ಒಂದು ರಾಗಿ ಮುದ್ದೆಯ ಕಥೆ !!

ಅಲ್ಲಿ ಸಾಲಾಗಿ ನಿಂತಿದ್ದ ತಳ್ಳು ಗಾಡಿಗಳಲ್ಲಿ, ಮಾರುತಿ ಓಮ್ನಿಯಲ್ಲಿ ಬಿಸಿ ಬಿಸಿ ರಾಗಿ ಮುದ್ದೆ ಊಟ, ತಟ್ಟೆ ಇಡ್ಲಿ, ಪುಲಾವ್, ಬಿರ್ಯಾನಿ… ಹೀಗೆ ಒಬ್ಬೊಬ್ಬರ ಹತ್ತಿರ ಒಂದೊಂದು ವಿಧದ ಊಟ ಸಿಗುತ್ತಿತ್ತು. ಮದ್ಯಾಹ್ನ ಊಟದ ವೇಳೆಗೆ,   ಸುತ್ತ ಮುತ್ತಲು ಇದ್ದ ಅನೇಕ ಕಂಪನಿಗಳಿಂದ ಕೆಲಸಗಾರರು ಅಲ್ಲಿಗೆ ಬಂದು ಅವರ ಬಾಯಿ ರುಚಿಗೆ ತಕ್ಕಂತೆ ಊಟ ಮಾಡಿ ಹೋಗುತ್ತಿದ್ದರು.   ಕಂಪನಿಯಿಂದ ಕೆಲವರು ಗುಂಪಾಗಿ ಬಂದರೆ, ಕೆಲವರು ಒಬ್ಬರೇ ಬಂದು,  ಅವರಿಗೆ ಬೇಕಾದ ಊಟ ಮಾಡಿ ಹೋಗುತ್ತಿದ್ದರು. ಕೃಷ್ಣ ಮತ್ತು ಆತನ ನಾಲಕ್ಕು ಸ್ನೇಹಿತರು ಕೂಡ ಅದೇ ರೀತಿ ಬಂದು,  ದಿನವೂ ಅವರ ಮೆಚ್ಚಿನ ರಾಗಿ ಮುದ್ದೆ ಊಟ ಮಾಡಿ ಹೋಗುತ್ತಿದ್ದರು. ವಾರದಲ್ಲಿ ನಾಲಕ್ಕು  ದಿವಸ ರಾಗಿ ಮುದ್ದೆ ಊಟ, ಮತ್ತು  ವಾರದ ಕೊನೆ ದಿವಸ ಬಿರ್ಯಾನಿ ತಿನ್ನುವುದು ಅವರ ವಾಡಿಕೆ. ದಿನವು ಹೋಗುತ್ತಿದ್ದರಿಂದ ಮುದ್ದೆ ಊಟ ಮಾರುವವನು  ಪರಿಚಯ ಆಗಿದ್ದನು. ಹಾಗಾಗಿ ಇವರು ಮೊದಲು ಊಟ ಮಾಡಿ,  ವಾಪಸು  ಹೋಗುವಾಗ ದುಡ್ಡು ಕೊಟ್ಟು ಹೋಗುತ್ತಿದ್ದರು.  ಕೆಲವೊಮ್ಮೆ ದುಡ್ಡು ಕೊಡದೆ ಮಾರನೇ ದಿವಸದ್ದು ಸೇರಿಸಿ ಕೊಟ್ಟಿದ್ದು ಇರುತ್ತಿತ್ತು. ಅಷ್ಟು ಪರಿಚಯ ಆಗಿ ಹೋಗಿತ್ತು ಅವನೊಂದಿಗೆ.  

ದಿನ ನಿತ್ಯದಂತೆ ಅವತ್ತು ಕೂಡ ಕೃಷ್ಣ ಮತ್ತು ಅವನ ಸ್ನೇಹಿತರು ರಾಗಿ  ಮುದ್ದೆ ಊಟ ಮಾಡಲು ಬಂದರು. ಒಬ್ಬರ ಹಿಂದೆ ಒಬ್ಬರು ತಟ್ಟೆ ತೆಗೆದುಕೊಂಡು ಮುದ್ದೆ ಸಾರು ಹಾಕಿಕೊಂಡು ಅಲ್ಲೇ ನಿಂತುಕೊಂಡು ಊಟ ಮಾಡಲು ಶುರು ಮಾಡಿದರು. ಕೃಷ್ಣನ ಹಿಂದೇನೆ ಇನ್ನೊಬ್ಬ ಕೂಡ ಮುದ್ದೆ ಊಟ ಹಾಕಿಸಿಕೊಂಡು ಇವರೊಟ್ಟಿಗೆ ಬಂದು ನಿಂತು ಊಟ ಮಾಡ ತೊಡಗಿದನು.  ಕೃಷ್ಣ ಪರಿಚಯ ಇಲ್ಲದ್ದರಿಂದ ಅವನನ್ನು ಯಾರಪ್ಪ ಇವನು ಅಂತ ನೋಡುತ್ತಿದ್ದಂತೆ, ಅವನೇ  ನನ್ನ ಹೆಸರು ವಿನೋದ್ ಅಂತ, ಇಲ್ಲೇ ಒಂದು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೇನೆ ಅಂತ ಹೇಳಿದ,  ಮತ್ತೆ ಉಳಿದ ಸ್ನೇಹಿತರನ್ನೆಲ್ಲ ಪರಿಚಯ ಮಾಡಿಕೊಂಡು ಮಾತನಾಡಿಸಿದ. ಊಟ ಮಾಡಿ ಮುಗಿಯುವವರೆಗೂ ಕೃಷ್ಣ ಮತ್ತು ಅವನ ಸ್ನೇಹಿತರಿಗೆ ಮಾತನಾಡಲು ಅವಕಾಶ ಸಿಗದಂತೆ ಮಾತನಾಡುತ್ತಲೇ ಇದ್ದ.  ಕಂಪನಿ , ಅವನ ಮ್ಯಾನೇಜರ್ , ಟ್ರಾಫಿಕ್, ರಾಜಕೀಯ, ಸಿನಿಮಾ ಹೀಗೆ ಅನೇಕ ವಿಷಯಗಳ ಬಗ್ಗೆ ಮಾತನಾಡುತ್ತಲೇ ಇದ್ದ. ಕೃಷ್ಣ ಮತ್ತು ಅವನ ಸ್ನೇಹಿತರಿಗೆ ಸ್ವಲ್ಪ ಇರಿಸು ಮುರಿಸು ಆದರೂ ಅದನ್ನು ತೋರಿಸಿಕೊಳ್ಳದೆ,  ತಲೆ ಅಲ್ಲಾಡಿಸುತ್ತ, ಅವನು ಜೋಕ್ ಮಾಡಿದರೆ ನಗಾಡುತ್ತಾ ಊಟ ಮುಗಿಸಿದರು. 

ಇವರು ಊಟ ಮುಗಿಸಿ ಕೈ ತೊಳೆಯುವ ಮುಂಚೆನೇ ವಿನೋದ್  ಕೈ ತೊಳೆದುಕೊಂಡು, ಕೃಷ್ಣನ ಹತ್ತಿರ ನಾನೇ ಎಲ್ಲರ ದುಡ್ಡು ಕೊಡುತ್ತೇನೆ ಅಂತ ಹೊರಟ.  ತಳ್ಳು ಗಾಡಿಯವನ ಹತ್ತಿರ ಹೋಗಿ ತನ್ನ ಪರ್ಸ್ ತೆಗೆಯುವುದನ್ನು ನೋಡಿ ಕೃಷ್ಣ ಬೇಗ ಹೋಗಿ ಅವನನ್ನು ತಡೆದು, ತಾನೇ ಬಿಲ್ ಕೊಟ್ಟ.  ಅದಕ್ಕೆ ವಿನೋದ್ ” ನಾನೇ ಕೊಡುತ್ತಿದ್ದೆ ಯಾಕೆ ತಡೆದಿರಿ”  ಅಂತ ಕೇಳಿದ. ಅದಕ್ಕೆ  ಕೃಷ್ಣ ಮಾತು ಮುಂದುವರೆಸದೆ ” ನಾಳೆ,  ನೀವೇ ಕೊಡಿ, ಪರವಾಗಿಲ್ಲ”  ಎಂದು ಹೇಳಿದ.  ವಿನೋದ್ ” ತುಂಬ ಧನ್ಯವಾದಗಳು ” ನಾಳೆ ಸಿಗುತ್ತೀನಿ ಅಂತ ಹೇಳಿ ಅಲ್ಲಿಂದ ಹೊರಟ. ಕೃಷ್ಣ ಮತ್ತು ಆತನ ಸ್ನೇಹಿತರು ” ಅಯ್ಯೋ ನಾಳೆ ಬೇರೆ ಇವನ ಮಾತುಗಳನ್ನು ಕೇಳಬೇಕಾ” ಅಂತ ಗೊಣಗಿಕೊಂಡು ಅಲ್ಲಿಂದ  ತಮ್ಮ ಕಂಪನಿಗೆ ಹೋದರು. 

ಮಾರನೇ ದಿವಸ ಕೃಷ್ಣ ಮತ್ತು ಅವನ ಸ್ನೇಹಿತರು ಆ  ವಿನೋದ ಸಿಗದಿದ್ದರೆ ಸಾಕಪ್ಪ ಅಂತ ಹೇಳಿಕೊಳ್ಳುತ್ತಲೇ ಊಟಕ್ಕೆ ೧೦ ನಿಮಿಷ ತಡವಾಗಿ ಬಂದರು. ಇವರು ಬರುವ ವೇಳೆಗೆ ಆಗಲೇ ವಿನೋದ್ ಇನ್ನೊಂದು ಗುಂಪಿನ ಜೊತೆ ಮಾತನಾಡುತ್ತ ನಿಂತಿದ್ದ.  ಅವನನ್ನು ನೋಡಿ, ಸದ್ಯ ಬೇರೆಯವರ ಜೊತೆ ಇದ್ದಾನೆ, ನಾವು ತಪ್ಪಿಸಿಕೊಂಡ್ವಿ ಅಂತ ಮನಸ್ಸಿನಲ್ಲೇ ಅಂದುಕೊಂಡು ಊಟ ಮುಗಿಸಿ ವಾಪಸು ಹೋದರು. ಮಾರನೇ ದಿವಸ ಕೂಡ ಹತ್ತು ನಿಮಿಷ ತಡವಾಗಿ ಊಟಕ್ಕೆ ಬಂದರು.  ವಿನೋದ್ ಕೂಡ ಬೇರೆ ಅಂಗಡಿಯಲ್ಲಿ ಯಾರದೋ ಜೊತೆಯಲ್ಲಿ ಊಟ ಮಾಡುತ್ತಾ ನಿಂತಿದ್ದ.  ಕೃಷ್ಣ ಮತ್ತು ಅವನ ಸ್ನೇಹಿತರು ಸ್ವಲ್ಪ ಜೋರಾಗಿ ” ಅಬ್ಬಾ ಇವತ್ತೂ ತಪ್ಪಿಸಿಕೊಂಡ್ವಿ ವಿನೋದನಿಂದ ” ಅಂತ ಹೇಳುತ್ತಾ ತಟ್ಟೆ ತೆಗೆದುಕೊಂಡರು. ಇದನ್ನು ಕೇಳಿಸಿಕೊಂಡ ಮುದ್ದೆಯವನು ” ನೀವ್ ತಪ್ಪಿಸಿ ಕೊಂಡ್ರಿ,  ಬೇರೆಯವರು ಸಿಕ್ಕಿಹಾಕಿಕೊಂಡಿದ್ದಾರೆ ಅಷ್ಟೇ ” ಅಂದ.  ಕೃಷ್ಣ  ” ಏನು ಹಾಗೆಂದರೇ” ಅಂತ ಕೇಳಿದ. ಅದಕ್ಕೆ ಆ ಮುದ್ದೆಯವನು ಹೇಳಿದ್ದನ್ನು ಕೇಳಿ ಕೃಷ್ಣ ಮತ್ತು ಅವನ ಸ್ನೇಹಿತರು ದಂಗಾಗಿ ಹೋದರು.  

ವಿನೋದ್ ಯಾವುದೇ ಕಂಪನಿಯಲ್ಲಿ ಕೆಲಸ ಮಾಡುತ್ತಿರಲಿಲ್ಲ. ಕೆಲಸಕ್ಕೆ ಬೇರೆ ಊರಿಂದ ಬಂದು ಕೆಲಸ ಸಿಗದೇ ದಿನವೂ ಕೆಲಸ ಹುಡುಕುತ್ತ ಅಲೆಯುತ್ತಿದ್ದ.  ಪ್ರತಿ ದಿನ ನೀಟಾಗಿ ಡ್ರೆಸ್ ಮಾಡಿಕೊಂಡು ಬಂದು ಯಾವುದೊ ಗುಂಪಿನ ಜೊತೆ ಅಥವಾ ಯಾರೋ ಒಬ್ಬರೇ ಊಟ ಮಾಡುತ್ತಿದ್ದರೇ, ಅವರ ಜೊತೆ ಸೇರಿಕೊಂಡು, ಸಿಕ್ಕಾಪಟ್ಟೆ ಮಾತಾಡಿ ಅವರಿಗೆ ಮುಜುಗರ ಉಂಟು ಮಾಡಿ, ದುಡ್ಡು ಕೊಟ್ಟಂತೆ ಮಾಡಿ, ಅವರ ಕೈಯಿಂದ ಬಿಲ್ ಕೊಡಿಸಿ, ಊಟ ಮಾಡಿಕೊಂಡು ಹೋಗುತ್ತಿದ್ದನು.  ದಿನವು ಯಾರುನ್ನಾದರೂ ಬಕ್ರ ಮಾಡಿ ಊಟ ಮಾಡಿ ಹೋಗುತ್ತಾನೆ ಅಷ್ಟೇ ಎಂದು ಹೇಳಿದಾಗ, ಅವನ ವೃತ್ತಾಂತ ಕೇಳಿ ಎಲ್ಲರಿಗು ನುಂಗುತ್ತಿದ್ದ ಮುದ್ದೆ ಗಂಟಲಲ್ಲಿ ಸಿಕ್ಕಿ ಹಾಕಿ ಕೊಂಡಂತಾಯಿತು. 

ಅವನ ಬಗ್ಗೆ ಅನುಕಂಪ ತೋರಿಸಬೇಕೋ,  ಮೋಸಗಾರ ಅನ್ನಬೇಕೋ ತಿಳಿಯದೆ ಮೌನವಾಗಿ ರಾಗಿ ಮುದ್ದೆ ಊಟ  ಮಾಡಿ  ಕಂಪನಿ ಕಡೆ ಹೊರಟರು. 

ನಿಮಗೆ ಏನು ಅನ್ನಿಸಿತು ಅಂತ ಹೇಳಿ. 

– ಶ್ರೀನಾಥ್ ಹರದೂರ ಚಿದಂಬರ 

ಚಿತ್ರ ಕೃಪೆ: ಅಂತರ್ಜಾಲ 

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s