ಅಬ್ಬಾ! ಎಷ್ಟೊಂದ್ ಹುಲೀ ? ಇಲ್ಲಿದೆ ನೋಡಿ ಅಸಲಿ ಲೆಖ್ಖ !!

ಬರೆಹ : ಗುರುರಾಜ್ ಎಸ್ ದಾವಣಗೆರೆ 

ಛಾಯಾಚಿತ್ರಣ : ಗುರುರಾಜ್ ಎಸ್ ದಾವಣಗೆರೆ  ( 2018ರ ಹುಲಿ ಗಣತಿ ಸಮಯದಲ್ಲಿ ತೆಗೆದಿದ್ದು)

ಪ್ರಿಯರೆ,
ಕಳೆದ ತಿಂಗಳ 29 ರಂದು ವಿಶ್ವದ ಯಾವ ಯಾವ ದೇಶಗಳಲ್ಲಿ ಹುಲಿಗಳಿವೆಯೋ ಅಲ್ಲೆಲ್ಲ ‘ ಗ್ಲೋಬಲ್ ಟೈಗರ್ ಡೇ’ ಆಚರಿಸಲ್ಪಟ್ಟಿತು. ಜಗತ್ತಿನ ವನ್ಯದಲ್ಲಿರುವ ಒಟ್ಟು ಹುಲಿಗಳ ಸಂಖ್ಯೆಯ ಶೇ 73 ರಷ್ಟನ್ನು ಹೊಂದಿರುವ ನಾವು ‘ವಿಶ್ವ ಹುಲಿ ದಿನ’ವನ್ನು ಹೆಮ್ಮೆ, ಅಭಿಮಾನ ಮತ್ತು ಸಂಭ್ರಮದಿಂದಲೇ ಆಚರಿಸಿ ಕೃತಾರ್ಥರಾದೆವು. ಹಲವು ವೆಬಿನಾರ್ ಗಳು ನಡೆದವು. ಕೇಂದ್ರ ಸರಕಾರ “2020 ರ ವೇಳೆಗೆ ಭಾರತದಲ್ಲಿರುವ ಹುಲಿಗಳ ಸಂಖ್ಯೆಯನ್ನು ಡಬಲ್ ಮಾಡುತ್ತೇವೆ ಎಂದು 2010ರ ರಷಿಯಾದ ಸೇಂಟ್ ಪೀಟರ್ಸ್ ಬರ್ಗ್ ನ ಹುಲಿ ಶೃಂಗ (Tiger summit )ದಲ್ಲಿ ಪಣ ತೊಟ್ಟಿದ್ದೆವು, ಅದರಂತೆ ನಡೆದುಕೊಂಡು ನಮ್ಮ ಮಾತನ್ನುಳಿಸಿಕೊಂಡಿದ್ದೇವೆ,ಇನ್ಫ್ಯಾಕ್ಟ್ ಎರಡು ವರುಷ ಮುಂಚೆಯೇ ಅದನ್ನು ಸಾಧಿಸಿದ್ದೇವೆ” ಎಂದು ಹೇಳಿಕೆ ನೀಡಿ ನಮ್ಮ ಹುಲಿ ಸಂರಕ್ಷಿತ ಅರಣ್ಯ ವಲಯಗಳಲ್ಲಿ ಹುಲಿಯೋಜನೆ ( Project Tiger ) ಸಮರ್ಥವಾಗಿ ಮುಂದುವರೆಯುತ್ತಿದೆ ಎಂದು ಘೋಷಿಸಿತು.


ನಮ್ಮಲ್ಲಿ ಪ್ರತಿ ನಾಲ್ಕು ವರುಷಗಳಿಗೊಮ್ಮೆ ಹುಲಿಗಣತಿ ನಡೆಯುತ್ತದೆ. ಅರಣ್ಯ ಇಲಾಖೆ, ಸರ್ಕಾರೇತರ ಸಂಸ್ಥೆಗಳು, ಸಂರಕ್ಷಣಾ ತಂಡಗಳು, ಸ್ವತಂತ್ರ ಸಂಶೋಧಕರು, ಸ್ವಯಂ ಸೇವಕರು, ಅಧ್ಯಾಪಕರು, ನಾಗರೀಕರು, ವಿದ್ಯಾರ್ಥಿಗಳೆಲ್ಲ(18 ಮೆಲ್ಪಟ್ಟವರು) ಭಾಗವಹಿಸುವ ಗಣತಿ ಕಾರ್ಯಕ್ರಮ ಆಯಾ ರಾಜ್ಯ ಸರಕಾರದ ಅರಣ್ಯ ಇಲಾಖೆ ಮತ್ತು ‘ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ‘ ( National Tiger Conservation Authority )ದ ಮಾರ್ಗದರ್ಶನದಲ್ಲಿ ನಡೆಯುತ್ತದೆ. 2018ರಲ್ಲಿ ನಡೆದ ಗಣತಿಯ ಪ್ರಕಾರ ನಮ್ಮ 18 ರಾಜ್ಯಗಳ 50 ಹುಲಿ ಸಂರಕ್ಷಿತ ವಲಯಗಳಲ್ಲಿ ಸುಮಾರು 2967 ಹುಲಿಗಳಿರುವುದು ಕಂಡು ಬಂದಿದೆ. ವಿಶ್ವದ ವನ್ಯ ಪ್ರದೇಶಗಳಲ್ಲಿರುವ ಒಟ್ಟು ಹುಲಿಗಳ ಸಂಖ್ಯೆ ಕೇವಲ 3900!. ಅಂದರೆ ಮುಕ್ಕಾಲು ಪಾಲು ಹುಲಿಗಳು ನಮ್ಮಲ್ಲಿಯೇ ಇದ್ದು ಅವುಗಳ ವಾಸಕ್ಕೆ, ವಂಶಾಭಿವೃದ್ದಿಗೆ ಬೇಕಾದ ಸೂಕ್ಷ್ಮ ಮತ್ತು ಸರಿಯಾದ ಆವಾಸ( Habitat ) ನಮ್ಮಲ್ಲಿದೆ ಎಂಬುದು ಸರಕಾರೀ ತಜ್ಞರ ಅಂಬೋಣ.


ಆದರೆ ವಾಸ್ತವ ಬೇರೆಯೇ ಇದೆ. ಸಾಮಾನ್ಯವಾಗಿ ಹುಲಿ ಗಣತಿ ಮಾಡುವಾಗ ಅವುಗಳ ವಯಸ್ಸಿಗನುಗುಣವಾಗಿ ವಯಸ್ಕ( Adult ), ಹದಿವಯಸ್ಕ ( Sub -Adult ) ಮತ್ತು ಮರಿ(Cub ) ಎಂದು ಗುರುತಿಸಿ ಗಣತಿ ಪಟ್ಟಿಗೆ ಕೇವಲ ಅಡಲ್ಟ್ ಗಳನ್ನ ಮಾತ್ರ ಸೇರಿಸಿಕೊಳ್ಳಬೇಕು. ಆದರೆ ಇಲ್ಲಿ ಒಂದರಿಂದ ಎರಡು ವರುಷ ವಯೋಮಾನದ ಮರಿಗಳನ್ನು ಲೆಕ್ಕಕ್ಕೆ ಸೇರಿಸಿಕೊಂಡು ಸಂಖ್ಯೆ ಹೆಚ್ಚಾಗಿದೆ ಎಂದು ಬಿಂಬಿಸಲಾಗಿದೆ. ಹುಟ್ಟಿದಂದಿನಿಂದ ಮೂರು ವಯಸ್ಸಿನವರೆಗೆ ತಾಯಿ ಹುಲಿಯ ಜೊತೆಗೇ ಇರುವ ಮರಿಗಳನ್ನು ಗಣತಿಗೆ ಸೇರಿಸುವಂತಿಲ್ಲ. ತಾಯಿಯಿಂದ ಬೇರ್ಪಟ್ಟು , ತನ್ನದೇ ಸರಹದ್ದು ( Territory ) ಸ್ಥಾಪನೆಗೊಂಡು, ಬೇಟೆಯಾಡಿ ಆಹಾರ ಸಂಪಾದಿಸಿದಾಗ ಮಾತ್ರ ಅದು ‘ ಹುಲಿ ‘ ಲೆಕ್ಕಕ್ಕೆ ಬರುತ್ತದೆ. ಎಷ್ಟೋ ಹುಲಿಗಳು ಸರಹದ್ದು ಸ್ಥಾಪನೆಯ ಸಮಯದಲ್ಲಿ ಮೊದಲೇ ಅಲ್ಲಿ ಠಿಕಾಣಿ ಹೂಡಿರುವ ವಯಸ್ಕ ಹುಲಿಯೊಂದಿಗೆ ಸೆಣಸುವಾಗ ಸತ್ತು ಹೋಗುತ್ತದೆ. ಹುಟ್ಟುವ ಮೂರ್ನಾಲ್ಕು ಮರಿಗಳಲ್ಲಿ ಅರ್ಧದಷ್ಟು ನಾಲ್ಕರ ಪ್ರಾಯಕ್ಕೆ ಬರುವ ಮುನ್ನವೇ ಅಸುನೀಗುತ್ತವೆ. ಇನ್ನು ಸರಹದ್ದು ಸ್ಥಾಪನೆಯ ಕಾಳಗಗಳಲ್ಲಿ ಮೊದಲೇ ಇದ್ದ ಹುಲಿಯೂ ಸಾವನ್ನಪ್ಪುವ ಸಂಭವವಿರುತ್ತದೆ. ಹಾಗಾಗಿ ಹುಲಿಗಳ ಸಂಖ್ಯೆಯಲ್ಲಿ ಏಕಾಏಕಿ ಏರಿಕೆ ಆಗುವುದೇ ಇಲ್ಲ. ಒಂದು ಲೆಕ್ಕಾಚಾರದಂತೆ ಎರಡು ವರುಷದ ಪ್ರಾಯದೊಳಗಿನ ಹುಲಿಗಳ ಸಂಖ್ಯೆ ಹತ್ತತ್ತಿರ 600 ಇದೆ! ಅಂದರೆ ನೀವೇ ಅರ್ಥ ಮಾಡಿಕೊಳ್ಳಿ. ವಯಸ್ಕ ಹುಲಿಗಳ ಸಂಖ್ಯೆ ಸರಕಾರ ಹೇಳುವಷ್ಟಿಲ್ಲ ಎಂಬುದು ಅನಾಯಾಸವಾಗಿ ಗೊತ್ತಾಗುತ್ತದೆ.


ಅಂತರ ರಾಷ್ಟ್ರೀಯ ಹುಲಿ ತಜ್ಞ ಕೆ. ಉಲ್ಲಾಸ ಕಾರಂತ ಮತ್ತು ಇಂಡಿಯನ್ ಸ್ಟಾಟಿಸ್ಟಿಕಲ್ ಇನ್ಸ್ಟಿಟ್ಯೂಟ್ ನ ಅರ್ಜುನ್ ಗೋಪಾಲಸ್ವಾಮಿ, ಸರಕಾರ ಕೊಟ್ಟಿರುವ ‘ ಹುಲಿ ಲೆಕ್ಕ’ ವನ್ನು ‘ಪೊಲಿಟಿಕಲ್ ಪಾಪುಲೇಷನ್’ ಎಂದಿದ್ದಾರೆ. ಅಂತರ ರಾಷ್ಟ್ರೀಯ ನಿಧಿಯಿಂದ ಅಪಾರ ಹಣ ಹುಲಿ ಸಂರಕ್ಷಣೆಗೆ ಸಿಗುತ್ತದೆ. ಅದನ್ನು ತೆಗೆದುಕೊಳ್ಳುವ ದೇಶಗಳಲ್ಲಿ ನಮ್ಮ ಪಾಲೇ ಹಿರಿದು. ಹಾಗಿರುವಾಗ ನಮ್ಮ ಹುಲಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗದಿದ್ದರೆ ಹೇಗೆ ? ಫಂಡ್ ಪಡೆಯಲು ಮೂರನ್ನು ಹದಿನಾರು ಮಾಡುವುದು ಹೇಗೆ ಎಂದು ನಮ್ಮ ರಾಜಕಾರಣಿ-ಅಧಿಕಾರಿಗಳಿಗೆ ಯಾರಾದರೂ ಹೇಳಿಕೊಡಬೇಕೆ?
ಕೇಂದ್ರ ಸರ್ಕಾರವೇ ನೀಡಿರುವ ಅಂಕಿ ಅಂಶದಂತೆ ದಿನವೊಂದಕ್ಕೆ , ವಿವಿಧ ಅಭಿವೃದ್ಧಿ ಕಾರ್ಯ – ಯೋಜನೆಗಳ ಹೆಸರಿನಲ್ಲಿ 330 ಎಕರೆ ಕಾಡನ್ನು ಕಡಿಯಲಾಗುತ್ತಿದೆ. ವನ್ಯ ಜೀವಿ ಆವಾಸ ಛಿದ್ರಗೊಳ್ಳುತ್ತಿದೆ. ‘ಮಳೆ ಚಕ್ರ ‘ ಬದಲಾಗುತ್ತಿದೆ . ಭಾರತದ ಹವಾಮಾನ ನಿಯಂತ್ರಿಸುವ ಪಶ್ಚಿಮ ಘಟ್ಟ ತೀವ್ರ ಅಪಾಯದಲ್ಲಿದೆ. ಕಳ್ಳ ಬೇಟೆ, ಕಾಡಿನ ಒತ್ತುವರಿ, ಮಾನವ-ವನ್ಯ ಪ್ರಾಣಿ ಸಂಘರ್ಷ ತಾರಕಕ್ಕೇರಿದೆ. ಒಟ್ಟಿನಲ್ಲಿ ಹುಲಿ ಸಂತತಿ ಅಪಾಯದಲ್ಲಿದೆ.ಸರ್ಕಾರದ ನಿಸರ್ಗ ವಿರೋಧೀ ಕ್ರಮಗಳನ್ನು ಪ್ರಶ್ನಿಸುವ ಪರಿಸರ ಪ್ರಿಯರನ್ನೆಲ್ಲ ಅಭಿವೃದ್ಧಿ ವಿರೋಧಿಗಳು ಎಂದು ಕರೆಯಲಾಗುತ್ತಿದೆ. ನೀವೇನು ಮಾಡುತ್ತೀರಿ ? ಯೋಚನೆ ಮಾಡಿ.
ಲಾಸ್ಟ್ ಪಂಚ್:
ಕೊರೋನಾದಿಂದ ಲಾಕ್ ಡೌನ್ ಆದಾಗ ತಿನ್ನಲು ಮಾಂಸಾಹಾರ ಸಿಗದೇ ಕರ್ನಾಟಕದ ಮತ್ತು ಭಾರತದ ಅನೇಕ ಅರಣ್ಯ ಪ್ರದೇಶಗಳಿಗೆ ನುಗ್ಗಿದ ಸ್ಥಳೀಯ ಬೇಟೆಗಾರರು ಜಿಂಕೆಗಳನ್ನು ಕೊಂದು – ತಿಂದು ಮಾರಾಟ ಮಾಡುತ್ತಿದ್ದ ಅನೇಕ ಪ್ರಕರಣಗಳು ಬೆಳಕಿಗೆ ಬಂದವು. ಹುಲಿಯ ಪ್ರಮುಖ ಆಹಾರ ಜಿಂಕೆ! ಅದನ್ನೂ ಬಿಡದ ಮನುಷ್ಯ ಹುಲಿಯನ್ನು ಉಪವಾಸ ಕೆಡವಿ ಅವುಗಳನ್ನು ರಕ್ತಪಾತವಿಲ್ಲದೆ ಕೊಲ್ಲುವ ಕಲೆ ಕಲಿತ್ತಿದ್ದಾನೆ. ಬಿಗಿ ಕಾಯ್ದೆ ಕಾನೂನುಗಳಿದ್ದರೂ ಕಳ್ಳಬೇಟೆ ನಿಂತಿಲ್ಲ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s