ಮಕ್ಕಳನ್ನ ಬೆಳೆಸಬೇಕೋ ಅಥವಾ ನಾವು ಬದಲಾಗಬೇಕೋ ?

ಮಕ್ಕಳನ್ನು ಹಾಗೆ ಬೆಳೆಸಬೇಕು, ಹೀಗೆ ಬೆಳೆಸಬೇಕು ಅಂತ ನಾವು ಅನೇಕ ವಿಡಿಯೋಗಳನ್ನು, ಲೇಖನಗಳನ್ನು ಓದುತ್ತಲೇ  ಇರುತ್ತೇವೆ. ಅವುಗಳಲ್ಲಿ ನಮಗೆ ಹತ್ತಿರವಾದ ಹಾಗು ಕೆಲವು ಇಷ್ಟವಾದ ವಿಡಿಯೋಗಳನ್ನು, ಲೇಖನಗಳನ್ನು ನಮ್ಮ ಆತ್ಮೀಯ ಸ್ನೇಹಿತರ ಜೊತೆ ಹಂಚಿಕೊಳ್ಳುತ್ತ ಇರುತ್ತೇವೆ. ನಂತರ ಅದನ್ನು ಮರೆತು ಕೂಡ ಹೋಗಿ ಬಿಡುತ್ತೀವಿ. ನಿಜವಾಗಿ ನಾವು ನಮ್ಮ ನಮ್ಮ ಅನುಭವಗಳ ಮೇರೆಗೇನೇ ಮಕ್ಕಳನ್ನು ಬೆಳೆಸುತ್ತ, ಅವರನ್ನು ತಿದ್ದುತ್ತಾ ಹೋಗುವುದು. ಯಾಕೆಂದರೆ ಎಲ್ಲ ಲೇಖನಗಳು, ವಿಡಿಯೋಗಳು ಹೇಳುವುದು ಮಕ್ಕಳನ್ನು ಹೇಗೆ ಬೆಳೆಸಬೇಕು ಅಂತಲ್ಲ, ನಾವು ಹೇಗೆ ನಮ್ಮ ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳಬೇಕು ಅಂತ. ಮಕ್ಕಳು ನಮ್ಮನ್ನ ನೋಡುತ್ತಾ, ನಾವು ಹೇಗೆ ಸಮಾಜದಲ್ಲಿ  ಬಂದುಗಳ, ಅಣ್ಣ ತಮ್ಮ, ಅಕ್ಕ ತಂಗಿ, ಸ್ನೇಹಿತರ ನಡುವೆ ವ್ಯವಹರಿಸುತ್ತೇವೆ ಅನ್ನುವುದನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಬೆಳೆಯುತ್ತಾರೆ. ನಾವು  ಅವರು ಮಾಡಿದ ತಪ್ಪಿಗೆ ಬುದ್ದಿ ಹೇಳಿದ ತಕ್ಷಣ ಅವರು ಅದನ್ನು ಸರಿಪಡಿಸಿ ಕೊಳ್ಳುವುದಿಲ್ಲ, ನಾವು ಅದನ್ನು ಮಾಡುತ್ತಿವಾ  ಇಲ್ಲವಾ ಅಂತ ಗಮನಿಸುತ್ತಾರೆ. 

ಒಂದು ಸಣ್ಣ ಉದಾಹರಣೆ ಅಂದರೆ ಸುಳ್ಳು ಹೇಳುವುದು. ಶಾಲೆಯಲ್ಲಿ, ಮನೆಯಲ್ಲಿ ಎಲ್ಲ ಕಡೆ ಮಕ್ಕಳಿಗೆ ಹೇಳಿ ಕೊಡುವುದು ಸುಳ್ಳು ಹೇಳುವುದು ತಪ್ಪು ಎಂದು.  ಆದರೆ ಅವರ ಮುಂದೇನೆ ನಾವು ನಮ್ಮ ಸ್ನೇಹಿತರ, ಬಂದುಗಳ ಹಾಗು ಕೆಲಸದ ವಿಚಾರದಲ್ಲಿ ಸಣ್ಣ ಸಣ್ಣ ಸುಳ್ಳು ಹೇಳುತ್ತಲೇ ಇರುತ್ತೇವೆ. ಹಾಗಿದ್ದರೆ ಅದನ್ನು ಗಮನಿಸಿದ ಮಕ್ಕಳು ಅದರಿಂದ ಕಲಿಯುವದಾದರೂ ಏನು?  ಸುಳ್ಳು ಹೇಳಬಹುದು ಆದರೆ ಗೊತ್ತಾಗಬಾರದು ಅಷ್ಟೇ ಅಂತ ಅಲ್ವಾ ?.  ಯಾವತ್ತಾದರೂ ನಮ್ಮ  ಮಕ್ಕಳ ಹತ್ತಿರ ನಾವು  ಸುಳ್ಳು ಯಾಕೆ ಹೇಳಬೇಕಾಯಿತು, ಹೇಳಬಾರದಿತ್ತು, ನಮ್ಮಿಂದ  ದೊಡ್ಡ ತಪ್ಪಾಯಿತು ಅಂತ ಹೇಳಿದ್ದಿರಾ?  ಹೇಳದಿದ್ದರೆ ಅವರು ನಾವು ಸುಳ್ಳು ಹೇಳಬಾರದು ಅಂತ ಹೇಳಿದರೆ ಹೇಗೆ ಕೇಳಿಯಾರು? ಸಾದ್ಯವಾದರೆ ಅದಕ್ಕೆ ಸಕಾರಣ ಕೊಡಿ. ಮಕ್ಕಳು ಅವರಿಗೇನು ಗೊತ್ತಾಗುತ್ತದೆ ಅಂತ ಮಾತ್ರ ಅಂದುಕೊಳ್ಳಬೇಡಿ. ಅವರು ಆ ವಿಷಯಗಳನ್ನು ಹೇಗೆ ಗ್ರಹಿಸುತ್ತಾರೆ ಅಂತ ಗೊತ್ತಾಗುವುದು ಮುಂದೆ  ಅವರ ತೋರಿಸುವ ನಡುವಳಿಕೆಯಿಂದ. ನಮ್ಮ ಈ ನಿರ್ಲಕ್ಷ್ಯತನದಿಂದ  ಕೆಲವೊಮ್ಮೆ ಅವರ  ನಡುವಳಿಕೆಯಲ್ಲಿ ಅನಿರೀಕ್ಷಿತ ಬೆಳವಣಿಗೆ ಕಾಣಬಹುದು. 

ನಾವು ನಮ್ಮನ್ನು ಬದಲಾಯಿಸಿಕೊಳ್ಳದೆ ಮಕ್ಕಳನ್ನು ಬೆಳೆಸುತ್ತೇವೆ ಅನ್ನುವುದು ಖಂಡಿತ ಒಪ್ಪಲು ಸಾಧ್ಯವಿಲ್ಲ. ನಾವು ಹೇಳುವುದು ಒಂದು,  ಮಾಡುವುದು ಒಂದು ಅಂತ ಆದರೆ, ನಮ್ಮನ್ನು ಹೆಜ್ಜೆ ಹೆಜ್ಜೆಗೂ ಹಿಂಬಾಲಿಸುವ ಮಕ್ಕಳು ಕೂಡ ಅದನ್ನೇ ಕಲಿಯುವುದು ಅಲ್ಲವೇ. ಅವರು ಹೇಗೆ ವಯಸ್ಸಿನಲ್ಲಿ ಬೆಳೆಯುತ್ತ ಹೋಗುತ್ತಾರೋ ,  ನಾವು ಕೂಡ ಅವರಂತೆ ನಮ್ಮನ್ನು ನಾವು ಬದಲಾಯಿಸಿಕೊಳ್ಳುತ್ತ ಹೋಗದಿದ್ದರೆ ಪ್ರತಿ ಹಂತದಲ್ಲಿ ಹೊಸ ಹೊಸ ಸಮಸ್ಯೆಗಳನ್ನು ಎದುರಿಸುತ್ತ ಹೋಗುತ್ತೇವೆ.  ನಾವು ಅವರಿಗೆ  ಏನನ್ನಾದರೂ ಹೇಳುವ ಬದಲು ಅವರ ಮುಂದೆ ಮಾಡಿ ನೋಡಿ, ಮಕ್ಕಳು ಹೇಳಿಸಿಕೊಳ್ಳದೆ ಮಾಡಲು ತೊಡಗುತ್ತಾರೆ. ಆದರೆ ಅದಕ್ಕೆ ನಮ್ಮ  ತಾಳ್ಮೆ ಬಹಳ ಮುಖ್ಯ.  ಓದುವ ಹವ್ಯಾಸ ಆಗಿರಬಹುದು, ಆಟ ಆಗಿರಬಹುದು, ತೋಟಗಾರಿಕೆ ಆಗಿರಬಹುದು, ಮನೆ ಕೆಲಸ ಆಗಿರಬಹುದು ದೊಡ್ಡವರಾಗಿ ನಮ್ಮನ್ನು ನಾವು ಅದರಲ್ಲಿ ತೊಡಗಿಸಿಕೊಳ್ಳದೆ, ಮಕ್ಕಳಿಗೆ ಹೇಳಿದರೆ ಅವರು ಹೇಗೆ ಕಲಿಯಲು ಸಾಧ್ಯ. ಬಲವಂತವಾಗಿ ಇಲ್ಲವೇ ಹೆದರಿಸಿ ಮಾಡಿಸಿದರೆ ಅದು ಬಹಳ ಕಾಲ ನಡೆಯುವುದಿಲ್ಲ. 

” ಬೆಳಗ್ಗಿನಿಂದ ಕೆಲಸ ಮಾಡಿ ಸಂಜೆ  ಸಿಗುವ ಎರಡು ಗಂಟೆ ಕೂಡ ಮಕ್ಕಳಿಗೆ ಮೀಸಲಿಟ್ಟರೆ ನಮಗೆ ಮನರಂಜನೆ ಬೇಡ್ವಾ? ” ಅಂತ ನನ್ನ ಸ್ನೇಹಿತರು ಕೇಳಿದರು.  ” ಮನರಂಜನೆ ಮನಸ್ಸಿಗೆ ಬೇಕಾಗಿರುವುದು ಹಾಗು ಮಕ್ಕಳ ಚಟುವಟಿಕೆಯಲ್ಲೂ ಆ ಮನರಂಜನೆಯನ್ನು ಕಾಣಬಹುದು  ” ಎಂದು ಉತ್ತರ ಕೊಟ್ಟೆ. ಅದಕ್ಕೆ ಅವರು ” ಅದು ಹೇಳುವುದಕ್ಕೆ ಸುಲಭ, ಆದರೆ ಅದು ಆಚರಣೆ ತರಲು ಆಗುವುದಿಲ್ಲ” ಎಂದರು.  ” ನಮ್ಮಲ್ಲಿ ಬದಲಾವಣೆ  ತಂದುಕೊಳ್ಳಲು ಸಾಧ್ಯವಿಲ್ಲ ಅಂದಾದರೆ ಮಕ್ಕಳು ಹೀಗಿರಬೇಕು, ಹಾಗಿರಬೇಕು ಎಂದು ನಾವು  ನಿರೀಕ್ಷಣೆ ಮಾಡಲಾಗುವುದಿಲ್ಲ.   ಮತ್ತೆ  ನಮ್ಮ ಆ  ಎರಡು ಗಂಟೆ ಪೂರ್ತಿ ಅವರ  ಜೊತೆಯಲ್ಲಿರಲು  ನಿರೀಕ್ಷಿಸುವುದಿಲ್ಲ, ಕೇವಲ ನಮ್ಮ ಉಪಸ್ಥಿತಿ ಬಯಸುತ್ತಾರೆ ಅಷ್ಟೇ. ಅದು ಅವರಿಗೆ ಎಂಟರಿಂದ  ಹತ್ತು ವರುಷಗಳು ಆಗುವ  ತನಕ.  ನಂತರ ಅವರು ಸ್ವತಂತ್ರರಾಗುತ್ತಾ ಹೋಗುತ್ತಾರೆ. ನಾವು  ಗಮನಿಸುವುದು ಕೂಡ ಅವರಿಗೆ ಇಷ್ಟವಾಗುವುದಿಲ್ಲ. ಆಗ  ನಾವು ನಮ್ಮನ್ನು  ಅವರ ಸ್ನೇಹಿತರಂತೆ ಬದಲಾಯಿಸಿಕೊಳ್ಳುವ ಸಮಯ ಶುರುವಾಗುತ್ತದೆ. ಮಕ್ಕಳ ಮೊದಲ ಹತ್ತು ವರುಷಗಳು ಬಹಳ ಸೂಕ್ಷ್ಮ ಹಾಗು ನಮ್ಮೆಲ್ಲ  ಸಮಯ,  ನಮ್ಮ ಮನರಂಜನೆಯ ರೀತಿ ಬದಲಾಯಿಸಿಕೊಂಡು , ಆ ಸಮಯವನ್ನು  ಅವರಿಗೆ ಮೀಸಲು ಇಡಲೇ  ಬೇಕು. ಮುಂದೆ ಅವರ ಜೀವನವನ್ನು ಅವರೇ ರೂಪಿಸಿಕೊಳ್ಳುತ್ತಾರೆ, ಆದರೆ ಅವರನ್ನು ಒಳ್ಳೆಯ ವ್ಯಕ್ತಿಯನ್ನಾಗಿ ಮಾಡುವ ಜವಾಬ್ಧಾರಿ ಮಾತ್ರ ನಮ್ಮದಾಗಿರುತ್ತದೆ. ಅದರ ಅಡಿಪಾಯ ಮೊದಲ ಹತ್ತು ವರುಷಗಳಲ್ಲಿ ಹಾಕುತ್ತ ಬಂದರೆ ಮಾತ್ರ ಅದು ಸಾಧ್ಯ” ಎಂದು ವಿವರಣೆ ಕೊಟ್ಟೆ.  ಅವರು “ಇವೆಲ್ಲ ಹೇಳಲು, ಓದಲು ಅಷ್ಟೇ, ಅವೆಲ್ಲ ಆಗೋಲ್ಲ ಬಿಡಿ” ಅಂತ ಹೇಳಿ ಹೋದರು. 

ಆಗ ನನಗೆ ಹುಟ್ಟಿದ ಪ್ರಶ್ನೆ  ” ನಮ್ಮ ಈಗಿನ ಬದಲಾವಣೆ ಮಕ್ಕಳ ಜೀವನವನ್ನು ಉಜ್ವಲ ಗೊಳಿಸುತ್ತದೆ ಅಂದರೆ ಯಾಕೆ ನಮ್ಮನ್ನು ನಾವು ಬದಲಾಯಿಸಿಕೊಳ್ಳಬಾರದು ಅಲ್ವ?” ಅಂತ. 

ನಿಮಗೇನು ಅನ್ನಿಸುತ್ತೆ ಅಂತ ಹೇಳಿ,  ತಪ್ಪಿದ್ದರೆ ಬದಲಾಯಿಸಿಕೊಳ್ಳೋಣ !!

ಎಲ್ಲರಿಗು ಮಕ್ಕಳ ದಿನಾಚರಣೆಯ ಮತ್ತು ದೀಪಾವಳಿ ಹಬ್ಬದ  ಶುಭಾಶಯಗಳು.   

– ಶ್ರೀನಾಥ್ ಹರದೂರ ಚಿದಂಬರ 

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s