ಕಾನ್ ಪತ್ತಿ ಮಾರ್ ಶಂಕರಿಯ !! ನೇಣಿಗೇರುವ ಮುನ್ನ ಹೇಳಿದ್ದು ಏನು ಗೊತ್ತಾ ?

ಸಾವಿರದ ಒಂಬೈನೂರ ಎಪ್ಪತ್ತೇಳರಿಂದ  ಎಪ್ಪತ್ತೆಂಟರ ಸಮಯದಲ್ಲಿ ರಾಜಸ್ತಾನದ  ಜೈಪುರದಲ್ಲಿ ವಾಸಿಸುತ್ತಿದ್ದ ಜನರು ಹಗಲು ಹೊತ್ತು ಹೊರಗೆ ಹೋಗಲು ಭಯ ಪಡುವಂತ ವಾತಾವರಣವಿತ್ತು.  ಕೇವಲ ಒಂದು ವರುಷದಲ್ಲಿ  ಜೈಪುರದಲ್ಲಿ  ಕೊಲೆಯಾಗಿ ಸತ್ತವರ ಸಂಖ್ಯೆ ಒಂದಲ್ಲ ಎರಡಲ್ಲ  ಬರೋಬ್ಬರಿ ಎಪ್ಪತ್ತೇಳು.   ಜನರು ಭಯಬೀತರಾಗಿದ್ದರು,  ವಿಷಯ ಒಬ್ಬರಿಂದ ಒಬ್ಬರಿಗೆ ಹರಡಿ ಚಿತ್ರ ವಿಚಿತ್ರ ಕಥೆಗಳು ಹುಟ್ಟಿಕೊಂಡಿದ್ದವು.  ಈಗಿನ ತರಹ ಆಗ ನ್ಯೂಸ್ ಚಾನೆಲ್ ಇರಲಿಲ್ಲ ಅದೇ ಪುಣ್ಯ.  ಪ್ರತಿಯೊಬ್ಬರನ್ನು ಒಂದೇ ರೀತಿಯಾಗಿ ಕೊಲೆಮಾಡಿದ್ದರು ಆ ಕೊಲೆಗಾರರು.  ” ಕುತ್ತಿಗೆ ಹಾಗು ಕಿವಿಯ ಕೆಳಗಡೆ ಬಾಗಕ್ಕೆ”  ಯಾವುದೊ ಕಬ್ಬಿಣದ ವಸ್ತುವಿನಿಂದ  ಬಲವಾಗಿ ಹೊಡೆದು ಕೊಲೆ ಮಾಡುತ್ತಿದ್ದರು ಕೊಲೆಗಾರರು. ಒಂದಾದ ಮೇಲೆ ಒಂದು ಕೊಲೆಗಳು ನಡೆಯುತ್ತಾ  ಹೋದಂತೆ,  ಜನರು ಕೊಲೆಯ ಶೈಲಿಗೆ ಒಂದು ಹೆಸರಿಟ್ಟರು,  ಅದೇ  ” ಖಾನ್ ಪತ್ತಿ ಮಾರ್ ” ಎಂದು.  ಪೊಲೀಸರಿಗಂತೂ ಬಹಳ ದೊಡ್ಡ ತಲೆ ನೋವಾಗಿ ಹೋಗಿತ್ತು ಈ ಕೊಲೆಗಳು.  ಅವರ ತನಿಖೆ ಮುಂದುವರೆಯುತ್ತ,   ಸಾಕ್ಷಿಗಳನ್ನು ಕೂಡಿ ಹಾಕುತ್ತ   ಹೋದಂತೆ ಪೊಲೀಸರಿಗೆ ಗೊತ್ತಾಗಿದ್ದು  ಕೊಲೆ ಮಾಡುತ್ತಿರುವುದು ಯೂವುದೋ ಗುಂಪಲ್ಲ,  ಇದನ್ನೆಲ್ಲಾ  ಮಾಡುತ್ತಿರುವುದು  ಒಬ್ಬನೇ ಕೊಲೆಗಾರ ಅಂತ.  ಆ  ಸರಣಿ ಕೊಲೆಗಾರನ ಹೆಸರು ಅಷ್ಟೇ ಬೇಗ ದೇಶವೆಲ್ಲಾ ಹರಡಿತ್ತು. ಎಲ್ಲರ ಬಾಯಲ್ಲಿ ಒಂದೇ ಮಾತು ” ಕಾನ್ ಪತ್ತಿ ಮಾರ್”

ಪೊಲೀಸರ ಮೇಲೆ ಒತ್ತಡ ಜಾಸ್ತಿ ಆಗಿ ಹೋಗಿತ್ತು.  ಆದರೆ  ಆ ಕೊಲೆಗಾರನ  ಉದ್ದೇಶ ಏನು ಅಂತಾನೆ ಅರ್ಥ ಆಗಿರಲಿಲ್ಲ ಪೊಲೀಸರಿಗೆ. ರಾತ್ರಿಯೆಲ್ಲಾ  ಕಾದು ಕುಳಿತರು ಕೊಲೆಗಾರನನ್ನು ಹಿಡಿಯಲು ಸಾಧ್ಯವಾಗಿರಲಿಲ್ಲ ಪೊಲೀಸರಿಗೆ. ಸರಿ ಸುಮಾರು ಒಂದು ವರೆ ವರುಷಗಳ ಕಾಲ ಸರಣಿ ಕೊಲೆಗಾರ ತನ್ನ ರಾಕ್ಷಸ ಕೃತ್ಯವನ್ನು ಮುಂದುವರೆಸಿಕೊಂಡು ಹೋಗಿದ್ದ. ಆ ಸರಣಿ ಕೊಲೆಗಾರ ತಾನು ಮಾಡುತ್ತಿದ್ದ ಕೊಲೆಗಳನ್ನು ಲೆಕ್ಕ ಇಡುತ್ತಿದ್ದನೋ ಗೊತ್ತಿಲ್ಲ,  ಪೊಲೀಸರು ಹಾಗು ಜನರಂತೂ ಪ್ರತಿ ದಿನ ಲೆಖ್ಖ ಹಾಕುವ ಹಾಗೆ ಆಗಿತ್ತು. ಇವತ್ತು ನಮ್ಮ ಮನೆಯಲ್ಲಿಯೋ?   ಪಕ್ಕದ ಮನೆಯಲ್ಲಿಯೋ ?  ಯಾರು ಸಾಯುತ್ತಾರೋ ಅನ್ನುವ ಹಾಗೆ ಪರಿಸ್ಥಿತಿ  ನಿರ್ಮಾಣವಾಗಿತ್ತು. 

ಒಂದು ದಿನ ಬೆಳಿಗ್ಗೆ ಜನರಿಗೆ ಒಂದು ಶುಭ ಸಮಾಚಾರ ಸಿಕ್ಕಿತ್ತು.  ಪೊಲೀಸರು ಆ ರಾಕ್ಷಸ ಸರಣಿ ಕೊಲೆಗಾರನನ್ನು ಬಂಧಿಸಿದ್ದರು. ಪ್ರತಿಯೊಬ್ಬರಿಗೂ ಅವನು ಯಾರು ಅನ್ನುವ ಕುತೂಹಲಕ್ಕೆ ತೆರೆ ಬಿದ್ದಿತ್ತು. ಭಯದ ವಾತಾವರಣ ಸ್ವಲ್ಪ ಕಮ್ಮಿಯಾಗಿತ್ತು.  ಆ ಸರಣಿ ಕೊಲೆಗಾರನ ಹೆಸರು ” ಶಂಕರಿಯ” ಎಂದು.   ಅವನ ಕೊಲೆಯ ಶೈಲಿಗೆ  ಇಟ್ಟ  ಹೆಸರು ಅವನ ಹೆಸರಿನ ಮುಂದೆ ಸೇರಿ  ” ಕಾನ್ ಪತ್ತಿ ಮಾರ್ ಶಂಕರಿಯ  ”  ಎಂದು ಕರೆಯಲು ಶುರು ಮಾಡಿದರು.   ಅವನನ್ನು ಪೊಲೀಸರು ಬಂದಿಸಿದಾಗ ಪೊಲೀಸರಿಗೆ ಆಶ್ಚರ್ಯ ವಾಗಿತ್ತೋ ಏನೋ, ಯಾಕೆಂದರೆ ಅವನ ವಯಸ್ಸು ಕೇವಲ ಇಪ್ಪತ್ತಾರು.  ಅವನು ಹೇಳುತ್ತಿದ್ದುದ್ದನ್ನು ಕೇಳಿ ಪೊಲೀಸರು ಕೂಡ ಅವಕ್ಕಾಗಿದ್ದರೂ ಆಶ್ಚರ್ಯವೇನಿಲ್ಲ.  ಅವನು ಇಂತವರನ್ನೇ ಕೊಲ್ಲ ಬೇಕು ಅಂತ ಕೊಲ್ಲುತ್ತಿರಲಿಲ್ಲ,  ಯಾರು ಅವನಿಗೆ ನಿರ್ಜನ ಪ್ರದೇಶಗಳಲ್ಲಿ, ಒಬ್ಬಂಟಿಯಾಗಿ ಸಿಗುತ್ತಾರೋ ಅವರನ್ನು  ಕುತ್ತಿಗೆ ಮತ್ತು ಕಿವಿಯ ನಡುವೆ ಒಂದೇ ಏಟಿಗೆ ಹೊಡೆದು ಕೊಲ್ಲುತ್ತಿದ್ದನಂತೆ.  ಅಷ್ಟು ಕೊಲೆಗಳನ್ನು ಅವನು ಮಾಡಿದ್ದು ಒಂದು ” ಸುತ್ತಿಗೆಯಿಂದ”.  ಇದಕ್ಕಿಂತ ಅವರಿಗೆ ಎಲ್ಲರಿಗು ದಂಗು ಬಡಿಸಿದ್ದು ಯಾಕೆ ಕೊಲ್ಲುತ್ತಿದ್ದ ಅನ್ನುವ ಹಿಂದಿನ ಕಾರಣ.  ಅವನು ಹೇಳಿದ್ದು” ಕೊಲ್ಲುವಾಗ ನನಗೆ  ಬಹಳ ಆನಂದ ಸಿಗುತ್ತಿತ್ತು ” ಅಂತ. 

ಅವನನ್ನು ಬಂದಿಸಿದ ನಂತರ  ಬಹಳ ಬೇಗ ವಿಚಾರಣೆ ಮುಗಿಸಿ ಮೇ ಹದಿನಾರು ಸಾವಿರದ ಒಂಬೈನೂರ ಎಪ್ಪತ್ತೊಂಬತ್ತರಂದು  ನೇಣಿಗೇರಿಸಲಾಯಿತು.  ಅವನು ನೇಣಿಗೇರುವ ಮುನ್ನ ಹೇಳಿದ್ದು ಏನು ಗೊತ್ತಾ ” ಸುಮ್ಮನೆ ವ್ಯರ್ಥವಾಗಿ ಸಾಯಿಸಿಬಿಟ್ಟೆ, ನನ್ನ ತರಹ ಯಾರು ಆಗಬಾರದು” ಅಂತ.  

ಆದರೆ ಅವನು ಮಾಡಿದ ರಾಕ್ಷಸಿ ಕೃತ್ಯಕ್ಕೆ ಬಲಿಯಾದವರ ಹಾಗು ಅವರ ಮನೆಯವರ ಶಾಪ ಇನ್ನು ಸಾವಿರ ವರುಷಗಳಾದರು ಅವನ ಮೇಲಿರುತ್ತೆ.  ಅವನ ಪೈಶಾಚಿಕ ಕೃತ್ಯ ಕೇಳಿದರೆ ಇಷ್ಟು ವರುಷಗಳಾದಾರೂ ಮೈಯನ್ನೇ ನಡುಗಿಸುತ್ತೆ. 

– ಶ್ರೀನಾಥ ಹರದೂರ ಚಿದಂಬರ 

ಚಿತ್ರ ಕೃಪೆ:  ಗೂಗಲ್

5 thoughts on “ಕಾನ್ ಪತ್ತಿ ಮಾರ್ ಶಂಕರಿಯ !! ನೇಣಿಗೇರುವ ಮುನ್ನ ಹೇಳಿದ್ದು ಏನು ಗೊತ್ತಾ ?

Leave a comment