ಪುಟ್ಟನ ಪ್ರವಾಸ..

ಹತ್ತು ವರುಷದ ಪುಟ್ಟ  ಬಹಳ ಖುಷಿಯಲ್ಲಿ  ಶಾಲೆಯಿಂದ  ಮನೆಗೆ ಓಡಿಬಂದು, ಬಾಗಿಲ ಬಳಿ ಚಪ್ಪಲಿ ತೆಗೆಯುತ್ತಿರುವಾಗಲೇ ” ಅಮ್ಮ, ಮುಂದಿನ ತಿಂಗಳು ಶಾಲೆಯಿಂದ ಪ್ರವಾಸಕ್ಕೆ ಹೋಗುತ್ತಿದ್ದೇವೆ,  ನಾನು ಹೋಗಬೇಕು, ಕಳುಹಿಸುತ್ತೀಯಾ ಅಲ್ವಾ ಅಮ್ಮ ?” ಅಂತ ಕೂಗಲು ಶುರು ಮಾಡಿದ.  ಅದಕ್ಕೆ ಅಮ್ಮ ” ಮೊದಲು ಒಳಗಡೆ ಬಾ, ಕೈ ಕಾಲು ತೊಳೆದುಕೋ, ಆಮೇಲೆ ಎಲ್ಲಾ  ಹೇಳುವಂತೆ ಬಾ” ಅಂತ ಅಂದರು.  ಪುಟ್ಟ  ಬ್ಯಾಗನ್ನು  ಅಲ್ಲೇ ಮೇಜಿನ ಮೇಲೆ ಇಟ್ಟು ಬಚ್ಚಲ ಮನೆಗೆ ಕೈ ಕಾಲು ತೊಳೆಯಲು ಹೋದ. ಅಷ್ಟರಲ್ಲಿ ಅವನ ಅಮ್ಮ ಅವನಿಗೆ ಹಾಲು ಬಿಸಿ ಮಾಡಿಕೊಂಡು ಬಂದರು. ಪುಟ್ಟ  ಕೈ ಕಾಲು ತೊಳೆದುಕೊಂಡು, ನೀರನ್ನು ಒರೆಸಿಕೊಂಡು ಬಂದು, ಅಮ್ಮ ಕೊಟ್ಟ ಹಾಲನ್ನು ಕುಡಿಯುತ್ತ ” ಅಮ್ಮ,  ಮುಂದಿನ ತಿಂಗಳು ಶಾಲೆಯಿಂದ ಪ್ರವಾಸ ಹಮ್ಮಿಕೊಂಡಿದ್ದಾರಮ್ಮಾ ,  ಒಂದು ದಿನದ ಪ್ರವಾಸ ಅಂತೇ,  ಜೋಗ ಜಲಪಾತ ಅಂತೇ,  ಬೆಳೆಗ್ಗೆ ಹೊರಟು,  ಜೋಗ ಜಲಪಾತ ನೋಡಿಕೊಂಡು,  ಸಂಜೆ ವಾಪಸು ಮನೆಗೆ ಬರೋದು, ಅಷ್ಟೇ,  ಬರಿ ಐವತ್ತು ರೂಪಾಯಿ ಮಾತ್ರ, ನನ್ನ ಎಲ್ಲ ಸ್ನೇಹಿತರು ಹೋಗುತ್ತಾರಂತೆ, ನಾನು ಹೋಗಬೇಕು, ಇಲ್ಲ ಅಂತ ಹೇಳಬೇಡ ಅಮ್ಮ” ಅಂತ ಒಂದೇ ಸಮನೆ ಗೋಗರೆಯತೊಡಗಿದ.  ಅದಕ್ಕೆ ಅಮ್ಮ ” ಮೊದಲು ಹಾಲು ಕುಡಿ, ರಾತ್ರಿ ಅಪ್ಪ ಬಂದ ಮೇಲೆ, ಅವರಿಗೆ ಹೇಳೋಣ, ನಿಮ್ಮ ಅಪ್ಪ ಆಯಿತು ಹೋಗು ಅಂದರೆ ಹೋಗು, ದುಡ್ಡು  ಕೊಡುವುದು ಅಪ್ಪ, ನಾನಲ್ಲ, ಈಗ ಆಟ  ಆಡಿಕೋ ಹೋಗು” ಅಂತ ಅವನನ್ನು ಸುಮ್ಮನಾಗಿಸಿ ಆಟಕ್ಕೆ ಕಳುಹಿಸಿದಳು.  ಪುಟ್ಟ  ಹೋದಮೇಲೆ ಅಮ್ಮ ” ಇವನಿಗೆ ಮನೆ ಪರಿಸ್ಥಿತಿ ಹೇಗೆ ಹೇಳೋದು,  ಇವನ ಅಪ್ಪನ ಅಂಗಡಿಯ ವ್ಯಾಪಾರ ತುಂಬಾ ಕಮ್ಮಿ ಆಗಿ , ಪ್ರತಿ ತಿಂಗಳು ಅಂಗಡಿ ಬಾಡಿಗೆ ಕಟ್ಟಲು ದುಡ್ಡನ್ನು  ಹೊಂದಿಸಲಿಕ್ಕೆ ಆಗುತ್ತಿಲ್ಲ,  ಮನೆಯಲ್ಲಿರುವ ಅಡಿಗೆ ಸಾಮಾನು ಸಹಿತ ಮುಗಿದು ಹೋಗಿದೆ,   ಇಂತಹ ಸಮಯದಲ್ಲಿ ಐವತ್ತು ರೂಪಾಯಿ ಹೇಗೆ ಹೊಂದಿಸಿವುದು ಇವನ ಪ್ರವಾಸಕ್ಕೆ ” ಅಂತ  ಯೋಚನೆ ಮಾಡುತ್ತಾ ಕುಳಿತಳು. 

ಪುಟ್ಟ ಆಟವಾಡಿ ಮನೆಗೆ ಬಂದು ಓದಿಕೊಳ್ಳಲು ಕುಳಿತ. ಕೈಯಲ್ಲಿ ಪುಸ್ತಕ ಇದ್ದರು ಪುಟ್ಟನ ಮನಸ್ಸು ಮಾತ್ರ ಅಪ್ಪನ ಬರುವಿಕೆಯನ್ನೇ ನೋಡುತ್ತಿತ್ತು. ರಾತ್ರಿ ಊಟದ ಸಮಯಕ್ಕೆ ಪುಟ್ಟನ ಅಪ್ಪ ಮನೆಗೆ ಬಂದರು.  ಅಪ್ಪ ಕೈ ಕಾಲು ತೊಳೆದುಕೊಂಡು ಊಟಕ್ಕೆ ಬಂದು ಕೂರುವವರೆಗೂ ಸುಮ್ಮನಿದ್ದ ಪುಟ್ಟ ನಿಧಾನವಾಗಿ ” ಅಪ್ಪ,  ನನ್ನ ಶಾಲೆಯಿಂದ ಎಲ್ಲರು  ಪ್ರವಾಸಕ್ಕೆ ಹೋಗುತ್ತಿದ್ದಾರೆ,  ಒಂದು ದಿವಸದ ಪ್ರವಾಸ, ಬರಿ ಐವತ್ತು ರೂಪಾಯಿ ಅಷ್ಟೇ ಅಪ್ಪ,  ನಾನು ಹೋಗಬೇಕು, ಹೋಗಲಾ ?  ಈ ತಿಂಗಳ ಕೊನೆಯಲ್ಲಿ ದುಡ್ಡು ಕೊಟ್ಟು ಹೆಸರು ಬರೆಸಿದರೆ ಸಾಕಂತೆ,  ನನ್ನನ್ನು ಕಳಿಸಪ್ಪ ”  ಅಂತ  ರಾಗ ಎಳೆಯಲು ಶುರು ಮಾಡಿದ. ಪುಟ್ಟ ಅಪ್ಪ ” ತಿಂಗಳ ಕೊನೆ ತಾನೇ ನೋಡೋಣ ಬಿಡು” ಅಂತ ಹೇಳಿ ಊಟ ಮಾಡತೊಡಗಿದರು.  ಪುಟ್ಟನಿಗೆ ಅಪ್ಪ ” ನೋಡೋಣ, ಬಿಡು” ಅಂತ  ಅಂದಿದ್ದು ಕೇಳಿ  ಸಮಾಧಾನ ಆಗಲಿಲ್ಲ. ಅವನು ಅಮ್ಮನ ಕಡೆ ನೋಡಿದ. ಅಮ್ಮ ಕೂಡ ಏನನ್ನು ಹೇಳದೆ ಇದ್ದುದ್ದನ್ನು ನೋಡಿ ತಾನು ಸುಮ್ಮನೆ ಊಟ ಮಾಡಿ ಮುಗಿಸಿದ. 

ಮಾರನೆಯ ಬೆಳಗ್ಗೆ ಎದ್ದು ಶಾಲೆಗೇ ತಯಾರಾಗಿ ಅಮ್ಮನಿಗೆ” ಅಮ್ಮ, ನನ್ನನ್ನು ಪ್ರವಾಸಕ್ಕೆ ಕಳುಹಿಸುತ್ತೀಯಲ್ಲ ? “ಅಂತ ಕೇಳಿದ.  ಅಮ್ಮ ” ಅಪ್ಪನಿಗೆ ಹೇಳಿದ್ದೀಯಲ್ಲ, ನೋಡೋಣ ಬಿಡು” ಅಂತ ಹೇಳಿದರು.  ಪುಟ್ಟ  ಮುಖ ಸಪ್ಪೆ ಮಾಡಿಕೊಂಡು ಶಾಲೆಗೆ  ಹೋದ. ಮತ್ತೆ ಅವತ್ತು ರಾತ್ರಿ ಅಪ್ಪನಿಗೆ ಪ್ರವಾಸದ ಬಗ್ಗೆ ಕೇಳಿದ. ಅಪ್ಪ ಮಾತ್ರ ” ನೋಡೋಣ ಬಿಡು” ಅಂತ ಹೇಳಿ ಸುಮ್ಮನಾದರು. ಶಾಲೆಯಲ್ಲಿ ಪುಟ್ಟನ ಸ್ನೇಹಿತರು ಒಬ್ಬೊಬ್ಬರಾಗಿ ದುಡ್ಡು ಕಟ್ಟಿ ಪ್ರವಾಸಕ್ಕೆ ತಮ್ಮ ತಮ್ಮ ಹೆಸರು ಬರೆಸತೊಡಗಿದರು. ಪುಟ್ಟನ ಸ್ನೇಹಿತರು ಪುಟ್ಟನಿಗೆ ನೀನು ಹೆಸರು ಬರೆಸು ಅಂತ ಒತ್ತಾಯ ಮಾಡತೊಡಗಿದರು.  ಆದರೆ ಪುಟ್ಟನಿಗೆ ಮನೆಯಲ್ಲಿ ಒಪ್ಪಿಗೆ ಕೊಡದಿದ್ದರಿಂದ,  ಹೆಸರು ಬರೆಸಲು ಆಗುತ್ತಿಲ್ಲವಲ್ಲ ಎಂದು  ದುಃಖ ಒತ್ತರಿಸಿ ಬರುತ್ತಿತ್ತು. 

ಅಂದು ಶಾಲೆ ಮುಗಿಸಿ ಮನೆಗೆ ಅಳುತ್ತಲೇ ಒಳಗಡೆ ಹೋದ. ಅಮ್ಮ ಅವನು ಅಳುವುದನ್ನು ಕಂಡು ” ಏನಾಯ್ತು ಪುಟ್ಟ” ಅಂತ ಕೇಳಿದರು.  ಅಷ್ಟು ಕೇಳಿದ್ದೆ ತಡ ಪುಟ್ಟ ,  ಜೋರಾಗಿ ಅಳುತ್ತಾ  ”  ನನ್ನ ಎಲ್ಲ ಸ್ನೇಹಿತರು ಶಾಲೆಯಲ್ಲಿ ಪ್ರವಾಸಕ್ಕೆ ತಮ್ಮ ಹೆಸರು ಬರೆಸಿ ಆಯ್ತು, ನನ್ನ ಒಬ್ಬನನ್ನು ಬಿಟ್ಟು, ನಾನು ಮಾತ್ರ ಬರೆಸಿಲ್ಲ,  ನಾನು ಹೋಗಬೇಕು, ನನ್ನನ್ನು ಕಳಿಸಿ ” ಅಂತ ಬಿದ್ದು ಹೊರಳಾಡತೊಡಗಿದನು.  ಅಮ್ಮನಿಗೆ  ತಮ್ಮ ಅಸಹಾಯಕತೆ ಬಗ್ಗೆ,  ಮಗ ಅಳುವದರ ಬಗ್ಗೆ ನೆನಸಿಕೊಂಡು ಜೋರಾಗಿ ಕಣ್ಣಲ್ಲಿ ನೀರು ಜಿನುಗತೊಡಗಿತು. ಅಮ್ಮ ಪುಟ್ಟನನ್ನು ಮುದ್ದು ಮಾಡಿ ” ಅಪ್ಪನಿಗೆ ಇವತ್ತು ಹೇಳಿ, ದುಡ್ಡು ಕೊಡಲು ಹೇಳುತ್ತೇನೆ, ಬಾ, ಈಗ ಅಳಬೇಡ” ಅಂತ ಸಮಾಧಾನ ಮಾಡಿದಳು. ಅಮ್ಮ ಹಾಗೆ ಹೇಳಿದ್ದನ್ನು  ಕೇಳಿ ಪುಟ್ಟನಿಗೆ ಸ್ವಲ್ಪ ಸಮಾಧಾನ ಆಯಿತು. 

ರಾತ್ರಿ ಊಟಕ್ಕೆ ಕುಳಿತಾಗ ಪುಟ್ಟ  ಅಮ್ಮನ ಮುಖವನ್ನೇ ನೋಡುತ್ತಾ ಊಟ ಮಾಡುತ್ತಿದ್ದ. ಅದನ್ನು ಗಮನಿಸಿ ಅವನ ಅಮ್ಮ ” ರೀ,  ಪುಟ್ಟನ ಪ್ರವಾಸಕ್ಕೆ  ದುಡ್ಡು ಕಟ್ಟಲು ಇನ್ನು ಕೇವಲ ಐದು ದಿನ ಬಾಕಿ ಇದೆ,  ಪಾಪ ತುಂಬ ಆಸೆ ಪಡುತ್ತಾ ಇದ್ದಾನೆ,  ನೋಡಿ ಏನಾದರೂ ಮಾಡಿ ದುಡ್ಡು ಹೊಂದಿಸಲು ಆಗುತ್ತಾ?” ಅಂತ ಕೇಳಿದಳು.  ಅಪ್ಪ  ಅವಳ ಮುಖ ನೋಡಿದ. ಆ ನೋಟದಲ್ಲಿ ”  ನಿನಗೆ ಪರಿಸ್ಥಿತಿ ಗೊತ್ತಿದ್ದೂ ಕೇಳುತ್ತಿದ್ದೀಯಲ್ವಾ ?” ಅನ್ನುವ ಭಾವ ಎದ್ದು ಕಾಣುತ್ತಿತ್ತು.  ಅಪ್ಪ” ಪುಟ್ಟ, ನನ್ನ ಸ್ನೇಹಿತರು ಒಬ್ಬರು ನನಗೆ ಇವತ್ತು ರೂಪಾಯಿ ಕೊಡಬೇಕು,  ಅದೇ ಸೇಠು ಅಂಗಡಿ ಇದೆಯಲ್ಲ ಅವರೇ,  ನಾಳೆ ಶಾಲೆಯಿಂದ ಬರುವಾಗ ಅವರ ಹತ್ತಿರ  ನಾನು ಹೇಳಿದೆ ಅಂತ  ದುಡ್ಡು ಕೇಳಿ ಇಸಿದುಕೊಂಡು ಬಾ, ಅದೇ ದುಡ್ಡು ನಿನ್ನ ಪ್ರವಾಸಕ್ಕೆ ಕೊಡಬಹುದು ” ಅಂತ ಹೇಳಿದ್ದು ಕೇಳಿ ಪುಟ್ಟನ ಮುಖ ಅರಳಿ ಖುಷಿಯಿಂದ ಊಟ ಮಾಡಿ ಅವತ್ತು ನೆಮ್ಮದಿಯಾಗಿ ಮಲಗಿದ. 

ಮರುದಿನ ಸಂಜೆ ಶಾಲೆ ಬಿಡುವುದನ್ನೇ ಕಾಯುತ್ತಿದ್ದ ಪುಟ್ಟ, ಶಾಲೆ ಬಿಟ್ಟ ಕೂಡಲೇ ಆ ಸೇಠುವಿನ ಅಂಗಡಿಗೆ ಹೋಗಿ ಅವರ ಮುಂದೆ ನಿಂತ.  ಸೇಠು ಪುಟ್ಟನನ್ನು ನೋಡಿ ” ಏನು ಬೇಕು,  ಯಾಕೆ ಬಂದಿದ್ದು ”  ಅಂತ ಕೇಳಿದ.  ಪುಟ್ಟ ” ಅಪ್ಪ ಹೇಳಿದರು, ನಿಮ್ಮ ಹತ್ತಿರ ಐವತ್ತು ರೂಪಾಯಿ ಇಸಿದುಕೊಂಡು ಬಾ ಅಂತ ಹೇಳಿದ್ದಾರೆ” ಎಂದು ಹೇಳಿದ.  ಅದಕ್ಕೆ ಸೇಠು  ”  ಒಹೋ,  ಅದಾ , ಒಂದು ಕೆಲಸ ಮಾಡು, ನಾಳೆ ಮದ್ಯಾಹ್ನ ಬಾ, ಕೊಡುತ್ತೇನೆ” ಎಂದ.  ಪುಟ್ಟ ” ಸರಿ ನಾಳೆ  ಮದ್ಯಾಹ್ನ ಬರುತ್ತೇನೆ” ಅಂದು ಹೇಳಿ ಅಲ್ಲಿಂದ ಹೊರಟ. ಪುಟ್ಟನಿಗೆ ಇನ್ನು  ನಾಲಕ್ಕು ದಿನ ಇದೆಯಲ್ಲ, ಸಿಕ್ಕ ಕೂಡಲೇ ಪ್ರವಾಸಕ್ಕೆ ಹೆಸರು ಬರೆಸಿದರಾಯಿತು ಅಂತ ಅಂದುಕೊಂಡು ಮನೆಗೆ ಬಂದ. 

ಆದರೆ  ಪುಟ್ಟ ಹೋದಾಗೆಲ್ಲ ಸೇಠು  ” ಸಂಜೆ ಬಾ,  ನಾಳೆ ಬೆಳಿಗ್ಗೆ ಬಾ,  ಮದ್ಯಾಹ್ನ ಬಾ” ಅಂತ ಹೇಳಿ ಪುಟ್ಟನನ್ನು ವಾಪಸು ಕಳುಹಿಸುತ್ತಿದ್ದ.  ಮನೆಯಲ್ಲಿ ಸೇಠುವಿನ ಬಗ್ಗೆ ಅಪ್ಪನಿಗೆ ಹೇಳಿದರೆ ” ಕೊಡುತ್ತಾರೆ, ಅವರು ಹೇಳಿದ ಸಮಯಕ್ಕೆ  ಹೋಗು ಅಷ್ಟೇ,” ಅಂತ ಹೇಳುತ್ತಿದ್ದರು.  ಪುಟ್ಟ ಕೂಡ ಬಿಟ್ಟು ಬಿಡದೆ ಸೇಠು  ಹೇಳಿದ ಸಮಯಕ್ಕೆ ಅವನ ಮುಂದೆ ಹಾಜರಾಗುತ್ತಿದ್ದ.  ನಾಲಕ್ಕು ದಿನಗಳು ಕಳೆದರು ಸೇಠು ದುಡ್ಡು ಕೊಟ್ಟಿರಲಿಲ್ಲ. ಅವತ್ತು ಪ್ರವಾಸಕ್ಕೆ ಹೆಸರು ಬರೆಸಲು ಕೊನೆಯ ದಿವಸವಾಗಿತ್ತು. ಬೆಳೆಗ್ಗೆನೇ ಪುಟ್ಟ ಸೇಠುವಿನ ಅಂಗಡಿಯಾ ಹತ್ತಿರ ಹೋಗಿ ಕುಳಿತುಬಿಟ್ಟದ್ದ.  ಸೇಠು ಇನ್ನು ಅಂಗಡಿ ಬಾಗಿಲು ಸಹಿತ ತೆಗೆದಿರಲಿಲ್ಲ.  ಸೇಠು ಅಂಗಡಿ ಬಾಗಿಲು ತೆಗೆಯಲು ಬಂದು ಪುಟ್ಟನನ್ನು ನೋಡಿ ” ಏನೋ, ಬೆಳೆಗ್ಗೆನೆ ಬಂದು ಬಿಟ್ಟಿದ್ದೀಯಾ, ಇನ್ನು ಬೋಣಿ ಕೂಡ ಆಗಿಲ್ಲ,  ಮದ್ಯಾಹ್ನ ಬಾ” ಅಂತ ಎಂದಿನಂತೆ ಹೇಳಿದ. ಅದಕ್ಕೆ ಪುಟ್ಟ ” ಅವೆಲ್ಲ ಗೊತ್ತಿಲ್ಲ, ನನಗೆ ದುಡ್ಡು ಬೇಕೇ ಬೇಕು, ಇವತ್ತು ದುಡ್ಡು ಕೊಡಲಿಲ್ಲ ಅಂದರೆ ನಾನು ಪ್ರವಾಸಕ್ಕೆ ಹೋಗಲು ಆಗುವುದಿಲ್ಲ, ನನಗೆ ದುಡ್ಡು ಬೇಕೇ ಬೇಕು”  ಅಂತ ಹಠ ಹಿಡಿದ. ಅದಕ್ಕೆ ಸೇಠು  ಮದ್ಯಾಹ್ನ ಊಟಕ್ಕೆ ಶಾಲೆ  ಬಿಟ್ಟಾಗ ಬಾ, ಖಂಡಿತ ದುಡ್ಡು ಕೊಡುತ್ತೇನೆ” ಅಂತ ಹೇಳಿದ. ಪುಟ್ಟ ” ಖಂಡಿತ ಕೊಡಬೇಕು, ತಪ್ಪಿಸುವಂತಿಲ್ಲ ಆಯ್ತಾ ” ಅಂತ ಹೇಳಿದ ಶಾಲೆಗೆ ಹೊರಟ. 

ಮದ್ಯಾಹ್ನ ಶಾಲೆಯಲ್ಲಿ ಊಟಕ್ಕೆ ಬಿಟ್ಟಾಗ, ಊಟ ಕೂಡ ಮಾಡದೆ ಸೇಠು ಅಂಗಡಿಗೆ ಹೊರಟ.  ದುಡ್ಡು ಕೊಡದಿದ್ದರೆ ಏನು ಮಾಡುವುದು ಅಂತ ಆತಂಕದಿಂದಲೇ ಸೇಠುವಿನ ಅಂಗಡಿಗೆ ಓಡಿ  ಬಂದ.  ಅಲ್ಲಿ ಬಂದು ನೋಡಿದರೆ ಸೇಠು ಅಂಗಡಿ ಬಾಗಲು ಹಾಕಿತ್ತು. ಪುಟ್ಟ ಅಲ್ಲೇ  ಪಕ್ಕದ ಅಂಗಡಿಯವನಿಗೆ ” ಇವರು ಎಲ್ಲಿ ಹೋಗಿದ್ದಾರೆ” ಅಂತ ಕೇಳಿದ.  ಅದಕ್ಕೆ  ಅವನು ”  ಸೇಠು ಹಾಗು ಅವರ ಸಂಸಾರ ಸಮೇತ ಪಂಡರಿಪುರಕ್ಕೆ ಪ್ರವಾಸ ಹೋಗಿದ್ದಾರೆ, ಬರಲು ಇನ್ನು ಒಂದು ವಾರ ಆಗುತ್ತದೆ” ಅಂತ ಹೇಳಿದ. ಪುಟ್ಟನಿಗೆ ಅಷ್ಟು  ಹೊತ್ತು ತಡೆದಿಟ್ಟಿದ್ದ ದುಃಖ ಒಮ್ಮೆಲೇ ಉಕ್ಕಿ ಬಂದು ಕಣ್ಣಲ್ಲಿ ನೀರು ತುಂಬಿಬಂತು.   ಅವನಿಗಿದ್ದಿದ್ದ ಕೊನೆಯ ಆಸೆ ಕೂಡ ಕಮರಿ ಹೋಗಿತ್ತು. ಅಳು ತಡೆಯಬೇಕೆಂದರು ದುಃಖ ಉಕ್ಕಿ ಉಕ್ಕಿ ಬರುತ್ತಿತ್ತು. ಅಳುತ್ತಲೇ ಹತಾಶೆಯಿಂದ ಶಾಲೆಯ ಕಡೆ ಹೆಜ್ಜೆ ಹಾಕತೊಡಗಿದ.

ಪುಟ್ಟನ  ಪುಟ್ಟ ಮನಸ್ಸಿನಲ್ಲಿದ್ದ ಪ್ರವಾಸದ ದೊಡ್ಡ ಕನಸು ನುಚ್ಚು  ನೂರಾಗಿತ್ತು.

ಅವನ ಅಪ್ಪ ತನ್ನ ಮಗನಿಗೆ ದುಡ್ಡು ಹೊಂದಿಸಲಾಗದೆ, ಪ್ರವಾಸಕ್ಕೆ ಕಳುಹಿಸಲು  ಆಗಲ್ಲ ಅಂತ ಹೇಳಿದರೆ ತಮ್ಮ  ಮೇಲೆ ಬೇಜಾರು ಮಾಡಿಕೊಳ್ಳುತ್ತಾನೆ ಅಂತ  ಅವನ ಸ್ನೇಹಿತ ತನಗೆ  ದುಡ್ಡು ಕೊಡಬೇಕು ಅವನ ಹತ್ತಿರ ತೆಗೆದುಕೋ ಎಂದು ಸುಳ್ಳು ಹೇಳಿದ್ದು, ಅಪ್ಪನ ಸ್ನೇಹಿತ ಸುಳ್ಳು ಹೇಳುತ್ತಿದ್ದುದು  ಎಂದು  ಗೊತ್ತಾಗುವ ವಯಸ್ಸು  ಪುಟ್ಟನಿಗೆ ಆಗಿರಲಿಲ್ಲ.

– ಶ್ರೀನಾಥ್ ಹರದೂರ ಚಿದಂಬರ 

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s