
ಯೂರೋಪ್ ಅಂದ ತಕ್ಷಣ ಅನೇಕರಿಗೆ ನೆನಪಾಗುವ ಸ್ಥಳಗಳಲ್ಲಿ ಪ್ಯಾರಿಸ್ ಕೂಡ ಒಂದು. ಪ್ಯಾರಿಸ್ ಅನ್ನು ” ಸಿಟಿ ಆಫ್ ಲೈಟ್ಸ್” ಮತ್ತು ” ಸಿಟಿ ಆಫ್ ಲವ್ ” ಅಂತ ಕೂಡ ಹೇಳುತ್ತಾರೆ. ಫ್ರಾನ್ಸ್ ದೇಶದ ರಾಜಧಾನಿ ಈ ಪ್ಯಾರಿಸ್. ಎಲ್ಲರಿಗು ಪ್ಯಾರಿಸ್ ಅಂದ ತಕ್ಷಣ ಕಣ್ಣ ಮುಂದೆ ಬರುವುದೇ ” ಎಫ್ಫೆಲ್ ಟವರ್”. ಪ್ಯಾರಿಸ್ ನಗರವು ಕಲೆ, ಸಂಸ್ಕೃತಿ, ಸೌಂದರ್ಯ ಹಾಗು ಇತಿಹಾಸಕ್ಕೆ ಬಹಳ ಹೆಸರುವಾಸಿಯಾದ ಸ್ಥಳ. ನಿಮಗೆಲ್ಲ ಗೊತ್ತಿರಲಿ ಪ್ಯಾರಿಸ್ ನಗರ ಹಿಂದೆ ರೋಮನ್ನಿನ ಒಂದು ನಗರ ಆಗಿತ್ತು ಹಾಗು ಅದನ್ನು ” Leutetia ” ಎಂದು ಕರೆಯಲಾಗುತ್ತಿತ್ತು. ಇದಿಷ್ಟು ಅಸಲಿ ಪ್ಯಾರಿಸ್ ನಗರದ ಒಂದು ಸಣ್ಣ ಪರಿಚಯ.
ಹಾಗಾದರೆ ಏನಿದು ” ನಕಲಿ ಪ್ಯಾರಿಸ್ ” ?
ಅದು ಮೊದಲನೇ ಜಾಗತಿಕ ಮಹಾಯುದ್ಧ ( 1914 -1918) ನಡೆಯುತ್ತಿದ್ದ ಸಮಯ. ಜರ್ಮನಿ, ಆಸ್ಟ್ರಿಯಾ, ಹಂಗೇರಿ, ಒಟ್ಟೋಮನ್ ಎಂಪೈರ್, ಬಲ್ಗೇರಿಯಾ ಮತ್ತು ಅನೇಕ ಮೈತ್ರಿ ರಾಷ್ಟ್ರಗಳು ಒಟ್ಟುಗೂಡಿ ಫ್ರಾನ್ಸ್, ಗ್ರೇಟ್ ಬ್ರಿಟನ್, ರಶಿಯಾ, ಜಪಾನ್, ಯುನೈಟೆಡ್ ಸ್ಟೇಟ್ಸ್ , ಸೆರ್ಬಿಯಾ, ಬೆಲ್ಜಿಯಂ ಮತ್ತು ಮೈತ್ರಿ ಕೂಟ ರಾಷ್ಟ್ರಗಳ ಮೇಲೆ ಯುದ್ಧ ಸಾರಿದ್ದರು. ಮೊದಲನೇ ಜಾಗತಿಕ ಮಹಾಯುದ್ಧದಲ್ಲಿ ಅನೇಕ ಭಯಾನಕ ಆಯುಧಗಳಾದ ಮಷೀನ್ ಗನ್, ಟ್ಯಾಂಕ್, ಬಾಂಬಿಂಗ್ ಏರೋಪ್ಲೇನ್ಗಳು, ಮೊದಲ ಬಾರಿಗೆ ಉಪಯೋಗಿಸಲ್ಪಟ್ಟವು. ಈ ಯುದ್ಧದಲ್ಲಿ ಬರಿ ಸೈನಿಕರಷ್ಟೇ ಅಲ್ಲದೆ ಸಾಮಾನ್ಯ ನಾಗರೀಕರ ಮೇಲೆ ಕೂಡ ಆಕ್ರಮಣ ನಡೆಸಲಾಯ್ತು. ನಗರಗಳ ಮೇಲೆ ಬಾಂಬ್ ಹಾಕಿ, ದಾಳಿ ಮಾಡಿ, ನಾಶ ಮಾಡಲು ಪ್ರಯತ್ನಿಸಲಾಯ್ತು. ನಾಲಕ್ಕು ವರುಷಗಳ ಕಾಲ ಈ ಎಲ್ಲ ರಾಷ್ಟ್ರಗಳು ಕಾದಾಡಿಕೊಂಡರು. ಈ ನಾಲಕ್ಕು ವರುಷಗಳ ಈ ಮಹಾ ಯುದ್ಧದಲ್ಲಿ ಸತ್ತವರ ಸಂಖ್ಯೆ ಎರಡು ಕೋಟಿಗಿಂತಲೂ ಜಾಸ್ತಿ. ಯುದ್ಧ ಮುಗಿಯುತ್ತಿದ್ದಂತೆ “Spanish flu ” ಶುರುವಾಗಿ ಅದಕ್ಕಿಂತ ಜಾಸ್ತಿ ಜನ ಬಲಿಯಾದರು.
ಈ ಯುದ್ಧ ನಡೆಯುತ್ತಿದ್ದ ಸಮಯದಲ್ಲಿ ಜರ್ಮನಿ ಮೊದಲ ಬಾರಿಗೆ 1914ರಲ್ಲಿ ಪ್ಯಾರಿಸ್ ನಗರದ ಮೇಲೆ ನಾಲಕ್ಕು ಬಾಂಬುಗಳನ್ನು ಹಾಕಿತು. ಆದರೆ ಈ ಬಾಂಬ್ ದಾಳಿಗೆ ಪ್ಯಾರಿಸ್ ನಗರ ಅಷ್ಟೇನು ಹಾನಿಗೀಡಾಗಿರಲಿಲ್ಲ. ಆದರೆ ಬಾಂಬಿನ ದಾಳಿ ಅಲ್ಲಿಗೆ ನಿಲ್ಲದೆ ಅನೇಕ ಬಾರಿ ನಡೆಯಿತು. ಜರ್ಮನಿಯವರಿಗೆ ಪ್ಯಾರಿಸ್ ನಗರವನ್ನು ವಶಪಡಿಸಿಕೊಳ್ಳುವುದೇ ಪ್ರಮುಖ ಗುರಿಯಾಗಿತ್ತು. ಯಾಕೆಂದರೆ ಪ್ಯಾರಿಸ್ ಎದುರಾಳಿಯಾದ ಫ್ರಾನ್ಸಿನ ರಾಜಧಾನಿಯಾಗಿತ್ತು ಮತ್ತು ಜರ್ಮನಿ ಇಂದ ಕೇವಲ ಮೂವತ್ತು ಕಿಲೋಮೀಟರು ದೂರದಲ್ಲಿತ್ತು. ಜರ್ಮನಿಗೆ ಪ್ಯಾರಿಸ್ ಗೆದ್ದರೆ ಇಡೀ ಫ್ರಾನ್ಸ್ ಗೆದ್ದಂತೆ ಎನ್ನುವ ಸತ್ಯ ಗೊತ್ತಿತ್ತು. ಹಾಗಾಗಿ ಅವರು ಮೊದಲು ಗುರಿ ಇಟ್ಟಿದ್ದೆ ಪ್ಯಾರಿಸ್ ಮೇಲೆ. ಯಾವಾಗ ದಿನ ನಿತ್ಯ ಪ್ಯಾರಿಸ್ ಮೇಲೆ ಬಾಂಬಿನ ದಾಳಿ ಜಾಸ್ತಿ ಆಯಿತೋ ಅಲ್ಲಿನ ಜನ ಜೀವನ ಅಸ್ತವ್ಯಸ್ತವಾಗಿ ಹೋಯ್ತು. ಸಾವಿರಾರು ನಾಗರಿಕರು ಬಾಂಬಿನ ದಾಳಿಗೆ ಬಲಿಯಾದರು. ಮೊದಮೊದಲು ಬೆಳೆಗ್ಗಿನ ಹೊತ್ತು ನಡೆಯುತ್ತಿದ್ದ ಬಾಂಬಿನ ದಾಳಿ ರಾತ್ರಿ ಕೂಡ ಶುರುವಾಗಿತ್ತು. ಯಾಕೆಂದರೆ ಮೇಲಿನಿಂದ ಬಾಂಬನ್ನು ಏರೋಪ್ಲೇನಿನಿಂದ ಗುರಿ ಇಟ್ಟು ಹಾಕಲು ಕೆಳಗೆ ಪ್ಯಾರಿಸ್ನಲ್ಲಿ ಉರಿಯುತ್ತಿದ್ದ ಬೆಳಕು ಸಹಾಯ ಮಾಡುತ್ತಿತ್ತು. ಏರೋಪ್ಲೇನಿನಲ್ಲಿ ಈಗಿನಷ್ಟು ಇರುವ ತಂತ್ರಜ್ಞಾನ ಆಗ ಇರಲಿಲ್ಲ, ಕೆಳಗೆ ಕಾಣುವ ಕಟ್ಟಡಗಳು, ಬೆಳಕು ನೋಡಿ ಬಾಂಬನ್ನು ಕೆಳಗಡೆ ಹಾಕಬೇಕಾಗಿತ್ತು. ಪ್ಯಾರಿಸ್ಸಿನ ಮೇಲೆ ಈ ಬಾಂಬಿನ ದಾಳಿ ಮೂರು ವರುಷಗಳ ಕಾಲ ಅಂದರೆ 1914 ರಿಂದ -1917 ರವರೆಗೆ ನಡೆಯಿತು ಅಂದರೆ ನೀವು ನಂಬಲಿಕ್ಕಿಲ್ಲ. ಫ್ರಾನ್ಸಿಗೆ ಪ್ಯಾರಿಸ್ಸಿನ ಮೇಲೆ ನಡೆಯುತ್ತಿದ್ದ ಬಾಂಬಿನ ದಾಳಿ ತಡೆಯಲು ಆಗದಿದ್ದಾಗ, ಹುಟ್ಟಿದ ಉಪಾಯವೇ ” ನಕಲಿ ಪ್ಯಾರಿಸ್”. ಏರೋಪ್ಲೇನ್ ಮೇಲಿಂದ ಕೇವಲ ಕೆಳಗಡೆ ಕಾಣುವ ಕಟ್ಟಡಗಳನ್ನು ಗುರಿಯಾಗಿಸಿಕೊಂಡು ಬಾಂಬ್ ಹಾಕುವ ಕುರುಡು ಶೈಲಿಯ ಪ್ರಯೋಜನ ಪಡೆದುಕೊಂಡು, ಅವರನ್ನು ಯಾಮಾರಿಸುವ ಒಂದು ದೊಡ್ಡ ಕಾರ್ಯಕ್ಕೆ ಫ್ರಾನ್ಸಿನವರು ಕೈ ಹಾಕಿದ್ದರು.
1917ರಲ್ಲಿ ಈ ನಕಲಿ ಪ್ಯಾರಿಸ್ ನ್ನು ಕಟ್ಟಲು ಶುರು ಮಾಡಿದರು. ಪ್ಯಾರಿಸ್ಸಿನ ಉತ್ತರದಲ್ಲಿದ್ದ Seine ನದಿಯ ಒಂದು ಭಾಗದಲ್ಲಿ ನಕಲಿ ಪ್ಯಾರಿಸ್ ಕಟ್ಟಲು ಶುರು ಮಾಡಿದರು. ಪ್ಯಾರಿಸ್ಸಿನಿಂದ ಇದು ಕೇವಲ ೧೫ ಮೈಲಿ ದೂರದಲ್ಲಿತ್ತು. ನಕಲಿ ಪ್ಯಾರಿಸ್ಸಿನಲ್ಲಿ ಯಥಾವತ್ತಾಗಿ ಅಸಲಿ ಪ್ಯಾರಿಸ್ಸಿನಲ್ಲಿ ಇದ್ದ ಹಾಗೇನೇ ಅನೇಕ ಕಟ್ಟಡಗಳು, ಸೇತುವೆಗಳು, ರೈಲ್ವೆ ಲೈನ್ಸ್ ಹಾಗು ಗೋಪುರಗಳ ನಿರ್ಮಾಣ ಮಾಡಿದರು. ಇಟಾಲಿಯನ್ ಎಲೆಕ್ಟ್ರಿಕಲ್ ಇಂಜಿನಿಯರ್ ಆದ ಫೆರ್ನಾಡ್ ಜಾಕೋಪೋಜ್ಝಿ ಎಂಬುವವನು ನಕಲಿ ಪ್ಯಾರಿಸ್ಸಿಗೆ ಒಂದು ಹೊಸ ರೂಪ ಕೊಟ್ಟನು. ಆತ ರೈಲು ಚಲಿಸುವ ರೀತಿಯಲ್ಲಿ ಚಲಿಸುವ ದೀಪಗಳನ್ನು ತಯಾರು ಮಾಡಿದ್ದನು. ಗಾಜುಗಳನ್ನು ಬಳಸಿ ಹೆಚ್ಚು ದೀಪಗಳನ್ನು ಉರಿಯುತ್ತಿದ್ದ ಹಾಗೆ ಭ್ರಮೆ ಬರುವಂತೆ ಮಾಡಿದ್ದನು. ಕೇವಲ ಒಂದು ವರುಷದಲ್ಲಿ ನಕಲಿ ಪ್ಯಾರಿಸ್ ತಯಾರು ಆಗಿತ್ತು. ವಿಪರ್ಯಾಸ ಅಂದರೆ ಫ್ರಾನ್ಸಿನವರು ಅಂದುಕೊಂಡಂತೆ ಅವರು ಕಟ್ಟಿದ ಈ ನಕಲಿ ಪ್ಯಾರಿಸ್ ಅವರ ಉಪಯೋಗಕ್ಕೆ ಬರಲಿಲ್ಲ.
ಯಾಕೆಂದರೆ ನಕಲಿ ಪ್ಯಾರಿಸ್ ತಯಾರು ಆಗುವ ವೇಳೆಗೆ ಅಂದರೆ 1918 ಕ್ಕೆ ಯುದ್ಧವೇ ಮುಗಿದು ಹೋಗಿತ್ತು.
ಕೊನೆಗೆ ನಮಗೆ ಉಳಿಯುವ ಪ್ರಶ್ನೆ ಎಂದರೆ ನಕಲಿ ಪ್ಯಾರಿಸ್ ನಿಂದ ಮೂರ್ಖ ರಾಗುವಷ್ಟು ದಡ್ಡರಿದ್ದರೆ ಜರ್ಮನಿಯಾ ಪೈಲಟ್ ಗಳು ಎಂದೂ ?
ಅನೇಕ ವರುಷಗಳ ನಂತರ ” ನಕಲಿ ಪ್ಯಾರಿಸ್” ಬಗ್ಗೆ ಹೊರಜಗತ್ತಿಗೆ ಗೊತ್ತಾಯಿತು. ಜರ್ಮನಿಯವರು ಕೂಡ ಇದೆ ರೀತಿ ಕೆಲವು ನಕಲಿ ನಗರಗಳನ್ನು ಕಟ್ಟುವ ಯೋಜನೆ ಹಾಕಿದ್ದರು ಎಂಬ ಮಾಹಿತಿ ಕೂಡ ಗೊತ್ತಾಯಿತು.
ಪ್ಯಾರಿಸ್ ನಗರ ಹಾಗು ಅಲ್ಲಿಯ ನಾಗರಿಕರನ್ನು ರಕ್ಷಿಸಲು ಅಷ್ಟು ದೊಡ್ಡ ನಗರದ ಯಥಾವತ್ ನಕಲಿ ನಗರವೊಂದನ್ನು ಸೃಷ್ಟಿಸಿದ್ದ ಫ್ರಾನ್ಸಿನ ಸರಕಾರಕ್ಕೆ ಭೇಷ್ ಅನ್ನದೆ ಇರಲಾಗದು.
ಯಾವಾಗಲಾದ್ರೂ ಪ್ಯಾರಿಸ್ಗೆ ಹೋದರೆ ನಕಲಿ ಪ್ಯಾರಿಸ್ಸಿನ ಕಥೆಯನ್ನು ಅಲ್ಲಿ ಕೇಳಲು ಮರೆಯದಿರಿ ಜೊತೆಗೆ ಪ್ಯಾರಿಸ್ ಸೌಂದರ್ಯವನ್ನು ಸವಿದು ಬನ್ನಿ.
– ಶ್ರೀನಾಥ್ ಹರದೂರ ಚಿದಂಬರ
, 👍👍👍
LikeLike