ಪೂಜಾರಿ ಕೊಟ್ಟರು ಮಾಸ್ಕ್ ಬಿಡಲಿಲ್ಲ

ಬಹಳ ತಿಂಗಳುಗಳ ನಂತರ ನೆದರ್ಲೆಂಡ್ನಲ್ಲಿ ನನಗೆ ದೇವಸ್ಥಾನಕ್ಕೆ ಹೋಗುವ ಅವಕಾಶ ಕೂಡಿಬಂತು.  ನೆದರ್ಲೆಂಡ್ನಲ್ಲಿ  ನಾನು ವಾಸಿಸುವ ಸ್ಥಳದ ಹೆಸರು  ಐಂದೋವೆನ್.   ಈ ಸ್ಥಳದಲ್ಲಿ ನಮ್ಮ ಭಾರತದ ಶೈಲಿಯ ದೇವಸ್ಥಾನವಿಲ್ಲ.   ಈ ಶೈಲಿಯ  ದೇವಸ್ಥಾನ ನಮಗೆ ಹತ್ತಿರ ಅಂದರೆ,  ನಾನಿರುವ ಸ್ಥಳದಿಂದ ಸುಮಾರು ಅರವತ್ತು ಕಿಲೋಮೀಟರು ದೂರದಲ್ಲಿರುವ  Roermond ಎಂಬ ಊರಿನಲ್ಲಿದೆ.  ಅಲ್ಲಿರುವುದು ಮುರುಗನ್ ದೇವರ ದೇವಸ್ಥಾನ.  ದೇವಸ್ಥಾನ ಅಂದ ಕೂಡಲೇ ನಮ್ಮ ಊರುಗಳಲ್ಲಿ ಕಾಣುವ ಹಾಗೆ ದೊಡ್ಡ ಗೋಪುರ ಇರುವ ದೇವಸ್ಥಾನವಲ್ಲ.  ನೆದರ್ಲೆಂಡ್ನಲ್ಲಿ ಆ ರೀತಿಯ ದೇವಸ್ಥಾನ ಕೂಡ ಇದೆ, ಆದರೆ  ಅದು ನಾವಿರುವ ಸ್ಥಳದಿಂದ ಬಹಳ ದೂರ ಇದೆ.  Roermond ನಲ್ಲಿ ಇರುವ ಈ ದೇವಸ್ಥಾನ  ಹೊರಗಡೆಯಿಂದ ನೋಡಲು ಒಂದು ಫ್ಯಾಕ್ಟರಿ ಶೆಡ್ ರೀತಿ ಕಂಡರೂ, ಒಳಗಡೆ ಕಾಲಿಟ್ಟು ನೋಡಿದರೆ ಸಂಪೂರ್ಣ ನಮ್ಮ ದಕ್ಷಿಣ ಭಾರತದ ದೇವಸ್ಥಾನಗಳ  ಶೈಲಿಯಲ್ಲೇ ಇದೆ. ನನಗಂತೂ ದೇವಸ್ಥಾನದ ಒಳಗಡೆ ಹೋದಮೇಲೆ ನಮ್ಮ ಊರಿನ ದೇವಸ್ಥಾನಕ್ಕೆ ಬಂದಿದ್ದೇನೋ ಎನ್ನುವ  ಹಾಗೆ ಆಯಿತು.  ದೇವರ ವಿಗ್ರಹ ನೋಡಿದ ಮೇಲೆ ಏನೋ ಮನಸ್ಸಿಗೆ  ಒಂದು ರೀತಿಯ ಸಮಾಧಾನ.  ಕೊರೋನಾ ಶುರುವಾದ ಮೇಲಂತೂ ಇಲ್ಲಿ ದೇವರ  ದರ್ಶನಕ್ಕೆ ನಿಷೇದ ಹೇರಿದ್ದರಿಂದ ಹೋಗಲಾಗಲಿರಲಿಲ್ಲ.  ಮೊನ್ನೆ ದೇವಸ್ಥಾನ ದರ್ಶನಕ್ಕೆ ತೆರೆದಿದೆ ಅಂತ ಗೊತ್ತಾದ ಕೂಡಲೇ,  Roermondಗೆ ಹೊರಟು ಬಂದಿದ್ದೆ.  ಐಂದೋವೆನ್ ನಿಂದ  Roermondಗೆ ಕಾರಿನಲ್ಲಿ ಹೊರಟರೆ ಒಂದು ಗಂಟೆಯ ದಾರಿ ಅಷ್ಟೇ.  ಈ ದೇವಸ್ಥಾನ ತುಂಬಾ ಹೊತ್ತು ತೆರೆದಿರುವುದಿಲ್ಲ.  ಸಂಜೆಯಾ ವೇಳೆ ಕೇವಲ ಒಂದೂವರೆ ಗಂಟೆ ತೆರೆಯುತ್ತಾರೆ. ಸೋಮವಾರ ಮಾತ್ರ ಮದ್ಯಾಹ್ನ ದಿಂದ ಸಂಜೆಯವರೆಗೆ ತೆರೆದಿರುತ್ತಾರೆ. 

ಸಂಜೆ ನಾವು ತಲುಪುವ ವೇಳೆಗೆ ಅಲ್ಲಿರುವ ಪೂಜಾರಿ ಪೂಜೆಗೆ ಆಗಲೇ ತಯಾರಿ ನಡೆಸಿದ್ದರು.  ಮುಖಕ್ಕೆ ಮಾಸ್ಕ್ ಹಾಗು ಅಲ್ಲಿಗೆ ಬಂದಿದ್ದ ಬೇರೆ ಭಕ್ತರ  ಜೊತೆಗೆ ಒಂದೂವರೆ ಮೀಟರು ದೂರ ಕಾದುಕೊಂಡು ದೇವಸ್ಥಾನದ ಒಳಗಡೆ ನಿಂತುಕೊಂಡೆವು. ನಮ್ಮ ಹಾಗೆ ಅನೇಕ ಭಕ್ತರು ವಿವಿಧ ಸ್ಥಳಗಳಿಂದ  ದೇವರ ದರ್ಶನಕ್ಕೆ ಬಂದಿದ್ದರು.  ಪೂಜಾರಿಯವರು ಕೂಡ ಬೇರೆ ಭಕ್ತರ ಜೊತೆಗೆ   ದೂರ ಕಾದುಕೊಳ್ಳಿ, ಪೊಲೀಸರು ಬಂದು ಚೆಕ್ ಮಾಡುತ್ತಾರೆ,  ಎಂದು ಪದೇ ಪದೇ ಎಚ್ಚರಿಸುತ್ತಿದ್ದರು. ಅದರಂತೆ ಪ್ರತಿಯೊಬ್ಬರು ಕೂಡ ಅದನ್ನು ಪಾಲಿಸುತ್ತಿದ್ದರು.  ನಾವು ದೇವಸ್ಥಾನಕ್ಕೆ ಹೋಗಿ ಹತ್ತು ನಿಮಿಷಕ್ಕೆ ಪೂಜೆ ಶುರು ಆಯಿತು.   ದೇವರ ಪೂಜೆ, ಅರ್ಚನೆ  ಹಾಗು ಮಂಗಳಾರತಿ ಎಲ್ಲವು ತುಂಬ ಚೆನ್ನಾಗಿ ನಡೆಯಿತು.  

ಈಗ ವಿಷಯಕ್ಕೆ ಬರುತ್ತೇನೆ. ಕೊರೋನಾ ಶುರುವಾದ ಸಮಯದಿಂದ ಅನೇಕ ತಮಾಷೆಯ ಸಂಗತಿಗಳನ್ನು ನೋಡುತ್ತಾ, ಕೇಳುತ್ತ ಬಂದಿದ್ದೇವೆ. ಹಾಕಿರುವ ಮಾಸ್ಕ್ ನಿಂದ ಆಗುವ ತಮಾಷೆಯ ಪ್ರಸಂಗಗಳ ವಿಡಿಯೋಗಳನ್ನೂ ನೋಡಿ ನಕ್ಕಿದ್ದೇವೆ. ಅದೇ ರೀತಿಯ ಪ್ರಸಂಗ ಅವತ್ತು ಕೂಡ ಆಯಿತು.  ಅರ್ಚನೆ, ಆರತಿ ಆದ ಮೇಲೆ, ಪೂಜಾರಿಯು ನಮಗೆ ಹೂವು, ಭಸ್ಮ ಹಾಗು ತೀರ್ಥ ಕೊಡಲು ಬಂದರು.  ಹೂವನ್ನು ಕೈಯಲ್ಲಿ ತೆಗೆದುಕೊಂಡು, ಭಸ್ಮವನ್ನು ಹಣೆಗೆ ಹಚ್ಚಿಕೊಂಡೆ. ನಂತರ ಪೂಜಾರಿಯು ತೀರ್ಥವನ್ನು ಕೊಟ್ಟರು. ವರಸೆಯಂತೆ ತೀರ್ಥವನ್ನು ಸೀದಾ ಬಾಯಿಗೆ ಹಾಕಿಕೊಂಡೆ,  ಆದರೆ ತೀರ್ಥ ಬಾಯಿ ಒಳಗಡೆ ಬರಲೇ ಇಲ್ಲಾ.  ಯಾಕೆ ಅಂತ ಒಂದು ಕ್ಷಣ ಅರ್ಥವಾಗಲೇ ಇಲ್ಲ. ಮಗಳು ಹಾಗು ಹೆಂಡತಿ ನನ್ನನ್ನು ನೋಡಿ ಜೋರಾಗಿ ನಗಾಡಲು ಶುರು ಮಾಡಿದರು.  ಕೂಡಲೇ ನನಗು ನನ್ನ ತಪ್ಪಿನ ಅರಿವಾಯಿತು. ಬಾಯಲ್ಲಿ ಹಾಕಿಕೊಂಡ ತೀರ್ಥ ಪೂರ್ತಿ ಮಾಸ್ಕಿಗೆ ಹೋಗಿತ್ತು.  

ಆಗ ನನಗೆ ಅನಿಸಿದ್ದು  “ದೇವರು ಕೊಟ್ಟರು, ಪೂಜಾರಿ ಕೊಡಲಿಲ್ಲ”  ಎಂಬ ಮಾತು ಅವತ್ತು  ” ಪೂಜಾರಿ ಕೊಟ್ಟರು,  ಮಾಸ್ಕ್  ಬಿಡಲಿಲ್ಲ” ಅಂತ. 

– ಶ್ರೀನಾಥ್ ಹರದೂರ ಚಿದಂಬರ 

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s