ಇತ್ತೀಚಿಗೆ ನೆದರ್ಲ್ಯಾಂಡ್ ನಲ್ಲಿ ಮನೆ ಬದಲಾಯಿಸುವಾಗ, ಕೆಲವು ಸಣ್ಣ ಸಣ್ಣ ವಸ್ತುಗಳನ್ನು ನನ್ನ ಸೈಕಲ್ ನಲ್ಲಿ ಹಾಕಿಕೊಂಡು, ಅವುಗಳನ್ನು ಹೊಸ ಮನೆಗೆ ತೆಗೆದುಕೊಂಡು ಹೋಗುವಾಗ, ಸೈಕಲ್ ನ ಚಕ್ರ ಉರುಳಿದಂತೆ ನನ್ನ ಹಳೆಯ ನೆನಪುಗಳು ಕೂಡ ಉರುಳುತ್ತ ಹೋಯಿತು. ಚಿಕ್ಕವರಿರುವಾಗ ಮನೆ ವಸ್ತುಗಳನ್ನು ಒಂದು ಮನೆಯಿಂದ ಇನ್ನೊಂದು ಮನೆಗೆ ಸಾಗಿಸುವುದಕ್ಕೂ, ದೊಡ್ಡವರಾದ ಮೇಲೆ ಅವುಗಳನ್ನು ಸಾಗಿಸುವುದಕ್ಕೂ ಬಹಳ ವ್ಯತ್ಯಾಸ ಇದೆ. ಆಗ ನಮ್ಮ ಕೈಗೆ ಒಂದು ತೊಂಬಿಗೆ, ಚಾಪೆ, ದಿಂಬು, ಛತ್ರಿ, ಜಾಸ್ತಿ ಅಂದರೆ ಕೊಡಪಾನ ತೆಗೆದುಕೊಂಡು ಹೋಗಲು ಕೊಡುತ್ತಿದ್ದರು. ಆವಾಗ ನಮಗೆ ಅದೇ ಬಹಳ ದೊಡ್ಡದು ಮತ್ತು ಬಹಳ ಬಾರ. ದೊಡ್ಡವರಾದ ಮೇಲೆ ಸಂಸಾರದ ಜವಾಬ್ಧಾರಿಯನ್ನೇ ಹೊತ್ತುಕೊಂಡ ನಮಗೆ ಯಾವ ವಸ್ತುವು ಬಾರ ಅನ್ನಿಸುವುದೇ ಇಲ್ಲ ಬಿಡಿ.
ನನಗೆ ಎಂಬತ್ತರ ದಶಕದಲ್ಲಿ ನಾವಿದ್ದ ಬಾಡಿಗೆ ಮನೆಯಿಂದ ಸ್ವಂತ ಮನೆಗೆ ಹೋಗಿದ್ದ ನೆನಪು ಮನಸ್ಸಿನಲ್ಲಿ ಅಚ್ಚಳಿಯದೆ ನಿಂತಿದೆ. ಅದಕ್ಕೆ ಕಾರಣ, ನಾವು ಮನೆಯಾ ಎಲ್ಲ ವಸ್ತುಗಳನ್ನು ಒಂದು ಎತ್ತಿನ ಗಾಡಿಯಲ್ಲಿ ಹಾಕಿಕೊಂಡು ಹೋಗಿದ್ದು. ಬೆಳಿಗ್ಗೆನೇ ಎತ್ತಿನ ಗಾಡಿಯವನು ನಮ್ಮ ಮನೆಯ ಹತ್ತಿರ ಗಾಡಿಯನ್ನು ತಂದು ಬಿಟ್ಟಿದ್ದ. ಎತ್ತುಗಳನ್ನು ಗಾಡಿಯಿಂದ ಬಿಚ್ಚಿ, ಅಲ್ಲೇ ಪಕ್ಕದಲ್ಲಿ ಬೇಲಿಗೆ ಕಟ್ಟಿ ಹಾಕಿ, ಅದರ ಮುಂದೆ ಸ್ವಲ್ಪ ಹುಲ್ಲು ಹಾಕಿ ಕಾಯುತ್ತ ಕುಳಿತ್ತಿದ್ದ. ನಾನು ಮನೆ ವಸ್ತುಗಳನ್ನು ತೆಗೆದುಕೊಂಡು ಹೋಗುವುದಕ್ಕಿಂತ ಎತ್ತಿನ ಗಾಡಿಯಲ್ಲಿ ಕುಳಿತುಕೊಂಡು ಹೋಗಬಹುದು ಅಂತ ಬಹಳ ಉತ್ಸಾಹದಲ್ಲಿದ್ದೆ. ಅಪ್ಪ ಮತ್ತು ಅಮ್ಮ ಎಲ್ಲ ವಸ್ತುಗಳನ್ನು ಒಂದೊಂದೇ ಗಾಡಿಯಲ್ಲಿ ತುಂಬತೊಡಗಿದರು. ಮದ್ಯೆ ಮದ್ಯೆ ನಾನು ಕೂಡ ಚಿಕ್ಕ ಪುಟ್ಟ ವಸ್ತುಗಳನ್ನು ಗಾಡಿಯಲ್ಲಿ ಇಡುತ್ತಿದ್ದೆ. ನೋಡ ನೋಡುತ್ತಿದ್ದಂತೆ ಗಾಡಿ ಪೂರ್ತಿ ತುಂಬಿ ಯಾರು ಕುಳಿತುಕೊಳ್ಳಲು ಜಾಗವೇ ಇಲ್ಲದಾಯಿತು. ನನಗಂತೂ ಬಹಳ ಬೇಜಾರು ಆಯಿತು. ಆದರೆ ನಾನು ಎತ್ತಿನ ಗಾಡಿ ಮನೆಯಿಂದ ಹೊರಟಾಗ, ಗಾಡಿಯ ಹಿಂದೇನೆ, ಗಾಡಿಯ ಹಿಂದಿನ ಬಾಗಕ್ಕೆ ಕೈಯಿಟ್ಟು ನಾನೇ ತಳ್ಳಿಕೊಂಡು ಹೋಗುವ ಹಾಗೆ ಹೋಗಿದ್ದೆ. ಅಷ್ಟು ಭಾರವನ್ನು ಹೊತ್ತು ಎಳೆದುಕೊಂಡು ಹೋಗಿದ್ದ ಆ ಎತ್ತುಗಳ ಆಗಾಧ ಶಕ್ತಿ ಬಗ್ಗೆ ಆಗ ಏನು ಅನಿಸಿರಲಿಲ್ಲ. ಈಗ ನಾವು ನಮ್ಮ ಸ್ವಾರ್ಥಕ್ಕೆ ಅವುಗಳನ್ನು ಉಪಯೋಗಿಸುವ ಬಗ್ಗೆ ಬೇಜಾರು ಆಗುತ್ತದೆ. ಆಗ ಅಪ್ಪ ಅಮ್ಮ ಎಂಟತ್ತು ವರುಷ ಸಂಸಾರ ಮಾಡಿದ್ದರೂ ಮನೆಯಲ್ಲಿದ್ದ ವಸ್ತುಗಳು ಬಹಳ ಕಮ್ಮಿ. ದೊಡ್ಡ ವಸ್ತುಗಳು ಅಂದರೆ ಎರಡು ಬೆಂಚು, ಒಂದು ಟೀಪಾಯಿ, ನೀರಿನ ಹಂಡೆ ಬಿಟ್ಟರೆ ಅಡುಗೆ ಪಾತ್ರೆಗಳು ಅಷ್ಟೇ. ಮಂಚ, ಡೈನಿಂಗ್ ಟೇಬಲ್ ಅವುಗಳ ಅವಶ್ಯಕತೆ ಆವಾಗ ನಮಗೆ ಇರಲಿಲ್ಲ. ಆದರೆ ನಾವು ಬೆಳೆದಂತೆ ನಮ್ಮ ಆಸೆಗಳು ಜಾಸ್ತಿ ಆಗುತ್ತಾ ಅನೇಕ ವಸ್ತುಗಳು ನಮಗೆ ತುಂಬಾ ಅವಶ್ಯಕ ಎಂದು ಅನಿಸಲು ಶುರುವಾಗುತ್ತದೆ. ಆದರೆ ಅವೆಲ್ಲ ನಮ್ಮ ಅವಶ್ಯಕತೆಗಿಂತ ಕೇವಲ ತೋರಿಕೆಗೆ ಅಥವಾ ನಮ್ಮ ಆಸೆಗೆ ಮಿತಿ ಇಲ್ಲದೆ ಇರುವುದು ಅನ್ನುವುದು ಕಟು ಸತ್ಯ.
ಮದುವೆ ಆದ ಮೇಲೆ, ನಾನು ಕೇವಲ ಒಂದು ಆಟೋದಲ್ಲಿ ಮನೆ ವಸ್ತುಗಳನ್ನು ತೆಗೆದುಕೊಂಡು ಹೋಗಿದ್ದೆ. ಕೇವಲ ಬಟ್ಟೆ ಮತ್ತು ಕೆಲವು ಅಡುಗೆ ಪಾತ್ರೆಗಳು ಬಿಟ್ಟರೆ ಬೇರೆ ಏನು ಇರಲಿಲ್ಲ. ಕೆಲವೇ ವರುಷಗಳಲ್ಲಿ ಆ ಮನೆ ಬದಲಾಯಿಸಿದಾಗ ಮನೆಯಲ್ಲಿದ್ದ ವಸ್ತುಗಳನ್ನು ತೆಗೆದುಕೊಂಡು ಹೋಗಲು ಒಂದು ಮಿನಿ ಲಾರಿ ಮಾಡಿದ್ದೆ. ಪ್ರತಿ ಸಾರಿ ಮನೆ ಬದಲಾಯಿಸುವಾಗ ಅನೇಕ ವಸ್ತುಗಳನ್ನು ನಾವೇ ಕೊಡಿಸಿದ್ದರೂ , ” ಯಾವಾಗ ತೆಗೊಂಡೆ ಇದು, ಈಗ ನೋಡು ತೆಗೆದುಕೊಂಡು ಹೋಗಲು ಎಷ್ಟು ಕಷ್ಟ” ಅಂತ ಹೆಂಡತಿಯನ್ನು ಬೈಯದೆ ಇರುತ್ತಿರಲಿಲ್ಲ. ಅದು ಬೇಕು ಇದು ಬೇಕು ಅಂತ ತೆಗೆದುಕೊಂಡು, ವಾಹನದಲ್ಲಿ ವಸ್ತುಗಳನ್ನು ಇಡುವಾಗ ನಮ್ಮ ಕರ್ಮಕ್ಕೆ ನಾವೇ ಬೈದುಕೊಳ್ಳುತ್ತಾ ವಸ್ತುಗಳನ್ನು ಸಾಗಿಸುತ್ತ ಇರುತ್ತೀವಿ. ಬಹಳ ಆಶ್ಚರ್ಯ ಅಂದರೆ ಕೆಲವು ಅಡುಗೆ ಪಾತ್ರೆಗಳನ್ನು ಉಪಯೋಗಿಸಿರುವದೇ ಇಲ್ಲ, ಯಾಕೆ ಅಂತ ಕೇಳಿದರೆ ” ಅದು ಮುಂದೆ ಬೇಕಾಗುತ್ತೆ, ನಿಮಗೆ ಗೊತ್ತಾಗೊಲ್ಲ ” ಅನ್ನುವ ಉತ್ತರ ಬರುತ್ತದೆ. ೧೦ ವರುಷದಲ್ಲಿ ಬೆಂಗಳೂರಿನಲ್ಲಿ ಏನಿಲ್ಲ ಅಂದರು ಕನಿಷ್ಠ ಪಕ್ಷ ೫ ಬಾರಿ ಮನೆ ಬದಲಾಯಿಸಿದ್ದೇನೆ. ಪ್ರತಿ ಸಾರಿ ಮನೆಯ ವಸ್ತುಗಳ ಸಂಖ್ಯೆ ಜಾಸ್ತಿನೇ ಆಗಿತ್ತು ಬಿಟ್ಟರೆ ಕಮ್ಮಿ ಆಗಿರಲಿಲ್ಲ. ಯಾವಾಗಲು ಈ ಬಾರಿ ಮನೆ ಕಾಲಿ ಮಾಡುವಾಗ ಅನವಶ್ಯಕ ವಸ್ತುಗಳನ್ನು ಎಸೆದು ಬಿಡಬೇಕು ಅಂತ ಅಂದುಕೊಳ್ಳುತ್ತಿದ್ದೆ ಅಷ್ಟೇ, ಅದನ್ನು ನಾವು ಯಾವತ್ತೂ ಸಾಧ್ಯವಾಗಿರಲಿಲ್ಲ. ಬೇಕಾಗಬಹುದೇನೋ ಅಂತ ತೆಗೆದುಕೊಂಡು ಹೊರಟ್ಟಿದ್ದೆ ಜಾಸ್ತಿ . ಹಳೆಯ ನೆನಪುಗಳಂತೆ ಅವುಗಳನ್ನು ಜೊತೆಗೆ ಒಯ್ಯುತ್ತಲೇ ಇರುತ್ತೇವೆ. ಹಳೆಯ ಗಂಟಿನೊಂದಿಗೆ ಹೊಸ ಗಂಟು ಸೇರಿರುತ್ತದೆ. ಆಸೆ ಮತ್ತು ಅವಶ್ಯಕತೆಗಳ ಇರುವುದು ಒಂದು ಸಣ್ಣ ಗೆರೆ. ನಾವು ಒಂದು ಕಾಲು ಅಲ್ಲಿ ಮತ್ತೊಂದು ಕಾಲು ಇಲ್ಲಿ ಹಾಕಿಕೊಂಡು ಜೀವನದ ಜಂಜಾಟ ನಡೆಸುತ್ತಲೇ ಇರುತ್ತೇವೆ.
ಬೇರೆ ದೇಶಕ್ಕೆ ಬಂದ ಒಂದುವರೆ ವರುಷಕ್ಕೆ , ಮೊನ್ನೆ ಮನೆ ಬದಲಾವಣೆ ಮಾಡ ಬೇಕಾದರೆ ಒಂದು ಸಣ್ಣ ವ್ಯಾನ್ ಬಾಡಿಗೆಗೆ ತೆಗೆದುಕೊಂಡಿದ್ದೆ, ಉಳಿದ ವಸ್ತುಗಳನ್ನೆಲ್ಲ ನನ್ನ ಸೈಕಲ್ ನಲ್ಲೆ ಸಾಗಿಸಿದೆ. ಹೊಸ ಮನೆಗೆ ಹೋದ ಮೇಲೆ , ಹೊಸ ಮನೆಗೆ ತಕ್ಕಂತೆ ( ತೋರಿಕೆಗೆ) ಆಗಲೇ ನಿದಾನವಾಗಿ ವಸ್ತುಗಳ ಜಮಾವಣೆ ಆಗ ತೊಡಗಿದೆ. ಮನೆ ವಸ್ತುಗಳನ್ನು ಸಾಗಿಸಲು ಎತ್ತಿನ ಗಾಡಿಯಿಂದ ಲಾರಿಗೆ ತಲುಪಿ, ಮತ್ತೆ ವಾಪಸು ಸೈಕಲ್ಗೆ ತಲುಪಿ, ಈಗ ಮತ್ತೆ ವಸ್ತುಗಳನ್ನು ಸಾಗಿಸಲು ವಾಪಸು ಲಾರಿ ಮಾಡುವಂತೆ ಆಗದಿರಲು ಹಾಗು ಆಸೆಗಳಿಗೆ ಕಡಿವಾಣ ಹಾಕಿಕೊಳ್ಳಲೇ ಬೇಕು ಎನ್ನುವ ಆಶಯದೊಂದಿಗೆ ಹೊಸ ಮನೆಗೆ ಕಾಲಿಟ್ಟಿದ್ದೇನೆ. ನೋಡೋಣ ಮುಂದಿನ (ಮನೆ ) ಬದಲಾವಣೆ ಸಮಯದಲ್ಲಿ ವಸ್ತುಗಳ ಸಂಖ್ಯೆ ಹೇಗಿರುತ್ತದೆ ಎಂಬುದು.
– ಶ್ರೀನಾಥ್ ಹರದೂರ ಚಿದಂಬರ