ಆಮ್ಲೆಟ್, ಪಲಾವ್ ಮತ್ತು ಕಳ್ಳ !!

ಅವತ್ತು  ಒಂದು ಮನೆಯಲ್ಲಿ ವಾಸವಿದ್ದ  ಬ್ಯಾಚುಲರ್  ಹುಡುಗರು ಸೆಕೆಂಡ್ ಶೋ ಸಿನೆಮಾಗೆ ಹೋಗಿದ್ದರು. ಮನೆಯಲ್ಲಿ ಯಾರು ಇಲ್ಲ ಅಂತ ಅವರ ಮನೆಗೆ ಒಬ್ಬ ಕಳ್ಳ ಹಿಂಬದಿ ಬಾಗಿಲು ಒಡೆದು ಒಳ ನುಗ್ಗಿದ್ದ. ಮನೆಯನ್ನೇ ಲೂಟಿ ಮಾಡಿಕೊಂಡು ಹೋಗಬೇಕೆಂದು  ನುಗ್ಗಿದ ಕಳ್ಳನಿಗೆ ಬಹಳ ನಿರಾಸೆ  ಆಯಿತು. ಅವನಿಗೆ ಮನೆಯಲ್ಲಿ ತೆಗೆದುಕೊಂಡು ಹೋಗುವ ಬೆಲೆ ಬಾಳುವ ವಸ್ತುವಾಗಲಿ ಅಥವಾ ದುಡ್ಡು  ಏನು ಇರಲಿಲ್ಲ. ಎಲ್ಲೆಂದೆರಲ್ಲಿ ಬಿದ್ದ ಬಟ್ಟೆ, ಹಾಲಿನಲ್ಲೇ ಒಣಗಿಸದ ಚಡ್ಡಿಗಳು,  ಹೆಂಡದ ಬಾಟಲಿಗಳು, ಕಸ ಗುಡಿಸದೆ ಎಲ್ಲೆಂದರಲ್ಲೇ ಬಿದ್ದ ಕಸ ನೋಡಿ ಕಳ್ಳನಿಗೆ ಇದು ಯಾರೋ ಬ್ಯಾಚುಲರ್ ಗಳು ಇರುವ ಮನೆ ಅಂತ ಗೊತ್ತಾಯಿತು. ಇಂದಿನ ಕೆಲಸ ಯಶಸ್ವಿ ಆಗಲಿಲ್ಲ ಅಂದುಕೊಂಡು ಬಹಳ ಬೇಜಾರು ಆಯಿತು. 

ಸರಿ ಇನ್ನೇನು ಹೊರಡಬೇಕು ಅಂದುಕೊಂಡವನಿಗೆ ಕೋಣೆಯ ಮೂಲೆಯಲ್ಲಿದ್ದ ಫ್ರಿಡ್ಜ್  ಕಾಣಿಸಿತು. ಏನಾದರೂ ತಿನ್ನಲು ಸಿಗುವುದೋ ನೋಡೋಣ ಅಂತ ಫ್ರಿಡ್ಜ್ ಬಾಗಿಲು ತೆಗೆದು ನೋಡಿದವನಿಗೆ ಬಹಳ ಖುಷಿಯಾಯಿತು.  ಕೊನೆ ಪಕ್ಷ ಇದಾದರೂ ಸಿಕ್ಕಿತಲ್ಲ ಅಂತ ಸಂತೋಷದಿಂದ ಫ್ರಿಡ್ಜ್ನಲ್ಲಿ ಜೋಡಿಸಿಟ್ಟಿದ್ದ ಬಿಯರ್ ಬಾಟಲಿಗಳನ್ನು ತೆಗೆದು ಅಲ್ಲೇ ಕೆಳಗೆ ಹಾಸಿದ್ದ  ಚಾಪೆ ಮೇಲೆ ಕುಡಿಯಲು ಕುಳಿತ. ಇದರ ಜೊತೆಗೆ ತಿನ್ನಲು ಏನಾದರೂ ಇದ್ದರೆ ಇನ್ನು ಒಳ್ಳೆಯದು ಅಂದುಕೊಂಡು ಮತ್ತೆ ಫ್ರಿಡ್ಜ್ ಓಪನ್ ಮಾಡಿ ನೋಡಿದ. ಅದರಲ್ಲಿ ಐದಾರು ಕೋಳಿ ಮೊಟ್ಟೆಗಳು ಕಾಣಿಸಿತು. ಹಾಗಾದರೆ ಆಮ್ಲೆಟ್ ಮಾಡಿಕೊಂಡರಾಯಿತು ಅಂತ ಅಲ್ಲೇ ಇದ್ದ ಕೊತ್ತಂಬರಿ ಸೊಪ್ಪನ್ನು ಜೊತೆಯಲ್ಲಿ ತೆಗೆದುಕೊಂಡು ಅಡಿಗೆ ಮನೆಗೆ ಬಂದು ಆಮ್ಲೆಟ್ ಮಾಡಲು ತಯಾರು ಮಾಡಿಕೊಂಡ. ಅಲ್ಲೇ ಇದ್ದ ತರಕಾರಿ ನೋಡಿ,  ಊಟಕ್ಕೆ ಪಲಾವ್ ಮಾಡಿಕೊಂಡರೆ ಇನ್ನು ಚೆನ್ನಾಗಿರುತ್ತೆ ಅಂತ ಅಂದುಕೊಂಡು ಪಲಾವ್ ಗೆ ಕೂಡ ತಯಾರು ಮಾಡಿಕೊಂಡ.  ಮುಕ್ಕಾಲು ಗಂಟೆಯಲ್ಲಿ ಪಲಾವ್ ರೆಡಿ ಮಾಡಿದ. ಆಮ್ಲೆಟ್ ಕೂಡ ರೆಡಿ ಆಗಿತ್ತು.  ಅಲ್ಲೇ ಇದ್ದ ಆಲೂಗಡ್ಡೆ ನೋಡಿ, ಅದನ್ನು ಸ್ವಲ್ಪ ಫ್ರೈ ಮಾಡಿ ಕೊಂಡು ತಿನ್ನೋಣ ಅಂತ, ಅದನ್ನು ರೆಡಿ ಮಾಡಿಕೊಂಡ.  ಮಾಡಿದ ಅಷ್ಟು ಅಡುಗೆಯನ್ನು ಹಾಲ್ ಗೆ ತಂದು ಜೋಡಿಸಿಕೊಂಡ. 

ಬಿಯರ್ ಬಾಟಲಿಯನ್ನು ಓಪನ್ ಮಾಡಲು ಒಪೆನರ್ ಎಲ್ಲಿದೆ ಎಂದು ಹುಡುಕುತ್ತ ಅಡುಗೆ ಮನೆ ಕಡೆ ಹೋಗುವಾಗಲೇ ಮನೆ ಬಾಗಿಲ ಬಳಿ ಸದ್ದು  ಕೇಳಿಸಿತು.  ಹೆದರಿ ಬಾಗಿಲ ಬಳಿ ಓಡಿ ಬಂದ. ಹೊರಗಿನಿಂದ ಯಾರೋ ಬೀಗ ತೆಗೆಯಲು ಪ್ರಯತ್ನ ಮಾಡುತ್ತಿರುವ ಶಬ್ದ ಕೇಳಿಸಿತು. ಮನೆಯವರು ಬಂದು ಬಿಟ್ಟರು ಅಂತ  ಅಂದುಕೊಂಡು ಹೆದರಿ ಹಿಂದಿನ ಬಾಗಿಲಿನಿಂದ ಓಟಕ್ಕಿತ್ತ. ಬಾಗಿಲು ತೆಗೆದು ಒಳಗಡೆ ಬಂದ ಬ್ಯಾಚುಲರ್ ಗಳಿಗೆ ಒಳಗಡೆ ಬಂದು ಅಲ್ಲಿನ ದೃಶ್ಯ ನೋಡಿ ನಂಬಲು ಸಾಧ್ಯವಾಗಲಿಲ್ಲ.  ಆಮ್ಲೆಟ್, ಪಲಾವ್ ,  ಆಲೂಗಡ್ಡೆ ಫ್ರೈ ಮತ್ತು ಬಿಯರ್ ಬಾಟಲಿಯನ್ನು  ನೀಟಾಗಿ ಜೋಡಿಸಿಟ್ಟಿದ್ದರು. ಹಿಂದುಗಡೆ ಬಾಗಿಲು ತೆಗೆದಿತ್ತು. ಅವರಿಗೆ ಅದನ್ನು ನೋಡಿ ಅಲ್ಲಿ ನಡೆದಿರಬಹುದಾದ ಸಂಗತಿ ಏನು ಅಂತ  ಅರ್ಥವಾಗಲಿಲ್ಲ. ಆದರೆ ಯಾರೋ ಕಳ್ಳರು ಬಂದಿರಬಹುದು ಅಂತ ಊಹೆ ಮಾಡಿದರು. ರೂಮಿನಲ್ಲಿ ಹ್ಯಾಂಗರಿಗೆ ಹಾಕಿದ ಶರ್ಟ್ನಲ್ಲಿ ಇಟ್ಟಿದ್ದ ದುಡ್ಡು ಇದೆಯಾ  ಅಂತ ನೋಡಿದರು. ದುಡ್ಡು ಹಾಗೆ ಇತ್ತು. ಕಳ್ಳನಿಗೆ ಆ ದುಡ್ಡು ಕಂಡಿರಲಿಲ್ಲ.  ಎಲ್ಲರ ಮುಖದಲ್ಲಿ  ನಗು ಕಾಣಿಸಿತು.   ದುಡ್ಡು ಕಳ್ಳತನ ಆಗಲಿಲ್ಲ ಅಂತ ಖುಷಿಗೆ  ಪಾರ್ಟಿ ಶುರು ಮಾಡಿದರು. ಪಾರ್ಟಿಗೆ ಬೇಕಾದ ಎಲ್ಲ ಐಟಂ  ಅನ್ನು ಕಳ್ಳ ರೆಡಿ ಮಾಡಿಟ್ಟಿದ್ದ.  

– ಶ್ರೀನಾಥ್ ಹರದೂರ ಚಿದಂಬರ 

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s