ದಯವಿಟ್ಟು ಸಹಾಯ ಮಾಡಿ …..

ದೃಶ್ಯ – ೧
ಬಸ್ ನಿಲ್ದಾಣದಲ್ಲಿ  ಬಸ್ಸೊಂದು ಬಂದು ನಿಂತಿತು. ಬಸ್ಸಿನ ಕಂಡಕ್ಟರ “೧೦ ನಿಮಿಷ ಕಾಫಿಗೆ ಸಮಯ ಇದೆ, ಹೋಗೋರು ಹೋಗಬಹುದು”  ಎಂದು ಜೋರಾಗಿ ಕೂಗಿ ಬಸ್ಸಿನಿಂದ ಇಳಿದು ಮರೆಯಾದ. ಕೆಲವರು ಇಳಿದು ಪ್ರಕೃತಿ ಕರೆಯನ್ನು ಮುಗಿಸಲು , ಮತ್ತೆ  ಕೆಲವರು ಏನಾದರೂ  ತಿಂದು,  ಕಾಫಿ ಕುಡಿದು  ಬರೋಣ ಎಂದು ಇಳಿದು ಹೋದರು. ತುಂಬ ಜನ ಬಸ್ಸಿಂದ ಇಳಿಯದೆ ಕುಳಿತೆ ಇದ್ದರು. ಆಗ ಒಬ್ಬ ಯುವಕ ಮತ್ತು ಯುವತಿ ಒಂದು ಚಿಕ್ಕ ಮಗುವಿನ ಜೊತೆಗೆ ಬಸ್ಸು ಹತ್ತಿದರು. ನೋಡಲು ತುಂಬ ಚೆನ್ನಾಗಿ ಬಟ್ಟೆ ಧರಿಸಿದ್ದರು. ಯುವಕ ಡ್ರೈವರ್ ಸೀಟಿಗಿಂತ ಮುಂದೆ ಬಂದು ಕೈ ಮುಗಿದು ನಿಂತು ”  ಸ್ನೇಹಿತರೆ ನಾನು ನನ್ನ ಹೆಂಡತಿ ಮತ್ತು ಮಗುವಿನ ಜೊತೆಗೆ ಧರ್ಮಸ್ಥಳಕ್ಕೆ ಹೋಗಿದ್ದೆ,  ಅಲ್ಲಿಂದ ಶಿವಮೊಗ್ಗಕ್ಕೆ ಬಂದು ಇಲ್ಲಿಂದ ಹುಬ್ಬಳ್ಳಿಗೆ ಹೋಗಬೇಕಿತ್ತು, ಆದರೆ ನಮ್ಮ ಸೂಟ್ಕೇಸ್ ಮತ್ತು ನನ್ನ ಪರ್ಸನ್ನು ಯಾರೋ ಕದ್ದು ಬಿಟ್ಟರು, ದಯವಿಟ್ಟು ನಮಗೆ ಊರಿಗೆ ಹೋಗಲು ಸಹಾಯ ಮಾಡಿ,  ನಾವು ತುಂಬ ಸ್ಥಿತಿವಂತರು, ದುರಾದ್ರುಷ್ಟವಾಶಾತ್ ಹೀಗಾಗಿ ಬಿಟ್ಟಿದೆ,  ಹಾಗೆ ಹಣ ಕೊಡಬೇಡಿ, ನಿಮ್ಮ ಅಡ್ರೆಸ್ ಕೊಡಿ, ಊರಿಗೆ ಹೋದಕೂಡಲೇ ನಿಮಗೆ ಮನಿ ಆರ್ಡರ ಮಾಡುತ್ತೇನೆ, ನಮ್ಮನ್ನು ನಂಬಿ, ನಾವು ಮೋಸ ಮಾಡುತ್ತಿಲ್ಲ, ಕೆಲವರು ಮೋಸ ಮಾಡುತ್ತಾರೆ,  ಹಾಗಾಗಿ ನಿಜವಾಗಿ ತೊಂದರೆ ಆದವರಿಗೆ ಸಹಾಯ ಮಾಡಲು ಯಾರು ಮುಂದೆ ಬರುತ್ತಿಲ್ಲ,  ದಯವಿಟ್ಟು ಸಹಾಯ ಮಾಡಿ, ಮಗು ಹಾಲು ಕುಡಿಯದೆ ತುಂಬ ಹೊತ್ತಾಯಿತು, ನಾವು ಬೆಳಗಿನಿಂದ ಏನು ತಿಂದಿಲ್ಲ, ಯಾರು ಸಹಾಯ ಮಾಡುತ್ತಿಲ್ಲ, ದಯವಿಟ್ಟು ಸಹಾಯ ಮಾಡಿ ಎಂದು ಕಣ್ಣೀರಿಡುತ್ತ   ಹೇಳಿದನು. ಯಾರು ಕೂಡ ಅದಕ್ಕೆ ಪ್ರತಿಕ್ರಿಯೆ ನೀಡದೆ ಸುಮ್ಮನೆ ಕುಳಿತ್ತಿದ್ದರು. ಆಗ ಮುಂದೆ  ಕುಳಿತ್ತಿದ್ದ ಒಬ್ಬ ಜೋಬಿನಿಂದ ೧೦೦ ರೂಪಾಯಿ ತೆಗೆದು ಅವನಿಗೆ ಕೊಟ್ಟು ವಾಪಸು ಕೊಡೋದು ಬೇಡ ಎಂದು ಹೇಳಿದ. ಹಿಂದಿನಿಂದ ಯಾರೋ ಚಪ್ಪಾಳೆ ತಟ್ಟಿದ. ಕೂಡಲೇ ಮೂರು ನಾಲ್ಕು ಜನ ಕೂಡ ಚಪ್ಪಾಳೆ ತಟ್ಟಿದರು. ಅದನ್ನು ನೋಡಿ ಕುಳಿತ್ತಿದ್ದ ಕೆಲವರು ೫೦ , ೨೦, ೧೦..ರೂಪಾಯಿ ಹೀಗೆ ಹಣ ಕೊಡಲು ಶುರು ಮಾಡಿದರು. ಆಮೇಲೆ ಕೊಟ್ಟವರು ತಾವು ಏನೋ ಸಾದಿಸಿದ ಭಂಗಿಯಲ್ಲಿ ಮುಖ ಅರಳಿಸಿಕೊಂಡು ಕುಳಿತರು. ಆ ಯುವಕ ಹಣವನ್ನು ತೆಗೆದುಕೊಂಡು ಎಲ್ಲರಿಗು ಕೈ ಮುಗಿದು ಜನ್ಮದಲ್ಲಿ ಈ ಸಹಾಯ ಮರೆಯುವುದಿಲ್ಲ ಎಂದು ಹೇಳಿ ಹೆಂಡತಿ ಮತ್ತು ಮಗುವಿನೊಂದಿಗೆ ಬಸ್ಸಿನಿಂದ ಇಳಿದು ಹೋದನು. ಹಣ  ಕೊಟ್ಟವರು ಕೊಡದವರ ಕಡೆಗೆ ನಿಮಗೆ ಮಾನವೀಯತೇನೆ ಇಲ್ಲ ಅನ್ನುವ ಹಾಗೆ  ನೋಡಿದರು. ಅದರಲ್ಲಿ ಕೆಲವರು ಜೋರಾಗಿ ನಿದ್ದೆ ಬಂದವರ ಹಾಗೆ  ಕಿಟಕಿಗೆ ಒರಗಿ ಮಲಗಿದ್ದರು.  ಕೊಟ್ಟ ಹೆಂಗಸರಂತೂ  ” ಪಾಪ ಕಣ್ರೀ,  ಈ ರೀತಿ ಆದ್ರೆ ಎಷ್ಟು ಕಷ್ಟ, ಯಾರು ಸಹಾಯ ಬೇರೆ ಮಾಡಲ್ಲ” ಅಂತ ಹಣ ಕೊಡದವರಿಗೆ ಕೇಳುವಂತೆ ಮಾತನಾಡುತ್ತಿದ್ದರು. ಅಷ್ಟರಲ್ಲಿ ಬಸ್ ಕಂಡಕ್ಟರ ಬಂದು  ಮುಂದಿನಿಂದ ಹಿಂದಿನ ತನಕ ಎಲ್ಲ ಬಂದಿದಾರ ಅಂತ ನೋಡಿ    ” ರೈಟ್ ರೈಟ್ ” ಅಂತ  ಬಸ್ಸಿನ ಚಾಲಕನಿಗೆ ಹೇಳಿದ.  ಬಸ್ ನಿಲ್ದಾಣದಿಂದ ಬಸ್ ಹೊರಗೆ ಹೋಯಿತು. 
ದೃಶ್ಯ – ೨
ಯುವಕ, ಅವನ ಹೆಂಡತಿ ಮತ್ತು ಮಗು ಬಸ್ ನಿಲ್ದಾಣದ  ಒಂದು ಮೂಲೆಯಲ್ಲಿ ಕುಳಿತು ಸಂಗ್ರಹ ಆದ  ಅಷ್ಟು ಹಣವನ್ನು ಎಣಿಸುತ್ತ ಕುಳಿತ್ತಿದ್ದರು. ಅಷ್ಟರಲ್ಲಿ  ಬಸ್ನಲ್ಲಿ  ಅವನಿಗೆ ೧೦೦ ರೂಪಾಯಿ ಕೊಟ್ಟವನು ಮತ್ತು  ಚಪ್ಪಾಳೆ ತಟ್ಟಿದವರು ಅಲ್ಲಿಗೆ ಬಂದರು. ಅವರನ್ನು ನೋಡಿ ಯುವಕ ಯಾಕೆ ಇಷ್ಟು ಲೇಟ್ ಆಯಿತು ಎಂದು ಕೇಳಿದ.  ಅದಕ್ಕೆ ಎಲ್ಲರು  ಒಟ್ಟಿಗೆ ಇಳಿದರೆ  ಅನುಮಾನ ಬರುತ್ತೆ ಅಂತ ಬೇರೆ ಬೇರೆ ನಿಲ್ದಾಣದಲ್ಲಿ ಇಳಿದು ಬಂದೆವು, ಹಾಗಾಗಿ ಲೇಟ್ ಆಯಿತು, ಅದೆಲ್ಲ ಇರಲಿ, ಎಷ್ಟು ಹಣ ಸಂಗ್ರಹ ಆಯಿತು ” ಎಂದು ಕೇಳಿದ. ಅದಕ್ಕೆ ಯುವಕ  ಒಟ್ಟು  ೨೫೦ ಆಯಿತು ಅಷ್ಟೇ ಎಂದ.  ಅದಕ್ಕೆ ” ಥುತ್, ಈ ಜನ ಹಣ ಬಿಚ್ಚಕ್ಕೆ ಸಾಯ್ತಾರೆ ”  ಎಂದು ಗೊಣಗಿದ. ಯುವಕ ” ಮುಂದೆ ಯಾವ ಬಸ್ಸಿಗೆ ಹೋಗೋಣ ” ಅಂತ ಕೇಳಿದ.  ಅದಕ್ಕೆ ಅವನು ” ಈಗ ಧರ್ಮಸ್ಥಳದಿಂದಲೇ   ಒಂದು  ಬಸ್ಸು ಬರುತ್ತೆ, ನೀನು ಧರ್ಮಸ್ಥಳ ಮಂಜುನಾಥನ ಹೆಸರನ್ನು ಹೇಳಿ ಆಣೆ ಹಾಕಿ ಮಾತನಾಡಬೇಕು, ಅಲ್ಲಿಂದಲೇ ಬಂದ ಜನ ಬೇಗ ನಂಬುತ್ತಾರೆ ಮತ್ತು ಹಣ ಬೇಗ ನೀಡುತ್ತಾರೆ” ಎಂದು ಯುವಕನಿಗೆ ಹೇಳಿದ. ಯುವತಿಯ ಕಡೆ ತಿರುಗಿ ” ನೀನು ಕಲ್ಲು ಕಂಬದ ತರ ನಿಂತರೆ ಆಗಲ್ಲ, ಸ್ವಲ್ಪ ಅಳಬೇಕು ಮತ್ತು ಮಗುವಿಗೆ ಸ್ವಲ್ಪ ಚಿವುಟಿ, ಅದು ಅಳುವಾಗ ಬಸ್ ಹತ್ತು” ಎಂದು ಹೇಳಿದ. ಅವಳು ಆಯಿತು ಎಂಬಂತೆ ತಲೆ ಅಲ್ಲಾಡಿಸಿದಳು.  ಅವನು ” ಸರಿ ಹಾಗಾದರೆ, ನಾವು  ಊರಿನ ಹಿಂದಿನ ನಿಲ್ದಾಣಕ್ಕೆ ಹೋಗಿ ದರ್ಮಸ್ತಳದಿಂದ ಬರುವ ಬಸ್ಸಿಗೆ ಕಾದು  ಹತ್ತಿಕೊಂಡು ಬರುತ್ತೇವೆ, ಕಂಡಕ್ಟರ ಹೋದ ಕೂಡಲೇ ನೀವು ಬಸ್ ಹತ್ತಿ ಬನ್ನಿ, ನಾನು  ಹೇಳಿದ್ದೆಲ್ಲ ನೆನಪಿರಲಿ, ಈ ಸಲ ಹಣ ಸಂಗ್ರಹ ಜಾಸ್ತಿ ಆಗಬೇಕು ಆಯ್ತಾ” ಎಂದು ಹೇಳಿ ಚಪ್ಪಾಳೆ ತಟ್ಟುವವರನ್ನು ಕರೆದುಕೊಂಡು ಹೊರಟ.  ಯುವಕ, ಅವನ ಹೆಂಡ್ತಿ ಮತ್ತು ಮಗು ಬಸ್ ಬರುವುದನ್ನು ಕಾಯುತ್ತ ಕುಳಿತರು. 

ದೃಶ್ಯ -೩
ಧರ್ಮಸ್ಥಳದಿಂದ ಬಸ್ಸು  ನಿಲ್ದಾಣಕ್ಕೆ ಬಂದಿತು. ಸಂಗ್ರಹ ಆದ ಒಟ್ಟು ಹಣ ೬೦೦ ರೂಪಾಯಿ. 

ದೃಶ್ಯ ಒಂದರ ಅನುಭವ ನಿಮ್ಮಲ್ಲಿ ಅನೇಕರಿಗೆ ಆಗಿರುತ್ತದೆ. ಭಾರತ ಒಂದೇ ಅಲ್ಲ ಬೇರೆ ದೇಶಗಳಲ್ಲಿ ಕೂಡ ಈ ರೀತಿಯ ಮೋಸ ನಡೆಯುತ್ತೆ. ಆದರೆ ವಿಧಾನಗಳು ಬೇರೆ ಬೇರೆ ಅಷ್ಟೇ.  ಮೋಸ ಹೋಗಿದ್ದು ಗೊತ್ತಾದ ಮೇಲೆ ಬೇಜಾರು ಆಗಿರುತ್ತದೆ. ಇನ್ನು ಮೇಲೆ ನಾನು ಯಾರನ್ನು ನಂಬುವುದಿಲ್ಲ, ಯಾರಿಗೂ ಸಹಾಯ ಮಾಡುವುದಿಲ್ಲ ಅಂತ ನಿರ್ಧಾರ ಮಾಡಿರುತ್ತೇವೆ. ಆದರೂ ಮತ್ತೆ ಯಾರಾದರೂ ಕಷ್ಟ ಅಂತ ಬಂದಾಗ ಎಲ್ಲರನ್ನು ಒಂದೇ ತಕ್ಕಡಿಯಲ್ಲಿ ತೂಗಬಾರದು ಅಂದುಕೊಂಡು ಮತ್ತೆ  ಸಹಾಯ ಮಾಡುತ್ತೇವೆ.ಆದರೆ ನಮ್ಮ ಈ ಕಾಳಜಿಯನ್ನು ಮೋಸಗಾರರು ತಮ್ಮ ಸ್ವಾರ್ಥಕ್ಕೆ ಉಪಯೋಗಿಸಿಕೊಳ್ಳುವುದು ತುಂಬ ಖೇದ ತರುವ ವಿಷಯ.   
ಮುಂದೆ ಎಲ್ಲಾದರೂ ಈ ರೀತಿಯ ಜನ ಸಿಕ್ಕರೆ ದುಡ್ಡು ಕೊಡುವ ಬದಲು ಅವರಿಗೆ ಬನ್ನಿ ನಿಮಗೆ ಊರಿಗೆ ಹೋಗಲು ಬಸ್ ಟಿಕೆಟ್ ಕೊಡಿಸುತ್ತೇನೆ ಎಂದು ಹೇಳಿ. ಅವರು ಕೊಡುವ ಪ್ರತಿಕ್ರಿಯೆಯಲ್ಲಿ ನಿಮಗೆ ಗೊತ್ತಾಗಿ ಹೋಗುತ್ತದೆ ಅವರು ಮೋಸ ಮಾಡುತ್ತಿದ್ದಾರಾ ಅಥವಾ ನಿಜವಾಗಿ ಕೇಳುತ್ತಿದ್ದರಾ ಎಂದು. ಆದರೆ ಅವರೊಟ್ಟಿಗೆ ಒಬ್ಬರೇ ಮಾತ್ರ ಹೋಗಬೇಡಿ ಜೊತೆಯಲ್ಲಿ ಯಾರನ್ನಾದ್ರೂ ಕರೆದುಕೊಂಡು ಹೋಗಿ.  
ಸದ್ಯಕ್ಕೆ ದಯವಿಟ್ಟು ಸಹಾಯ ಮಾಡಿ ಅಂತ ಯಾರಾದರೂ ಅಂದರೆ  ಮಾಡಬೇಕೆ ಅಥವಾ ಬೇಡವೆ  ಎಂದು ಯೋಚನೆ ಮಾಡಬೇಕಾದ ಪರಿಸ್ಥಿತಿ ನಿರ್ಮಾಣ ಆಗಿರುವುದಂತೂ ಸತ್ಯ. 
ಶ್ರೀ 
ಥಿಂಕ್ ರೈಟ್ 

5 thoughts on “ದಯವಿಟ್ಟು ಸಹಾಯ ಮಾಡಿ …..

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s