ಭೇಟಿ 

ಆತ್ಮೀಯ ಗೆಳತಿಗೆ,

ಏನೇ ಹೇಗಿದ್ದಿಯಾ?  ಇಷ್ಟು ವರುಷಗಳ ನಂತರ ನನ್ನ ನೆನಪು ಬಂತೇ?  ಅಂತ ಕೇಳ್ತಿಯಾ ಎಂದು ಗೊತ್ತು.  ಪ್ರತಿದಿನವು ನಿನ್ನನ್ನು         ನೆನೆಸಿಕೊಳ್ಳದ ದಿನವೇ ಇರದಿದ್ದಾಗ ನೆನಪಿನ ಮಾತೇಕೆ ?  ನೀನು ಜೊತೆಯಲಿ ಇದ್ದಿದ್ದರೆ ಹೀಗೆ ಹೇಳುತ್ತಿದ್ದೆ,  ಹಾಗೆ ಹೇಳುತ್ತಿದ್ದೆ ಎಂದು ಪ್ರತಿ ಕೆಲಸದ ಸಮಯದಲ್ಲೂ  ನನಗೆ ನಾನೇ ಸ್ವಗತವಾಗಿ ಮಾತನಾಡಿಕೊಳ್ಳುತ್ತಿದ್ದೆ.  ಇಪ್ಪತ್ತೈದು ವರುಷಗಳ ಹಿಂದೆ ಕಾಲೇಜಿನ ಕೊನೆಯ ದಿನ ನೀನು  ” ಮತ್ತೆ ಯಾವಾಗ ಸಿಗ್ತಿವೋ ಏನೋ ” ಎಂದು ಹೇಳಿ ಹೊರಟು ಹೋದ ಮೇಲೆ,  ನಾನು ಮಾತ್ರ ನೀನು ಹೋದ ದಿಕ್ಕನ್ನೇ ನೋಡುತ್ತಾ ಅಲ್ಲಿಯೇ ನಿಂತಿದ್ದೆ. ಕಣ್ಣಲ್ಲಿ ನೀರು ತುಂಬಿ ಬಂದಿತ್ತು. ಪುಣ್ಯಕ್ಕೆ ಸಣ್ಣಗೆ ಮಳೆ ಜಿನುಗ ತೊಡಗಿ, ಮುಖದ ಮೇಲೆ ಬಿದ್ದ ಕಾರಣ ನಾನು ಅಳುವುದು ನಿನಗೆ ಗೊತ್ತಾಗಲೇ ಇಲ್ಲ.  ನೀನು ಮಾತ್ರ ನಗುತ್ತ ಹೋಗಿದ್ದೆ.   ಆ ನಗುವಿಗೆ ಕಾರಣ  ಯಾವತ್ತಾದ್ರೂ ಸಿಗ್ತಿವಿ ಅಂತಾನೋ,  ಯಾವತ್ತಿಗೂ ಸಿಗಲ್ಲ ಅಂತಾನೋ  ಅಂತ ಮಾತ್ರ ಗೊತ್ತಾಗಿರಲಿಲ್ಲ.  ನನಗೆ ಮಾತ್ರ ಅವತ್ತು ಮನಸ್ಸು ಪೂರ್ತಿ ಕಾಲಿಯಾಗಿತ್ತು.  ಉತ್ತರ ಇರದ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ, ಪ್ರಶ್ನೆಗಳಿಗೆ ಪ್ರಶ್ನೆ ಹಾಕುತ್ತ,  ಅಲ್ಲಿಯೇ ಸುಮಾರು ಹೊತ್ತು ನಿಂತಿದ್ದೆ. ಆಮೇಲೆ ಕಾಲೇಜು ತಾನೇ ಮುಗಿದ್ದದ್ದು, ಜೀವನ ಅಲ್ಲವಲ್ಲ,  ಬೇಕಾದಾಗ ನಿನ್ನ ಮನೆಗೆ ಬಂದು ಮಾತನಾಡಿಸಬಹುದಲ್ಲ ಅಂತ ಸಮಾಧಾನ ಮಾಡಿಕೊಂಡು ಅಲ್ಲಿಂದ ಹೊರಟ್ಟಿದ್ದೆ.  ನಿಂಗೆ ಗೊತ್ತಾ ?  ನೀವೆಲ್ಲ ನನಗೆ ” ಅದು ಹೆಂಗೆ ಮಳೇಲಿ, ಹವಾಯಿ ಚಪ್ಪಲ್ ಹಾಕಿಕೊಂಡು,  ಒಂದು ಚೂರು ಕೆಸರನ್ನು ಪ್ಯಾಂಟು ಮತ್ತು ಅಂಗಿಗೆ ಸಿಡಿಸಿಕೊಳ್ಳದೆ  ನಡೀತಿಯ ” ಅಂತ ಕೇಳ್ತಿದಿದ್ರಿ,  ಆದ್ರೆ  ಅವತ್ತು ಅಲ್ಲಿಂದ ಹೊರಟ ನಾನು,  ಮನೆ ಸೇರೋ ಹೊತ್ತಿಗೆ ನನ್ನ ತಲೆಯ ಹಿಂಬಾಗದ ತನಕ ಕೆಸರು ಸಿಡಿದಿತ್ತು. ಅವತ್ತು ನನ್ನ ಮನಸ್ಸಸ್ಟೇ  ಅಲ್ಲೇ ನನ್ನ ಚಪ್ಪಲಿ ಕೂಡ ನನ್ನ ಹಿಡಿತದಲ್ಲಿರಲಿಲ್ಲ. 

ಆದರೆ ನನಗೆ ಗೊತ್ತಿರಲಿಲ್ಲ, ನಮ್ಮಿಬ್ಬರ ಅವತ್ತಿನ ಭೇಟಿ ನಮ್ಮಿಬ್ಬರ  ಕೊನೆಯ ಬೇಟಿಯಾಗಿತ್ತು ಅಂತ. ಕಾಲೇಜು ಮುಗಿದು ರಿಸಲ್ಟ್ ನೋಡಲಿಕ್ಕೆ ಬರ್ತೀಯ ಅಂತ ಅಂದುಕೊಂಡ್ಡಿದ್ದೆ, ನಿನ್ನ ಬದಲು ನಿನ್ನ ಅಪ್ಪ ಬಂದಿದ್ದರು ಅವತ್ತು. ನೀನು ಪಾಸ್ ಆಗಿದ್ದೆ , ಅದನ್ನು ಕೇಳಿ ಖುಷಿ  ಆಯಿತು.  ಅವತ್ತು ನಿನ್ನ ತಂದೆ ” ನೀನು ಯಾರದೋ ನೆಂಟರ ಮನೆಗೆ ಹೋಗಿದ್ದೀಯಾ, ವಾಪಸು ಮನೆಗೆ ಮುಂದಿನ ತಿಂಗಳು ಬರುತ್ತೀಯ ”  ಅಂತ ಹೇಳಿದರು.  ಸರಿ, ನೀನು ಊರಿಗೆ ವಾಪಸು ಬಂದ ಮೇಲೆ ಭೇಟಿ ಮಾಡಿದರಾಯಿತು ಅಂತ ಅಂದುಕೊಂಡೆ.  ಆದರೆ ಕೆಲವೇ ದಿನಗಳಲ್ಲಿ  ನನ್ನ ಕೈಗೆ ಅಂಕ ಪಟ್ಟಿ ಸಿಗುತ್ತಿದ್ದಂತೆ ನಾನು ಕೆಲ್ಸದ ಬೇಟೆಗೆ ಇಳಿದೆ.    ಕೆಲಸ ಸಿಕ್ಕಿದ ಮೇಲೆ,  ರಜೆಯಲ್ಲಿ ಬಂದು ನಿನ್ನ ಭೇಟಿ ಮಾಡುವಾ  ಎಂದು ಕೆಲಸ ಹುಡುಕಿಕೊಂಡು  ಮುಂಬೈಗೆ ಹೋದೆ.  ಸ್ವಲ್ಪ ದಿನಗಳ ನಂತರ  ನನಗೆ ಕೆಲಸ ಸಿಕ್ಕ ಮೇಲೆ,  ಅಪ್ಪ ಅಮ್ಮನಿಗೆ ವಿಷಯ ತಿಳಿಸಲು ನಮ್ಮ ಪಕ್ಕದ ಮನೆಗೆ ಫೋನ್ ಮಾಡಿದಾಗ,  ನೀನು ಅವರ  ಮನೆಗೆ ನಿನ್ನ ಮದುವೆಗೆ ಕರೆಯಲು ಫೋನ್ ಮಾಡಿದ ವಿಷಯ ತಿಳಿಯಿತು. ನಿನ್ನ ಮದುವೆಯ ವಿಷಯಾ ಕೇಳಿ ಸಿಕ್ಕಾಪಟ್ಟೆ ಕೋಪ ಬಂತು. ಯಾಕೆ ಕೋಪ ಬಂತು ಅಂತ ಮಾತ್ರ ಕೇಳಬೇಡ, ಯಾಕೆಂದರೆ  ಅವತ್ತು ನನಗೂ ಯಾಕೆ ಕೋಪ ಬಂತು ಅಂತ ಗೊತ್ತಿರಲಿಲ್ಲ.  ಅದೇ ಕೋಪಕ್ಕೆ ನಿನ್ನ ಮದುವೆಗೂ ನಾನು ಬರಲಿಲ್ಲ. ನಿನ್ನನ್ನು ಭೇಟಿ ಮಾಡುವ ಪ್ರಯತ್ನ ಕೂಡ ಬಿಟ್ಟುಬಿಟ್ಟೆ. 

ಹೊಸ ಕೆಲಸ,  ಹೊಸ ಊರು, ಹೊಸ ಜನ, ಹೊಸ ಜೀವನ.. ಹೀಗೆ ಹೊಸದನ್ನು ಬರ ಮಾಡಿಕೊಳ್ಳುತ್ತಾ ವರುಷಗಳು ಉರುಳಿದ್ದು ಗೊತ್ತೇ ಆಗಲಿಲ್ಲ. ಆದರೆ ಪ್ರತಿ ದಿನ ಒಮ್ಮೆಯಾದರೂ,  ನಿನ್ನ ನೆನಪು ಸುಳಿಯದೆ ಹೋಗುತ್ತಿರಲಿಲ್ಲ.  ಯಾವುದೊ ಒಂದು ಸಂಗತಿಗಾದರು ನೀನಿದ್ದರೆ ಏನು ಹೇಳುತ್ತಿದ್ದೆ ಎಂದು ಯೋಚಿಸದ ದಿವಸವೇ ಇರಲಿಲ್ಲ. ನನ್ನದೇ ವಯಸ್ಸಿನವಳಾದರು ನಿನ್ನ ಯೋಚನೆಗಳು, ಮಾತುಗಳು ಎಷ್ಟು ತೂಕದಿಂದ ಕೂಡಿರುತ್ತಿತ್ತು.  ಜೀವನದ ಬಗ್ಗೆ ಎಷ್ಟೆಲ್ಲ ವಿಭಿನ್ನ ರೀತಿಯ ಆಲೋಚನೆಗಳನ್ನು ಹೊಂದಿದ್ದೆ. ಸಮಸ್ಯೆಗಳನ್ನು ಎಷ್ಟು ಸಲೀಸಾಗಿ ಎದುರಿಸಿ, ಅದನ್ನು ಬಗೆಹರಿಸುತ್ತಿದ್ದೆ.  ಏನು ಕೆಲಸ ಮಾಡಬೇಕು, ಹೇಗೆ ಮಾಡಬೇಕು, ಹೇಗೆ ಯಶಸ್ಸು ಪಡೆಯಬೇಕು ಎಂದು ನೀನು ಆವಾಗಲೇ  ಹೇಳುತ್ತಿದ್ದುದ್ದನ್ನು ನಾನು ಬಾಯಿ ಬಿಟ್ಟುಕೊಂಡು ಕೇಳುತ್ತಿದ್ದೆ. ನೀನು ಹೇಳುತ್ತಿದ್ದ ಅನೇಕ  ವಿಚಾರಗಳನ್ನು ನಾನು ಮಾಡುವ  ಕೆಲಸದಲ್ಲಿ ಅಳವಡಿಸಿಕೊಂಡಿದ್ದು,  ನಿನಗೆ ಹೇಳಬೇಕು ಅಂತ ಎಷ್ಟು ಬಾರಿ ಅಂದುಕೊಂಡನೋ ಗೊತ್ತಿಲ್ಲ. ಆದರೆ ಬೇರೆಯವರಿಂದ ನೀನು ಮದುವೆ  ಮಾಡಿಕೊಂಡು ಯಾವುದೊ ಹಳ್ಳಿಯಲ್ಲಿ ಇದ್ದಿಯಾ, ಹೊರಗಡೆ ಯಾವುದೇ ಕೆಲಸ ಮಾಡುತ್ತಿಲ್ಲ ಅಂತ ಗೊತ್ತಾದ ಮೇಲೆ,  ” ಜೀವನದಲ್ಲಿ ಅದನ್ನು ಸಾಧಿಸಬೇಕು, ಇದನ್ನ ಸಾಧಿಸಬೇಕು ಅನ್ನುತ್ತಿದ್ದ ಇವಳು ಹೀಗೇಕೆ ಮಾಡಿದಳು” ಎಂದು ಮತ್ತಷ್ಟು ಕೋಪ ಬಂದು ನಿನ್ನ ಭೇಟಿಯಾಗುವ ಯೋಚನೆ ಬಿಟ್ಟೆ. ನೀನು ಏನಾದರು ಸಾಧಿಸುವೆ ಅಂದುಕೊಂಡಿದ್ದ ನನಗೆ, ನೀನು ಮದುವೆ ಮಾಡಿಕೊಂಡಿದ್ದು, ನಿನ್ನ ಜೀವನವೇ ಮುಗಿದುಹೋಯಿತು ಇನ್ನು,  ಎನ್ನುವ ತಪ್ಪು ಆಲೋಚನೆ  ನನಗೆ  ಕೋಪ ತರಿಸಿತ್ತು  ಅಂತ ಅನಿಸುತ್ತೆ. 

ಯಾಕೆ ನೀನು ಅಂತಹ ನಿರ್ಧಾರ ಮಾಡಿದೆ ಅಂತ ನನ್ನ ಮನಸ್ಸಿನಲ್ಲಿ ಕೊರೆಯುತ್ತಲೇ ಇತ್ತು. ಆದರೆ ನಿನ್ನ ಭೇಟಿ ಮಾಡಿ, ಅದನ್ನು  ಕೇಳಲು ಪ್ರಯತ್ನ ಮಾಡಲೇ ಇಲ್ಲಾ. ಹೇಗೆ ಇಪ್ಪತೈದು ವರುಷಗಳು ಕಳೆದು ಹೋದವು ಅಂತ ಗೊತ್ತಾಗಲೇ ಇಲ್ಲ. ಈಗ ನಿನ್ನನ್ನು ಭೇಟಿ  ಮಾಡುವ ಉದ್ದೇಶದಿಂದ  ನಿನ್ನ ವಿಳಾಸ ತೆಗೆದುಕೊಂಡು, ಫೋನ್ ಮಾಡುವ ಧೈರ್ಯ ಇಲ್ಲದೆ ಪತ್ರ ಬರೆಯುತ್ತಿದ್ದೇನೆ. ಇಷ್ಟು ದಿನ ಇಲ್ಲದ್ದು,  ಈಗ ಏನಕ್ಕೆ ಅಂತ ಕೇಳುತ್ತೀಯಾ ? ಅದಕ್ಕೆ ಕಾರಣ ನನ್ನ ಮಗ ನನಗೆ  ಕೇಳಿದ  ಒಂದು ಪ್ರಶ್ನೆ.  ಮೊನ್ನೆ ಕಾಲೇಜಿನಲ್ಲಿ ಓದುತ್ತಿದ್ದ ನನ್ನ ಮಗ ತನ್ನ ಸ್ನೇಹಿತೆಯನ್ನು  ಮನೆಗೆ ಕರೆದುಕೊಂಡು ಬಂದಿದ್ದ. ನಾನು ಅವಳು ಹೋದ ಮೇಲೆ ” ಏನೋ ಬರಿ ಸ್ನೇಹಿತಳೇನಾ ? ಆಥವಾ ಬೇರೆ ಏನಾದ್ರೂ  ವಿಷಯ ಇದೆಯಾ?” ಎಂದು ಕಿಚಾಯಿಸಿದೆ.  ಅದಕ್ಕೆ ಅವನು ” ಯಾಕಪ್ಪ, ಒಂದು ಹುಡುಗ ಹುಡುಗಿ ಸ್ನೇಹಿತರಾಗಬಾರದ ? ಪ್ರೇಮಿಗಳೇ ಆಗಬೇಕಾ ? ಯಾಕೆ ನಿಮಗೆ ಯಾರು ಸ್ನೇಹಿತೆಯರೇ ಇಲ್ವಾ?  ಇದ್ದಿದ್ರೆ ಈ ಪ್ರಶ್ನೆ ಕೇಳ್ತಿರಲಿಲ್ಲ ಬಿಡಿ” ಎಂದು ಹೇಳಿದ.  ನಾನು ” ಖಂಡಿತ,  ಒಂದು ಹುಡುಗ ಹುಡುಗಿ ಸ್ನೇಹಿತರಾಗಬಹುದು” ಎಂದು ಅಷ್ಟೇ  ಹೇಳಿ ಸುಮ್ಮನಾದೆ.  ನಿನ್ನ ಬಗ್ಗೆ ನಾನು ಪ್ರಸ್ತಾಪಿಸಲೇ ಇಲ್ಲ.  ನನ್ನ ಹೆಂಡತಿ ನನ್ನನ್ನು  ” ಯಾಕ್ರೀ,  ನಿಮ್ಮ ಸ್ನೇಹಿತೆ ದೀಪ ಬಗ್ಗೆ ಹೇಳಲೇ ಇಲ್ಲಾ, ಹೇಳೋದು ತಾನೇ” ಎಂದು ಕೇಳಿದಳು.  ನಾನು  ” ಏನಂತ ಹೇಳಲಿ, ಇಪ್ಪತೈದು ವರುಷಗಳಿಂದ ಅವಳ ಸಂಪರ್ಕವೇ ಇಲ್ಲದೆ ಇರುವ ನಾನು ಅವಳ ಬಗ್ಗೆ ಹೇಳಿದರೆ, ಅವನು ”  ಎಲ್ಲಿದ್ದಾರೆ ಅವರು ” ಅಂತ ಕೇಳ್ತಾನೆ,   ನಾನು “ಸದ್ಯಕ್ಕೆ ಸಂಪರ್ಕದಲ್ಲಿ  ಇಲ್ಲ”  ಎಂದು ಹೇಳಿದರೆ,  “ಅದೆಂತಹ ಸ್ನೇಹ ” ಅಂತ ಅವನು ಕೇಳ್ತಾನೆ,  ಅದಕ್ಕೆ ನಾನು  ಏನಂತ ಉತ್ತರ ಹೇಳುವುದು” ಎಂದು ಕೇಳಿದೆ.   ಅದರ ನಂತರ ನಿನ್ನ ಬಗ್ಗೆ ಬೇರೆ ಸ್ನೇಹಿತರ ಹತ್ತಿರ ವಿಚಾರಿಸಲು ಶುರು ಮಾಡಿದೆ. 

ಆಗಲೇ ತಿಳಿದದ್ದು ” ನೀನಿರುವ  ಹಳ್ಳಿಯ ಪಂಚಾಯಿತಿಯಲ್ಲಿ ಅಧ್ಯಕ್ಷೆ ಆಗಿದ್ದೀಯಾ ಹಾಗು ಬರಿ ನಿನ್ನ ಹಳ್ಳಿ ಅಲ್ಲದೆ ಸುತ್ತಮುತ್ತ ಅನೇಕ ಹಳ್ಳಿಗಳಲ್ಲಿ ಸರಕಾರೀ ಶಾಲೆಗಳ ಅಭಿವೃದ್ಧಿ ಮಾಡಿದ್ದಿಯ, ಉತ್ತಮ ರಸ್ತೆಗಳನ್ನು ಮಾಡಿಕೊಟ್ಟಿದ್ದೀಯ, ರೈತರ ಅನುಕೂಲಕ್ಕೆ ವಿಭಿನ್ನ ವೇದಿಕೆಗಳನ್ನು ಕೊಟ್ಟಿದ್ದೀಯ ” ಎಂದು.  ನೀನು ಕಾಲೇಜಿನಲ್ಲಿ ಮಾತನಾಡುತ್ತಿದ್ದ ಹಾಗೇನೇ ಸಾಧಿಸಿದ್ದೀಯಾ  ಎಂದು ನನಗೆ ಬಹಳ ಹೆಮ್ಮೆ ಆಯಿತು. ಕಾಲೇಜು ಮುಗಿಯುತ್ತಿದ್ದಂತೆ ಮದುವೆ ಮಾಡಿಕೊಂಡರೂ , ಸಂಸಾರದ  ಜವಾಬ್ಧಾರಿ ಹೊತ್ತು ಅದನ್ನು ನಿಭಾಯಿಸಿ ಮಕ್ಕಳನ್ನು ಒಂದು ಮಟ್ಟಿಗೆ ದಡ ಸೇರಿಸಿ, ಹಳ್ಳಿಯಾದರೇನು?  ದಿಲ್ಲಿಯಾದರೇನು ?  ಹೆಣ್ಣು ಮನಸ್ಸು ಮಾಡಿದರೆ  ಎಲ್ಲಿ ಇದ್ದರು ಅಂದುಕೊಂಡಿದ್ದನ್ನು ಸಾಧಿಸಬಹುದು ಎಂದು ತೋರಿಸಿಕೊಟ್ಟಿದ್ದೀಯ ಎಂದು ತಿಳಿದಾಗ  ನಿನ್ನ ಮೇಲಿನ ಅಭಿಮಾನ ದುಪ್ಪಟ್ಟು ಆಯಿತು. ನಿನ್ನನ್ನು ಅರ್ಥ ಮಾಡಿಕೊಳ್ಳುವ ಬದಲು, ಸ್ನೇಹಿತನಾಗಿ ನಿನ್ನ ಸಹಾಯಕ್ಕೆ ನಿಲ್ಲುವ ಬದಲು,  ಎಷ್ಟೆಲ್ಲ ಹೇಳುತ್ತಿದ್ದ ನೀನು, ಅಷ್ಟು ಬೇಗ ಮದುವೆ  ಮಾಡಿಕೊಂಡೆಯಲ್ಲ ಎಂಬ ಅರ್ಥವಿಲ್ಲದ  ಕೋಪ ಮಾಡಿಕೊಂಡು,  ನಿನ್ನನ್ನು ಭೇಟಿಯಾಗದೇ, ನನ್ನ ನಿನ್ನ ಸ್ನೇಹಕ್ಕೆ ಸರಿಯಾದ ಬೆಲೆ ನೀಡದೆ ಬಹಳ ತಪ್ಪು ಮಾಡಿದೆ ಎಂದೆನಿಸಿದೆ. ದಯವಿಟ್ಟು ಕ್ಷಮಿಸಿಬಿಡು. 

ನನ್ನ ಮಗನ ಜೊತೆಗೆ ನಿನ್ನನ್ನು  ಭೇಟಿಯಾಗಲು ಬರುತ್ತಿದ್ದೇನೆ . ಅವನಿಗೆ ನಿನ್ನ ಬಗ್ಗೆ ಏನನ್ನು ಹೇಳದೆ ಕರೆದುಕೊಂಡು ಬರುತ್ತಿದ್ದೇನೆ. ನಿನ್ನನ್ನು ಭೇಟಿ ಮಾಡಿಸಿದ ಮೇಲೆ ಎಲ್ಲವನ್ನು ಹೇಳುವೆ. ನಾನು ಮಾಡಿದ ತಪ್ಪನ್ನು ಅವನು ಮಾಡದಿರಲಿ.  ಹುಡುಗ ಹುಡುಗಿ ಬರಿ ಪ್ರೇಮಿಗಳೇ ಆಗಬೇಕಾ ? ಸ್ನೇಹಿತರಾಗಬಾರದ ಎಂಬ ಪ್ರಶ್ನೆಗೆ ನಮ್ಮಿಬ್ಬರ ಭೇಟಿ ಉತ್ತರ ಕೊಡುತ್ತದೆ ಎಂಬ ಭಾವನೆ ನನಗೆ. 

ನಿನ್ನ ಭೇಟಿಯ ದಿನಕ್ಕಾಗಿ ಕಾಯುತ್ತಿರುವ 

ನಿನ್ನ ಆತ್ಮೀಯ ಸ್ನೇಹಿತ 

ನಾನು 

– ಶ್ರೀನಾಥ್ ಹರದೂರ ಚಿದಂಬರ 

One thought on “ಭೇಟಿ 

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s