ಸಣ್ಣ ಕಥೆ : ಶ್ರೀನಾಥ್ ಹರದೂರ ಚಿದಂಬರ
ಅವನು ತನ್ನ ಕೆಲಸದಲ್ಲಿ ನಿರತನಾಗಿದ್ದ. ಮೇಲಾಧಿಕಾರಿ ಬಂದು ನನ್ನ ಕೋಣೆಗೆ ಬಂದು ಹೋಗು, ನಿನ್ನ ಹತ್ತಿರ ಸ್ವಲ್ಪ ಮಾತನಾಡಬೇಕು ಎಂದು ಹೇಳಿದರು. ಅಯ್ಯೋ, ಇನ್ನೇನು ಸಮಸ್ಯೆ ಬಂತಪ್ಪಾ ? ಅಂತ ಅಂದುಕೊಳ್ಳುತ್ತ ಅವರ ಕೋಣೆಗೆ ಹೋದ. ಅವನ ಮೇಲಾಧಿಕಾರಿ ” ನೋಡು ನೀನು ತುಂಬಾ ಚೆನ್ನಾಗಿ ಕೆಲಸ ಮಾಡ್ತಾ ಇದ್ದಿಯಾ, ಆಡಳಿತ ಮಂಡಳಿಗೆ ನಾನು ನಿನ್ನ ಬಗ್ಗೆ ಶಿಫಾರಸ್ಸು ಮಾಡಿದ್ದೇನೆ, ನಿನಗೆ ಬಡ್ತಿ ಸಿಗುವ ಅವಕಾಶ ಜಾಸ್ತಿ ಇದೆ, ಇನ್ನು ಎರಡು ತಿಂಗಳು ಆದ ಮೇಲೆ ನಾನು ಎಲ್ಲರ ಬಗ್ಗೆ ವರದಿ ಕೊಡಬೇಕು, ಹಾಗಾಗಿ ನೀನು ಇನ್ನು ಜಾಸ್ತಿ ಪ್ರಯತ್ನ ಪಡಬೇಕು ” ಎಂದು ಹೇಳಿದರು. ಅವನು ಒಳಗೊಳಗೇ ” ಅಂತೂ ನನಗು ಬಡ್ತಿ ಸಿಗುವ ಸಮಯ ಬಂತು” ಅಂತ ಅಂದುಕೊಂಡ. ಅವತ್ತಿನಿಂದಲೇ ಇನ್ನು ಹೆಚ್ಚು ಕೆಲಸ ಮಾಡಲು ಶುರು ಮಾಡಿದ. ಸಂಜೆ ಎಲ್ಲರು ಮನೆಗೆ ಹೋದರೆ, ಅವನು ಮಾತ್ರ ಹೋಗದೆ ಕಚೇರಿಯಲ್ಲಿ ಕುಳಿತು ಕೆಲಸ ಮಾಡತೊಡಗಿದ. ಎರಡು ತಿಂಗಳು ಹೀಗೆ ಕಳೆಯಿತು. ಅವನು ಹೆಚ್ಚು ಹೆಚ್ಚು ಕೆಲಸ ಮಾಡತೊಡಗಿದ್ದನ್ನು ಅವನ ಮೇಲಾಧಿಕಾರಿ ನೋಡಿ ಅವನಿಗೆ ” ಹೀಗೆ ಮುಂದುವರಿಸು, ನನಗೆ ಗೊತ್ತು ನೀನು ತುಂಬಾ ಸಮರ್ಥ ಕೆಲಸಗಾರ, ಬಡ್ತಿಗೊಸ್ಕರ ಮಾತ್ರ ಕೆಲಸ ಮಾಡುವುದಿಲ್ಲ, ನಿನ್ನ ಕೆಲಸದ ಮೇಲಿರುವ ನಿಷ್ಠೆ ಹೀಗೆ ಮುಂದುವರೆಯಲಿ” ಅಂತ ಹೊಗಳಿದರು. ಅವನಿಗೆ ” ಈ ಸಲ ನನಗೆ ಬಡ್ತಿ ಖಂಡಿತ” ಅಂತ ಅನಿಸಿತು. ಒಂದು ವಾರ ಕಳೆದ ನಂತರ ಮೇಲಾಧಿಕಾರಿ ಅವನನ್ನು ಒಳಗಡೆ ಕರೆದ. ಮೇಲಾಧಿಕಾರಿ ” ನೋಡು ಆಡಳಿತ ಮಂಡಳಿ ನಿನ್ನ ಕೆಲಸದ ಬಗ್ಗೆ ತುಂಬ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ, ನಿನ್ನ ಕೆಲಸ ಮೇಲಿನ ನಿಷ್ಠೆ ಅವರಿಗೆ ತುಂಬ ಖುಷಿ ಕೊಟ್ಟಿದೆ, ಮುಂದಿನ ವರುಷ ನನಗೆ ಬಡ್ತಿ ಸಿಕ್ಕರೆ ನಾನು ಮುಖ್ಯ ಕಚೇರಿಗೆ ವರ್ಗಾವಣೆ ಆಗುತ್ತೇನೆ, ನನ್ನ ಸ್ಥಾನಕ್ಕೆ ನಿನ್ನನ್ನು ಶಿಫಾರಸ್ಸು ಮಾಡಿದ್ದೇನೆ, ನಿನ್ನ ಕೆಲಸದ ಮೇಲಿನ ನಿಷ್ಠೆ ಹೀಗೆ ಮುಂದುವರೆಸು, ಇಂತಹ ಅವಕಾಶ ಮತ್ತೆ ಸಿಗುವುದಿಲ್ಲ, ಅದನ್ನು ಕಳೆದುಕೊಳ್ಳಬೇಡ” ಅಂತ ಹೇಳಿದರು. ಅವನಿಗೆ ಬಹಳ ಖುಷಿಯಾಯಿತು. ಅವನು ಮೇಲಾಧಿಕಾರಿಗೆ ಧನ್ಯವಾದಗಳು ಅಂತ ಹೇಳಿ ಹೊರಬಂದನು. ನಂತರ ತನ್ನ ಜಾಗದಲ್ಲಿ ಕುಳಿತು ಏನು ನಡೆಯಿತು ಅಂತ ಆಲೋಚನೆ ಮಾಡತೊಡಗಿದ. ಆಗ ಅವನಿಗೆ ಬಡ್ತಿ ಎನ್ನುವ ಚಕ್ರವ್ಯೂಹದಲ್ಲಿ ಸಿಕ್ಕಿಬಿದ್ದೆ ಅಂತ ಅರಿವಾಯಿತು. ಅವನಿಗೆ ಹೆಚ್ಚು ಕೆಲಸ ಮಾಡಲು ” ಬಡ್ತಿ ” ಸಿಕ್ಕಿತ್ತು.