ಪ್ರೇಮ ಪತ್ರ..

ಸುತ್ತಮುತ್ತಲಿನ ಹತ್ತು  ಹಳ್ಳಿಗಳಿಗೆ ಇದ್ದದ್ದು ಗರ್ತಿಕೆರೆಯ ಪ್ರೌಢಶಾಲೆ ಮಾತ್ರ.  ಆ ಎಲ್ಲ ಹಳ್ಳಿಯ  ಮಕ್ಕಳೆಲ್ಲ ಪ್ರಾಥಮಿಕ ಶಾಲೆ ಮುಗಿಸಿದ  ಮೇಲೆ  ಗರ್ತಿಕೆರೆಯಲ್ಲಿ ಇದ್ದ ಪ್ರೌಢಶಾಲೆಗೆ  ಬರಬೇಕಿತ್ತು.  ಸುತ್ತಮುತ್ತಲಿನ ಹಳ್ಳಿಯ ಮಕ್ಕಳಲ್ಲಿ ಕೆಲವರು ಬಸ್ಸಿನಲ್ಲಿ ಬಂದರೆ, ಕೆಲವರು ಸೈಕಲ್ ನಲ್ಲಿ ಹಾಗು ಕೆಲ ಮಕ್ಕಳು ಅವರ ಅಪ್ಪನ ಜೊತೆಯಲ್ಲಿ ಬೈಕಿನಲ್ಲಿ ಶಾಲೆಗೇ ಬರುತ್ತಿದ್ದರು. ಹರ್ಷ ಮತ್ತು ಅವನ ಕೆಲವು ಸ್ನೇಹಿತರು ಗರ್ತಿಕೆರೆಯಿಂದ ಎಂಟು ಕಿಲೋಮೀಟರು ದೂರದಲ್ಲಿದ್ದ ಚೆಲುವಿನಹಳ್ಳಿಯಿಂದ ಬಸ್ಸಿನಲ್ಲಿ ಗರ್ತಿಕೆರೆಯ ಪ್ರೌಢಶಾಲೆಗೆ  ಬರುತ್ತಿದ್ದರು. ಅವರೆಲ್ಲ ಆ ವರುಷ ಒಂಬತ್ತನೇ ತರಗತಿಯಿಂದ ಪಾಸಾಗಿ ಎಸ್ ಎಸ್ ಎಲ್ ಸಿ ಗೆ ಬಂದಿದ್ದರು.  ಹರ್ಷ ಮತ್ತು ಅವನ ಸ್ನೇಹಿತರೆಲ್ಲಾ ಅವರು ದಿನನಿತ್ಯ ಬರುತ್ತಿದ್ದ  ಬಸ್ಸು ಹತ್ತಿ ಒಳಗಡೆ ಸೀಟು ಕಾಲಿ ಇದ್ದರೂ,  ಬಾಗಿಲ ಬಳಿಯಲ್ಲೇ  ನಿಂತುಕೊಳ್ಳುತ್ತಿದ್ದರು. ಯಾಕೆಂದರೆ ಶಾಲೆ ತಲುಪುವ ತನಕ ದಾರಿಯಲ್ಲಿ   ಸಿಗುವ  ನಿಲ್ದಾಣಗಳಲ್ಲಿ  ಹತ್ತುವ ಹುಡುಗಿಯರನ್ನೆಲ್ಲ ನೋಡಬಹುದು, ಹಾಗು ಅವರೆಲ್ಲ ಇವರನ್ನೇ ದಾಟಿ ಹೋಗಬೇಕು, ಆಗ ಅವರ ಮುಂದೆ ಸ್ವಲ್ಪ ಸ್ಟೈಲ್ ಮಾಡಬಹುದು ಅನ್ನುವ ಆಲೋಚನೆ.   ಅಲ್ಲಿ ನಿಂತುಕೊಳ್ಳಲಿಕ್ಕೆ ಬೇರೆ ಹುಡುಗರ ಜೊತೆಗೆ ಪೈಪೋಟಿ ಕೂಡ ನಡೆಯುತ್ತಿತ್ತು.  ಹರ್ಷ ಹತ್ತುತ್ತಿದ್ದ  ನಿಲ್ದಾಣದಲ್ಲೇ  ಅವನ ಊರಿನವಳೇ ಆದ, ಅವನು ಬಹಳ ಇಷ್ಟಪಡುವ   ಮಮತಾ ಕೂಡ ಹತ್ತುತ್ತಿದ್ದಳು.  ಯಾವಾಗಲೂ  ಹರ್ಷ ಬಸ್ ಹತ್ತಿ  ಬಸ್ಸಿನ  ಫುಟ್ ಬೋರ್ಡ್ನಲ್ಲಿ  ನಿಲ್ಲುತ್ತಿದ್ದ.  ಮಮತಾ  ಬಸ್ ಹತ್ತಿ  ಫುಟ್ ಬೋರ್ಡ್ ಹತ್ತಿರವೇ ಇದ್ದ ಸೀಟಿನಲ್ಲಿ ಕೂರುತ್ತಿದ್ದಳು.  ಅವಳು  ರಸ್ತೆ ಬದಿಯಲ್ಲಿ ಏನಾದರು ಕಂಡರೆ ಅದನ್ನು ನೋಡುತ್ತಾ  ಹಾಗೆ ಹಿಂದೆ ತಿರುಗಿ ನೋಡಿದರೆ,   ಅವಳು ನನ್ನನ್ನು ನೋಡಲಿಕ್ಕೆ ಅವಳು  ಹಾಗೆ ಮಾಡುತ್ತಾಳೆ ಅಂತ ಹರ್ಷ ಅಂದುಕೊಂಡಿದ್ದ.  ಇದು ಪ್ರತಿ ದಿನವು ನಡೆಯುತ್ತಿದ್ದ ದೃಶ್ಯವಾಗಿತ್ತು. 

ಹರ್ಷ  ಒಂದು ವರುಷದಿಂದ  ಅವಳ ಹಿಂದೆ ಬಿದ್ದಿದ್ದನು.  ಶಾಲೆಯಲ್ಲಿ ಸಮಯ ಸಿಕ್ಕಾಗೆಲ್ಲ ಅವಳು ಹೋದ ಕಡೆಯೆಲ್ಲ ಅವಳ ಹಿಂದೇನೆ ತನ್ನ  ಸ್ನೇಹಿತರ ಗುಂಪು ಕಟ್ಟಿಕೊಂಡು ತಿರುಗುತ್ತಿದ್ದ. ಮಮತಾ ಮಾತ್ರ ಅವನಿಗೆ ಯಾವುದೇ ಸೊಪ್ಪು ಹಾಕಿರಲಿಲ್ಲ.  ಹರ್ಷನ ಸ್ನೇಹಿತರು ಮಮತಾಳನ್ನು ” ಅತ್ತಿಗೆ” ಬಾಭಿ” ಅಂತೆಲ್ಲ ಕರೆಯುತ್ತಿದ್ದರು. ಆದರೆ ಮಮತಾ ಮಾತ್ರ ತಾನಾಯಿತು ತನ್ನ ಓದಾಯಿತು ಎಂದುಕೊಂಡು ಇದ್ದಳು. ಹರ್ಷ ಧೈರ್ಯ ಮಾಡಿ ಯಾವತ್ತಿಗೂ ಅವಳ ಹತ್ತಿರ ಹೋಗಿ ನಾನು ನಿನ್ನನ್ನು ಪ್ರೀತಿಸುತ್ತೇನೆ ಅಂತ  ಹೇಳುವ ಸಾಹಸ ಮಾಡಿರಲಿಲ್ಲ.  ಹರ್ಷನ ಸ್ನೇಹಿತರು ಅವನಿಗೆ ” ಹೋಗಿ ಹೇಳೋ, ಇಲ್ಲದಿದ್ದರೆ ಬೇರೆ ಯಾರಾದರೂ ಹೇಳಿ, ಅವಳು ಒಪ್ಪಿಕೊಂಡರೆ ನಿನ್ನ ಗತಿ ಅಷ್ಟೇ”   ಅಂತ ಯಾವಾಗಲೂ ಗೇಲಿ ಮಾಡುತ್ತಿದ್ದರು. ಹರ್ಷ ಮಾತ್ರ ” ಇಲ್ಲ  ಕಂಡ್ರೋ , ಅವಳು ನನ್ನನ್ನು ಇಷ್ಟ ಪಡುತ್ತಾಳೆ, ಆದರೆ ಅದನ್ನು ತೋರಿಸಿಕೊಳ್ಳಲಿಕ್ಕೆ  ಅವಳಿಗೂ ಸಂಕೋಚ, ನಾಚಿಕೆ ಅಷ್ಟೇ ” ಅಂತ ಸ್ನೇಹಿತರಿಗೆ ಹೇಳುತ್ತಾ   ತನ್ನನ್ನು ತಾನು ಸಮಾಧಾನ ಮಾಡಿಕೊಳ್ಳುತ್ತಿದ್ದ. ಅವಳಿಗೆ ಪ್ರೇಮ ಪತ್ರ ಬರೆದು ಇಟ್ಟುಕೊಂಡು ಆಗಲೇ ಒಂದು ವರುಷ ಕಳೆದುಹೋಗಿತ್ತು.  ಆದರೆ ಕೊಡುವ ಧೈರ್ಯ ಮಾತ್ರ ಬಂದಿರಲಿಲ್ಲ. ಅವನ ಸ್ನೇಹಿತರು   “ಪ್ರೇಮ ಪತ್ರ ಬರೆದಿಟ್ಟುಕೊಂಡು  ನೀನೆ ಇಟ್ಟುಕೊಂಡರೆ ಹೇಗೆ, ಧೈರ್ಯ ಮಾಡಿ ಕೊಟ್ಟುಬಿಡು” ಅಂತ ದಿನಾಲು ಅವನಿಗೆ ಹೇಳುತ್ತಿದ್ದರು.  ಹರ್ಷ ಮಾತ್ರ ” ನೋಡುತ್ತಾ  ಇರಿ,  ನಾನೇನು ಕೊಡಬೇಕಾಗಲಿಲ್ಲ, ಒಂದು ಒಂದು ದಿನ ಅವಳೇ ನನಗೆ ಪ್ರೇಮ ಪತ್ರ ಕೊಡುತ್ತಾಳೆ ”  ಎಂದು ಕೊಚ್ಚಿಕೊಳ್ಳುತ್ತಾ,  ತನಗೆ ಕೊಡುವ ಧೈರ್ಯವಿಲ್ಲದ್ದನ್ನು ಮುಚ್ಚಿಡಲು ಪ್ರಯತ್ನ ಮಾಡುತ್ತಿದ್ದ.     ಹರ್ಷ ಪ್ರತಿ ದಿನ ಮನೆಯಿಂದ ಹೊರಡುವಾಗಿ  ” ಇವತ್ತು ಪ್ರೇಮ ಪತ್ರವನ್ನು  ಮಮತಾಳಿಗೆ ಕೊಟ್ಟೆ ಕೊಡುತ್ತೇನೆ ” ಎಂದು ಮನಸ್ಸಿನಲ್ಲಿ ಅಂದುಕೊಂಡು ಹೊರಟು,   ಅವಳು ಎದುರು ಬಂದಾಗ ಧೈರ್ಯ ಸಾಲದೇ ಪ್ರೇಮ ಪತ್ರವನ್ನು ಅವಳಿಗೆ  ಕೊಡುವ ಸಾಹಸವನ್ನು ಅಲ್ಲಿಗೆ ಕೈ ಬಿಡುತ್ತಿದ್ದ.  ಅವಳೇ ನನಗೆ  ಪ್ರೇಮ ನಿವೇದನೆ ಮಾಡಿದರೆ ಎಷ್ಟು ಚೆನ್ನ ಎಂದು ಮನದಲ್ಲಿ ಮಂಡಿಗೆ ತಿನ್ನುತ್ತಿದ್ದ. 

ಒಂದು ದಿನ ಸ್ನೇಹಿತರ ಜೊತೆ  ಮನೆಯಿಂದ ಶಾಲೆಗೇ ಹೋಗಲು ಬಸ್ ನಿಲ್ದಾಣಕ್ಕೆ ಹೋಗುತ್ತಿದ್ದನು. ಮಮತಾ ಬಂದಳೋ ಇಲ್ಲವೋ ಎಂದು ಪದೇ ಪದೇ ತಿರುಗಿ ತಿರುಗಿ ನೋಡುತ್ತಾ ಇದ್ದ.  ಅವನ ಸ್ನೇಹಿತರು ” ಅತ್ತಿಗೆ ಬರುತ್ತಾರೆ ಬಿಡಪ್ಪಾ, ಯಾಕೋ ಟೆನ್ಶನ್” ಎಂದು ಕಿಚಾಯಿಸುತ್ತ ಇದ್ದರು.  ಆಗ ಯಾರೋ  ” ಹರ್ಷಣ್ಣ, ಹರ್ಷಣ್ಣ ” ಎಂದು ಜೋರಾಗಿ ಕೂಗಿದ್ದು  ಕೇಳಿ ಹಿಂದೆ ತಿರುಗಿದ.  ಅಲ್ಲಿ ನೋಡಿದರೆ ಮಮತಾಳ ತಂಗಿ ಓಡಿ ಬರುತ್ತಿದ್ದಳು. ಎಲ್ಲರಿಗು ಇವಳೇಕೆ  ಹರ್ಷನನ್ನು  ಕೂಗಿಕೊಂಡು ಬರುತ್ತಿದ್ದಾಳೆ ಅಂತ  ಸ್ವಲ್ಪ ಆಶ್ಚರ್ಯವಾಯಿತು.  ಅವಳು ಬಂದವಳೆ ಹರ್ಷನ ಕೈಗೆ ಒಂದು ಪತ್ರ ಕೊಟ್ಟು ” ಹರ್ಷಣ್ಣ , ಅಕ್ಕ ಈ ಪತ್ರ ಕೊಟ್ಟಳು, ನಿನ್ನ ಕೈಲೇ ಕೊಡಬೇಕೆಂದು ಹೇಳಿದಳು, ಅವಳು ಶಾಲೆ ಬರಲ್ವಂತೆ, ಸಂಜೆ ನಿನಗೆ ಸಿಗ್ತಾಳಂತೆ” ಎಂದು ಒಂದೇ ಉಸಿರಿಗೆ ಹೇಳಿ, ತಂದಿದ್ದ ಪತ್ರವನ್ನು  ಹರ್ಷನ ಕೈಯಲ್ಲಿ ತುರುಕಿ ವಾಪಸು ಓಡಿ ಹೋದಳು.  ಹರ್ಷನ ಹೃದಯದ ಬಡಿತ ಒಮ್ಮೆಲೇ  ಸಿಕ್ಕಾಪಟ್ಟೆ ಜಾಸ್ತಿ ಆಗಿ ಹೋಯಿತು. ಅಂತೂ ನನ್ನ ಕನಸಿನಂತೆ ಕೊನೆಗೂ ಅವಳೇ ನನಗೆ ಪ್ರೇಮ ಪತ್ರ ಕೊಟ್ಟುಬಿಟ್ಟಳು ಅಂತ ಖುಷಿಯಲ್ಲಿ ತಾನು ಗಾಳಿಯಲ್ಲಿ ತೇಲಿದಂತೆ ಅನುಭವ  ಆಯಿತು. ಆತನ ಸ್ನೇಹಿತರು ಎಲ್ಲರು ಬಾಯಿ ಬಿಟ್ಟುಕೊಂಡು ಆ ಪತ್ರವನ್ನೇ ನೋಡತೊಡಗಿದ್ದರು.  ಪತ್ರ ಹಿಡಿದುಕೊಂಡ  ಹರ್ಷನ ಕೈ ಗಡ ಗಡ ನಡುಗುತ್ತಿತ್ತು. ಸ್ನೇಹಿತರೆಲ್ಲ ಅವನ ಸುತ್ತ ನಿಂತು ” ಬಿಡಿಸೋ ನೋಡೋ, ಏನಿದೆ ಓದೋ ”  ಅಂತ ಕುತೂಹಲದಿಂದ ಹೇಳುತ್ತಿದ್ದರು. ಹರ್ಷ ನಿಧಾನವಾಗಿ ಮಡಚಿದ್ದ ಪತ್ರವನ್ನು ಬಿಡಿಸಿದ.  ಆಗ ಆ ಪತ್ರದ ಒಳಗಡೆಯಿಂದ ಇನ್ನೊಂದು ಸಣ್ಣ ಚೀಟಿ ಕೆಳಗೆ ಬಿತ್ತು.  ಹರ್ಷ ಏನಿರಬಹುದು ಅಂತ ಆ ಚೀಟಿಯನ್ನು  ತೆಗೆದು ಓದಲು ಶುರು ಮಾಡಿದ.  

ಆ ಚೀಟಿಯಲ್ಲಿ  ಈ ರೀತಿ ಬರೆದಿತ್ತು ”  ಹರ್ಷ, ದಯವಿಟ್ಟು ನನ್ನ  ಲೀವ್ ಲೆಟರನ್ನು ಕ್ಲಾಸ್ ಟೀಚರ್ಗೆ ಕೊಟ್ಟುಬಿಡು,  ಇವತ್ತಿನ ನೋಟ್ಸ್ ತೆಗೆದುಕೊಳ್ಳಲು ನಿನ್ನ ಮನೆಗೆ ಸಂಜೆ ಬರುತ್ತೇನೆ, ದಯವಿಟ್ಟು ನಿನ್ನ ನೋಟ್ಸ್ ಕಾಪಿ ಮಾಡಲು ಕೊಡು.  ಇಂತಿ ನಿನ್ನ ಆತ್ಮೀಯ ಸಹೋದರಿ,  ಮಮತಾ”. 

ಹರ್ಷನ ಕಣ್ಣು ಯಾಕೋ ಮಂಜು ಕವಿದಂತಾಯಿತು. ಅದನ್ನು ಓದಿದ ಸ್ನೇಹಿತರು ಏನು ಹೇಳಬೇಕೆಂದು ಗೊತ್ತಾಗದೆ ಹಾಗೆ ಅವನ ಸುತ್ತ ನಿಂತರು. 

ಶಾಲೆಯ ಬಸ್ ಅವರ ಮುಂದೆಯೇ  ಹೊರಟು  ಹೋಯಿತು. 

– ಶ್ರೀನಾಥ್ ಹರದೂರ ಚಿದಂಬರ 

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s