
ಸುಮಿತ್ ಮೊದಲ ವರುಷದ ಮದುವೆ ವಾರ್ಷಿಕೋತ್ಸವ ಆಚರಿಸಲು ಮಡಿಕೇರಿಯ ಒಂದು ಒಳ್ಳೆಯ ರೆಸಾರ್ಟ್ ಅನ್ನು ಬುಕ್ ಮಾಡಿದ್ದ. ಆಫೀಸಿಗೆ ರಜಾ ಹಾಕಿ ತನ್ನ ಕಾರಿನಲ್ಲಿ ಹೆಂಡತಿ ಕೃಪಾಳನ್ನು ರೆಸಾರ್ಟ್ ಗೆ ಕರೆದುಕೊಂಡು ಹೋಗುವುದರ ಬಗ್ಗೆ ಒಂದು ಚೂರು ಸುಳಿವು ಬಿಟ್ಟುಕೊಟ್ಟಿರಲಿಲ್ಲ. ಯಾಕೆಂದರೆ ಕೃಪಾಳಿಗೆ ಮಡಿಕೇರಿ ಹೋಗಬೇಕೆಂಬುದು ಬಹಳ ದಿನಗಳ ಕನಸಾಗಿತ್ತು. ಕೃಪಾಳಿಗೆ ” ಒಂದು ವಾರಕ್ಕೆಒಳ್ಳೆಯ ಬಟ್ಟೆ ಗಳನ್ನು ತೆಗೆದುಕೊಂಡು ತಯಾರಾಗಿರು, ಎಲ್ಲಿಗೋ ಹೋಗಬೇಕು, ನಾನು ಆಫೀಸಿನಿಂದ ಬಂದ ಕೂಡಲೇ ಹೊರಟುಬಿಡೋಣ” ಅಂತ ಹೇಳಿದ್ದ. ಸಂಜೆಯ ವೇಳೆಗೆ ಸುಮಿತ್ ಹೇಳಿದಂತೆ ಕೃಪಾ ಕೂಡ ಎಲ್ಲವನ್ನು ಜೋಡಿಸಿ ಇಟ್ಟುಕೊಂಡು, ಬ್ಯಾಗ್ ಸಮೇತ ತಯಾರು ಆಗಿ, ಕುತೂಹಲದಿಂದ ಅವನಿಗಾಗಿ ಕಾಯುತ್ತಿದ್ದಳು. ಸುಮಿತ್ ಆಫೀಸಿನಿಂದ ಬಂದು ಸ್ನಾನ ಮಾಡಿ, ಕೃಪಾಳ ಜೊತೆಗೆ ಟೀ ಕುಡಿದು ಅವರ ಕಾರಿನಲ್ಲಿ ಹೊರಟರು. ಕೃಪಾ ಹೊರಟಾಗಿನಿಂದ ಸುಮಿತ್ಗೆ ” ಎಲ್ಲಿಗೆ ಹೋಗುತ್ತಿದ್ದೇವೆ” ಅಂತ ಕೇಳುತ್ತಲೆ ಇದ್ದಳು. ಆದರೆ ಸುಮಿತ್ ” ನಾಳೆ ಬೆಳೆಗ್ಗಿನ ವರೆಗೂ ಎಲ್ಲಿಗೆ ಅಂತ ಕೇಳಬೇಡ, ಹೋದಮೇಲೆ ನಿನಗೆ ಗೊತ್ತಾಗುತ್ತೆ” ಅಂತ ಹೇಳಿದ ಮೇಲೆ ಕೃಪಾ ಹೇಗಿದ್ದರೂ ಅರ್ಧ ದಾರಿ ಹೋದ ಮೇಲೆ ಗೊತ್ತಾಗೇ ಗೊತ್ತಾಗುತ್ತೆ ಅಂತ ಅಂದುಕೊಂಡು ಸುಮ್ಮನಾದಳು. ರಾತ್ರಿ ಒಂಬತ್ತು ಆಗುತ್ತಾ ಬಂದಿತ್ತು, ಹೊಟ್ಟೆ ಹಸಿವು ಆಗತೊಡಗಿದ್ದರಿಂದ ದಾರಿಯಲ್ಲಿ ಸಿಕ್ಕ ಒಂದು ಹೋಟೆಲ್ಗೆ ಹೋಗಿ ಊಟ ಮಾಡಿದರು. ಸುಮಿತ್ ರಾತ್ರಿ ಕಾರನ್ನು ಓಡಿಸಬೇಕು ಅಂತ ಜಾಸ್ತಿ ಏನನ್ನು ತಿನ್ನಲಿಲ್ಲ. ಹೋಟೆಲ್ ಎದುರೇ ಹದಿನೈದು ನಿಮಿಷ ಓಡಾಡಿ ಮತ್ತೆ ಪ್ರಯಾಣ ಶುರು ಮಾಡಿದರು.
ಕಾರು ಹಾಸನ ದಾಟಿ ಬೇಲೂರು ಮಾರ್ಗವಾಗಿ ಹೋಗುತ್ತಿತ್ತು. ಕೃಪಾ ಚೆನ್ನಾಗಿ ಊಟ ಮಾಡಿ, ಐಸ್ ಕ್ರೀಮ್ ತಿಂದಿದ್ದರಿಂದ ನಿದ್ದೆ ಬರಲು ಶುರುವಾಗಿ ಹಾಗೆ ಮಾತನಾಡುತ್ತ ಮಲಗಿಬಿಟ್ಟಳು. ಸುಮಿತ್ಗೆ ಕೂಡ ಅದೇ ಬೇಕಾಗಿತ್ತು. ಬೆಳಿಗ್ಗೆ ಅವಳು ಏಳುವಷ್ಟರಲ್ಲಿ ಮಡಿಕೇರಿ ರೀಚ್ ಆಗಬಹುದು , ಅವಳಿಗೆ ತುಂಬ ಆಶ್ಚರ್ಯ ಕೂಡ ಆಗುತ್ತೆ ಹಾಗು ಸಂತೋಷ ಕೂಡ ಆಗುತ್ತೆ ಅಂದುಕೊಂಡ. ಕಾಡಿನ ರಸ್ತೆಯಲ್ಲಿ ಕಾರು ಸಾಗುತ್ತಿತ್ತು, ಎದುರಿನಿಂದ ಕೂಡ ಯಾವುದೇ ವಾಹನ ಬರುತ್ತಿರಲಿಲ್ಲ. ರಸ್ತೆಯ ಮೇಲೆ ಕಾರಿನ ಬೆಳಕು ಬಿಟ್ಟರೆ ಸಂಪೂರ್ಣ ಕತ್ತಲೆ ಬೇರೆ ಆವರಿಸಿತ್ತು. ಸಮಯ ಆಗಲೇ ಹನ್ನರೆಡರ ಸಮೀಪ ಬಂದಿತ್ತು. ಸುಮಿತ್ಗೆ ನಿದ್ದೆಗೆ ಕಣ್ಣುಗಳು ಎಳೆಯಲು ಶುರು ಮಾಡಿತು. ಕಾರನ್ನು ಚಲಾಯಿಸಲು ಸ್ವಲ್ಪ ಕಷ್ಟ ಅನಿಸತೊಡಗಿತು. ಎಲ್ಲಾದರೂ ನಿಲ್ಲಿಸಿ ಮುಖ ತೊಳೆದುಕೊಳ್ಳೋಣ ಅಂದರೆ ಸುತ್ತಮುತ್ತ ದಟ್ಟವಾದ ಕಾಡು, ಇಳಿಯಲು ಹೆದರಿಕೆ ಆಗಿ ಹಾಗೆ ನಿಧಾನವಾಗಿ ಚಲಾಯಿಸತೊಡಗಿದ. ನಿದ್ದೆ ಜೋರಾಗಿ, ಕಣ್ಣುಗಳು ಮುಚ್ಚಿಕೊಳ್ಳತೊಡಗಿತು, ಕಾರು ನಿಧಾವಾಗಿ ಹಾವಿನಂತೆ ಚಲಿಸಲು ಶುರು ಮಾಡಿತ್ತು. ಅಷ್ಟರಲ್ಲಿ ದೂರದಲ್ಲಿ ಯಾವುದೊ ಬೀದಿ ದೀಪದಂತೆ ಕಾಣಿಸತೊಡಗಿದ್ದರಿಂದ, ಸುಮಿತ್ಗೆ ಮುಂದೆ ಯಾವುದೋ ಊರು ಇರಬೇಕು, ಆ ಊರು ತಲುಪಿ, ಅಲ್ಲೇ ಎಲ್ಲಾದರೂ ನಿಲ್ಲಿಸಿ ಸ್ವಲ್ಪ ಹೊತ್ತು ಮಲಗಿದರಾಯಿತು ಅಂತ ಅಂದುಕೊಂಡು ಬೆಳಕು ಸಿಗುವವರೆಗೂ ಕಾರನ್ನು ಚಲಾಯಿಸಿದ. ನೋಡಿದ ದೀಪದ ಹತ್ತಿರ ಬಂದಾಗ ಅದು ಮುಖ್ಯ ರಸ್ತೆಯಿಂದ ಸ್ವಲ್ಪ ಒಳಗಡೆ ಕಾಣಿಸುತ್ತಿತ್ತು. ನೋಡೇಬಿಡೋಣ ಅಂತ ಅಡ್ಡ ರಸ್ತೆಗೆ ತಿರುಗಿಸಿದ. ಅಡ್ಡ ರಸ್ತೆಯಲ್ಲಿ ಸ್ವಲ್ಪ ದೂರ ಸಾಗಿ ನೋಡಿದರೆ ಅದು ಒಂದು ಪೆಟ್ರೋಲ್ ಬಂಕ್ ಆಗಿತ್ತು. ಒಳಗಡೆ ಆಫೀಸ್ ರೂಮಿನ ದೀಪ ಮಾತ್ರ ಉರಿಯುತ್ತಿತ್ತು. ಅದೇ ದೀಪ ಸುಮಿತ್ ಗೆ ಕಾಣಿಸಿದ್ದು. ಕಾರನ್ನು ಬಂಕಿನ ಒಳಗಡೆ ತಿರುಗಿಸಿ ಆಫೀಸಿನ ಹತ್ತಿರ ನಿಲ್ಲಿಸಿ, ಕಾರಿನ ಎಂಜಿನ್ ಆಫ್ ಮಾಡದೆ, ಕಾರಿನಿಂದ ಇಳಿದು ಆಫೀಸಿನ ಹತ್ತಿರ ಹೋದ. ಒಳಗಡೆ ಒಬ್ಬ ಮುದುಕ ಚೇರಿನ ಮೇಲೆ ಕುಳಿತು, ಮೇಜಿನ ಮೇಲೆ ತಲೆ ಇಟ್ಟು ಮಲಗಿದ್ದ. ಸುಮಿತ್ ” ಸರ್, ಸರ್” ಎಂದು ಕರೆದ ಮೇಲೆ, ಆ ಮುದುಕ ತಲೆ ಎತ್ತಿ ” ಕ್ಲೋಸ್ ಆಗಿದೇರಿ ” ಅಂತ ಕೇಳಿದ. ಸುಮಿತ್ ” ಪೆಟ್ರೋಲ್ ಏನು ಬೇಡ ಮಡಿಕೇರಿಗೆ ಹೋಗಬೇಕಿತ್ತು, ಕಣ್ಣು ಎಳೆಯುತ್ತಿದೆ, ಸ್ವಲ್ಪ ಹೊತ್ತು ನಿಮ್ಮ ಬಂಕಿನಲ್ಲಿ ಕಾರನ್ನು ನಿಲ್ಲಸಿ, ನಿದ್ದೆ ಮಾಡಬಹುದಾ? ಬೇಕಾದರೆ ದುಡ್ಡು ಕೊಡುತ್ತೇನೆ” ಅಂತ ಹೇಳಿದ. ಅದಕ್ಕೆ ಮುದುಕ ” ದುಡ್ಡೇನು ಬೇಡ, ಆದರೆ ಏನೇ ಅನಾಹುತ ಆದರೂ ನೀವೇ ಜವಾಬ್ದಾರಿ ಅಷ್ಟೇ” ಅಂತ ಹೇಳಿ ಮೇಜಿನ ಮೇಲೆ ತಲೆ ಇಟ್ಟು ಮತ್ತೆ ಮಲಗಿದ. ಸುಮಿತ್ ಕಾರಿಗೆ ವಾಪಸು ಬಂದು ಸೀಟನ್ನು ಹಿಂದೆ ಆನಿಸಿ, ಆನ್ ಮಾಡಿದ ಎಸಿ ಹಾಗೆ ಇರಲಿ ಅಂತ ಕಾರ್ ಎಂಜಿನ್ ಆಫ್ ಮಾಡದೆ ಹಾಗೆ ಅಲ್ಲಿಯೇ ಮಲಗಿದ. ಕೃಪಾ ಇದೇನು ಗೊತ್ತಿಲ್ಲದೇ ಗಾಢ ನಿದ್ರೆಯಲ್ಲಿದ್ದಳು. ಸುಮಿತ್ ಮಲಗಿದ ಕೂಡಲೇ ಅವನಿಗೆ ನಿದ್ದೆ ಹತ್ತಿತು.
ಸುಮಾರು ಹೊತ್ತು ಕಳೆದ ಮೇಲೆ ಯಾರೋ ಕರೆದ ಹಾಗೆ ಅನಿಸಿ ಕಣ್ಣು ಬಿಟ್ಟು ನೋಡಿದ. ಯಾವುದೋ ಹೆಂಗಸು ಕಾರಿನ ಕಿಟಕಿ ಗ್ಲಾಸ್ಸನ್ನು ಕೈಯಾ ಬೆರಳಿನಿಂದ ಕುಟ್ಟಿ ” ಸರ್, ಸರ್” ಎಂದು ಕರೆಯುತ್ತಿದ್ದಳು. ಆ ಹೆಂಗಸು ಏನನ್ನೋ ಹೇಳುತ್ತಾ ಆಫೀಸಿನ ಕಡೆ ಕೈ ತೋರಿಸುತ್ತಿದ್ದಳು. ಸುಮಿತ್ ಕೃಪಾಳ ಕಡೆ ನೋಡಿದ. ಅವಳು ತುಂಬ ಗಾಢ ನಿದ್ರೆಯಲ್ಲಿದ್ದಳು. ಅವಳನ್ನು ಎಬ್ಬಿಸಿದೆ ಅವನೊಬ್ಬನೇ ಕಾರಿನಿಂದ ಇಳಿದ. ಆ ಹೆಂಗಸು ” ಅಲ್ಲಿ ಅಪ್ಪ, ಅಪ್ಪನಿಗೆ ಏನೋ ಆಗಿದೆ, ಬೇಗ ಬನ್ನಿ ” ಅಂತ ಕರೆಯುತ್ತಿದ್ದಳು. ಸುಮಿತ್ ಆಫೀಸಿನ ಒಳಗಡೆ ಆ ಹೆಂಗಸಿನ ಜೊತೆಗೆ ಓಡಿದ. ಅಲ್ಲಿ ಮುದುಕ ಮೇಜಿನ ಮೇಲೆ ತಲೆ ಇಟ್ಟು ಮಲಗಿದ್ದ, ಆದರೆ ಮೇಜು ಪೂರ್ತಿ ರಕ್ತ ಸಿಕ್ತವಾಗಿತ್ತು, ಮುದುಕನ ಬಾಯಿಂದ ರಕ್ತ ಒಂದೇ ಸಮನೆ ಬರುತ್ತಿತ್ತು. ಸುಮಿತ್ ಒಂದು ಸಾರಿ ನಡುಗಿಹೋದ. ಏನು ಮಾಡಲು ತೋಚಲಿಲ್ಲ. ” ಏನಾಯಿತು ಇವರಿಗೆ” ಅಂತ ತಿರುಗಿದರೆ ಅಲ್ಲಿ ಅವನ ಜೊತೆ ಬಂದ ಹೆಂಗಸು ಇರಲಿಲ್ಲ. ಯಾವುದೇ ಒಂದು ಸಣ್ಣ ಹುಡುಗಿ ನಿಂತಿತ್ತು. ಆ ಹುಡುಗಿ ” ಅಲ್ಲಿ, ಅಲ್ಲಿ, ಅಮ್ಮ ಅಮ್ಮ” ಅಂತ ಹೊರಗಡೆ ಕೈ ತೋರಿಸುತ್ತಿದ್ದಳು. ಹೊರಗಡೆ ಹೋಗಿ ನೋಡಿದರೆ ಇವನನ್ನು ಕರೆದು ತಂದಿದ್ದ ಆ ಹೆಂಗಸು ನೆಲದಲ್ಲಿ ಬಿದ್ದಿದ್ದಳು. ಅವಳ ಬಾಯಿಂದ ಕೂಡ ರಕ್ತ ಹರಿಯುತ್ತ ಇತ್ತು. ಅದನ್ನು ನೋಡಿ ಸುಮಿತ್ ಭಯದಿಂದ ಬೆವರತೊಡಗಿದ. ಧೈರ್ಯ ಮಾಡಿ ಕಾರಿನಲ್ಲಿದ್ದ ಮೊಬೈಲ್ ನಿಂದ ಆಂಬುಲೆನ್ಸ್ ಗೆ ಫೋನ್ ಮಾಡೋಣ ಎಂದು ಕಾರಿನ ಹತ್ತಿರ ಬಂದ . ಮೊಬೈಲ್ ತೆಗೆದುಕೊಳ್ಳಲು ಕಾರಿನ ಒಳಗಡೆ ನೋಡಿದರೆ ಕಾರಿನಲ್ಲಿ ಕುಳಿತ್ತಿದ್ದ ಕೃಪಾ ಕಾಣಲಿಲ್ಲ. ಸುಮಿತ್ ಜೋರಾಗಿ ” ಕೃಪಾ, ಕೃಪಾ ” ಅಂತ ಕೂಗುತ್ತಾ ಬಂಕಿನ ಸುತ್ತ ಮುತ್ತ ಹುಡುಕತೊಡಗಿದ. ಆ ಸಣ್ಣ ಹುಡುಗಿ ಕೂಡ ಕಾಣಿಸುತ್ತಿರಲಿಲ್ಲ. ಬಂಕಿನ ಸುತ್ತ ಮುತ್ತಾ ಬಹಳ ಕತ್ತಲು ಇದ್ದುದ್ದರಿಂದ ಅವನಿಗೆ ಏನು ಕಾಣುತ್ತಿರಲಿಲ್ಲ. ಮೊಬೈಲ್ ಲೈಟ್ ಆನ್ ಮಾಡಿ ಆ ಬೆಳಕಲ್ಲೇ ಕೃಪಾಳನ್ನು ಹುಡುಕುತ್ತ ಹೋಗುತ್ತಿದ್ದ ಸುಮಿತನ ಕಾಲಿಗೆ ಏನೋ ಸಿಕ್ಕು ದಡಾರೆಂದು ಬಿದ್ದ. ಅವನು ಬಿದ್ದ ಹೊಡತಕ್ಕೆ ಅವನ ಹಣೆ ಊದಿ, ಆ ನೋವಿಗೆ ಜ್ಞಾನ ತಪ್ಪಿ ಹೋಯಿತು
” ಸುಮಿತ್, ಸುಮಿತ್ ” ಅಂತ ಯಾರೋ ಕೂಗಿದಂತೆ ಆಗಿ ಕಣ್ಣು ಬಿಟ್ಟು ನೋಡಿದರೆ ಆಗಲೇ ಬೆಳಕು ಹರಿದಿತ್ತು, ಸುಮಿತ್ ಡ್ರೈವರ್ ಸೀಟಿನಲ್ಲೇ ಕುಳಿತ್ತಿದ್ದ. ಪಕ್ಕದಲ್ಲಿ ಕೃಪಾ ಭಯದಿಂದ ಸುಮಿತ್ ಅನ್ನು ನೋಡುತ್ತಾ ” ಇಲ್ಲ್ಯಾಕೆ ನಿಲ್ಲಿಸಿದ್ದೀರಿ ನೀವು?” ಅಂತ ಕೇಳುತ್ತ ಕುಳಿತ್ತದ್ದಳು. ಸುಮಿತ್ ಗೆ ನಾನು ಕಂಡಿದ್ದು ಕನಸಾ ಅಥವಾ ನಿಜವಾ ಅಂತ ಗೊತ್ತಾಗಲಿಲ್ಲ. ಸುಮಿತ್ ಕೃಪಾಳಿಗೆ ” ಯಾವುದೊ ಪೆಟ್ರೋಲ್ ಬಂಕ್ ಇದು , ನಿದ್ದೆ ಬಂತು ಅಂತ ನಿಲ್ಲಿಸಿ ನಾನು ಮಲಗಿದ್ದೆ, ತಡಿ ಮುಖ ತೊಳೆದುಕೊಂಡು ಬರುತ್ತೇನೆ” ಅಂತ ಕಾರಿನಿಂದ ಇಳಿದ ನೋಡಿ ಅಲ್ಲೇ ಅವಕ್ಕಾಗಿ ನಿಂತುಬಿಟ್ಟ. ರಾತ್ರಿ ನೋಡಿದ ಪೆಟ್ರೋಲ್ ಬ್ಯಾಂಕ್ ಆಗಲಿ, ಆಫೀಸ್ ಆಗಲಿ ಯಾವುದು ಅಲ್ಲಿ ಇರಲಿಲ್ಲ.
ಅವನ ಕಾರು ಒಂದು ಸ್ಮಶಾನದ ಮದ್ಯೆ ನಿಂತಿತ್ತು.
ಸುಮಿತನ ಮೈಯೆಲ್ಲಾ ಮತ್ತೊಮ್ಮೆ ನಡುಗಿ ಹೋಯಿತು. ಕೂಡಲೇ ಕಾರಿನಲ್ಲಿ ಬಂದು ಕುಳಿತು ಕೃಪಾಳ ಮುಖ ನೋಡಿದ. ಅವಳ ಮುಖ ಹೆದರಿ ಬಿಳುಚಿಗೊಂಡಿತ್ತು. ” ಸುಮಿತ್, ಪೆಟ್ರೋಲ್ ಬಂಕ್ ಅಂತ ಹೇಳಿದ್ರಿ, ನೋಡಿದ್ರೆ ಸ್ಮಶಾನದಲ್ಲಿದ್ದೇವೆ ನಾವು” ಮೊದಲು ಇಲ್ಲಿಂದ ಹೊರಡಿ ” ಅಂತ ಕೃಪಾ ಹೇಳಿದಳು. ಸುಮಿತ್ ಕೂಡ ಭಯದಿಂದ, ನಡೆದಿದ್ದು ಏನು ಅಂತ ಅರ್ಥವಾಗದೆ ಕೂಡಲೇ ಕಾರನ್ನು ಸ್ಟಾರ್ಟ್ ಮಾಡಿ ಹೊರಟ. ಅವನ ಹಣೆ ವಿಪರೀತ ನೋಯುತ್ತಿತ್ತು. ಪದೇ ಪದೇ ಹಣೆ ಮುಟ್ಟುವುದನ್ನು ನೋಡಿ ಕೃಪಾ ” ನಿಮ್ಮ ಹಣೆಗೆ ಏನಾಗಿದೆ, ದೊಡ್ಡ ಬುಗುಟು ಬಂದಿದೆಯಲ್ಲ” ಅಂತ ಕೇಳಿದಳು. ಅದಕ್ಕೆ ಸುಮಿತ್ ” ನನಗು ಗೊತ್ತಿಲ್ಲ, ಎಲ್ಲೋ ಕಾರಿನಿಂದ ಇಳಿಯುವಾಗ ಕಾರಿನ ಡೋರ್ ಬಡಿದಿರಬೇಕು ಬಿಡು” ಅಂತ ಹೇಳಿ ಸುಮ್ಮನಾದ. ರಾತ್ರಿ ನಡೆದದ್ದು ನಿಜವೋ, ಕನಸೋ ತಿಳಿಯದೆ ಇದ್ದ ಸುಮಿತ್ಗೆ ರಾತ್ರಿ ಹಣೆಗೆ ಪೆಟ್ಟಾಗಿ ಜ್ಞಾನ ತಪ್ಪಿದ್ದು ನೆನಪಾಯಿತು. ಆದರೆ ಅಲ್ಲಿ ಬಿದ್ದವನು ವಾಪಸು ಕಾರಿಗೆ ಹೇಗೆ ಬಂದೆ ಎಂದು ಆಲೋಚನೆಯಲ್ಲಿಯೇ ಮುಳುಗಿ ಕಾರನ್ನು ಓಡಿಸಲು ಶುರು ಮಾಡಿದ.
ಕಾರು ಸ್ಮಶಾನ ದಾಟಿ ಮುಖ್ಯ ರಸ್ತೆಗೆ ಸೇರಬೇಕು ಅನ್ನುವಾಗಲೇ ಒಂದು ಹುಡುಗಿ ಓಡುತ್ತಾ ಕಾರಿಗೆ ಅಡ್ಡ ಬಂದಳು, ಅವಳ ಹಿಂದೆಯೇ ಒಂದು ಹೆಂಗಸು ” ಪುಟ್ಟಿ, ಓಡಬೇಡ ನಿಲ್ಲು” ಎಂದು ಕೂಗುತ್ತ ಓಡಿಬಂದಳು. ಕೃಪಾ ಆ ಹುಡುಗಿ ಕಾರಿಗೆ ಕಾರಿಗೆ ಸಿಕ್ಕಿಬಿಟ್ಟಳು ಅಂತ ಅಂದುಕೊಂಡು ಜೋರಾಗಿ ಕಿರುಚಿಬಿಟ್ಟಳು. ಸುಮಿತ್ ಕಾರನ್ನು ಕೂಡಲೇ ಬ್ರೇಕ್ ಹಾಕಿ ನಿಲ್ಲಿಸಿದ. ಸುಮಿತ್ ಹಾಗು ಕೃಪಾ ಕೂಡಲೇ ಕಾರಿನಿಂದ ಕೂಡಲೇ ಇಳಿದು ಕಾರಿನ ಮುಂದೆ ಬಂದರು. ಆದರೆ ಅಲ್ಲಿ ಓಡಿ ಬಂದ ಹುಡುಗಿ ಆಗಲಿ ಅಥವಾ ಕೂಗುತ್ತ ಬಂದ ಹೆಂಗಸಾಗಲಿ ಕಾಣಿಸಲಿಲ್ಲ. ರಸ್ತೆ ಪೂರಾ ಕಾಲಿಯಾಗಿತ್ತು. ಸುಮಿತ್ ಮತ್ತು ಕೃಪಾ ಕಕ್ಕಾಬಿಕ್ಕಿಯಾಗಿ ನಿಂತುಬಿಟ್ಟರು.
ಅವರು ನಿಂತಿದ್ದ ಆ ರಸ್ತೆ ಕೂಡುವ ಸ್ಥಳದಲ್ಲಿ “ಆಕ್ಸಿಡೆಂಟ್ ಜೋನ್, ನಿಧಾನವಾಗಿ ಚಲಿಸಿ” ಎಂಬ ದೊಡ್ಡ ಫಲಕ ಎದ್ದು ಕಾಣುತಿತ್ತು.
ಸುಮಿತನ ಮನಸ್ಸಿನಲ್ಲಿ ಹಾಗಾದರೆ ರಾತ್ರಿ ಕಂಡವರೆಲ್ಲ ಆಕ್ಸಿಡೆಂಟ್ನಲ್ಲಿ ಸತ್ತವರೇನಾ? ಎಷ್ಟೆಲ್ಲಾ ನಡೆದದ್ದು ಭ್ರಮೆನಾ ಅಥವಾ ನಿಜವಾ ಎಂಬ ಪ್ರಶ್ನೆ ಮೂಡಿತು. ಉತ್ತರ ಮಾತ್ರ ಅವನಿಗೆ ಸಿಗಲಿಲ್ಲ. ಕೃಪಾಳಿಗೆ ಏನು ಅರ್ಥವಾಗದೆ ಭಯದಿಂದ ಕಾರಿನಲ್ಲಿ ಬಂದು ಕುಳಿತಳು.
ಸುಮಿತ್ ನಿಧಾನವಾಗಿ ಕಾರು ಸ್ಟಾರ್ಟ್ ಮಾಡಿ ಹೊರಟ. ಕಾರು ಮುಖ್ಯ ರಸ್ತೆ ಸೇರಿದ ಮೇಲೆ ತಿರುಗಿ ಸ್ಮಶಾನದ ಕಡೆ ನೋಡಿದ.
ಒಬ್ಬ ಮುದುಕ , ಒಂದು ಹೆಂಗಸು ಹಾಗು ಒಂದು ಸಣ್ಣ ಹುಡುಗಿ ಅಲ್ಲಿ ನಿಂತಿದ್ದರು.
– ಶ್ರೀನಾಥ್ ಹರದೂರ ಚಿದಂಬರ
ಚಿತ್ರಕೃಪೆ : ಗೂಗಲ್
Wow.. 👌👌kathe odutthiruvaaga paathragalu kanmunde haadu hoda hagaaytu
LikeLike
Thank you..
LikeLike
ನಿಜವಾಗಲು ಕತೆ ತುಂಬ ಚೆನ್ನಾಗಿದೆ
LikeLike
ಧನ್ಯವಾದಗಳು ಲೀಲಾಧರ ಅವರೇ..
LikeLike