ಆ ದೇವಸ್ಥಾನ ಕಟ್ಟಲು ಉಪಯೋಗಿಸಿದ ಗ್ರಾನೈಟ್ ಒಂದು ಲಕ್ಷ ಟನ್ ಗಿಂತಲೂ ಜಾಸ್ತಿ !! ಯಾವ ದೇವಸ್ಥಾನ ಗೊತ್ತಾ ?

ಈ ದೇವಸ್ಥಾನ ಕಟ್ಟಿ ಸರಿ ಸುಮಾರು ಸಾವಿರ ವರುಷಗಳೇ ಕಳೆದಿವೆ, ಆರು ಬಾರಿ  ಭೂಕಂಪನ ಸಂಭವಿಸಿದೆ ಆದರೂ ಇವತ್ತಿನವರೆಗೂ ಒಂದೇ ಒಂದು ಇಂಚು ಬಾಗದೆ  ಒಂದು ಲಕ್ಷಟನ್ ಗಿಂತಲೂ ಜಾಸ್ತಿ   ತೂಕದ ಕಲ್ಲಿನ ಗೋಪುರವನ್ನು ಹೊತ್ತು ಅಲ್ಲಾಡದೆ ನಿಂತಿದೆ.  ಆದುನಿಕ ಜಗತ್ತಿನ ತಂತ್ರಜ್ಞಾನಕ್ಕೆ ಒಂದು ಸವಾಲು ಈ ದೇವಸ್ಥಾನ.  ಈ ದೇವಸ್ಥಾನ ಇರುವುದು ತಮಿಳುನಾಡಿನಲ್ಲಿ .   ಅದುವೇ  ತಂಜಾವೂರಿನ  ಬೃಹದೇಶ್ವರ ( ಶಿವನ) ದೇವಸ್ಥಾನ.

ಈ ದೇವಸ್ಥಾನದ ಅನೇಕ ವಿಷಯಗಳು ಇವತ್ತಿಗೂ ಅಚ್ಚರಿಯನ್ನುಂಟು ಮಾಡುತ್ತದೆ.  ದೇವಸ್ಥಾನಕ್ಕೆ ಉಪಯೋಗಿಸಿರುವ ಪ್ರತಿಯೊಂದು ಕಲ್ಲು ಕೂಡ ಪ್ರಪಂಚದಲ್ಲೇ ಅತಿ  ಗಟ್ಟಿಯಾದ ಕಲ್ಲು ಎಂದು ಹೆಸರು ಪಡೆದಿರುವ ಗ್ರಾನೈಟ್.  ಇಡೀ ದೇವಸ್ಥಾನ ಕಟ್ಟಲು ಉಪಯೋಗಿಸಿರುವ ಗ್ರಾನೈಟ್  ಒಂದು ಲಕ್ಷ ಟನ್ ಗಿಂತಲೂ ಜಾಸ್ತಿ. ಅದಲ್ಲದೆ ಇಡೀ ದೇವಸ್ಥಾನವನ್ನು  ಒಂದೇ ರೀತಿಯ ಗ್ರಾನೈಟ್ ಕಲ್ಲಿನಿಂದ ಕಟ್ಟಿದ್ದಾರೆ.   ಆಶ್ಚರ್ಯಕರ ವಿಷಯ ಅಂದರೆ ತಂಜಾವೂರಿನ ಸುತ್ತಮುತ್ತ ಸುಮಾರು ನೂರು ಕಿಲೋಮೀಟರು ಸುತ್ತಳತೆಯಲ್ಲಿ ಎಲ್ಲಿ ಹುಡುಕಿದರೂ ನಿಮಗೆ ಗ್ರಾನೈಟಿನ ಸುಳಿವು ಕೂಡ ಸಿಗಲ್ಲ. ಹಾಗಾದರೆ  ಸಾವಿರ ವರುಷಗಳ ಹಿಂದೆ,  ಯಾವುದೇ  ಟ್ರಕ್ ಇರಲಿಲ್ಲ,  ರಸ್ತೆಗಳಿರಲಿಲ್ಲ, ಹಾಗಿದ್ದರೂ ಇಷ್ಟು ಮಾತ್ರದ ಗ್ರಾನೈಟ್ ಕಲ್ಲನ್ನು ಹೇಗೆ, ಎಲ್ಲಿಂದ ತಂದರು ಅಂತ ಯೋಚನೆ ಮಾಡಿದರೇನೇ ಮೈ ಜುಮ್ಮೆನಿಸುತ್ತದೆ. ಸಿಕ್ಕಿರುವ ಕೆಲವು ಆಧಾರಗಳ ಮೇಲೆ ಹೇಳುವುದಾದರೆ ಅವರು ಅಷ್ಟು ದೊಡ್ಡ ಮಟ್ಟದ ಗ್ರಾನೈಟ್ ಕಲ್ಲನ್ನು ತಂದಿದ್ದು ಗುಜರಾತಿನ ಕಡೆಯಿಂದ ಇರಬಹುದು ಎಂದು ಹೇಳುತ್ತಾರೆ. ಅವರು ದೇವಸ್ಥಾನ ಕಟ್ಟಲು ಉಪಯೋಗಿಸಿದ ಆನೆಗಳ ಸಂಖ್ಯೆ ಮೂರು ಸಾವಿರಕ್ಕೂ ಹೆಚ್ಚು. 

ಹಾಗಾದರೆ  ಈ ಮಹಾನ್ ದೇವಸ್ಥಾನವನ್ನು ಕಟ್ಟಿದ  ಅವರು ಯಾರು ?  ಅವರೇ ಚೋಳ ರಾಜ ವಂಶಸ್ತ ರಾಜ ರಾಜ ಚೋಳ ೧.  ಚೋಳ ರಾಜ ವಂಶದವರು 850 – 1280 CE ವರೆಗೆ ತುಂಬ ಪ್ರಬಲರಾಗಿ ದಕ್ಷಿಣ ಭಾರತವನ್ನು ಆಳಿದ್ದರು. ಆ ಸಮಯದಲ್ಲಿ ಅವರು ಕಟ್ಟಿದ ಅನೇಕ ಪ್ರಸಿದ್ಧ  ಹಾಗು ಪ್ರಮುಖ ದೇವಸ್ಥಾನಗಳಲ್ಲಿ ಬೃಹದೇಶ್ವರ ದೇವಸ್ಥಾನವೂ ಒಂದು.

ಈ  ದೇವಸ್ಥಾನವನ್ನು 1003ರಿಂದ  -1010 AD ರ ತನಕ,  ೬ ರಿಂದ ೭ ವರುಷದೊಳಗೆ ದ್ರಾವಿಡ ಶೈಲಿಯಲ್ಲಿ ಕಟ್ಟಿದ್ದರು.  ದೇವಸ್ಥಾನವನ್ನು ಕಟ್ಟಲು ಯಾವುದೇ ಫೌಂಡೇಶನ್  ಉಪಯೋಗಿಸಿಲ್ಲ,  ಸಮತಟ್ಟಾದ ನೆಲದ ಮೇಲೆ  ಒಂದು ಕಲ್ಲಿಗೆ ಇನ್ನೊಂದು ಕಲ್ಲನ್ನು ಕೂಡಿಸಿ, ಸಿಮೆಂಟ್ ಅಥವಾ ಸುಣ್ಣವನ್ನು ಉಪಯೋಗಿಸಿದೆ  ಆಯತಾಕಾರದಲ್ಲಿ  ( ಇನ್ನೂರ ನಲವತ್ತೊಂದು ಮೀಟರ್  ಪೂರ್ವದಿಂದ ಪಶ್ಚಿಮಕ್ಕೆ,    ನೂರಾ ಇಪ್ಪತ್ತು ಮೀಟರು  ಉತ್ತರದಿಂದ ದಕ್ಷಿಣಕ್ಕೆ)  ಕಟ್ಟಿರುವ ದೇವಸ್ಥಾನವಿದು. ಪೂರ್ಣ ದೇವಸ್ಥಾನದ ಎತ್ತರ ಅರವತ್ತ ಆರು ಮೀಟರ್ ಅಂದರೆ ಇನ್ನೂರ ಹದಿನೇಳು ಫೀಟ್ ಆಗುತ್ತದೆ.  ಅಂದರೆ ಹದಿಮೂರು ಅಂತಸ್ತಿನ ಕಟ್ಟಡದಷ್ಟು ಎತ್ತರ. ಗೋಪುರದ  ( ವಿಮಾನ) ತುದಿಯಲ್ಲಿ ಇರುವ  ಶಿಖರ( ಕುಂಭ) ಒಂದೇ ಕಲ್ಲಿನಿಂದ ಕೆತ್ತಿದ್ದು ಹಾಗು ಇದರ ತೂಕವೇ ಎಂಬತ್ತು ಟನ್ ತೂಕ ಇದೆ.  ಇವತ್ತಿಗೂ ಪ್ರತಿಯೊಬ್ಬರು ಅಚ್ಚರಿ ಪಡಬೇಕಾಗಿದ್ದು  ಅಷ್ಟು ತೂಕದ ಕುಂಭವನ್ನು ಅಷ್ಟು ಎತ್ತರಕ್ಕೆ ಹೇಗೆ ತೆಗೆದುಕೊಂಡು ಹೋದರು ಅಂತ. 

ಕೆಲವರ ಪ್ರಕಾರ ವಿಮಾನ ( ಗೋಪುರ) ಕಟ್ಟಿ ಆದ ನಂತರ ಅದರ ತುದಿಯಿಂದ ಸರಿ ಸುಮಾರು ಆರು ಕಿಲೋಮೀಟರು ದೂರದ ತನಕ ಮಣ್ಣಿನ   ಇಳಿಜಾರು  ದಿಬ್ಬ ಮಾಡಿ, ಎಂಬತ್ತು ಟನ್ ತೂಕದ ಈ ಶಿಖರವನ್ನು  ನೂರಾರು ಆನೆಗಳು, ಸಾವಿರಾರು ಕೆಲಸಗಾರರ ನೆರವಿನಿಂದ ತಂದು ದೇವಸ್ಥಾನದ ಗೋಪುರದ ಮೇಲೆ ಕೂರಿಸಿದರು.  

ಈ ದೇವಸ್ಥಾನದ ಇನ್ನೊಂದು ವಿಶೇಷ ಅಂದರೆ ದೇವಸ್ಥಾನದ ಆವರಣದಲ್ಲಿರುವ ನಂದಿ.  ಈ ನಂದಿಯು ಕೂಡ ಏಕ ಶಿಲೆಯಿಂದ ಕೆತ್ತಲ್ಪಟ್ಟಿದೆ ಹಾಗು ಅದರ ತೂಕ ಎಷ್ಟು ಗೊತ್ತಾ ? ಇಪ್ಪತ್ತೈದು ಟನ್ ಗಳು. 

ಈ ದೇವಸ್ಥಾನದ ಗೋಪುರದ ನೆರಳು  ನೆಲಕ್ಕೆ ಬೀಳುವುದಿಲ್ಲ ಎಂದು  ಕೆಲವರು ಹೇಳುತ್ತಾರೆ.   ಇನ್ನು ಕೆಲವರು  ಗೋಪುರದ ಶಿಖರದ ನೆರಳು ಮದ್ಯಾಹ್ನ ೧೨ ಗಂಟೆಗೆ ತನ್ನೊಳಗೆ ಸೇರಿಕೊಳ್ಳುವ ಹಾಗೆ ಅದನ್ನು ಕಟ್ಟಿದ್ದಾರೆ ಎಂದು ಕೂಡ ಹೇಳುತ್ತಾರೆ.   ಹಿಂದೆ ದೇವಸ್ಥಾನವನ್ನು ಕಟ್ಟಿ ಆದ ಮೇಲೆ ರಾಜ ರಾಜ ಚೋಳ ೧ ನಿಗೆ ಈ ಗೋಪುರ  ಬೀಳುವುದಿಲ್ವಾ? ಎಂದು ಕೇಳಿದಾಗ  ಅದರ ನೆರಳು ಕೂಡ ಬೀಳುವುದಿಲ್ಲ ಎಂದು ಹೇಳಿದನಂತೆ, ಅದನ್ನೇ ಜನರು ಮುಂದೆ ಗೋಪುರದ ನೆರಳು ನೆಲಕ್ಕೆ ಬೀಳುವುದಿಲ್ಲ ಎಂದು ಹೇಳುತ್ತಾ ಹೋದರು ಎಂಬ ಮಾತು ಕೂಡ ಕೇಳಿ ಬರುತ್ತದೆ. 

ದೇವಸ್ಥಾನದ ದ್ವಾರಭಾಗಿಲು,  ದೇವಸ್ಥಾನದ ಆವರಣ, ನಂದಿ, ಮುಖ್ಯ ದೇವಸ್ಥಾನ,  ದೇವಸ್ಥಾನದ ಗೋಪುರ, ಅದರ ಶಿಖರ, ಕಲ್ಲಿನ ಮೇಲಿನ ಕೆತ್ತನೆಗಳು, ದೇವಸ್ಥಾನ ಕಟ್ಟಿರುವ ಶೈಲಿ ನಿಮ್ಮನ್ನು ಮಂತ್ರ ಮುಗ್ದರನ್ನಾಗಿ ಮಾಡಿ ಬಿಡುತ್ತದೆ. 

ಜೀವನದಲ್ಲಿ ಒಮ್ಮೆಯಾದರೂ ನೀವು ನೋಡಿ ಬರಬೇಕಾದ ದೇವಸ್ಥಾನ ಇದು.  ಸಮಯ ಮಾಡಿಕೊಂಡು ಹೋಗಿ ಒಮ್ಮೆ ಭೇಟಿ ಕೊಡಿ. 

– ಶ್ರೀನಾಥ್ ಹರದೂರ ಚಿದಂಬರ

3 thoughts on “ಆ ದೇವಸ್ಥಾನ ಕಟ್ಟಲು ಉಪಯೋಗಿಸಿದ ಗ್ರಾನೈಟ್ ಒಂದು ಲಕ್ಷ ಟನ್ ಗಿಂತಲೂ ಜಾಸ್ತಿ !! ಯಾವ ದೇವಸ್ಥಾನ ಗೊತ್ತಾ ?

  1. ಧನ್ಯವಾದಗಳು… ಇಂತಹ ಅನೇಕ ಅದ್ಭುತ ವಿಚಾರಗಳು ನಮ್ಮ ಪಠ್ಯ ಪುಸ್ತಕಗಳಲ್ಲಿ ಇಲ್ಲದೆ ಇರುವುದು ಖೇದದ ವಿಚಾರ. ನಾವು ಓದಿ ತಿಳಿದು ಬೇರೆಯವರಿಗೆ ತಿಳಿಸುವ ಒಂದು ಸಣ್ಣ ಪ್ರಯತ್ನ.

    Liked by 1 person

Leave a comment