ಗುಂಡ ಕಳೆದುಹೋದಾಗ…

ಗುಂಡನ   ಇಡೀ ಮೈ ಗಡಗಡನೆ ಚಳಿಗೆ ನಡುಗುತ್ತಿತ್ತು.  ಅವನಿಗೆ  ಹಸಿವಿನಿಂದ  ಹೊಟ್ಟೆಯಲ್ಲಿ ಸಂಕಟ ಶುರುವಾಗಿ, ಒಂದು ಮರದ ಕೆಳಗಡೆ ಬಂದು ನಿಂತ.  ಅವನಿಗೆ ಬೆಳೆಗ್ಗಿನಿಂದ  ತಾನು ಇದ್ದ  ಮನೆಯ ದಾರಿ ಯಾಕೋ ಎಷ್ಟು ತಿರುಗಿದರು ಸಿಗುತ್ತಿರಲಿಲ್ಲ. ದಾರಿ ತಪ್ಪಿ ಮನೆಗೆ ಹೋಗಲು ಗೊತ್ತಾಗದೆ ಕಳೆದುಹೋಗಿದ್ದ.   ಜೋರಾಗಿ ಶುರುವಾಗಿದ್ದ ಮಳೆ ಕೊಂಚ ನಿಂತಿದ್ದರೂ,   ಮರದ ಎಲೆಗಳ ಮೇಲಿದ್ದ  ಆಗಾಗ ನೀರು ತೊಟ್ಟಿಕ್ಕಿ ಗುಂಡನ  ಮೇಲೆ ಬೀಳುತ್ತಿತ್ತು.  ಮೈ ಮೇಲೆ ನೀರು ಬಿದ್ದಾಗೆಲ್ಲ ಚಳಿ ಆಗಿ, ಸ್ವಲ್ಪ ಸ್ವಲ್ಪ ಆ ಕಡೆ ಈ ಕಡೆ ಜರುಗುತ್ತಾ,   ಅಲ್ಲಿಯೇ ಮರದ ಕೆಳಗಡೆ  ನಡುಗುತ್ತ ಹಾಗೆ ಮುದುಡಿ ಕುಳಿತ.  ಬೆಳೆಗ್ಗಿನಿಂದ ಮನೆಗೆ  ದಾರಿ ಹುಡುಕುತ್ತ  ಸುತ್ತಿದ್ದರಿಂದ  ತುಂಬಾ ಸುಸ್ತಾಗಿ ಹೋಗಿತ್ತು. ಹೊಟ್ಟೆಗೆ ಏನು ಸಿಕ್ಕದೆ ಇದ್ದುದ್ದರಿಂದ ಇದ್ದ ಶಕ್ತಿಯಲ್ಲ ಕರಗಿ ಹೋಗಿ, ಇನ್ನು ಒಂದು ಹೆಜ್ಜೆ ಕೂಡ ಮುಂದಿಡಲು ಆಗದೆ ನಿತ್ರಾಣವಾಗಿ  ಗುಂಡ  ಅಲ್ಲಿಯೇ ಕುಸಿದು ಕುಳಿತು ಬಿಟ್ಟ.   ಬೆಳಿಗ್ಗೆ ತಾನು ಮಾಡಿದ ಒಂದು ಸಣ್ಣ ತಪ್ಪಿಗೆ ಇಷ್ಟೆಲ್ಲ ಕಷ್ಟ ಅನುಭವಿಸಬೇಕಾಯಿತಲ್ಲ ಅಂತ ಕೊರಗುತ್ತ,  ಯಾರಾದರೂ ಬರುತ್ತಾರಾ, ಬಂದರೆ ಕೂಗಿದರಾಯಿತು  ಅಂತ ಎಂದುಕೊಂಡು, ದಾರಿ ಕಡೆ  ನೋಡುತ್ತಾ ಅಲ್ಲಿಯೇ ಕುಳಿತ. 

ಬೆಳಿಗ್ಗೆ ಗುಂಡ  ಊಟ ಮಾಡಿ ಮನೆಯ ಅಂಗಳದಲ್ಲಿ ಆಡುತ್ತ ಇದ್ದ.  ಯಾರೋ ಮನೆಯ ಗೇಟ್ ಹಾಕದೆ ಹಾಗೆ ತೆರೆದು ಹೋಗಿದ್ದರು.     ಗುಂಡ  ಆಡುತ್ತ ಗೇಟಿನ ಬಳಿ ಬಂದಾಗ ಗೇಟ್ ಓಪನ್ ಆಗಿದ್ದನ್ನು ನೋಡಿ ಗೇಟಿನ ಹೊರಗಡೆ ಬಂದ. ಹೊರಗಡೆ  ಯಾವುದೊ ಒಂದು ಸಣ್ಣ ನಾಯಿ ಮರಿ ನೋಡಿ ಅದನ್ನು ಮಾತನಾಡಿಸಲು ಅದರ ಹಿಂದೆ ಹೋಗಿದ್ದಾನೆ.  ಅದು ಇವನನ್ನು ನೋಡಿ ಒಡಲು ಶುರು ಮಾಡಿದೆ. ಗುಂಡ ಕೂಡ ಓಡಲು  ಶುರು ಮಾಡಿದ್ದಾನೆ.  ಸುಮಾರು ದೂರ ಆ ನಾಯಿ ಮರಿಯ ಹಿಂದೆ  ಓಡುತ್ತಾ ಹೋದ ಗುಂಡನಿಗೆ ತಾನು ಬಂದ ದಾರಿ ಮರೆತೇ ಹೋಗಿದೆ. ಅಲ್ಲೇ ಹಿಂದೆ ಮುಂದೆ ಸುತ್ತಿದ್ದರು ಮನೆಯ ದಾರಿ ಸಿಕ್ಕಿಲ್ಲ.  ದಾರಿಯಲ್ಲಿ ಯಾರ ಹತ್ತಿರ ಹೋದರು ಅವನಿಗೆ ಯಾರು ಸರಿಯಾಗಿ ಪ್ರತಿಕ್ರಿಯೆ ಕೊಟ್ಟಿಲ್ಲ.  ಗುಂಡನಿಗೆ ಮನೆಯಿಂದ ಖಂಡಿತ ನನ್ನನ್ನು ಯಾರಾದರೂ ಹುಡುಕಿಕೊಂಡು ಬಂದೆ ಬರುತ್ತಾರೆ ಅಂತ ನಂಬಿಕೆ ಇತ್ತು. ಹಾಗಾಗಿ ಸಿಕ್ಕ ಸಿಕ್ಕ ದಾರಿಗಳೆಲ್ಲ  ಸುತ್ತುತ್ತ ಇದ್ದ. ಹೀಗೆ ಸುತ್ತುತ್ತಾ ಸಂಜೆ ಆಗುತ್ತಾ ಬಂದರು ಮನೆಯವರು ಯಾರು ಸಿಕ್ಕಿರಲಿಲ್ಲ,  ಮನೆಯ ದಾರಿ ಕೂಡ ಸಿಕ್ಕಿರಲಿಲ್ಲ. ಹೀಗಿರಬೇಕಾದರೆ ಇರುವ ಕಷ್ಟದ ಜೊತೆಗೆ ಇನ್ನಷ್ಟು ಕಷ್ಟ ಇರಲಿ, ಅನ್ನುವ ಹಾಗೆ ಜೋರಾಗಿ ಮಳೆ ಶುರುವಾಗಿ ಬಿಟ್ಟಿತ್ತು. 

ಹೀಗೆ ಬೆಳಗ್ಗಿನಿಂದ ಆಗಿದ್ದೆಲ್ಲ ನೆನಪಿಸಿಕೊಳ್ಳುತ್ತಾ ಅಲ್ಲೇ ಮರದ ಕೆಳಗೆ ಕುಳಿತ್ತಿದ್ದ ಗುಂಡನಿಗೆ ಯಾರೋ ದೂರದಲ್ಲಿ ” ಗುಂಡ, ಗುಂಡ” ಅಂತ ಕೂಗುತ್ತ ಧ್ವನಿ ಕೇಳಿ ಮೈಯ ಕೂದಲೆಲ್ಲ ನಿಮಿರಿತು. ಕೂಡಲೇ ಯಾರು ಕೂಗುತ್ತಿದ್ದರೋ ಆ ಕಡೆ ಇದ್ದ ಬದ್ದ ಶಕ್ತಿಯೆನ್ನಲ್ಲಾ ಕೂಡಿಸಿಕೊಂಡು ಓಡತೊಡಗಿದ.  ಅವರ ಹತ್ತಿರ ಹೋದ ಕೂಡಲೇ ಅವರು ಯಾರು ಅಂತ ಗೊತ್ತಾಗಿ ಅವರ ಮೇಲೆ ಹಾರಿದ. ಅವರು ಕೂಡ ಅವನನ್ನು ಮುದ್ದು ಮಾಡಿ ಎತ್ತಿಕೊಂಡು ಅವನನ್ನು ಹೊರಟರು. ಗುಂಡನಿಗೆ ಬಹಳ ಸಂತೋಷವಾಯಿತು.  ಅವರು ತಿನ್ನಲು ಬಿಸ್ಕತ್ ಕೊಟ್ಟರು. ಅದನ್ನು ತಿಂದ ಗುಂಡನಿಗೆ ಸ್ವಲ್ಪ ಜೀವ ಬಂತು. ಅವನನ್ನು ಎತ್ತಿಕೊಂಡು ಮನೆಗೆ ಕರೆದುಕೊಂಡು ಹೊರಟರು. ಮನೆಗೆ ಹೋದ ಕೂಡಲೇ ಗುಂಡ ತನ್ನನ್ನು ಯಾವಾಗಲೂ  ಕಟ್ಟಿ ಹಾಕುತ್ತಿದ್ದ ಜಾಗಕ್ಕೆ ಹೋಗಿ ಬೆಚ್ಚಗೆ ಕುಳಿತು,  ಇನ್ಮೇಲೆ ಯಾವತ್ತಿಗೆ  ಗೇಟ್ ದಾಟಿ ಹೋಗುವುದಿಲ್ಲ ಅಂತ ಮನಸ್ಸಿನಲ್ಲೇ ಶಪಥ ಮಾಡಿ, ತನಗೆ ಕೊಟ್ಟಿದ್ದ ಗೋಣಿ ಚೀಲವನ್ನು ಕಚ್ಚಿ ತನ್ನ ಮೇಲೆ ಎಳೆದುಕೊಂಡು ಬೆಚ್ಚಗೆ ಕುಳಿತ. 

ಬೆಳೆಗ್ಗಿನಿಂದ ಕಳೆದು ಹೋಗಿದ್ದ ನಾಯಿಮರಿ ಗುಂಡ ವಾಪಸು ಮನೆಯವರಿಗೆ ಸಿಕ್ಕಿದ್ದ. 

– ಶ್ರೀನಾಥ್ ಹರದೂರ ಚಿದಂಬರ 

2 thoughts on “ಗುಂಡ ಕಳೆದುಹೋದಾಗ…

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s