ಕನ್ನಡ ನಾಡು ಶ್ರೀಗಂಧದ ನಾಡು – ನಮ್ಮ ನಾಡು ನಮ್ಮ ಹೆಮ್ಮೆ
ನಾವು ನಮ್ಮ ಜೀವನದಲ್ಲಿ ಒಮ್ಮೆಯಾದರೂ ನೋಡಿ ಬರಲೇಬೇಕಾದ ಕೆಲವು ಕಣ್ಮನ ಸೆಳೆಯುವ ಅದ್ಭುತ ಸ್ಥಳಗಳು ಕನ್ನಡ ನಾಡಿನಲ್ಲಿ ಇವೆ. ಅವುಗಳಲ್ಲಿ ಕೆಲವು ಸ್ಥಳಗಳನ್ನು ಮೊದಲ ಭಾಗದಲ್ಲಿ ನಿಮಗೆ ಪರಿಚಯ ಮಾಡಲು ಪ್ರಯತ್ನ ಪಟ್ಟಿದ್ದೇನೆ. ನಿಮ್ಮ ಸಂಸಾರ ಸಮೇತ ಹೋಗಿ ಬನ್ನಿ, ಮಕ್ಕಳಿಗೆ ಎಲ್ಲ ಸ್ಥಳಗಳನ್ನು ತೋರಿಸಿ ಅವುಗಳ ಬಗ್ಗೆ ವಿವರಿಸಿ.
೧. ಬಾದಾಮಿ – ಐಹೊಳೆ – ಪಟ್ಟದಕಲ್ಲು

ಈ ಮೂರು ಸ್ಥಳಗಳು ಬಾಗಲಕೋಟೆ ಜಿಲ್ಲೆಯಲ್ಲಿವೆ. ಚಾಲುಕ್ಯರ ಭವ್ಯ ಪರಂಪರೆ ನೋಡಲು ಈ ಸ್ಥಳಗಳಿಗಿಂತ ಬೇರೆ ಸ್ಥಳ ಮತ್ತೊಂದಿಲ್ಲ. ಬಾದಾಮಿ ಹಂಪಿಯಿಂದ ಇನ್ನೂರು ಕಿಲೋಮೀಟರು ದೂರದಲ್ಲಿದೆ. ಬಾದಾಮಿಯಿಂದ ಕೇವಲ ಇಪ್ಪತ್ತು ಕಿಲೋಮೀಟರು ದೂರದಲ್ಲಿದೆ ಪಟ್ಟದಕಲ್ಲು ಹಾಗು ಐಹೊಳೆ ಕೇವಲ ಹತ್ತು ಕಿಲೋಮೀಟರು ದೂರದಲ್ಲಿದೆ. ಇತಿಹಾಸ ಪ್ರಿಯರಿಗೆ ಹೇಳಿ ಮಾಡಿಸಿದಂತ ಜಾಗ ಇವು. ಕಲ್ಲಿನ ದೇವಸ್ಥಾನಗಳು, ಅದರ ಮೇಲಿನ ಕಲ್ಲಿನ ಕೆತ್ತನೆ ನೋಡಲು ಎರಡು ಕಣ್ಣು ಸಾಲದು.
೨. ಹಂಪಿ


ಒಂದು ಕಾಲದಲ್ಲಿ ಪ್ರಪಂಚದ ಎರಡನೇ ದೊಡ್ಡ ನಗರ ಎಂಬ ಪ್ರಸಿದ್ದಿ ಪಡೆದ ಸ್ಥಳ ಹಂಪಿ. ವಿಜಯನಗರ ಸಾಮ್ರಾಜ್ಯದ ರಾಜಧಾನಿ ಆಗಿತ್ತು. ವಿಜಯನಗರ ಸಾಮ್ರಾಜ್ಯದ ಶ್ರೀಮಂತಿಕೆ ಹೇಗಿತ್ತು ಅಂತ ತಿಳಿಯಲು ನೀವು ಅಲ್ಲಿಗೆ ಭೇಟಿ ನೀಡಿದರೆ ಗೊತ್ತಾಗುತ್ತದೆ. ಏಳನೇ ಶತಮಾನದ ವಿರೂಪಾಕ್ಷ ದೇವಸ್ಥಾನ ಇಲ್ಲಿನ ಪ್ರಮುಖ ಆಕರ್ಷಣೆ. ಏಕ ಶಿಲೆ ಕೆತ್ತನೆ ಹಾಗು ಸ್ಮಾರಕಗಳಿಗೆ ಹಂಪಿ ತುಂಬ ಪ್ರಸಿದ್ದಿ ಹೊಂದಿದೆ. ಹಂಪಿ ಬಳ್ಳಾರಿ ಜಿಲ್ಲೆಯಲ್ಲಿದೆ. ಬಳ್ಳಾರಿಯಿಂದ ಅರವತ್ತು ಕಿಲೋಮೀಟರು ದೂರದಲ್ಲಿದೆ ಹಂಪಿ.
೩. ಆಗುಂಬೆ

ಸೂರ್ಯಾಸ್ತ ನೋಡಲು ಹೇಳಿ ಮಾಡಿಸಿದಂತಹ ಸ್ಥಳ ಎಂದರೆ ಆಗುಂಬೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿಗೆ ಸೇರಿದೆ. ಪಶ್ಚಿಮ ಘಟ್ಟಗಳ ಆದಮ್ಯ ಕಾಡು, ಜಲಪಾತ, ಘಾಟಿ ಇಲ್ಲಿನ ಪ್ರಮುಖ ಆಕರ್ಷಣೆ. ಆಗುಂಬೆಯಲ್ಲಿ ಅತಿ ಹೆಚ್ಚು ಮಳೆಯಾಗುವುದರಿಂದ ಇದನ್ನು ದಕ್ಷಿಣ ಭಾರತದ ಚಿರಾಪುಂಜಿ ಅಂತಲೇ ಕರೆಯುತ್ತಾರೆ. ಶಿವಮೊಗ್ಗದಿಂದ ಸುಮಾರು ತೊಂಬತ್ತು ಕಿಲೋಮೀಟರು ದೂರದಲ್ಲಿದೆ.
೪. ಕವಲೆ ದುರ್ಗದ ಕೋಟೆ



ಈ ಅದ್ಭುತ ಸ್ಥಳ ಕೂಡ ತೀರ್ಥಹಳ್ಳಿ ತಾಲ್ಲೂಕಿನಲ್ಲಿದೆ. ತೀರ್ಥಹಳ್ಳಿಯಿಂದ ಕೇವಲ ಹದಿನೆಂಟು ಕಿಲೋಮೀಟರು ದೂರದಲ್ಲಿರುವ ಈ ಸ್ಥಳ ತುಂಬ ಮನಮೋಹಕವಾಗಿದೆ. ಒಂಬತ್ತನೇ ಶತಮಾನದಲ್ಲಿ ಕಟ್ಟಿರುವಂತ ಕೋಟೆ ಇದು. ಕೆಳದಿಯ ನಾಯಕ ವಂಶದವರು ಅಳಿದ ಕೋಟೆ ಇದು. ಹದಿನಾಲ್ಕನೇ ಶತಮಾನದಲ್ಲಿ ಚೆಲುವರಂಗಪ್ಪ ಇದನ್ನು ಪುನಃ ನಿರ್ಮಾಣ ಮಾಡಿದ್ದನು. ಕವಲೇದುರ್ಗವನ್ನು ಭುವನಗಿರಿ ಅಂತಲೂ ಕರೆಯುತ್ತಾರೆ. ಚಾರಣ ಮಾಡಲು ಹೇಳಿ ಮಾಡಿಸಿದಂತ ಸ್ಥಳ ಕವಲೇದುರ್ಗ ಮತ್ತು ನಾಯಕ ವಂಶದವರ ಚರಿತ್ರೆ ತಿಳಿಯಲು ಒಮ್ಮೆ ಭೇಟಿ ನೀಡಿ.
೫. ಜೋಗ


ಭಾರತ ಎರಡನೇ ಹಾಗು ಪ್ರಪಂಚದ ಹದಿಮೂರನೇ ದೊಡ್ಡ ಜಲಪಾತ ಜೋಗದ ಜಲಪಾತ. ಮಳೆಗಾಲದಲ್ಲಿ ತುಂಬಿ ಹರಿಯುವ ಜಲಪಾತ ನೋಡಲು ದೇಶಾದ್ಯಂತ ಜನರು ಬರುತ್ತಾರೆ. ಶರಾವತಿ ನದಿಯು ತೀರ್ಥಹಳ್ಳಿಯ ಅಂಬುತೀರ್ಥ ಎಂಬಲ್ಲಿ ಹುಟ್ಟಿ ಜೋಗ ಜಲಪಾತದಲ್ಲಿ ದುಮ್ಮಿಕ್ಕಿ ಗೇರುಸೊಪ್ಪೆಯ ಮೂಲಕ ಹರಿದು ಅರಬ್ಬೀ ಸಮುದ್ರವನ್ನು ಸೇರುತ್ತಾಳೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನಲ್ಲಿದೆ ಜೋಗ ಫಾಲ್ಸ್. ಜೋಗದ ಜಲಪಾತವನ್ನು ಎದುರುಗಡೆಯಿಂದ ಅಷ್ಟೇ ಎಲ್ಲ ಅದು ಬೀಳುವ ಜಾಗದಲ್ಲಿ ನಿಂತು ನೋಡುವ ಮಜವೇ ಬೇರೆ ಇದೆ.
೬. ಹೊನ್ನೆಮರಡು


ಶರಾವತಿ ನದಿಯ ಹಿನ್ನೀರು ಪ್ರದೇಶಗಳಲ್ಲಿ ಒಂದು ಈ ಹೊನ್ನೆಮರಡು. ನೀರಿನಲ್ಲಿ ಆಡುವ ಕ್ರೀಡೆಗಳಿಗೆ ಹೇಳಿ ಮಾಡಿಸಿದಂತ ಸ್ಥಳ ಇದು. kakying ಮತ್ತು ಬೋಟಿಂಗ್ ಎಂಜೋಯ್ ಮಾಡಲು ತಪ್ಪದೆ ಭೇಟಿ ನೀಡಿ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನಲ್ಲಿದೆ. ಸಾಗರದಿಂದ ಮೂವತ್ತೈದು ಕಿಲೋಮೀಟರು ದೂರದಲ್ಲಿದೆ. ಕಣ್ಮಳ ಸೆಳೆಯುವ ಜಾಗ ಇದು. ಇಕ್ಕೇರಿ, ಕೆಳದಿ, ವರದ ಹಳ್ಳಿ, ರಂಗನತಿಟ್ಟು ಪಕ್ಷಿಧಾಮ ಹತ್ತಿರದಲ್ಲಿರುವ ಸ್ಥಳಗಳು.
೭. ಕೊಡಚಾದ್ರಿ

ಶೋಲಾ ಕಾಡುಗಳನ್ನು ನೋಡಲು ಇದಕ್ಕಿಂತ ಒಳ್ಳೆಯ ಸ್ಥಳ ಬೇರೆ ಇಲ್ಲ. ಶಿವಮೊಗ್ಗ ಜಿಲ್ಲೆಯಲ್ಲಿದೆ ಹಾಗು ಶಿವಮೊಗ್ಗದಿಂದ ಎಂಬತ್ತು ಕಿಲೋಮೀಟರು ದೂರದಲ್ಲಿದೆ. ಟ್ರೆಕಿಂಗ್ ಮಾಡಲು ಆಸಕ್ತಿ ಇದ್ದವರಿಗೆ ಒಳ್ಳೆಯ ಜಾಗ. ಅಂಬುತೀರ್ಥ, ಕುಂದಾದ್ರಿ ಬೆಟ್ಟ ಹತ್ತಿರದಲ್ಲಿರುವ ಸ್ಥಳಗಳು. ಕೊಡಚಾಡ್ರಿಯಿಂದ ರಮಣೀಯ ದೃಶ್ಯಗಳನ್ನು ನೋಡುತ್ತಾ ಕುಳಿತರೆ ಸಮಯ ಹೋಗುವುದೇ ಗೊತ್ತಾಗುವುದಿಲ್ಲ.
೮. ಕುದುರೆಮುಖ


ಕುದುರೆಮುಖ ಚಿಕ್ಕಮಗಳೂರು ಜಿಲ್ಲೆಯಲ್ಲಿದೆ ಹಾಗು ನೂರು ಕಿಲೋಮೀಟರು ದೂರದಲ್ಲಿದೆ. ಕಳಸದಿಂದ ಕೇವಲ ೨೦ ಕಿಲೋಮೀಟರು ದೂರದಲ್ಲಿದೆ. ಟ್ರೆಕಿಂಗ್ ಗೆ ಒಳ್ಳೆಯ ಸ್ಥಳ ಇದು. ಅತ್ಯಂತ ಸುಂದರ ಹಾಗಿ ರಮಣೀಯ ದೃಶ್ಯ ನೋಡಲು ಭೇಟಿ ನೀಡಲೇ ಬೇಕು. ಕುದುರೆಮುಖ ನ್ಯಾಷನಲ್ ಪಾರ್ಕ್ ಇಲ್ಲಿನ ಆಕರ್ಷಣೆ. ಕಳಸ ಮತ್ತು ಹೊರನಾಡು ಹತ್ತಿರದ ನೋಡಬಹುದಾದ ಸ್ಥಳಗಳು. ಭೂಮಿ ಮೇಲಿನ ಸ್ವರ್ಗ ಇಲ್ಲಿಯ ಹಸಿರು.
೯. ಮುಳ್ಳಯ್ಯನ ಗಿರಿ


ಮುಳ್ಳಯ್ಯನಗಿರಿ ಕೂಡ ಚಿಕ್ಕಮಗಳೂರು ಜಿಲ್ಲೆಯಲ್ಲಿದೆ. ಸಮುದ್ರ ಮಟ್ಟದಿಂದ ೧೯೩೦ ಮೀಟರ್ ಎತ್ತರದಲ್ಲಿದೆ. ಟ್ರೆಕ್ಕಿಂಗ್ಗೆ ಹೇಳಿದ್ ಮಾಡಿಸಿದ ಜಾಗ. ಸೀತಯ್ಯನಗಿರಿ ಕೂಡ ಹತ್ತಿರದಲ್ಲಿದೆ. ಕರ್ನಾಟಕದಲ್ಲಿಯೇ ಅತಿ ಎತ್ತರವಾದ ಸ್ಥಳ ಮುಳ್ಳಯ್ಯನಗಿರಿ. ಮುಳ್ಳಯ್ಯನ ಗಿರಿ ಹತ್ತಿದ ಮೇಲೆ ನಿಮಗೆ ಆಗುವ ಅನುಭವ ಅದ್ಭುತ, ಅದನ್ನು ಪದಗಳಲ್ಲಿ ಹೇಳಲಾಗದು. ನೀವೇ ಅನುಭವಿಸಬೇಕು.ಹತ್ತಿರ ನೋಡಬಹುದಾದ ಸ್ಥಳಗಳು – ಕೆಮ್ಮಣ್ಣು ಗುಂಡಿ.
೧೦. ಬೇಲೂರು – ಹಳೇಬೀಡು


ಬೇಲೂರು ಮತ್ತು ಹಳೇಬೀಡು ಹಾಸನ ಜಿಲ್ಲೆಯಲ್ಲಿದೆ. ಹೊಯ್ಸಳ ವಂಶದವರ ಬಗ್ಗೆ ಅರಿಯಬೇಕಾದರೆ ಇಲ್ಲಿಗೆ ಭೇಟಿ ನೀಡಲೇ ಬೇಕು. ಹಾಸನದಿಂದ ಮೂವತ್ತೈದು ಕಿಲೋಮೀಟರು ದೂರದಲ್ಲಿದೆ ಬೇಲೂರು ಹಾಗು ಇಲ್ಲಿಂದ ಹದಿನಾರು ಕಿಲೋಮೀಟರು ದೂರದಲ್ಲಿದೆ ಹಳೇಬೀಡು. ಚನ್ನಕೇಶವ ದೇವಸ್ಥಾನ ಹಾಗು ಹೊಯ್ಸಳ ವಾಸ್ತುಶಿಲ್ಪ ನೋಡಲು ನೀವು ಭೇಟಿ ನೀಡಲೇ ಬೇಕು.
೧೧. ತಲಕಾಡು

ಮೈಸೂರು ನೋಡಲು ಹೋದರೆ ಇಲ್ಲಿಗೆ ಭೇಟಿ ನೀಡಲು ಮರೆಯದಿರಿ. ಮೈಸೂರಿನಿಂದ ಕೇವಲ ನಲವತ್ತೈದು ಕಿಲೋಮೀಟರು ದೂರದಲ್ಲಿದೆ. ಇಲ್ಲಿಯ ಇತಿಹಾಸ ತುಂಬ ಕುತೂಹಲಕಾರಿಯಾಗಿದೆ. ಏನು ಅಂತ ತಿಳಿಯಲು ನೀವು ಅಲ್ಲಿಗೆ ಭೇಟಿ ನೀಡಿ. ಹತ್ತಿರದಲ್ಲಿಯೇ ಸೋಮನಾಥ ದೇವಸ್ಥಾನ ಇದೆ. ಕಾವೇರಿ ನದಿಯ ತಟದಲ್ಲಿರುವ ಈ ಸ್ಥಳವನ್ನು ಒಮ್ಮೆ ನೀವು ನೋಡಲೇಬೇಕು. ಶ್ರೀ ರಂಗ ಪಟ್ಟಣವನ್ನು ಕೂಡ ನೋಡಿಬರಬಹುದು. ನದಿಯ ತಟದಲ್ಲಿರುವ ತೆಪ್ಪ ಹತ್ತಲು ಮರೆಯದಿರಿ.
೧೨. ಚಿತ್ರದುರ್ಗ

ಚಿತ್ರದುರ್ಗದ ಕೋಟೆ ಬಗ್ಗೆ ಕೇಳದವರೇ ಇಲ್ಲ ಅನಿಸುತ್ತೆ. ಹನ್ನೊಂದು ಮತ್ತು ಹದಿಮೂರನೇ ಶತಮಾನದಲ್ಲಿ ಚಾಲುಕ್ಯರು, ಹೊಯ್ಸಳ ಮತ್ತು ನಾಯಕ ವಂಶದವರಿಂದ ಕಟ್ಟಲ್ಪಟ್ಟ ಏಳು ಸುತ್ತಿನ ಕೋಟೆ ಇದು. ಚಿತ್ರದುರ್ಗ ಜಿಲ್ಲೆಯಲ್ಲಿದೆ. ಚಿತ್ರದುರ್ಗದ ಸುತ್ತಮುತ್ತ ನೋಡಬಹುದಾದ ಸ್ಥಳಗಳು- ವಾಣಿ ವಿಲಾಸ ಸಾಗರ ಆಣೆಕಟ್ಟು, ಚಂದ್ರವಳ್ಳಿ ಗುಹೆ. ಕೋಟೆಯಲ್ಲಿರುವ ಕುದುರೆ ಹೆಜ್ಜೆ ಮತ್ತು ಓಬವ್ವನ ಕಿಂಡಿ ನೋಡಲು ಮರೆಯದಿರಿ.
೧೩. ಬನವಾಸಿ

ಕದಂಬರ ಇತಿಹಾಸ ತಿಳಿಯಲು ನೀವು ಇಲ್ಲಿಗೆ ಭೇಟಿ ನೀಡಬೇಕು. ಉತ್ತರ ಕನ್ನಡ ಜಿಲ್ಲೆಯ, ಶಿರಸಿ ತಾಲ್ಲೂಕಿನಲ್ಲಿದೆ ಬನವಾಸಿ. ಶಿರಸಿ ಯಿಂದ ಇಪ್ಪತ್ತಮೂರು ಕಿಲೋಮೀಟರು ದೂರದಲ್ಲಿದೆ ಬನವಾಸಿ. ಕದಂಬರು ಕನ್ನಡಕ್ಕೆ ಬಹಳ ಪ್ರಾಶಸ್ತ್ಯ ಕೊಟ್ಟವರಲ್ಲಿ ಮೊದಲ ವಂಶಸ್ಥರು. ಮಧುಕೇಶ್ವರ ದೇವಸ್ಥಾನ ಇಲ್ಲಿನ ಪ್ರಮುಖ ಆಕರ್ಷಣೆ. ಬನವಾಸಿಗೆ ಹತ್ತಿರ ಇರುವ ಸ್ಥಳಗಳು – ಮಾಗೋಡ್ ಫಾಲ್ಸ್, ಯೆಲ್ಲಾಪುರ.
೧೪. ಮುರುಡೇಶ್ವರ

ಮುರುಡೇಶ್ವರ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲ್ಲೂಕಿನಲ್ಲಿದೆ. ಮುರುಡೇಶ್ವರ ದೇವಸ್ಥಾನ ಮತ್ತು ರಾಜ ಗೋಪುರ ಇಲ್ಲಿನ ಪ್ರಮುಖ ಆಕರ್ಷಣೆ. ಇಲ್ಲಿನ ಸಮುದ್ರ ಕಿನಾರೆ ಬಹಳ ಚೆನ್ನಾಗಿದೆ. ಮುರುಡೇಶ್ವರಕ್ಕೆ ಹತ್ತಿರ ಇರುವ ಸ್ಥಳಗಳು- ಕೊಲ್ಲೂರ, ಇಡುಗುಂಜಿ, ಅಪ್ಸರ ಕೊಂಡ ಫಾಲ್ಸ್ ಮತ್ತು ಗೋಕರ್ಣ.
೧೫. ಮಡಿಕೇರಿ

ಕರ್ನಾಟಕದಲ್ಲಿ ನೀವು ತಪ್ಪದೆ ನೋಡಲೇಬೇಕಾದ ಸ್ಥಳ ಎಂದರೆ ಅದು ಮಡಿಕೇರಿ. ಒಂದೆರಡು ದಿವಸ ಅಲ್ಲಿದ್ದು ಅಲ್ಲಿನ ಅನೇಕ ಜಾಗಗಳನ್ನು ನೋಡಿ ಬರಬಹುದಾದ ಸ್ಥಳ ಮಡಿಕೇರಿ. ಮಡಿಕೇರಿಗೆ ಹೋದರೆ ಅಬ್ಬೆ ಫಾಲ್ಸ್, ತಲಕಾವೇರಿ, ಕುಶಾಲ ನಗರ, ದುಬಾರೆ ನೋಡಲು ಮರೆಯದಿರಿ. ಮಡಿಕೇರಿ ಮಂಜು ನೋಡಲು ಮರೆಯದಿರಿ
– ಶ್ರೀನಾಥ ಹರದೂರ ಚಿದಂಬರ
ಚಿತ್ರ ಕೃಪೆ : ಗೂಗಲ್