ಸಾವಿನ ಮನೆಯಲ್ಲಿ ಮಿಸುಕದೆ
ಮಲಗಿ ಕಣ್ಣೀರಿಗೆ ಸ್ಪಂದನೆ ನೀಡದೆ
ಸ್ಮಶಾನದಲ್ಲಿ ಬೆತ್ತಲೆಯಾಗಿ ಬೂದಿಯಾದ
ಆ ದೇಹವ ಕಂಡು ವೈರಾಗ್ಯ ತಾಳಿ
ನನ್ನಲಿ ಹುಟ್ಟಿಕೊಂಡ ಪ್ರಶ್ನೆ
ಇಷ್ಟೇನಾ ಬದುಕು?
ಹೊರ ಬಂದ ಕೂಡಲೇ ಆಸೆಗಳ
ಹೊದಿಕೆ ಹೊದ್ದು ಹೊರಳಿ
ಎಲ್ಲವನ್ನು ನನ್ನದಾಗಿಸಿಕೊಳ್ಳುವ
ಕನಸು ಕಾಣುತ್ತ ಅವುಗಳನ್ನು
ಹೊತ್ತೊಯ್ಯಬಹುದೆಂಬ ಭ್ರಮೆಯಲ್ಲಿ
ಮಣ ಭಾರಕ್ಕೆ ನರಳುತ್ತಾ
ಹಂಬಲಿಸುವುದೇ ಸುಖವೆಂದು
ತಿರುಳಿಲ್ಲದ ಆ ಬದುಕಿನೆಡೆಗೆ ತೆರಳಿ
ನನ್ನಲ್ಲಿ ಹುಟ್ಟಿಕೊಂಡ ಪ್ರಶ್ನೆ
ಇದೇನಾ ಬದುಕು ?
ಪಡೆಯುವ ಮುನ್ನ ನನಗಿದ್ದ ಆತುರ
ಪಡೆದ ಮೇಲೆ ಇರಲಿಲ್ಲ ಆ ಕಾತುರ
ಆ ನಡುವಿನ ಸಂಘರ್ಷದಲ್ಲಿ ಕಳೆದು
ಹೋಗಿದ್ದ ಬದುಕು ತಿರುಗಿ ಸಿಗಲು
ಸಾಧ್ಯವೇ ಎಂಬ ಸತ್ಯ ಅರಿತಾಗ
ನನ್ನಲ್ಲಿ ಹುಟ್ಟಿಕೊಂಡ ಪ್ರಶ್ನೆ
ಯಾವುದು ಬದುಕು?
ನನ್ನನು ನಾನು ಅರಿಯದೆ
ನನಗೆಲ್ಲಾ ಅರಿವಿದೆ ಎಂಬ
ಅಹಂಕಾರವ ಬಿಟ್ಟು
ಪಡೆದು ಹಂಚುವ ಗುಣವಿದ್ದರೆ
ಹುಟ್ಟಿಕೊಂಡ ಪ್ರಶ್ನೆಗಳಿಗೆ
ಉತ್ತರ ಸಿಕ್ಕರೂ ಸಿಗಬಹುದೇನೋ
ಏನೆಂದು ಈ ಬದುಕು.
-ಶ್ರೀನಾಥ್ ಹರದೂರ ಚಿದಂಬರ