ಬ್ಯಾಂಕ್ ಲೂಟಿಯಲ್ಲಿ ಅವರು ದೋಚಿದ್ದು ಒಟ್ಟು ಎಂಬತ್ತು ಕೆಜಿ ಚಿನ್ನ!!

ಅವತ್ತು  ೩೧ ಡಿಸೆಂಬರ್ 2007 ಬೆಳಿಗ್ಗೆ  ಕೇರಳದ ಮಲಪ್ಪುರಂ ಜಿಲ್ಲೆಯ ಚೆಲಂಬ್ರ ಎಂಬ ಊರಿನಲ್ಲಿರುವ ಕೇರಳ ಗ್ರಾಮೀಣ     ಬ್ಯಾಂಕಿನವರು ಬೆಳಿಗ್ಗೆ  ಬ್ಯಾಂಕ್  ಒಳಗಡೆ ಬಂದು, ಲಾಕರ ( ಸ್ಟ್ರಾಂಗ್ ರೂಮ್)  ಕೋಣೆ ತೆರೆದು ನೋಡಿದಾಗ,  ಅಲ್ಲಿ ಕಂಡ ದೃಶ್ಯ ಅವರನ್ನು   ದಂಗು ಬಡಿಸಿಬಿಟ್ಟಿತ್ತು.  ಕಳ್ಳರು ಬ್ಯಾಂಕಿನ ಎಲ್ಲ ಲಾಕರುಗಳ ಜೊತೆಗೆ ಇದ್ದ ಬದ್ದ ದುಡ್ಡನ್ನೆಲ್ಲ  ಲೂಟಿ ಮಾಡಿಕೊಂಡು ಹೋಗಿದ್ದರು.  ಅದು ಅಂತಿಂತ ಲೂಟಿ ಆಗಿರಲಿಲ್ಲ,  ಬ್ಯಾಂಕಿನವರು ಕೊಟ್ಟ ಲೆಕ್ಕದ ಪ್ರಕಾರ ಕಳ್ಳರು ದೋಚಿದ್ದು ಎಂಬತ್ತು ಕೆಜಿ ಚಿನ್ನ ಮತ್ತು  ಐವತ್ತು ಲಕ್ಷ ರೂಪಾಯಿಗಳು. ಆಗಿನ ಚಿನ್ನದ ಬೆಲೆಯ  ಪ್ರಕಾರ ಹತ್ತಿರ ಎಂಟು ಕೋಟಿ ರೂಪಾಯಿಗಳು. ಈ ಲೂಟಿ ಎಷ್ಟು ದೊಡ್ಡ ಸುದ್ದಿ ಆಗಿದ್ದು ಕೇವಲ ಲೂಟಿಯ ದುಡ್ಡಿಗಾಗಿ ಅಲ್ಲ, ಲೂಟಿ ಮಾಡಿದ ರೀತಿಗೆ.  ಕಳ್ಳರು ಅತಿ ಸಿನಿಮೀಯ ರೀತಿಯಲ್ಲಿ ಬ್ಯಾಂಕನ್ನು ಲೂಟಿ ಮಾಡಿಕೊಂಡು ಹೋಗಿದ್ದರು. ಅಂದು ಪೊಲೀಸರಿಗೆ ಇದು ಅತ್ಯಂತ ಕಠಿಣ ಕೇಸ್ ಆಗಿತ್ತು, ಯಾಕೆಂದರೆ ಕಳ್ಳರು ಯಾವುದೇ ಸುಳಿವು ಕೊಡದೆ ಲೂಟಿಮಾಡಿಕೊಂಡು ಹೋಗಿದ್ದರು.  ಕಳ್ಳರ ಲೂಟಿಯ ಯೋಜನೆ ಒಂದೆರಡು ದಿನದಾಗಿರಲಿಲ್ಲ. 

ಕಳ್ಳರು  ಲೂಟಿಯ ಯೋಜನೆಯನ್ನು ಬಹಳ ದಿನಗಳಿಂದ ಮಾಡಿಕೊಂಡು ಬಂದಿದ್ದನು. ಬ್ಯಾಂಕಿನ ಒಳಗಡೆ ಗ್ರಾಹಕರ  ರೀತಿ ಬಂದು ಬ್ಯಾಂಕಿನ ಯಾವ ಯಾವ ಬಾಗದಲ್ಲಿ ಏನೇನಿದೆ ನೋಡಿಕೊಂಡಿದ್ದರು.  ನಂತರ ಬ್ಯಾಂಕಿನ ಕೆಳಗಡೆ ಕಾಲಿ ಇದ್ದ ರೆಸ್ಟೋರೆಂಟ್ ಒಂದನ್ನು  ಐವತ್ತು ಸಾವಿರ ಮುಂಗಡ ಕೊಟ್ಟು ಬಾಡಿಗೆಗೆ ಪಡೆದುಕೊಂಡಿದ್ದರು. ರೆಸ್ಟೋರೆಂಟ್  ಹೊರಗಡೆ ಎಂದಿನಿಂದ ಆರಂಭ, ರೆಸ್ಟೋರೆಂಟಿನ  ಹೆಸರು ಹಾಗು ನವೀಕರಣ ನಡೆಯುತ್ತಿದೆ ಅಂತ ಒಂದು ಬೋರ್ಡ್ ಹಾಕಿದ್ದರು. ಜನವರಿ ಎಂಟಕ್ಕೆ  ರೆಸ್ಟೋರೆಂಟ್ ಆರಂಭವಾಗುತ್ತದೆ ಅಂತಲೂ ಹೇಳಿದ್ದರು. ನವೀಕರಣಕ್ಕೆ ಅನೇಕ ಸಾಮಗ್ರಿಗಳನ್ನು ಕೂಡ ತರಿಸಿ ರೆಸ್ಟೋರೆಂಟ್ ಒಳಗಡೆ ಕೆಲಸ ನಡೆಯುವಂತೆ ತೋರಿಸಿಕೊಂಡಿದ್ದರು. ಬ್ಯಾಂಕಿಗೆ ಬರುವವರು, ಊರಿನ ಜನ ಎಲ್ಲರು  ಸದ್ಯದಲ್ಲೇ ಒಂದು ರೆಸ್ಟೋರೆಂಟ್ ಆರಂಭ ಆಗುತ್ತದೆ ಅಂತಲೇ ಅಂದುಕೊಂಡಿದ್ದರು.  ಆದರೆ ಕಳ್ಳರು ಅವರು ಮಾಡಿಕೊಂಡ   ಯೋಜನೆಯಂತೆ ಸರಿಯಾಗಿ ಬ್ಯಾಂಕಿನ ಲಾಕರ ರೂಮಿನ ಕೆಳಗಡೆ ರೆಸ್ಟೋರೆಂಟಿನ ರೂಫನ್ನು  ನಿಧಾನವಾಗಿ ಕೊರೆಯಲು ಶುರು ಮಾಡಿದ್ದರು. ಬ್ಯಾಂಕಿನವರು ಕೆಳಗಡೆ ಆಗುತ್ತಿದ್ದ ಸದ್ದನ್ನು,  ನವೀಕರಣ ಕೆಲಸ ನಡೆಯುತ್ತಿದೆ ಅಂತ ಗಮನ ಕೊಟ್ಟಿರಲಿಲ್ಲ. ಕಳ್ಳರು ಲೂಟಿಯ ಮಹೂರ್ತವನ್ನು  ಬಾನುವಾರಕ್ಕೆ ಇಟ್ಟುಕೊಂಡಿದ್ದರು. ಯಾಕೆಂದರೆ ಅವರು ಲೂಟಿ ಮಾಡಿದ ವಿಷ್ಯ ಬ್ಯಾಂಕಿನವರಿಗೆ ತಿಳಿಯುವುದು ಮರುದಿನ ಅಂದರೆ ಸೋಮವಾರ, ಅಷ್ಟ್ರಲ್ಲಿ  ಲೂಟಿ ಮಾಡಿ ಆರಾಮಾಗಿ ತಪ್ಪಿಸಿಕೊಂಡು ಬಹಳ ದೂರ ಹೋಗಬಹುದು ಎಂಬ ಉಪಾಯ ಮಾಡಿದ್ದರು. ಬಾನುವಾರ ಬೆಳೆಗ್ಗೆ  ಮೂರರ ಆಸುಪಾಸಿನಲ್ಲಿ ಅವರು ಲಾಕರ ಕೋಣೆಯ ಕೆಳಗಡೆಯ ರೂಫನ್ನು ಗ್ಯಾಸ್ ಕಟರ್ ಉಪಯೋಗಿಸಿ ಕತ್ತರಿಸಿ ಸೀದಾ ಲಾಕರ ಕೋಣೆಗೆ  ಏಣಿ ಇಟ್ಟುಕೊಂಡು  ಕೆಳಗಡೆಯಿಂದ ಮೇಲೆ ಬಂದಿದ್ದರು.  ನಿಧಾನವಾಗಿ ಯಾವುದೇ ಗಡಿಬಿಡಿಯಿಲ್ಲದೆ ಎಲ್ಲ ಲಾಕರ್ಗಳನ್ನು ಒಂದೊಂದೇ ತೆಗೆದು ಅದರಲ್ಲಿದ್ದ ಚಿನ್ನ, ಹಣ ಹಾಗು ಬ್ಯಾಂಕಿನ ದುಡ್ಡನ್ನು ಸಹಿತ ತೆಗೆದುಕೊಂಡು ಜಾಗ ಕಾಲಿ ಮಾಡಿದ್ದರು. ಅವತ್ತು ಕಳ್ಳರು  ಕೂಡ ಅಷ್ಟು ದುಡ್ಡು ಮತ್ತು ಹಣ ಲೂಟಿ ಮಾಡುತ್ತೀವಿ  ಅಂದುಕೊಂಡಿರಲಿಲ್ಲ ಅನಿಸುತ್ತೆ. 

ಲೂಟಿ ಮಾಡಿಕೊಂಡು ಬರುವಾಗ  ಬ್ಯಾಂಕಿನ ಗೋಡೆಯ ಮೇಲೆ ” ಜೈ ಮಾವೋ” ಅಂತ ಬರೆದು ಹೊರಟ್ಟಿದ್ದರು.  ನಕ್ಸಲರ ಕೈವಾಡ ಇದು ಅಂತ,  ಪೊಲೀಸರ ದಿಕ್ಕು ತಪ್ಪಿಸಲು ಅವರು ಮಾಡಿದ ಮೊದಲ ಪ್ರಯತ್ನ.  ಕಳ್ಳರ  ತಂಡ ಲೂಟಿ ಮಾಡಿ, ಅಲ್ಲಿಂದ  ಒಂದು ಹೋಟೆಲ್ಗೆ ಹೋಗಿ ಅಲ್ಲಿ ರೂಮ್ ಮಾಡಿಕೊಂಡು ಒಂದೆರಡು ದಿನ ಅಲ್ಲಿದ್ದು, ಹೊರಗಡೆ ನಡೆಯುತ್ತಿದ್ದ ಎಲ್ಲಾ ವಿದ್ಯಮಾನಗಳನ್ನು ಗಮನಿಸುತ್ತಾ ಇದ್ದು,  ಮೊದಲೇ ಮಾಡಿಕೊಂಡ ಯೋಜನೆಯಂತೆ ಹೋಟೆಲ್ಲಿನ ಫೋನ್ ಉಪಯೋಗಿಸಿಕೊಂಡು ಬೇರೆ ರಾಜ್ಯಗಳ ಅನೇಕ ಕಡೆ ಫೋನ್ ಮಾಡಿದ್ದರು.  ಪೊಲೀಸರಿಗೆ ಬೇರೆ ಬೇರೆ ಸ್ಥಳಗಳಿಂದ  ಫೋನ್ ಮಾಡಿ ಲೂಟಿ ಮಾಡಿದವರು ಅಲ್ಲಿದ್ದಾರೆ, ಇಲ್ಲಿದ್ದಾರೆ ಅಂತ ಫೋನ್ ಮಾಡಿ ಪೊಲೀಸರ ದಿಕ್ಕು ತಪ್ಪಿಸಲು ಪ್ರಯತ್ನ ಮಾಡುತ್ತಿದ್ದರು.  ಕೊನೆಗೆ ಯೋಜನೆಯಂತೆ ಹೈದೆರಾಬಾದಿನ ಒಂದು ಹೋಟೆಲ್ನಲ್ಲಿ  ಇದ್ದಾರೆ ಅಂತ ಹೇಳಿ ತಾವು ಉಳಿದುಕೊಂಡಿದ್ದ ಹೋಟೆಲಿನ ವಿಳಾಸ ಕೊಟ್ಟರು. ಪೊಲೀಸ್ನವರು ಅಲ್ಲಿಗೆ ಬರುವುದರೊಳಗೆ  ಒಂದು ಕೆಜಿ ಚಿನ್ನವನ್ನು ತಾವಿದ್ದ ಹೋಟೆಲ್ ರೂಮ್ನಲ್ಲಿ ಇಟ್ಟು, ಹೋಟೆಲ್ಲಿನ ಬಿಲ್ಲು ಸಹಿತ ಕೊಡದೆ ಅಲ್ಲಿಂದ ಪರಾರಿಯಾದರು. ಪೊಲೀಸ್ ಹೋಟೆಲ್ಲಿನ ರೂಮನ್ನು ಕೂಲಂಕುಷವಾಗಿ ಪರಿಶೀಲಿಸಿ, ಅವರು ಯಾವ ಯಾವ ಊರಿಗೆ ಫೋನ್ ಮಾಡಿದ್ದರು ಅಂತ ಡೀಟೇಲ್ಸ್ ತೆಗೆದುಕೊಂಡು, ಅಲ್ಲಿಂದ ಏನಾದರು ಸುಳಿವು ಸಿಗುವುದೋ ಅಂತ ಪತ್ತೆ ಮಾಡತೊಡಗಿದರು. ಆದರೆ ಪೊಲೀಸರಿಗೆ ಅದು ಕೂಡ  ತಮ್ಮ ತನಿಖೆಯ ದಿಕ್ಕನ್ನು  ಬೇರೆ ಕಡೆ ಸೆಳೆಯಲು ಕಳ್ಳರು ಮಾಡಿದ  ಯೋಜನೆ ಅಂತ ತಿಳಿಯಲು ಬಹಳ ಕಾಲ ಬೇಕಾಗಲಿಲ್ಲ.  

ಪೊಲೀಸರು  ಬೇರೆ ಬೇರೆ ತಂಡಗಳಾಗಿ ಕೆಲಸ ಶುರು ಮಾಡಲು ಶುರು ಮಾಡಿದ್ದರು. ಒಂದು ತಂಡದ ಪೊಲೀಸರು ರೆಸ್ಟೋರೆಂಟ್ ಬಾಡಿಗೆ ತೆಗೆದುಕೊಳ್ಳಲು ಅದರ ಮಾಲೀಕನ ಹತ್ತಿರ ಯಾರು ಬಂದಿದ್ದು ಅಂತ ಪರಿಶೀಲನೆ ಮಾಡಿದಾಗ, ಅಗ್ರೀಮೆಂಟ್ಗೆ ಕೊಟ್ಟ ಡೀಟೇಲ್ಸ್ ಎಲ್ಲವು ಬೋಗಸ್ ಆಗಿತ್ತು. ಮಾಲಿಕನು ಕೇವಲ ಎರಡು ಮೂರು ಬಾರಿ ಮಾತ್ರ ಅವನ ಹತ್ತಿರ ಮಾತನಾಡಲು ಬಂದವನನ್ನು ನೋಡಿದ್ದು.  ಕಂಪ್ಯೂಟರ್ ಗ್ರಾಫಿಕ್ಸ್  ಸಹಾಯದಿಂದ ಅವನ ಮುಖಚಹರೆಯನ್ನು ಬರೆಸಿಕೊಂಡು, ಅದರ ಮೂಲಕ ಆ ವ್ಯಕ್ತಿ ಯಾರು ಅಂತ ಪತ್ತೆ ಹಚ್ಚಲು ಪ್ರಯತ್ನ ಪಡತೊಡಗಿದರು.  ಬ್ಯಾಂಕಿನ ಸುತ್ತ ಮುತ್ತ ಇದ್ದ  ಜನರಲ್ಲಿ  ರೆಸ್ಟೋರೆಂಟ್ ಬಂದು ಹೋಗುತ್ತಿದ್ದವರ ಮುಖ ಚಹರೆಯನ್ನು  ನೋಡಿದವರ  ಹತ್ತಿರ ಸಹಾಯ ಕೂಡ ಪಡೆದರು.  ಆದರೆ ಅದರಿಂದ ತನಿಖೆಗೆ ಯಾವುದೇ ಸಹಾಯ ಆಗಲಿಲ್ಲ.  ಬ್ಯಾಂಕಿನ ಲಾಕರ ರೂಮಿನಲ್ಲಿ ಸಿಕ್ಕಿದ ಬೆರಳಚ್ಚುಗಳನ್ನು ಹಳೆಯ ಕಳ್ಳರ ಬೆರಳಚ್ಚಿನ ಜೊತೆ ಹೋಲಿಕೆ ಮಾಡಿ ನೋಡ ತೊಡಗಿದರು. ಆದರೆ ಇವೆಲ್ಲ ಮಾಡಲಿಕ್ಕೆ ಬಹಳ ಸಮಯ ಹಿಡಿಯುತ್ತಿತ್ತು. ಅಷ್ಟ್ರಲ್ಲಿ ಕಳ್ಳರು ತಪ್ಪಿಸಿಕೊಂಡು ಹೋಗಲಿಕ್ಕೆ ಸಮಯ ಸಿಕ್ಕ ಹಾಗೆ ಆಗುತ್ತೆ ಅಂತ ಪೊಲೀಸರಿಗೆ ಗೊತ್ತಿತ್ತು. ಆದ್ದರಿಂದ  ಕಷ್ಟದ ಕೆಲಸ ಆದರೂ ಬೇಗ ಪತ್ತೆ ಆಗುವ ಒಂದು  ದಾರಿ ಹಿಡಿದರು. 

ಬ್ಯಾಂಕಿನಲ್ಲಿ ಲೂಟಿ ನಡೆಯುವ ದಿನ ಹಾಗು ರೆಸ್ಟೋರೆಂಟ್ ಕೆಲಸ ನಡೆಯುತ್ತಿದ್ದ ದಿನದಲ್ಲಿ ಆಕ್ಟಿವ್ ಇದ್ದ ಯಾವುದಾದರೂ ಒಂದೇ ಫೋನ್ ನಂಬರ್  ಸಿಗುವುದೋ ಅಂತ ಹುಡುಕಲು ಶುರು ಮಾಡಿದರು.  ಪೊಲೀಸರಿಗೆ ಸರಿ ಸುಮಾರು ಲಕ್ಷದ ಮೇಲೆ ಫೋನ್ ನಂಬರ್ಗಳನ್ನು ( ಡಂಪ್ ಡೇಟಾ) ವಿವಿಧ ನೆಟ್ವರ್ಕ್ ಪ್ರೊವೈಡರ್ಗಳು ನೀಡಿದರು.  ಬೆಟ್ಟದಷ್ಟು ಇದ್ದ ಫೋನ್ ನಂಬರ್ಗಳಲ್ಲಿ    ಐ ಟಿ ಡಿಪಾರ್ಟ್ಮೆಂಟ್ ಹಾಗು ಫೋನ್ ನೆಟ್ವರ್ಕ್ ಕೊಡುವವರ ಸಹಾಯದಿಂದ ಒಂದು ನಂಬರನ್ನು ಪೊಲೀಸರು ಪತ್ತೆ ಮಾಡಿದರು.  ಆ ನಂಬರ್ ಸತತವಾಗಿ ರೆಸ್ಟ್ರೊರೆಂಟ್ ಸುತ್ತಮುತ್ತ, ಹಾಗು ಲೂಟಿ ನಡೆದ ದಿವಸ,  ಹಾಗು ಹೈದೆರಾಬಾದ್ ಹೋಟೆಲ್ಲಿನ ಹತ್ತಿರ ಆಕ್ಟಿವ್ ಇತ್ತು. ಪೊಲೀಸರಿಗೆ ಮೊದಲ ಸುಳಿವು ಆ ಫೋನ್ ನಂಬರ್ ಕೊಟ್ಟಿತ್ತು.    ಆ ನಂಬರ್  ಮತ್ತು  ಅದರ ಜೊತೆಗೆ ಸತತ ಸಂಪರ್ಕ ಹೊಂದಿದ್ದ ಇನ್ನೆರಡು  ಎರಡು ನಂಬರ್ಗಳನ್ನು  ಪತ್ತೆ ಮಾಡಿದರು.  ಮೂರು ಫೋನ್ ನಂಬರ್ಗಳು ರೆಸ್ಟೋರೆಂಟ್ ಬಾಡಿಗೆ ಪಡೆದಾಗಿನಿಂದ ಅದೇ ಜಾಗದಲ್ಲಿ ಆಕ್ಟಿವ್ ಆಗಿದ್ದವು. ಲೂಟಿ ಮಾಡಿವ ಸಮಯದಲ್ಲಿ ಕೂಡ  ಅಲ್ಲೇ ಆಕ್ಟಿವ್ ಆಗಿದ್ದವು. ಹೈದೆರಾಬಾದ್ ಹೋಟೆಲ್ನಲ್ಲೂ ಒಂದೇ ಜಾಗದಲ್ಲಿ ಆಕ್ಟಿವ್ ಇದ್ದವು. ಪೊಲೀಸರಿಗೆ ಲೂಟಿಕೋರರು ಇವರೇ ಎಂದು ಖಚಿತವಾಗಿ ಹೋಗಿತ್ತು. 

ಪೊಲೀಸರಿಗೆ  ಆ ಮೂರು ನಂಬರ್ಗಳು ಒಟ್ಟಿಗೆ ಒಂದೇ ಊರಿನಲ್ಲಿ ಇರುವ ಸುಳಿವು ಸಿಕ್ಕಿತು. ಆ ಮೂವರು ಇದ್ದ ಜಾಗದ ಹೆಸರು ಕೋಝೀಕೋಡೆ. ಅವರು ಯಾವ ಮನೆಯಲ್ಲಿ ಇದ್ದಾರೆ ಅನ್ನುವುದನ್ನು ಪತ್ತೆ ಮಾಡಲು ಬಹಳ ಸಮಯ ಬೇಕಾಗಿರಲಿಲ್ಲ ಪೊಲೀಸರಿಗೆ. ಕೆಲವೇ ಗಂಟೆಗಳಲ್ಲಿ ಮೂವರನ್ನು ಅರೆಸ್ಟ್ ಮಾಡಲು ಪೊಲೀಸರು ಮನೆಗೆ ನುಗ್ಗಿದಾಗ ಗೊತ್ತಾಗಿದ್ದು ಅವರು ಮೂವರಲ್ಲ ನಾಲ್ವರು ಎಂಬುದು.  ಆ ಕಳ್ಳರ ಗುಂಪಿನ ನಾಯಕನ ಹೆಸರು ಜೈಸನ್ ಅಲಿಯಾಸ್ ಜೋಸೆಫ್ ಅಲಿಯಾಸ್ ಬಾಬು. ಅವನೊಟ್ಟಿಗೆ ಒಟ್ಟು ಮೂರು ಮಂದಿ ಸೇರಿಕೊಂಡಿದ್ದರು. ರಾಜೇಶ್,  ರಾಧಾಕೃಷ್ಣನ್ ಮತ್ತು ಅವನ ಹೆಂಡತಿ ಕನಕೇಶ್ವರಿ. ಲೂಟಿ ಮಾಡಿದ  ಚಿನ್ನ ಮತ್ತು ದುಡ್ಡು ಎಂಬತ್ತು ಶೇಕಡಾ ಅದೇ ಜಾಗದಲ್ಲಿ ಪೊಲೀಸರಿಗೆ ಸಿಕ್ಕಿತು. ಉಳಿದದ್ದನ್ನು ಸಹಿತ ಕೆಲವೇ ದಿನಗಳಲ್ಲಿ ಪೊಲೀಸರು ಪತ್ತೆ ಮಾಡಿದರು. ಕೇರಳ ಕೋರ್ಟ್ ಜೈಸನ್, ರಾಜೇಶ್ ಮತ್ತು ರಾಧಾಕೃಷ್ಣನ್ ಗೆ  ಹತ್ತು ವರುಷ ಹಾಗು ಕನಕೇಶ್ವರಿ ಗೆ ಐದು ವರುಷ ಶಿಕ್ಷೆ ವಿಧಿಸಿತು. 

ಅರೆಸ್ಟ್ಪೊ ಆದಾಗ ಪೋಲಿಸರಿಗೆ ಅವರು ಹೇಳಿದ್ದೇನು ಗೊತ್ತಾ ?    ಇಂತ ಲೂಟಿಗೆ ಪ್ರೇರಣೆ ನೀಡಿದ್ದು ಒಂದು ಸಿನಿಮಾ ಅಂತೇ. ಆ ಸಿನೆಮಾದ ಹೆಸರು ” ಧೂಮ್”. 

– ಶ್ರೀನಾಥ್ ಹರದೂರ ಚಿದಂಬರ 

5 thoughts on “ಬ್ಯಾಂಕ್ ಲೂಟಿಯಲ್ಲಿ ಅವರು ದೋಚಿದ್ದು ಒಟ್ಟು ಎಂಬತ್ತು ಕೆಜಿ ಚಿನ್ನ!!

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s