ಹಾಗೆ ಹೀಗೆ ಎಂದು ಅಂದುಕೊಳ್ಳುವುದು ಏಕೆ? ನೇರವಾಗಿ ಕೇಳಿಬಿಡಿ.

ಬೆಳಿಗ್ಗೆ ಎದ್ದು ಮೊಬೈಲ್ ಪರದೆ ತೆರೆದಾಗ ಫೇಸ್ಬುಕ್ ನಲ್ಲಿ ಕೆಲವು ಫ್ರೆಂಡ್ ರಿಕ್ವೆಸ್ಟ್ ಬಂದಿದ್ದವು. ಯಾರು ಅಂತ ನೋಡುವಾಗ ಒಬ್ಬ ಸ್ನೇಹಿತೆಯ ರಿಕ್ವೆಸ್ಟ್ ನೋಡಿ ಬಹಳ ಆಶ್ಚರ್ಯ ಆಯಿತು.  ಬರೋಬ್ಬರಿ ಇಪ್ಪತ್ತೈದು  ವರುಷಗಳ ಹಿಂದಿನ ಪರಿಚಯ ಅವಳದು,  ಹೈಸ್ಕೂಲು ಮತ್ತು ಕಾಲೇಜು ಓದುವಾಗ ನನ್ನ  ತರಗತಿಯಲ್ಲೇ ಓದುತ್ತಿದ್ದಳು.  ನನ್ನ ಆತ್ಮೀಯ ಸ್ನೇಹಿತೆ ಅಂತಾನೂ ಹೇಳಲಿಕ್ಕೆ ಆಗಲ್ಲ. ನನ್ನ ಆತ್ಮೀಯ  ಸ್ನೇಹಿತ, ಸ್ನೇಹಿತೆಯರ ಜೊತೆಗೆ ಇದ್ದಾಗ ಅವಳು ಕೂಡ ಅಲ್ಲಿ ಇದ್ದರೆ ಆಗಾಗ ನನ್ನ ಜೊತೆ ಮಾತನಾಡುತ್ತಿದ್ದಳು ಅಷ್ಟೇ.  ಕಾಲೇಜು ದಿನಗಳು ಮುಗಿಯುವ ಸಮಯದಲ್ಲಿ ಇದ್ದಕ್ಕಿದ್ದಂತೆ ನನ್ನ ಜೊತೆ ಮಾತು ನಿಲ್ಲಿಸಿಬಿಟ್ಟಿದ್ದಳು. ನಾನು ಯಾಕೆ ಅಂತ ಕೇಳಲು ಹೋಗಿರಲಿಲ್ಲ. ನನ್ನ ಕಾಲೇಜು ದಿನಗಳ ನಂತರ ಅವಳ ಜೊತೆಗಿನ  ಸಂಪರ್ಕ ತಪ್ಪಿ ಹೋಗಿತ್ತು.    ಕಾಲೇಜು ಮುಗಿಸಿ ನಾನು ನನ್ನ  ಮುಂದಿನ ಜೀವನದ  ಪಯಣ ಶುರು ಮಾಡಿದ್ದೆ.   ಆ ಪಯಣದಲ್ಲಿ ನನಗೆ ಅವಳ ನೆನಪು ಆಗುವಷ್ಟು ಕೂಡ ಸಮಯ ಇರಲಿಲ್ಲ.  ಹಾಗಾಗಿ ಅವಳ ಫ್ರೆಂಡ್ ರಿಕ್ವೆಸ್ಟ್ ನೋಡಿ ಸ್ವಲ್ಪ ಆಶ್ಚರ್ಯ ಆಗಿದ್ದಂತೂ ನಿಜ. 

ನಾನು ರಿಕ್ವೆಸ್ಟ್ ಅನುಮೋದಿಸಿ ಕೆಲವು ದಿನಗಳ ನಂತರ ಆ ವಿಷಯ ಮರೆತೇ ಹೋಗಿತ್ತು.  ಒಂದು ದಿನ ಹಾಯ್ ಅಂತ ಅವಳಿಂದ ಮೆಸೇಜ್ ಬಂತು. ನಾನು ಹಾಯ್ ಎಂದೇ.  ಹೇಗಿದ್ದೀಯ , ಎಲ್ಲಿದ್ದೀಯ… ಹೀಗೆ ಮಾತುಗಳು ಶುರುವಾದವು.  ನಾನು ಸಾಮಾನ್ಯವಾಗಿ  ಮೊಬೈಲ್ ಚಾಟ್ ಮಾಡವುದಿಲ್ಲ.  ಮೊಬೈಲ್ ನಲ್ಲಿ ಹತ್ತು ವಾಕ್ಯ ಬರೆಯುವ ಸಮಯದಲ್ಲಿ  ನೂರು ಮಾತುಗಳನ್ನು ಆಡಬಹುದು ಅಂತ ಅನ್ನುವ ಜಾಯಮಾನದವನು. ಹಾಗಾಗಿ ನಿನ್ನ ಫೋನ್ ನಂಬರ್ ಕೊಡು ಕಾಲ್ ಮಾಡ್ತೀನಿ ಅಂದೇ. ಫೋನ್ ನಂಬರ್ ಸಿಕ್ಕ  ಮೇಲೆ ಫೋನ್ ಮಾಡಿ ಮಾತನಾಡಲು ಶುರು ಮಾಡಿದೆ. ಅವಳ ಕೆಲಸದ  ಬಗ್ಗೆ, ಅವಳ ಗಂಡ, ಮಕ್ಕಳ ಬಗ್ಗೆ, ಹೆಳೆಯ ಕಾಲೇಜು ನೆನಪುಗಳು, ನಮ್ಮ ತಮಾಷೆಗಳು…ಹೀಗೆ ಅನೇಕ ವಿಷಯಗಳು ಬಂದು ಹೋದವು.  ಕೊನೆಗೆ ನಾನು ಅವಳು  ನನ್ನ ಹತ್ತಿರ ಮಾತನಾಡುವುದು ಬಿಟ್ಟಿದ್ದು ಯಾಕೆ ಅಂತ ಕೇಳಿದೆ. ಅವಳು ಹೇಳಿದ್ದು ಕೇಳಿ ನನಗೆ ಸ್ವಲ್ಪ ಆಘಾತ ಕೂಡ ಆಯಿತು. ಅವಳ ಊರಿನ ಒಬ್ಬ ಹುಡುಗಿ( ನಾನು ಓದಿದ ಕಾಲೇಜಿನಲ್ಲೇ ಓದುತ್ತಿದ್ದಳು), ಅವಳ ಒಳ್ಳೆ ಸ್ನೇಹಿತೆ ಅಂತೇ,  ಅವಳು ಮತ್ತು ಅವಳ ಪ್ರೇಮಿ ( ನನ್ನ ಸ್ನೇಹಿತನಂತೆ ) ಮದ್ಯೆ ಇದ್ದ ಪ್ರೀತಿಗೆ  ಹುಳಿ ಹಿಂಡಿದ್ದು ನಾನು ಅಂತ ಅಂದುಕೊಂಡಿದ್ದಳಂತೆ. ಇತ್ತೀಚಿಗೆ ಅವಳ ಸ್ನೇಹಿತೆ ಜೊತೆಗೆ ಹೆಳೆಯದಲ್ಲ ಮಾತನಾಡುವಾಗ, ಈ ವಿಷಯ ಬಂದು, ಅವರ ಪ್ರೀತಿ ಹಾಳಾಗಲಿಕ್ಕೆ ನಾನು ಕಾರಣ ಅಲ್ಲ ಗೊತ್ತಾದ ಮೇಲೆ  ತಪ್ಪು ಮಾಡಿದೆ  ಅಂತ ಅನಿಸಿತಂತೆ.  ಫೇಸ್ಬುಕ್ ನಲ್ಲಿ ಹುಡುಕುವಾಗ ನನ್ನ ಪ್ರೊಫೈಲ್ ಸಿಕ್ಕು   ನನಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದು ಅಂತ ಹೇಳಿದಳು.  ಅದಕ್ಕೆ ನಾನು ನೀನು ಆ ರೀತಿ ಅಂದುಕೊಳ್ಳುವುದಕ್ಕಿಂತ ನನ್ನ ಜೊತೆ ನೇರವಾಗಿ ಮಾತನಾಡಿದ್ದರೆ ಬಹಳ  ಹಿಂದೇನೆ ನಿನ್ನ ಅನುಮಾನ ಪರಿಹಾರ ಆಗುತ್ತಿತ್ತಲ್ವಾ ? ಎಂದು ಕೇಳಿದೆ. ಅದಕ್ಕೆ ಅವಳು ಏನು ಉತ್ತರ ಕೊಡಲಿಲ್ಲ. ಹೇಗೆ ಕೊಡಲು ಸಾಧ್ಯ?

ಅನೇಕ ಬಾರಿ ನಮ್ಮ ಜೀವನದಲ್ಲಿ ನಾವು ಬೇರೆಯವರ ಬಗ್ಗೆ,  ಯಾವುದೊ ಒಂದು ಘಟನೆ ನಡೆದ ಮೇಲೆ, ಅವರ ಹತ್ತಿರ ನೇರವಾಗಿ ಯಾಕೆ ಹೀಗೆ ಮಾಡಿದಿರಿ? ಅಂತ ಕೇಳಿ  ನಮ್ಮ ಅನುಮಾನ ಪರಿಹಾರ ಮಾಡಿಕೊಳ್ಳದೆ,   ನಮಗೆ ಹೇಗೆ ಬೇಕೋ ಹಾಗೆ, ಹಿಂದಿನ ಅನೇಕ ವಿಷಯಗಳನ್ನು ಒಂದೊಕ್ಕೊಂದು ಸೇರಿಸಿಕೊಂಡು, ಹಾಗಿರಬಹುದು, ಹೀಗಿರಬಹುದು ಅಂತ  ಅಂದುಕೊಳ್ಳುವುದರಿಂದ,  ಮುಂದೆ ನಮಗೆ ನಿಜ ತಿಳಿದರು  ಅದಕ್ಕೆ ನಾವು  ಉತ್ತರ ಕೊಡಲಾಗುವುದಿಲ್ಲ.  ಇಂತಹ ಸನ್ನಿವೇಶಗಳಲ್ಲಿ ಒಂದು ವಿಷಯ ನಮ್ಮ ಗಮನದಲ್ಲಿ ಇರಬೇಕಾದ್ದು ಏನೆಂದರೆ ನಾವು ಅಂದುಕೊಳ್ಳುತ್ತಿರುವುದು ನಮ್ಮ ಪರಿಚಯ ಇರುವವರ, ಸ್ನೇಹಿತರ, ಬಂದುಗಳ  ಬಗ್ಗೆ ಹಾಗು ಅವರ್ಯಾರು ನಮಗೆ ಅಪಚರಿತರಲ್ಲ.  ಹೀಗಿರಬೇಕಾದರೆ ನಾವೇಕೆ ಬೇಡದ ಕಲ್ಪನೆ ಮಾಡಿಕೊಳ್ಳುತ್ತ, ಒಂದಕ್ಕೆ ಇನ್ನೊಂದು ಸೇರಿಸಿಕೊಳ್ಳುತ್ತ ಅವರ ಬಗ್ಗೆ ಅವರು  ಹಾಗೆ ಮಾಡಿರಬಹುದು, ಹೀಗೆ ಮಾಡಿರಬಹುದು ಅಂತ ಅಂದುಕೊಳ್ಳಬೇಕು. ನೇರವಾಗಿ ಕೇಳಿದರೆ ಏನೆಂದುಕೊಳ್ಳುತ್ತಾರೆ ಅಂತ ಯೋಚಿಸಲು ಅವರೇನು ನಮಗೆ  ಹೊಸಬರಲ್ಲವಲ್ಲ,  ಅವರು ನಮ್ಮೊಡನೆ ಒಡನಾಟ ಇಟ್ಟುಕೊಂಡವರೇ ತಾನೇ, ಮತ್ತೇಕೆ ನೇರವಾಗಿ ಕೇಳಲು ಸಂಕೋಚ ?  ನಮ್ಮ ಅನುಮಾನ ತಪ್ಪಿದ್ದರೆ ಕ್ಷಮೆ ಕೇಳೋಣ. ಅವರ ತಪ್ಪಿದ್ದರೆ ಅದನ್ನು ತಿಳಿಹೇಳೋಣ.   ಅವರು ಮಾಡಿದ್ದು ತಪ್ಪಿದ್ದರೂ,  ನಮ್ಮನ್ನು ದೂರ ಮಾಡಿದರೆ,  ಅಂಥವರಿಂದ ದೂರ ಇರುವುದೇ ಒಳ್ಳೆಯದು ಅಲ್ಲವೇ.  ನಾವೇನೋ ಅಂದುಕೊಂಡು ದೂರ ಮಾಡಿಕೊಳ್ಳುವುದರ ಬದಲು,  ನಾವು ಮಾಡಿದ್ದು ಸರಿ ಅನ್ನುವ ಸಮಾಧಾನ ಕೊನೆಯವರೆಗೂ ಉಳಿದುಕೊಳ್ಳುತ್ತದೆ ಅಲ್ಲವೇ. 

ಅನವಶ್ಯಕವಾಗಿ ಅಂದುಕೊಳ್ಳುವದನ್ನು ಬಿಟ್ಟು,  ನೇರವಾಗಿ ಕೇಳುವುದನ್ನು  ಹಾಗು ಹೇಳುವುದನ್ನು ರೂಡಿಸಿಕೊಂಡರೆ ಒಬ್ಬರ ಮೇಲಿನ ಅನೇಕ ತಪ್ಪು ಕಲ್ಪನೆಗಳು ಹೊರಟುಹೋಗಿ ಅವರನ್ನು ಅರ್ಥ ಮಾಡಿಕೊಳ್ಳುವುದರ ಜೊತೆಗೆ,  ನಮ್ಮನ್ನು  ಅವರು  ಕೂಡ  ಸರಿಯಾಗಿ ಅರ್ಥಯಿಸಿಕೊಳ್ಳುತ್ತಾರೆ.  ಇದರಿಂದ ಸಂಬಂಧ,  ಸ್ನೇಹ, ಪ್ರೀತಿ, ವಿಶ್ವಾಸ, ನಂಬಿಕೆ ಕೊನೆಯವರಿಗೂ ಉಳಿಯುತ್ತದೆ ಅಲ್ವಾ ? 

ಬರೆದಿದ್ದು ಯಾಕೆ, ಯಾರಿಗೆ ಅಂತ ಏನೇನೋ  ಅಂದುಕೊಳ್ಳಬೇಡಿ,   ಆ ರೀತಿ ಅನಿಸಿದರೆ ನೇರವಾಗಿಯೇ ಕೇಳಿ ಬಿಡಿ. 

-ಶ್ರೀನಾಥ್ ಹರದೂರ ಚಿದಂಬರ 

ಚಿತ್ರ ಕೃಪೆ: ಗೂಗಲ್ 

7 thoughts on “ಹಾಗೆ ಹೀಗೆ ಎಂದು ಅಂದುಕೊಳ್ಳುವುದು ಏಕೆ? ನೇರವಾಗಿ ಕೇಳಿಬಿಡಿ.

Leave a comment