ನನ್ನ ಊರಿನಲ್ಲಿ ನನಗೆ ಬಹಳ ಬೇಕಾದ ಹಾಗು ಒಳ್ಳೆಯ ಸ್ನೇಹಿತ ಇದ್ದ. ಆತ ಬಹಳ ಸಂಕೋಚದ ಸ್ವಭಾವ ಹಾಗು ಮೃದು ವ್ಯಕ್ತಿತ್ವದ ಮನುಷ್ಯ. ಏನಾದರು ಕೇಳಿದರೆ ಇಲ್ಲ ಅನ್ನಲು ಆಗದೆ, ಇಲ್ಲ ಅಂದರೆ ಬೇಜಾರು ಮಾಡಿಕೊಂಡರೆ ಏನಪ್ಪಾ ಗತಿ ಎಂದು ” ಅಭ್ಯಾಸ ಇಲ್ಲಾರಿ” ಅಂತ ಹೇಳಿ ಜಾರಿಕೊಳ್ಳುತ್ತಿದ್ದ. ಒಂದು ದಿನ ನಾನು, ಆತ ಮತ್ತು ಬೇರೆ ಸ್ನೇಹಿತರ ಜೊತೆಯಲ್ಲಿ ಬಟ್ಟೆ ಖರೀದಿಗೆ ಪೇಟೆಗೆ ಹೋಗಿದ್ವಿ. ಬಟ್ಟೆ, ಬ್ಯಾಗ್, ಶೂಸ್.. ಹೀಗೆ ಶಾಪಿಂಗ್ ಮಾಡುತ್ತಾ ಇದ್ದಾಗ, ನನ್ನ ಇನ್ನೊಬ್ಬ ಸ್ನೇಹಿತ ಎದುರುಗಡೆ ಸಿಕ್ಕ ಒಂದು ಅಂಗಡಿಯ ಒಳಗೆ ಹೋದ. ನಾವು ಕೂಡ ಅವನ ಹಿಂದೇನೆ ಏನಕ್ಕೆ ಅಂತ ಕೇಳದೆ ಹೋದೆವು. ಒಳಗಡೆ ಆ ಅಂಗಡಿಯಲ್ಲಿ ಕ್ಯಾಶ್ ಕೌಂಟರ್ನಲ್ಲಿ ಒಬ್ಬ ಕುಳಿತ್ತಿದ್ದ. ನಾವು ಒಳಗಡೆ ಬಂದದ್ದು ನೋಡಿ ” ಬನ್ನಿ, ಬನ್ನಿ” ಅಂತ ಕರೆದ. ನಂತರ ಅವನು ನಮಗೆ ” ಒಳಗಡೆ ಹೋಗಿ ತೋರಿಸುತ್ತಾರೆ ” ಎಂದು ಹೇಳಿ ” ನೋಡಮ್ಮ, ಇವರಿಗೆ ಏನು ಬೇಕೋ ನೋಡು” ಅಂತ ಕೂಗಿ ಹೇಳಿದ. ಆಗ ಬಟ್ಟೆಯ ಕೌಂಟರ್ ನಲ್ಲಿ ಬಗ್ಗಿ ಬಟ್ಟೆ ಜೋಡಿಸುತ್ತಿದ್ದ ಒಂದು ಹುಡುಗಿ ಎದ್ದು ನಿಂತು ಒಂದು ನಗೆ ಬೀರಿದಳು. ಅಲ್ಲಿಗೆ ಹೋಗಿ ನಿಂತ ನನ್ನ ಸ್ನೇಹಿತ ಆ ಹುಡುಗಿಯ ಹತ್ತಿರ ” under wear ” ತೆಗೋಬೇಕಿತ್ತು ” ಎಂದ. ನಮಗೆ ಸ್ವಲ್ಪ ಮಜುಗರ ಆದರೂ ತೋರಿಸಿಕೊಳ್ಳದೆ ನಾವು ತೆಗೆದುಕೊಳ್ಳಲು ನಿಂತೆವು. ಆ ಹುಡುಗಿ ಒಂದೊಂದೇ ಬ್ರಾಂಡ್ ತೆಗೆದು ತೋರಿಸತೊಡಗಿದಳು. ನಮಗೆ ಬೇಕಾಗಿದ್ದೆಲ್ಲ ನಾವು ತೆಗೆದುಕೊಂಡೆವು. ಆದರೆ ಸಂಕೋಚ ಸ್ವಭಾವದ ಸ್ನೇಹಿತ ಮಾತ್ರ ಆ ಹುಡುಗಿಯ ಹತ್ತಿರ ಹೇಗೆ ವ್ಯಾಪಾರ ಮಾಡುವುದು ಎಂದು ಸಂಕೋಚದಿಂದ ಅಲ್ಲೇ ಅಂಗಡಿಯ ಒಂದು ಬದಿಯಲ್ಲಿ ನಿಂತುಕೊಂಡಿದ್ದ. ನಮ್ಮದೆಲ್ಲ ಮುಗಿದ ಮೇಲೆ, ಆಗ ಆ ಹುಡುಗಿ ಬದಿಯಲ್ಲಿ ನಿಂತಿದ್ದ ಆತನಿಗೆ ” ಸರ್, ನೀವು ತೆಗೆದುಕೊಳ್ಳಲ್ವಾ? ” ಅಂತ ಕೇಳಿದಳು.
ಆತ “ಅಭ್ಯಾಸ ಇಲ್ಲಾರಿ” ಅನ್ನ ಬೇಕೇ !!
ನಂತರ ಅಲ್ಲಿ ಒಡೆದ ನಗೆಬುಗ್ಗೆ ಹೇಗಿರಬಹುದು ನೀವೇ ಯೋಚಿಸಿ.
– ಶ್ರೀನಾಥ್ ಹರದೂರ ಚಿದಂಬರ