ಜಿಮ್ ಪು(ಹೈ)ರಾಣ !! !!

ಅಂಗಿ ಪ್ಯಾಂಟಿನೊಳಗೆ ಸೇರಿಸಿ , ಹೊಟ್ಟೆಯನ್ನು  ಪ್ಯಾಂಟ್ ಸಮೇತ ಎಳೆದು  ಬೆಲ್ಟ್ ನಿಂದ ಕಟ್ಟಿದರೂ , ಹಾಕಿದ ಬೆಲ್ಟ್ ಅನ್ನೇ ತಳ್ಳಿ ಹೊಟ್ಟೆ ಹೊರಗಡೆ ಕಾಣಿಸತೊಡಗಿತು ಅಂದರೆ ಸಾಕು,   ಮನೆಯಲ್ಲಿ ನಿದಾನವಾಗಿ ಹೆಂಡತಿ  ಹೊಟ್ಟೆ ಬರುತ್ತಾ ಇದೆ,  ವಾಕ್ ಶುರು ಮಾಡಿ ಅಂತ ಹೇಳಲು ಶುರು ಮಾಡುತ್ತಾಳೆ. ಅದನ್ನು ಕೇಳಿದರು  ಕೇಳದೆ ಇದ್ದ ಹಾಗೆ  ಇರುತ್ತೇವೆ.  ಆಫೀಸ್ನಲ್ಲಿ ಆಗಲೇ ಅನೇಕರ  ಹೊಟ್ಟೆ ಮುಂದೆ ಬಂದಿರುವುದರಿಂದ ನಮಗೆ ಯಾರು ಕೇಳುವುದು ಇಲ್ಲ ಮತ್ತು ಅದರ ಬಗ್ಗೆ ಗಮನ ಕೊಡುವುದು ಇಲ್ಲ. ಇನ್ನು  ಜೊತೆಯಲ್ಲಿ ಕೆಲಸ ಮಾಡುವ ಹೆಣ್ಣು ಮಕ್ಕಳು ಮುಂದೆ ಬಂದಾಗ ಆದಷ್ಟು ಉಸಿರು ಎಳೆದುಕೊಂಡು ಹೊಟ್ಟೆ ಹಿಂದೆ ಮಾಡಿಕೊಳ್ಳುವುದರಿಂದ ಅವರಿಗೆ ಅಷ್ಟು ಬೇಗ ಗೊತ್ತಾಗುವುದು ಇಲ್ಲ.  ಯಾವಾಗ ಉಸಿರು ಎಳೆದುಕೊಂಡರೂ ಹೊಟ್ಟೆ ಹಿಂದೆ ಹೋಗುವುದಿಲ್ಲವೋ ಆಗ ಅವರ  ಗಮನ ನಮ್ಮ ಮೇಲೆ ಬಿದ್ದು,   ಸ್ವಲ್ಪ  ವೆಯಿಟ್ ಗೇಯ್ನ್ ಮಾಡಿದ್ದರ ಅನಿಸುತ್ತೆ ಅಂತ ಏನಾದರು ಹೇಳಿದರೆ,   ಅಲ್ಲಿಯವರೆಗೆ ಏನೂ ಆಗಿಲ್ಲ ಅನ್ನೋ ಹಾಗೆ ಇದ್ದ  ನಮಗೆ ಆ ಮಾತು ಬಾಣದಂತೆ   ನಾಟಿ,  ಎಲ್ಲ ಬಿಟ್ಟು  ವಾಕಿಂಗ್ ಶುರು ಮಾಡಲೇ ಬೇಕು ಅಂತ ಅನಿಸುತ್ತೆ. ಅಲ್ಲಿಗೆ ನಮ್ಮ ಬೆಳೆಗ್ಗಿನ ವಾಕಿಂಗ್ ಎಂಬ ಅಧ್ಯಾಯ   ಶುರುವಾಗುತ್ತೆ. ಒಂದು ತಿಂಗಳು ನಡೆದರೂ ಯಾವುದೇ ಫಲಿತಾಂಶ ಕಾಣದೆ ನಿದಾನವಾಗಿ ವಾಕಿಂಗ್ ಹಳ್ಳ ಹಿಡಿಯಲು ಶುರು ಮಾಡುತ್ತೆ. ನಂತರ ಮನೆಯಲ್ಲಿ, ಸ್ನೇಹಿತರು ಕೊಡುವ  ಒಂದು ಸಲಹೆ ಜಿಮ್ ಗೆ ಹೋಗಿ, ಒಂದು ತಿಂಗಳಲ್ಲಿ ನೋಡಿ ಹೊಟ್ಟೆ ಹೇಗೆ ಕಾಣೆಯಾಗುತ್ತೆ ಅಂತ. 

ಇದೆ ರೀತಿ ನಾನು ಕೂಡ ಒಂದು ಜಿಮ್ಮಿಗೆ ಹೋಗಿ ಸೇರಿದೆ. ನನಗೆ ಯಾರೋ ಹೇಳಿದ್ದರು ಸುಮ್ಮನೆ ಹೋಗಿ ಸೇರಿದರೆ ಏನು ಉಪಯೋಗ ಆಗಲ್ಲ, ಪರ್ಸನಲ್ ಟ್ರೈನರ್ ತೆಗೊ, ಆಗ ಮಾತ್ರ ನಿನಗೆ ಅವರು ಸರಿಯಾಗಿ ಹೇಳಿಕೊಡುತ್ತಾರೆ,  ದೇಹದ ತೂಕ ಇಳಿಸಲು ಸರಿಯಾದ ಸಲಹೆ ನೀಡುತ್ತಾರೆ ಅಂತ.  ಅದೇ ರೀತಿ ನಾನು ಪರ್ಸನಲ್ ಟ್ರೈನರ್ ತೆಗೆದುಕೊಂಡು ಜಿಮ್ ಗೆ ಸೇರಿದೆ.  ಮೊದಲ ದಿವಸ ನನ್ನ ಟ್ರೈನರ್ ಮೊದಲು ಸ್ವಲ್ಪ ಸ್ಟ್ರೆಚಿಂಗ್ ಮಾಡಿಸಿದ. ಅಷ್ಟಕ್ಕೇ ನಾನು ಏದುಸಿರು ಬಿಡತೊಡಗಿದೆ. ಬಾಯೆಲ್ಲ ಒಣಗಿ ದಾಹ ಜಾಸ್ತಿಯಾಯಿತು.  ಕೂಡಲೇ ನೀರು ಕುಡಿಯುವ ಹಾಗಿಲ್ಲ  ಅಂತ ನನ್ನ ಟ್ರೈನರ್ ಹೇಳಿದ.  ನಂತರ ಹತ್ತು ನಿಮಿಷ ಸೈಕ್ಲಿಂಗ್ ಮಾಡಲು ಹೇಳಿದ.  ಹತ್ತು ನಿಮಿಷ ನನಗೆ ಹತ್ತು ಜನ್ಮ ಎತ್ತಿದ ಹಾಗೆ ಆಯಿತು.  ಸೈಕಲ್ ನಿಂದ ಇಳಿದರೆ ಕೈ ಕಾಲು ನಡುಗಿ ನಿಲ್ಲಲು ಆಗುತ್ತಿರಲಿಲ್ಲ.  ನನ್ನ ಟ್ರೈನರ್  ” ಗುಡ್ , ಗುಡ್”  ಅಂತ  ಟ್ರೇಡ್ ಮಿಲ್ ಮೇಲೆ ಹತ್ತು ನಿಮಿಷ  ನಡೆಯಲು ಹೇಳಿದ.  ನನಗೆ ಯಾಕೋ ಇವತ್ತು ಬದುಕುವುದು  ಡೌಟ್ ಅಂತ ಅನಿಸತೊಡಗಿತು.  ಕೂಡಲೇ ಅವನಿಗೆ ” ಇವತ್ತಿಗೆ ಸಾಕು, ನಾಳೆ ಮಾಡಿದರೆ ಆಗಲ್ವಾ ? ” ಅಂತ ಕೇಳಿದೆ.  ಅವನು ”  ಸರ್, ಇನ್ನು  ಮೂವತ್ತೇ ನಿಮಿಷ ಆಗಿದ್ದು,  ಕೊನೆ ಪಕ್ಷ ನಲವತ್ತೈದು ನಿಮಿಷನಾದ್ರು ಮಾಡಿ ಅಂದ.  ಅವತ್ತು ನನಗ ಜೀವನದಲ್ಲೇ ಬಹಳ  ತಪ್ಪು ನಿರ್ದಾರ ಮಾಡಿದೆ  ಅನಿಸತೊಡಗಿತು. ಹತ್ತು ನಿಮಿಷ ನಡೆದಾಗ ನನಗೆ ಸುತ್ತಲೂ ಏನು ಕಾಣದಂತೆ ಮಂಜು ಕವಿದಂತೆ ಆಗುತ್ತಿತ್ತು.  ಅವನಿಗೆ ಅದನ್ನು ಹೇಳಿದೆ. ಅದಕ್ಕೆ ಅವನು ”  ಮೊದಲು ಹಾಗೆ ಅನಿಸುತ್ತೆ ಸರ್, ಏನು ಆಗಲ್ಲ ” ಅಂತ ಹೇಳಿ  ” ಹತ್ತು ಸಿಟ್  ಅಪ್ಸ್ ಮಾಡಿ ಸಾಕು, ಆಮೇಲೆ ರೆಸ್ಟ್ ತೆಗೊಂಡು ಮನೆಗೆ ಹೋಗಿ ” ಅಂದ.   ನಾನು ಸಿಟ್ ಅಪ್ಸ್ ಶುರು ಮಾಡಿದೆ.  ಅವನು ಒಂದು, ಎರಡು, ಮೂರು ಅಂತ ಎಣಿಸಲು ಶುರು ಮಾಡಿದ,  ನಾನು  ಮೂರನೇ ಸಿಟ್ ಅಪ್ ಗೆ  ಮೇಲೆ ಏಳಲೇ ಇಲ್ಲ.  ನನಗೆ ಎಚ್ಚರವಾದಾಗ  ನನ್ನ ಸುತ್ತ  ತುಂಬಾ ಜನ ನಿಂತಿದ್ದರು.  ಟ್ರೈನರ್ ಗಾಬರಿಯಿಂದ ನನ್ನ ಕೈ ಹಿಡಿದು  ಪಲ್ಸ್ ಚೆಕ್ ಮಾಡುತ್ತಾ ಕುಳಿತ್ತಿದ್ದ.    ನಾನು ಎಚ್ಚರ ವಾಗಿದ್ದು ನೋಡಿ  ಟ್ರೈನರ್ ಮುಖದಲ್ಲಿದ್ದ ಆತಂಕ ಸ್ವಲ್ಪ ಕಮ್ಮಿಯಾಯಿತು.   ನಾನು ಎದ್ದು ಕುಳಿತ್ತಿದ್ದು ನೋಡಿ ಎಲ್ಲರು ಮತ್ತೆ ಅವರವರ ವರ್ಕ್ ಔಟ್ ಮಾಡಲು ಹೋದರು.  ಟ್ರೈನರ್ ನನಗೆ ಜ್ಯೂಸು ಕುಡಿಸಿ  ” ಈಗ ಹೇಗಿದೆ ಅಂತ ಕೇಳಿದ”  ನಾನು ” ಪರವಾಗಿಲ್ಲ,  ಎಷ್ಟು ಹೊತ್ತು ಹೀಗೆ ಮಲಗಿದ್ದೆ ” ಅಂತ ಕೇಳಿದೆ.   ಅವನು ” ಸರಿ ಸುಮಾರು ಹತ್ತು ನಿಮಿಷ ಆಗಿತ್ತು” ಅಂತ ಹೇಳಿದ. 

ಹದಿನೈದು ನಿಮಿಷ ಸುಧಾರಿಸಿಕೊಂಡು ಮನೆಗೆ ಹೊರಡಲು ಅನುವಾದೆ. ಪರ್ಸನಲ್ ಟ್ರೈನರ್  ”  ಸರ್, ನಾನೇ ಮನೆಗೆ ಡ್ರಾಪ್ ಮಾಡ್ತೀನಿ ” ಅಂತ ಹೇಳಿ ಮನೆಗೆ ಬಿಟ್ಟು ಹೋದ. ಮನೇಲಿ ನನ್ನ ಕಥೆ ಕೇಳಿ ಎಲ್ಲರು ನಗು ಬಂದರು ತಡೆದುಕೊಂಡು ” ಮೊದಲ ದಿವಸ ಈ ರೀತಿ ಅನೇಕರಿಗೆ ಆಗುತ್ತೆ, ನಾಳೆ ಹೋಗಿ ಸರಿಯಾಗುತ್ತೆ ” ಅಂತ ಹೇಳಿದರು. ಅವರಿಗೆ ಎಲ್ಲಿ ನಾನು ಹೋಗೋದು ನಿಲ್ಲಿಸಿ ಬಿಡ್ತೀನಿ ಅಂತ ಹೆದರಿಕೆ.  ಆದರೆ ನಾನು ನಿಲ್ಲಿಸಲಿಲ್ಲ, ಸರಿ ಸುಮಾರು ಮೂರು ವರುಷಗಳ ಕಾಲ ಹೋದೆ. ಟ್ರೈನರ್ ಕೂಡ ನಾನು ಬರೋದು ಡೌಟ್ ಅಂತ ತಿಳಿದುಕೊಂಡಿದ್ದನಂತೆ ಅವತ್ತಿನ ಘಟನೆ ನಡೆದ ಮೇಲೆ. 

ನಾನು ಜಿಮ್ಮಿಗೆ ಹೋಗಲು ಶುರು ಮಾಡಿ ಆಗಲೇ ಒಂದು ವರುಷಗಳಾಗುತ್ತಾ ಬಂದಿತ್ತು. ನನ್ನ ಜೊತೆ ಜಿಮ್ಮಿಗೆ ಸೇರಿದವರಲ್ಲಿ ಯಾರು ನನ್ನೊಟ್ಟಿಗೆ  ಜಿಮ್ಮಿಗೆ ಬರುತ್ತಿರಲಿಲ್ಲ.  ಆದರೆ ನಾನು ಆ ಜಿಮ್ಮಿಗೆ  ಬಹಳ ಹಳಬನಾಗಿ ಹೋಗಿದ್ದೆ. ಜಿಮ್ ಟ್ರೈನರ್ ಕೂಡ ಬಹಳ ಒಳ್ಳೆಯ ಸ್ನೇಹಿತನಾಗಿ ಹೋಗಿದ್ದ.  ಪ್ರತಿ ದಿನ ಸಂಜೆ ಆರರಿಂದ  ರಾತ್ರಿ ಒಂಬತ್ತು ಗಂಟೆಯವರೆಗೆ  ಅವನೊಟ್ಟಿಗೆ ವರ್ಕ್ ಔಟ್  ಮಾಡಿ ಸ್ವಲ್ಪ ಹೊತ್ತು ಮಾತುಕತೆ ಮಾಡಿ ಆನಂತರ ಮನೆಗೆ ಬರುತ್ತಿದ್ದೆ. ನನ್ನ  ಆಸಕ್ತಿ ನೋಡಿ ಜಿಮ್ ಟ್ರೈನರ್  ನನಗೆ ತುಂಬ ಪ್ರೋತ್ಸಾಹ ನೀಡಿ ಎಲ್ಲ ರೀತಿಯ  ವರ್ಕ್ ಔಟ್  ಮಾಡಿಸುತ್ತಿದ್ದ. ಒಂದೊಂದು ದಿನ ದಿನ ಒಂದೊಂದು ರೀತಿಯ ವರ್ಕ್ ಔಟ್ ,  ಅಂದರೆ  ಒಂದು ದಿನ ಬರಿ ಎದೆಯ ಬಾಗಕ್ಕೆ ವರ್ಕ್ ಔಟ್, ಒಂದು ದಿನ ಕೈ, ಇನ್ನೊಂದು ದಿನ ಕಾಲು, ಆಮೇಲೆ ಹೊಟ್ಟೆ,  ವಾರದ ಕೊನೆಯ ದಿನ ಯೋಗ , ಹೀಗೆ ವರ್ಕ್ ಔಟ್ ಮಾಡಿಸುತ್ತಿದ್ದ.   ಬಾನುವಾರ ರಜಾ ಇರುತ್ತಿದ್ದರಿಂದ ಅವತ್ತು ಬೆಳಿಗ್ಗೆ ಕ್ರಿಕೆಟ್ ಆಡುತ್ತಿದ್ದೆವು.  ಒಂದು ವರುಷದಲ್ಲಿ ದೇಹದ  ತೂಕ ಇಳಿಸಿ,  ದೇಹವನ್ನು ಒಳ್ಳೆಯ ಕಟ್ಟು ಮಸ್ತಾಗಿ ಕಾಣುವಂತೆ ಮಾಡಿಕೊಂಡಿದ್ದೆ.  ಆ ಟ್ರೈನರ್  ಜಿಮ್ಮಿಗೆ ಬರುವವರಿಗೆಲ್ಲ ನನ್ನ ಮತ್ತು ನನ್ನಂತೆ ಕೆಲವರ ಹಳೆಯ  ಮತ್ತು ಈಗಿನ ಫೋಟೋ ತೋರಿಸಿ, ” ಹೇಗಿದ್ರು ಹೇಗಾದ್ರು ”   ನೋಡಿ ಮತ್ತು ಹೇಗೆ ಟ್ರೇನಿಂಗ ಕೊಟ್ಟಿದ್ದೀವಿ  ಅಂತ  ಜನರನ್ನು ಅವನ ಜಿಮ್ಮಿಗೆ ಸೇರಲು ನಮ್ಮನ್ನು  ಉಪಯೋಗಿಸಿಕೊಳ್ಳುತ್ತಿದ್ದ. ಸೇರಿದವರು ನಮಗೂ ಬಹಳ ಗೌರವ ತೋರಿಸುತ್ತಿದ್ದರಿಂದ ನಾವು ಅದಕ್ಕೆ ತಲೆ ಕೆಡಿಸ್ಕೊಳ್ಳುತ್ತಿರಲಿಲ್ಲ. ನಮಗೆ ಅಲ್ಲಿ ಹಿರಿತನ ಬಂದಿದ್ದರಿಂದ  ಹೊಸದಾಗಿ ಸೇರುವವರಿಗೆ ಟ್ರೇನಿಂಗ್  ಕೂಡ ಕೊಡಲು ಶುರು ಮಾಡಿದ್ವಿ.

ಜಿಮ್ಮಿಗೆ ಹೋಗಿ ನಾನು ಅರಿತುಕೊಂಡಿದ್ದು ಏನೆಂದರೆ,  ದೇಹವನ್ನು ದಂಡಿಸಿ ಅದಕ್ಕೆ ಒಂದು ಒಳ್ಳೆಯ ರೂಪ ಕೊಡಿಸಬೇಕೆಂದರೆ  ತಾಳ್ಮೆ ಮತ್ತು ಪಥ್ಯ ಬಹಳ ಮುಖ್ಯ.  ಬಹಳ ಜನಕ್ಕೆ ಎಲ್ಲವು ಬೇಗ ಬೇಗ ಆಗಬೇಕು ಅಂತ ಅವಸರ ಮಾಡಿ ಬೇಡದ  ದಾರಿ ಹಿಡಿದು ಆರೋಗ್ಯ  ಹಾಳು ಮಾಡಿಕೊಂಡಿದ್ದನ್ನು ಕಣ್ಣಾರೆ ನೋಡಿದ್ದೇನೆ. ಅನವಶ್ಯಕ ಪ್ರೋಟೀನ್,  ತೂಕ ಕಳೆದುಕೊಳ್ಳುವುದಕ್ಕೆ ಮಾತ್ರೆಗಳು ಎಲ್ಲವು ತೆಗೆದುಕೊಂಡು ಕೊನೆಗೆ ಯಾವುದೇ ಫಲಿತಾಂಶ ಸಿಗದೇ ಬೇಸತ್ತು ಜಿಮ್ ಬಿಟ್ಟು ಹೋಗುತ್ತಿದ್ದುದ್ದನ್ನು  ನೋಡಿದ್ದೆ.  ಅತಿ ಹೆಚ್ಚಾಗಿ ಜಿಮ್ಮಿಗೆ ಸೇರಲು ಬರುತ್ತಿದ್ದುದು  ಜನವರಿ ತಿಂಗಳಲ್ಲಿ.  ಹೊಸ ವರುಷದ ಹೊಸ ಸಂಕಲ್ಪ ಮಾಡಿಕೊಂಡು ಅನೇಕ ಜನ ಬಂದು ಜಿಮ್ಮಿಗೆ ಸೇರಿಕೊಳ್ಳುತ್ತಿದ್ದರು. ಅದರಲ್ಲಿ ಕೆಲವರಂತೂ ಇಡೀ ವರುಷದ ಶುಲ್ಕ ಕೊಟ್ಟು ಸೇರುತ್ತಿದ್ದರು. ಶುಲ್ಕ ಮೊದಲೇ ಕಟ್ಟಿದರೆ ಸ್ವಲ್ಪ ರಿಯಾಯಿತಿ ಸಿಗುತ್ತೆ ಅನ್ನುವುದಕ್ಕಿಂತಲೂ,  ದುಡ್ಡು ಕೊಟ್ಟಿದ್ದವಲ್ಲ ಅಂತನಾದರೂ ಜಿಮ್ಮಿಗೆ ಬರುತ್ತೇವೆ ಅನ್ನುವ ಒಂದು ಕಲ್ಪನೆ ಅಷ್ಟೇ. ಅವರಲ್ಲಿ ಕೆಲವರು ಅತಿ ಹೆಚ್ಚೆಂದರೆ ಮೂರು ತಿಂಗಳು ಬಂದರೆ ಅದೇ ಜಾಸ್ತಿ.  ಇನ್ನು ಕೆಲವರು ನನ್ನ ಪ್ರಿಯತಮೆಗೆ  ಮಾತು  ಕೊಟ್ಟಿದ್ದೇನೆ, ಸಿಕ್ಸ್ ಪ್ಯಾಕ್ ಮಾಡಲೇ ಬೇಕು ಅಂತ ಬಂದು ಸೇರುತ್ತಾರೆ. ಆದರೆ ಎರಡು ತಿಂಗಳ ನಂತರ ಕಾಣುವುದೇ ಇಲ್ಲ.  ಕೆಲವರಂತೂ  ಜಿಮ್ಮಿಗೆ ಸೇರಿ ಮೊದಲ ವಾರದಲ್ಲಿ ಆಗುವ ನೋವಿಗೆ ಜಿಮ್ ಕಡೆ ಮುಖ ಹಾಕಿ ಕೂಡ ಮಲಗುವುದಿಲ್ಲ. ಹತ್ತು ಜನರಲ್ಲಿ ಒಬ್ಬರು ಮಾತ್ರ ಪ್ರತಿ ದಿನವೂ ಬಂದು ಟ್ರೈನರ್ ಹೇಳಿದ ಹಾಗೆ ಎಲ್ಲ ನಿಯಮಗಳನ್ನು ಪಾಲಿಸಿಕೊಂಡು ಒಳ್ಳೆ ಫಲಿತಾಂಶ ಪಡೆಯುತ್ತಾರೆ. 

ದೇಹಕ್ಕೆ ವ್ಯಾಯಾಮ ಎಷ್ಟು ಮುಖ್ಯವೋ ನಿಯಮಿತ ಆಹಾರ ಮತ್ತು ಪೌಷ್ಟಿಕಾಂಶ ಕೂಡ ಅಷ್ಟೇ ಮುಖ್ಯ.  ಎರಡು ಸಮವಾಗಿದ್ದರೆ ಮಾತ್ರ ನಿಮ್ಮ ದೇಹ ನೀವು ಹೇಳಿದ ಮಾತು ಕೇಳುತ್ತದೆ.  ಅದನ್ನು ಅರ್ಥ ಮಾಡಿಕೊಳ್ಳದೆ ಅನೇಕರು ಜಿಮ್ ಗೆ ಬಂದು,  ಎಷ್ಟು ಬೆವರು ಸುರಿಸಿದರು ಅವರು ಅಂದುಕೊಂಡನಂತೆ ದೇಹದ ಆಕಾರ ಬದಲಾಗುತ್ತಿಲ್ಲ ಅಂತ  ಬೇಸತ್ತು ಅಲ್ಲಿಗೆ ಬಿಟ್ಟು ಬಿಡುತ್ತಾರೆ.   ನೀವು ವರ್ಕ್ ಔಟ್ ಮಾಡಲು ಶುರು ಮಾಡಿದಾಗ  ಮೊದಲು ಎರಡು ತಿಂಗಳು ಬಹಳ ಬೇಗ ತೂಕ ಕಮ್ಮಿಯಾಗುತ್ತೆ, ಆಮೇಲೆ ಮೊದಲು ಕಮ್ಮಿಯಾದಷ್ಟು ಆಗುವುದಿಲ್ಲ.  ಆಗ ನೀವು ತಿನ್ನುವ  ಆಹಾರದ ಶೈಲಿ ಬದಲಾಯಿಸಿಕೊಳ್ಳದೆ ಇದ್ದರೆ ತೂಕವೂ  ಕಮ್ಮಿಯಾಗುವುದಿಲ್ಲ ಹಾಗು ನೀವಂದುಕೊಂಡಂತೆ ದೇಹದ ಆಕಾರವು ಬದಲಾಗುವುದಿಲ್ಲ. ಕೇವಲ ಕೊಬ್ಬು ಕರಗಿಸುವದಷ್ಟೇ ಅಲ್ಲ, ದೇಹಕ್ಕೆ ನೀವು ವ್ಯಾಯಾಮ ಮಾಡುವ ತಾಕತ್ತು ಕೂಡ ಕೊಡುತ್ತ ಹೋಗಬೇಕು. ಆಗ ಮಾತ್ರ ನಿಮಗೆ ಒಳ್ಳೆಯ ಫಲಿತಾಂಶ ಸಿಗುತ್ತದೆ. 

ಹೊಟ್ಟೆ ಹೊರಗಡೆ ಇಣುಕುತ್ತಿದ್ದರೆ, ವಾಕಿಂಗ್ ಎಂಬ ಅಧ್ಯಾಯ ಮುಗಿದು, ಜಿಮ್ ಗೆ ಸೇರಲು ಹೊರಟ್ಟಿದ್ದರೇ ಮೇಲೆ ಹೇಳಿದ ಮಾತುಗಳು ನೆನಪಿರಲಿ. 

– ಶ್ರೀನಾಥ್ ಹರದೂರ ಚಿದಂಬರ 

ಚಿತ್ರ ಕೃಪೆ : ಗೂಗಲ್ 

5 thoughts on “ಜಿಮ್ ಪು(ಹೈ)ರಾಣ !! !!

Leave a comment