ಹರಿದ ಛತ್ರಿ !!

ಛಾಯಾಚಿತ್ರಣ :  ಪ್ರಜ್ಞಾ ಹೆಚ್ ಪಿ 

ಕಥೆ : ಶ್ರೀನಾಥ್ ಹರದೂರ  ಚಿದಂಬರ 

ದೋ .. ಎಂದು ಮಳೆ ಬಿಟ್ಟು ಬಿಡದೆ  ಸುರಿಯುತ್ತಿತ್ತು.  ಮೂರನೇ ತರಗತಿಯಲ್ಲಿ ಓದುತ್ತಿದ್ದ  ಭೂಮಿ  ಮನೆಯಿಂದ ಎರಡು ಕಿಲೋಮೀಟರು ದೂರ ಇದ್ದ  ಶಾಲೆಗೇ ತನ್ನ ಹರುಕು ಛತ್ರಿ ಹಿಡಿದು ನಡೆದುಕೊಂಡು ಹೋಗುತ್ತಿದ್ದಳು. ಹೋಗುವಾಗ ಆಗಾಗ   ಛತ್ರಿಯ ಬಟ್ಟೆ  ತಂತಿಯಿಂದ ಜಾರಿ ಇಳಿದಾಗ, ಅದನ್ನು ತಂತಿಯ ತುದಿಗೆ ಮತ್ತೆ ಸಿಕ್ಕಿಸಿಕೊಂಡು,  ಆ ಜಿಟಿ ಜಿಟಿ ಮಳೆಯಲ್ಲಿ ಬರಿಕಾಲಲ್ಲಿ ಪುಟ್ಟ ಹೆಜ್ಜೆಗಳನ್ನಿಡುತ್ತ, ದಾರಿಯಲ್ಲಿ ನಿಂತಿದ್ದ ನೀರನ್ನು  ಕಾಲಿನಲ್ಲಿ ಪಚ ಪಚ ತುಳಿಯುತ್ತ , ಶಾಲೆ ಕಡೆಗೆ ಹೋಗುತ್ತಿದ್ದಳು. ಹಿಡಿದ ಛತ್ರಿಯಿಂದ ಅವಳ ತಲೆ ಮಾತ್ರ ಒದ್ದೆಯಾಗುತ್ತಿರಲಿಲ್ಲ ಅಷ್ಟೇ, ಶಾಲೆಗೆ ಹೋಗುವಷ್ಟರಲ್ಲಿ ಅವಳು ಸಂಪೂರ್ಣ ಒದ್ದೆ ಆಗಿದ್ದಳು. ಅವಳ ಸ್ನೇಹಿತರು ಮಾತ್ರ ತಲೆಯಿಂದ ಕಾಲಿನ ಮಂಡಿಯವರೆಗೂ ಬರುವ ಬಣ್ಣ ಬಣ್ಣದ ರೈನ್ ಕೋಟು ಹಾಕಿಕೊಂಡು ಬರುತ್ತಿದ್ದರು. ಹಾಗಾಗಿ ಅವರ ಬಟ್ಟೆಗಳು ಅಷ್ಟು ಒದ್ದೆಯಾಗಿರುತ್ತಿರಲಿಲ್ಲ. ಅವರ ಜೊತೆ ಬರುವಾಗಲೆಲ್ಲ ತಾನು ಬಣ್ಣ ಬಣ್ಣದ ಚಿಟ್ಟೆಗಳ    ಚಿತ್ರವಿದ್ದ  ರೈನ್ ಕೋಟು ಹಾಕಿ ಕೊಳ್ಳಬೇಕು ಅನ್ನುವ ಆಸೆ ಮೂಡುತ್ತಿತ್ತು.  ಆದರೆ ಮನೆಯ ಪರಿಸ್ಥಿತಿ ಗೊತ್ತಿದ್ದರಿಂದ ಮನೆಯಲ್ಲಿ ನನಗು ಕೊಡಿಸಿ ಅಂತ ಕೇಳುವ ಧೈರ್ಯವೇ ಇರಲಿಲ್ಲ.  ಅಪ್ಪ ಕೆಲಸ ಮಾಡುತ್ತಿದ್ದ  ಮನೆಯವರು ತಾವು   ಉಪಯೋಗಿಸದ ಛತ್ರಿಯನ್ನು ಅಪ್ಪನಿಗೆ   ಕೊಟ್ಟಿದ್ದರು.  ಅದೇ ಛತ್ರಿಯನ್ನು  ಭೂಮಿ ಶಾಲೆಗೇ ಬರುವಾಗ ತರುತ್ತಿದ್ದುದು. ಆ ಛತ್ರಿಯನ್ನೇ   ಮೂರು ವರುಷಗಳಿಂದ  ಜತನದಿಂದ ಉಪಯೋಗಿಸುತ್ತಿದ್ದಳು. ಭೂಮಿಯ ಲಂಗ ಪೂರ್ತಿಯಾಗಿ ಒದ್ದೆ ಆಗುತ್ತಿದ್ದರಿಂದ ಬೆಂಚಿನ ಮೇಲೆ ಅವಳು ಕೂತು ಎದ್ದರೆ , ಅವಳು ಕೂತ  ಜಾಗ ಒದ್ದೆಯಾಗಿ, ನೀರಿನ ಗುರುತು ಮೂಡಿರುತ್ತಿತ್ತು. ಅದನ್ನು  ನೋಡಿ ಅವಳ ಸ್ನೇಹಿತೆಯರು ಭೂಮಿಯನ್ನು ಸುಸು ಮಾಡಿಕೊಂಡಿದ್ದೀಯ ಎಂದು  ಅಣಕಿಸುತ್ತಿದ್ದರು.  ಭೂಮಿಯಾ  ಪುಟ್ಟ ಮನಸ್ಸಿಗೆ ಮಜುಗರ, ದುಃಖ ವಾದರೂ ತೋರಿಸಿಕೊಳ್ಳುತ್ತಿರಲಿಲ್ಲ. ತಾನು ಅವರೊಂದಿಗೆ ನಕ್ಕಂತೆ ಮಾಡುತ್ತಿದ್ದಳು. 

ಭೂಮಿ ಎಂದಿನಂತೆ ಶಾಲೆ ಮುಗಿಸಿಕೊಂಡು ಮನೆಗೆ ಬಂದು, ಓದಿ, ಊಟ ಮಾಡಿ ಮಲಗಿದಳು. ರಾತ್ರಿ ಅವಳಿಗೆ ಶಾಲೆಗೇ ಹೋಗುವಾಗ ದಾರಿಯಲ್ಲಿ ಒಂದು ಬಣ್ಣ ಬಣ್ಣದ ಚಿಟ್ಟೆಗಳ ಚಿತ್ರವಿದ್ದ ಒಂದು ರೈನ್ ಕೋಟು ಸಿಕ್ಕಂತೆ, ಅದನ್ನು  ಅವಳು ಸ್ನೇಹಿತೆಯರೊಂದಿಗೆ ಹಾಕಿಕೊಂಡು,    ಚಿಟ್ಟೆಯಂತೆ ಹಾರುತ್ತ  ಶಾಲೆಗೇ ಹೋದಂತೆ ಕನಸು ಬಿತ್ತು. ಬೆಳಿಗ್ಗೆ ಎದ್ದಾಗ  ರೈನ್ ಕೋಟು ಸಿಕ್ಕಿದ್ದು ಕನಸಿನಲ್ಲಿ, ಅದು  ನಿಜವಲ್ಲ ಅಂದಾಗ ಮುಖ ಸಪ್ಪಗಾಯಿತು.   ಸ್ನಾನ ಮಾಡಿ, ತಯಾರಾಗಿ ದೇವರ ಹತ್ತಿರ ನನಗು ಒಂದು ರೈನ್ ಕೋಟು ಸಿಗುವ ಹಾಗೆ ಮಾಡು ದೇವರೇ ಎಂದು ಬೇಡಿಕೊಂಡಳು. ನಂತರ  ಅಂಬಲಿ ಕುಡಿದು ಶಾಲೆಗೇ ಅದೇ ಹರಕು ಛತ್ರಿಯನ್ನು,   ಮಳೆ ಬರುತ್ತಿರಲಿಲ್ಲವಾದ್ದರಿಂದ ಕೈಯಲ್ಲಿ ಹಿಡಿದುಕೊಂಡು ಹೊರಟಳು.   ಶಾಲೆ ಇನ್ನು ಸ್ವಲ್ಪ ದೂರ ಇತ್ತು, ಆಗ ದಾರಿಯಲ್ಲಿ ಏನೋ ಕೆಂಪು ಬಣ್ಣದ ಒಂದು ವಸ್ತು ದೂರದಲ್ಲಿ ರಸ್ತೆಯ ಬದಿಯಲ್ಲಿ ಕಾಣಿಸಿತು. ಕುತೂಹಲದಿಂದ ಹತ್ತಿರ ಹೋಗಿ ನೋಡಿದರೆ ಅದು ರೈನ್ ಕೊಟಾಗಿತ್ತು.  ಮಡಚಿದ್ದ ಆ ರೈನ್ ಕೋಟನ್ನು ಬಿಡಿಸಿ ನೋಡಿದರೆ , ಅದು ಕನಸಿನಲ್ಲಿ ಸಿಕ್ಕ ರೈನ್ ಕೋಟಿನ ತರಹನೇ ಇತ್ತು. ಅವಳ ಮನಸ್ಸಿಗೆ ಆದ ಸಂತೋಷಕ್ಕೆ ಪಾರವೇ ಇರಲಿಲ್ಲ. ದೇವರು ನಾನು ಕೇಳಿದ ರೈನ್ ಕೋಟೆ ಕೊಟ್ಟಿದ್ದಾನೆ ಅಂತ ಬಹಳ ಖುಷಿಯಾಯಿತು.   ತನ್ನ ಬ್ಯಾಗ್ ಮತ್ತು ತನ್ನ ಹರಕಲು ಛತ್ರಿಯನ್ನು ಅಲ್ಲೇ ಪಕ್ಕಕ್ಕಿಟ್ಟು, ರೈನ್ ಕೋಟು ಹಾಕಿ ಕೊಂಡು ನೋಡಿದರೆ , ಅದು ಅವಳ ದೇಹಕ್ಕೆ ಸರಿಯಾಗಿ ಹೊಂದಿಕೆಯಾಗುತ್ತಿತ್ತು. ಅವಳಿಗೆ ಇದು ದೇವರು ನನಗೆ ಕೊಟ್ಟಿದ್ದು ಅಂತ ಖಚಿತವಾಗಿ ಹೋಯಿತು.  ಆನಂದದಿಂದ ಆ ರೈನ್ ಕೋಟನ್ನು ತೆಗೆದು ತನ್ನ ಬ್ಯಾಗಿನಲ್ಲಿ ಹಾಕಿಕೊಂಡು, ಹರಿದ ಛತ್ರಿ ಇನ್ನೇಕೆ ಅಂದುಕೊಂಡು ಅದನ್ನು ಅಲ್ಲೇ ರಸ್ತೆಯ ಪಕ್ಕಕ್ಕೆ ಎಸೆದು ಶಾಲೆಗೆ ಹೋದಳು. 

ಅವತ್ತು ಇಡೀ ದಿವಸ ಶಾಲೆಯಲ್ಲಿ ಅವಳ ಮನಸ್ಸು ತನ್ನ ಬ್ಯಾಗಿನಲ್ಲಿದ್ದ ರೈನ್ ಕೋಟಿನ ಕಡೆಗೆ ಇತ್ತು.  ಮನಸ್ಸು ಸಂತೋಷದಿಂದ ಹಿರಿ ಹಿರಿ ಹಿಗ್ಗುತಿತ್ತು. ಶಾಲೆಗೆ ಬಿಟ್ಟಾಗ ಮಳೆ ಬರುವಂತೆ ಮಾಡಪ್ಪ  ಸಾಕು, ರೈನ್ ಕೋಟು ಹಾಕಿಕೊಂಡು ತಾನು ಎಲ್ಲರಂತೆ ಹೋಗಬಹುದು ಅಂತ  ದೇವರಲ್ಲಿ ಬೇಡಿಕೊಂಡಳು.  ಶಾಲೆಯ ಕೊನೆಯಾ ಅವಧಿ ಬಂದಾಗಂತೂ ಅವಳು ಮನಸ್ಸು ಹುಚ್ಚೆದ್ದು ಕುಣಿಯುತ್ತಿತ್ತು. ಅಂತೂ ಶಾಲೆಯ ಗಂಟೆ ಹೊಡೆಯಿತು. ಎಲ್ಲರ ವಿದ್ಯಾರ್ಥಿಗಳು  ಮನೆಗೆ ಹೊರಟರು. ಭೂಮಿ ತನ್ನ ಬ್ಯಾಗನ್ನು ತೆಗೆದುಕೊಂಡು ಹೊರಬಂದಳು. ಆಗ ಪಕ್ಕದ ತರಗತಿಯಲ್ಲಿದ್ದ ಒಂದು ವಿದ್ಯಾರ್ಥಿನಿ ಅಳುತ್ತ ಶಾಲೆಯ ಆವರಣದಲ್ಲಿ ನಿಂತ್ತಿದ್ದಳು. ಅವಳ ಸ್ನೇಹಿತೆಯರು ಅವಳನ್ನು ಸಮಾಧಾನ ಮಾಡುತ್ತಾ ನಿಂತಿದ್ದರು.  ಆ ಗುಂಪಿನಲ್ಲಿ ಭೂಮಿಯ  ಸ್ನೇಹಿತೆ ಕೂಡ ಇದ್ದಿದ್ದರಿಂದ, ಅವಳ ಹತ್ತಿರ ಹೋಗಿ ಏನಾಯಿತು ಅಂತ ಕೇಳಿದಳು. ಆಗ ಅವಳು ಆ ಹುಡುಗಿಯ ರೈನ್ ಕೋಟು ಕಳೆದು ಹೋಗಿದೆಯಂತೆ , ಅದಕ್ಕೆ ಅವಳು ಅಳುತ್ತ ಇದ್ದಾಳೆ ಅಂತ ಹೇಳಿದಳು.  ಕೂಡಲೇ ಭೂಮಿಗೆ ಗೊತ್ತಾಯಿತು , ತನಗೆ ಬೆಳಿಗ್ಗೆ ಸಿಕ್ಕ ರೈನ್ ಕೋಟು ದೇವರು ಕೊಟ್ಟಿದ್ದಲ್ಲ, ಅದು ಇವಳದು ಅಂತ. ಆದರೆ ಅವಳಿಗೆ ಕೊಡಲು ಇಷ್ಟವಿರಲಿಲ್ಲ, ಅದು ಅವಳ ಕನಸಿನ ರೈನ್ ಕೋಟು ಆಗಿತ್ತು. ಅವಳು ಅಲ್ಲಿಂದ ನಿಧಾನವಾಗಿ ಮನೆ ಕಡೆ ಹೊರಟಳು. ಶಾಲೆಯ ಆವರಣದಿಂದ ಶಾಲೆಯ ಗೇಟಿನ ಕಡೆ ಬರುವಾಗ ಅವಳ ತಲೆಯಲ್ಲಿ ನೂರಾರು ಯೋಚನೆಗಳು, ಶಾಲೆಯಲ್ಲಿ ಹೇಳಿಕೊಟ್ಟ ನೀತಿ ಪಾಠ, ಅಪ್ಪ ಯಾವಾಗಲು ಹೇಳುತ್ತಿದ್ದ ” ತನ್ನದಲ್ಲದ ವಸ್ತುವನ್ನು ಯಾವತ್ತಿಗೂ ಆಸೆ ಪಡಬಾರದು” ಮಾತುಗಳು ಭೂಮಿಯನ್ನು ಚುಚ್ಚತೊಡಗಿತು.  ಶಾಲೆಯ ಗೇಟು ದಾಟಿದ್ದ ಅವಳು ಸರಕ್ಕನೆ ತಿರುಗಿ, ಬ್ಯಾಗಿನಲ್ಲಿದ್ದ ರೈನ್ ಕೋಟನ್ನು ಕೈಯಲ್ಲಿ  ಹಿಡಿದು, ವಾಪಸು ಶಾಲೆಯ ಒಳಗಡೆ ಹೋಗಿ, ಅಳುತ್ತ ನಿಂತಿದ್ದ ಆ ಹುಡುಗಿಯ ಕೈಯಲ್ಲಿ ಇಟ್ಟು ,  ನನಗೆ ದಾರಿಯಲ್ಲಿ ಬರುತ್ತಾ ಸಿಕ್ಕಿತು, ಇದು ನಿಂದೇನಾ ?  ಅಂತ ಕೇಳಿದಳು. ರೈನ್ ಕೋಟನ್ನು ನೋಡಿ ಆ ಹುಡುಗಿ ತುಂಬಾ ಸಂತೋಷದಿಂದ ” ಹೌದು , ಇದು ನಂದೇ” ಅಂತ ಹೇಳಿ ಅದನ್ನು ತೆಗೆದುಕೊಂಡು ಭೂಮಿಗೆ ಧನ್ಯವಾದಗಳನ್ನು ಹೇಳಿದಳು. ಅವಳ ಮುಖದಲ್ಲಿದ್ದ ಸಂತೋಷ ನೋಡಿ ಭೂಮಿಗೆ ಆದ ಆನಂದ ಆ ರೈನ್ ಕೋಟು ಸಿಕ್ಕಾಗ  ಕೂಡ  ಆಗಿರಲಿಲ್ಲ. 

ಭೂಮಿ ಅಲ್ಲಿಂದ ತಿರುಗಿ ಸಂತೋಷದಿಂದ ಓಡತೊಡಗಿದಳು. ಸೀದಾ ಅವಳು ಬೆಳಿಗ್ಗೆ ತನ್ನ ಛತ್ರಿ ಎಸೆದ ಜಾಗ ಸಿಗುವ ತನಕ ನಿಲ್ಲಲಿಲ್ಲ. ಬೆಳಿಗ್ಗೆ  ಅವಳು ದಾರಿ ಪಕ್ಕದಲ್ಲಿ ಎಸೆದ ಜಾಗದಲ್ಲಿಯೇ ಅದು ಬಿದ್ದಿತ್ತು.  ಅದನ್ನು ಪ್ರೀತಿಯಿಂದ ಎತ್ತಿಕೊಂಡಳು. ಜೋರಾಗಿ ಮಳೆ ಶುರುವಾಯಿತು. ಛತ್ರಿಯನ್ನು ಬಿಡಿಸಿಕೊಂಡು, ಅದರ ತಂತಿಯಿಂದ  ಇಳಿದುಬಂದ  ಬಟ್ಟೆಯನ್ನು ಮತ್ತೆ ತಂತಿ ತುದಿಗೆ ಸಿಕ್ಕಿಸಿಕೊಂಡು ಮನೆ ಕಡೆ ಹೊರಟಳು. ಭೂಮಿ ತಲೆ ಎತ್ತಿ ಛತ್ರಿಯನ್ನು ನೋಡಿದಳು, ಯಾಕೋ  ಹರಿದ ಛತ್ರಿ ಸಹಿತ ಬಹಳ ಸುಂದರವಾಗಿ ಕಾಣಿಸಿತು. 

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s