ಹೋಗುತ್ತಿತ್ತು.  ಚಿಕ್ಕವರಿದ್ದಾಗ ಬೇರೆ ಮನೆಯವರ ತೋಟದಲ್ಲಿ ಮಾವಿನ ಕಾಯಿ ಕದಿಯುವುದು,  ರಾತ್ರಿ ಮಲಗಿದಾಗ ಯಾರದೋ ಮನೆ ಬಾಗಿಲು ಬಡಿದು ಬರುವುದು, ಸೈಕಲ್ ಗಾಳಿ ತೆಗೆಯುವುದು… ಈ ರೀತಿಯ ಡೇರಿಂಗ್ ಕೆಲಸ ಮಾಡಲು ಹೇಳುತ್ತಿದ್ದರು. ವಿಜ್ಞೇಶ್ ಹಾಗು ಜಯ ಅವುಗಳನ್ನು  ಲೀಲಾಜಾಲವಾಗಿ ಮಾಡಿ ಮುಗಿಸುತ್ತಿದ್ದರು. ಇಬ್ಬರಿಗೂ ಏನಾಗುತ್ತೆ ಅನ್ನುವ ಭಯವೇ  ಇರಲಿಲ್ಲ. ದೊಡ್ಡವರಾದ ಮೇಲೆ ಅವರಿಬ್ಬರಿಗೆ ಡೇರಿಂಗ್  ಕೆಲಸಗಳನ್ನು ಹೇಳುವುದೇ ಉಳಿದವರಿಗೆ ಬಹಳ ಕಷ್ಟದ ಕೆಲಸವಾಗಿತ್ತು.  ಯಾಕೆಂದರೆ ಸಣ್ಣ ಪುಟ್ಟ ಡೇರಿಂಗ್ ಕೊಟ್ಟರೆ ಕ್ಷಣದಲ್ಲಿ ಮುಗಿಸಿ ಹಾಕುತ್ತಿದ್ದರು.  ಆಟ ಶುರು ಮಾಡಿದರೆ ಎಲ್ಲರಿಗು ಇವರಿಗೆ  ಏನಪ್ಪಾ ಹೇಳುವುದು  ಅಂತ ಯೋಚನೆ ಶುರುವಾಗುತ್ತಿತ್ತು. 

ಒಂದು ಶನಿವಾರ ಸಂಜೆ ಕಾಲೇಜು ಮುಗಿಸಿ ಎಂದಿನಂತೆ ಅವರೆಲ್ಲರೂ ಮಾಮೂಲಿಯಾಗಿ  ಸೇರುವ ಮೈದಾನದ ಹತ್ತಿರ ಬಂದು ಸೇರಿದ್ದರು.  ಸ್ವಲ್ಪ ಹೊತ್ತು ಎಲ್ಲರು ಬ್ಯಾಡ್ಮಿಂಟನ್ ಆಡಿ ಸುಸ್ತಾಗಿ ಅಲ್ಲೇ ಕುಳಿತು ಮಾತನಾಡುತ್ತ ಕುಳಿತರು. ಹರೀಶ ತನ್ನ ಮೊಬೈಲ್ ತೆಗೆದು ಅವನಿಗೆ ಬಂದಿದ್ದ ತಮಾಷೆಯ  ವಿಡಿಯೋಗಳನ್ನು ಎಲ್ಲರಿಗು ತೋರಿಸುತ್ತಿದ್ದ.  ಎಲ್ಲರು ಅವುಗಳನ್ನು  ನೋಡಿ ನಗಾಡುತ್ತಾ ಸಮಯ ಕಳೆಯುತ್ತಿದ್ದರು. ಆಗ ವಿಜ್ಞೇಶ್  ಒಬ್ಬ ವ್ಯಕ್ತಿ  ಹೇಗೆ ದಟ್ಟ ಕಾಡಿನಲ್ಲಿ ಬದುಕುಳಿಯುವುದು ಎಂಬುವದರ  ಬಗ್ಗೆ ಯಾರೋ  ಕಳುಹಿಸಿದ  ಒಂದು ವಿಡಿಯೋವನ್ನು ತೋರಿಸಿದ. ಎಲ್ಲರಿಗು ಆ ವಿಡಿಯೋ  ಬಹಳ ಇಷ್ಟವಾಯಿತು. ಕಾಡಿನಲ್ಲಿ ಯಾವುದೇ ಸಹಾಯವಿಲ್ಲದೆ, ಕಾಡಿನಲ್ಲಿ ಸಿಗುವ  ಹಣ್ಣು ಹಂಪಲು ತಿಂದುಕೊಂಡು, ಕಾಡು ಪ್ರಾಣಿಗಳಿಂದ ತಪ್ಪಿಸಿಕೊಂಡು, ಅಲ್ಲಿಂದ ಊರಿನ ದಾರಿ ಹುಡುಕಿಕೊಂಡು  ಕಾಡಿನಿಂದ ಹೊರ ಬರುವುದು ಎಷ್ಟು ರೋಮಾಂಚನಕಾರಿಯಾಗಿರುತ್ತೆ ಮತ್ತು ಸಾಹಸಮಯವಾಗಿರುತ್ತೆ ಅಂತ ಅನಿಸಿತು. ಆಗ ಕವನ   ” ಯಾವಾಗಲು ಡೇರಿಂಗ್ ಕೆಲಸ ಹೇಳಿ ಅಂತ ಕೇಳುತ್ತೀರಲ್ವಾ , ನೀವು ಎರಡು ದಿವಸ ಕಾಡಿನಲ್ಲಿ ಇದ್ದು ಬನ್ನಿ ನೋಡೋಣ” ಅಂತ ವಿಜ್ಞೇಶ್ ಹಾಗು ಜಯಾಳಿಗೆ ನಗುತ್ತ ಹೇಳಿದಳು.  ಅದನ್ನೇ ಕಾಯುತ್ತಿದ್ದವರಂತೆ ವಿಜ್ಞೇಶ್ ಹಾಗು ಜಯ  ” ನಾವಂತೂ ತಯಾರು,   ಮುಂದಿನ ವಾರ ಎರಡು ದಿನ  ಕಾಲೇಜು ಹೇಗಿದ್ದರೂ ರಜ ಇದೆ, ಆಗ ನಾವು ಹೋಗುವ ಯೋಜನೆ ಮಾಡುತ್ತೇವೆ” ಅಂತ ಹೇಳಿದರು. ಅದಕ್ಕೆ ಹರೀಶ  ” ಸುಮ್ಮನೆ ಇರಿ, ತಮಾಷೆಗೆ ಹೇಳಿದರೆ, ಇವರು ಹೊರಟೇಬಿಟ್ಟರು, ಅದೆಲ್ಲ ಏನು ಬೇಡ, ವಿಡಿಯೋ ನೋಡುವುದಕ್ಕೂ, ಅದನ್ನು ಮಾಡುವುದಕ್ಕೂ ವ್ಯತ್ಯಾಸ ಇದೆ, ಅಂತಹ ಸಾಹಸಕ್ಕೆ ಕೈ ಹಾಕಬೇಡಿ” ಅಂತ ಹೇಳಿದನು. ವಿಜ್ಞೇಶ್ ಹಾಗು ಜಯ ಒಬ್ಬರ ಮುಖ ಒಬ್ಬರು ನೋಡಿ ಸಣ್ಣಗೆ ನಕ್ಕರು. ಹಾಗೆ  ಸ್ವಲ್ಪ ಹೊತ್ತು ಮಾತನಾಡಿ ಎಲ್ಲರು ಅವರವರ ಮನೆಗೆ ಹೋದರು. 

ಒಂದು ವಾರ ಕಳೆದು ಕಾಲೇಜಿಗೆ ರಜೆ ಶುರುವಾಯಿತು. ಕವನ ಹೇಗಿದ್ರು ಕಾಲೇಜಿಗೆ ರಜ ಅಂತ ಬೆಳೆಗ್ಗೆ  ನಿಧಾನವಾಗಿ ಎದ್ದಳು.  ಫ್ರೆಶ್ ಅಪ್ ಆಗಿ ತನ್ನ ಮೊಬೈಲ್ ಫೋನ್  ಅನ್ನು ಕೈ ತೆಗೆದುಕೊಂಡಳು. ಅದರಲ್ಲಿ ವಿಜ್ಞೇಶನ ಒಂದು ಮೆಸೇಜ್ ಇತ್ತು.  ಅದರಲ್ಲಿ ” ನೀನು ಕೊಟ್ಟ ಡೇರಿಂಗ್ ಅನ್ನು ನಾನು ಮತ್ತು ಜಯ ಒಪ್ಪಿಕೊಂಡಿದ್ದೇವೆ ಹಾಗು ನಾವು ಇವತ್ತು ರಾತ್ರಿ ಹಾಗು ನಾಳೆ ರಾತ್ರಿ ಕಾಡಲ್ಲೇ ಕಳೆಯುತ್ತೇವೆ,  ಗೋಯಿಂಗ್ ಟು ಕುಮಾರಪರ್ವತ ಫಾರೆಸ್ಟ್” ಇತ್ತು.  ಅದನ್ನು ನೋಡಿದ ಕವನಳಿಗೆ ಸಿಕ್ಕಾಪಟ್ಟೆ ಗಾಬರಿಯಾಗಿ ಕೂಡಲೇ ಹರೀಶನಿಗೆ ಫೋನ್ ಮಾಡಿ ವಿಷಯ ತಿಳಿಸಿದಳು.  ನಂತರ ಕವನ ಮತ್ತು ಹರೀಶ ಇಬ್ಬರು ಜೊತೆಗೂಡಿ  ವಿಜ್ಞೇಶ್ ಮನೆಗೆ ಬಂದರು.  ಆದರೆ ವಿಜ್ಞೇಶ್ ಮನೆಯಲ್ಲಿ ಇರಲಿಲ್ಲ. ಅವನ ಮನೆಯಲ್ಲಿ ಇವರಿಬ್ಬರನ್ನು ನೋಡಿ ವಿಜ್ಞೇಶನ ತಂದೆ ತಾಯಿಗೆ ಸ್ವಲ್ಪ ಆತಂಕವಾಯಿತು.  ವಿಜ್ಞೇಶನ  ತಂದೆ ತಾಯಿ ” ಅರೆ, ನೀವೇನು ಇಲ್ಲಿ, ನೀವೆಲ್ಲ ಕುಮಾರ ಪರ್ವತಕ್ಕೆ ಟ್ರೆಕಿಂಗ್ ಹೋಗಬೇಕಿತ್ತಲ್ವಾ? ಬೆಳೆಗ್ಗೆ ನಾಲಕ್ಕು ಗಂಟೆಗೆ ವಿಜ್ಞೇಶ್ ಬ್ಯಾಗ್ ತೆಗೆದುಕೊಂಡು ಹೋದ,  ನೀವು ಹೋಗಲಿಲ್ವಾ ?” ಎಂದು ಸ್ವಲ್ಪ ಗಾಬರಿಯಿಂದ ಕೇಳಿದರು. ಕೂಡಲೇ ಹರೀಶ ಮತ್ತು ಕವನ ಅವರು  ನಡೆದ ವಿಷಯ ತಿಳಿಸಿ, ಅವರಿಬ್ಬರೂ ಕಾಡಿಗೆ ಹೋಗಿರುವ ವಿಷಯ ತಿಳಿಸಿದರು.  ವಿಜ್ಞೇಶನ  ತಂದೆ ತಾಯಿ ಆತಂಕದಿಂದ ಏನು ಮಾಡುವುದು ಎಂದು ತೋಚದೆ ಕುಳಿತುಬಿಟ್ಟರು. ಹರೀಶ ಫೋನ್ ಮಾಡಿ ಜಯಾಳ ತಂದೆ ತಾಯಿಗೂ ವಿಷಯ ಮುಟ್ಟಿಸಿದ.  ಜಯಾಳ ಮನೆಯಲ್ಲಿ ಕೂಡ  ” ನಾವು ಕುಮಾರಪರ್ವತಕ್ಕೆ ಟ್ರೆಕಿಂಗ್ ಹೋಗುತ್ತಿದ್ದೇವೆ  ” ಎಂದು ಹೇಳಿ ಜಯ ಬೆಳೆಗ್ಗೆ ನಾಲಕ್ಕು ಗಂಟೆಗೆ ಅವಳ ಮನೆಗೆ ಬಂದಿದ್ದ  ವಿಜ್ಞೇಶನ ಜೊತೆಗೆ ಹೋಗಿದ್ದಳು. ಕೂಡಲೇ ಜಯಾಳ ತಂದೆ ಪೋಲಿಸಿಗೆ ವಿಷಯ ತಿಳಿಸಿದರು. ಅವರು ಕುಮಾರ ಪರ್ವತದ ಫಾರೆಸ್ಟ್ ರೇಂಜ್ ಆಫೀಸರ್ಗೆ ಫೋನ್ ಮಾಡಿ ವಿಜ್ಞೇಶ್ ಹಾಗು ಜಯಾಳನ್ನು ಹುಡುಕಲು ಒಂದೇ ಟೀಮ್ ರೆಡಿ ಮಾಡಲು ಹೇಳಿದರು. 

ಇತ್ತ ಬೆಳಿಗ್ಗೆ ಮನೆ ಬಿಟ್ಟ ವಿಜ್ಞೇಶ್ ಹಾಗು ಜಯ ಹತ್ತು ಗಂಟೆಯ ಹೊತ್ತಿಗೆ ಕುಮಾರಪರ್ವತದ ತಪ್ಪಲಿನ ಕಾಡನ್ನು ಸೇರಿದ್ದರು. ಅಷ್ಟೋತ್ತಿಗೆ ಒಳ್ಳೆ ಬಿಸಿಲು ಬೀಳುತ್ತಿದ್ದರಿಂದ  ಕಾಡು ಬಹಳ ಸುಂದರವಾಗಿ ಕಾಣಿಸುತ್ತಿತ್ತು.  ಸುಮಾರು ಒಂದು ಗಂಟೆಯ ಕಾಲ ಕಾಡಲ್ಲೇ ಹಾಗೆ ನಡೆದುಕೊಂಡು ಹೋಗುತ್ತಿದ್ದರು. ಪ್ರತಿ ನೂರು ಹೆಜ್ಜೆಗೆ ಒಂದು ಮರದ ಮೇಲೆ ಇಂಟು ಗುರುತು  ಮಾಡಿ ಹೋಗುತ್ತಿದ್ದರು.  ಅಕಸ್ಮಾತ್ ವಾಪಸು ಬರುವಾಗ ದಾರಿ ತಪ್ಪಿದರೆ ಗುರುತಿಗೆ ಇರಲಿ ಎಂದು ಆ ರೀತಿ ಮಾಡುತ್ತಾ ಹೋಗುತ್ತಿದ್ದರು.   ದಾರಿಯಲ್ಲಿ ಸಿಕ್ಕ ಕಾಡು ಹಣ್ಣುಗಳನ್ನು ತಿನ್ನುತ್ತಾ, ಕಾಡಿನ ಜೀವನದ ಬಗ್ಗೆ ಒಂದು ವಾರದಿಂದ ಓದಿಕೊಂಡಿದ್ದರ ಬಗ್ಗೆ ಮಾತನಾಡುತ್ತ ,  ಇಬ್ಬರು ಮುಂದೆ ಹೋಗುತ್ತಿದ್ದರು.  ಮದ್ಯಾಹ್ನ ಮೂರು ಗಂಟೆ ಆಗುತ್ತಾ ಬಂದಾಗ ಅವರಿಗೆ ಒಂದು ಸಣ್ಣ ಜಲಪಾತ ಕಾಣಿಸಿತು. ಆಲ್ಲಿಯವರೆಗೂ ಅವರು ಎಲ್ಲಿಯೂ ಆ ಜಲಪಾತದ ಬಗ್ಗೆ ಕೇಳಿರಲಿಲ್ಲ ಹಾಗು ಯಾವುದೇ ಫೋಟೋ ಕೂಡ  ನೋಡಿರಲಿಲ್ಲ.  ಇಬ್ಬರು ತಾವೇ  ಆ ಜಲಪಾತವನ್ನು ಕಂಡುಹಿಡಿದವರಂತೆ ತಮ್ಮ ಮೊಬೈಲ್ನಲ್ಲಿ ಫೋಟೋ ತೆಗೆದುಕೊಂಡರು. ನೀರಲ್ಲಿ ಸ್ವಲ್ಪ ಹೊತ್ತು ಆಟವಾಡಿ ಅಲ್ಲಿಂದ ಮುಂದೆ ಹೊರಟರು. ಸಂಜೆ ಆಗುತ್ತಾ ಬಂದಂತೆ ಸುಂದರವಾಗಿ ಕಾಣುತ್ತಿದ್ದ ಕಾಡು ನಿಧಾನವಾಗಿ ರುದ್ರ ಭಯಂಕರವಾಗಿ ಕಾಣಿಸತೊಡಗಿತು.  ವಿಜ್ಞೇಶ್ ನೋಡಿದ ವಿಡಿಯೋಗಳ ಪ್ರಕಾರ ಕಾಡಿನಲ್ಲಿ ಬೆಂಕಿ ಹಾಕಿಕೊಂಡು,  ರಾತ್ರಿ ಆರಾಮಾಗಿ ಕಳೆಯಬಹುದು ಅಂತ ಅಂದುಕೊಂಡಿದ್ದರು.  ಆದರೆ ಅದು ಅವರು ಅಂದುಕೊಂಡಷ್ಟು ಸುಲಭ ಅಲ್ಲ ಅಂತ ಬೆಂಕಿಗೆ ಕಟ್ಟಿಗೆ ಆರಿಸುವಾಗ ಅರಿವಾಯಿತು.  ಬೆಳೆಗ್ಗಿನ ತನಕ ಬೇಕಾಗುವಷ್ಟು ಮುರಿದು ಬಿದ್ದ ಕಟ್ಟಿಗೆಗಳನ್ನು ಗುಡ್ಡೆ ಹಾಕಿಕೊಂಡರು. ಅಷ್ಟರಲ್ಲಿ ಆಗಲೇ ಕತ್ತಲೆ ಆವರಿಸಿ ಏನು ಕಾಣಿಸುತ್ತಿರಲಿಲ್ಲ. ಚಿತ್ರ ವಿಚಿತ್ರ ರೀತಿಯ ಪ್ರಾಣಿ ಪಕ್ಷಿಗಳ ಕೂಗು ಕೇಳಿಸುತ್ತಿತ್ತು. ಮೈಯಲ್ಲ ಮುಚ್ಚಿ ಹೋಗುವಷ್ಟು ಸೊಳ್ಳೆಗಳು ಮೈಮೇಲೆ   ಕೂತು ಅವರನ್ನು ಕಚ್ಚಲು ಶುರುಮಾಡಿದ್ದವು. ಕಷ್ಟಪಟ್ಟು ತಂದಿದ್ದ ಬೆಂಕಿಪೊಟ್ಟಣದಿಂದ  ಬೆಂಕಿ ಹಚ್ಚಿದರು. ಬೆಂಕಿಯ ಬಿಸಿಗೆ ಸ್ವಲ್ಪ ಸೊಳ್ಳೆಯ ಕಾಟ ಕಮ್ಮಿಯಾಯಿತು.  ಬೆಂಕಿಯ ಬೆಳಕಿನಲ್ಲಿ ಏನು ಕಾಣಿಸುತ್ತಿತ್ತೋ ಅಷ್ಟು ಬಿಟ್ಟರೆ ಬೇರೇನೇ ಕಾಣುತ್ತಿರಲಿಲ್ಲ. ದೂರದಲ್ಲಿ ಯಾವಾಗ ಹುಲಿಯ ಘರ್ಜನೆ ಕೇಳಿಸಿತೋ ಅವರಿಬ್ಬರ ಜಂಘಾಬಲವೇ ಉಡುಗಿಹೋಯಿತು. ಇಬ್ಬರು ಒಬ್ಬರ ಕೈ ಒಬ್ಬರು ಹಿಡಿದುಕೊಂಡು ಭಯದಿಂದ ನಡುಗುತ್ತ  ಬೆಂಕಿಯ ಪಕ್ಕದಲ್ಲೇ ಕೂತರು. ನರಿಗಳು ಅವರ ಹತ್ತಿರವೇ ಸುಳಿದಾಡುತ್ತಿದ್ದವು. ಆದರೆ ಬೆಂಕಿ ಇದ್ದುದರಿಂದ ಅವು ಹತ್ತಿರ ಬರುತ್ತಿರಲಿಲ್ಲ.  ಭಯದಿಂದ  ಗಂಟೆಗಳು ಕಳೆದರು ಅವರು ಕೂತಿದ್ದ ಜಾಗ ಬಿಟ್ಟು ಕದಲಿರಲಿಲ್ಲ.  ಒಂದರ ಹಿಂದ ಒಂದು ಕಟ್ಟಿಗೆಯನ್ನು ಬೆಂಕಿಗೆ ಹಾಕುತ್ತಲೇ ಇದ್ದರು. 

ಮಧ್ಯರಾತ್ರಿಯ ಹೊತ್ತಿಗೆ ಅವರು ಕೂತ ಜಾಗದ ಹತ್ತಿರವೇ ಒಂದು ಆನೆ ಘಿಳಿಟ್ಟು ಅವರ ಮೇಲೆ ನುಗ್ಗಿ ಬಂದಂತೆ ಆಯಿತು.  ಇಬ್ಬರು ಕಕ್ಕಾಬಿಕ್ಕಿಯಾಗಿ  ಭಯದಿಂದ ಆ ಕತ್ತಲಿನಲ್ಲೇ ಒಂದೊಂದು ದಿಕ್ಕಿಗೆ ಓಡಿದರು.  ಕತ್ತಲಲ್ಲಿ  ಓಡಿದ ಜಯಾಳಿಗೆ ಏನು ಕಾಣಿಸುತ್ತಿರಲಿಲ್ಲ.  ಹುಚ್ಚಿಯ ತರಹ ಕೂಗುತ್ತ ಓಡುತ್ತಿದ್ದಳು.  ಸುಮಾರು ದೂರ ಓಡಿದ ಮೇಲೆ ಹಿಂದೆ ತಿರುಗಿ ನೋಡಿದರೇ ಅವಳಿಗೆ ಕತ್ತಲು  ಬಿಟ್ಟರೆ ಏನು ಕಾಣಿಸುತ್ತಿರಲಿಲ್ಲ.  ಹೆದರಿಕೊಂಡು ಅಲ್ಲೇ ಕುಳಿತುಬಿಟ್ಟಳು.  ಸೊಳ್ಳೆಗಳ ಕಡಿತ, ಪ್ರಾಣಿ ಪಕ್ಷಿಗಳಾ ಕೂಗು, ಗಾಢ ಕತ್ತಲೆ ಮದ್ಯೆ  ಜಯ ಒಂದು ಚೂರು ಅಲ್ಲಾಡದೆ ಹಾಗೆ ಮುದುಡಿ ಮಲಗಿಬಿಟ್ಟಳು.  ಭಯಕ್ಕೆ, ಬೆಳೆಗ್ಗಿನಿಂದ ನಡೆದ ಸುಸ್ತಿಗೇನೋ ಕಣ್ಣು ಮುಚ್ಚಿ ಮಲಗಿದ ಜಯಾಳಿಗೆ ಎಚ್ಚರ ತಪ್ಪುವಷ್ಟು ನಿದ್ದೆ ಹತ್ತಿತು. 

ಇತ್ತ ಕಾಡಿನ ಹೊರಗಡೆ, ಸಂಜೆಯ ವೇಳೆಗೆ,  ವಿಜ್ಞೇಶ್ ಹಾಗು ಜಯಾಳ ತಂದೆ ತಾಯಿ, ಹರೀಶ್ ಮತ್ತು ಕವನ ಪೊಲೀಸರ ಜೊತೆಗೆ ಫಾರೆಸ್ಟ್ ಡೆಪಾರ್ಟ್ಮೆಂಟ್ಗೆ ಬಂದು ತಲುಪಿದ್ದರು.  ಫಾರೆಸ್ಟ್ ಆಫೀಸರ್ ” ನೋಡಿ, ಅವರು ಯಾವ ಕಡೆಯಿಂದ ಕಾಡು ಹೊಕ್ಕಿದ್ದಾರೋ ಗೊತ್ತಿಲ್ಲ, ಸಾವಿರಾರು ಕಿಲೋಮೀಟರು ಉದ್ದಗಲ ಇರುವ ಕಾಡು ಇದು,  ಹುಡುಕುವುದು ಅಷ್ಟು ಸುಲಭ ಅಲ್ಲ, ಆದರೂ ನಾವು ಆರು ತಂಡ ಮಾಡಿ,  ಕಾಡಿನ ಒಳಗಡೆ ಹೋಗಲು ಸಾಧ್ಯವಿರುವ ಎಲ್ಲ ಮಾರ್ಗಗಳಿಂದ ಹುಡುಕಲು ಶುರು ಮಾಡುತ್ತೇವೆ, ಈಗ ಕತ್ತಲು ಆಗುತ್ತಿರುವುದರಿಂದ   ನಾಳೆ ಬೆಳೆಗ್ಗೆ ಹುಡುಕುವ ಕೆಲಸ ಶುರು ಮಾಡುತ್ತೇವೆ ” ಎಂದು ಹೇಳಿದರು.  ಎಲ್ಲರಿಗು ಅವರಿಬ್ಬರೇ ಹೇಗೆ ಕಾಡಿನಲ್ಲಿ ಇರುತ್ತಾರೆ, ಏನು ಅನಾಹುತ ಆಗದಿದ್ದರೆ ಸಾಕು ಎಂದು ದೇವರ ಹತ್ತಿರ ಬೇಡಿಕೊಳ್ಳತೊಡಗಿದರು. 

ಮಾರನೆಯ ದಿವಸ ನಿಧಾನವಾಗಿ ಬೆಳಕು ಹರಿಯತೊಡಗಿತು. ಜಯಾಳಿಗೆ ಎಚ್ಚರವಾಗಿ ಕಣ್ಣು ಬಿಟ್ಟು ” ವಿಜ್ಞೇಶ್, ವಿಜ್ಞೇಶ್” ಎಂದು ಕೂಗುತ್ತ ವಿಜ್ಞೇಶನನ್ನು ಹುಡುಕಲು ಪ್ರಯತ್ನ ಪಟ್ಟಳು.  ಆದರೆ ಅವಳಿಗೆ ರಾತ್ರಿ ಯಾವ ಕಡೆಯಿಂದ ಓಡಿ ಬಂದೆ, ಈಗ ಎಲ್ಲಿದ್ದೇನೆ ಅನ್ನುವುದೇ ಗೊತ್ತಾಗುತ್ತಿರಲಿಲ್ಲ. ತಂದಿದ್ದ ಬ್ಯಾಗ್, ಮೊಬೈಲ್ ಏನು ಇರಲಿಲ್ಲ ಕೈಯಲ್ಲಿ.  ರಾತ್ರಿ ಬೆಂಕಿ ಹಚ್ಚಿದ ಜಾಗವೇನಾದರೂ ಸಿಗುತ್ತದೆಯೋ ಎಂದು ಹುಡುಕತೊಡಗಿದಳು.  ಒಂದು ಗಂಟೆ ಹುಡುಕಿದರೂ ಆ ಜಾಗ ಸಿಗಲಿಲ್ಲ.  ಯಾವ ದಿಕ್ಕಿನಲ್ಲಿ ಹೋಗುತ್ತಿದ್ದೇನೆ ಅನ್ನುವುದೇ ಗೊತ್ತಾಗುತ್ತಿರಲಿಲ್ಲ ಅವಳಿಗೆ.  ಜಯ ಸ್ವಲ್ಪ ಧೈರ್ಯ ಮಾಡಿ ಒಂದು ಮರ ಹತ್ತಿ ಏನಾದರೂ ಕಾಣಿಸುತ್ತದೆಯೋ ಎಂದು ನೋಡಿದಳು. ಬಹಳ ದೂರದಲ್ಲಿ ಯಾವುದೊ ಒಂದು ಮನೆ ಇದ್ದ ಹಾಗೆ ಕಾಣಿಸಿತು.  ಮರ ಇಳಿದು ಆ ಮನೆ ಕಾಣಿಸಿದ ದಿಕ್ಕಿನಲ್ಲಿ ನಡೆಯತೊಡಗಿದಳು.   ಕತ್ತಲೆ  ಆಗುವದರೊಳಗೆ  ನನಗೆ ಆ  ಮನೆ ಸಿಗದಿದ್ದರೆ ನನ್ನ ಕಥೆ ಅಷ್ಟೇ ಅಂತ ಮನಸ್ಸಿನಲ್ಲಿ ಅಂದುಕೊಂಡು ಬೇಗ ನಡೆಯತೊಡಗಿದಳು.  ದಾರಿಯಲ್ಲಿ ಸಿಕ್ಕ ಕಾಡು ಹಣ್ಣು, ದಾರಿಯಲ್ಲಿ ಹರಿಯುತ್ತಿದ್ದ ಸಣ್ಣ ಜರಿಯಲ್ಲೇ ನೀರು ಕುಡಿದು ಮುಂದೆ ಸಾಗಿದಳು. ಸಂಜೆ ಆಗುತ್ತಾ ಬಂದರು ಅವಳಿಗೆ ಆ ಮನೆ ಮಾತ್ರ ಸಿಗಲಿಲ್ಲ. ಮತ್ತೆ ಒಂದು ದೊಡ್ಡ ಮರ ಹತ್ತಿ ನೋಡಿದಳು. ಸ್ವಲ್ಪ ದೂರದಲ್ಲಿಯೆ  ಆ ಮನೆ  ತರಹ ಇದ್ದ  ಜಾಗ ಕಾಣಿಸಿತು. ಅಬ್ಬಾ ಅಂತ ಬದುಕಿದೆ ಅಂತ ಅಂದುಕೊಂಡು ಮರದಿಂದ ಇಳಿದು ಆ ಜಾಗದ ಕಡೆ ಹೊರಟಳು.  ಐದು ನಿಮಿಷದಲ್ಲಿ ಆ ಜಾಗಕ್ಕೆ ತಲುಪಿದಳು. ಹತ್ತಿರ ಹೋಗಿ ನೋಡಿದರೆ ಅದು ಮನೆ ಆಗಿರದೆ, ಮುರಿದು ಬಿದ್ದ ಒಂದು ಫಾರೆಸ್ಟ್ ಚೆಕ್ ಪೋಸ್ಟ್ ಆಗಿತ್ತು.  ಅದರ ಒಳಗಡೆ ಹೋಗಿ ನೋಡಿದರೆ ಅಲ್ಲಿ ಮುರಿದು ಬಿದ್ದ ಬೆಂಚು ಕುರ್ಚಿ ಬಿಟ್ಟರೆ ಏನು ಇರಲಿಲ್ಲ.  ಅಲ್ಲಿಯೇ ಸುಸ್ತಾಗಿ ಒಂದು ಕಡೆ  ಕೂತು  ವಿಜ್ಞೇಶನ ಬಗ್ಗೆ ಯೋಚಿಸತೊಡಗಿದಳು.  ಸ್ವಲ್ಪ ಹೊತ್ತಿಗೆ  ಕತ್ತಲೆ ಕವಿದು ಹೊರಗಡೆಯಾಗಲಿ ಅಥವಾ ಒಳಗಡೆಯಾಗಲಿ ಏನು ಕಾಣಿಸದಂತೆ ಆಯಿತು.  ತುಂಬಾ ಹೊತ್ತಿನ ನಂತರ ಹಸಿವು, ಬಾಯಾರಿಕೆಗೆ ಭಯಕ್ಕೆ  ಕುಳಿತಲ್ಲೇ ಅವಳಿಗೆ ಜ್ಞಾನ ತಪ್ಪಿತು. 

ಪೊಲೀಸರು ಹಾಗು ಫಾರೆಸ್ಟ್ ಡೆಪಾರ್ಟ್ಮೆಂಟ್ನವರು ಇವರಿಬ್ಬರನ್ನು ಹುಡುಕುತ್ತ ಕಾಡಿನಲ್ಲಿ ಸಂಜೆಯ ತನಕ ತಿರುಗಿ ವಾಪಸು ಬಂದರು. ಅವತ್ತಿಗೆ ಆಗಲೇ ಎರಡು ದಿನ ಕಳೆದಿದ್ದರಿಂದ ಪೊಲೀಸರು “ಅವರಿಬ್ಬರೂ ಬದುಕಿರುವುದು ಕಷ್ಟ ಸಾಧ್ಯ ” ಅಂತ ಮಾತನಾಡುವುದು ಕೇಳಿಸಿಕೊಂಡ ವಿಜ್ಞೇಶ್ ಹಾಗು ಜಯಳ ತಂದೆ ತಾಯಿ ಅಳುತ್ತಾ ದೇವರನ್ನು ಬೇಡುತ್ತಾ ಆ ರಾತ್ರಿ ಕಳೆದರು. 

ಮರುದಿನ ಬೆಳಗಿನ ಜಾವವೇ ಫಾರೆಸ್ಟ್ ಡೆಪಾರ್ಟ್ಮೆಂಟ್ನಿಂದ ಒಂದು ತಂಡ ಕಾಡಿನಲ್ಲಿ ಅವರಿಬ್ಬರನ್ನು ಹುಡುಕುತ್ತಾ, ರಾತ್ರಿ ಜಯ ಉಳಿದಿದ್ದ ಆ ಪಾಳು ಬಿದ್ದ ಚೆಕ್ ಪೋಸ್ಟ್ ಹತ್ತಿರ ಬಂದರು.  ಅಲ್ಲಿ ಅವರಿಗೆ  ಜ್ಞಾನ ತಪ್ಪಿ ಬಿದ್ದ ಜಯ ಕಾಣಿಸಿದಳು. ಕೂಡಲೇ ಅವಳನ್ನು ಅಲ್ಲಿಂದ ಹೊತ್ತು, ಕಾಡಿನಿಂದ ಹೊರಬಂದು ಆಸ್ಪತ್ರೆಗೆ ಸಾಗಿಸಿದರು. ಜಯಾಳಿಗೆ ಜ್ಞಾನ ಬಂದಾಗ ಅವಳ ಸುತ್ತ ಜಯಳ ತಂದೆ ತಾಯಿ ಹಾಗು ವಿಜ್ಞೇಶನ ತಂದೆ ತಾಯಿ, ಹರೀಶ್ ಮತ್ತು ಕವನ ನಿಂತಿದ್ದರು. ವಿಜ್ಞೇಶನ ತಂದೆ ತಾಯಿ ” ವಿಜ್ಞೇಶ್ ಎಲ್ಲಿ” ಎಂದಾಗ ಜಯ ನಡೆದಿದ್ದುದನ್ನೆಲ್ಲ ಹೇಳಿದಳು.  ವಿಜ್ಞೇಶ ತಂದೆ ತಾಯಿ ಅವನ ಪರಿಸ್ಥಿತಿ ಏನಾಯಿತೋ, ಎಲ್ಲಿದ್ದಾನೋ  ಎಂದು ಅವನ ಪರಿಸ್ಥಿತಿ ಊಹಿಸಿಕೊಂಡು   ಬಿಕ್ಕಿ ಬಿಕ್ಕಿ ಅಳತೊಡಗಿದರು. 

ಜಯ ಹೇಳಿದ ಸಂಗತಿಗಳನ್ನು ಕೇಳಿಸಿಕೊಂಡ ಪೊಲೀಸ್ ಹಾಗು ಫಾರೆಸ್ಟ್ ಡಿಪಾರ್ಟ್ಮೆಂಟ್ ನವರು ಆ ಜಲಪಾತದ ಹತ್ತಿರ ಬಂದು, ಅಲ್ಲಿಂದ ವಿಜ್ಞೇಶನನ್ನು ಹುಡುಕುವ ಪ್ರಯತ್ನ ಮಾಡಿದರು.    ಸತತ ಮೂರು ದಿನಗಳ ಕಾಲ ಹುಡುಕಿದರೂ  ವಿಜ್ಞೇಶನ ಸುಳಿವು ಸಿಗಲಿಲ್ಲ. ಕೊನೆಗೆ ವಾಪಸು ಆದ ತಂಡ,  ಮತ್ತೆ  ಇನ್ನಷ್ಟು ದೊಡ್ಡ ತಂಡದೊಂದಿಗೆ ಎರಡು ವಾರಗಳ ಕಾಲ ಹುಡುಕಿದರೂ ವಿಜ್ಞೇಶನ ಪತ್ತೆ ಆಗಲಿಲ್ಲ. 

ಸ್ವಲ್ಪ ದಿನಗಳ ನಂತರ ” ಯಾವುದೊ ಕಾಡು ಪ್ರಾಣಿಗೆ ಬಲಿ ಆಗಿರಬಹುದು”  ಎಂದು ಊಹೆಯೊಂದಿಗೆ ಹುಡುಕಾಟ ನಿಲ್ಲಿಸಿದರು. 

ವಿಜ್ಞೇಶನ ತಂದೆ ತಾಯಿ  ಅವನು ಯಾವತ್ತೋ ಒಂದು ದಿನ ಬಂದೆ ಬರುತ್ತಾನೆ ಎಂದು ಅವನಿಗೋಸ್ಕರ ಕಾಯುತ್ತಲೇ ಇದ್ದಾರೆ. 

 ಕವನ ಹಾಗು ಹರೀಶ ಇವತ್ತಿಗೂ ಅವನ ನೆನಪಲ್ಲಿ ಕೊರಗುತ್ತಿದ್ದಾರೆ.  

ಕವನ ” ನಾನು ಅವತ್ತು ಯಾಕಾದರೂ ಹಾಗೆ ಹೇಳಿದೆನೋ, ಇದಕ್ಕೆಲ್ಲ ನಾನೇ ಕಾರಣ ” ಅಂತ ತನ್ನನ್ನು ತಾನೇ ಶಪಿಸಿಕೊಳ್ಳುತ್ತಿದ್ದಾಳೆ. 

ಜಯ ಆದ ಘಟನೆಯ ಆಘಾತದಿಂದ  ಇನ್ನು ಹೊರಗಡೆ ಬಂದಿಲ್ಲ.  

ಡೇರಿಂಗ್ ಅಂತ  ಅಂದುಕೊಂಡು ಹೊರಟ ಹುಚ್ಚಾಟಕ್ಕೆ  ವಿಜ್ಞೇಶ  ಬಲಿ ಆದನೇ ?

-ಶ್ರೀನಾಥ್ ಹರದೂರ ಚಿದಂಬರ 

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s