ಕಾಲ್ಗೆಜ್ಜೆ

ಮದುವೆಯ ಹಿಂದಿನ ದಿವಸ ಛತ್ರದಲ್ಲಿ   ಹೆಣ್ಣಿನ ಕಡೆಯವರ  ಕೆಲಸದ ಗಡಿಬಿಡಿ ಎದ್ದು ಕಾಣಿಸುತ್ತಿತ್ತು. ಆರತಕ್ಷತೆಗೆ ಸಿದ್ದತೆಗಳು ಭರ್ಜರಿಯಾಗಿ ನಡೆಯುತ್ತಿತ್ತು.  ಮದುವೆಯ ಸಣ್ಣ ಪುಟ್ಟ ಕೆಲಸಗಳ ಜವಾಬ್ಧಾರಿ ಹೊತ್ತ ಯುವಕರು ಅತ್ತಿಂದ ಇತ್ತ ಅವಸರದಲ್ಲಿ ಓಡಾಡುತ್ತಿದ್ದರು.  ತುಂಬಾ ಅಂದವಾಗಿ ಬಟ್ಟೆ ತೊಟ್ಟು ಅಲ್ಲಿಂದ ಇಲ್ಲಿಗೆ,  ಇಲ್ಲಿಂದ ಅಲ್ಲಿಗೆ ನಡೆದಾಡುತ್ತಿದ್ದ ಯುವತಿಯರ ಗಮನವನ್ನು  ತಮ್ಮತ್ತ ಸೆಳೆಯಲು ಹರಸಾಹಸ ಮಾಡುತ್ತಿದ್ದರು.     ಹೆಣ್ಣಿನ ಮಾವಂದಿರು, ಚಿಕ್ಕಪ್ಪ ಮತ್ತು ದೊಡ್ಡಪ್ಪಂದಿರು ಹಾಗೆ ಮಾಡಿ, ಹೀಗೆ ಮಾಡಿ ಎಂದು ಯುವಕರಿಗೆ ಆದೇಶ ನೀಡುತ್ತಾ, ಸಲಹೆ ಕೊಡುತ್ತ  ಯಜಮಾನಿಕೆ ಪ್ರದರ್ಶಿಸುತ್ತಿದ್ದರು. ಹೆಂಗಸರು ಹೂ ಕಟ್ಟುತ್ತಾ, ತಾಂಬೂಲ ಕಟ್ಟುತ್ತಾ,  ಗುಸು ಗುಸು ಪಿಸು ಪಿಸು ಅಂತ ಏನನ್ನೋ ಹೇಳಿಕೊಳ್ಳುತ್ತಾ, ನಗಾಡುತ್ತಾ ಕೆಲಸ ಮಾಡುತ್ತಾ ಕುಳಿತ್ತಿದ್ದರು. ಅಡುಗೆಯವರು ಅಡುಗೆ ತಯಾರು ಮಾಡುತ್ತಿದ್ದರಿಂದ ಛತ್ರವೆಲ್ಲ ಘಮ ಘಮಿಸುತ್ತಿತ್ತು. “ಇನ್ನೇನು ಗಂಡಿನ ಕಡೆಯವರು ಬರುತ್ತಾರೆ, ಸ್ವಾಗತಿಸಲು ತಯಾರು ಮಾಡಿಕೊಳ್ಳಿ ” ಎಂದು  ಹುಡುಗಿಯ ತಂದೆ ಹೇಳಿದ  ಮೇಲಂತೂ ಎಲ್ಲರು ತಾವು ಮಾಡುತ್ತಿದ್ದ ಕೆಲಸವನ್ನು ಬೇಗ ಬೇಗ ಮುಗಿಸುವ ಧಾವಂತದಲ್ಲಿದ್ದರು.    ಹೀಗೆ ಪ್ರತಿಯೊಬ್ಬರೂ ಅವರ ಅವರ ಕೆಲಸದಲ್ಲಿ ಮುಳುಗಿದ್ದರೂ, ಇದಕ್ಕೂ ತನಗೂ ಯಾವುದೇ ಸಂಬಂಧವಿಲ್ಲದಂತೆ  ಛತ್ರದ ಮೂಲೆಯಲ್ಲಿ  ನವೀನ ಕಿವಿಗೆ ಇಯರ್ ಫೋನ್ ಹಾಕಿಕೊಂಡು ಯಾವುದೊ ಹಾಡು ಕೇಳುತ್ತ ತನ್ನದೇ ಪ್ರಪಂಚದಲ್ಲಿ ತೇಲಾಡುತ್ತಾ ಕುಳಿತ್ತಿದ್ದ. 

ನವೀನ ಮದುವೆಯೊಂದೇ ಅಲ್ಲ,  ಜನ ಸೇರುವ ಯಾವುದೇ ಕಾರ್ಯಕ್ರಮಗಳಿದ್ದರೂ ಅವುಗಳಿಂದ ದೂರವಿರುತ್ತಿದ್ದ. ಏನಾದರು ನೆಪವೊಡ್ಡಿ ಅಂತ ಕಾರ್ಯಕ್ರಮಗಳಿಗೆ ಹೋಗುವುದನ್ನು ತಪ್ಪಿಸಿಕೊಳ್ಳುತ್ತಿದ್ದ. ಆದರೆ ನವೀನನ ಆತ್ಮೀಯ ಸ್ನೇಹಿತ ದೀಪು  ತನ್ನ  ತಂಗಿ ಅಕ್ಷತಾಳ  ಮದುವೆಗೆ ನವೀನನಿಗೆ ತಪ್ಪಿಸಿಕೊಳ್ಳುವ ಯಾವುದೇ ಅವಕಾಶ ಕೊಡದೆ ಮದುವೆಗೆ ಎಳೆದುಕೊಂಡು ಬಂದಿದ್ದ. ಮನಸ್ಸಿಲ್ಲದಿದ್ದರೂ ಬೇರೆ ದಾರಿ ಕಾಣದೆ ಸ್ನೇಹಿತನ ಮನಸ್ಸು ನೋಯಿಸಬಾರದು ಎಂದುಕೊಂಡು ಮದುವೆಗೆ ಬಂದಿದ್ದ. ನವೀನನ ಬಗ್ಗೆ ತಿಳಿದಿದ್ದ ದೀಪು ಕೂಡ ಅವನನ್ನ ಯಾವುದೇ ಕೆಲಸಕ್ಕೆ  ಎಳೆಯದೆ ಅವನ ಪಾಡಿಗೆ ಅವನನ್ನು ಬಿಟ್ಟಿದ್ದ. ನವೀನ ಕೂಡ ಯಾವುದೇ ಕೆಲಸದಲ್ಲಿ ತೊಡಗಿಸಿಕೊಳ್ಳದೆ, ಎಲ್ಲರಿಂದ ದೂರವಾಗಿ ತನ್ನ ಪಾಡಿಗೆ ಹಾಡು ಕೇಳುತ್ತಾ ಕುಳಿತುಕೊಂಡು ತನ್ನದೇ ಲೋಕದಲ್ಲಿ ಮುಳುಗಿದ್ದ. 

ಗಂಡಿನ ಕಡೆಯವರ ದಿಬ್ಬಣ ಬರುತ್ತಿದ್ದಂತೆ ಒಮ್ಮೆಲೇ ಛತ್ರದಲ್ಲಿ ಗಜಿ ಬಿಜಿ ಜೋರಾಗಿ,  ಹೆಣ್ಣಿನ ಕಡೆಯವರು ಎಲ್ಲರು ಛತ್ರದ ಮುಖ್ಯ ದ್ವಾರಕ್ಕೆ  ಗಡಿಬಿಡಿಯಿಂದ  ಗಂಡಿನ ಕಡೆಯವರನ್ನು  ಸ್ವಾಗತಿಸಲು  ಹೋಗತೊಡಗಿದರು.  ಮೂಲೆಯಲ್ಲಿ ಕುಳಿತ್ತಿದ್ದ ನವೀನನಿಗೆ ಇದ್ದಕ್ಕಿದ್ದಂತೆ ಎಲ್ಲರು ಛತ್ರದ ಮುಖ್ಯ ದ್ವಾರಕ್ಕೆ ಹೋಗುವುದು ಕಾಣಿಸಿ, ಕಿವಿಯಿಂದ ಇಯರ್ ಫೋನ್ ತೆಗೆದು ಏನಾಯ್ತು ಎಂದು ನೋಡುವಾಗ, ಅವನ ಸ್ನೇಹಿತ ದೀಪು ಅವನಿಗೆ ಜೊತೆ ಬರಲು ಕೈ ಸನ್ನೆ ಮಾಡಿ, ಗಡಿಬಿಡಿಯಿಂದ ಮುಖ್ಯ ದ್ವಾರದ ಕಡೆಗೆ ಹೊರಟ. ನವೀನ ಕೂಡ ಸ್ವಲ್ಪ ಕುತೂಹಲದಿಂದ ಏನಿರಬಹುದೆಂದು,  ಎಲ್ಲರು ಅಲ್ಲಿಗೆ ಹೋದ ಮೇಲೆ ಅವರ ಹಿಂದೆ ಹೋಗಿ ನಿಂತ. ಗಂಡಿನ ಕಡೆಯವರು ಬಂದಿದ್ದ ಬಸ್ಸಿನಿಂದ ಒಬ್ಬೊಬ್ಬರೇ ಇಳಿಯುತ್ತಿದ್ದರು.  ಹೆಣ್ಣಿನ ಕಡೆಯವರು ಗಂಡಿನ ಕಡೆಯವರನ್ನು ಹೂವಿನ ಹಾರ ಹಾಕಿ ಸ್ವಾಗತ ಮಾಡುತ್ತಿದ್ದರು.   ದೀಪುವಿನ ಅಪ್ಪ ಅಮ್ಮ,  ಮದುಮಗನ  ಕಾಲಿಗೆ ನೀರು ಹಾಕಿ,  ಹೂವಿನ ಹಾರವನ್ನು ಕುತ್ತಿಗೆಗೆ  ಹಾಕಿ ಕೈ ಅವನ ಹಿಡಿದುಕೊಂಡು ಮಾತನಾಡುತ್ತಿದ್ದರು. ಮದುಮಗನ  ಹಿಂದೆ ಬಹಳ ಗಂಭೀರವಾಗಿ ಹೂವಿನ ಹಾರ ಹಾಕಿಸಿಕೊಂಡು ಹುಡುಗನ ಅಪ್ಪ ಅಮ್ಮ ನಿಂತಿದ್ದರು. ನವೀನನಿಗೆ ಏನು ಅಂತಹ ಆಸಕ್ತಿ ತರುವಂತದ್ದು ಕಾಣದೆ ಮತ್ತೆ ಅಲ್ಲಿಂದ ವಾಪಸು ಹೊರಟು  ಛತ್ರದ ಬಾಲ್ಕನಿಗೆ ಹೋಗಿ, ಛತ್ರದ ಎದುರುಗಡೆ ಇದ್ದ ಕೆರೆಯಲ್ಲಿ ಹಾರಾಡುತ್ತಿದ್ದ ಪಕ್ಷಿಗಳನ್ನು ನೋಡುತ್ತಾ ನಿಂತ.  ಸರಿ ಸುಮಾರು ಒಂದು ಗಂಟೆ ಕಳೆದ ಮೇಲೆ ಅವನ ಹಿಂದೆ ಸಣ್ಣಗೆ ಕಾಲ್ಗೆಜ್ಜೆಯಾ  ಸದ್ದು ಕೇಳಿ ಒಮ್ಮೆ ತಿರುಗಿ ನೋಡಿ, ಮತ್ತೆ  ವಾಪಸು ಕೆರೆ ಕಡೆ ನೋಡಿದವನು ಮತ್ತೆ ವಾಪಸು ತಿರುಗಿ ನೋಡಿದ. ಇವನು ನಿಂತಿದ್ದ ಬಾಲ್ಕನಿಗೆ ಒಂದು ಸುಂದರ ಹುಡುಗಿ ಬರುತ್ತಿದ್ದಳು. ನವೀನ ಬಾಲ್ಕನಿಗೆ ಬರುತ್ತಿದ್ದ ಆ ಹುಡುಗಿಯನ್ನು ಕಣ್ಣು ಮಿಟುಕಿಸದೆ ತನ್ನನ್ನು ತಾನು ಮರೆತು ಅವಳನ್ನೇ  ನೋಡತೊಡಗಿದ.  ಹಲವು ಕ್ಷಣಗಳ ಕಾಲ ಸಭ್ಯತೆ ಮರೆತು ಅವಳನ್ನೇ ದಿಟ್ಟಿಸಿ ನೋಡುತ್ತಿದ್ದೇನೆ ಅನ್ನುವುದು ಸಹ ಅವನ ಗಮನಕ್ಕೆ ಬರಲಿಲ್ಲ. ಅವಳ ಅದ್ಭುತ ಸೌಂದರ್ಯ ಅವನನ್ನು ಸೆರೆ ಹಿಡಿದುಬಿಟ್ಟಿತ್ತು.  ಆದರೆ ಆ ಹುಡುಗಿ  ನವೀನನ್ನು ನೋಡಿಯೂ ನೋಡದಂತೆ, ಹುಡುಗರು ಅವಳನ್ನು ಆ ರೀತಿ ನೋಡುವುದು ಬಹಳ ಸಹಜವೇನೋ ಎಂಬಂತೆ ಬಾಲ್ಕನಿಯ ತುದಿಯಲ್ಲಿ ನಿಂತು ತನ್ನ ಮೊಬೈಲ್ನಲ್ಲಿ ಒಂದೆರೆಡು ಸೆಲ್ಫಿ ತೆಗೆದುಕೊಂಡು, ಅಲ್ಲಿ ಒಬ್ಬ ವ್ಯಕ್ತಿ ಇದ್ದಾನೆ, ತನ್ನನ್ನೇ ನೋಡುತ್ತಿದ್ದಾನೆ ಎಂಬುದನ್ನು ಗಮನ ಸಹ ಕೊಡದೆ ಅಲ್ಲಿಂದ ಹೊರಟು  ಹೋದಳು. 

ಆ ಹುಡುಗಿ ಅಲ್ಲಿಂದ ಹೊರಟು ಹೋದರು,  ನವೀನ ಮಾತ್ರ ಹಾಗೆ ಅಲ್ಲಿಯೇ ಅವಳು ಹೋದ ಕಡೆ ನೋಡುತ್ತಾ, ಗರ ಬಡಿದವನಂತೆ ನಿಂತುಬಿಟ್ಟಿದ್ದ.  ಮೊದಲ ನೋಟದಲ್ಲಿಯೇ ಪ್ರೀತಿ ಹುಟ್ಟುತ್ತದೆ ಎಂದು ಯಾರಾದರೂ ಹೇಳಿದರೆ ಅವರನ್ನು  ಸಿಕ್ಕಾಪಟ್ಟೆ ಕಿಚಾಯಿಸಿ, ಆ ರೀತಿ ಆಗಲು ಸಾಧ್ಯವೇ ಇಲ್ಲ ಎಂದು ವಾದಿಸುತ್ತಿದ್ದ ನವೀನನಿಗೆ,  ಆ ಹುಡುಗಿಯನ್ನು ನೋಡಿದ ಕೊಡಲೇ ಇವಳೇ ನನ್ನ ಬಾಳ ಸಂಗಾತಿ, ಇವಳಿಲ್ಲದಿದ್ದರೆ ನನಗೆ ಬದುಕೇ ಇಲ್ಲ ಎಂದು ಅನಿಸಿತ್ತು. ಅವಳ ಬಗ್ಗೆ ಆಸೆ ಹುಟ್ಟಲಿಲ್ಲ, ಕಾಮದ ವಾಂಛೆ ಇರಲಿಲ್ಲ,  ಅವಳು ನನ್ನ ಜೊತೆಯಲ್ಲಿದ್ದರೆ ಅಷ್ಟೇ ಸಾಕು ಎಂಬ ಬಯಕೆ ಮನಸ್ಸಲ್ಲಿ ಮೂಡಿತು.  ಅದರ ಜೊತೆಯಲ್ಲಿಯೇ ಅವಳು ಸಿಗದಿದ್ದರೆ ಏನು ಎಂಬ ಭಯ, ಆತಂಕ ಶುರುವಾಯಿತು.   ನವೀನನಿಗೆ ಇಡೀ ವಾತಾವರಣ ಒಮ್ಮೆಲೇ ತಣ್ಣಗಾದಂತೆ ಅನುಭವ ಆಗತೊಡಗಿತು.  ಹೇಳಲಾಗದ ಸಂತೋಷ,  ಉಲ್ಲಾಸ, ಭಯ, ಆಸೆ..   ಹೀಗೆ  ಭಾವನೆಗಳು ಒಂದೇ ಸಮನೆ  ಮನದಲ್ಲಿ ಉಕ್ಕತೊಡಗಿತು.   ಯೋಚಿಸುತ್ತಲೇ   ನಿಧಾನವಾಗಿ ಬಾಲ್ಕನಿಯಿಂದ ಇಳಿದು ಬಂದ ನವೀನನಿಗೆ ಯಾವಾಗಲೂ ಕಿರಿ ಕಿರಿ ಉಂಟು ಮಾಡುತ್ತಿದ್ದ ಜನರ ಗುಂಪು, ಅವರ ಮಾತುಗಳು ಯಾಕೋ ಇದ್ದಕಿದ್ದಂತೆ  ಹಿತ ಎಂದೆನಿಸತೊಡಗಿತು.  ಮೊದಲು ತಲೆ ನೋವು ತರುತ್ತಿದ್ದ  ಗಲಾಟೆ ಈಗ ಅವನಿಗೆ ಯಾಕೋ   ಸಹನೀಯ ಎಂದೆನಿಸಿತು. ಕರ್ಕಶ ಎಂದೆನಿಸುತ್ತಿದ್ದ ವಾದ್ಯಗಳ ಸದ್ದು  ಕಿವಿಗೆ ಇಂಪಾಗಿ ಕೇಳತೊಡಗಿತು.  ಮನಸ್ಸಿನಲ್ಲಿ ಉಕ್ಕಿ ಬರುತ್ತಿದ್ದ ಭಾವನೆಗಳಿಗೆ ತಕ್ಕಂತೆ ಸುತ್ತ ಮುತ್ತಲು ಎಲ್ಲವು ಕನಸಿನಂತೆ ನಡೆಯುತ್ತಿದೆ ಅನ್ನುವ ಭಾವನೆ ಉಂಟಾಗತೊಡಗಿತು.   ನವೀನ  ಸ್ವಲ್ಪ ಹೊತ್ತಿನ ಹಿಂದೆ ನೋಡಿದ ಹುಡುಗಿಯನ್ನು  ಛತ್ರದಲ್ಲಿ ನಿಂತುಕೊಂಡಿದ್ದ  ಹುಡುಗಿಯರ ಗುಂಪುಗಳಲ್ಲಿ ಹುಡುಕತೊಡಗಿದ.   ಅವನ ಮನಸ್ಸು “ಎಲ್ಲಿ ಅವಳು,  ಕಣ್ಣಿಗೆ ಕಾಣುತ್ತಿಲ್ಲವೇ ”  ಎಂದು ಚಡಪಡಿಸತೊಡಗಿತ್ತು.  ಒಂದು ಗುಂಪಿನಲ್ಲಿ ಅವಳು ಕಂಡೊಡನೆ ಎದೆಯಲ್ಲಿ ಒಮ್ಮೆಲೇ ಸ್ಪೋಟವಾದಂತೆ, ಉಸಿರು ಬಿಸಿಯಾಗಿ ಹಾಗೆ ಅವಳನ್ನು ನೋಡುತ್ತಾ ಅಲ್ಲಿಯೇ ಒಂದು ಕುರ್ಚಿಯಲ್ಲಿ ಕುಳಿತುಬಿಟ್ಟ. ತದನಂತರ ಅವನ ಕಣ್ಣು ಅವಳನ್ನು ಎಲ್ಲಿ ಹೋದರು  ಹಿಂಬಾಲಿಸತೊಡಗಿತು. 

ಸ್ವಲ್ಪ ಹೊತ್ತಿನಲ್ಲಿಯೇ ಇವನ ನೋಟದ ತೀವ್ರತೆ ಅವಳನ್ನು ತಲುಪಿತ್ತು. ಅವಳು ಇವನನ್ನು ನೋಡುವುದು, ಇವನು ಅವಳನ್ನು ನೋಡುವ ಕಣ್ಣಾಟ ಶುರುವಾಯಿತು. ಅವಳು ಮುಖದಲ್ಲಿ ಯಾವುದೇ ಭಾವನೆ ವ್ಯಕ್ತ ಪಡಿಸದಿದ್ದರು, ಕಣ್ಣುಗಳು ಮಾತ್ರ ಏನನ್ನೋ ಹೇಳಿದಂತೆ ನವೀನನಿಗೆ ಭಾಸವಾಯಿತು.  ರಾತ್ರಿ ಆರತಕ್ಷತೆ ಮುಗಿದು ಮಲಗುವ ತನಕ ಅವರಿಬ್ಬರ ಕಣ್ಣುಗಳ ಸಮ್ಮಿಲನ ಆಗಾಗ ನಡೆಯುತ್ತಲೇ ಇತ್ತು.  ರಾತ್ರಿ ಮಲಗಿದ ನವೀನನಿಗೆ ನಿದ್ದೆ ಮಾತ್ರ ಸುಳಿಯಲಿಲ್ಲ. ಅವನ ಮನಸ್ಸಿನಲ್ಲಿ ಆಗುತ್ತಿದ್ದ ತಳಮಳಕ್ಕೆ ಬೆಳಗ್ಗೆ ಆಗಿದ್ದು ಗೊತ್ತೇ ಆಗಲಿಲ್ಲ.  ಬೆಳಗ್ಗೆ ಮತ್ತೆ ತಿಂಡಿ ತಿನ್ನುವ ಹೊತ್ತಿಗೆ ಶುರುವಾದ ಅವರ ಕಣ್ಣೋಟದ ಸಮಾಗಮ ಮದ್ಯಾಹ್ನ ಊಟದ ತನಕ ನಡೆಯುತ್ತಲೇ ಇತ್ತು. ಎದುರು ಬದುರು ಕೂತುಕೊಂಡು ಆಗಾಗ ಒಬ್ಬರಿಗೊಬ್ಬರು ನೋಡಿಕೊಂಡು  ಬೆಳಗ್ಗೆ ತಿಂಡಿ ಮತ್ತು ಮದ್ಯಾಹ್ನ  ಊಟ ಮುಗಿಸಿದರು. ಅವಳ ಜೊತೆಯಲ್ಲಿದ್ದ ಹುಡುಗಿಯರು   ಇವನ ಕಡೆ ನೋಡಿ ಅವಳ ಹತ್ತಿರ ಏನೋ ಹೇಳಿ ಅವಳನ್ನು ರೇಗಿಸುತ್ತಿದ್ದರು.  ಅವಳು ಕೂಡ ಅದಕ್ಕೆ ಏನೋ ಹೇಳಿ ನಗಾಡುತ್ತಾ ಇವನ ಕಡೆ ಕಳ್ಳ ನೋಟ ಬೀರುತ್ತಿದ್ದಳು. ನವೀನ ಎಷ್ಟು ಬಾರಿ ಮಾತನಾಡಿಸಲು ಪ್ರಯತ್ನಿಸಿದರೂ ಅವಳು ತಪ್ಪಿಸಿಕೊಂಡು ಹೋಗುತ್ತಿದ್ದಳು.  

ಅವಳು ವಾಪಸು  ಹೊರಡುವ ಮುನ್ನ ಹೇಗಾದರೂ ಮಾಡಿ ಅವಳು ಮಾತನಾಡಿಸಿ, ತನ್ನ ಮನಸ್ಸಿನಲ್ಲಿ ಇದ್ದ ಪ್ರೀತಿಯನ್ನು  ನಿವೇದನೆ ಮಾಡಲೇ ಬೇಕು, ಅವಳ ಬಗ್ಗೆ ತಿಳಿಯಬೇಕು ಎಂದು ನವೀನ ನಿರ್ಧಾರ ಮಾಡಿದ್ದ.  ಅವಳನ್ನು ಮಾತನಾಡಿಸುವ ಮೊದಲು ಅವಳಿಗೆ ಕೊಡಲು ಏನಾದರೂ ತೆಗೆದುಕೊಂಡು ಹೋಗಬೇಕು ಎಂದು ಅನಿಸಿ   ಛತ್ರದಿಂದ ಹೊರಗಡೆ ಹೊರಟ.  ಪೇಟೆಗೆ ಹೋಗಿ ಒಂದು ದೊಡ್ಡ ಸುಂದರವಾದ ಗುಲಾಬಿಯನ್ನು ತೆಗೆದುಕೊಂಡ. ಅವಳನ್ನು  ತಿರುಗಿ ನೋಡುವ ಹಾಗೆ ಮಾಡಿದ ಅವಳ ಕಾಲ್ಗೆಜ್ಜೆಯ ಸದ್ದಿನ ನೆನಪಿಗೆ  ಅವಳಿಗೋಸ್ಕರ ಒಂದು ಕಾಲ್ಗೆಜ್ಜೆಯನ್ನು  ಖರೀದಿ ಮಾಡಿ ವಾಪಸು ಛತ್ರದ ಕಡೆಗೆ ಧಾವಿಸಿದ.  ನವೀನ ಬರುವ ಹೊತ್ತಿಗೆ ಆಗಲೇ ದೀಪುವಿನ ತಂಗಿ ಅವಳ ಗಂಡನ ಜೊತೆ ಕಾರಿನಲ್ಲಿ ಕುಳಿತು ಗಂಡನ ಮನೆಗೆ ಹೊರಡಲು ತಯಾರಾಗಿದ್ದಳು.    ದೀಪು, ಅವನ ಅಪ್ಪ ಅಮ್ಮ ಮತ್ತು ತಂಗಿ ಜೊತೆಯಲ್ಲಿ ಅವರ ಸಂಬಂದಿಕರು ಕಾರಿನ ಸುತ್ತ ನಿಂತು  ಅಳುತ್ತಿದ್ದರು.   ನವೀನ ಛತ್ರದ ಗೇಟಿನ ಹತ್ತಿರ ಬರುವುದಕ್ಕೂ ಗಂಡಿನ ಕಡೆಯವರ ಬಸ್ಸು ಹೊರಗಡೆ ಬರುವುದಕ್ಕೂ ಸರಿ ಹೋಯಿತು.  ನವೀನ ಗೇಟಿನ ಬದಿಯಲ್ಲಿ ನಿಂತು ನೋಡುತ್ತಿದ್ದಾಗ ಬಸ್ಸಿನ ಕಿಟಕಿಯಲ್ಲಿ ಅವಳು ಕುಳಿತ್ತದ್ದಳು.  ಇವನನ್ನು ನೋಡಿ ಒಮ್ಮೆ ಸಣ್ಣಗೆ ನಗುತ್ತಿರುವಾಗಲೇ ಬಸ್ಸು ನವೀನನನ್ನು  ದಾಟಿ ಹೊರಟು ಹೋಯಿತು. ನವೀನ ಏನು ಮಾಡುವುದು ಎಂದು ತೋಚದೆ ಕಲ್ಲಿನಂತೆ ಅಲ್ಲಿಯೇ ಬಸ್ಸಿನ ಹಿಂಭಾಗ ನೋಡುತ್ತಾ ನಿಂತುಬಿಟ್ಟ. ಬಸ್ಸು ಮುಂದೆ ಹೋಗಿ ತಿರುವಿನಲ್ಲಿ ಕಾಣದಾಯಿತು. ನಿಧಾನವಾಗಿ ಛತ್ರ ಬಾಗಿಲ ಹತ್ತಿರ ಬಂದ. ಅಲ್ಲಿ ಅಳುತ್ತಿದ್ದ ಸ್ನೇಹಿತನನ್ನ  ನೋಡಿ  ಎಷ್ಟು ಪ್ರಯತ್ನ ಪಟ್ಟರು ಅವನ  ಕಣ್ಣಲ್ಲಿ ಅವನಿಗೆ ಗೊತ್ತಿಲ್ಲದಂತೆ ನೀರು ಜಿನುಗತೊಡಗಿತು.  ಹೇಳಲು ಆಗದ ಅತೀವ ದುಃಖದಿಂದ ಅಳುತ್ತಲೇ ಹಾಗೆ ಅಲ್ಲಿಯೇ ಕುಸಿದು ಕುಳಿತ.  ಎಲ್ಲವನ್ನು  ಕಳೆದುಕೊಂಡು ಸೋತವನಂತೆ ಬಿಕ್ಕಿ ಬಿಕ್ಕಿ ಅಳತೊಡಗಿದ. ದೀಪುವಿಗೆ ನವೀನ ಯಾಕೆ ಇಷ್ಟು ಅಳುತ್ತಿದ್ದಾನೆ ಎಂದು ಅರ್ಥವಾಗದೆ ನೋಡುತ್ತಿದ್ದ.  ಹತ್ತು ನಿಮಿಷ ಕಳೆದ ನಂತರ ನವೀನನಿಗೆ  ಸ್ವಲ್ಪ ಸಮಾಧಾನವಾಯಿತು. ಸುಮ್ಮನೆ ಅಲ್ಲಿಂದ ಛತ್ರದ ಬಾಲ್ಕನಿಗೆ ಹೋಗಿ ನಿಂತು ಕೆರೆಯ ಕಡೆ ನೋಡತೊಡಗಿದ.   ನವೀನನ  ಮನದಲ್ಲಿ ಒಂದರ ಹಿಂದೆ ಒಂದು ಪ್ರಶ್ನೆಗಳು ಮೂಡತೊಡಗಿದವು. 

ಅವಳು ಯಾರು?  ಗೊತ್ತಿಲ್ಲ, ಅವಳ ಹೆಸರು?  ಗೊತ್ತಿಲ್ಲ, ನನ್ನನ್ನು ಪ್ರೀತಿಸಿದ್ದಳಾ?  ಗೊತ್ತಿಲ್ಲ, ಕನಿಷ್ಠ ಇಷ್ಟ ಪಟ್ಟಳಾ ? ಗೊತ್ತಿಲ್ಲ, 

ಅವಳ ಜೊತೆ ಒಂದು ಕ್ಷಣವೂ ಕಳೆದಿಲ್ಲ, ಮಾತನಾಡಿಲ್ಲ, ಅವಳ ಧ್ವನಿ ಹೇಗಿದೆಯೋ ಗೊತ್ತಿಲ್ಲ. 

ನಾನು ಪ್ರೀತಿಸಿದ್ದೇನಾ ? ಪ್ರೀತಿ ಎಂದರೆ ಇದೇನಾ ?  ಅಥವಾ ಇದು ಬರಿ ಆಕರ್ಷಣೆ ಮಾತ್ರಾನಾ?

ಒಂದೇ ದಿನದಲ್ಲಿ ಅವಳನ್ನು ಕಳೆದುಕೊಂಡೆ ಅನ್ನುವ ಭಾವನೆ ಏಕೆ ಮೂಡುತ್ತಿದೆ? ನನಗೆ ಸಿಗದೇ ಕಳೆದುಕೊಳ್ಳಲು ಸಾಧ್ಯವೇ?

ನವೀನನಿಗೆ ಯಾವ ಪ್ರಶ್ನೆಗಳಿಗೂ ಉತ್ತರ ಮಾತ್ರ  ಸಿಗಲಿಲ್ಲ.  ಹತ್ತು ನಿಮಿಷ ಕೆರೆಯ ಕಡೆ ದಿಟ್ಟಿಸಿ ನೋಡುತ್ತಾ ನಿಂತುಬಿಟ್ಟ. ಸೂರ್ಯಾಸ್ತ ಆಗುವ ಸಮಯ ಹತ್ತಿರ ಬರತೊಡಗಿತ್ತು. ನಂತರ  ಗುಲಾಬಿ ಮತ್ತು ಕಾಲ್ಗೆಜ್ಜೆಯನ್ನು  ಜೋರಾಗಿ ಬೀಸಿ  ಕೆರೆಗೆ ಎಸೆದ. ಕೆಳಗಿನಿಂದ ದೀಪು ನವೀನನನ್ನು ಕೂಗುತ್ತಾ ಬಾಲ್ಕನಿಗೆ ಬಂದ.  ನಿಂತಿದ್ದ ನವೀನನಿಗೆ ” ಬಾರೋ, ಹೊರಡೋಣ … ಅವಳು ಹೊರಟುಹೋದಳು,  ನನಗು ಕಳುಹಿಸುವಾಗ ಇಷ್ಟು ದುಃಖ ಆಗುತ್ತೆ ಅಂತಾ ಗೊತ್ತಿರಲಿಲ್ಲ”  ಎಂದು ತನ್ನ ತಂಗಿಯ ಬಗ್ಗೆ ಹೇಳಿದ.  

ನವೀನ ಕೂಡ ” ಹೌದು, ಅವಳು ಹೊರಟುಹೋದಳು, ಇಷ್ಟು ದುಃಖ ಆಗುತ್ತೆ ಅಂತ ನನಗು ಗೊತ್ತಿರಲಿಲ್ಲ,  ಬಾ ಹೊರಡೋಣ” ಎಂದ. ದೀಪುವಿಗೆ ನವೀನ ಯಾವ ಅರ್ಥದಲ್ಲಿ ಹೇಳಿದ್ದು ಅರ್ಥವಾಗಲಿಲ್ಲ.  ದೀಪು ಏನು ಎಂಬಂತೆ ನವೀನನ  ಮುಖ ನೋಡಿದ. 

ನವೀನ ಒಮ್ಮೆ ಜೋರಾಗಿ ನಿಟ್ಟುಸಿರು ಬಿಟ್ಟು,  ” ಏನು ಇಲ್ಲ ಬಾ”  ಎಂದು ಬಾರವಾದ ಹೃದಯದೊಂದಿಗೆ  ಅಲ್ಲಿಂದ ದೀಪುವಿನ ಜೊತೆ ಹೊರಟ. 

ಸೂರ್ಯಾಸ್ತವಾಗಿತ್ತು.  ಕಾಲ್ಗೆಜ್ಜೆ ಕೆರೆಯ ತಟ ಸೇರಿತ್ತು. 

– ಶ್ರೀನಾಥ್ ಹರದೂರ ಚಿದಂಬರ 

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s