ಕೊರೋನಾ… ಜೀವನ ( ನಾಟಕ)

ಪಾತ್ರದಾರಿಗಳು :

ರಮೇಶ –  ಕೊರೋನಾ ದಿಂದ ಸಿಟಿಯಿಂದ  ಹಳ್ಳಿಗೆ  ಬಂದು ಮನೆಯಲ್ಲಿ ಕೆಲಸ ಮಾಡುವ ಪಾತ್ರ 

ಅಮ್ಮ – ರಮೇಶನ ಅಮ್ಮನ ಪಾತ್ರ 

ಸೀತವ್ವ – ಹಳ್ಳಿಯಲ್ಲಿ ಕೂಲಿ ಮಾಡುವ ಹೆಣ್ಣಿನ 

ಸುರೇಶ – ರಮೇಶನ ಸ್ನೇಹಿತ ಹಾಗು ಹಳ್ಳಿಯಲ್ಲೇ ಬೆಳೆದವನು ಮೂರನೇ ತರಗತಿಯಾ ತನಕ ಮಾತ್ರ ಓದಿದವನ ಪಾತ್ರ 

ರಘು – ರಮೇಶನ ಸ್ನೇಹಿತ ಹಾಗು ಸಿಟಿಯಲ್ಲಿ ಕೆಲಸ ಮಾಡಿ, ವಾಪಸು ಹಳ್ಳಿಗೆ ಬಂದು ತೋಟದ ಕೆಲಸ ಮಾಡುವ ಪಾತ್ರ 

 ದೃಶ್ಯ ೧: 

ಮನೆಯ ಹೊರಬಾಗದಲ್ಲಿ ನಡೆಯುವ ದೃಶ್ಯ :

ಸೀತವ್ವ ತಲೆಯ ಮೇಲಿಂದ ತರಕಾರಿ ತುಂಬಿದ ಬುಟ್ಟಿಯನ್ನು  ಹೊತ್ತುಕೊಂಡು ಬರುತ್ತಾಳೆ. ಅದನ್ನು ಕೆಳಗಡೆ ಇಳಿಸಿ,  “ಉಸ್ಸಪ್ಪಾ  ” ಎಂದು,   ಸೀರೆಯ ಸೆರಗಿನಿಂದ ಮುಖ ಒರೆಸಿಕೊಳ್ಳುತ್ತಾ,  ಮನೆಯ ಒಳಗಡೆ ನೋಡುತ್ತಾ.. 

ಸೀತವ್ವ:  ಅಮ್ಮೋರೆ, ಅಮ್ಮೋರೆ,  ಒಳಗಡೆ ಇದ್ದೀರಾ?

(ಮನೆ  ಒಳಗಡೆಯಿಂದ) 

ಅಮ್ಮ:  ಯಾರೂ ?  ಓಹೋ.  ಸೀತವ್ವನಾ …  ಬಂದೆ ಸ್ವಲ್ಪ ತಡಿ.. 

ಸೀತವ್ವ:  ಆತು.. ಬಿಡು… ಬನ್ನಿ  ಬನ್ನಿ .. ನಿಧಾನಾಆಆ …  ಬನ್ನಿ ( ಎಂದು ಹೇಳುತ್ತಾ ಅಲ್ಲೇ ನೆಲದ ಮೇಲೆ ಕುಳಿತು..  ಎಲೆ ಅಡಿಕೆ ಚೀಲ ತೆಗೆದು, ಎಲೆ ಅಡಿಕೆ ಹಾಕಿಕೊಳ್ಳಲು ತಯಾರಾಗುತ್ತಾಳೆ )

ಸೀತವ್ವ:  ಏನು ಬಿಸಿಲಪ್ಪ, ಸಾಕಾಗ್ ಹೋಯ್ತ್ .. (ಸ್ವಗತ )  ಅಮ್ಮೋರೆ  ಹಂಗೆ ಬರ್ತಾ ಒಸಿ ಕುಡಿಲಿಕ್ಕೆ ನೀರ್ ತನ್ನಿ.. ( ಮನೆ ಒಳಗಡೆ ನೋಡುತ್ತಾ  ಹೇಳುತ್ತಾಳೆ )

(  ಒಳಗಡೆಯಿಂದ  ಒಂದು ತಂಬುಗೆಯಲ್ಲಿ ನೀರು ಹಿಡಿದುಕೊಂಡು ,  ಹೊರಗಡೆ ಅಮ್ಮ ಬರುತ್ತಾಳೆ… )

ಅಮ್ಮ: ಏನೇ, ಸೀತವ್ವ ?  ಮನೆ ಕಡೆ ಬರೋದು ಕಮ್ಮಿ ಆಗ್ಬಿಟ್ಟಿದೆ ? ಕಾಣಕ್ಕೆ ಇಲ್ಲಾ ,  ತೋಟದ ಕೆಲಸ ಜೋರಾ ? ಹೇಗೆ ನಡೀತಿದೆ ತೋಟದಲ್ಲಿ ಕೆಲಸ?  ( ಸೀತವ್ವಳಿಗೆ ನೀರು ಕೊಡುತ್ತಾ)

ಸೀತವ್ವ:  ಹೆಂಗೋ ನಡೀತಿದೆ  ಕಣ್ನರವ್ವ ,  ಏನು ಹೇಳೋದು? ಹೆಣ್ಣು ಹೈಕ್ಲಿಕ್ಗೆ  ಕೂಲಿ ಕೊಡೋದು ಆಸ್ಟ್ರಲ್ಲೇ ಇದೆ.. ನಮ್ಮ್ ಕಷ್ಟ ಇದ್ದದ್ದೇ, ಅದು ಮುಗಿಯೋ ಕಥೆ ಎಲ್ಲ ಬಿಡವ್ವಾ..  ಮತ್ತೆ ಏನಕ್ಕೆ ಬಂದೆ ಅಂದ್ರೆ,, ನಮ್ ತೋಟದಲ್ಲಿ ಬೆಳೆದ  ತರಕಾರಿ ತಂದಿದ್ದೆ.,,  ಇಲ್ಲೇ ಇಟ್ಟಿದ್ದೀನಿ, ಪುರ್ಸೊತ್ತು ಆದಾಗ ತೆಗೊಳ್ಳಿ.. 

( ಅಮ್ಮನು ಅಲ್ಲಿಯೇ ನೆಲದ ಮೇಲೆ ಕೂರುತ್ತಾಳೆ)

ಅಮ್ಮ: ಆಯ್ತು  ಅಲ್ಲೇ  ಕೆಳಗಡೆ ಇಡು..  ಆಮೇಲೆ ತೆಗೊಳ್ತೀನಿ.. ಮುಂದಿನ ವಾರ ಮರೀಬೇಡ ಮತ್ತೆ, ನಮ್ಮ್ ತೋಟದ್ದು ಕೆಲಸ ಇದೆ… ನಂಗತ್ತು ಆಳುಗಳನ್ನ ಹುಡುಕುತ್ತ ಕೂರೋಕೆ ಆಗಲ್ಲ.. 

ಸೀತವ್ವ:  ಅದೆಂಗೆ ಮರೀಲಿ ಅವ್ವೊರೆ, ಮರಿದೆ ಬರ್ತೀನಿ..   ಹೆಂಗು ನಿಮ್ಮ ಮಗ ಸೊಸೆ  ವಾಪಸು ಇಲ್ಲಿಗೆ ಬಂದಿದ್ದಾರಲ್ಲ ಬಿಡ್ರವ್ವ ,  ಇನ್ನೇನು ಯೋಚ್ನೆ ನಿಮಗೆ ? ಮಗ್ನೆ ನೋಡಿಕೊಳ್ತಾನೆ ಬಿಡಿ. 

ಅಮ್ಮ: ಅಯ್ಯೋ.. ಏನು ಬಂದಿದ್ದಾನೋ ಏನೋ,  ಕೋಣೆ ಬಿಟ್ಟು ಹೊರಗಡನೆ ಬರಲ್ಲ ಅಂತಾನೆ, ಇಡೀ ದಿವಸ ಒಬ್ಬನೇ ಮಾತನಾಡುತ್ತ ಟಿವಿ ಮುಂದೆ  ಅದೇನೋ ನೋಡ್ತಾ ಕೂತಿರ್ತಾನೆ,  ನನ್ನ  ಸೊಸೆ  ಮಾತ್ರ ನನ್ನ ಜೊತೆಯಲ್ಲೇ ಇದ್ದು,  ನನಗೆ ಸ್ವಲ್ಪ ಸಹಾಯ ಮಾಡುತ್ತಾ ಇದ್ದಾಳೆ,  ಅವನು  ಬಂದು ಒಂದು ವಾರ ಆಯ್ತು ನೋಡು..  ನನ್ನ ಜೊತೆ ಕೂಡ ಮಾತನಾಡಕ್ಕೆ ಪುರುಸೊತ್ತಿಲ್ಲ ಅವ್ನಿಗೆ.. ಇನ್ನು ತೋಟದ ಕೆಲಸ ಮಾಡ್ತಾನ ಅವ್ನು?  ನೀನು ಸರಿ ಇದ್ದೀಯ ಕೇಳೋಕ್ಕೆ… 

ಸೀತವ್ವ: ಹಂಗ, ಆವ್ನುದು ಏನ್ ಕೆಲಸಾನೂ ಏನೋ.,, ನಮ್ಗೆಲ್ಲಾ ಗೊತ್ತಾಗಲ್ಲ ಬಿಡವ್ವಾ..   

ಅಮ್ಮ:  ನಂಗೆ ಗೊತ್ತಾಗಲ್ಲ, ನಿಂಗೆ ಹೆಂಗೆ ಗೊತ್ತಾಗುತ್ತೆ ಬಿಡು.   ಕೊರೋನಾ ಬಂದಿದ್ದೆ ಬಂದಿದ್ದು  ಎಲ್ಲ ಬದಲಾಗಿ ಹೋಯ್ತು ನೋಡು..  ಮಗ, ಸೊಸೆ ಹಾಗು ಮೊಮ್ಮಕ್ಕಳು  ಊರಿಗೆ ಬರ್ತಾ ಇದ್ದೀನಿ ಅಂದಾಗ ಬಹಳ ಖುಷಿ ಆಯ್ತು.. ನನಗು ಮಗ ಬರ್ತಾನೆ.. ಎಲ್ಲ ನೋಡ್ಕೋತಾನೆ ಅಂತ ಮನಸ್ಸು ಹಗುರ ಆಗಿತ್ತು.. ಇವಾ ನೋಡಿದ್ರೆ ಕೋಣೆಯಿಂದ ಹೊರಗಡನೆ ಬರಲ್ಲ ಅಂತಾನೆ… ಏನೋ ಮಾಡ್ತಾನೋ ಏನೋ ಒಂದು ಅರ್ಥ ಆಗಲ್ಲ.. ನಂಗು ವಯಸಾಯ್ತು … ತೋಟ , ದನ  ಕರು ಅಂತ ಎಲ್ಲ ನೋಡ್ಕಳಕ್ಕೆ ಆಗಲ್ಲ…  ನಾನು ಹೋದ್ಮೇಲೆ ಏನ್ ಕಥೇನೋ ಏನೋ..  ಅವ್ರ ನೆನಪಿಗೆ ಇರೋದು ಇದೊಂದು ಮನೆ ಹಾಗು ತೋಟ.. ಅದನ್ನು ಸರಿಯಾಗಿ ನೋಡಿಕೊಳ್ತಾನೆ ಇಲ್ವೋ , ಈಗ್ಲೇ ಯೋಚನೆ ಶುರುವಾಗಿಬಿಟ್ಟಿದೆ ನಂಗೆ. 

ಸೀತವ್ವ: ಹಂಗೇನು ಆಗಲ್ಲ ಬಿಡವ್ವಾ… ಮಗ ನೋಡ್ಕೋತಾನೆ.. ಯೋಚನೆ ಮಾಡ್ಬೇಡ..  

ಅಮ್ಮ: ಅಯ್ಯೋ… ನೀನೇ ನೋಡಿದ್ಯಲ್ಲ ಪಕ್ಕದ ತೋಟದ ನಾಗಪ್ಪನ ಮಗ  ನನ್ ಕೈಯಲ್ಲಿ ನೋಡ್ಕಳಕ್ಕೆ ಆಗಲ್ಲ ಅಂತ, ಮೊನ್ನೆ ಊರಿಂದ ಬಂದು  ಯಾರಿಗೋ ಎಲ್ಲ ಮಾರಿ  ಹೋದ..  ಹಂಗೆ  ನನ್ ಮಗನು ಮಾಡ್ತಾನೆ ಅಷ್ಟೇ.. ಎಲ್ಲ ನಾನ್ ಇರೋ ತನಕ ಅಷ್ಟೇ… 

ಸೀತವ್ವ: ಹಂಗೆಲ್ಲಾ ಯಾಕೆ ಯೋಚನೆ ಮಾಡ್ತೀರಾ ಬಿಡವ್ವಾ..  ಇದ್ರ ಬಗ್ಗೆ ಒಸಿ ಮಗನ ಹತ್ರ ಮಾತಾಡಿದ್ರೆ ಆಯ್ತು .. ಏನೇನೋ ಯೋಚ್ನೆ ಮಾಡಿ ಆರೋಗ್ಯ ಹಾಳ್ ಮಾಡ್ಕೋಬೇಡಿ.. 

ಅಮ್ಮ:  ಮಾತಾಡಕ್ಕೆ ಸಿಕ್ರೆ ತಾನೇ ಮಾತಾಡೋದು.. ಸುಮ್ನೆ ಯೋಚ್ನೆ ಮಾಡಿ ಸಾಕಾಗಿ ಹೋಗಿದೆ… ಸರಿ ಬಿಡು.. ನೋಡೋಣ ಏನು ಆಗ್ಬೇಕು ಅಂತಿದೆಯೋ ಅದೇ ಆಗುತ್ತೆ..  ನಂಗೆ ಒಳಗಡೆ ಕೆಲಸ ಇದೆ, ನಿನ್ ಹೋಗಿ ಬಾ.. ನನ್ ಹಣೆಬರಹ ಇದ್ದಂಗೆ ಆಯ್ತದೆ ಬಿಡು.. 

ಸೀತವ್ವ : ಅದು ಸರಿ ಅನ್ನಿ ..  ಆಯ್ತು ಕಣವ್ವ ಬರ್ತೀನಿ.. ಹಂಗಾರೆ..  ( ಅಮ್ಮ  ಎದ್ದು ಒಳಗಡೆ ಹೋಗುತ್ತಾಳೆ… ಸೀತವ್ವ ನಿಧಾನ ಎದ್ದು ಹೊರಡುತ್ತಾಳೆ..)

ಸೀತವ್ವ: ಮಕ್ಕಳು ಓದಿದ್ರೆ ಒಂದು  ರೀತಿ ಕಷ್ಟ, ಓದದೆ  ಇದ್ರೂ  ಒಂದು  ರೀತಿ ಕಷ್ಟ.. ಏನ್ ಜೀವನನೊ ನಾ ಕಾಣೆ.. ( ತಾನೇ ಮಾತನಾಡುತ್ತ ಹೊರಡುತ್ತಾಳೆ)

ದೃಶ್ಯ ೨

 ಮನೆಯಲ್ಲಿಯೇ  ಆಫೀಸ್ ಕೆಲಸ ಮಾಡುತ್ತಿದ್ದ ರಮೇಶ ,  ತನ್ನ ಕಂಪ್ಯೂಟರ್ ಮುಂದೆ ಕಿವಿಗೆ ಹೆಡ್ ಫೋನ್  ಹಾಕಿಕೊಂಡು ಅವತ್ತಿನ ಕೆಲಸದ ಕೊನೆಯ ಹಂತದಲ್ಲಿ  ಇರುತ್ತಾನೆ. 

ರಮೇಶ :  ಯಸ್ ಸರ್,  ಇಟ್ ಐಸ್ ಕಂಪ್ಲೀಟೆಡ್ ಸರ್. …. ,  ಮಂಡೇ  ಐ  ವಿಲ್ ಅಪ್ಡೇಟ್ ಸರ್….. ,  ಓಕೆ ಸರ್,  ಥಾಂಕ್ಸ್ ಸರ್… ಓಕೆ ಸರ್… ಬೈ ಸರ್..   (  ಎಂದು ಹೇಳಿ ಹೆಡ್ ಫೋನ್ ಕೆಳಗಿಟ್ಟು,  ಕೆಲಸ ಮಾಡಿ ಸುಸ್ತಾದಂತೆ , ತನ್ನ ಕಣ್ಣುಗಳನ್ನು ಉಜ್ಜಿ,   ಉಸ್ಸಪ್ಪ  ಎಂದು ಹತ್ತು ಕ್ಷಣ ಹಾಗೆ ಸುಮ್ಮನೆ ಕುಳಿತು…  )

ರಮೇಶ:  ಅಮ್ಮ…. ಒಂದು ಟೀ ಮಾಡ್ತಿಯಾ…. ( ಹಿಂದೆ ತಿರುಗಿ ನೋಡುತ್ತಾ)    ಅಬ್ಬಾ… ಅಂತೂ ಕೆಲಸ ಮುಗಿತು… ಇನ್ನು ಮಂಡೇ ತನಕ ಆರಾಮು…  (  ಮೈ ಮುರಿಯುತ್ತಾ  ತನ್ನ ಮೊಬೈಲ್ ನೋಡುತ್ತಾ ಹಾಗೆ ಚೇರಿನಲ್ಲಿ ಕುಳಿತುರುತ್ತಾನೆ )

(ಅಷ್ಟರಲ್ಲಿ ಹೊರಗಡೆಯಿಂದ, ಯಾರೋ ” ಅಮ್ಮ ಅಮ್ಮ” ಕೂಗಿದಂತೆ ಕೇಳಿಸುತ್ತೆ )

ರಮೇಶ:  ಯಾರೋ ಬಂದಿದ್ದಾರೆ ಅನ್ನಿಸುತ್ತೆ,  ನೋಡೋಣ ಯಾರು ಅಂತ.. (  ಎಂದು ಹೇಳುತ್ತಾ,  ಕೂತಿದ್ದ ಚೇರಿನಿಂದ ಎದ್ದು ಹೊರಡುತ್ತಾನೆ)

ದೃಶ್ಯ ೩:

ಹೊರಗಡೆ ಯಾರೋ ಗಂಡಸು ನಿಂತಿರುತ್ತಾರೆ, ಒಳಗಡೆಯಿಂದ ರಮೇಶ  ಆಗಮಿಸುತ್ತಾನೆ  

ರಮೇಶ :  ಯಾರದು ? ( ಎಂದು ಕೇಳುತ್ತಾ ಆಗಮಿಸುತ್ತಾನೆ, ನಂತರ  ಅವರನ್ನು ನೋಡಿ)  ಒಹೋ… ಸುರೇಶ ಹೆಂಗಿದಿಯೋ? ಬಹಳ ವರುಷ ಆಯಿತು ನೋಡಿ ನಿನ್ನ ,    ಬಾ ಕುತ್ಕೋ  ( ಎಂದು ತಾನು ಕುಳಿತು,   ಪಕ್ಕದಲ್ಲಿ ಇದ್ದ ಚೇರನ್ನು  ಸುರೇಶನಿಗೆ ಕೊಡುತ್ತಾನೆ)

(ಸುರೇಶನು  ಅದರ ಮೇಲೆ ಕೂರುತ್ತಾ )

ಸುರೇಶ:  ನಾ ಹಿಂಗಿದೀನಿ ನೋಡ್ಲಾ ,    ನೀನು  ಮುಂದೆ ಓದಿ ಊರು ಬಿಟ್ಟೆ,  ನಾನು ಓದದೇ ಇಲ್ಲೇ ಬೇರು ಬಿಟ್ಟೆ,   ಮೂರನೇ ಕ್ಲಾಸ್ ಆದ್ಮೇಲೆ ನನ್ ತಲೆಗೆ ವಿದ್ಯೆ ಹತ್ತಲಿಲ್ಲ.. ಅಲ್ಲಿಗೆ ಬಿಟ್ಟೆ,   ನೀವೆಲ್ಲ ಮುಂದೆ ಓದಿದ್ರಿ.. ನಾನು ಅಪ್ಪನ ಜೊತೆ ತೋಟದ ಕೆಲ್ಸಕ್ಕೆ ಇಳಿದುಬುಟ್ಟೆ. ನೀನು ಊರಿಗೆ ಬರ್ತಿದ್ದಿದ್ದೆ ಎರಡು ದಿವಸಕ್ಕೆ  ಇನ್ ಸಿಗೋದೆಲ್ಲಿ ಬಂತು..  ಕೊರೋನಾ ಅಂತ  ಇಷ್ಟು ದಿವಸ ಉಳ್ಕೊಂಡಿದ್ದೀ  ಇಲ್ಲಾಂದ್ರೆ ಸಿಗ್ತಿದ್ಯಾ ಹೇಳು..  ಅದಕ್ಕೆ ನಾನು  ಒಸಿ ಮಾತಾಡ್ಕೊಂಡು ಹೋಗೋಣ ಅಂತ ಬಂದೆ.. 

ರಮೇಶ್: ಒಳ್ಳೆ ಕೆಲಸ ಮಾಡಿದ್ದಿ ಬಿಡು..  ಸರಿಯಾದ ಸಮಯಕ್ಕೆ ಬಂದಿ ನೋಡಿ.. ಈಗಷ್ಟೇ ಕೆಲಸ ಮುಗಿತು.. 

ಸುರೇಶ:  ನಿನ್ ಹೆಂಗ್ ಇದ್ದೀಯ ?  ಈಗ ಹೆಂಗಿದೆ ಆರೋಗ್ಯ? ಪಾಪ ನಿನ್ನ ಅಮ್ಮ ತುಂಬ ಯೋಚನೆ ಮಾಡ್ತಾ ಇದ್ಲು ನಿನ್ ಬಗ್ಗೆ .  

ರಮೇಶ:  (ತಲೆ ಕೆರೆದುಕೊಳ್ಳುತ್ತಾ ,  ಏನು ಈ ತರಹ ಕೇಳ್ತಾ ಇದ್ದಾನಲ್ಲ ಎನ್ನುವ ಹಾಗೆ ನೋಡುತ್ತಾ)  ನಂಗೇನು ಆಗಿದೆ, ಆರಾಮಾಗೆ ಇದ್ದೀನಿ,  ಯಾಕೆ,  ಅಮ್ಮ ನಿನ್ನ ಹತ್ರ ಏನಂತ ಹೇಳಿದ್ಲು?

ಸುರೇಶ: ಮೊನ್ನೆ,  ನಮ್ಮನಿ  ಹತ್ರ ಬಂದಿದ್ಲು..  ನೀನು ಊರಿಗೆ ಬಂದಾಗಿಂದ ಕೋಣೇಲಿ  ಕೂತು,   ಅದೇನೋ ಸಣ್ಣ ಟಿವಿ ನೋಡುತ್ತಾ ,  ಇಡೀ ದಿವಸ ಒಬ್ಬನೇ ಏನೋ ಮಾತಾಡ್ತಾ ಇರ್ತಿಯಂತೆ … ಹೌದ? ನನ್ನ ಮಗನಿಗೆ ಏನೋ ಆಗ್ಬಿಟ್ಟಿದ್ದೆ ಒಬ್ಬನೇ ಮಾತಾಡ್ತಾ ಇರ್ತಾನೆ ಅಂತ ಅಂತಿದ್ಲು.. ಅದಕ್ಕೆ ಕೇಳ್ದೆ … 

ರಮೇಶ:  ( ಜೋರಾಗಿ ನಗಾಡುತ್ತಾ) ಅಯ್ಯೋ, ಒಬ್ಬನೇ ಮಾತಾಡೋದು ಅಲ್ಲಪ್ಪಾ ಅದು…  ನನ್ನ ಆಫೀಸ್ನವರ ಜೊತೆ ಮಾತಾಡ್ತಾ ಕೆಲಸ  ಮಾಡುತ್ತಾ ಇರ್ತೀನಿ..  ಅದು ಟಿ ವಿ  ಅಲ್ಲ,  ಲ್ಯಾಪ್ಟಾಪ್ ಅಂತ ಅದು.. . ಅಮ್ಮಂಗೆ  ನನ್ನ ಕೆಲಸದ ಬಗ್ಗೆ ಅಷ್ಟು  ಗೊತ್ತಾಗಲ್ಲ … ಅದಕ್ಕೆ  ಏನೋ ಅನ್ಕೊಂಡು ಬಿಟ್ಟಿದ್ದಾರೆ ಅಷ್ಟೇ. 

ಸುರೇಶ :  ( ಆಶ್ಚರ್ಯದಿಂದ) ಒಹೋ..  ನೀನು  ಕೆಲಸ ಬಿಟ್ಟು ಇಲ್ಲಿಗೆ ಬಂದುಬಿಟ್ಟಿದ್ದೀಯ ಅನ್ಕೋಬಿಟ್ಟಿದ್ದೆ…. ಇನ್ನು ಕೆಲಸ ಮಾಡ್ತಿದ್ದೀಯಾ?   ಅದೇನು?   ಮಾತಾಡೋದೇ ಕೆಲ್ಸನ?

ರಮೇಶ:  ( ಏನಪ್ಪಾ ಹೇಳೋದು ಅನ್ನೋ ರೀತಿಯಲ್ಲಿ ) ಹಂಗಲ್ಲ,,  ಊರಲ್ಲಿ ಮಾಡೋ ಕೆಲಸಾನೇ,,   ಕೊರೋನಾ  ಇದೆಯಲ್ಲಾ  ಅದಕ್ಕೆ ಆಫೀಸಿಗೆ ಬರಬೇಡಿ…  ಮನೇಲಿ ಕೆಲಸ ಮಾಡಿ ಅಂತ ಹೇಳಿದ್ದಾರೆ..    ಅದಕ್ಕೆ  ಫೋನ್ ನಲ್ಲಿ  ಕೆಲಸ ಏನು ಮಾಡಬೇಕು,  ಹೇಗೆ ಮಾಡ್ಬೇಕು,  ಏನೆಲ್ಲಾ ಮಾಡಿದ್ವಿ  ಅಂತೆಲ್ಲ ಮಾತನಾಡುತ್ತ ಇರುತ್ತೀವಿ.. 

ಸುರೇಶ:  ( ಹೌದ?  ಅನ್ನೋ ರೀತಿಯಲ್ಲಿ )  ನಮ್ಮೂರಲ್ಲಿ ಮನೆ ಕೆಲಸ ಅಂದ್ರೆ ಬೇರೆನೇ ಇದೆ… ಕಸ ಹೊಡೆಯೋದು,  ಕೊಟ್ಟಿಗೆ ತೊಳೆಯೋದು,  ಹಸುಗೆ ಹುಲ್ಲು ಹಾಕೋದು,  ಆ ತರ …     ಅದೇನು ನೀವು ಮನೇಲಿ ಕುತ್ಕೊಂಡು, ಮಾತಾಡ್ಕೊಂಡು  ಕೆಲಸ  ಮಾಡೋದು?

ರಮೇಶ : ( ಸ್ವಲ್ಪ ರೇಗಿದರೂ … ತಾಳ್ಮೆಯಿಂದ)  ಇಲ್ಲೇ  ಮನೆಯಲ್ಲೇ ಕಂಪ್ಯೂಟರ್ನಲ್ಲಿ ಕೆಲಸ ಮಾಡೋದು… 

ಸುರೇಶ:  ಅದೇ ಟೈಪ್ ಮಾಡುತ್ತಾ ಇರುತ್ತಾರಲ್ಲ ಹಾಗಾ ? ಹಂಗಾದ್ರೆ ನೀನು ಟೈಪಿಸ್ಟ್ ಕೆಲಸ ಮಾಡೋದಾ ?

ರಮೇಶ:   ( ಹೂಂ, ಎಂದು ಉಸಿರು ಬಿಡುತ್ತಾ )  ಟೈಪಿಸ್ಟ್ ಅಲ್ಲ,,   ನಾನು ಸಾಫ್ಟ್ವೇರ್ ಇಂಜಿನಿಯರ್ … 

ಸುರೇಶ:  ಒಹೋ.. ಬಿಲ್ಡಿಂಗ್ ಕಟ್ಟುತ್ತಾರಲ್ವಾ ಆ ಎಂಜಿನೀರ?  ಮತ್ತೆ ಮನೆಲಿ ಕೂತು ಅದು ಹೆಂಗೆ ಮನೆ ಕಟ್ಟುತ್ತೀರಾ ?

ರಮೇಶ:  ( ತಲೆಯನ್ನು ಚಚ್ಚಿಕೊಳ್ಳುವುದು ಗೊತ್ತಾಗದಂತೆ ಚಚ್ಚಿಕೊಂಡು) ನಾವು ಮನೆ ಕಟ್ಟೋ ಎಂಜಿನೀರ್ ಅಲ್ಲಪ್ಪಾ .. ( ಅವ್ನಿಗೆ ಸುಲಭವಾಗಿ ಅರ್ಥ ಆಗ್ಲಿ ಎಂದು)  ಮನೆ ಹೆಂಗಿರಬೇಕು ಅಂತ ಡಿಸೈನ್ ಮಾಡೋ ಇಂಜಿನಿಯರ್ 

ಸುರೇಶ: ( ಏನೋ ಅರ್ಥವಾದಂತೆ ನಟಿಸುತ್ತಾ )  ಹಂಗೆ,  ಎಷ್ಟು ಮನೆ ಡಿಸೈನ್ ಮಾಡ್ತಿಯಾ ದಿನಕ್ಕೆ?

ರಮೇಶ್: ( ಇವ್ನು ಯಾಕೋ ಬಿಡಂಗೆ ಕಾಣಲ್ಲ ಅನ್ನೋ ರೀತಿ ಮಾಡುತ್ತಾ)  ಒಂದು ದಿನಕ್ಕೆ  ಎರಡು ಮೂರು ಮಾಡ್ತೀನಿ ಕಣೋ.. ಹೂಂ.. 

ಸುರೇಶ:  ಹೌದಾ?  ಒಂದು ಡಿಸೈನ್ ಮಾಡಿದ್ರೆ ಎಷ್ಟು ಕೊಡ್ತಾರೆ?

ರಮೇಶ್: ( ಏನಪ್ಪಾ ಹೇಳುವುದು ಅಂತ )  ಒಂದೆರಡು ಸಾವಿರ ಕೊಡ್ತಾರೆ.. 

ಸುರೇಶ : ಹಂಗಾದ್ರೆ ದಿನಕ್ಕೆ ನಾಲಕ್ಕು ಸಾವಿರ ದುಡಿತಿಯ ಹಂಗಾದ್ರೆ ಅನ್ನು… ಸಾಹುಕಾರ ಬಿಡಪ್ಪಾ ನೀನು.. ಇಲ್ಲಿ ಅದು  ತಿಂಗ್ಳು ಕೂಲಿ 

ರಮೇಶ: ( ಮಾತು ಮುಗಿಸಿದ್ರೆ ಸಾಕು ಅನ್ನೋ ರೀತಿಯಲ್ಲಿ)  ಹೌದು..     ( ಮನೆ ಒಳಗಡೆ ನೋಡೊ ರೀತಿ ನೋಡಿ) ಅಮ್ಮ ಟೀ ಆಯ್ತಾ.. ( ಎಂದು ಕೇಳ್ತಾನೆ) 

ಒಳಗಡೆಯಿಂದ  ಅಮ್ಮನ ಧ್ವನಿ ಕೇಳುತ್ತೆ –  ಒಂದೈದು ನಿಮಿಷ ಕಣೋ… ಮಾಡ್ತಾ ಇದ್ದೀನಿ.. ತಂದೇಬಿಟ್ಟೆ ನೋಡು.. 

ರಮೇಶ:  ಸುರೇಶಂಗು  ಒಂದು ಲೋಟ ಟೀ ತೆಗೊಂಡು ಬಾ  ಅಮ್ಮ… ( ಹಿಂದೆ ತಿರುಗಿ ಮನೆ ಒಳಗಡೆ ಕೇಳುವಂತೆ ಜೋರಾಗಿ ಹೇಳುತ್ತಾನೆ) 

ಸುರೇಶ:  ನಮ್ಮೂರಲ್ಲಿ ಮನೆ ಡಿಸೈನ್ ಪಸೈನ್ ಎಲ್ಲ ಇಲ್ಲಪ್ಪಾ .. ಮೇಸ್ತ್ರಿಗೆ ಹೇಳಿದ್ರೆ ಅವ್ನೆ ಕಟ್ಟಿ ಕೊಡ್ತಾನೆ…  ತಿಂಗಳಿಗೆ  ಅವನು ನಿನ್ನಷ್ಟೇ ದುಡೀತಾನೆ ನೋಡು…    ಹೌದು ನೀನು ಮಾತಾಡ್ತಾ ಇರ್ತೀಯಲ್ಲ ಯಾರ್ ಜೊತೆ?

ರಮೇಶ: ಅವರೆಲ್ಲ ನನ್ನ ಜೊತೆ ಕೆಲಸ ಮಾಡೋರು..  ಅವ್ರು ಜೊತೆ ಮಾತನಾಡೋದು 

ಸುರೇಶ: ಅವ್ರು ಹಿಂಗೇ ಮನೆ ಡಿಸೈನ್ ಮಾಡೋರ? 

ರಮೇಶ:  ಹೂಂ… 

ಸುರೇಶ:  ಅದಕ್ಕೆ ಅನ್ನು,  ಬೆಂಗಳೂರಲ್ಲಿ ಆ ನಮನಿ ಬಿಲ್ಡಿಂಗ್ ಆಗ್ತಾ ಇರೋದು …  ನೀವೆಲ್ಲ ಅದೇನೋ ಡಿಸೈನ್ ಅಂದ್ಯಲ್ಲ… ಅದನ್ನ ಮಾಡಿ ಮಾಡಿ ಬಿಸಾಡುತ್ತಾ ಇರ್ತೀರಿ…  ಮೇಸ್ತ್ರಿಗಳು ಕಟ್ಟಿ ಕಟ್ಟಿ  ಒಗೀತ ಇರ್ತಾರೆ…. ಅಲ್ವಾ 

ರಮೇಶ: ( ಸ್ವಗತ ) ಏಕೋ ಇವ್ನು ನನ್ನನ್ನು ಮೇಸ್ತ್ರಿ ಮಾಡೋ ಹಂಗೆ ಕಾಣ್ತಾ ಇದೆ .. 

ಸುರೇಶ : ನಿಮಗೆ ಕೂಲಿ ಕ್ಯಾಶ್ನಲ್ಲಿ  ಕೊಡ್ತಾರಾ? ಹೆಂಗೆ? 

ರಮೇಶ:  ( ಸ್ವಲ್ಪ ಗಲಿಬಿಲಿಯಿಂದ) ಅಯ್ಯೋ .. ಅದು ಕೂಲಿ ಅಲ್ಲ,, ನಾವು ಸಂಬಳ ಅಂತೀವಿ.. 

ಸುರೇಶ: ದುಡ್ಡಿಗೆ ಏನಂದ್ರು ದುಡ್ಡೇ ಆಲ್ವಾ? ಕೂಲಿ ಸಂಬಳ ಎಲ್ಲಾ ದುಡ್ಡೇ .. 

ರಮೇಶ:  ( ವಾದ ಮಾಡೋದು ಬೇಡ ಅನ್ನೋ ರೀತಿಯಲ್ಲಿ,,,  ವಿಷಯವನ್ನು ಬದಲಾವಣೆ ಮಾಡುತ್ತಾ ) ನೀನು ಹೇಳೋದು ಸರಿ ಬಿಡು…  ಅದೆಲ್ಲ ಇರ್ಲಿ.. ಕೊರೋನಾದು ತೊಂದರೆ ಅಗಲಿಲ್ವ ನಿಮಗೆಲ್ಲ ಇಲ್ಲಿ.. 

ಸುರೇಶ: ಕೊರೋನಾ ಪರೋನ ಎಲ್ಲ ಸಿಟಿಲಿ ಇರೋರಿಗೆ…. ನಮ್ಮ ಹಳ್ಳಿ ತಂಕ ಬರ್ಲಿಲ್ಲ..   ನಮ್ ತೋಟಕ್ಕಂತೂ ಬರ್ಲಿಲ್ಲ ನೋಡು..  ದಿನ ರಾತ್ರಿ ನಾವು ಕುಡಿಯೋ ಕಷಾಯಕ್ಕೆ ಅದು ಹೆದ್ರಿ ಓಡಿ  ಹೋಯ್ತು ಅನಿಸುತ್ತೆ… 

ರಮೇಶ: ಸಿಟಿಲಿ ಇರೋರೆಲ್ಲ ಮತ್ತೆ ವಾಪಸು ಹಳ್ಳಿಗೆ ಬರ್ತಾ ಇದ್ದರಲ್ವಾ ಏನೆನಿಸುತ್ತೆ?

ಸುರೇಶ: ನೋಡು ರಮೇಶ..   ತುಂಬಾ ಜನ  ಈ ಮಣ್ಣಲ್ಲೇನೈತಿ ಅಂತ ಹಳ್ಳಿ ಬಿಟ್ಟರು… ಈಗ  ಎಲ್ಲಾ ಈ ಮಣ್ಣಲ್ಲೇ ಐತಿ ಅಂತ ವಾಪಸು ಬರ್ತಾ ಇದ್ದಾರೆ ಅಷ್ಟೇ…  ಏನ್ ಕೈ ಬಿಟ್ರು ಮಣ್ಣು ಕೈ ಬಿಡಲ್ಲ ಅನ್ನೋ ಸತ್ಯ ಗೊತ್ತಾಯ್ತು  ಅಂತ ಅನಿಸುತ್ತೆ ನಂಗೆ… 

ರಮೇಶ: ಅದು ಸರಿ ಅನ್ನು…  ಹೆಂಗಿದೆ ನಿನ್ನ ಜೀವನ ? 

ಸುರೇಶ:  ನಂದೇನು ಬಿಡು ರಮೇಶ..  ಮೈ  ತುಂಬ ಕೆಲಸ,  ಹೊಟ್ಟೆ ತುಂಬಾ ಊಟ,  ಕಣ್ತುಂಬ ನಿದ್ದೆ  ಇಷ್ಟೇ ಜೀವನ. 

ರಮೇಶ: ತೋಟದ ಕೆಲಸ ಹೆಂಗೆ ನಡೀತಿದೆ 

ಸುರೇಶ: ಒಂದೆರಡು ಎಕ್ರೆ ತೋಟ ಐತೆ … ನಿಮ್ಮ ಹತ್ತಿರ ಇರೋ ಅಷ್ಟು ಹತ್ತು ಎಕರೆ ಎಲ್ಲ ಇಲ್ಲಾ… ನಂದು ಹಳೆ ತೋಟ   ಅದು  ಹಳೆ ನನ್ನಜ್ಜ   ಮಾಡಿಟ್ಟಿದ್ದು..   ಅಪ್ಪ ಚೆನ್ನಾಗಿ ನೋಡಿಕೊಂಡಿದ್ದ  .. ಈಗ ನಾನು ನೋಡಿಕೊಳ್ತಾ ಇದ್ದೀನಿ..  ಹೆಂಗೋ ನಡಿತಾ ಐತೇ .. 

ರಮೇಶ: ಏನೇನು ಬೆಳಿತಾ ಇದ್ದೀಯ?

ಸುರೇಶ: ಅಡಿಕೆ  ವರುಷಕ್ಕೆ  ಒಂದು ಇಪ್ಪತೈದು ಕಿಂಟಾಲ್ ಆಗ್ತದೆ… ಸ್ವಲ್ಪ ಕಾಳು ಮೆಣಸು ಐತೇ …  ಒಂದು ಸಾವಿರ ಬಾಳೆ ಗಿಡ ಹಾಕಿದೀನಿ…  ಮನೆಗೆ ಆಗೋಷ್ಟು ತರಕಾರಿ ಆಗ್ತದೆ..  ಅರ್ಧ ಎಕರೆ ಭತ್ತ ಬೆಳೀತೀನಿ…  ವರುಷಕ್ಕೆ ಆಗೋ ಅಷ್ಟು ಭತ್ತ ಇಟ್ಕೊಂಡು ಉಳಿದದ್ದನ್ನು ಮಾರಿ ಬಿಡ್ತೀನಿ..  ಕೆಳೆದ ವರುಷ ಹನಿ ನೀರಾವರಿ ಮಾಡಿಸಿದ್ದೀನಿ ತೋಟಕ್ಕೆ,  ತರಕಾರಿ ಬೆಳೆದು ನೇರ ಸೂಪರ್ ಮಾರ್ಕೆಟ್ ನವರಿಗೆ ಮಾರ್ತೀನಿ,  ಹಿಂಗೇ ನೋಡಪ್ಪ  ಇಷ್ಟೇ ಬೆಳೆಯೋದು  … 

ರಮೇಶ:  ಹಂಗಿದ್ರೆ ವರುಷಕ್ಕೆ ಎರಡು ಮೂರು ಲಕ್ಷ ಆಗುತ್ತೆ ಅಲ್ವಾ ?

ಸುರೇಶ: ಇಲ್ಲ…   ಅಡಿಕೆ, ಬಾಳೆ, ತರಕಾರಿ  ಎಲ್ಲ ಸೇರಿ ಒಂದು ಹತ್ತು   ಲಕ್ಷ ಆಗ್ಬಹುದು ಅಷ್ಟೇ… 

ರಮೇಶ:  (ಸ್ವಗತ ) ತಗಳಪ್ಪ .. ಇಂಜಿನಿಯರ್ ಲೆವೆಲ್ಗೆ ದುಡೀತಾನೆ ಇವ್ನು…  ಅದು ಮೂರನೇ ಕ್ಲಾಸ್ ಓದಿ..   (  ಗೊಣಗುತ್ತ) ಮತ್ತೆ ಟ್ಯಾಕ್ಸ್ ಏನಾದ್ರೂ ಕಟ್ಟುತ್ತೀಯಾ ?

ಸುರೇಶ: ಆ ತರ ಏನು ಇಲ್ಲಪ್ಪಾ …. ಇದುವರೆಗೂ ಆ ತರ ಕಟ್ಟಿಲ್ಲಪ್ಪ 

ಆಗ ಒಳಗಡೆಯಿಂದ ಅಮ್ಮ ಟೀ ತೆಗೆದುಕೊಂಡು ಬರುತ್ತಾಳೆ.. 

ಅಮ್ಮ: ಏನೋ ಸುರೇಶ ಹೆಂಗಿದ್ದೀಯ?

ಸುರೇಶ: ಚೆನ್ನಾಗಿದೀನಿ ಕಣಮ್ಮ…  ನೀವ್ ಹೆಂಗಿದಿರಿ… 

ಅಮ್ಮ: ನಂದೇನು ಬಿಡು…  ಕಾಡು ಬಾ ಅಂತದೇ ನಾಡು ಹೋಗು ಅಂತದೇ.. 

ಸುರೇಶ: ಹಂಗ್ಯಾಕೆ ಹೇಳ್ತಿರಿ ಬಿಡಿ… ಮಗನು ಇಲ್ಲೇ ಬಂದವನೇ ಅಲ್ವ.. ಅವನ ಮಕ್ಕಳ ಜೊತೆ ಒಳ್ಳೆ ಕಾಲ ಕಳಿಬಹುದು ಇನ್ಮೇಲೆ … 

ಅಮ್ಮ: ಕೊರೋನಾ ಅಂತ ಬಂದಿದಾನೆ ಅಷ್ಟೇ… ಇಲ್ಲ ಅಂದ್ರೆ ವರುಷಕ್ಕೆ ಒಂದು ವಾರ ಬರ್ತಿದ್ದ ಅಷ್ಟೇ… 

ಸುರೇಶ:  ಹಂಗಿದ್ರೆ ಕೊರೋನಾ ಬಂದಿದ್ದೆ ಒಳ್ಳೆದಾತು ಬಿಡಿ..  ಮನೆ ಮಕ್ಕಳೆಲ್ಲ   ಊರು ಮುಖ ನೋಡೋ ಹಂಗಾಯ್ತು.. 

ಅಮ್ಮ:  ಅದು ಸರಿ ಬಿಡು… ನೀವು ಮಾತಾಡಿ ಒಳಗಡೆ ಕೆಲಸ ಇದೆ( ಎಂದು ಹೇಳುತ್ತಾ ಒಳಗಡೆ ಹೋಗುತ್ತಾಳೆ)

ಸುರೇಶ:  ಪಾಪ ಅಮ್ಮ.. ಯಾವಾಗ್ಲೂ ನಿನ್ ಬಗ್ಗೆನೇ ಹೇಳ್ತ ಇರ್ತಾರೆ… ನಿಮ್ಮ್ ಅಪ್ಪ ಹೋದ್ಮೇಲೆ ಒಬ್ಬಳೇ ಆಗ್ಬಿಟ್ಟಿದ್ದಳು.  ಮನೆ ಕೆಲಸ ಹಾಗು ತೋಟದ ಕೆಲ್ಸ ಎಲ್ಲ ಒಬ್ಬಳೇ ನೋಡಿಕೊಳ್ತಿದಾಳೆ.  ಪಾಪ ಬಹಳ ಕಷ್ಟ ಪಡ್ತಾಳೆ.. 

ರಮೇಶ :  ಹೂಂ …  ( ಸಣ್ಣ ಧ್ವನಿಯಲ್ಲಿ)

ಸುರೇಶ:  ಇನ್ನೇನು ನಿನ್ ಬಂದಿದಿಯಲ್ಲ ಬಿಡು..  ಅವ್ಳಿಗೆ ಸ್ವಲ್ಪ ಹಗುರ ಆಗುತ್ತೆ.. 

ರಮೇಶ:  ಹಾಂ … ಹೂಂ…  ಹೌದು ಹೌದು.. ( ಏನು ಹೇಳುವುದು ಅಂತ ಗೊತ್ತಾಗದೆ)

ಸುರೇಶ: ಹಂಗಿದ್ರೆ ನಾನ್ ಬರ್ತೀನಿ.. ಒಸಿ ಕೆಲಸ ಇದೆ, ಮತ್ತೆ ಸಿಗೋಣ, ಹೆಂಗಿದ್ರು ಇಲ್ಲೇ ಇರ್ತೀಯಲ್ಲ ಸ್ವಲ್ಪ ದಿವ್ಸ.  ( ಎಂದು ಹೇಳುತ್ತಾ ಹೊರಡಲು ಅನುವಾಗುತ್ತಾನೆ) 

ದೃಶ್ಯ ೪

ಅಷ್ಟರಲ್ಲಿ ಪೇಟೆಯಿಂದ ಬಹಳ ವರುಷಗಳಿಂದ ಹಿಂದೇನೆ ವಾಪಸು ಬಂದ  ಸ್ನೇಹಿತ ರಘು ರಮೇಶ ಮತ್ತು ಸುರೇಶ ಕೂತಲ್ಲಿಗೆ ಬರುತ್ತಾನೆ.. ಹೊರಟು ನಿಂತಿದ್ದ ಸುರೇಶನನ್ನು ನೋಡಿ.. 

ರಘು: ಏನೋ ಸುರೇಶ, ಹೊಂಟ್ಯ? ಕುತ್ಕೊಳೋ,,,  

ಸುರೇಶ: ಒಸಿ ಕೆಲ್ಸ ಇದೆ… ಆಮೇಲೆ ಸಿಕ್ತಿನಿ ಬಿಡು… ಬರ್ಲಾ ( ರಮೇಶನ ಕಡೆ ತಿರುಗಿ ಹೇಳಿ ಹೊರಡುತ್ತಾನೆ)

ರಘು:    ಸರಿ ಬಿಡು,  ಆಮೇಲೆ ಸಿಗೋಣ,,,    ( ಸುರೇಶ ಕೂತ ಜಾಗದಲ್ಲಿ  ಅವನು ಕೂರುತ್ತಾ )  ಏನೋ ರಮೇಶ? ಮನೆ ಬಿಟ್ಟು ಹೊರಗಡೆನೇ ಬರಲ್ಲ..  ಏನೋ ಮಾಡ್ತಾ ಇರ್ತೀಯ ?  ( ರಮೇಶನ ಕಡೆ ನೋಡುತ್ತಾ ಕೇಳುತ್ತಾನೆ)

ರಮೇಶ: ಆಫೀಸ್ ಕೆಲಸ ಜಾಸ್ತಿ ಕಣೋ… ಹಾಗಾಗಿ ಬರೋಕ್ಕೆ ಆಗ್ತಾ ಇಲ್ಲ..  ನಿನ್ ತರ ಅಲ್ಲ ಬಿಡಪ್ಪಾ ,   ಸಿಟಿ ಕೆಲಸ ಬಿಟ್ಟು  ಮನೆ ಕಡೆ ಬಂದು ತೋಟ ಗದ್ದೆ ಅಂತ ಆರಾಮಾಗಿ ಇದ್ದಿಯಾ!! 

ರಘು: ಆರಾಮಾಗಿ ಇರೋದು ಅಂತ ನಿಜ… ಆದ್ರೆ ಮಾನಸಿಕವಾಗಿ, ದೈಹಿಕವಾಗಿ ಅಲ್ಲಾ.  ಮೈ ಮುರಿಯೋ ಕೆಲಸ ಇದೆ.. ಆದ್ರೆ ನಾನು ಮಾಡೋ ಕೆಲಸ ನನ್ನದೇ  ಹಾಗು ಅದರ ಫಲ ನನಗೆ  ಅನ್ನೋ ಸಂತೋಷ,  ಸಮಾಧಾನ ಇದೆ.  ಯಾರ ಮುಂದೆ ಕೈ ಕಟ್ಟಿ ನಿಲ್ಲುವ ಹಾಗಿಲ್ಲ,  ನಾನೇ ಯಜಮಾನ ನಾನೇ ಕೂಲಿಯವನು,  ಇದೆಲ್ಲ ಸಿಟಿ ಕೆಲಸದಲ್ಲಿ ಇಲ್ಲ ಅಂತಾನೆ ತಾನೇ ಇದ್ದ ಕೆಲಸ ಬಿಟ್ಟು ವಾಪಸು ಊರಿಗೆ ಬಂದಿದ್ದು. 

ರಮೇಶ: ನಿನ್ನಷ್ಟು ಧೈರ್ಯ ನಮಗಿಲ್ಲ ಬಿಡು..  ಸಿಟಿಯಲ್ಲಿ  ಮನೆ, ಕಾರು ಅಂತ ಮಾಡಿಕೊಂಡ ಕಮಿಟ್ಮೆಂಟ್ಸ್ ಸಾಕಷ್ಟು ಇದೆ..  ಅದೆಲ್ಲ ಇಲ್ಲಿ ಬಂದು ಮೈನ್ಟೈನ್ ಮಾಡೋಕ್ಕೆ ಆಗೋದಿಲ್ಲ ಬಿಡು.. 

ರಘು: ಅವತ್ತು ನಾನು ಹಾಗೆ ಅಂದುಕೊಂಡಿದ್ದೆ, ಇವತ್ತು  ನನ್ನದೇ ಸ್ವಂತ ಮನೆ ಇದೆ,  ಕಾರಿದೆ ಕೈ ತುಂಬಾ ದುಡ್ಡಿದೆ, ಇವೆಲ್ಲ  ತೋಟ ಗದ್ದೆ ಮಾಡಿಯೇ ದುಡಿದ್ದದ್ದು. 

ರಮೇಶ: ಅದೆಲ್ಲ ನಿಜ..  ಇಷ್ಟೆಲ್ಲ ಓದಿ  ಹಳ್ಳಿಗೆ ಬಂದು ತೋಟದ ಕೆಲಸ ಮಾಡೋದಾದ್ರೆ  ಓದೋದು ಯಾಕೆ ಬೇಕಿತ್ತು?  ಇಂಜಿನಿಯರಿಂಗ್  ಯಾಕೆ ಮಾಡಬೇಕಿತ್ತು?  ಎಲ್ಲರು ಊರಿಗೆ ಬಂದುಬಿಟ್ಟರೆ ಇಂಡಸ್ಟ್ರಿ ಕತೆ ಏನು?… ಅಲ್ಲಿ ಕೆಲಸ ಮಾಡೋಕೆ ಯಾರಾದ್ರೂ ಬೇಕಲ್ವಾ?

ರಘು : ನೋಡು ರಮೇಶ.. ಮೊದಲು ನಾವು ಓದೋದು ಕೆಲಸಕ್ಕೆ ಅನ್ನೋದು ಬದಲಾಗಬೇಕು.   ಓದಿನಿಂದ ಜ್ಞಾನ ಸಂಪಾದಿಸಬೇಕೇ ಹೊರತು ಕೆಲಸ ಅಲ್ಲಾ. ಅನ್ನೋದು ಅಂತ ನನ್ನ ಭಾವನೆ.  ತೋಟ ಗದ್ದೆ ಇಲ್ಲದವರು,  ಓದಿ ಏನಾದರೂ ಕೆಲಸ ಮಾಡಲೇ ಬೇಕು.. ಅವರಿಗೆ ಆ ಕೆಲಸಗಳ ಅವಶ್ಯಕತೆ ಇದೆ..  ಆದರೆ ನನಗೆ ಮತ್ತು ನಿನಗೆ ಅದರ ಅವಶ್ಯಕತೆ ಇಲ್ಲ…  ನಾನು ಓದಿದ್ದು ಮೆಕ್ಯಾನಿಕಲ್ ಇಂಜಿನಿಯರಿಂಗ್, ಆದರೆ ಅದರಿಂದ ನನ್ನ ಕೃಷಿಗೆ ಅನೇಕ ಉಪಯೋಗ ಆಗಿದೆ, ಅಲ್ಲಿ ಪಡೆದ ಜ್ಞಾನ  ಇಲ್ಲಿ ಉಪಯೋಗ ಆಗುತ್ತಾ ಇದೆ.. 

ರಮೇಶ: ಮಗಳಿಗೆ  ಒಳ್ಳೆಯ ಸ್ಕೂಲ್ ಇಲ್ಲಿ ಇಲ್ವಲ್ಲಾ ?  ನಾವು ಓದಿದ ಸರಕಾರೀ ಶಾಲೆ ಗತಿ ನೋಡಿದ್ಯಲ್ಲಾ ?

ರಘು: ಹೌದು ಅದರ ಗತಿ ಹಾಗೆ ಆಗಲಿಕ್ಕೆ ಕಾರಣ ನಾವೇ ಅಲ್ವ?  ಓದಲಿಕ್ಕೆ ನಮ್ಮ ಮಕ್ಕಳನ್ನೇ ನಾವು ಕಳುಹಿಸುತ್ತಿಲ್ಲ ಅಂದರೆ ಅದು ಚೆನ್ನಾಗಿ ಆಗೋದಾದರೂ ಹೇಗೆ?  ನಮ್ಮ ಊರಿನ ಶಾಲೆಗೇ ನನ್ನ ಹಾಗೆ ವಾಪಸು ಬಂದ ಅನೇಕ ಜನ ವಾರಕ್ಕೆ ಎರಡೆರಡು ದಿನ ಪಾಠ ಮಾಡಲು ಶುರು ಮಾಡಿದ್ದೇವೆ,  ವಾಲಂಟೀರ್ ಆಗಿ..  ನಾವೇ ಶಾಲೆಗೇ ಬೇಕಾದ ಅವಶ್ಯಕ ವಸ್ತುಗಳನ್ನು ಕೊಡುತ್ತಿದ್ದೇವೆ, ಕಂಪ್ಯೂಟರ್ ಹೇಳಿ ಕೊಡುತ್ತಿದ್ದೇವೆ,  ಕೃಷಿಗೆ ಒತ್ತು ಕೊಡುತ್ತಿದ್ದೇವೆ,  ತಂತ್ರಜ್ಞಾನದ ಬಗ್ಗೆ ಹೇಳಿಕೊಡುತ್ತಿದ್ದೇವೆ..  ಸಿಟಿಯಲ್ಲಿ ಸಿಗುವ ಶಿಕ್ಷಣಕ್ಕಿಂತ ಜಾಸ್ತಿ ನಾವು ಇಲ್ಲಿಯೇ ಕೊಡಲು ಪ್ರಯತ್ನ ಮಾಡುತ್ತಿದ್ದೇವೆ… ಫ್ರೀ ಆದ್ರೆ ಒಮ್ಮೆ ಶಾಲೆ ಬಂದು ನೋಡು..ನಿನಗೆ ಗೊತ್ತಾಗತ್ತೆ…  ನಾವು ಓದಿ ನಮ್ಮ ಹಳ್ಳಿಗಳನ್ನು ಉದ್ದಾರ ಮಾಡುವ ಸಣ್ಣ ಪ್ರಯತ್ನ ಎಲ್ಲರು ಮಾಡಿದರೆ ಖಾಸಗಿ ಶಾಲೆಗಳ ಹಾವಳಿ ತಪ್ಪುತ್ತದೆ…  ಸಿಟಿಯಲ್ಲಿ ಓದಿದರೆ ಮಾತ್ರ ಒಳ್ಳೆಯ ಕೆಲಸ ಸಿಗುತ್ತೆ ಅನ್ನುವ ತಪ್ಪು ಕಲ್ಪನೆ ಮೊದಲು ಹೋಗಬೇಕು.. ನಾವೆಲ್ಲ ಇಲ್ಲೇ ಓದಿದ್ದು ಅಲ್ವ.. 

ರಮೇಶ : ಅಬ್ಬಾ.. ಇಷ್ಟೆಲ್ಲ ಮಾಡುತ್ತಿದ್ದೀರಾ? ಕೇಳಲಿಕ್ಕೆ ಖುಷಿಯಾಗುತ್ತೆ ರಘು… ಈ ದಿಕ್ಕಿನಲ್ಲಿ ನಾನು ಯೋಚನೆ ಮಾಡೇ ಇರಲಿಲ್ಲ. ಸಿಟಿ ಜೀವನಕ್ಕೆ ಒಗ್ಗಿ  ಹಳ್ಳಿಯಲ್ಲಿ ಬದುಕಲು ಸಾಧ್ಯವೇ ಅನ್ನುವ ಹೆದರಿಕೆಯಲ್ಲೇ ಇದ್ದೆ.. ನೀನು ಹೇಳುವುದು ನೋಡಿದರೆ ನನ್ನ ಕಲ್ಪನೆ ತಪ್ಪು ಅನಿಸುತ್ತಿದೆ. 

ರಘು: ಅದು ಸರಿ.. ಊರಿಗೆ ವರುಷಕ್ಕೆ ಒಮ್ಮೆ ಬರುವ ನಿಮಗೆ,  ಇಲ್ಲಿ ನಡೆಯುತ್ತಿರುವದರ ಬಗ್ಗೆ  ಹೇಗೆ ಗೊತ್ತಾಗಬೇಕು ಹೇಳು? ಆ ಪ್ರಪಂಚದಿಂದ ಒಮ್ಮೆ ಹೊರಗಡೆ ಬಂದು ನೋಡು.. ನಿನ್ನ ತಾಯಿ ಏನು ಓದಿಲ್ಲ.. ಆದರೂ ತೋಟದ ಅಷ್ಟು ವ್ಯವಹಾರ ಒಬ್ಬಳೇ ನೋಡಿಕೊಳ್ಳುತ್ತಿದ್ದಾಳೆ..  ಅವಳಿಗೆ ನಿನ್ನ ಅಗತ್ಯ ತುಂಬ ಇದೆ…  ಯೋಚನೆ ಮಾಡು..  ಹಳ್ಳಿಗೆ ವಾಪಸು  ಬರದೇ ಇರಲು ಕೊಡುವ ಕಾರಣಗಳನ್ನು ಬದಿಗೊತ್ತಿ ,  ಬರಲು ಇರುವ ಹಾದಿಗಳನ್ನು ಒಮ್ಮೆ ನೋಡು..  ಸಿಟಿಯಲ್ಲಿ ಇರುವುದು ತಪ್ಪು ಅಂತ ಹೇಳುತ್ತಿಲ್ಲ.. ನಿನಗೆ ಅದರ ಅಗತ್ಯ ಇಲ್ಲ… ನಿನ್ನ ತರಹ ಭೂಮಿ ಇಲ್ಲದವರಿಗೆ ಕೆಲಸದ ಅವಶ್ಯಕತೆ ಇದೆ.. ಅವರಿಗೆ ಅದು ಸಿಗಲಿ.. 

ರಮೇಶ : ಹೌದು ರಘು… .  ಊರಿನಲ್ಲಿ ಮಾಡಿಕೊಂಡ ಕಮಿಟ್ಮೆಂಟ್ ಗೆ ಹೆದರಿ,  ಮಗಳ ಎಜುಕೇಶನ್ ಬಗ್ಗೆ ಯೋಚಿಸುತ್ತ ವಾಪಸು ಬರುವ ಯೋಚನೆಯನ್ನೇ ಬಿಟ್ಟಿದ್ದೆ..  ಸುರೇಶನ ಜೊತೆಗೆ ಮಾತನಾಡುವಾಗಲೆ ನನಗೆ ನನ್ನ ತಾಯಿ ಪಡುತ್ತಿರುವ ಕಷ್ಟ ಗೊತ್ತಾಯಿತು. ನಿನ್ನ  ಮಾತು ಕೇಳಿದ ಮೇಲೆ ಕಣ್ಣಿಗೆ ಕಟ್ಟಿದ್ದ ಪಟ್ಟಿ ಬಿಚ್ಚಿ ಹೋದಂತೆ ಅನಿಸುತ್ತಿದ್ದೆ. 

ರಘು: ಇನ್ನು ಕಾಲ ಮಿಂಚಿಲ್ಲ.. ವಾಪಸು ಬಾ.. ನಾನು ಸಹಾಯ ಮಾಡುತ್ತೇನೆ… ಇಲ್ಲಿಯ ಕೆಲಸ ನಿನಗೇನೂ ಹೊಸದಲ್ಲ, ಮೊದಲು ಮಾಡಿದ್ದೆ, ಬರುವ ಮನಸ್ಸು ಬೇಕು…  ನೋಡು ಯೋಚನೆ ಮಾಡು ಒಂದು ತೀರ್ಮಾನ ಮಾಡು.. ಕೊರೋನಾ ಅಂತ ಬಂದಿದ್ದೀಯಾ  ಅದು ಹಾಗೆ ಮುಂದುವರೆಯಲಿ,  ಏನೇ ಸಹಾಯ ಬೇಕಿದ್ದರೂ ನನಗೆ ಕೇಳು ಆಯ್ತಾ..  

ರಮೇಶ: ಖಂಡಿತ ಯೋಚನೆ ಮಾಡುತ್ತೇನೆ,,  ನನ್ನ ಹೆಂಡತಿ ಜೊತೆಯೂ ಮಾತನಾಡಿ ಒಂದು ತೀರ್ಮಾನ ಮಾಡುತ್ತೇನೆ.. ತುಂಬ ಥಾಂಕ್ಸ ರಘು .. 

ರಘು: ಅವೆಲ್ಲ ಬೇಡ ಕಣೋ… ನಿನ್ನ ತಾಯಿಯ ಹತ್ತಿರ ಮಾತಾಡು.. ಅವಳು ಸಂತೋಷ ಪಡುವಷ್ಟು ಯಾರು ಪಡುವುದಿಲ್ಲ. ಅದರ ಮುಂದೆ ಏನಿದೆ ಹೇಳು .. ನಾನು ಬರ್ತೀನಿ.. ( ಹೊರಡಲು ಅನುವಾಗುತ್ತಾನೆ)

ರಘು:  ಮತ್ತೆ ಸಿಗೋಣ( ಎಂದು ಹೇಳುತ್ತಾ ಹೊರಟು ಹೋಗುತ್ತಾನೆ)

ದೃಶ್ಯ ೫

(ಹೊರಗಡೆ ಕುಳಿತು ಕೊಂಡು ಒಳಗಡೆ ನೋಡುತ್ತಾ )

ರಮೇಶ:  ಅಮ್ಮ.. ಅಮ್ಮ..  ಒಳಗಡೆ ಇದ್ದಿಯಾ ?  ಸ್ವಲ್ಪ ಕುಡಿಯೋಕೆ ನೀರು ತೆಗೊಂಡು ಬಾರಮ್ಮ… 

( ಒಳಗಡೆಯಿಂದ)

ಅಮ್ಮ: ತಂದೆ ಕಣೋ.. 

ರಮೇಶ ಕೂತ ಜಾಗದಿಂದ ಎದ್ದು ಹಾಗೆ ಅಲ್ಲೇ ಆ ಆ ಕಡೆ ಈ ಕಡೆ ಓಡಾಡುತ್ತ ಇರುತ್ತಾನೆ.. 

ಅಮ್ಮ:  ತೆಗೊಳೋ ನೀರು.. ( ಒಳಗಡೆಯಿಂದ ಬಂದು ನೀರು ಕೊಡುತ್ತ)

ರಮೇಶ: ತುಂಬ ಥಾಂಕ್ಸ ಕಣಮ್ಮ..  ಬಾ ಕುತ್ಕೋ ನಿನ್ ಹತ್ತಿರ ಸ್ವಲ್ಪ ಮಾತನಾಡಬೇಕು.. 

ಅಮ್ಮ: ಹಾಂ..  ( ಬಹಳ ಆಶ್ಚರ್ಯದಿಂದ ರಮೇಶನನ್ನು ನೋಡುತ್ತಾಳೆ)

ರಮೇಶ: ಕುತ್ಕೊಆಮ್ಮ  ಸ್ವಲ್ಪ ಮಾತನಾಡಬೇಕು..  ನಂಗೆ ಗೊತ್ತು ಬಂದಾಗಿಂದ ನಿನ್ ಹತ್ತಿರ ಸರಿಯಾಗಿ ಮಾತನಾಡಲು ಆಗಿಲ್ಲ. ನಿಂಗೆ ಬೇಜಾರು ಆಗಿದೆ ಅಂತ 

ಅಮ್ಮ: ಅಯ್ಯೋ ಹಾಗೇನಿಲ್ಲ.. ನಿಂಗೆ ಕೆಲಸ ಜಾಸ್ತಿ ಅಲ್ವ ನಂಗೆ ಗೊತ್ತು. 

ರಮೇಶ: ಪರವಾಗಿಲ್ಲ..  ನಂಗೆ ಎಲ್ಲ ಗೊತ್ತು..  ನಾನು ಒಂದು ತೀರ್ಮಾನ  ಮಾಡಿದ್ದೇನೆ.. ಅದನ್ನು ನಿಂಗೆ ಹೇಳಬೇಕು.. 

ಅಮ್ಮ: ಸರಿ ಹೇಳಪ್ಪ( ಬೇಜಾರಿಂದ,, ಸಣ್ಣ ಧ್ವನಿಯಲ್ಲಿ)

ರಮೇಶ: ಅಮ್ಮ.. ನಾನು ಇನ್ಮೇಲೆ ಇಲ್ಲೇ ಇದೆ ಊರಿನಲ್ಲಿ ಇರುತ್ತೇನೆ… ತೋಟದ ಕೆಲಸ ನಾನೇ ನೋಡಿಕೊಂಡು ಇಲ್ಲೇ ಇರೋದು  ಅಂತ ತೀರ್ಮಾನ ಮಾಡಿದ್ದೇನೆ..  ನೀನು ಕಷ್ಟ ಪಟ್ಟಿದ್ದು    ಸಾಕು..   ಸಿಟಿಯ ಕೆಲಸ ಬಿಟ್ಟು ಇಲ್ಲಿಗೆ ಬಂದು ಇಲ್ಲಿಯೇ ಮುಂದಿನ ಜೀವನ ಮುಂದುವರೆಸುವುದು ಅಂತ ಯೋಚನೆ ಮಾಡಿದ್ದೇನೆ.. 

ಅಮ್ಮ: ಮತ್ತೆ ನಿನ್ ಮಗಳ ಶಾಲೆ ಗತಿ ಏನೋ.. ನಿನ್ನ ಹೆಂಡತಿ ಒಪ್ಪುತ್ತಾಳೆನೋ?

ರಮೇಶ: ಮಗಳನ್ನು  ಇಲ್ಲಿನ ಶಾಲೆಗೇ ಸೇರಿಸ್ತೀನಿ.. ಹೆಂಡತಿಯ ಜೊತೆಗೂ ಮಾತನಾಡಿ ಒಪ್ಪಿಸಿದ್ದೇನೆ, ಅವಳು ಸಂತೋಷದಿಂದ ಒಪ್ಪಿಕೊಂಡಿದ್ದಾಳೆ ಅಮ್ಮ.  

ಅಮ್ಮ: ನಂಗೆ ನಂಬೋಕೆ ಆಗ್ತಾ ಇಲ್ವಲ್ಲೋ..  ಯಾಕೆ ಈ ತೀರ್ಮಾನ ?

ರಮೇಶ: ಇಲ್ಲಿಂದ ಹೋದ ಮೇಲೆ … ನಿನ್ನ ಬಗ್ಗೆ, ಈ ತೋಟದ ಬಗ್ಗೆ ತಿಳಿದುಕೊಳ್ಳುವ ಮನಸ್ಸೇ ಮಾಡಿರಲಿಲ್ಲ..  ಈಗ ಕೊರೋನಾ ಬಂದಿದ್ದು ಇಲ್ಲಿಗೆ ಬರುವಂತೆ ಮಾಡಿತು ..   ನೀನು ಪಡುವ ಕಷ್ಟ ತಿಳಿಯಿತು.. ನನ್ನ ಸ್ನೇಹಿತರ ಜೊತೆಗೆ ಮಾತನಾಡಿದ ಮೇಲೆ ನನ್ನ ಮನಸ್ಸು ಬದಲಾಯಿತು..  ಇಲ್ಲಿ ಇದ್ದೆ ಏನಾದರೂ ಸಾದಿಸಬಹುದು ಅನ್ನುವ ನಂಬಿಕೆ ಬಂದಿದೆ..   ಹಾಗಾಗಿ ಈ ತೀರ್ಮಾನ ಮಾಡಿದ್ದೇನೆ..  

ಅಮ್ಮ: ನಿನ್ನ ಮಾತು ಕೇಳಿ  ತುಂಬಾ ಸಂತೋಷವಾಗುತ್ತಿದೆ ಕಣೋ… ..  ತುಂಬ ಒಳ್ಳೆಯ ತೀರ್ಮಾನ ಮಾಡಿದ್ದಿಯ..   ಮನಸ್ಸಿಗೆ  ತುಂಬ ನೆಮ್ಮದಿ ಆಯಿತು. ದೇವರ ಮುಂದೆ ತುಪ್ಪದ ದೀಪ ಹಚ್ಚುತ್ತೇನೆ ( ಎಂದು ಒಳಗಡೆ ಹೊರಡುತ್ತಾಳೆ.)

ರಮೇಶ ಒಬ್ಬನೇ ಮಾತನಾಡುತ್ತಾ 

ರಮೇಶ: ಅಬ್ಬಾ..   ಯಾಕೋ ಇವತ್ತು ಎಷ್ಟು ನಿರಾಳ ಅನ್ನಿಸುತ್ತಿದೆ.  ಇಲ್ಲಿಗೆ ಬಂದು ಇಷ್ಟು ದಿವಸ ಇರದಿದ್ದರೆ ನನಗೆ ನನ್ನ ತಪ್ಪು ಅರಿವಾಗುತ್ತಲೇ ಇರಲಿಲ್ಲ.  ನಾನು ತೆಗೆದುಕೊಂಡ ತೀರ್ಮಾನದಿಂದ ನನ್ನ ತಾಯಿಯ ಬದುಕಿರುವವರೆಗೂ ನೆಮ್ಮದಿಯಾಗಿರುತ್ತಾಳೆ.  ನಾನು ಸ್ವಾವಲಂಬಿ ಜೀವನ ಸಾಗಿಸಲು ಶುರು ಮಾಡುತ್ತೇನೆ.. ನನ್ನ   ಮಕ್ಕಳಿಗೆ ಸಮಯ ಜಾಸ್ತಿ ಕೊಡಬಹುದು…  ಅವರಿಗೆ ಜೀವನ ಎಂದರೇನು ಎನ್ನುವುದು ಅರಿವಾಗುತ್ತದೆ.. ಕಷ್ಟ ಮತ್ತು ಸುಖದ ನಡುವಿನ ಅಂತರ ತಿಳಿಯುತ್ತದೆ.  ಸಾಧನೆ ಕೇವಲ ಸಿಟಿಯಲ್ಲಿ ಮಾತ್ರ ಸಾಧ್ಯ ಅನ್ನುವುದು ತಪ್ಪು ಎಲ್ಲಿ ಬೇಕಾದರೂ ನಾವು ಸಾದಿಸಿ ತೋರಿಸಬಹುದು ಎಂಬ ಸತ್ಯ ಅರಿವಾಗಿದೆ ಇಂದು. 

ಕೊರೋನಾ ಬರದಿದ್ದರೆ ಇಲ್ಲಿಗೆ ಬರಲು ಆಗುತ್ತಲೇ ಇರಲಿಲ್ಲ. ಅಮ್ಮನ ಕಷ್ಟ ತಿಳಿಯುತ್ತಲೇ ಇರಲಿಲ್ಲ. ಅವಳ ಆನಂದದ ಮುಂದೆ ಇನ್ನೇನಿದೆ. ಅವಳ ಕಣ್ಣಿನಲ್ಲಿ ಕಾಣುತ್ತಿದ್ದ ಸಂತೋಷ ಯಾವತ್ತು ನೋಡಿರಲೇ ಇಲ್ಲ.   ನನ್ನ ತೀರ್ಮಾನ ಸರಿಯಾಗೇ ಇದೆ. 

ಹೊಸಜೀವನಕ್ಕೆ ನಾಂದಿ ಹಾಡೋಣ.  

ನಮಸ್ಕಾರ.. ( ಎಂದು ಹೇಳಿ ಪ್ರೇಕ್ಷಕರಿಗೆ ನಮಸ್ಕರಿಸಿ ಒಳಗಡೆ ಹೋಗುವುದರೊಂದಿಗೆ ಮುಕ್ತಾಯ)

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s