ಎಚ್ಚರವಾದರೂ ಹಾಸಿಗೆಯಿಂದ ಏಳದೆ, ಮಲಗಿದ್ದಲ್ಲೇ ಆಚೆ ಈಚೆ ಹೊರಳಾಡುತ್ತಾ ಹಿಂದಿನ ದಿವಸ ನೋಡಿದ ಸಿನೆಮಾದ ಹೀರೊ ನಾನಾಗಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು, ಯಾರಿಗೂ ಹೆದರದೆ, ಅಡ್ಡ ಬರುವ ವಿಲನ್ಗಳನ್ನು ಹೊಡೆದು, ಯಾವ ಪೋಲೀಸಿಗೂ ಅಂಜದೆ, ರಾಜಕಾರಣಿಗಳನ್ನು ಎದುರು ಹಾಕಿಕೊಂಡು, ಕೊನೆಯಲ್ಲಿ ಅವರನ್ನೆಲ್ಲ ಒದ್ದು ಬುದ್ದಿ ಕಲಿಸಿ, ತಾನು ಇಷ್ಟ ಪಟ್ಟ ಹುಡುಗಿಯೊಂದಿಗೆ ಮದುವೆ ಆಗುವ ಹಾಗೆ, ನಾನು ಇದ್ದರೆ ಎಷ್ಟು ಚೆಂದ ಅಲ್ವ ಅಂತ ಮನದಲ್ಲೇ ಮಂಡಿಗೆ ತಿನ್ನುತ್ತಾ ಮಲಗಿದ್ದ ಪ್ರವೀಣನಿಗೆ ಸಮಯ ಎಂಟು ದಾಟಿದ್ದು ಗೊತ್ತೇ ಆಗಿರಲಿಲ್ಲ. ಹೊರಗಡೆ ಅಮ್ಮ ” ಲೇ, ಪ್ರವೀಣ, ಕಾಲೇಜಿಗೆ ಹೋಗಲ್ವೇನೋ “ಅಂತ ಕೂಗಿದ್ದು , ಅವನ ಹಗಲುಗನಸನ್ನು ಹಾಳು ಮಾಡಿತ್ತು. ಇಷ್ಟವಿಲ್ಲದಿದ್ದರು ” ಛೆ, ಈ ಅಮ್ಮ ಒಬ್ಬಳು, ಮಲಗೋಕು ಬಿಡಲ್ಲ” ಎಂದು ಗೊಣಗುತ್ತ ಎದ್ದು ಕಾಲೇಜಿಗೆ ತಯಾರಾಗಲು ಶುರು ಮಾಡಿದ.
ಸಿನೆಮಾದ ಗುಂಗಿನಿಂದ ಇನ್ನು ಹೊರಬರದ ಪ್ರವೀಣ, ತಿಂಡಿ ತಿಂದು, ಸಿನೆಮಾದಲ್ಲಿ ಹೀರೊ ಕೇವಲ ಒಂದು ಬುಕ್ ನ್ನು ಕೈಯಲ್ಲಿ ತಿರುಗಿಸುತ್ತಾ ಕಾಲೇಜಿಗೆ ಹೊರಡುವಂತೆ ತಾನು ಕೂಡ ಬ್ಯಾಗ್ ತೆಗೆದುಕೊಳ್ಳದೆ, ಒಂದೇ ಬುಕ್ ಹಿಡಿದುಕೊಂಡು, ನಾನು ಹೀರೋನೇ ಅಂತ ಅಂದುಕೊಂಡು ಹಿಡಿದ ಬುಕ್ಕನ್ನು ತಿರುಗಿಸುತ್ತಾ ಕಾಲೇಜಿನ ಕಡೆಗೆ ಹೊರಟ. ಮನೆಯಿಂದ ಹೊರಬಿದ್ದ ಪ್ರವೀಣ ಮನೆಯ ಹತ್ತಿರವೇ ಇದ್ದ ಬಸ್ ನಿಲ್ದಾಣಕ್ಕೆ ಬಂದು ನಿಂತ. ಕಾಲೇಜಿಗೆ ಹೋಗಲು ಹುಡುಗಿಯರು ಹಾಗು ಹುಡುಗರು ಗುಂಪು ಗುಂಪಾಗಿ ನಿಂತು ಕಾಲೇಜಿಗೆ ಹೋಗುವ ಬಸ್ಸಿಗೆ ಕಾಯುತ್ತ, ತಮ್ಮ ತಮ್ಮಲ್ಲೆ ಮಾತನಾಡುತ್ತ ನಿಂತಿದ್ದರು. ಹುಡುಗರ ಗುಂಪಿನಲ್ಲಿದ್ದ ಕೆಲವು ಕಿಡಿಕೇಡಿಗಳು ಅಲ್ಲಿ ನಿಂತಿದ್ದ ಒಂದು ಹೆಣ್ಣು ಹುಡುಗಿಗೆ ತುಂಬ ಅಶ್ಲೀಲವಾಗಿ ಚುಡಾಯಿಸುತ್ತ, ಅವಳ ದೇಹದ ಅಂಗಾಂಗದ ಬಗ್ಗೆ ಕೆಟ್ಟದಾಗಿ ವರ್ಣನೆ ಮಾಡುತ್ತಾ, ಜೋರಾಗಿ ನಗುತ್ತಾ, ಮನ ಬಂದಂತೆ ವರ್ತಿಸುತ್ತಾ ನಿಂತಿದ್ದರು. ಅಲ್ಲಿ ನಿಂತಿದ್ದ ಯಾರೊಬ್ಬರು ಅವರಿಗೆ ಬುದ್ದಿ ಹೇಳುವುದಾಗಲಿ ಅಥವಾ ಜೋರು ಮಾಡುವುದಾಗಲಿ ಮಾಡಲಿಲ್ಲ. ನಮಗ್ಯಾಕೆ ಅವರ ಸಹವಾಸ ಅಂತ, ಏನು ಆಗೇ ಇಲ್ಲ ಅನ್ನುವ ಹಾಗೆ, ಗಮನಿಸಿದರೂ ಗಮನಿಸದ ಹಾಗೆ ನಿಂತಿದ್ದರು. ಆ ಹುಡುಗಿಯ ಕಣ್ಣಲ್ಲಿ ನೀರು ತುಂಬಿತ್ತು. ಅವಳ ಸ್ನೇಹಿತೆಯರು ಅವಳನ್ನು ಸಮಾಧಾನ ಮಾಡುತ್ತಿದ್ದರು.
ಪ್ರವೀಣನಿಗೆ ಹಿಂದಿನ ದಿನ ನೋಡಿದ ಸಿನೆಮಾದಲ್ಲಿ ಇದೆ ರೀತಿಯ ಪರಿಸ್ಥಿಯಲ್ಲಿ ಸಿನಿಮಾ ಹೀರೋ ಒಬ್ಬನೇ ಹೊಡೆದಾಡಿ ಕಿಡಿಕೇಡಿಗಳಿಗೆ ಬುದ್ಧಿ ಕಲಿಸಿದ್ದು ನೆನಪಾಯಿತು. ಆ ಸಿನಿಮಾ ನೋಡಿ ಬಂದು, ತಾನು ಕೂಡ ಅದರಲ್ಲಿದ್ದ ಸಿನಿಮಾ ಹೀರೋ ಅಂತ ಮನಸ್ಸಿನಲ್ಲಿ ಅಂದುಕೊಂಡಿದ್ದ ಪ್ರವೀಣನಿಗೆ ಅವರನ್ನು ಎದುರಿಸುವ ಧೈರ್ಯ ಬರಲಿಲ್ಲ. ಸಿನೆಮಾದಲ್ಲಿದ್ದ ಪರಿಸ್ಥಿತಿ ಇಂದು ನಿಜವಾಗಿ ಎದುರುಗಡೆ ಇದ್ದಾಗ ಅವನೊಳಗಿದ್ದ ಹೀರೋ ಮಾತ್ರ ಹೆದರಿ ಓಡಿ ಹೋಗಿದ್ದ.
ಸಿನಿಮಾ ಹೀರೋ ಸಿನಿಮಾಕ್ಕೆ ಮಾತ್ರ, ವಾಸ್ತವಕ್ಕೆ ಅಲ್ಲ… ಆದರೆ ಅನ್ಯಾಯದ ವಿರುದ್ಧ ನಿಲ್ಲಲು “ನಾನು ಹೀರೋನೇ” ಆಗಬೇಕಾ ಅಂತಾ ?
-ಶ್ರೀನಾಥ್ ಹರದೂರ ಚಿದಂಬರ