ಗೋಲಗಪ್ಪ ಮತ್ತು ಮೊದಲ ಪ್ರೀತಿ !!

ಪ್ರಜ್ವಲ್ ಆಗಾಗ ಮನೆ ಹತ್ತಿರವೇ   ಸಿಗುತ್ತಿದ್ದ   ಗೋಲಗಪ್ಪ ತಿನ್ನಲು ಹೋಗುತ್ತಿದ್ದ.  ಗೋಲಗಪ್ಪ ಮಾರುವವನು ಸರಿಯಾಗಿ ಮೂರೂವರೆಗೆ ಅವನ ಮನೆ ಹತ್ತಿರ ಇದ್ದ ಒಂದು ಮರದ ಕೆಳಗೆ ಬಂದು ನಿಲ್ಲುತ್ತಿದ್ದ.  ವಾರದಲ್ಲಿ ಎರಡು ಬಾರಿಯಾದರೂ ಪ್ರಜ್ವಲ್ ಗೋಲಗಪ್ಪ ತಿನ್ನಲು ಅವನ ಹತ್ತಿರ ಹೋಗುತ್ತಿದ್ದ.  ಒಮ್ಮೊಮ್ಮೆ ಅವನ ಕಾಲೇಜು ಸ್ನೇಹಿತರು ಎಲ್ಲ ಸೇರಿ ಅವನ ಹತ್ತಿರ ಗೋಲಗಪ್ಪ ತಿನ್ನಲು ಹೋಗುತ್ತಿದ್ದರು.  ಗೋಲಗಪ್ಪ ಮಾರುವವನಿಗೆ   ಕನ್ನಡ ಮಾತನಾಡಲು ಅಷ್ಟಾಗಿ ಬರುತ್ತಿರಲಿಲ್ಲ.  ತನಗೆ ಬರುತ್ತಿದ್ದ ಹರುಕು ಮುರುಕು ಕನ್ನಡದಲ್ಲೇ ಮಾತನಾಡುತ್ತಿದ್ದ. ಅವನಿಗೆ ಹೆಚ್ಚೆಂದರೆ ಹತ್ತೊಂಬತ್ತರಿಂದ ಇಪ್ಪತ್ತು ವಯಸಾಗಿತ್ತು. ಉತ್ತರ ಭಾರತದ ಯಾವುದೊ ಒಂದು ಹಳ್ಳಿಯಿಂದ ಬಂದಿದ್ದು ಅಂತ ಹೇಳಿದ್ದ.  ಆಗಾಗ ತಿನ್ನಲು ಹೋಗುತ್ತಿದ್ದರಿಂದ ಅವನೊಟ್ಟಿಗೆ ಬಹಳ ಪರಿಚಯ ಆಗಿಹೋಗಿತ್ತು.    ಹೀಗೆ  ಒಂದು ದಿವಸ ಗೋಲಗಪ್ಪ ತಿನ್ನುತ್ತಿರುವಾಗ ಅವನು  ” ನಾನು ಗಾವ್ ಹೋಗ್ತಾ ಇದ್ದಾನೆ , ಬೀಸ್   ದಿನ್ ಆಗುತ್ತೆ ” ಅಂತ ವಿಚಿತ್ರ ಕನ್ನಡದಲ್ಲಿ ಹೇಳಿದ. ಅದಕ್ಕೆ ಪ್ರಜ್ವಲ್ ”  ಓ ಹೌದ, ವಾಪಸು ಬರುತ್ತೀಯ ತಾನೇ ,  ಬೇಗ ವಾಪಸು  ಬಾ” ಎಂದು ಹೇಳಿದ.  ಹೇಗಿದ್ದರೂ ಹದಿನೈದು ಇಪ್ಪತ್ತು  ದಿವಸ ಗೋಲಗಪ್ಪದವನು  ಇರುವುದಿಲ್ಲ ಅಂತ ಪ್ರಜ್ವಲ್ ಕೂಡ ಗೋಲಗಪ್ಪ ತಿನ್ನಲು ಹೋಗಲಿಲ್ಲ.  ಇಪ್ಪತ್ತು ದಿವಸ ಕಳೆದ ಮೇಲೆ ಕಾಲೇಜಿನಿಂದ ಮನೆಗೆ ಬರುವಾಗ  ಗೋಲಗಪ್ಪದವನು ಮತ್ತೆ ಆ ಮರದ ಕೆಳಗೆ ಬಂದು ನಿಂತಿದ್ದನ್ನು  ನೋಡಿ ಪ್ರಜ್ವಲ್ ಅವನ ಹತ್ತಿರ ಗೋಲಗಪ್ಪ ತಿನ್ನಲು ಗಾಡಿ ನಿಲ್ಲಿಸಿದ.  ಆಗ ಅಲ್ಲಿ ಒಂದು ಸುಂದರವಾದ ಯುವತಿ ನಿಂತಿದ್ದಳು  ಮತ್ತು  ಅವಳ ಕೈಯಲ್ಲಿ ಗೋಲಗಪ್ಪ ತಿನ್ನಲು ಕೊಡುವ ಒಂದು ಸಣ್ಣ ಕಪ್ ಇತ್ತು.  ಇವನು ಹೋದಾಗ ಅವಳ ಬಾಯಲ್ಲಿ ಒಂದು ಗೋಲಗಪ್ಪ  ಹಾಕಿಕೊಂಡಿದ್ದಳು ಮತ್ತು ಅವಳ ಕಪ್ನಲ್ಲಿ ಒಂದು ಗೋಲಗಪ್ಪ ಇತ್ತು. ಪ್ರಜ್ವಲ್ ಹೋದ ಕೊಡಲೇ ಅವಳು  ಬೇಗ ಬೇಗ ಕೈಲಿದ್ದ ಗೋಲಗಪ್ಪವನ್ನು ಬಾಯಲ್ಲಿ ಹಾಕಿಕೊಂಡು, ಅದನ್ನು ತಿಂದು ಅಲ್ಲಿಂದ ಹೊರಟು ಹೋದಳು. ಅವಳು ಹೋಗಿದ್ದು ನೋಡಿ ಪ್ರಜ್ವಲ್ಗೆ ಬಹಳ ನಿರಾಸೆ ಆಯಿತು. ಎಷ್ಟು ಸುಂದರವಾಗಿದ್ದಳು, ಇನ್ನು ಸ್ವಲ್ಪ ಇದ್ದಿದ್ದರೆ ನೋಡಿ ಕಣ್ಣು ತಂಪು ಮಾಡಿಕೊಳ್ಳಬಹುದಿತ್ತು ಅಂತ ಮನಸ್ಸಿನಲ್ಲೇ ಅಂದುಕೊಂಡು ಹೊಟ್ಟೆ ತುಂಬಾ  ಗೋಲಗಪ್ಪ ತಿಂದು ಮನೆಗೆ ಹೋದನು. ಮನೆಗೆ ಹೋದರು ಅವಳ ಮುಖ ಪದೇ ಪದೇ ನೆನಪಾಗತೊಡಗಿತು. ಪ್ರಜ್ವಲ್ಗೆ ಅವಳನ್ನು ನೋಡಿದ ಮೊದಲ ನೋಟಕ್ಕೆ ಮನಸೋತಿದ್ದ.   ಅವನಿಗೆ  ಅವಳ ಮೇಲೆ ಪ್ರೀತಿ ಆಗಿತ್ತು.    ಹೇಗಾದರೂ ಮಾಡಿ ತನ್ನ ಪ್ರೀತಿಯನ್ನು ಅವಳಿಗೆ ಹೇಳಬೇಕು ಎಂದು ಮನಸ್ಸಿನಲ್ಲೇ ಮಂಡಿಗೆ ತಿನ್ನತೊಡಗಿದ. 

ಮಾರನೇ ದಿವಸ ಅವಳು ಸಿಗಬಹುದೇನೋ ಅಂದುಕೊಂಡು ಮತ್ತೆ ಪ್ರಜ್ವಲ್ ಗೋಲಗಪ್ಪ ತಿನ್ನಲು ಅವನ ಹತ್ತಿರ ಹಿಂದಿನ ದಿವಸ ಹೋದ ಸಮಯಕ್ಕೆ ಹೋದ. ಅಂದುಕೊಂಡಂತೆ ಆ ಸುಂದರ ಯುವತಿ ಅಲ್ಲೇ ಗೋಲಗಪ್ಪ ತಿನ್ನುತ್ತಾ ನಿಂತಿದ್ದಳು.  ದೂರದಿಂದಲೇ ಅವಳು ಇದ್ದುದ್ದನ್ನು ನೋಡಿ ಪ್ರಜ್ವಲ್ ಬೇಗ ಬೇಗ ಗೋಲಗಪ್ಪದವನ ಹತ್ತಿರ  ಹೋದ. ಇವನು ಬಂದಿದ್ದನ್ನು ನೋಡಿ, ಕೂಡಲೇ  ಆ ಯುವತಿ ಅಲ್ಲಿಂದ ಹೊರಟು ಹೋದಳು.  ಅವಳು ಹೋಗುವುದನ್ನೇ ನೋಡುತ್ತಾ,   ಬಹಳ  ನಿರಾಸೆ ಆದರೂ  ಏನನ್ನು ತೋರಿಸಿಕೊಳ್ಳದೆ,  ಏನನ್ನು ಮಾತನಾಡದೆ  ಗೋಲಗಪ್ಪ  ತಿನ್ನತೊಡಗಿದ.  ಗೋಲಗಪ್ಪ ಮಾರುವವನು  ” ಏನ್  ಭೈಯ್ಯಾ ,  ಕ್ಯಾ ಹೋಗಯಾ ?” ಎಂದು ಕೇಳಿದ.  ಏನು ಇಲ್ಲ ಅನ್ನುವ ಹಾಗೆ ತಲೆ ಅಲ್ಲಾಡಿಸಿ ಗೋಲಗಪ್ಪ   ತಿಂದು ಮನೆಗೆ ವಾಪಾಸು ಬಂದ. ಮಾರನೇ ದಿವಸ ಕೂಡ ಆ ಯುವತಿ ಇವನು ಹೋಗುತ್ತಿದ್ದಂತೆ,  ಒಂದು ಕ್ಷಣವೂ ನಿಲ್ಲದೆ ಅಲ್ಲಿಂದ ಹೊರಟು ಹೋದಳು.  ಅವಳ ಹಿಂದೆ ಹೋಗಿ ಅವಳನ್ನು ಮಾತನಾಡಿಸುವಷ್ಟು ಧೈರ್ಯ ಪ್ರಜ್ವಲ್ಗೆ ಇರಲಿಲ್ಲ.  ಅವಳು ಕೂಡ ಅಲ್ಲೇ ಗೋಲಗಪ್ಪ ತಿನ್ನುತ್ತಾ ನಿಂತರೆ ಯಾವುದೋ ಒಂದು ವಿಷ್ಯ ತೆಗೆದು ಮಾತನಾಡಬಹುದು,  ಹೋಗುತ್ತಿದ್ದವಳನ್ನು ತಡೆದು ನಿಲ್ಲಿಸಿ ಹೇಗೆ ಮಾತನಾಡಿಸುವುದು, ಅಂತ ಯೋಚನೆ ಮಾಡುತ್ತಾ ಗೋಲಗಪ್ಪ  ತಿಂದು ಮನೆಗೆ ಬಂದ. ನಾಳೆ ಹೇಗಾದರೂ ಮಾತನಾಡಿಸಲೇ ಬೇಕು ಅಂದು ನಿರ್ದಾರ ಮಾಡಿ ಗೋಲಗಪ್ಪದವನ ಹತ್ತಿರ ಬಂದ. ಆದರೆ ಅವಳು ಪ್ರಜ್ವಲ್ ಬಂದರು ಅಲ್ಲಿಯೇ ನಿಂತಿದ್ದಳು. ಪ್ರಜ್ವಲ್ಗೆ ಬಹಳ ಖುಷಿಯಾಯಿತು. ಮನಸ್ಸಿನಲ್ಲೇ ಅಬ್ಬಾ ಇವತ್ತು ಒಂದು ಅವಕಾಶ ಇದೆ, ಹೇಗಾದರೂ ಮಾತನಾಡಿಸಬೇಕು, ಆದರೆ ಏನು ಅಂತ ಮಾತನಾಡಿಸುವುದು ಅಂತ ಯೋಚನೆ ಮಾಡುತ್ತಿರುವಾಗಲೇ, ಅವಳು ಇವನ ಕಡೆ ನೋಡಿ ಒಂದು ಮುಗಳ್ನಗೆ ಬೀರಿದಳು.  ಪ್ರಜ್ವಲ್ಗೆ ಸ್ವರ್ಗಕ್ಕೆ ಮೂರೇ ಗೇಣು ಅಂತ ಅನಿಸಿತು.  ಬಾಯಲ್ಲಿದ್ದ ಗೋಲಗಪ್ಪ ಒಳಗಡೆ ಹೋಗದೆ ಅಲ್ಲಿಯೇ ಸಿಕ್ಕಿಕೊಂಡಿತು.  ಕಷ್ಟಪಟ್ಟು ಅದನ್ನು ನುಂಗಿ ಇನ್ನೇನು ಅವಳನ್ನು ಮಾತನಾಡಿಸಬೇಕು ಅಂತ ಬಾಯಿ ತೆಗೆದ, ಅಷ್ಟರಲ್ಲಿ ಗೋಲಗಪ್ಪದವನು ” ಬೈಯ್ಯಾ ,  ಏ  ಮೇರಿ ಬೀಬಿ ಹೈ,  ಚುಟ್ಟಿ ಕೇಲಿಯೇ ಗಾಂವ್  ಹೋಗಿತ್ತಲ್ವಾ , ಶಾದಿ ಆಯಿತು ” ಎಂದು ಹೇಳಿ, ಅವಳಿಗೆ ” ನಮಸ್ತೆ ಕರೋ, ರೆಗ್ಯುಲರ್ ಕಸ್ಟಮರ್ ಹೈ ” ಎಂದು ಹೇಳಿದ. 

ಆ ಯುವತಿ ಪ್ರಜ್ವಲ್ಗೆ  ಒಂದು ಮುಗಳ್ನಗೆ ಬೀರಿ ” ನಮಸ್ತೆ ಭೈಯ್ಯಾ ” ಎಂದು ಹೇಳಿ ಅಲ್ಲಿಂದ  ಹೊರಟು ಹೋದಳು. ಪ್ರಜ್ವಲ್ ತನ್ನ ಕಪ್ನಲ್ಲಿದ್ದ ಕೊನೆಯ ಗೋಲಗಪ್ಪದ  ಜೊತೆಗೆ ಹುಟ್ಟಿದ ಮೊದಲ ಪ್ರೀತಿಯ  ಕನಸನ್ನು ಕೂಡ ನುಂಗಿ  ಭಾರವಾದ ಹೃದಯದೊಂದಿಗೆ  ಅಲ್ಲಿಂದ ಮನೆ ಕಡೆ ಹೊರಟ. 

– ಶ್ರೀನಾಥ್ ಹರದೂರ ಚಿದಂಬರ 

ಚಿತ್ರ ಕೃಪೆ : ಗೂಗಲ್ 

One thought on “ಗೋಲಗಪ್ಪ ಮತ್ತು ಮೊದಲ ಪ್ರೀತಿ !!

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s