ಸಬ್ಬಸಿಗೆ ಸೊಪ್ಪಿನ ಸಾರು

ಮನೆಯಲ್ಲಿ ಶಾಲೆಗೇ ಹೋಗುವ ಮಕ್ಕಳಿದ್ದರೆ ಬೆಳಿಗ್ಗಿನ ಹೊತ್ತು ಮನೆಯಲ್ಲಿ ಸ್ವಲ್ಪ ಗಡಿಬಿಡಿ ಇದ್ದೆ ಇರುತ್ತೆ. ಅದರಲ್ಲೂ ಗಂಡ ಹೆಂಡತಿ ಇಬ್ಬರು ಕೆಲಸ ಮಾಡುತ್ತಿದ್ದರಂತೂ ಯುದ್ಧದ ವಾತಾವರಣ ಇರುತ್ತೆ ಬಿಡಿ. ನಮ್ಮ ಮನೆಯಲ್ಲಿ ನಾನು ಬೆಳಿಗ್ಗೆ ಯುದ್ಧಕ್ಕೆ ಸೈನ್ಯ ತಯಾರು ಮಾಡುವ ಸೈನ್ಯಾಧಿಪತಿಯಂತೆ ನನ್ನ ಮಗಳನ್ನು ಶಾಲೆಗೇ ತಯಾರು ಮಾಡುತ್ತಿದ್ದರೇ, ಹೆಂಡತಿ ಅಡುಗೆ ಮನೆಯಲ್ಲಿ ಯುದ್ಧಕ್ಕೆ ಸನ್ನದ್ದರಾದ ಸೈನಿಕರಿಗೆ ಊಟಕ್ಕೆ ತಯಾರು ಮಾಡುವವಳಂತೆ ಅಡುಗೆ ಮಾಡುತ್ತಿರುತ್ತಾಳೆ. ಅವಳ ಊಟದ ಡಬ್ಬಿ, ಮಗಳಿಗೆ ಸ್ನಾಕ್ ಮತ್ತು ಊಟದ ಡಬ್ಬಿ ತಯಾರು ಮಾಡುವಷ್ಟರಲ್ಲಿ ನಾನು ನನ್ನ ಮಗಳಿಗೆ ತಿಂಡಿ ತಿನ್ನಿಸಿ, ಅವಳನ್ನು ಶಾಲೆಗೆ ಕರೆದುಕೊಂಡು ಹೋಗಲು ತಯಾರಾಗಿ ನಿಂತಿರುತ್ತೇನೆ. ಕೆಲವೊಮ್ಮೆ ಸನ್ನಿವೇಶಗಳು ಹೇಗಿರುತ್ತೆ ಅಂದರೆ ನಮ್ಮಿಬ್ಬರಿಗೆ ಮಾತುನಾಡುವಷ್ಟು ಪುರುಸೊತ್ತು ಇಲ್ಲದೆ, ಅನೇಕ ಸಲ ನಾವು ಕೈ ಸನ್ನೆಯಲ್ಲಿ ಮಾತನಾಡುವ ಹಂತಕ್ಕೆ ಬಂದಿರುತ್ತೇವೆ. ಅಡುಗೆ ಮಾಡುತ್ತಾ ನನ್ನ ಹೆಂಡತಿ ಮಗಳ ಪುಸ್ತಕ ಅಲ್ಲಿದೆ, ವಾಟರ್ ಬಾಟಲಿ ಕೆಳಗಡೆ ಇದೆ, ಬ್ಯಾಗ್ ಮೇಲೆ ಇದೆ ಎಂದು ಕೈ ಸನ್ನೆಯಲ್ಲೇ ತೋರಿಸುತ್ತಿರುತ್ತಾಳೆ. ನಾನು ಕಷ್ಟ ಪಟ್ಟು ಅರ್ಥ ಮಾಡಿಕೊಂಡು ಮೇಲೆ ತೋರಿಸಿದರೆ ಕೆಳಗೆ, ಕೆಳಗೆ ತೋರಿಸಿದ್ದರೇ ಮೇಲೆ ನೋಡಿ, ಹೆಂಗೋ ಹುಡುಕಾಡಿ ತಡಕಾಡಿ ಮಗಳ ಬ್ಯಾಗಿಗೆ ಅವುಗಳನ್ನು ಹಾಕುತ್ತಿರುತ್ತೇನೆ. ಯಾಕೆಂದರೆ ಎರಡನೇ ಸಲ ಎಲ್ಲಿ ಅಂತ ಹೆಂಡತಿ ಬಳಿ ಕೇಳಿದರೆ ಗುಡುಗು ಸಿಡಿಲು ಎಲ್ಲ ಶುರುವಾದರೆ ಅದನ್ನು ತಡೆದುಕೊಳ್ಳುವ ಶಕ್ತಿ ನನಗೆ ಬೆಳಿಗ್ಗೆ ಇರಲ್ಲ ಅದಕ್ಕೆ.

ಮೊನ್ನೆ ಶಾಲೆಗೇ ಮಗಳನ್ನು ಕರೆದುಕೊಂಡು ಹೊರಡುವ ಸಮಯಕ್ಕೆ ನನ್ನ ಹೆಂಡತಿ ” ರೀ, ಮಸಾಲೆ ರುಬ್ಬಿ ಮಿಕ್ಸಿ ಜಾರಿನಲ್ಲಿಯೇ ಇಟ್ಟಿದ್ದೇನೆ, ಸಬ್ಬಸ್ಸಿಗೆ ಸೊಪ್ಪು ತೊಳೆದು, ಕತ್ತರಿಸಿ ಇಟ್ಟಿದ್ದೇನೆ, ನೀವು ಆಮೇಲೆ ಹೆಸರುಕಾಳನ್ನು ತೊಳೆದು, ಈ ಸಬ್ಬಸ್ಸಿಗೆ ಸೊಪ್ಪಿನ ಜೊತೆ ಕುಕ್ಕರಿನಲ್ಲಿ ಬೇಯಿಸಿ, ಅದನ್ನು ಸ್ಟವ್ ಮೇಲೆ ಇಟ್ಟಿರುವ ಪಾತ್ರೆಗೆ ಹಾಕಿ, ಮಿಕ್ಸಿ ಜಾರಿನಲ್ಲಿರುವ ಮಸಾಲೆಯನ್ನು ಅದಕ್ಕೆ ಹಾಕಿ, ಉಪ್ಪು ಎಷ್ಟು ಬೇಕು ಅಂತ ಇಲ್ಲೇ ಇಟ್ಟಿದ್ದೇನೆ, ಅದನ್ನು ಹಾಕಿ ಒಂದೆರೆಡು ಕುದಿ ಬಂದ ಮೇಲೆ ಸ್ಟವ್ ಆಫ್ ಮಾಡಿ, ಸಾರು ರೆಡಿ ಇರುತ್ತೆ, ಅನ್ನ ಮಾಡಿಕೊಂಡು ಮದ್ಯಾಹ್ನ ಊಟ ಮಾಡಿ, ನನಗೆ ಇವತ್ತು ಅರ್ಜೆಂಟ್ ಮೀಟಿಂಗ್ ಇದೆ, ಬೇಗ ಹೋಗಬೇಕು” ಎಂದು ಪಟ ಪಟನೆ ಎಂದು ಹೇಳಿ, ನನ್ನ ಉತ್ತರಕ್ಕೂ ಕಾಯದೆ ಆಫೀಸ್ಗೆ ಹೊರಟಳು. ಒಂದು ಕ್ಷಣ ನನಗೆ ಕಾಲೇಜಿನಲ್ಲಿ ನನ್ನ ಮಾಥ್ಸ್ ಲೆಕ್ಚರರ್ ಟ್ರೀಗನೋಮೆಟ್ರಿ ಪಾಠ ಮಾಡಿದಾಗ ಏನು ಅರ್ಥವಾಗದೆ ಸುಮ್ಮನೆ ಕೇಳಿಸಿಕೊಳ್ಳುತ್ತಾ, ಎಲ್ಲವು ಅರ್ಥವಾದಂತೆ ಅವರ ಮುಂದೆ ತಲೆ ಅಲ್ಲಾಡಿಸುತ್ತಿದ್ದ ನೆನಪು ಆಯಿತು. ಹೆಂಡತಿಗೆ ಮತ್ತೊಮ್ಮೆ ಹೇಳು ಅನ್ನುವ ಧೈರ್ಯ ಸಾಲಲಿಲ್ಲ, ಪಕ್ಕದಲ್ಲಿ ಮಗಳು ” ಅಪ್ಪ, ಲೇಟ್ ಆಯಿತು, ಹೊರಡೋಣ” ಅಂತ ಕೂಗುತ್ತಿದ್ದಳು. ನಾನು ” ಸರಿ ಬಿಡು, ಆಮೇಲೆ ನೋಡಿಕೊಂಡರಾಯಿತು” ಎಂದು ಶಾಲೆಗೆ ಮಗಳನ್ನು ಬಿಡಲು ಹೋದೆ. ಆಮೇಲೆ ಮನೆಗೆ ಬಂದು ನನ್ನ ಕೆಲಸಗಳನ್ನು ಮುಗಿಸಿಕೊಂಡು, ಹನ್ನೆರಡುವರೆಯ ವೇಳೆಗೆ ಅಡುಗೆ ಮನೆ ಕಡೆ ಬಂದು ಸ್ಟವ್ ಮುಂದೆ ನಿಂತು ಒಂದು ಬಾರಿ ದೀರ್ಘವಾಗಿ ಉಸಿರು ಎಳೆದುಕೊಂಡು ನಿಧಾನವಾಗಿ ಹೊರಗೆ ಉಸಿರು ಬಿಟ್ಟು, ನನ್ನ ಹೆಂಡತಿ ಏನು ಹೇಳಿದ್ದು ಎಂದು ಆಲೋಚಿಸುತ್ತಾ ನಿಂತೇ. ನನಗೆ ನೆನಪಾಗಿದ್ದು ಸಬ್ಬಸ್ಸಿಗೆ ಸೊಪ್ಪು, ಹೆಸರುಕಾಳು, ಕುಕ್ಕರ್ ಮತ್ತು ಕುದಿಸೋದು ಎಂಬ ಪದಗಳು ಮಾತ್ರ. ಅವಳಿಗೆ ಫೋನ್ ಮಾಡಿ ಮತ್ತೆ ಕೇಳಿದರೆ ” ನಂಗೆ ಗೊತ್ತು ಕಣ್ರೀ, ಹೋಗಿ ಹೋಗಿ ನಿಮಗೆ ಹೇಳಿದ್ನಲ್ಲ, ನಾನೇ ಹೇಗೋ ಮಾಡಿಮುಗಿಸಿ ಬರಬೇಕಿತ್ತು, ನಿಮಗೆ ಏನು ಗೊತ್ತಾಗಲ್ಲ ” ಎಂಬ ಮಾತುಗಳು ಕೇಳಬೇಕು, ಅದರ ಬದಲು ನಾನೇ ಮಾಡಿ ಮುಗಿಸಿ ” ಅಡುಗೆ ಮಾಡಕ್ಕೆ ಬರಲ್ಲ ಅಂತ ಹೇಳ್ತಿದ್ಯಲ್ಲ, ನೋಡು ನಾನು ಮಾಡಿದ್ದೇನೆ” ಅಂತ ತೋರಿಸಿಕೊಳ್ಳಬಹುದು ಅಂತ ಸಾರು ಮಾಡಲು ಶುರು ಮಾಡಿದೆ.

ಸ್ಟವ್ ಮೇಲೆ ಪಾತ್ರೆ ಇಟ್ಟಿದ್ದಾಳೆ ಅಂದರೆ, ಆ ಪಾತ್ರೆಯಲ್ಲಿ ಸಾರು ಮಾಡಬೇಕು ಅನ್ನೋದು ಕನ್ಫರ್ಮ್ ಆಯಿತು. ನೆಕ್ಸ್ಟ್ ಸಬ್ಬಸ್ಸಿಗೆ ಸೊಪ್ಪು ಕತ್ತರಿಸಿ ಇಟ್ಟಿದ್ದಾಳೆ, ಜೊತೆಗೆ ಹೆಸರು ಕಾಳು ಹಾಕಿ, ಉಪ್ಪು ಹಾಕಿ ಬೇಯಿಸಬೇಕು ಅಷ್ಟೇ, ಇಷ್ಟೇನಾ ಅಡುಗೆ, ಇದನ್ನು ಮಾಡೋದಕ್ಕೆ ಎಷ್ಟು ಸ್ಕೋಪ್ ತೆಗೆದುಕೊಳ್ತಾರೆ ಈ ಹೆಂಗಸರು” ಅಂತ ಅನಿಸಿತು. ಆ ಆಲೋಚನೆ ತುಂಬಾ ಹೊತ್ತು ಇರಲಿಲ್ಲ, ಯಾಕೆಂದರೆ ಕುಕ್ಕರ್ ಗೆ ಸೊಪ್ಪು ಹಾಕಿ ಹೆಸರುಕಾಳು ಎಲ್ಲಿದೆ ಅಂತ ಹುಡುಕಿ, ಹೆಸರುಕಾಳು ಎಷ್ಟು ಹಾಕಬೇಕು ಎಂಬ ಪ್ರಶ್ನೆ ಮೂಡಿದಾಗ ಸ್ವಲ್ಪ ತಲೆ ಬಿಸಿ ಆಯಿತು. ಎಷ್ಟು ಹೆಸರುಕಾಳು ಹಾಕಬೇಕು ಅಂತ ತಲೆ ಕೆರೆದುಕೊಳ್ಳುತ್ತಾ ಸ್ವಲ್ಪ ಹೊತ್ತು ನಿಂತುಕೊಂಡೆ. ಆಮೇಲೆ ಸ್ಟವ್ ಮೇಲೆ ಇಟ್ಟ ಪಾತ್ರೆ ಕಡೆ ನೋಡಿದೆ. ಯಾವಾಗಲು ನನ್ನ ಹೆಂಡತಿ ಸುಮಾರು ಮುಕ್ಕಾಲು ಪಾತ್ರೆ ಸಾಂಬಾರು ಅಥವಾ ಸಾರು ಮಾಡುವುದನ್ನ ನೋಡಿದ್ದೇ. ಹಾಗಾದರೆ ಸುಮಾರು ಪಾತ್ರೆಯ ಅರ್ಧದಷ್ಟು ಕಾಳು ಹಾಕಿದರೆ, ಸೊಪ್ಪು, ನೀರು ಎಲ್ಲ ಸೇರಿ ಮುಕ್ಕಾಲು ಪಾತ್ರೆ ಸಾರು ತಯಾರು ಆಗುತ್ತೆ ಅಂತ ನನ್ನ ಮಾಥ್ಸ್ ಮತ್ತು ಸೈನ್ಸ್ ಬುದ್ದಿ ಹೇಳಿತು. ಸರಿ ಪಾತ್ರೆಯ ಅರ್ಧ ಭಾಗ ಬರುವಷ್ಟು ಹೆಸರುಕಾಳು ಹಾಕಿ, ನಂತ್ರ ಅದನ್ನು ತೊಳೆದು ಕುಕ್ಕರ್ ಗೆ ಟ್ರಾನ್ಸ್ಫರ್ ಮಾಡಿ , ಅದಕ್ಕೆ ಸಬ್ಬಸ್ಸಿಗೆ ಸೊಪ್ಪು ಸೇರಿಸಿ, ಎಲ್ಲವು ಮುಳುಗುವಷ್ಟು ನೀರು ಹಾಕಿ, ಕುಕ್ಕರ್ ಅನ್ನು ಸ್ಟವ್ ಮೇಲೆ ಇಟ್ಟು ಸ್ಟವ್ ಆನ್ ಮಾಡಿದೆ. ನಾಲಕ್ಕು ಬಾರಿ ಕುಕ್ಕರ್ ಕೂಗಿದ ಮೇಲೆ ಆಫ್ ಮಾಡಿ, ಕೆಳಗಿಳಿಸಿಟ್ಟೆ. ಮನಸಲ್ಲಿ ” ಇನ್ನೇನು ಪಾತ್ರೆಗೆ ಹಾಕಿ ಕುದಿಸಿಬಿಟ್ಟರೆ ಸಾರು ತಯಾರು, ಇದನ್ನ ಒಳ್ಳೆ ರಾಕೆಟ್ ಸೈನ್ಸ್ ಅನ್ನೋ ತರಹ ಮಾತಾಡ್ತಾರೆ ಈ ಹೆಂಗಸರು” ಅಂತ ಅಂದುಕೊಂಡೆ.

ಕುಕ್ಕರ್ ತಣ್ಣಗಾದ ಮೇಲೆ ಅದರಲ್ಲಿ ಬೆಂದಿದ್ದ ಹೆಸರು ಕಾಳು ಮತ್ತು ಸೊಪ್ಪನ್ನು ಪಾತ್ರೆಗೆ ಹಾಕಲು ನೋಡಿದರೆ ಹೆಂಡತಿ ಇಟ್ಟ ಆ ಪಾತ್ರೆ ತುಂಬಿ, ಇನ್ನು ಕುಕ್ಕರ್ ನಲ್ಲಿ ಅರ್ಧ ಉಳಿದಿತ್ತು. ನಾನು ” ಒಂದು ದೊಡ್ಡ ಪಾತ್ರೆ ಇಡಕ್ಕೆ ಏನು ರೋಗ ಇವಳಿಗೆ ” ಅಂತ ಮನಸ್ಸಲ್ಲಿ ಬೈದುಕೊಳ್ಳುತ್ತಾ, ಕೆಳಗಡೆ ಕಬೋರ್ಡ್ ನಲ್ಲಿ ಇಟ್ಟಿದ್ದ ದೊಡ್ಡ ಪಾತ್ರೆ ತೆಗೆದುಕೊಂಡು, ಅದಕ್ಕೆ ಎಲ್ಲವನ್ನು ವರ್ಗಾಯಿಸಿದೆ. ಪಕ್ಕದಲ್ಲಿ ಇಟ್ಟಿದ್ದ ಉಪ್ಪು ಹಾಕಿ, ಸ್ಟವ್ ಮೇಲೆ ಇಟ್ಟು, ಒಂದೆರಡು ಕುದಿ ಬರುವ ತನಕ ಕಾದು ಸ್ಟವ್ ಆಫ್ ಮಾಡಿದೆ. ಇಷ್ಟೆಲ್ಲಾ ಮಾಡುವಷ್ಟರಲ್ಲಿ ಸಮಯ ಆಗಲೇ ಎರಡಾಗಿತ್ತು. ಹಣೆಯಲ್ಲಿ ಒಂದೆರೆಡು ಬೆವರ ಹನಿ ಕೂಡ ಮೂಡಿತ್ತು. ಆದರೂ ನನಗೆ ಏನೋ ಸಾಧಿಸಿದ ಭಾವನೆ ನನ್ನ ಮನದಲ್ಲಿ. ಸಂಜೆ ಹೆಂಡತಿ ಮನೆಗೆ ಬಂದ ಮೇಲೆ ಸ್ವಲ್ಪ ಸ್ಕೋಪ್ ತೆಗೆದುಕೊಳ್ಳಬಹುದು ಅಂತ ಖುಷಿನೂ ಆಯಿತು. ನಂತರ ಅನ್ನ ಮಾಡಿಕೊಂಡು ತಟ್ಟೆಯಲ್ಲಿ ಅನ್ನ ಹಾಕಿಕೊಂಡು ಊಟಕ್ಕೆ ಕೂತೆ. ಸಾರಿಗೆ ಸ್ವಲ್ಪ ಉಪ್ಪು ಕಮ್ಮಿ ಅನಿಸಿತು, ರುಚಿಯೇ ಇರಲಿಲ್ಲ. ಆದರೂ ” ಮೊದಲ ಬಾರಿ ಮಾಡಿದಾಗ ಎಂತಹವೆಲ್ಲ ಮಾಮೂಲಿ ” ಅಂತ ಸಮಾಧಾನ ಮಾಡಿಕೊಂಡು ಸ್ವಲ್ಪ ಉಪ್ಪು ಬೆರೆಸಿ, ಜೊತೆಯಲ್ಲಿ ಚಿಪ್ಸ್ ಹಾಕಿಕೊಂಡು ಅದನ್ನೇ ಊಟ ಮಾಡಿದೆ. ನಂತರ ನನ್ನ ಕೆಲಸದಲ್ಲಿ ಮಗ್ನನಾದೆ.

ಸಂಜೆ ಹೆಂಡತಿ ಬಂದು ಫ್ರೆಶ್ ಅಪ್ ಆಗಿ ಅಡುಗೆ ಮನೆಗೆ ಹೋದಳು. ಅಲ್ಲೇ ಕೆಲಸ ಮುಗಿಸಿ ಮೊಬೈಲ್ ನೋಡುತ್ತಾ ಕುಳಿತ್ತಿದ್ದ ನಾನು ಮನದಲ್ಲಿ ” ಪರವಾಗಿಲ್ಲಾರಿ, ಸಾರು ಮಾಡಿ ಬಿಟ್ಟಿದ್ದೀರಾ, ಗುಡ್,” ಎಂದು ಹೇಳ್ತಾಳೆ ಅಂತ ಕಾಯುತ್ತಿದ್ದೆ. ಆದರೆ ಅಡುಗೆ ಮನೆಯಿಂದ ನನ್ನ ಹೆಂಡತಿ ” ಅಯ್ಯೋ, ಏನ್ರಿ ಮಾಡಿದ್ದೀರಾ ಇದು” ಎಂದು ಜೋರಾಗಿ ಕೂಗಿದಳು. ನಾನು ಗಡಬಡಿಸಿ ಎದ್ದು ಅಡುಗೆ ಮನೆಗೆ ಹೋದೆ.

ಹೆಂಡತಿಯಾ ಒಂದು ಕೈಯಲ್ಲಿ ಮಸಾಲೆ ಅರೆದ ಮಿಕ್ಸಿಯ ಜಾರು ಇತ್ತು. ಇನ್ನೊಂದು ಕೈ ಅವಳ ತಲೆ ಮೇಲೆ ಇತ್ತು.

ಮಿಕ್ಸಿ ಜಾರಿನಲ್ಲಿದ್ದ ಅರೆದ ಮಸಾಲೆ ನನ್ನನ್ನು ಅಣಕಿಸುತ್ತಾ ಹಾಗೆ ನನ್ನನ್ನೇ ನೋಡುತ್ತಿತ್ತು.

ಅದನ್ನು ನೋಡಿ ಏನು ತಪ್ಪು ಆಗಿರಬಹುದೆಂದು ನನ್ನ ಸೈನ್ಸ್ ಬುದ್ದಿ ಯೋಚನೆ ಶುರು ಮಾಡಿತ್ತು. ನನಗೆ ” ಎಕ್ಸಾಮ್ಗೆ ಹತ್ತು ಸಲ ಓದಿದ್ದ ನೋಟ್ಸ್ ನೆನಪಿರಲ್ಲ, ಇನ್ನು ಕ್ಲಾಸ್ನಲ್ಲಿ ಪಾಠ ಹೇಳಿದ್ದು ನೆನಪಿರತ್ತಾ ” ಅಂತ ಅನಿಸಿತು.

ಹೆಂಡತಿ ದೊಡ್ಡ ಪಾತ್ರೆಯಲ್ಲಿ ಸುಮಾರು ಮೂರು ದಿನಗಳಿಗಷ್ಟು ಆಗುವಷ್ಟು ಸಬ್ಬಸ್ಸಿಗೆ ಸೊಪ್ಪು ಮತ್ತು ಹೆಸರು ಕಾಳನ್ನು ಏನು ಮಾಡಬೇಕು ಅಂತ ಅರ್ಥವಾಗದೆ ನಿಂತಿದ್ದಳು.

ಅಲ್ಲಿಗೆ ಬಂದ ಮಗಳು ಅಪ್ಪ ಏನೋ ಮಾಡಬಾರದ್ದು ಮಾಡಿದ್ದಾರೆ ಅನ್ನುವ ಹಾಗೆ ನನ್ನನ್ನೇ ನೋಡುತ್ತಾ ನಿಂತಳು.

ನಾನು ಕೂಡ ಸೋಲಲಿಲ್ಲ. ” ಅಯ್ಯೋ ಏನು ಸಮಸ್ಯೆ ಇಲ್ಲ, ಅರ್ಧದಷ್ಟು ಕಾಳಿಗೆ ಮಸಾಲೆನ ಈಗ ಹಾಕಿ ಕುದಿಸಿದರಾಯಿತಪಾ ಅಷ್ಟೇ, ಉಳಿದ್ದದ್ದು ಪಲ್ಯ ಮಾಡಿದರಾಯಿತು ” ಎಂದು ಹೇಳಿದೆ.

ಅದನ್ನು ಕೇಳಿ ಹೆಂಡತಿ ಏನು ಹೇಳದೆ ಗುರಾಯಿಸುತ್ತ ನನ್ನನ್ನೇ ನೋಡುತ್ತಾ ನಿಂತಿದ್ದನ್ನು ನೋಡಿ ” ಸಮಸ್ಯೆಗೆ ಪರಿಹಾರ ನೀಡುವ ಸಮಯ ಇದಲ್ಲ” ಅಂತ ಅನಿಸಿ ನಿಧಾವಾಗಿ ಅಲ್ಲಿಂದ ಕಾಲ್ಕಿತ್ತೆ.

ಆಮೇಲೆ ಮೂರು ದಿನ ನಾನು ನಮ್ಮನೇಲಿ ಏನು ಊಟ ಮಾಡಿರಬಹುದು ಅಂತ ಹೇಳಬೇಕಿಲ್ಲ ಅಂತ ಅಂದುಕೊಂಡಿದ್ದೇನೆ.

ಆದ್ರೂ ಹೆಸರು ಕಾಳು ಒಂದು ಲೋಟದಲ್ಲಿ ಇಟ್ಟು ಹೋಗಬೇಕಾಗಿತ್ತಪ್ಪಾ, ಆಗ ಸಾರು ಸೂಪರ್ ಆಗಿ ಮಾಡ್ತಿದ್ದೆ, ಏನ್ ಹೇಳ್ತೀರಾ?😃

-ಶ್ರೀನಾಥ್ ಹರದೂರು ಚಿದಂಬರ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s