ಇಂತವರು ಸಮಾಜಕ್ಕೆ ಬೇಕಲ್ಲವೇ?

ಯಾವುದೋ ಒಬ್ಬ ಪ್ರಸಿದ್ಧ ನಟನೋ ಅಥವಾ ಆಟಗಾರನೋ  ದೀಪಾವಳಿಗೆ ಪಟಾಕಿ ಹೊಡಿಬೇಡಿ ಅಂತ ಹೇಳಿದ ತಕ್ಷಣ ನಮ್ಮಲ್ಲಿ ಕೋಪ, ಅಸಹನೆ ಉಕ್ಕಿ ಬರುತ್ತೆ, ಇವನ್ಯಾರು ಪಟಾಕಿ ಹೊಡಿಬೇಡಿ ಅಂತ ಹೇಳೋದು, ಅವರ  ಮದುವೇಲಿ ಪಟಾಕಿ ಹೊಡೆದಾಗ ಪರಿಸರ ಹಾಳಾಗಿರಲಿಲ್ಲ, ಈಗ ಮಾತ್ರ ಆಗುತ್ತಾ? ಅಂತ ಅವನನ್ನು ಉಗಿಯುತ್ತೀವಿ. ಇನ್ಯಾರೋ  ಪ್ರೊಫೆಸರ್ ನಾವು ಇಷ್ಟು  ದಿವಸ ನಂಬಿಕೊಂಡು, ಪೂಜಿಸಿಕೊಂಡು ಬಂದ ದೇವರನ್ನು ಬೈದಾಗ ಅವನ ಮೇಲೆ ಕೋಪ ಉಕ್ಕಿ ಬರುತ್ತೆ, ಆತ ಹೇಳುವುದನ್ನು ಟಿವಿ ಯಲ್ಲಿ,  ಸಾಮಾಜಿಕ ಜಾಲತಾಣಗಳಲ್ಲಿ  ನೋಡಿ ಅವನನ್ನು ಮನಸಾರೆ ಬೈಯುತ್ತೇವೆ. 

ಮೇಲಿನ ಎರಡು ಸನ್ನಿವೇಶಗಳಲ್ಲೂ ನಮ್ಮ ಹಬ್ಬ ಹರಿದಿನಗಳ ಆಚರಣೆ,  ನಮ್ಮ ಭಾಷೆ ,  ನಮ್ಮ ಸಂಪ್ರದಾಯ, ನಮ್ಮ ಸಂಸ್ಕೃತಿ ಬಗ್ಗೆ ನಮ್ಮವರೇ ಹೀಗೆಳೆದಾಗ ಕೋಪ ಬರುವುದು ಸಹಜ.  ಆದರೆ ಒಂದು ವಿಷಯ ನೆನಪಿರಲಿ  ಸಾವಿರಾರು ವರುಷಗಳಿಂದ ನಮ್ಮ ಸಂಸ್ಕೃತಿಯಾಗಲಿ ಅಥವಾ ನಮ್ಮ ಆಚರಣೆ, ಸಂಪ್ರದಾಯಗಳನ್ನು  ಬೇರೆ ಕಡೆಯಿಂದ ಬಂದ ಮುಘಲರಿಗಾಗಲಿ, ಬ್ರಿಟಿಷರಿಗಾಗಲಿ ನಾಶ ಮಾಡಲು ಸಾಧ್ಯವಾಗಲಿಲ್ಲ. ಇನ್ನು ಇವರ್ಯಾರೋ ಬಿಟ್ಟಿ  ಪ್ರಚಾರಕ್ಕೋ,  ರಾತ್ರೋ ರಾತ್ರಿ  ಕುಖ್ಯಾತಿ ಗಳಿಸಲಿಕ್ಕೋ, ದುಡ್ಡಿನ ಆಸೆಗೋ,  ರಾಜಕೀಯಕ್ಕೋ ಅಥವಾ ಇನ್ನ್ಯಾವುದೋ  ತೆವಲಿಗೆ  ತಮ್ಮದೇ ಧರ್ಮ, ಆಚರಣೆ, ಸಂಪ್ರದಾಯದ ಬಗ್ಗೆ ಹೇಳಿದರೆ  ಧರ್ಮ, ಸಂಸ್ಕೃತಿ, ಸಂಪ್ರದಾಯಗಳು ನಾಶವಾಗಿಬಿಡುತ್ತವೆಯೇ? ಖಂಡಿತ ಇಲ್ಲ.  ಇಂತವರಿಂದ ನಮಗೆ ಲಾಭವೇ ಸರಿ, ಯಾಕೆಂದರೆ ಅವರು ಈ ರೀತಿ ಮಾತನಾಡಿದಾಗೆಲ್ಲ,  ನಮ್ಮ ಸಂಸ್ಕೃತಿ ಬಗ್ಗೆ, ಹಬ್ಬ ಹರಿದಿನಗಳ ಆಚರಣೆ ಬಗ್ಗೆ ನಾವು ತಿಳಿಯಲು ಪ್ರಯತ್ನ ಪಡುತ್ತೇವೆ. ಅದನ್ನು ಅರ್ಥ ಮಾಡಿಕೊಂಡು ಆಚರಿಸುವ ಕಡೆ ಗಮನ ನೀಡುತ್ತೇವೆ. ಅದನ್ನು ತಿಳಿ ಹೇಳುವ ಅನೇಕ ಲೇಖನಗಳು, ವಿಡಿಯೋಗಳು ಹೊರಬರುತ್ತವೆ. ಸಾಮಾಜಿಕ ಜಾಲತಾಣಗಳ ಮೂಲಕ ಜನರಿಗೆ ತಲುಪುತ್ತವೆ. ಯಾವುದೇ ಆಯುಧ ಉಪಯೋಗಿಸದೆ ಇಟ್ಟರೆ ತುಕ್ಕು ಹಿಡಿದು, ಮೊಂಡಾಗಿ ಅದರ ಮೂಲ ರೂಪ ಕಳೆದುಕೊಳ್ಳುತ್ತದೆ. ಅಂತಹದರಲ್ಲಿ ನಮ್ಮ ಆಚರಣೆಗಳ ಬಗ್ಗೆ, ಧರ್ಮಮತ್ತು ಸಂಸ್ಕೃತಿಗಳ  ಬಗ್ಗೆ  ನಾವೇ ಅರ್ಥ ಮಾಡಿಕೊಳ್ಳದೆ, ಅದರ ಬಗ್ಗೆ ಸರಿಯಾಗಿ ತಿಳಿದುಕೊಳ್ಳದೆ ಇದ್ದರೆ ಅದರ ಮೂಲ ಅರ್ಥ ಕಳೆದುಕೊಳ್ಳುತ್ತದೆ.  ಆಗ  ಇಂತವರು ಹೇಳುವುದು ನಮ್ಮ ಮುಂದಿನ ಪೀಳಿಗೆಯವರಿಗೆ ನಿಜ ಅನ್ನಿಸಿದರೆ ಆಶ್ಚರ್ಯವೇನಿಲ್ಲ. 

ನಮ್ಮ ಧರ್ಮ, ಸಂಸ್ಕೃತಿ, ಆಚಾರ ವಿಚಾರಗಳನ್ನು ನಾವೇ ಅರ್ಥ ಮಾಡಿಕೊಳ್ಳದೆ,  ನಮ್ಮ ಮುಂದಿನ ಪೀಳಿಗೆಗೆ ಅದನ್ನು ದಾಟಿಸದೆ ಇದ್ದರೆ ನಿಜವಾಗಿಯೂ ಅದನ್ನು ಉಳಿಸಿಕೊಳ್ಳಲು ಹೋರಾಟ ಮಾಡುವ ಸಂದರ್ಭ ಬಂದೊದಗಬಹುದು. ಇಂತಹವರಿಂದ ನಮಗೆ ಆಗುವ ಲಾಭ ಏನೆಂದರೆ,  ಆಗಾಗ ನಮಗೆ ನಮ್ಮ ಧರ್ಮ, ಸಂಸ್ಕೃತಿ, ಆಚರಣೆ ಮತ್ತು  ವಿಚಾರಗಳ ಬಗ್ಗೆ  ಸಾಣೆ ಹಿಡಿದುಕೊಳ್ಳುವ ಹಾಗೇ ಮಾಡುವುದರಿಂದ ನಮ್ಮ ಧರ್ಮ, ಸಂಸ್ಕೃತಿ, ಆಚಾರ, ವಿಚಾರಗಳು ಇನ್ನಷ್ಟು ಗಟ್ಟಿಯಾಗುತ್ತ ಹೋಗುತ್ತದೆ. ಯಾವಾಗ ನಾವು ನಮ್ಮ ಸುತ್ತ ಮುತ್ತ  ಸ್ವಚ್ಛತೆ ಕಾಪಾಡಿಕೊಳ್ಳದೆ ಇದ್ದರೆ ಕೊಚ್ಚೆ  ಊರೆಲ್ಲ ತುಂಬಿಕೊಳ್ಳುತ್ತೋ,   ಗಿಡಗಳ ಬೇರು ಸಡಿಲವಾದರೆ  ಪಕ್ಕದಲ್ಲಿ ಬೆಳೆದ ಕಳೆ  ಆ ಗಿಡವನ್ನೇ ಮೀರಿ ಬೆಳೆದು ಆ ಗಿಡವನ್ನು ನಾಶ ಮಾಡೋತ್ತೋ  ಹಾಗೆ ಇವರೆಲ್ಲ ನಮ್ಮ ಸಮಾಜದಲ್ಲಿನ ಕೊಚ್ಚೆ ಮತ್ತು  ಕಳೆಗಳು.     ಆಗಾಗ ಸ್ವಚ್ಛತೆ ಮಾಡಿಕೊಳ್ಳುತ್ತ ಇದ್ದರೆ ಊರು ಕೊಚ್ಚೆ ಆಗುವುದಿಲ್ಲ. ಗಿಡಗಳ ಬೇರು ಗಟ್ಟಿ ಇದ್ದರೆ ಎಷ್ಟೇ ಕಳೆ ಬೆಳೆದರು ಗಿಡ ನಾಶವಾಗುವುದಿಲ್ಲ.    ನಮ್ಮ ಧರ್ಮ, ಸಂಸ್ಕೃತಿ, ಹಬ್ಬ, ಹರಿದಿನಗಳ ಆಚರಣೆ ಅರ್ಥ ಮಾಡಿಕೊಂಡು ವಿಜೃಂಭಣೆಯಿಂದ ಮಾಡುತ್ತಾ ಹೋದರೆ  ಧರ್ಮ ಮತ್ತು ಸಂಸ್ಕೃತಿ ಇನ್ನಷ್ಟು ಆಳಕ್ಕೆ ಬೇರು ಬಿಡುತ್ತದೆ. 

ಊರಲ್ಲಿ ಕೊಚ್ಚೆ ಇದ್ದೆ ಇರುತ್ತೆ, ಸ್ವಚ್ಛ ಮಾಡುತ್ತಿರಬೇಕು, ಕಳೆಗಳು ಬೆಳೆಯುತ್ತಲೇ ಇರುತ್ತವೆ, ಕಿತ್ತು ಹಾಕುತ್ತಿರಬೇಕು ಅಷ್ಟೇ. 

ಇಂತಹ  ಕೊಚ್ಚೆ ಮತ್ತು ಕಳೆಗಳು  ನಮ್ಮ ಸಮಾಜದಲ್ಲಿ ಇದ್ದರೆ ನಮಗೆ ನಮ್ಮ ಧರ್ಮ, ಸಂಸ್ಕೃತಿ, ಹಬ್ಬಗಳ ಆಚರಣೆ ಬಗ್ಗೆ ಮತ್ತಷ್ಟು ಅರಿವು ಮೂಡಿ  ಧರ್ಮದ ಬೇರುಗಳು ಆಳಕ್ಕೆ ಇಳಿಯುತ್ತ ಹೋಗುತ್ತವೆ. 

ಇಂತವರು ಸಮಾಜಕ್ಕೆ ಬೇಕಲ್ಲವೇ? 

– ಶ್ರೀನಾಥ್  ಹರದೂರ ಚಿದಂಬರ 

4 thoughts on “ಇಂತವರು ಸಮಾಜಕ್ಕೆ ಬೇಕಲ್ಲವೇ?

  1.   ನಮ್ಮ ನಾಡ ಸಂಸ್ಕೃತಿಯ ಬಗ್ಗೆ ಮುಂದಿನ ಪೀಳಿಗೆಗೆ ಮಾಹಿತಿ,ಗೌರವ, ತಿಳುವಳಿಕೆ ಸಾಮಾಜಿಕ ಕಳಕಳಿಯ ಪರಿಚಯಿಸುವ ಅಗತ್ಯವಿದೆ..🙏😊

    Like

    • ಧನ್ಯವಾದಗಳು… ನಿಮ್ಮ ಮಾತು ತುಂಬ ಸರಿಯಾಗಿದೆ… ನಾವು ಮುಂದಿನ ಪೀಳಿಗೆಗೆ ನಮ್ಮ ಸಂಸ್ಕೃತಿ, ಭಾಷೆಗಳ ಮಾಹಿತಿ, ತಿಳುವಳಿಕೆ ನೀಡಲೇ ಬೇಕು ಹಾಗು ಅದು ನಮ್ಮ ಜವಾಬ್ಧಾರಿ ಕೂಡ ಆಗಿದೆ.

      Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s