
ನಿಯತ್ತಿಗೆ ಇನ್ನೊಂದು ಹೆಸರು ಅಂದಾಗ ಮೊದಲು ನಮಗೆ ನೆನಪಾಗುವುದು ” ನಾಯಿ”. ಅದೇ ರೀತಿ ನಮ್ಮಲ್ಲಿ ಒಬ್ಬ ಮನುಷ್ಯನಿಗೆ ತೊಂದರೆ ಬಂದಾಗ, ಬಹಳ ಕಷ್ಟ ಅನುಭವಿಸುವಾಗ, ಶೋಚನೀಯ ಸ್ಥಿತಿಯಲ್ಲಿದ್ದಾಗ ಅಥವಾ ಬಹಳ ಹೆದರಿದಾಗ ಅಂತಹ ಸಂದರ್ಭಗಳಲ್ಲಿ ನಾವು ಉಪಯೋಗಿಸುವ ಮಾತುಗಳಲ್ಲಿ ಒಂದು ಮಾತು ” ನಾಯಿ ಪಾಡು” ಅಂತ. ಅನೇಕ ಬಾರಿ ಹೊರಗಡೆ ಹೋದಾಗ ಮಳೆಯಲ್ಲಿ ಸಿಕ್ಕು ಒದ್ದೆಯಾದರು ಈ ಮಾತನ್ನು ಹೇಳುತ್ತೇವೆ. ಸರಿಯಾಗಿ ಊಟ ಸಿಗದಿದ್ದರೂ ಕೂಡ “ಇವತ್ತು, ನಂದು ನಾಯಿ ಪಾಡು ಮಾರಾಯ ” ಅಂತ ಹೇಳುತ್ತೇವೆ. ಯಾಕೆಂದರೆ ನಮ್ಮಲ್ಲಿ ಸಾಕು ನಾಯಿಗಳಿಗಿಂತ ಬೀದಿ ನಾಯಿಗಳ ಸಂಖ್ಯೆ ಜಾಸ್ತಿ. ಅವುಗಳ ಬೀದಿ ಬದಿಯ ವಾಸ, ಊಟಕ್ಕೆ ಬೀದಿ ಬೀದಿ ತಿರುಗುವ ಪರಿ, ಬೇರೆ ಬೀದಿಗೆ ಹೋಗಿ ಅಲ್ಲಿನ ನಾಯಿಗಳ ಜೊತೆಗೆ ಕಚ್ಚಾಟ, ಕಂಡ ಕಂಡವರು ಕಲ್ಲಿನಿಂದ ಹೊಡೆದರೆ ಹೊಡೆಸಿಕೊಳ್ಳುವುದು … ಇವೆಲ್ಲ ನೋಡೀನೇ ಈ ಮಾತು ಹುಟ್ಟಿದ್ದು ಅನಿಸುತ್ತೆ.
ಕೆ ಆರ್ ಪುರಂನಲ್ಲಿ ವಾಸವಾಗಿದ್ದಾಗ ನಮ್ಮ ಮನೆಯ ಬೀದಿಯ ಕೊನೆಯಲ್ಲಿ ಸುಮಾರು ಹತ್ತಿಪ್ಪತ್ತು ನಾಯಿಗಳ ಸಾಮ್ರಾಜ್ಯನೆ ಇತ್ತು. ರಾತ್ರಿ ಹತ್ತು ಗಂಟೆಯ ಮೇಲೆ ನಡೆದುಕೊಂಡು ಅವುಗಳಿಂದ ತಪ್ಪಿಸಿಕೊಂಡು ನಮ್ಮ ಮನೆ ತಲುಪುವುದೆಂದರೆ ದೊಡ್ಡ ಸಾಹಸ ಮಾಡಿದ ಅನುಭವ ಆಗುತ್ತಿತ್ತು. ಆ ನಾಯಿಗಳ ಹೆದರಿಕೆಗೆ ರಾತ್ರಿ ಹೊತ್ತು ಆಫೀಸ್ನಿಂದ ತಡವಾಗಿ ಹೊರಟಾಗ ಮಜೆಸ್ಟಿಕ್ ಇಂದ ಕೆ ಆರ್ ಪುರಂಗೆ ಬಸ್ಸಿನಲ್ಲಿ ಬಂದು ಅಲ್ಲಿಂದ ಆಟೋದಲ್ಲಿ ಮನೆಯಾ ಬಾಗಿಲ ತನಕ ಬಂದು, ಆಮೇಲೆ ಮನೆ ಒಳಗಡೆ ಹೋಗಿದ್ದು ಇದೆ. ನಾಯಿಯ ಬಗ್ಗೆ ಹೆದರಿಕೆ ಹುಟ್ಟಿದ್ದು ಒಂದು ನಾಯಿ ಕಚ್ಚಿದ ಮೇಲೆ. ನನಗೆ ಕಚ್ಚಿದ್ದು ಬೀದಿ ನಾಯಿ ಅಲ್ಲ, ಕಚ್ಚಿದ್ದು ಒಂದು ಸಾಕಿದ ನಾಯಿ. ನಾನು ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದಾಗ ಒಬ್ಬರ ಮನೆಯಲ್ಲಿ ಒಂದು ಪೊಮೇರಿಯನ್ ನಾಯಿ ಇತ್ತು. ( ನಾವು ಊರಲ್ಲಿ, ಜೂಲ್ ನಾಯಿ, ಜೂಲಿ ನಾಯಿ ಅಂತೆಲ್ಲ ಕರಿತ್ತಿದ್ವಿ ) ಅವರ ಮನೆಗೆ ನಾವು ಅವರ ಮನೆಯ ಹಿತ್ತಲಿನಿಂದ ಬಂದು ಮನೆಯ ಎದುರುಗಡೆ ಬಾಗಿಲಿಗೆ ಬರುತ್ತಿದ್ದೆವು. ಒಂದು ದಿನ ಅವರು ನಾಯಿಯನ್ನು ಮನೆಯ ಎದುರುಗಡೆ ಕಟ್ಟಿದ್ದರು. ನಾನು ಯಾವಾಗಲು ಬರುವಂತೆ ಅವರ ಮನೆಯ ಹಿಂದಿನಿಂದ ನಡೆದುಕೊಂಡು ಮನೆಯಾ ಮುಂದುಗಡೆ ಬಂದು, ಅಲ್ಲಿ ಆ ನಾಯಿ ಮಲಗಿದ್ದು ನೋಡದೆ ಅದರ ಮೇಲೆ ಕಾಲಿಟ್ಟೆ. ಆಗ ಅದು ಅದರ ಮೇಲೆ ಕಾಲಿಟ್ಟ ನೋವಿಗೋ ಅಥವಾ ಹೆದರಿಕೆಗೋ ಏನೋ ಸೀದಾ ನನ್ನ ಕಾಲಿಗೆ ಬಾಯಿ ಹಾಕಿ ಕಚ್ಚಿತು. ನಂತರ ಹೊಟ್ಟೆಗೆ ಹದಿನಾಲಕ್ಕೂ ಇಂಜೆಕ್ಷನ್ ತೆಗೆದುಕೊಂಡಿದ್ದು ಆಯಿತು. ಅವತ್ತಿನಿಂದ ನನಗು ನಾಯಿಯ ಮದ್ಯೆ ಒಂದು ದೊಡ್ಡ ಕಂದಕ ಏರ್ಪಟ್ಟಿತ್ತು. ಅವುಗಳ ಮೇಲೆ ದ್ವೇಷ ಇಲ್ಲ , ಸ್ವಲ್ಪ ಹೆದರಿಕೆ ಅಷ್ಟೇ. ನಾಯಿ ಕಂಡರೆ ಮಾರುದ್ದ ಹೋಗಿ ನಿಲ್ಲುತ್ತೇನೆ, ಇವತ್ತಿಗೂ ಹತ್ತಿರ ನಾಯಿ ಬಂದರೆ ನನ್ನ ಪರಿಸ್ಥಿತಿ ” ನಾಯಿ ಪಾಡು” ಆಗುತ್ತದೆ. ಯಾರ ಮನೆಯಲ್ಲಿ ನಾಯಿ ಇದೆ ಅಂದರೆ ಅವರ ಮನೆಗೆ ಹೋಗುವುದನ್ನು ಕಮ್ಮಿ ಮಾಡಿದ್ದು ಇದೆ. ಅಕಸ್ಮಾತ್ ಹೋದರೆ ಉಸಿರು ಬಿಗಿ ಹಿಡಿದು ಕೂತಿದ್ದು ಹೊರಗಡೆ ಬಂದ ಮೇಲೆ ಉಸಿರು ಬಿಟ್ಟಿದ್ದು ಇದೆ.
ನೆದರ್ಲ್ಯಾಂಡ್ ಗೆ ಬಂದ ಮೇಲೆ ಯಾಕೋ ” ನಾಯಿ ಪಾಡು” ಎಂಬ ಮಾತಿಗೆ ನಮ್ಮಲ್ಲಿರುವ ಅರ್ಥ ಈ ಊರಲ್ಲಿ ಹೊಂದಿಕೆಯಾಗುವುದಿಲ್ಲ ಎಂದು ಮನವರಿಕೆಯಾಯಿತು. ಯಾಕೆಂದರೆ ಇಲ್ಲಿ ನಾಯಿಗಳನ್ನು ನಾವು ಮಕ್ಕಳನ್ನು ಸಾಕುವ ಮಟ್ಟಕ್ಕೆ ಸಾಕುತ್ತಾರೆ. ಅವುಗಳು ಮನೆಯ ಒಬ್ಬ ಸದಸ್ಯರಂತೆ ಮನೆಯಲ್ಲಿ ವಾಸ ಮಾಡುತ್ತವೆ. ಅವುಗಳಿಗೋಸ್ಕರ ಡೇ ಕೇರ್, ಟ್ರೇನಿಂಗ ಸೆಂಟರ್ ಕೂಡ ಇದೆ. ಕೆಲವ್ರು ಮಕ್ಕಳಂತೆ ನಾಯಿಗಳನ್ನು ಸ್ಟ್ರೋಲ್ಲೆರ್ ನಲ್ಲೆ ಕರೆದುಕೊಂಡು ಹೋಗುತ್ತಾರೆ. ಸ್ವಂತ ಮಕ್ಕಳನ್ನು ಸಾಕುವ ಹಾಗೆ ಸಾಕುತ್ತಾರೆ ನಾಯಿಗಳನ್ನು ಇಲ್ಲಿ. ನಾನು ನನ್ನ ಸ್ನೇಹಿತರು ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ” ಮುಂದಿನ ಜನ್ಮದಲ್ಲಿ ಏನಾದರೂ ನಾಯಿ ಆಗಿ ಹುಟ್ಟಿದರೆ, ನೆದರ್ಲ್ಯಾಂಡ್ ನಲ್ಲಿ ಹುಟ್ಟಬೇಕು” ಅಂತ ಇಲ್ಲಿರುವ ನಾಯಿಗಳನ್ನು ನೋಡಿ ಮಾತನಾಡಿದ್ದು ಇದೆ. ಆಶ್ಚರ್ಯ ಅಂದರೆ ಅಕ್ಕ ಪಕ್ಕದ ಮನೆಯಲ್ಲಿ ನಾಯಿ ಇದ್ದರು, ಅವುಗಳು ಬೊಗಳುವುದನ್ನು ಕೇಳುವುದು ಬಹಳ ಅಪರೂಪ. ವಾಕಿಂಗ್ ಗೆ ಕರೆದುಕೊಂಡು ಹೋಗುವಾಗ ಎದುರು ಬರುವ ಇನ್ನೊಂದು ನಾಯಿಯನ್ನು ನೋಡಿ, ನಾವು ಅಪರೂಪದ ಸ್ನೇಹಿತರು ಸಿಕ್ಕರೆ ಹೇಗೆ ” ಹಾಯ್” ಅಂತ ಅನ್ನುತ್ತೀವೋ ಹಾಗೆ ಒಂದು ಸಾರಿ ” ಬೋವ್” ಒಂದು ಬೊಗಳುತ್ತವೆ ಅಷ್ಟೇ. ಇತ್ತೀಚಿಗೆ ನಮ್ಮ ಪಕ್ಕದ ಮನೆಯವರು ( ಡಚ್ ) ಅವರು ನಮ್ಮನ್ನು ಅವರ ಮನೆಗೆ ಟೀ ಗೆ ಕರೆದಿದ್ದರು. ನಾವು ಸರಿಯಾಗಿ ಅವರು ಹೇಳಿದ ಸಮಯಕ್ಕೆ ಹೋಗಿ ಅವರ ಮನೆಯ ಬೆಲ್ ಮಾಡಿದೆವು. ನನ್ನ ಹೊಟ್ಟೆಯಲ್ಲಿ ಆಗಲೇ ತಳಮಳ ಶುರು ವಾಗಿತ್ತು. ಯಾಕೆಂದರೆ ಅವರ ಮನೆಯಲ್ಲಿ ನಾಯಿ ಇರುವುದು ಗೊತ್ತಿತ್ತು. ಗಂಡ ಹೆಂಡತಿ ಇಬ್ಬರು ಬಂದು ಬಾಗಿಲು ತೆಗೆದರು. ಆದರೆ ಕೂಡಲೇ ಒಳಗಡೆ ಕರೆಯಲಿಲ್ಲ. ಒಂದೆರಡು ನಿಮಿಷ ಹೊರಗಡೆನೇ ನಿಂತು ಲೋಕಾಭಿರಾಮವಾಗಿ ಮಾತನಾಡಿಸುತ್ತ ಇದ್ದರು. ಮೊದಲು ನನಗೆ ಯಾಕೆ ಹೇಗೆ ಅಂತ ಅರ್ಥ ಆಗಲಿಲ್ಲ. ಆಮೇಲೆ ಅವರ ಮನೆಯ ನಾಯಿ ಹೊರಗಡೆ ಬಂದಿತು. ಮೊದಲು ನನ್ನ ಹೆಂಡತಿಯನ್ನು, ನಂತರ ನನ್ನ ಮಗಳನ್ನು ಹಾಗು ಕೊನೆಯಲ್ಲಿ ಹಿಂದೆ ನಿಂತಿದ್ದ ನನ್ನನ್ನು ಮೂಸಿತು. ಹೆಂಡತಿ ಮತ್ತು ಮಗಳು ಅದನ್ನು ಮುದ್ದು ಮಾಡಿ ತಮ್ಮ ಬುಟ್ಟಿಗೆ ಹಾಕಿಕೊಂಡು ಬಿಟ್ಟರು. ನಾನು ಕಷ್ಟಪಟ್ಟು ಅದನ್ನು ಮುಟ್ಟಿದೆ, ಅದು ನನ್ನನ್ನು ವಿಚಿತ್ರವಾಗಿ ಒಮ್ಮೆ ನೋಡಿತು. ಆಮೇಲೆ ನನ್ನ ನೋಡಿ ಏನನ್ನಸಿತೋ ಏನೋ ಸುಮ್ಮನೆ ಒಳಗಡೆ ಹೋಯಿತು. ಅಷ್ಟೆಲ್ಲ ಆಗುವಷ್ಟರಲ್ಲಿ ನನ್ನ ಹೊಟ್ಟೆ ಗುಡುಗುಡು ಅಂತ ಶಬ್ದ ಮಾಡತೊಡಗಿತ್ತು. ನಾನು ಹೆದರಿದ್ದು ಅದಕ್ಕೆ ಗೊತ್ತಾಗಿರಬೇಕು ಅಂದುಕೊಂಡೆ. ನನ್ನ ಹೆಂಡತಿ ಹಾಗು ಮಗಳು ನನ್ನ ಅವಸ್ಥೆ ನೋಡಿ ಮುಸಿ ಮುಸಿ ನಗುತ್ತಿದ್ದರು. ವಾಪಸು ಬರುವಾಗ ನಾನು ನನ್ನ ಹೆಂಡತಿಗೆ ಕೇಳಿದೆ” ಆ ನಾಯಿ ನಮ್ಮನ್ನು ಮೂಸಿ, ಏನಾದ್ರೂ ಬೊಗಳಿದ್ದರೆ ನಮ್ಮನ್ನು ಒಳಗಡೆ ಕರೆಯುತ್ತಿರಲಿಲ್ಲ ಅಲ್ವಾ ? ” ಅಂತ ಕೇಳಿದೆ. ನನ್ನ ಹೆಂಡತಿ ” ಸುಮ್ಮನೆ ಬನ್ರೀ, ಹಾಗೇನು ಇಲ್ಲ, ಅದಕ್ಕೂ ನಮ್ಮ ಪರಿಚಯ ಇರಲಿ, ಅದಕ್ಕೆ ಇಷ್ಟು ಜನರನ್ನು ನೋಡಿ ಗಾಬರಿ ಆಗದಿರಲಿ ಅಂತ ಹಾಗೆ ಮಾಡಿದ್ದು” ಅಂತ ಹೇಳಿದಳು. ಆದರೆ ನಾನು ಗಾಬರಿಯಾಗಿದ್ದು ಮಾತ್ರ ಯಾರ ಗಮನಕ್ಕೆ ಬರಲಿಲ್ಲ. ಅವತ್ತು ನನ್ನದು ಭಾರತೀಯ ” ನಾಯಿ ಪಾಡು” ಆಗಿದ್ದಂತೂ ಹೌದು.
ಮೊನ್ನೆ ನನ್ನ ಸ್ನೇಹಿತರೊಬ್ಬರು( ಅವರಿಗೂ ಸ್ವಲ್ಪ ನಾಯಿ ಕಂಡರೆ ಭಯ) ತಾವಿರುವ ಅಪಾರ್ಟ್ಮೆಂಟಿನ ಲಿಫ್ಟ್ ನ ಹತ್ತಿರ ಹೊರಗಡೆ ಹೋಗಲು ಕಾಯುತ್ತಿದ್ದರು. ಲಿಫ್ಟ್ ಬಾಗಿಲು ತೆರೆದ ಕೂಡಲೇ ಇವರು ಒಳಗಡೆ ಹೋಗಲು ಪ್ರಯತ್ನ ಪಟ್ಟಿದ್ದಾರೆ. ಲಿಫ್ಟ್ ನ ಒಳಗಡೆ ಯಾರೋ ಒಬ್ಬರು ನಾಯಿ ಹಿಡಿದುಕೊಂಡು ನಿಂತಿದ್ದರಂತೆ. ಆ ನಾಯಿ ಇವರನ್ನು ಕಂಡು ಇವರ ಹತ್ತಿರ ಎಗರಿದೆ. ಇವರ ಸ್ವಲ್ಪ ಗಾಬರಿಯಾಗಿ ಕೂಗಿದ್ದಾರೆ. ಆ ಮನುಷ್ಯ ಇವರಿಗೆ “ನನ್ನ ನಾಯಿಯನ್ನು ನೀವು ಹೆದರಿಸಿ ಬಿಟ್ಟಿರಿ” ಅಂತ ಹೇಳಿ ಹೋಗಿದ್ದಾರೆ. ಇವರಿಗೆ ನನಗಿಂತ ನಾಯಿನೆ ಜಾಸ್ತಿನಾ ಅನಿಸಿದೆ. ನಾನು ಇಲ್ಲಿಯ ” ನಾಯಿ ಪಾಡು” ಈ ರೀತಿನೇ ಇರೋದ್ರಿಂದ ಏನು ಮಾಡೋಕ್ಕೆ ಆಗಲ್ಲ ಬಿಡಿ ಅಂತ ಸಮಾಧಾನ ಮಾಡಿದೆ.
ಸದ್ಯಕ್ಕೆ ನಮ್ಮ ಮನೆಯಲ್ಲಿ ನಾಯಿ ತಂದು ಸಾಕುವ ವಿಚಾರ ಚರ್ಚೆ ಆಗುತ್ತಿದೆ. ನಾನು ಮಾತ್ರ ನನಗು ಆ ಚರ್ಚೆಗೂ ಯಾವುದೇ ಸಂಬಂಧವಿಲ್ಲದಂತೆ ಇದ್ದೇನೆ. ಯಾಕೆಂದರೆ ನಾಯಿ ಮನೆಗೆ ಬಂದರೆ ನನ್ನ ಪರಿಸ್ಥಿತಿ ಏನು ಎಂಬುದು ನನಗೆ ಗೊತ್ತಿದೆ. ನಾಯಿ ಪ್ರಿಯರಿಗೆ ಇದೆಲ್ಲ ಹೇಳಿದರೆ ನಿಮಗೇನು ಗೊತ್ತು ಒಮ್ಮೆ ನಾಯಿ ಜೊತೆ ಇರಿ ಆಮೇಲೆ ಅದರ ಮಹತ್ವ ನಿಮಗೆ ಗೊತ್ತಾಗುತ್ತದೆ ಅಂತ ಹೇಳುತ್ತಾರೆ. ನಾನು ನೀವು ನಿಮ್ಮ ನಾಯಿಗೆ ದೊಡ್ಡ ನಮಸ್ಕಾರ, ನನ್ನನ್ನು ನನ್ನ ” ಪಾಡಿಗೆ” ಬಿಡಿ ಎಂದು ಹೇಳುತ್ತೇನೆ.
– ಶ್ರೀನಾಥ್ ಹರದೂರ ಚಿದಂಬರ
ಹೂಂ, ನಾನೂ ಹೇಳೋದು ಒಮ್ಮೆ ನಾಯಿ ಸಾಕಿ ನೋಡಿ 😀👌
LikeLike
ನೋಡೋಣ, ಇದರ ಬಗ್ಗೆ ಮನೆಯಲ್ಲಿ ಬಾರಿ ಚರ್ಚೆ ನಡೆಯುತ್ತಿದೆ. ನಾಯಿ ಬಂದರೆ ನನ್ನ ಅನುಭವ ಖಂಡಿತ ತಿಳಿಸುತ್ತೇನೆ..:)
LikeLike