ಧರ್ಮಸ್ಥಳಕ್ಕೆ ಹೋಗೋದು ಬೇಡ ಅಂತ ಹೊರಟಾಗ …

ಮದುವೆಯಾಗಿ ಒಂದು ವರುಷವಾಗುತ್ತ ಬಂದಿತ್ತು.  ಒಂದು ಪುಟ್ಟದಾದ  ಬಾಡಿಗೆ ಮನೆ ಮಾಡಿಕೊಳ್ಳುವ  ತಯಾರಿ ನಡೆಸಿದ್ದೆ.   ನಾನು ನೋಡಿದ ಆ ಬಾಡಿಗೆ ಮನೆ ಹೊಸದಾಗಿ ಕಟ್ಟಿದ ಮನೆಯಾಗಿತ್ತು ಮತ್ತು ಅದರ  ಗೃಹಪ್ರವೇಶ ಆಗಷ್ಟೇ ಮುಗಿದಿತ್ತು.  ಕೆಳಗಡೆ ಮಾಲೀಕರು ಹಾಗು ಮೇಲುಗಡೆ ಬಾಡಿಗೆದಾರರಿಗೆ ಎಂದು ಯೋಜನೆ ಹಾಕಿ  ಮನೆ ಕಟ್ಟಿದ್ದರು.  ನಾವೇ ಆ ಮನೆಯ ಮಾಲೀಕರಿಗೆ  ಮೊದಲ ಬಾಡಿಗೆದಾರರಾಗಿದ್ವಿ.  ನಮ್ಮ ಮನೆ ಹಿರಿಯರು “ಹೊಸದಾಗಿ ಸಂಸಾರ ಶುರು ಮಾಡಿದ್ದೀರಿ, ಬಾಡಿಗೆ ಮನೆ ಆದರೂ ಹೊಸದಾಗಿ ಕಟ್ಟಿದ್ದು ಬೇರೆ, ಸಂಸಾರ ಶುರು ಮಾಡುವುದಕ್ಕಿಂತ ಮೊದಲು ಒಮ್ಮೆ ಸುಬ್ರಹ್ಮಣ್ಯ ಕ್ಕೆ ಭೇಟಿ ನೀಡಿ, ಒಂದು ಪೂಜೆ ಮಾಡಿಸಿಕೊಂಡು ಬನ್ನಿ” ಎಂದು ಹೇಳಿದರು. ಮೊದಲು ದೇವಸ್ಥಾನ, ಪೂಜೆ, ಪುನಸ್ಕಾರ ಅಂದರೆ ಮೂಗು ಮುರಿಯುತ್ತಿದ್ದ ನಾನು, ಹೆಂಡತಿ ಬಂದ ಮೇಲೆ ಅವಳಿಗೆ ಬೇಸರ ಆಗಬಾರದೆಂದು ಹೂಂ ಗುಟ್ಟಿದೆ.  ಮನೆಗೆ ಮುಂಗಡ ಹಣ ಕೊಟ್ಟು, ಮನೆಯ ಕೀಯನ್ನು  ಮನೆ ಮಾಲೀಕರಿಂದ ಇಸಿದುಕೊಂಡು  ಸುಬ್ರಹ್ಮಣ್ಯಕ್ಕೆ ತೆರಳಲು ಸೀದಾ ಮಜೆಸ್ಟಿಕ್ ನಿಲ್ದಾಣಕ್ಕೆ ಬಂದೆವು. ಅವತ್ತು ಶನಿವಾರವಾಗಿತ್ತು. ನಾನು ನನ್ನ ಹೆಂಡತಿಗೆ ” ನೋಡು ಸೀದಾ ಸುಬ್ರಹ್ಮಣ್ಯ ಕ್ಕೆ ಹೋಗಿ ಪೂಜೆ ಮುಗಿಸಿಕೊಂಡು ಬಂದುಬಿಡೋಣ,  ಮತ್ತೆ ಅಲ್ಲಿಗೆ ಹೋದ ಮೇಲೆ ಧರ್ಮಸ್ಥಳಕ್ಕೆ ಹೋಗೋಣ ಅಂತ ಎಲ್ಲಾ  ಹೇಳಬೇಡ” ಎಂದು ಹೇಳಿಯೇ ಕರೆದುಕೊಂಡು ಹೊರಟ್ಟಿದ್ದೆ. ಮೆಜೆಸ್ಟಿಕ್ನಲ್ಲಿ ಸುಬ್ರಹ್ಮಣ್ಯ ಕ್ಕೆ ಯಾವುದು ಬಸ್ ಇರಲಿಲ್ಲ, ಧರ್ಮಸ್ಥಳಕ್ಕೆ ಹೊರಡುವ ಬಸ್  ಇತ್ತು. ಆ ಕಂಡಕ್ಟರ್ಗೆ ” ಸುಬ್ರಹ್ಮಣ್ಯಕ್ಕೆ ಎಷ್ಟೋತ್ತಿಗೆ ಬಸ್ ಇದೆ ” ಅಂತ ಕೇಳಿದೆ. ಅದಕ್ಕೆ ಆ ಕಂಡಕ್ಟರ್ ” ನೋಡಿ, ಸುಬ್ರಹ್ಮಣ್ಯಕ್ಕೆ ಹೋಗುವ ದಾರಿಯಲ್ಲಿರುವ ಸೇತುವೆ ಕೆಲಸ ನಡೆಯುತ್ತಿದೆ, ಹಾಗಾಗಿ ಬಸ್ ನಿಲ್ಲಿಸಿದ್ದಾರೆ, ನೀವು ಗುಂಡ್ಯದ ತನಕ ನಮ್ಮ ಬಸ್ಸಿನಲ್ಲಿ ಬನ್ನಿ, ಅಲ್ಲಿಂದ ಮಂಗಳೂರು, ಪುತ್ತೂರು ಕಡೆಯಿಂದ ಬರುವ ಬಸ್ ಸಿಗುತ್ತದೆ, ಅದರಲ್ಲಿ ನೀವು ಸುಬ್ರಹ್ಮಣ್ಯಕ್ಕೆ ಹೋಗಬಹುದು ” ಎಂದು ಹೇಳಿದ. ನಾವು ಸರಿ ಹಾಗೆ ಮಾಡೋಣ ಅಂತ ಅದೇ ಬಸ್ಸನ್ನು ಹತ್ತಿದೆವು. ಸುಬ್ರಹ್ಮಣ್ಯದ ಕಡೆ ನಮ್ಮ ಪ್ರಯಾಣ ಶುರುವಾಯಿತು. 

ಮದ್ಯಾಹ್ನ  ಹೊರಟ ನಾವು ಸರಿ ಸುಮಾರು ಸಂಜೆ ಏಳು ಗಂಟೆಯ  ಹೊತ್ತಿಗೆ ಗುಂಡ್ಯ ತಲುಪಿದೆವು. ಅಲ್ಲಿ ನಾವಿಬ್ಬರೇ ಇಳಿಯಬೇಕಾಗಿತ್ತು. ಕಂಡಕ್ಟರ್ ನಮ್ಮನ್ನು ಅಲ್ಲಿ ಇಳಿಸಿ ” ನೋಡಿ, ಅಲ್ಲಿ ಅಂಗಡಿಯಲ್ಲಿ ಸುಬ್ರಮಣ್ಯಕ್ಕೆ ಯಾವುದಾದರೂ ಬಸ್ ಇದೆಯಾ ಅಂತ ವಿಚಾರಿಸಿ ನೋಡಿ, ” ಎಂದು ಹೇಳಿದ. ನಾನು ಅಲ್ಲಿದ್ದ ಅಂಗಡಿಯವನ ಹತ್ತಿರ ಸುಬ್ರಹ್ಮಣ್ಯಕ್ಕೆ ಹೋಗುವ ಬಗ್ಗೆ ವಿಚಾರಿಸಿದೆ, ಅದಕ್ಕೆ ಆ ಅಂಗಡಿಯವ ” ಸೇತುವೆ ಕೆಲಸ ನಡೆಯುತ್ತಿದೆ, ಇಲ್ಲಿಂದ ಯಾವ ಬಸ್ ಹೋಗುತ್ತಿಲ್ಲ, ಇನ್ನೊಂದು ಕಡೆಯಿಂದ ಹೋಗುತ್ತಿದೆ, ನೀವು ಧರ್ಮಸ್ಥಳಕ್ಕೆ ಹೋಗಿ, ಅಲ್ಲಿಂದ ಬಸ್ ಸಿಗುತ್ತದೆ ” ಎಂದು ಹೇಳಿದ.  ನಾವು ಬಂದ ಬಸ್ ಕಂಡಕ್ಟರ್ಗೆ ಇವೆಲ್ಲ ಗೊತ್ತಿತ್ತು ಅಂತ ಕಾಣಿಸುತ್ತೆ, ನಾನು ವಿಚಾರಿಸಿ ಬರುವ ತನಕ ಬಸ್ಸನ್ನು ಹಾಗೆ  ಅಲ್ಲಿಯೇ ನಿಲ್ಲಿಸಿಕೊಂಡಿದ್ದ. ನಾವು ವಾಪಸು ಹೋಗಿ ಮತ್ತೆ ಅದೇ ಬಸ್ಸಿನಲ್ಲಿ ಧರ್ಮಸ್ಥಳಕ್ಕೆ ಟಿಕೆಟ್ ತೆಗೆದುಕೊಂಡು ಧರ್ಮಸ್ಥಳದ ಕಡೆ ಹೊರಟೆವು. ಅಲ್ಲಿಗೆ ಹೋಗಲ್ಲ ಅಂದವರು ಅಲ್ಲಿಗೆ ಹೊರಟ್ಟಿದ್ದೆವು. 

ಅಲ್ಲಿಂದ ಹೊರಟ ನಾವು ಎಂಟು ಗಂಟೆಗೆ ಧರ್ಮಸ್ಥಳ ತಲುಪಿದೆವು.   ಅದು  ಧರ್ಮಸ್ಥಳಕ್ಕೆ  ನಮ್ಮ ಮೊದಲ ಭೇಟಿ ಆಗಿತ್ತು. 

ಬಸ್ಸಿನಿಂದ ಇಳಿದ ಮೇಲೆ, ಹೇಗೂ ಧರ್ಮಸ್ಥಳಕ್ಕೆ ಬಂದಿದ್ದು ಆಯ್ತಲ್ಲಾ, ದೇವಸ್ಥಾನದ ಹತ್ತಿರ ಹೋಗಿ ಹೊರಗಡೆಯಿಂದಾನೆ ಒಂದು ನಮಸ್ಕಾರ ಮಾಡಿ ಸುಬ್ರಹ್ಮಣ್ಯಕ್ಕೆ ಹೊರಡೋಣ ” ಎಂದುಕೊಂಡು ದೇವಸ್ಥಾನದ ಹೊರಗಡೆಯಿಂದ  ಮಂಜನಾಥನಿಗೆ ನಮಸ್ಕಾರ ಮಾಡಿ, ಅಲ್ಲೇ ಐದು ನಿಮಿಷ ಕುಳಿತು, ವಾಪಸು ಬಸ್ ನಿಲ್ದಾಣಕ್ಕೆ ವಾಪಸು ಬಂದೆವು. ಸುಬ್ರಮಣ್ಯಕ್ಕೆ ಹೋಗುವ ಬಸ್ ವಿಚಾರಿಸಿದಾಗ ” ಕೊನೆಯ ಬಸ್ ಎಂಟು ಗಂಟೆಗೆ ಹೋಗಿ ಆಯಿತು, ಇನ್ನು ನಾಳೆ ಬೆಳೆಗ್ಗೆ ಒಂಬತ್ತು ಗಂಟೆಗೆ ಮೊದಲ ಬಸ್ ಇದೆ” ಎಂದು ಹೇಳಿದರು.  ಏನಪ್ಪಾ ಮಾಡುವುದು ಅಂತ ಧರ್ಮಸ್ಥಳದ ಛತ್ರಗಳಲ್ಲಿ ಉಳಿಯುವ ಎಂದು ಅಲ್ಲಿ ವಿಚಾರಿಸಿದರೆ ಯಾವ ರೂಮ್ ಕಾಲಿ ಇಲ್ಲ ಎಂದು ಹೇಳಿದರು.  ನಾನು ನನ್ನ ಹೆಂಡತಿಗೆ ಉಜಿರೆಗೆ ಹೋಗಿ ಉಳಿಯೋಣ ಅಂತ ಹೇಳಿದೆ. ಅಲ್ಲಿಂದ ಒಂದು ಆಟೋದಲ್ಲಿ ಉಜಿರೆಗೆ ಹೋಗಿ ನಾಲ್ಕೈದು ಹೋಟೆಲ್ ವಿಚಾರಿಸಿದರೂ,  ನಮಗೆ ಯಾವ ಹೋಟೆಲ್ನಲ್ಲಿ ಕೂಡ ರೂಮ್ ಸಿಗಲಿಲ್ಲ. ಆಗಲೇ ರಾತ್ರಿ ಹತ್ತು ಗಂಟೆ ಆಗುತ್ತಾ ಬಂದಿತ್ತು. ಊಟ ಬೇರೆ ಮಾಡಿರಲಿಲ್ಲ.  ಕೊನೆಗೆ ನಾವು ಹತ್ತಿದ್ದ ಆಟೋದವನು  ಅವನಿಗೆ ಗೊತ್ತಿದ್ದ ಒಂದು ಹೋಟೆಲ್ಗೆ ಕರೆದುಕೊಂಡು ಹೋದನು. ಅಲ್ಲಿ ಆರು ಬೆಡ್ ಇರುವ ಒಂದು ರೂಮ್ ಇದೆ, ಅದು ಬಿಟ್ಟು ಬೇರೆ ಯಾವುದು ಇಲ್ಲ ಎಂದು ಹೇಳಿದರು. ನಾವು ಅದೇ ರೂಮ್ ತೆಗೆದುಕೊಂಡು, ಹೊರಗಡೆಯಿಂದ ಊಟ ತರಿಸಿಕೊಂಡು ಊಟ ಮಾಡಿ , ಆರು ಬೆಡ್ ಇರುವ ರೂಮಿನಲ್ಲಿ ಇಬ್ಬರೇ   ಉಳಿದೆವು.

ಬೆಳಗ್ಗೆ ಬೇಗನೆ ಎದ್ದು ತಯಾರು ಆಗಿ ಎಂಟು ಗಂಟೆಗೆ ಧರ್ಮಸ್ಥಳಕ್ಕೆ ಮತ್ತೆ ಬಂದೆವು. ನೆನಪಿರಲಿ  ಧರ್ಮಸ್ಥಳಕ್ಕೆ ಅದು ನಮ್ಮ ಎರಡನೇ ಭೇಟಿ. 

ಅಲ್ಲಿಂದ ಸುಬ್ರಹ್ಮಣ್ಯಕ್ಕೆ ಒಂಬತ್ತು ಗಂಟೆಯ ಬಸ್ಸಿನಲ್ಲಿ ಹೊರಟೆವು. ಸುಬ್ರಹ್ಮಣ್ಯ ತಲುಪಿ, ಸುಬ್ರಹ್ಮಣ್ಯನ ದರ್ಶನ ಮಾಡಿಕೊಂಡು, ಅಲ್ಲಿ ಪೂಜೆ ಮಾಡಿಸಿಕೊಂಡು, ದೇವಸ್ಥಾನದಿಂದ ಹೊರಗಡೆ ಬಂದಾಗ ಆಗಲೇ ಮದ್ಯಾಹ್ನ ಹನ್ನೆರಡುವರೆ ಆಗಿತ್ತು.  ಅಲ್ಲಿಯೇ ಒಂದು ಹೋಟೆಲ್ಲಿನಲ್ಲಿ ಊಟ ಮಾಡಿ ಬೆಂಗಳೂರಿಗೆ ಹೋಗಲು ರಾತ್ರಿಯ ಬಸ್ಸಿಗೆ ಟಿಕೆಟ್ ಬುಕ್ ಮಾಡಲು  ಬಸ್ ನಿಲ್ದಾಣಕ್ಕೆ ಬಂದೆವು.  ಅಲ್ಲಿ ವಿಚಾರಿಸಿದಾಗ ರಾತ್ರಿ ಬೆಂಗಳೂರಿಗೆ ಹೊರಡುವ ಯಾವ ಬಸ್ಸಿನಲ್ಲಿಯೂ ಕೂಡ  ಸೀಟ್ ಕಾಲಿ ಇರಲಿಲ್ಲ. ಇನ್ನು ನಮಗೆ ಉಳಿದ ಆಯ್ಕೆ ಅಂದರೆ ಕೆಂಪು ಬಸ್ ಮಾತ್ರ ಮತ್ತು ನಾವು ಆಗಲೇ ಹೊರಡಬೇಕಿತ್ತು.  ಆದರೆ ಅಲ್ಲಿಗೆ ಬರುತ್ತಿದ್ದ ಯಾವ ಬಸ್ನಲ್ಲಿ ಹತ್ತಲು ಆಗದಷ್ಟು ರಶ್ ಇತ್ತು. ಪ್ರತಿ ಒಂದು ಗಂಟೆಗೊಂದು ಬಸ್ ಬರುತ್ತಿತ್ತು. ಆದರೆ ನಮಗೆ ಯಾವ  ಬಸ್ಸಿನಲ್ಲಿ ಕೂಡ ಹತ್ತಲು ಆಗಲಿಲ್ಲ. ನಮ್ಮ ಹಾಗೆ ಅಲ್ಲಿಯೇ ಕಾಯುತ್ತಿದ್ದ ಇನ್ನೊಂದು ಜೋಡಿ ನಮ್ಮನ್ನು ನೋಡಿ ” ಸರ್, ಇವತ್ತು ಇಲ್ಲಿಗೆ  ಬರುವ  ಎಲ್ಲಾ ಕೆಂಪು ಬಸ್ ಹೀಗೆ ಇರುತ್ತದೆ, ಯಾಕೆಂದರೆ ಇವತ್ತು ಭಾನುವಾರ, ಎಲ್ಲರು ತಮ್ಮ ತಮ್ಮ ಊರುಗಳಿಂದ ವಾಪಸು ಬೆಂಗಳೂರಿಗೆ ಹೊರಟಿರುತ್ತಾರೆ, ಹಾಗಾಗಿ ಇಷ್ಟು ರಶ್ ಇದೆ,  ನೆಲ್ಲ್ಯಾಡಿ ಅಂತ ಊರು ಇದೆ, ಅಲ್ಲಿಗೆ  ಹೋದರೆ ಪುತ್ತೂರು ಹಾಗು ಮಂಗಳೂರಿನಿಂದ ಬೆಂಗಳೂರಿಗೆ ಹೋಗುವ ಬಸ್ ಸಿಗುತ್ತೆ,  ಅದಕ್ಕೆ ನಾವು ಅಲ್ಲಿಗೆ ಹೋಗುತ್ತೇವೆ ನೀವು ಬೇಕಾದರೆ ಹಾಗೆ ಮಾಡಿ “ಅಂದರು.  ನನಗೆ ಹಾಗು ನನ್ನ  ಹೆಂಡತಿಗೆ ಯಾಕೋ ಅದೇ ಸರಿ ಅನ್ನಿಸಿ ಅವರ ಜೊತೆ ನೆಲ್ಲ್ಯಾಡಿಗೆ  ಹೋಗುವ  ಬಸ್ ಹತ್ತಿದೆವು.  

ನೆಲ್ಲ್ಯಾಡಿ ತಲುಪಿದಾಗ ಆಗಲೇ ಸಂಜೆ ಐದು ಗಂಟೆ ಆಗುತ್ತಾ ಬಂದಿತ್ತು.  ಅಲ್ಲಿಯೇ  ಬಸ್ ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯುತ್ತ ನಿಂತೆವು. ಅರ್ಧ ಗಂಟೆ ಕಾದ ಮೇಲೆ ಒಂದು ರಾಜಹಂಸ ಬಸ್ ಬಂತು. ಅದರಲ್ಲಿದ್ದ ಕಂಡಕ್ಟರ್ ” ಬಸ್ ಫುಲ್ ಆಗಿದೆ,  ಸೀಟ್ ಯಾವುದು ಕಾಲಿ  ಇಲ್ಲ, ಬೆಂಗಳೂರಿನ ತನಕ ನಿಂತುಕೊಂಡೆ ಬರಬೇಕು,  ಬೇಕಾದ್ರೆ ಬನ್ನಿ ” ಎಂದ. ನಮ್ಮ ಜೊತೆಯಲ್ಲಿದ್ದ  ಜೋಡಿ ” ಪರವಾಗಿಲ್ಲ ನಾವು ಬರುತ್ತೇವೆ” ಎಂದು  ಬಸ್ ಹತ್ತಿದರು.  ನಮಗೆ ಏನು ಮಾಡಬೇಕೆಂಬುದೇ ಗೊತ್ತಾಗದೆ ” ಇಲ್ಲ, ನಾವು ಬರಲ್ಲ” ಎಂದು ಹೇಳಿದ ಮೇಲೆ ಬಸ್ ಹೊರಟು ಹೋಯಿತು.   ಆ ಬಸ್ ನಿಲ್ದಾಣದಲ್ಲಿ ನಮ್ಮನ್ನು  ಬಿಟ್ಟರೆ ಯಾರು ಇರಲಿಲ್ಲ. ಅಲ್ಲಿನ ಸ್ಟೇಷನ್ ಮಾಸ್ಟರ್ ಬಂದು ” ಈಗ ಹೋಗಿದ್ದೆ  ಲಾಸ್ಟ ಬಸ್,  ಇನ್ನು ಇಲ್ಲಿ ಬಂದು ಯಾವ ಬಸ್ ನಿಲ್ಲಿಸುವುದಿಲ್ಲ,  ಮುಖ್ಯ ರಸ್ತೆಯಲ್ಲೇ ನಿಲ್ಲಿಸುತ್ತಾರೆ, ನೀವು ಅಲ್ಲಿಗೆ ಹೋಗಿ ನಿಲ್ಲಿ ” ಎಂದು ಹೇಳಿ ಆಫೀಸ್ ಬಾಗಿಲು ಮುಚ್ಚಿ  ಹೊರಟುಹೋದ.  ನಾವು ಮುಖ್ಯ ರಸ್ತೆಗೆ ಹೋಗಿ ನಿಂತೆವು. ಒಂದೆರಡು ಬಸ್ ಬಂದರು, ನಿಲ್ಲಿಸಲೇ ಇಲ್ಲ.  ಕತ್ತಲು  ಆಗುತ್ತಾ ಬಂದಿದ್ದರಿಂದ ತೊಂದರೆ ತೆಗೆದುಕೊಳ್ಳುವುದು ಬೇಡ, ಧರ್ಮಸ್ಥಳಕ್ಕೆ ಹೋಗೋಣ, ಅಲ್ಲಿಂದ ಬಸ್ ಸಿಗಬಹುದು ಅಂತ ಯೋಚಿಸಿ,   ಅಲ್ಲಿ ಸಿಗುತ್ತಿದ್ದ ಶೇರಿಂಗ್ ಜೀಪ್ನಲ್ಲಿ ಮತ್ತೆ ಧರ್ಮಸ್ಥಳದ ಕಡೆ ಹೊರೆಟೆವು. 

ಧರ್ಮಸ್ಥಳ ತಲುಪುವಾಗ ಆಗಲೇ ರಾತ್ರಿ ಏಳುವರೆ ಆಗುತ್ತಾ ಬಂದಿತ್ತು. ಅದು ಧರ್ಮಸ್ಥಳಕ್ಕೆ ನಾವು ನೀಡಿದ್ದ ಮೂರನೇ ಭೇಟಿ. 

ಧರ್ಮಸ್ಥಳಕ್ಕೆ ತಲುಪಿ ಅಲ್ಲಿಯ ಬಸ್ ನಿಲ್ದಾಣದಲ್ಲಿ ವಿಚಾರಿಸಿದರೆ, ಅಲ್ಲಿಯೂ ಕೂಡ ರಾತ್ರಿ ಬೆಂಗಳೂರಿಗೆ ಹೊರಡುವ ಯಾವ ಬಸ್ಸಿನಲ್ಲಿಯೂ ಸೀಟ್ ಕಾಲಿ ಇರಲಿಲ್ಲ. ನಿಲ್ದಾಣಕ್ಕೆ ಬರುತ್ತಿದ್ದ ಕೆಂಪು ಬಸ್ಸುಗಳು ತುಂಬಿಕೊಂಡೆ ಬರುತ್ತಿದ್ದವು. ಹತ್ತಲು ಆಗದಷ್ಟು ರಶ್ ಇರುತ್ತಿತ್ತು. ಸ್ವಲ್ಪ ಹೊತ್ತು ಅಲ್ಲಿಯೇ  ಏನು ಮಾತನಾಡದೆ ಕುಳಿತುಕೊಂಡೆವು.  ನಂತರ ಸೀದಾ ನಾವು ಧರ್ಮಸ್ಥಳದ ದೇವಸ್ಥಾನಕ್ಕೆ ಹೋಗಿ ಲಗ್ಗೇಜ್ ರೂಮಿನಲ್ಲಿ ಬ್ಯಾಗ್ ಇಟ್ಟು,  ದರ್ಶನದ  ಸಾಲಿಗೆ ಹೋಗಿ ನಿಂತೆವು.  ಮಂಜುನಾಥನ ದರ್ಶನ ಮಾಡಿ,  ಪ್ರಸಾದದ ಊಟ ಮಾಡಿ ಹೊರಗಡೆ ಬರುವಾಗ ರಾತ್ರಿ ಹತ್ತು ದಾಟಿತ್ತು. ಆಮೇಲೆ ಬಸ್ ನಿಲ್ದಾಣಕ್ಕೆ ಹೋಗಿ ಮರುದಿನ ಬೆಳಗ್ಗೆ ಒಂಬತ್ತು ಗಂಟೆಗೆ ಇದ್ದ ಒಂದು ರಾಜಹಂಸ ಬಸ್ಸಿಗೆ ಟಿಕೆಟ್ ಬುಕ್ ಮಾಡಿ, ಲಗ್ಗೇಜ್ ತೆಗೆದುಕೊಂಡು ಸೀದಾ ಉಜಿರೆಗೆ  ಹೋಗಿ, ಅಲ್ಲಿ  ಒಂದು ಹೋಟೆನಲ್ಲಿ ರೂಮ್ ಮಾಡಿ ಉಳಿದೆವು. 

ಮರುದಿನ ಬೆಳೆಗ್ಗೆ ಬೇಗನೆ ಉಜಿರೆಯಿಂದ ಧರ್ಮಸ್ಥಳಕ್ಕೆ ಬಂದೆವು. ಅದು ಧರ್ಮಸ್ಥಳಕ್ಕೆ ನಾವು ನೀಡಿದ್ದ ನಾಲ್ಕನೇ ಭೇಟಿ. 

ಮತ್ತೊಮ್ಮೆ ಮಂಜುನಾಥನ ದರ್ಶನ ಮಾಡಿ, ಬಸ್ ನಿಲ್ದಾಣಕ್ಕೆ ಬಂದೆವು. ಆಗಲೇ ಬಸ್ ನಿಲ್ದಾಣದಲ್ಲಿ ನಿಂತಿತ್ತು. ಆ ಬಸ್ಸಿನಲ್ಲಿ ಅಲ್ಲಿಂದ ಹೊರಟು ಸಂಜೆಯ ವೇಳೆಗೆ ಬೆಂಗಳೂರು ತಲುಪಿದೆವು. 

ಧರ್ಮಸ್ಥಳಕ್ಕೆ ಹೋಗೋದು ಬೇಡ ಅಂದುಕೊಂಡು ಹೊರಟ ನಾವು,  ಧರ್ಮಸ್ಥಳವನ್ನು ನಾಲಕ್ಕು ಬಾರಿ ಭೇಟಿ ನೀಡಿದ್ದೆವು. 

ನಾವಿಬ್ಬರು ಯಾಕೆ ಹೀಗಾಯ್ತು ಅಂತ ಒಬ್ಬರಿಗೊಬ್ಬರು ಹೇಳಿಕೊಳ್ಳಲಿಲ್ಲ. ಆದರೆ ಇಬ್ಬರಿಗೂ ಯಾಕಾಯ್ತು ಎಂಬ ಅರಿವಾಗಿತ್ತು. 

ನಂಬುವವರು ಶ್ರೀ ಮಂಜುನಾಥನ ಮಹಿಮೆ ಅನ್ನುತ್ತಾರೆ, ನಂಬದವರು ನೀವು ಸರಿಯಾಗಿ ಹೋಗಿ ಬರುವ ಪ್ಲಾನ್ ಮಾಡಿಲ್ಲ ಅನ್ನುತ್ತಾರೆ. 

ನಿಮಗೇನು ಅನ್ನಿಸಿತು ಹೇಳಿ ?

– ಶ್ರೀನಾಥ್ ಹರದೂರ ಚಿದಂಬರ 

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s