ಕಗ್ಗತ್ತಲ ರಾತ್ರಿಯಲ್ಲಿ ಆಗಿದ್ದಾದರೂ ಏನು?

ಅವತ್ತು ರಾತ್ರಿ ಧರ್ಮಸ್ಥಳದಲ್ಲಿ  ಊಟ ಮಾಡಿ, ಅಲ್ಲಿಂದ ಹೊರಟಾಗ ಸಮಯ  ಹನ್ನೊಂದು ದಾಟಿತ್ತು.  ನಾನು ಮತ್ತು ನನ್ನ ಅತ್ತೆ ಮಗ ಮಹೇಶ ಕಾರಿನಲ್ಲಿ ದರ್ಮಸ್ಥಳದಿಂದ  ಕಾರ್ಕಳ ಮಾರ್ಗವಾಗಿ ಆಗುಂಬೆ ಘಾಟಿ ಹತ್ತಿ ತೀರ್ಥಹಳ್ಳಿ ಮೂಲಕ  ಸಾಗರಕ್ಕೆ ಹೊರಟ್ಟಿದ್ದೆವು. ನಮಗೇನು ಈ ದಾರಿ ಹೊಸದೇನು ಆಗಿರಲಿಲ್ಲ.   ಅನೇಕ ಬಾರಿ  ಅದೇ ಮಾರ್ಗದಲ್ಲಿ  ಧರ್ಮಸ್ಥಳಕ್ಕೆ ಹೋಗಿ ಬಂದು ಮಾಡಿದ್ದರಿಂದ, ರಾತ್ರಿಯಲ್ಲಿ ಕೂಡ ರಸ್ತೆ,  ದಾರಿಯಲ್ಲಿ ಸಿಗುವ ಹಳ್ಳಿಗಳು, ಅಕ್ಕ ಪಕ್ಕ ಸಿಗುವ ಅಂಗಡಿಗಳ ಗುರುತು ಸಿಗುವಷ್ಟು ಪರಿಚಯ  ಆಗಿ ಹೋಗಿತ್ತು.   ಮೊದಲಿನಿಂದಲೂ ನಮ್ಮಿಬ್ಬರಿಗೂ  ರಾತ್ರಿ  ಊರಿಂದ ಊರು ಸುತ್ತುವ  ಹುಚ್ಚು. ಅನೇಕ ಬಾರಿ ರಾತ್ರೋ ರಾತ್ರಿ   ಊರಿಂದ ಹೊರಟು ಕೆಲವು ಅನಿರೀಕ್ಷಿತ ಘಟನೆಗಳಿಗೆ ಸಾಕ್ಷಿ ಕೂಡ ಆಗಿದ್ದೇವೆ .  ಆದರೂ ರಾತ್ರಿ   ಪ್ರಯಾಣ ಮಾಡುವುದು ಬಿಟ್ಟಿರಲಿಲ್ಲ. ಅವತ್ತು ಕೂಡ ರಾತ್ರಿ ಧರ್ಮಸ್ಥಳದಲ್ಲಿ ಉಳಿದು ಮರುದಿನ ಹೊರಟು, ಮಾರನೇ ದಿವಸ ಮನೆಗೆ ಬರುತ್ತೇವೆ ಅಂತ ಹೇಳಿ ಬಂದಿದ್ದೆವು. ರಾತ್ರಿ ಊಟ ಮುಗಿದ ತಕ್ಷಣ ಯಾಕೋ ಹೊರಟು ಬಿಡೋಣ ಅಂತ ಅಲ್ಲಿಂದ ರಾತ್ರಿ  ಪ್ರಯಾಣ ಶುರು ಮಾಡಿದ್ದೆವು.   ನನಗೆ ಧರ್ಮಸ್ಥಳದ ಪ್ರಸಾದದ ಊಟ ಅಂದರೆ ಬಹಳ ಇಷ್ಟ.  ಹಾಗಾಗಿ ಅವತ್ತು ಚೆನ್ನಾಗಿಯೇ ಪ್ರಸಾದ ನನ್ನ ಹೊಟ್ಟೆ ಸೇರಿತ್ತು.  ಮಹೇಶ ನಾನೇ ಕಾರು ಓಡಿಸುತ್ತೇನೆ ಅಂತ  ಹೇಳಿದ್ದಕ್ಕೆ,  ಹೊಟ್ಟೆ ಭಾರ ಆಗಿ ನಿದ್ದೆ ಎಳೆಯುತ್ತಿದ್ದರಿಂದ ನಾನು ಕೂಡ  ಏನು ಹೇಳದೆ ” ಆಯಿತು, ನೀನೆ ಓಡಿಸು ನಾನು ಮಲಗುವ ಸಂಭವ ಜಾಸ್ತಿ ಇದೆ” ಅಂತ ಹೇಳಿ ಕಾರಿನಲ್ಲಿ ಆರಾಮಾಗಿ ಕೂತೆ. ಮಹೇಶ ಕಾರು ಓಡಿಸಲು ಶುರು ಮಾಡಿದ. 

ಧರ್ಮಸ್ಥಳ ದಾಟುತ್ತಿದ್ದಂತೆ ಕಾಡಿನ ದಾರಿ ಶುರುವಾಯಿತು. ಹೊರಗಡೆ ಕತ್ತಲು ಬಿಟ್ಟರೆ ಏನು ಇರಲಿಲ್ಲ. ಮುಂದೆ ಕಾಣಿಸುತ್ತಿದ್ದ ದಾರಿಯ ಮೇಲೆ ನಮ್ಮ ಕಾರಿನ  ಲೈಟಿನ ಬೆಳಕು ಉದ್ದಕ್ಕೂ ಹರಡಿತ್ತು.  ಯಾವಾಗಲೂ ನಾವಿಬ್ಬರು ಮಾತನಾಡುತ್ತ ರಾತ್ರಿ ಪೂರ ಎಚ್ಚರ ಇದ್ದು ಊರು ತಲುಪುತ್ತಿದ್ದೆವು.  ಅವಾಗವಾಗ  ಒಬ್ಬರಿಗೊಬ್ಬರು ನಿದ್ದೆ ಬರುತ್ತಿದ್ದೆಯಾ ಅಂತ ಕೇಳಿಕೊಳ್ಳುತ್ತಾ, ಎಲ್ಲಾದರೂ ಟೀ ಅಂಗಡಿ ಕಂಡರೆ ನಿಲ್ಲಿಸಿ, ಅಲ್ಲಿ ಟೀ ಕುಡಿದು, ಮುಖ ತೊಳೆದುಕೊಂಡು ಮತ್ತೆ ಹೊರಡುತ್ತಿದ್ದೆವು.  ಅವತ್ತು ಮಾತ್ರ  ಚೆನ್ನಾಗಿಯೇ ಹೊಟ್ಟೆ  ತುಂಬಿದ್ದ ಕಾರಣ ಇರಬೇಕು,   ಹಾಗೆ ಬೆಳಕು ನೋಡುತ್ತಾ ಕೂತಿದ್ದವನಿಗೆ ಯಾವಾಗ ನಿದ್ದೆ ಹತ್ತಿತೋ ಗೊತ್ತಾಗಲಿಲ್ಲ. ಕನಸು ಬೀಳುವ ಹಾಗೆ ಚೆನ್ನಾಗಿ ನಿದ್ದೆ ಮಾಡಿಬಿಟ್ಟೆ. ಸುಮಾರು ಸಮಯದ ನಂತರ ದಡಕ್ಕನೆ ಎಚ್ಚರವಾಗಿ, ಕಣ್ಣು ಬಿಟ್ಟು ನೋಡಿದೆ.  ಮಹೇಶ ನಿಧಾನವಾಗಿ ಕಾರನ್ನು ಓಡಿಸುತ್ತಿದ್ದ.  ನಾನು ಅವನಿಗೆ ” ಎಲ್ಲಿ ತನಕ ಬಂದೆವು” ಅಂತ ಕೇಳಿದೆ. ಮಹೇಶ ” ಕಾರ್ಕಳ ದಾಟಿದೆವು” ಅಂತ ಹೇಳಿದ.  ಅದನ್ನು ಕೇಳಿ ನನಗೆ ನಾನು ಸಿಕ್ಕಾಪಟ್ಟೆ ನಿದ್ದೆ ಮಾಡಿಬಿಟ್ಟೆದ್ದೆ ಅಂತ  ಅನಿಸಿತು. ನಾನು ಸ್ವಲ್ಪ ನೀರು ಕುಡಿದು, ಎಂದಿನಂತೆ ಮತ್ತೆ ಮಾತನಾಡುತ್ತ ಕುಳಿತೆ. ” ನಿದ್ದೆ ಬಂದರೆ ಹೇಳು, ನಾನು ಕಾರನ್ನು ಓಡಿಸುತ್ತೇನೆ” ಅಂತ ಹೇಳಿದೆ. ಅದಕ್ಕೆ ಅವನು ಕೂಡ ಎಂದಿನಂತೆ ” ನಾನು ಓಡಿಸುತ್ತೇನೆ ಬಿಡು “ಅಂದ.

ಸ್ವಲ್ಪ ದೂರ ಹೋಗುತ್ತಿದ್ದಂತೆ, ನಾನು ಮಹೇಶನಿಗೆ ” ಯಾಕೋ ಈ ದಾರಿ ಯಾವಾಗಲೂ ಹೋಗುತ್ತಿದ್ದ ದಾರಿ ತರಹ ಇಲ್ಲ ಕಣೋ, ದಾರಿ ಏನಾದರು ತಪ್ಪಿದೆವ”  ಅಂತ ಕೇಳಿದೆ.  ಅದಕ್ಕೆ ಮಹೇಶ ಕೂಡ ” ಹೌದು ನನಗು ಹಾಗೆ ಅನಿಸುತ್ತಾ ಇದೆ” ಎಂದ.  ನಾನು ” ಮುಂದೆ ಯಾವುದಾದರೂ ಅಂಗಡಿ ಕಂಡರೆ ನಿಲ್ಲಿಸು, ಅಲ್ಲಿ ಕೇಳೋಣ ” ಅಂತ ಹೇಳಿದೆ.  ಒಂದೆರಡು ಕಿಲೋಮೀಟರು ದೂರ ಹೋದ ಮೇಲೆ ಒಂದು ಅಂಗಡಿ  ಕಾಣಿಸಿತು.  ಅದರ ಪಕ್ಕದಲ್ಲಿಯೇ  ನಮ್ಮ ಕಾರು ನಿಲ್ಲಿಸಿ,  ಕಿಟಕಿಯಿಂದ ತಲೆ ಹೊರಗಡೆ ಹಾಕಿ  ಅಲ್ಲಿಯೇ ಹೊರಗಡೆ  ನಿಂತಿದ್ದ ಒಬ್ಬರಿಗೆ ” ಸಾರ್,  ಈ ರಸ್ತೆ ಆಗುಂಬೆಗೆ ಹೋಗುತ್ತಾ ” ಅಂತ ನಾನು  ಕೇಳಿದೆ.   ಹಾಗೆ ಕೇಳಿದ ತಕ್ಷಣ ಅವರು ಮತ್ತೆ ಅಲ್ಲಿಯೇ ಅವರ ಜೊತೆಗೆ ನಿಂತಿದ್ದ ಇನ್ನೊಬ್ಬರು ಮುಖ ಮುಖ ನೋಡಿಕೊಂಡು, ವಿಚಿತ್ರವಾಗಿ ನಮ್ಮನ್ನು ನೋಡಿದರು.  ನಮಗೂ ಯಾಕೆ ಹಾಗೆ ನೋಡಿದರು ಅಂತ ಗೊತ್ತಾಗಲಿಲ್ಲ.  ಆ ಇಬ್ಬರು ನಮ್ಮ ಕಾರಿನ ಹತ್ತಿರ ಬಂದು ” ಎಲ್ಲಿಂದ ಬರುತ್ತಿದ್ದೀರಿ ” ಅಂತ ಕೇಳಿದರು.  ನಾನು ” ಧರ್ಮಸ್ಥಳದಿಂದ  ಬರುತ್ತಿದ್ದೀವಿ, ಸಾಗರಕ್ಕೆ ಹೋಗಬೇಕು” ಅಂತ ಹೇಳಿದೆ.  ಅದಕ್ಕೆ ಅವರು ಹೇಳಿದ್ದನ್ನು ಕೇಳಿ ನನಗೆ ಮತ್ತು ಮಹೇಶನಿಗೆ ಸ್ವಲ್ಪ ಆಘಾತವಾಯಿತು.  ಯಾಕೆಂದರೆ ಅವರು ಏನು ಹೇಳಿದ್ದು ಅಂದರೆ ನಾವು ಮತ್ತೆ ಧರ್ಮಸ್ಥಳದ ಕಡೆಗೆ ಹೋಗುವ ದಾರಿಯಲ್ಲಿ ಹೋಗುತ್ತಿದ್ದೇವೆ  ಎಂದು. ಸ್ವಲ್ಪ ಹೊತ್ತು ಅದನ್ನು ನಮಗೆ ನಂಬಲು ಸ್ವಲ್ಪ ಕಷ್ಟವಾಯಿತು. ಅವರು ನಮ್ಮನ್ನು ವಿಚಿತ್ರ ಪ್ರಾಣಿಗಳಂತೆ ನೋಡುತ್ತಿದ್ದರು. 

ಆದರೂ ಅವರಿಗೆ ಧನ್ಯವಾದ ಹೇಳಿ,  ಅಲ್ಲೇ  ಕಾರು ತಿರುಗಿಸಿಕೊಂಡು ಅಲ್ಲಿಂದ ಸ್ವಲ್ಪ ದೂರ ಬಂದ ಮೇಲೆ ಕಾರ್ಕಳಕ್ಕೆ ಸ್ವಾಗತ ಅಂತ ದೊಡ್ಡ ಫಲಕ ಕಾಣಿಸಿತು. ನಾವಿಬ್ಬರು ಸ್ವಲ್ಪ ಹೊತ್ತು ಏನು ಮಾತನಾಡಲೇ ಇಲ್ಲ.   ಕಾರ್ಕಳ ದಾಟಿ ಸುಮಾರು ದೂರ ಬಂದ ಮೇಲೆ ಮಹೇಶ ”  ಅವಾಗ ಕೂಡ ಕಾರ್ಕಳಕ್ಕೆ ಸ್ವಾಗತ ಅನ್ನುವ ಫಲಕ ನೋಡಿದ್ದೆ, ಅದನ್ನು ದಾಟಿ  ಮುಂದೆ ಬಂದು ಬಹಳ ಹೊತ್ತು ಆಗಿತ್ತು,  ಬೈಪಾಸ್ನಲ್ಲಿ ಬಂದಿದ್ದರಿಂದ ಊರು ಬಹಳ ಬೇಗ ದಾಟಿದ್ದೆ,  ಅದಕ್ಕೆ ನೀನು  ಮಲಗಿ ಎದ್ದ ಮೇಲೆ, ಕಾರ್ಕಳ ದಾಟಿದೆವು ಅಂತ ಹೇಳಿದ್ದು, ಮತ್ತೆ ಹೇಗೆ ಧರ್ಮಸ್ಥಳದ ಕಡೆಗೆ ಹೊರಟೆವು ಅಂತಾನೇ ಗೊತ್ತಾಗುತ್ತಾ ಇಲ್ಲ.  ” ಎಂದು ಹೇಳಿದ. ಎಷ್ಟು ಯೋಚನೆ ಮಾಡಿದರು ಹೇಗೆ ಮತ್ತೆ ಧರ್ಮಸ್ಥಳದ ಕಡೆಗೆ ವಾಪಸು ಹೇಗೆ  ಹೊರೆಟೆವು ಅಂತ ಗೊತ್ತಾಗಲೇ ಇಲ್ಲ. ಸಾಗರ ತಲುಪುವ ವರೆಗೂ ಅದರ ಬಗ್ಗೆನೇ ಮಾತನಾಡುತ್ತ ಬಂದರು ಹೇಗೆ ಅದು ಸಾಧ್ಯವಾಯಿತು ಅಂತ ತಿಳಿಯಲೇ ಇಲ್ಲ . 

ಅವತ್ತು  ಧರ್ಮಸ್ಥಳದಿಂದ ಹೊರಟು ಕಾರ್ಕಳದ ತನಕ ಬಂದು ಮತ್ತೆ ವಾಪಸು ಧರ್ಮಸ್ಥಳದ ಕಡೆಗೆ ಹೇಗೆ ಹೋದೆವು ಎಂಬ  ಪ್ರಶ್ನೆಗೆ  ಇವತ್ತಿಗೂ ಉತ್ತರ ಸಿಕ್ಕಿಲ್ಲ. 

ಅದಾದ ಮೇಲೆ ಪ್ರತಿ ಸರಿ ಆ ದಾರಿಯಲ್ಲಿ ಹೋಗುವಾಗ ಅವತ್ತು ಹೀಗೆ  ಆಗಿರಬಹುದು,  ಹಾಗೆ ಆಗಿರಬಹುದು ಅಂತ  ಉತ್ತರ ಹುಡುಕುವ ಪ್ರಯತ್ನ ಮಾಡುತ್ತಾ ಇರುತ್ತೇವೆ. 

ಅವತ್ತು ಆ ಕಗ್ಗತ್ತಲ ರಾತ್ರಿಯಲ್ಲಿ ಆಗಿದ್ದಾದರೂ ಏನು?

– ಶ್ರೀನಾಥ್ ಹರದೂರ ಚಿದಂಬರ 

2 thoughts on “ಕಗ್ಗತ್ತಲ ರಾತ್ರಿಯಲ್ಲಿ ಆಗಿದ್ದಾದರೂ ಏನು?

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s