ನಾವುಗಳು ಹೊರ ರಾಜ್ಯಕ್ಕೆ ಹೋದಾಗ ಎಲ್ಲಾದರೂ ಕನ್ನಡದವರು ಕಂಡರೆ, ಅವರು ಪರಿಚಯ ಇರಲಿ ಅಥವಾ ಇರದಿರಲಿ ಹೋಗಿ ಮಾತನಾಡಿಸಿ, ಎಲ್ಲಿಂದ ಬಂದಿದ್ದೀರಾ? ಯಾವ ಊರಿನವರು? ನೀವು ಟ್ರಿಪ್ ಗೇನ? ಅಂತೆಲ್ಲ ವಿಚಾರಿಸಿ, ಖುಷಿ ಪಡುತ್ತೀವಿ. ಅವರನ್ನು ನಾವು ಮತ್ತೆ ಯಾವತ್ತು ಭೇಟಿ ಮಾಡುವುದಿಲ್ಲ, ಆದರೂ ಅವತ್ತು ಇದ್ದಕ್ಕಿದ್ದಂತೆ ಕನ್ನಡದವರ ಮೇಲೆ ಬಹಳ ಅಭಿಮಾನ ಬಂದುಬಿಟ್ಟುರುತ್ತದೆ. ಅದೇ ಊರಲ್ಲಿ ಪಕ್ಕದ ಮನೆಯವರನ್ನು ಮಾತನಾಡಿಸಲು ಬಿಗುಮಾನ ತೋರುವ ನಾವು ಹೊರಗಡೆ ಹೋದಾಗ, ನಮಗೆ ಕನ್ನಡವರು ಅಂತ ಅಭಿಮಾನ ಎಲ್ಲಿಂದ ಬರುತ್ತದೆ. ಇನ್ನು ಹೊರಗಡೆ ದೇಶಕ್ಕೆ ಹೋದಾಗ ಕನ್ನಡದವರು ಇರಲಿ ಯಾವುದೇ ಭಾರತೀಯ ಸಿಕ್ಕರೆ ಸಾಕು ಖುಷಿನೋ ಖುಷಿ. ಉತ್ತರದವನ, ದಕ್ಷಿಣದವನ, ಪೂರ್ವದವನ ಅಥವಾ ಪಶ್ಚಿಮದವನ ಅಂತ ನೋಡುವುದಿಲ್ಲ. ಭಾರತೀಯ ಅಂತ ಗೊತ್ತಾದರೆ ಸಾಕು, ಅವರನ್ನು ಮಾತನಾಡಿಸಲು ಪ್ರಯತ್ನ ಪಡುತ್ತೇವೆ. ಅದೇ ಭಾರತದಲ್ಲಿ ಇರಬೇಕಾದರೆ, ನೀನು ಉತ್ತರದವನು, ದಕ್ಷಿಣದವನು…. ಆ ಭಾಷೆಯವನು, ಈ ಭಾಷೆಯವನು ಅಂತ ಭೇದ ಭಾವ ಶುರುವಾಗಿರುತ್ತದೆ. ಯಾಕೆ ಹೀಗೆ? ಹೊರಗಡೆ ತೋರಿಸುವ ಪ್ರೀತಿ, ಅಭಿಮಾನ ಇಲ್ಲಿದ್ದಾಗ ಯಾಕಿಲ್ಲ?
ಹೊರದೇಶಕ್ಕೆ ಬಂದಾಗ ಮೊದಲು ಎಲ್ಲಾದರೂ ಭಾರತೀಯರು ಕಾಣುತ್ತಾರಾ ಅಂತ ನೋಡುತ್ತೀವಿ. ನಂತರ ತುಂಬ ಜನ ಭಾರತೀಯರು ಇದ್ದಾರೆ ಅಂತ ಗೊತ್ತಾದ ಮೇಲೆ, ನಮ್ಮ ಕನ್ನಡವರು ಇದ್ದಾರಾ ಅಂತ ನೋಡುತ್ತೀವಿ. ಅವರು ತುಂಬ ಜನ ಇದ್ದಾರೆ ಅಂತ ಅಂದುಕೊಳ್ಳಿ, ನಮ್ಮ ಊರಿನವರು ಇದ್ದಾರಾ ಅಂತ ನೋಡಲಿಕ್ಕೆ ಶುರು ಮಾಡುತ್ತೇವೆ. ಎಲ್ಲ ಕಡೆ ಕನ್ನಡದವರು ಸೇರಿ ಒಂದು ಕಾರ್ಯಕ್ರಮ ಮಾಡಿದರೆ, ಅಲ್ಲಿ ಮಂಗಳೂರಿನ ಒಂದು ಗುಂಪು, ಉತ್ತರ ಕನ್ನಡದವರ ಒಂದು ಗುಂಪು, ಮಲೆನಾಡಿನವರ ಒಂದು ಗುಂಪು… ಹೀಗೆ ಅಲ್ಲಿಯೂ ಸಹ ನಿಮಗೆ ಒಗ್ಗಟ್ಟು ಕಾಣುವುದಿಲ್ಲ. ಹೊರ ದೇಶದಲ್ಲಿ ಯಾರು ಇಲ್ಲದಾಗ ಒಬ್ಬ ಭಾರತೀಯ ಕಂಡರೆ, ಒಬ್ಬನಾದರೂ ಇದ್ದಾನಲ್ಲ ಅಂತಾ, ಹೊರ ರಾಜ್ಯದಲ್ಲಿ ಕನ್ನಡದವನು ಕಂಡರೆ, ಅಂತೂ ಒಬ್ಬ ಕನ್ನಡದವನಾದರೂ ಇದ್ದಾನಲ್ಲ ಅನ್ನುವ ನಮ್ಮ ಮನಸ್ಸು, ಜೊತೆಯಲ್ಲಿ ಎಲ್ಲರು ಇದ್ದಾಗ ಅದರ ಬೆಲೆ ಅರಿಯದೆ ದೂರವಾಗುತ್ತಿವಲ್ಲ , ಇದೆ ಮನೋಭಾವ ನಮ್ಮನ್ನು ಒಡೆದು ಆಳುವವರಿಗೆ ಸಿಕ್ಕಿರುವ ಬ್ರಹ್ಮಾಸ್ತ್ರ .
ಈ ರೀತಿಯಾಗಿ ನಾವು ನಡೆದುಕೊಳ್ಳುವುದು ಇತ್ತೀಚಿನ ದಿನಗಳದ್ದಲ್ಲ, ಸಾವಿರಾರು ವರುಷಗಳಿಂದ ಹೀಗೆ ನಡೆದುಕೊಂಡು ಬಂದಿದೆ. ನಾವು ಭಾರತೀಯರು, ನಾವೆಲ್ಲ ಒಂದೇ ಎಂದು ಹೇಳಿಕೊಳ್ಳುತ್ತಾ, ನೀನು ಉತ್ತರ, ನಾನು ದಕ್ಷಿಣ ಅಂತ ಗೆರೆ ಎಳೆದುಕೊಂಡು ಬಿಡುತ್ತೇವೆ. ಹೋಗಲಿ ನಮ್ಮ ನಮ್ಮ ರಾಜ್ಯದಲ್ಲಾದರೂ ಒಗ್ಗಟ್ಟು ಇದೆಯಾ ಎಂದು ನೋಡಿದರೆ, ನಮ್ಮ ಮಧ್ಯೆ ಜಾತಿ, ಆ ಊರು, ಈ ಊರು, ಆ ಪಕ್ಷ , ಈ ಪಕ್ಷ ಅಂತ ಸಾವಿರಾರು ಗೆರೆ ಎಳೆದುಕೊಂಡು ಬಿಟ್ಟೆದ್ದೆವೆ.
ಇಡೀ ಭಾರತದಲ್ಲಿ, ಪ್ರತಿಯೊಂದು ರಾಜ್ಯಕ್ಕೂ ಭಾಷೆ ಬೇರೆ, ಸಂಪ್ರದಾಯ ಬೇರೆ, ಆಚರಣೆಗಳೇ ಬೇರೆ, ಜೀವನ ಶೈಲಿ ಬೇರೆ, ಯೋಚನೆಗಳೇ ಬೇರೆ, ಹಾಗಿದ್ದರು ನಮ್ಮನ್ನು ಒಟ್ಟುಗೂಡಿಸಿರುವುದು ಭಾರತ. ಈ ವೈವಿಧ್ಯತೆಯೇ ಇವತ್ತಿಗೂ, ಸಾವಿರಾರು ವರ್ಷ ಆಳಿದ ಮುಘಲರಿಗಾಗಲಿ, ನೂರಾರು ವರುಷ ಆಳಿದ ಬ್ರಿಟಿಷರಿಗಾಗಲಿ ಭಾರತೀಯ ಸಂಸ್ಕೃತಿಯನ್ನು ಹಾಳು ಮಾಡಲು ಸಾಧ್ಯವಾಗಲಿಲ್ಲ. ಆದರೆ ಅವರಿಗೆ ಆಳಲು ಸಾಧ್ಯ ಮಾಡಿಕೊಟ್ಟಿದ್ದು ನಮ್ಮ ಮಧ್ಯೆ ಇದ್ದ ಭಾಷೆ, ಜಾತಿ ಎಂಬ ಗೆರೆಗಳು. ಜೊತೆಯಲ್ಲಿದ್ದು ನಮ್ಮವರ ಬೆಲೆ ಅರಿಯದ ಮನೋಭಾವ ನಮ್ಮಲಿ ಒಡಕು ತರಲು ಅವರಿಗೆ ಸುಲಭವಾಗಿದ್ದು. ವಿಪಾರ್ಯಾಸ ಅಂದರೆ ನಮ್ಮವರೇ ಇವತ್ತಿಗೂ ಜಾತಿ, ಧರ್ಮ, ಭಾಷೆ ಎಂಬ ವಿಷಯಗಳನ್ನು ಮುಂದಿಟ್ಟುಕೊಂಡು ನಮ್ಮಲ್ಲೇ ಬಿರುಕು ಮೂಡಿಸಿ , ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿರುವುದು. ಒಂದು ಭಾಷೆಯನ್ನು ಇನ್ನೊಂದು ಭಾಷೆ ನಾಶ ಮಾಡಲಿಕ್ಕೆ ಆಗುವುದಿಲ್ಲ. ಹಾಗೇನಾದರು ಆಗುವ ಹಾಗಿದ್ದರೆ ನಮ್ಮ ಕನ್ನಡ ಅರಸರು ಆಳುವಾಗ ಇಡೀ ಅರ್ಧ ಭಾರತ ಕನ್ನಡ ಮಾತನಾಡಬೇಕಿತ್ತು ಅಥವಾ ತಮಿಳು ಅರಸರು ಆಳುವಾಗ ಕನ್ನಡ ನಾಶವಾಗಿ ಹೋಗಬೇಕಿತ್ತಲ್ಲವೇ. ಸಾವಿರಾರು ವರ್ಷಗಳಿಂದ ಎಷ್ಟೇ ದಾಳಿ, ದೌರ್ಜನ್ಯ ನಡೆದರೂ ಇವತ್ತಿಗೂ ಕನ್ನಡ ಇದೆ. ನಮ್ಮ ಭಾಷೆಯನ್ನು ನಾವೇ ಮಾತನಾಡದೆ, ಅಭಿಮಾನ ತೋರಿಸದೆ ಇದ್ದರೆ ಅದು ತಾನಾಗಿ ಸಾಯುತ್ತದೆ. ಅದೇ ಧರ್ಮವು ಕೂಡ, ಒಂದು ಧರ್ಮವನ್ನು ಬೇರೊಂದು ಧರ್ಮ ನಾಶ ಮಾಡಲಾಗದು. ನಮ್ಮ ಧರ್ಮವನ್ನು ನಾವು ಗೌರವಿಸದೆ, ಪಾಲಿಸದೆ ಇದ್ದರೆ ಅದು ನಾಶವಾಗುತ್ತದೆ. ಹೇಗೆ ಅಧಿಕಾರದ ಆಸೆ, ಭಾಷೆ, ಧರ್ಮವನ್ನು ಆಯುಧವನ್ನಾಗಿ ಮಾಡಿಕೊಂಡು ನಮ್ಮಲ್ಲಿ ಒಡಕು ತಂದು ಹೇಗೆ ಬ್ರಿಟಿಷರು ದೇಶ ದೋಚಿದರೋ, ಅದೇ ರೀತಿ ಇವತ್ತು ರಾಜಕೀಯದವರು ಕೂಡ ಅದೇ ತಂತ್ರ ಉಪಯೋಗಿಸಿ ದೇಶ ಲೂಟಿ ಮಾಡುತ್ತಿದ್ದಾರೆ. ರಾಜಕೀಯದವರು ಪ್ರತಿಯೊಂದು ವಿಷಯಕ್ಕೂ ನಮ್ಮ ಮುಂದೆ ತರುವುದು ಒಂದೋ ಭಾಷೆ, ಇಲ್ಲ ಅಂದ್ರೆ ಧರ್ಮ.
ಹೊರ ರಾಜ್ಯ, ಹೊರ ದೇಶಕ್ಕೆ ಹೋದಾಗ ಹುಟ್ಟುವ ಅಭಿಮಾನ ಮತ್ತು ಪ್ರೀತಿ, ದೇಶದಲ್ಲಿ ಇದ್ದಾಗಲೇ ತೋರಿಸಿದರೆ ನಾವೆಲ್ಲಾ ಒಂದೇ ಅಂತ ಹೇಳುವುದಕ್ಕೂ ಒಂದು ಅರ್ಥ ಬರುತ್ತದೆ. ಭಾರತದಲ್ಲಿ ಪ್ರತಿ ರಾಜ್ಯದವರ ಭಾಷೆ, ಆಚರಣೆ, ಸಂಪ್ರದಾಯ ಮತ್ತು ಜೀವನ ಶೈಲಿ ಬೇರೆ ಇರಬಹುದು, ಆದರೆ ಬೇರೆಯವರ ಭಾಷೆ, ಆಚರಣೆ, ಸಂಪ್ರದಾಯ ಮತ್ತು ಜೀವನ ಶೈಲಿ ಕೀಳು ಅನ್ನುವ ಅಭಿಪ್ರಾಯ ಇರಬಾರದು. ಅದನ್ನೇ ರಾಜಕೀಯದವರು ಮಾಡುತ್ತಿರುವುದು. ನಮಗೆಲ್ಲ ನೆನಪಿರಬೇಕಾಗಿರುವುದು ಈ ವೈವಿಧ್ಯತೇ ಇಂದಲೇ ಇವತ್ತಿಗೂ ಭಾರತೀಯ ಸಂಸ್ಕೃತಿಯನ್ನು ಉಳಿಸಿಕೊಂಡು ಬರಲು ಸಾಧ್ಯವಾಗಿದೆ.
– ಶ್ರೀನಾಥ್ ಹರದೂರ ಚಿದಂಬರ
Exactly correct 👏👏
LikeLike
Thank you 😊
LikeLike