ಸಂತೆ – ಚಿಂತೆ – ನಿದ್ದೆ
ಗಿಜಿಗುಡುತ್ತಿದ್ದ ಸಂತೆಯಲ್ಲಿ , ಜೋರಾಗಿ ನಡೆಯುತ್ತಿದ್ದ ವ್ಯಾಪಾರದ ಭರಾಟೆಯ ನಡುವೆ ತನಗೇನು ಸಂಬಂದವಿಲ್ಲ ಎನ್ನುವ ಹಾಗೆ ಆತ ಸಂತೆಯ ಮಧ್ಯದಲ್ಲಿ ಪೇರಿಸಿಟ್ಟಿದ್ದ ತರಕಾರಿ ಚೀಲಗಳ ಮೇಲೆ ಮಲಗಿದ್ದ. ಆತನಿಗೆ ಚಿಂತೆ ಇರಲಿಲ್ಲ ಅಂತಲ್ಲ ರಾತ್ರಿ ಕುಡಿದ ನಶೆ ಇಳಿದಿರಲಿಲ್ಲ ಅಷ್ಟೇ.
ತೋರಿಕೆ – ಧರ್ಮ
ಬಸ್ ನಿಲ್ದಾಣದಲ್ಲಿ ” ಏನಾದರೂ ಧರ್ಮ ಮಾಡಿ ಸಾರ್ ” ಎಂದು ಬೇಡಿದ ವಯಸ್ಸಾದ ಅಜ್ಜಿಯಾ ಕೈಗೆ ನೂರು ರೂಪಾಯಿ ಇಟ್ಟು ನಿಲ್ದಾಣದಲ್ಲಿ ನಿಂತ ಜನರಿಗೆ ಕೇಳುವಂತೆ ” ಅಜ್ಜಿ, ಹೊಟ್ಟೆ ತುಂಬಾ ಊಟ ಮಾಡಿ, ನನಗೆ ಆಶೀರ್ವಾದ ಮಾಡಿ ” ಎಂದು ಅಜ್ಜಿಗೆ ಕೈ ಮುಗಿದನು. ಕೆಲವರು ಅದನ್ನು ವಿಡಿಯೋ ಮಾಡಿಕೊಂಡರು. ಕೆಲವು ಜನ ಜನ ಚಪ್ಪಾಳೆ ತಟ್ಟಿದ್ದರು. ಆತ ಎದೆ ಉಬ್ಬಿಸಿಕೊಂಡು ತನ್ನ ವಯಸ್ಸಾದ ತಾಯಿಯನ್ನು ನೋಡಲು ಅವಳನ್ನು ಬಿಟ್ಟ ವೃದ್ಧಾಶ್ರಮದ ಕಡೆಗೆ ಹೋಗುವ ಬಸ್ಸು ಹತ್ತಿದನು.
ಬುದ್ದಿವಾದ
ಕಾಲೇಜಿನಲ್ಲಿದ್ದಾಗಲೇ ಪ್ರೇಮಿಸಿ ಮದುವೆಯಾದ ಅಪ್ಪ ತನ್ನ ಮಗನನ್ನ ಮೊದಲ ದಿನ ಕಾಲೇಜಿಗೆ ಬಿಡಲು ಬಂದಾಗ ಮಗನಿಗೆ ” ಪ್ರೀತಿ, ಪ್ರೇಮ ಅಂತ ಹುಡುಗಿಯರ ಹಿಂದೆ ಬೀಳದೆ ಓದಿನ ಕಡೆ ಗಮನ ಕೊಡಬೇಕು, ಈ ವಯಸ್ಸಿನಲ್ಲಿ ಪ್ರೀತಿ ಪ್ರೇಮ ಅಂದವರು ಯಾರು ಉದ್ದಾರ ಆಗಿಲ್ಲ ಅದಕ್ಕೆ ” ಎಂದು ಬುದ್ದಿವಾದ ಹೇಳುತ್ತಿದ್ದ.
– ಶ್ರೀನಾಥ್ ಹರದೂರ ಚಿದಂಬರ