ಆ ರಾತ್ರಿ ನಡೆದಿದ್ದು ..!!

ಆಕಾಶ್ ಕಾರನ್ನು ಬಹಳ ವೇಗವಾಗಿ ಚಲಾಯಿಸಿಕೊಂಡು ಹೋಗುತ್ತಿದ್ದ.  ರಾತ್ರಿ ಸುಮಾರು ಹನ್ನೆರಡೂವರೆ ಆಗಿತ್ತು. ದಾರಿಯ ಅಕ್ಕ ಪಕ್ಕ ದಟ್ಟವಾದ ಕಾಡು ಮತ್ತು ದಾರಿ ತುಂಬಾ ನಿರ್ಜನವಾಗಿತ್ತು, ಕತ್ತಲು  ಭಯ ಹುಟ್ಟಿಸುವಂತಿತ್ತು. ಕಾರಿನ ಬೆಳಕು ಕತ್ತಲೆಯನ್ನು ಸೀಳಿ ದಾರಿಯ ಉದ್ದಕ್ಕೂ ಬೀಳುತಿತ್ತು. ಆಕಾಶನಿಗೆ  ಅರ್ಧ ಗಂಟೆಯಿಂದ  ಎದುರುಗಡೆಯಿಂದ   ಒಂದೇ ಒಂದು ವಾಹನ  ಕೂಡ ಸಿಕ್ಕಿರಲಿಲ್ಲ.  ಕಾರಿನಲ್ಲಿ ಸಂಗೀತ ಹಾಕಿದ್ದರು ಸಹಿತ ಹೊರಗಡೆ ಇದ್ದ  ನಿಶ್ಯಬ್ಧ ಗೊತ್ತಾಗುತ್ತಿತ್ತು. ರಸ್ತೆ  ಬದಿಯಲ್ಲಿ ಊರು ಎಷ್ಟು ದೂರ ಇದೆ ಅನ್ನುವ ಮೈಲಿ ಕಲ್ಲುಗಳು ಕಾಡಿನಲ್ಲಿ ಬೆಳೆದಿದ್ದ ಗಿಡಗಳಿಂದ ಮುಚ್ಚಿ ಹೋಗಿ, ಇನ್ನು ಎಷ್ಟು ದೂರ ಹೋಗಬೇಕು ಅನ್ನುವುದು ಕೂಡ ಗೊತ್ತಾಗುತ್ತಿರಲಿಲ್ಲ. ಆಕಾಶ್ ಅಂದುಕೊಂಡಂತೆ ಅವನು ರಾತ್ರಿ  ಹನ್ನೆರಡೂವರೆ ಅಷ್ಟೋತ್ತಿಗೆ ಊರು ಸೇರಬೇಕಾಗಿತ್ತು. ಆದರೆ ಊರು ಸಿಗುವ  ಯಾವುದೇ ಲಕ್ಷಣ ಕಾಣುತ್ತಿರಲಿಲ್ಲ.  ಆಕಾಶನಿಗೆ ಎಲ್ಲಾದರೂ ಕತ್ತಲಲ್ಲಿ  ದಾರಿ ತಪ್ಪಿದೆನಾ  ಅನ್ನುವ ಅನುಮಾನ ಶುರುವಾಯಿತು. ನಿಲ್ಲಿಸಿ ಯಾರನ್ನಾದರೂ ಕೇಳೋಣ ಅಂದರೆ ದಾರಿಯ ಅಕ್ಕ ಪಕ್ಕ ಕಾಡು ಬಿಟ್ಟರೆ ಬೇರೇನೂ ಕಾಣಿಸುತ್ತಿರಲಿಲ್ಲ. ಆಕಾಶ್ ಮನಸ್ಸಿನಲ್ಲಿ ಇನ್ನು ಹತ್ತು ನಿಮಿಷ ಹೀಗೆ ಹೋಗೋಣ, ಅಕಸ್ಮಾತ್ ಇದೆ ರೀತಿ ಕಾಡು ಮುಂದುವರೆದರೆ, ವಾಪಸು ಹೊರಟು, ಹಿಂದೆ ಸಿಕ್ಕ ಊರಿಗೆ ಹೋಗಿ ಅಲ್ಲಿ ವಿಚಾರಿಸಿ ನೋಡಿದರಾಯಿತು ಅಂತ ಅಂದುಕೊಂಡ.  ಅಷ್ಟರಲ್ಲಿ ಅವನಿಗೆ ಪುತ್ತೂರು ಐದು ಕಿಲೋಮೀಟರು ಅಂತ ಮೈಲಿ ಗಲ್ಲು ಕಾಣಿಸಿತು.  ಸರಿಯಾದ ದಾರಿಯಲ್ಲಿಯೇ ಹೋಗುತ್ತಿದ್ದೇನೆ ಅಂತ ಆಕಾಶನ ಮನಸ್ಸಿಗೆ ಸ್ವಲ್ಪ ಸಮಾಧಾನ ಆಯಿತು. 

ಸ್ವಲ್ಪ ದೂರ ಹೋಗುತ್ತಿದ್ದಂತೆ, ಊರಿನಲ್ಲಿ ಬೆಳಗುತ್ತಿದ್ದ ರಸ್ತೆ  ಹಾಗು ಮನೆಯ ದೀಪಗಳು ಬೆಳಕಿನ ಚುಕ್ಕಿಗಳ  ಹಾಗೆ ಕಾಣಿಸತೊಡಗಿತು. ಇನ್ನೇನು ೫ ನಿಮಿಷದಲ್ಲಿ ಊರು ಸೇರಿ ಬಿಡುತ್ತೇನೆ ಅಂತ ಅಂದುಕೊಳ್ಳುತ್ತ, ಕಾರಿನ ವೇಗ ಕಮ್ಮಿ ಮಾಡಿ ನಿಧಾನವಾಗಿ ಹೋಗತೊಡಗಿದ. ಪುತ್ತೂರಿಗೆ  ಸ್ವಾಗತ ಅನ್ನುವ ಫಲಕ ಕಾರಿನ ಬೆಳಕಿಗೆ ಎದ್ದು ಕಾಣುತಿತ್ತು. ಸ್ವಲ್ಪ ದೂರ ಹೋದ ಮೇಲೆ, ಮುಂದೆ ಸೇತುವೆ ಇದೆ, ಎಚ್ಚರಿಕೆ  ಅನ್ನುವ ಫಲಕ  ಕಾಣಿಸಿತು. ಕಾರಿನ ವೇಗವನ್ನು ಇನ್ನು ತಗ್ಗಿಸಿದ. ದೂರದಲ್ಲಿ ಸೇತುವೆ ಕಾಣಿಸುತ್ತಿತ್ತು. ಸೇತುವೆಯ ಮೇಲೆ, ಎಡ ಬದಿಯಲ್ಲಿ ಪಾದಚಾರಿಗಳು ಹೋಗಲಿಕ್ಕೆ ಮಾಡಿ ಜಾಗದಲ್ಲಿ ಯಾರೋ  ನಿಂತಿದ್ದ ಹಾಗೆ ಒಂದು ಆಕಾರ  ಕಾಣಿಸಿತು. ಒಮ್ಮೆ ಭಯವಾದರೂ, ಊರು ಹತ್ತಿರ ಇದ್ದುದ್ದರಿಂದ ಸ್ವಲ್ಪ ಧೈರ್ಯ ಮಾಡಿ,   ಯಾರು ಅಂತ ನೋಡೋಣ,  ಈ ಕತ್ತಲಲ್ಲಿ ಯಾಕೆ ನಿಂತಿದ್ದಾರೆ ಅನ್ನುವ ಕುತೂಹಲದಿಂದ ಕಾರನ್ನು ತುಂಬಾ ನಿಧಾನವಾಗಿ ಚಾಲನೆ ಮಾಡುತ್ತಾ ಆಕಾರ ನಿಂತಿದ್ದ ಹತ್ತಿರ ಹೋಗುತ್ತಿದ್ದಂತೆ, ಆ ಅಕಾರ ತನ್ನ ಕೈಯನ್ನು ಕಾರಿಗೆ  ಅಡ್ಡ  ಹಾಕಿತು. ಆಕಾಶನಿಗೆ ಕಾರಿನ ಬೆಳಕಿನಲ್ಲಿ ಅಲ್ಲಿ ನಿಂತ್ತಿದ್ದ ಒಬ್ಬ ಹೆಂಗಸು ಮತ್ತು ಮಗು ಕಾಣಿಸಿದರು.  ಆಕಾಶ ಕಾರಿನ ಕಿಟಕಿ ಇಳಿಸಿ, ತಲೆ ಹೊರಗಡೆ ಹಾಕಿ ” ಯಾರು ನೀವು, ಇಲ್ಲಿ ಯಾಕೆ ನಿಂತಿದ್ದೀರಾ?” ಅಂತ ಕೇಳಿದ, ಅದಕ್ಕೆ ಆ ಹೆಂಗಸು “ನಾವು ಇಲ್ಲೇ ಪಕ್ಕದ ಹಳ್ಳಿಯವಳು, ಊರಿಗಿದ್ದ ಲಾಸ್ಟ್ ಬಸ್ ತಪ್ಪಿಹೋಯಿತು, ಹಾಗಾಗಿ ನಡೆದೇ ಹೊರಟಿದ್ದೆ, ಸ್ವಲ್ಪ ತುರ್ತು ಕೆಲಸ ಇತ್ತು ” ಅಂತ ಅಂದಳು. ಅದಕ್ಕೆ ಆಕಾಶ್ ” ಬನ್ನಿ ನಾನು ಊರಿಗೆ ಹೋಗುತ್ತಿದ್ದೇನೆ,   ನಿಮ್ಮನ್ನು ಅಲ್ಲಿ ಬಿಡುತ್ತೇನೆ ” ಅಂತ ಹೇಳಿ ಕಾರಿನ ಬಾಗಿಲು ತೆಗೆದನು. ಆ ಹೆಂಗಸು ಮತ್ತು ಮಗು ಬಂದು ಕಾರಿನಲ್ಲಿ ಕುಳಿತರು.  ಆಕಾಶ ಕಾರನ್ನು ಮತ್ತೆ ಊರಿನ ಕಡೆ ಸೇತುವೆ ಮೇಲೆ ಚಲಾಯಿಸತೊಡಗಿದ. ಸೇತುವೆ ಮುಗಿಯುತ್ತಿದ್ದಂತೆ ಅವನಿಗೆ ಒಂದು ಸಣ್ಣ ಪೆಟ್ಟಿ ಅಂಗಡಿ ಕಾಣಿಸಿತು.  ಮನೆಗೆ ಹೋಗುವ ಮುನ್ನ ಒಂದು ದಂ ಎಳೆದು ಹೋಗೋಣ, ಮನೆಗೆ ಹೋದ ಮೇಲೆ ಆಗಲ್ಲ ಅಂತ ಮನಸ್ಸಿನಲ್ಲಿ ಅಂದುಕೊಂಡು, ಆ ಪೆಟ್ಟಿ ಅಂಗಡಿಯ ಹತ್ತಿರ ನಿಲ್ಲಿಸಿದ. 

ಕಾರಿನ ಒಳಗಡೆ ಕುಳಿತ್ತಿದ್ದ ಹೆಂಗಸಿಗೆ, ಒಂದು ನಿಮಿಷ ನೀರು ತೆಗೆದುಕೊಂಡು ಬರುತ್ತೇನೆ ಅಂತ ಹೇಳಿ ಇಳಿದು, ಪೆಟ್ಟಿ ಅಂಗಡಿಯ ಹತ್ತಿರ ಬಂದು ಒಂದು ಸಿಗರೇಟ್ ಕೊಡಿ ಅಂತ ಹೇಳಿದ. ಪೆಟ್ಟಿ ಅಂಗಡಿಯವನು ಸಿಗರೇಟು ಕೊಡುತ್ತ, ಎಲ್ಲಿಂದ ಬಂದಿದ್ದು , ಯಾವ ಊರು ಅಂತ ಕೇಳಿದ. ಆಕಾಶ  ಅದಕ್ಕೆ ಬೆಂಗಳೂರಿನಿಂದ  ಬರುತ್ತಿದ್ದೇನೆ, ಪುತ್ತೂರಿನಲ್ಲಿ ಸ್ನೇಹಿತನ ಮದುವೆ   ಇದೆ, ಅದಕ್ಕೆ ಹೊರಟ್ಟಿದ್ದೇನೆ ” ಎಂದು ಉತ್ತರ ಕೊಟ್ಟನು. ಹಾಗೆ ಮಾತನಾಡುತ್ತ ಆಕಾಶ ಆ ಪೆಟ್ಟಿ ಅಂಗಡಿಯವನಿಗೆ ” ಇಷ್ಟು ಕತ್ತಲಲ್ಲಿ ನಿಮಗೆ ಊರಿನ ಹೊರಗಡೆ ಇರುವುದಕ್ಕೆ ಹೆದರಿಕೆ ಆಗಲ್ವ”  ಅಂತ ಕೇಳಿದನು. ಪೆಟ್ಟಿ ಅಂಗಡಿಯವನು ” ಅಯ್ಯೋ ಏನು ಭಯ ಇಲ್ಲ ನನಗೆ, ಮೊನ್ನೆ ಊರಿನ ಒಂದು ಹೆಂಗಸು ಮತ್ತು ಮಗು ಇಲ್ಲೇ ಆ ಸೇತುವೆ ಇದೆಯಲ್ಲ,  ಆ  ಸೇತುವೆ ಮೇಲಿಂದ ಹಾರಿ ಆತ್ಮಹತ್ಯೆ ಮಾಡಿ ಕೊಂಡಿದ್ದರು, ಎಲ್ಲರು ಅಲ್ಲಿ ಅವರ ಭೂತ ಇದೆ ಅಂತಾರೆ, ತುಂಬ ಜನ ನೋಡಿದ್ದೇವೆ ಅಂತಾರೆ, ನಂಗಂತೂ ಯಾವತ್ತೂ ಕಂಡಿಲ್ಲ ಸ್ವಾಮಿ, ನಮ್ಮನ್ನು ನೋಡಿದರೆ ಭೂತಗಳೇ ಹೆದರುತ್ತಾವೆ ಸ್ವಾಮಿ”  ಅಂತ ಅಂದನು. ಅದನ್ನು ಕೇಳಿದ ಆಕಾಶನಿಗೆ ಹಣೆಯಲ್ಲಿ ಬೆವರು ಬಂದು, ಮುಖ ಬಿಳುಚಿಕೊಂಡು,  ಗಂಟಲು ಒಣಗತೊಡಗಿ, ಭಯದಿಂದ ನಡುಗತೊಡಗಿದನು.  ಇದ್ದಕಿದ್ದಂತೆ ಆಕಾಶನ ಮುಖ ಬಿಳುಚಿಕೊಂಡಿದ್ದು ನೋಡಿ ಪೆಟ್ಟಿ ಅಂಗಡಿಯವನು, ಏನಾಯ್ತು ಸ್ವಾಮಿ ಅಂತ ಕೇಳಿದರು, ಆಕಾಶನಿಗೆ ಮಾತನಾಡಲು ಧ್ವನಿಯೇ ಬರುತ್ತಿರಲಿಲ್ಲ. ಅಂಗಡಿಯವನು ನೀರು ತಂದು ಕೊಟ್ಟನು. ನೀರು ಕುಡಿದು ಪೆಟ್ಟಿ ಅಂಗಡಿಯನಿಗೆ ಈಗಷ್ಟೇ ಸೇತುವೆ ಹತ್ತಿರ ನಾನು ಒಂದು  ಹೆಂಗಸು ಮತ್ತು ಮಗುವನ್ನು ಕಾರಿನಲ್ಲಿ ಕೂರಿಸಿಕೊಂಡು ಬಂದೆ ಅಂತ ಹೇಳಿದನು. ಪೆಟ್ಟಿ ಅಂಗಡಿಯವನು ಕೂಡಲೇ ಬನ್ನಿ ಸ್ವಾಮಿ ನೋಡೋಣ ಅಂತ ಆಕಾಶನನ್ನು ಕರೆದುಕೊಂಡು ಕಾರಿನ ಬಳಿ ಬಂದು ಒಳಗಡೆ ನೋಡಿದರು. 

ಕಾರಿನ ಒಳಗಡೆ ಹೆಂಗಸಾಗಲಿ, ಮಗುವಾಗಲಿ ಇರಲಿಲ್ಲ. ಆಗಾಗ ಕಾರಿನ ಇಂಡಿಕೇಟರ್ ಮಿನುಗುವ ಬೆಳಕಿಗೆ ಹಿಂದೆ ನಿರ್ಜನ ಸೇತುವೆ ಕಾಣಿಸುತ್ತಿತ್ತು. ಹೆದರಿ ವಾಪಸು ಪೆಟ್ಟಿ ಅಂಗಡಿಯ ಹತ್ತಿರ ಹೋಗಲು ತಿರುಗಿದನು. ಆದರೆ ಅಲ್ಲಿ ಪೆಟ್ಟಿ ಅಂಗಡಿಯು ಇರಲಿಲ್ಲ, ಜೊತೆಯಲ್ಲಿ ಬಂದಿದ್ದ  ಅಂಗಡಿಯವನು ಕಾಣಲಿಲ್ಲ. 

 ನಡೆದಿದ್ದು ನಿಜವೋ, ಭ್ರಮೆಯೋ  ಅಂತ ಗೊತ್ತಾಗದೆ ಆಕಾಶ  ಭಯದಿಂದ ನಡಗುತ್ತ ಅಲ್ಲಿಯೇ ನಿಂತ. 

– ಶ್ರೀನಾಥ್ ಹರದೂರ ಚಿದಂಬರ 

2 thoughts on “ಆ ರಾತ್ರಿ ನಡೆದಿದ್ದು ..!!

  1. ಅಬ್ಬಾ, ಇಂಥಾದ್ದೇ ರೋಚಕ ಕತೆಗಳನ್ನ ನನ್ನಜ್ಜಯ್ಯ ಹೇಳ್ತಾ ಇದ್ದ್ರು.
    ನಿಮಗೆ ಗೊತ್ತಿರೋವ್ರ ಆಕಾಶ್ ಅಂದ್ರೆ ?

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s