ಸಾವಿನ ಕದ ತಟ್ಟಿ ವಾಪಸ್ಸು ಬಂದಾಗ….

ಮದ್ಯಾಹ್ನ ಊಟದ ಗಂಟೆ ಹೊಡೆದಾಗ ಶಾಲೆಯಲ್ಲಿದ್ದ ಎಲ್ಲ ಮಕ್ಕಳು ತಮ್ಮ ತಮ್ಮ ಊಟದ ಡಬ್ಬಿಗಳನ್ನು ತೆಗೆದುಕೊಂಡು ತರಗತಿಯ ಹೊರಗಡೆ ಹೋಗಲು  ಶುರು ಮಾಡಿದರು. ಮೂರನೇ ತರಗತಿಯಲ್ಲಿದ್ದ ಒಬ್ಬ ಹುಡುಗ  ತನ್ನ ಊಟದ ಡಬ್ಬ ತೆಗೆದುಕೊಂಡು ನರ್ಸರಿಯಲ್ಲಿ ಓದುತ್ತಿದ್ದ ತನ್ನ ತಮ್ಮನ  ಹತ್ತಿರ ಬಂದನು.  ಅಷ್ಟರಲ್ಲಿ ತಮ್ಮ  ಕೂಡ ತನ್ನ ಊಟದ ಡಬ್ಬಿಯನ್ನು ತೆಗೆದುಕೊಂಡು ಹೊರಗಡೆ ಬಂದು ನಿಂತುಕೊಂಡಿದ್ದ. ಇಬ್ಬರು ಶಾಲೆಯ ಆವರಣದಲ್ಲಿದ್ದ ಒಂದು ಕಟ್ಟೆಯ ಮೇಲೆ ಕುಳಿತುಕೊಂಡು ಊಟ ಮಾಡಲು ಶುರು ಮಾಡಿದರು.  ಊಟ ಮಾಡಿ ಆದ ಮೇಲೆ ಡಬ್ಬಿಗಳನ್ನು ತೊಳೆದು, ಅಲ್ಲೇ ಕಟ್ಟೆ ಮೇಲೆ ಇಟ್ಟು  ಆಟ  ಆಡಲು ಶುರು ಮಾಡಿದರು. ಸ್ವಲ್ಪ  ಹೊತ್ತು ಆಟ ಆಡಿದ ಮೇಲೆ ತಮ್ಮ  ಅವನ ಅಣ್ಣನ ಹತ್ತಿರ ಓಡಿ ಬಂದ.  ಅಣ್ಣ  ” ಯಾಕೋ ಏನಾಯ್ತು?” ಅಂತ ಕೇಳಿದ. ಅದಕ್ಕೆ ತಮ್ಮ  ”  ಅಣ್ಣ, ಯಾಕೋ ನನ್ನ ಹೊಟ್ಟೆಯಲ್ಲಿ ಗುಡುಗುಡು ಅಂತ ಆಗ್ತಾ ಇದೆ, ನಾನು ಟಾಯ್ಲೆಟ್ ಗೆ ಹೋಗಬೇಕು” ಅಂತ ತನ್ನ ಹೊಟ್ಟೆ ಹಿಡಿದುಕೊಂಡು ಕೂತ.  ಆ ಶಾಲೆಯಲ್ಲಿ ಟಾಯ್ಲೆಟ್ ಇರಲಿಲ್ಲ ಹಾಗಾಗಿ ಏನು ಮಾಡುವುದು ಈಗ ಅಂತ ಅಣ್ಣ  ಯೋಚನೆ ಮಾಡಲು ಶುರು ಮಾಡಿದ. 

ತಮ್ಮ  ಜೋರಾಗಿ ಅಳಲು ಶುರು ಮಾಡಿದ. ಅಣ್ಣ  ಅವನಿಗೆ ಸಮಾಧಾನ ಮಾಡಿ, ಅವನನ್ನು ಕರೆದುಕೊಂಡು ಶಾಲೆಯ ಪಕ್ಕದಲ್ಲಿದ್ದ ಒಂದು ಚಿಕ್ಕ ತೊರೆಯ ಹತ್ತಿರ ಕರೆದುಕೊಂಡು ಹೋದ. ತೊರೆಯಲ್ಲಿ ತುಂಬಾ ನೀರು ಇರದಿದ್ದರೂ, ಅವರಿಬ್ಬರ ಸೊಂಟದ ಮಟ್ಟಕ್ಕೆ ನೀರು ಬರುವಷ್ಟು ಇತ್ತು. ಅಣ್ಣ  ಅಲ್ಲಿಯೇ ದೂರದಲ್ಲಿ ನಿಂತುಕೊಂಡ. ತಮ್ಮ  ಅಲ್ಲಿಯೇ ಗಿಡದ ಮರೆಯಲ್ಲಿ ಕೂತು ತನ್ನ ಕೆಲಸ ಮುಗಿಸಿಕೊಂಡ. ಆಮೇಲೆ ತೊರೆಯ ಹತ್ತಿರ ತೊಳೆದುಕೊಳ್ಳಲು ಬಂದ. ಅಣ್ಣ ತಮ್ಮನಿಗೆ   ” ಹುಷಾರು ಕಣೋ, ತುಂಬ ಬಗ್ಗಬೇಡ” ಅಂತ ಹೇಳಿದ.  ತಮ್ಮ  ತೊರೆಯ ನೀರನ್ನು ತೆಗೆದುಕೊಳ್ಳಲು ಬಗ್ಗಿದ ಅಷ್ಟೇ, ಆಯಾ ತಪ್ಪಿ ನೀರೊಳಗೆ ಬಿದ್ದ.  ಬಿದ್ದ ತಕ್ಷಣ ಅವನು  ನೀರೊಳಗೆ ಪೂರ್ತಿ ಮುಳುಗಿ ಹೋದ,  ಮತ್ತೆ ಅಷ್ಟೇ ವೇಗವಾಗಿ ಮೇಲೆ ಬಂದ.  ಆದರೆ  ಹಿಡಿದುಕೊಳ್ಳಲು ಏನು ಸಿಗದೇ ಮತ್ತೆ  ನೀರೊಳಗೆ ಹೋದ.  ಭಯಕ್ಕೆ ನೀರಿನೊಳಗೆ ಕಣ್ಣು ಬಿಟ್ಟು ಮೇಲೆ ನೋಡಿದರೆ, ಮೇಲೆ ಯಾರೋ ನಿಂತಂತೆ ಕಾಣಿಸಿತು, ಅಷ್ಟರೊಳಗೆ ಮೂಗು, ಬಾಯಿ ಒಳಗೆ ನೀರು ನುಗ್ಗಿತು. ಮತ್ತೆ ನೀರಿನಿಂದ ಮೇಲೆ ಬಂದ,  ಯಾವುದೇ ಆಧಾರ ಸಿಗದೇ ಮತ್ತೆ ಮುಳುಗಿ,  ಉಸಿರಾಡಲು ಆಗದೆ ಒದ್ದಾಡ ತೊಡಗಿದ. ಕಿವಿಯಲ್ಲಿ ಬುಸ್ಸ್ ಅಂತ ಶಬ್ಧ ಬರತೊಡಗಿತು. ಗಂಟಲು ಗರ ಗರ ಅಂತ ಸದ್ದು  ಮಾಡಲು ಶುರು ಮಾಡಿತು. 

ಅವನು  ಮೂರನೇ ಸಲ ಮೇಲಕ್ಕೆ ಬಂದ,  ಅವನಿಗೆ ಕಣ್ಣು ಕೂಡ ತೆರೆಯಲು ಆಗಲಿಲ್ಲ. ಅವನು  ಪೂರ್ತಿ ಸುಸ್ತಾಗಿ ಹೋಗಿದ್ದ. ಆಗ ಮೇಲೆ ನಿಂತಿದ್ದ ಅಣ್ಣ  ಧೈರ್ಯ ಮಾಡಿ ಸ್ವಲ್ಪ ನೀರಲ್ಲಿ  ಇಳಿದು,  ಮೇಲೆ ಬಂದ ತಮ್ಮನನ್ನು ತನ್ನ ಶಕ್ತಿಯೆನ್ನಲ್ಲಾ ಹಾಕಿ ದಡಕ್ಕೆ ಎಳೆದು ಹಾಕಿದ.  ಮೇಲೆ ಬಂದ  ತಮ್ಮ ಮಲಗಿದ್ದಲ್ಲೇ  ಕುಡಿದ ನೀರನ್ನು ವಾಂತಿ ಮಾಡಿ ಕಕ್ಕಿದ.  ಅವನ   ಹೊಟ್ಟೆಯಿಂದ ನೀರು ಹೊರಗಡೆ ಬಂದ ಮೇಲೆ ಉಸಿರಾಟ ಸರಾಗವಾಗಿ ಸ್ವಲ್ಪ  ಸುಧಾರಿಸಿಕೊಂಡ. ಹತ್ತು ನಿಮಿಷಗಳ ನಂತರ ಅವನು  ಸಾಮಾನ್ಯ ಸ್ಥಿತಿಗೆ ಬಂದ. ಇಬ್ಬರಿಗೂ ಅಲ್ಲಿ ನಡೆದಿದ್ದ ಘಟನೆಗಿಂತ ತಮ್ಮ  ಬಟ್ಟೆ ಒದ್ದೆ ಆಯಿತು, ಶಾಲೆಯಲ್ಲಿ ಬೈಯುತ್ತಾರೆ ಎನ್ನುವ ಭಯ ಕಾಡಿತು. ಇಬ್ಬರು  ಸ್ವಲ್ಪ ಹೊತ್ತು  ಬಿಸಿಲಿನಲ್ಲಿ ಅಲ್ಲಿಯೇ ಕುಳಿತು ಬಟ್ಟೆ ಒಣಗಿಸಿಕೊಂಡು, ಆಗಿದ್ದನ್ನು ಯಾರಿಗೂ ಹೇಳಬಾರದು ಅಂತ ಒಬ್ಬರಿಗೊಬ್ಬರು ಮಾತು ತೆಗೆದುಕೊಂಡು  ಶಾಲೆ ಕಡೆಗೆ ಹೊರಟರು. ಅವರಿಬ್ಬರಿಗೂ ಅಲ್ಲಿ ನಡೆದಿದ್ದ ಘಟನೆ ತುಂಬ ಸಣ್ಣದು, ಇಬ್ಬರಿಗೂ ಅದರ ಗಂಭೀರತೆ ಅವತ್ತಿಗೆ ಗೊತ್ತಿರಲಿಲ್ಲ. 

ಸಾವು ಅಂದರೆ ಏನು ಅಂತ ಗೊತ್ತಿಲ್ಲದ ತಮ್ಮ ಸಾವಿನ ಕದ ತಟ್ಟಿ ಬಂದಿದ್ದ. 

ಈ ಘಟನೆ ನಡೆದು ಮೂವತ್ತೈದು ವರುಷಗಳಾಗಿದೆ. ಆ ತಮ್ಮ ಬೇರೆ ಯಾರು ಅಲ್ಲ ನಾನೇ. ಬದುಕಿಸಿದ ಅಣ್ಣ ನನ್ನ ಅಣ್ಣ ಮಂಜು. ಸಾಗರದ ಗಣಪತಿ ಕೆರೆ ಪಕ್ಕದಲ್ಲಿ ಇರುವ  ಆಂಜನೇಯ ದೇವಸ್ಥಾನದ ಹಿಂದಿನ  ನೀರಿನ ತೊರೆ ನೋಡಿದಾಗೆಲ್ಲ ಈ ಘಟನೆ ಮನಸ್ಸಿನಲ್ಲಿ ಹಾಗೆ ಬಂದು ಹೋಗುತ್ತದೆ. 

– ಶ್ರೀನಾಥ್ ಹರದೂರ ಚಿದಂಬರ 

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s