ಹೆಜ್ಜೆಯ ಸದ್ದು !!

ಸುಮತಿಯ   ಸ್ನೇಹಿತೆಯರು  ತುಂಬ ಒತ್ತಾಯ ಮಾಡಿ ಅವಳನ್ನು   ಸೆಕೆಂಡ್ ಶೋ ಸಿನೆಮಾಗೆ ಕರೆದುಕೊಂಡು ಹೋಗಿದ್ದರು.  ಸಿನಿಮಾ ಮುಗಿಯುವಾಗ ರಾತ್ರಿ ಹನ್ನೊಂದು  ಗಂಟೆ ಆಗಿ ಹೋಗಿತ್ತು. ಸುಮತಿಗೆ ಒಂದು ಕಡೆ ರಾತ್ರಿ ತುಂಬ ಹೊತ್ತು ಆಗಿ ಹೋಗಿದೆ, ಮನೆಯಲ್ಲಿ ಬೈತಾರೆ  ಎಂದು,   ಇನ್ನೊಂದು ಕಡೆ ಒಬ್ಬಳೇ  ಹೇಗೆ ಮನೆಗೆ ಹೋಗೋದು ಅಂತ. ಅವಳ ಮನೆ ಕಡೆ ಹೋಗಲು  ರಾತ್ರಿ ಹೊತ್ತು ಆಟೋಗಳು ಕೂಡ ಸಿಗುತ್ತಿರಲಿಲ್ಲ. ಆಗ ಅವಳ ಸ್ನೇಹಿತೆ ಅವಳನ್ನು ತನ್ನ ಸ್ಕೂಟಿಯಲ್ಲಿ ಬಿಡುತ್ತೇನೆ ಬಾ ಎಂದು ಕರೆದಳು. ಸುಮತಿ ಬದುಕಿದೆಯಾ ಬಡ ಜೀವಿ ಅಂತ ಅಂದುಕೊಂಡು ಅವಳ ಜೊತೆ ಸ್ಕೂಟಿಯಲ್ಲಿ  ಹೊರಟಳು.  ಸ್ನೇಹಿತೆಯ ಮನೆ ಸುಮತಿಯ ಮನೆಯಿಂದ ಒಂದು ಕಿಲೋಮೀಟರು ದೂರದಲ್ಲಿತ್ತು. ಹಾಗಾಗಿ ಸುಮತಿ ಸ್ನೇಹಿತೆಗೆ ತೊಂದರೆ ಕೊಡಬಾರದು ಅಂತ ಅವಳ ಮನೆಗೆ ಹೋಗುವ ದಾರಿಯಲ್ಲಿ ಸಿಗುವ ಒಂದು ಕ್ರಾಸಿನಲ್ಲಿ  ಇಳಿದು ” ಇಲ್ಲಿಂದ  ನಾನು ನಡೆದುಕೊಂಡು ಹೋಗುತ್ತೇನೆ, ತೊಂದರೆಯಿಲ್ಲ, ನೀನು ಹೋಗು” ಅಂತ ಹೇಳಿ ಸ್ನೇಹಿತೆಯನ್ನು ಕಳುಹಿಸಿದಳು.   

ಸ್ನೇಹಿತೆ ಅಲ್ಲಿಂದ ಹೋದ ಮೇಲೆ  ಅವಳ ಮನೆಗೆ ಹೋಗುವ ದಾರಿಯಲ್ಲಿ ಹೊರಟಳು.  ಕತ್ತಲೆ ಜೊತೆ ನೀರವ ಮೌನ ಬೇರೆ ಎಲ್ಲ ಕಡೆ.  ಹತ್ತು ಹೆಜ್ಜೆ ಹಾಕುತ್ತಿದ್ದಂತೆ ಯಾರೋ ಹಿಂದೆ ನಡೆದುಕೊಂಡು ಬರುವ ಹಾಗೆ ಹೆಜ್ಜೆ ಸದ್ದು  ಕೇಳಿತು.  ಸುಮತಿ ನಿಂತು ಸರಕ್ಕನೆ ತಿರುಗಿ ನೋಡಿದಳು. ಆದರೆ ಹಿಂದೆ ಯಾರು ಕಾಣಲಿಲ್ಲ, ಬರಿ ಕತ್ತಲೆ ಕವಿದಿತ್ತು. ಅಲ್ಲಿಯವರೆಗೆ ಇರದ ಭಯ ಸುಮತಿಯ ಮುಖದಲ್ಲಿ ಕಾಣಿಸತೊಡಗಿತು. ಮತ್ತೆ ಜೋರಾಗಿ ನಡೆಯ ತೊಡಗಿದಳು. ಅವಳ ಹಿಂದೆ ಕೇಳಿಸುತ್ತಿದ್ದ ಹೆಜ್ಜೆಯ ಸದ್ದು ಕೂಡ ಜೋರಾಯಿತು. ಸುಮತಿಯ ಭಯಕ್ಕೆ ಹಣೆಯಲ್ಲಿ ಬೆವರು ಹನಿ ಮೂಡತೊಡಗಿತು. ಎಂತ ಕೆಲಸ ಮಾಡಿದೆ ನಾನು, ಸುಮ್ಮನೆ ಸ್ನೇಹಿತೆಯ ಜೊತೆಯಲ್ಲಿ ಹೋಗಿದ್ದರೆ ಇಷ್ಟು ಹೊತ್ತಿಗೆ ಮನೆ ಸೇರಿರುತ್ತಿದ್ದೆ, ಸುಮ್ಮನೆ ಬೇಡ ಅಂದು ತಪ್ಪು ಮಾಡಿದೆ ಅಂತ ಅನಿಸುತು.  ಕೂಡಲೇ ಜೋರಾಗಿ ನಡೆಯುತ್ತಲೇ ಫೋನ್ ಮಾಡೋಣ ಅಂತ ಮೊಬೈಲ್ ತೆಗೆದರೆ ಅದು ಸ್ವಿಚ್ ಆಫ್ ಆಗಿತ್ತು.  ಹೊಸ ಲೇಔಟ್ ಆಗಿದ್ದರಿಂದ ಮನೆಗಳು ತುಂಬ ವಿರಳವಾಗಿತ್ತು. ಕೆಲವು ಬೀದಿ ದೀಪಗಳು ಆನ್ ಆಗಿರಲಿಲ್ಲ.  ಭಯದಿಂದ ನಡುಗಿ ಹೋದಳು ಸುಮತಿ. ಜೋರಾಗಿ ಓಡ ತೊಡಗಿದಳು. ಹಿಂದೆ ಬರುತ್ತಿದ್ದ ಹೆಜ್ಜೆಯ ಸದ್ದು  ಕೂಡ ಜೋರಾಗಿ ಕೇಳತೊಡಗಿತು. ಸುಮತಿಗೆ ಇನ್ನು ನಾನು ನಿಂತರೆ ನನ್ನ ಕಥೆ ಮುಗಿದಂತೆ ಅಂತ ಅನ್ನಿಸಿ,  ತಿರುಗಿ ನೋಡದೆ   ಓಡತೊಡಗಿದಳು. ಹಿಂದೆ ಯಾರೋ ಓಡಿಬರುತ್ತಿದ್ದ ಸದ್ದು ಕೇಳಿಸುತ್ತಲೇ ಇತ್ತು.  ಮನೆಯಿಂದ ಕೇವಲ ನೂರು ಅಡಿಗಳಷ್ಟು ದೂರ ಇರಬೇಕಾದರೆ ಮನೆಯ ಗೇಟಿನಲ್ಲಿ ಅಮ್ಮ ನಿಂತಿರುವುದು ಕಾಣಿಸಿ  ಧೈರ್ಯ ಬಂದಿತು.  ಇನ್ನೇನು ಭಯ ಅಂತ ಅಲ್ಲಿಯೇ ನಿಂತು ಬಿದ್ದಿದ್ದ ಕಲ್ಲು ತೆಗೆದುಕೊಂಡು,  ಹಿಂಬಾಲಿಸಿಕೊಂಡು ಬರುತ್ತಿದ್ದವನನ್ನು ಎದುರಿಸೋಣ ಅಂತ ತಿರುಗಿ ನೋಡಿದಳು.  ಆದರೆ ಅಲ್ಲಿ ಯಾರು ಕಾಣಲಿಲ್ಲ. ಅಮ್ಮ ನಿಂತಿರುವುದನ್ನು ನೋಡಿ ಹಿಂದೆ ಬರುತ್ತಿದ್ದವನು ವಾಪಸು ಹೋಗಿರಬೇಕು ಅಂತ ಅಂದುಕೊಂಡಳು. 

ಮನೆಯ ಹತ್ತಿರದ ಬೀದಿ ದೀಪಗಳು ಉರಿಯುತ್ತಿತ್ತು.  ಸ್ವಲ್ಪ  ಮನಸ್ಸು ನಿರಾಳವಾಗಿ,  ಮನೆ ಕಡೆ ನಿದಾನವಾಗಿ ನಡೆಯತೊಡಗಿದಳು.  ಮತ್ತೆ ಅವಳ ಹಿಂದೆ ನಡೆದುಕೊಂಡು ಬರುವ ಹಾಗೆ ಸದ್ದು ಕೇಳಿಸಿತು. ಮತ್ತೆ ತಿರುಗಿ ನೋಡಿದಳು.  ಆದರೆ ಯಾರು ಕಾಣಲಿಲ್ಲ. ಹಿಂದೆ ತಿರುಗಿ ನೋಡುತ್ತಲೇ ನಡೆಯ ತೊಡಗಿದಳು.  ನಡೆಯುವ ಸದ್ದು  ಕೇಳಿಸುತ್ತಿತ್ತು, ಆದರೆ ಯಾರು ಕಾಣಿಸುತ್ತಿರಲಿಲ್ಲ. ಬೆಳಕಿದ್ದರಿಂದ ಬಹಳ ಸೂಕ್ಷವಾಗಿ ಗಮನಿಸಿ ಹಿಂದೆ  ನೋಡುತ್ತಾ ನಡೆಯತೊಡಗಿದಳು.  ಆ ಸದ್ದು ಏನು ಗೊತ್ತಾಗಿ,  ಜೋರಾಗಿ ನಗುತ್ತ ಮನೆಯ ಗೇಟು ತಲುಪಿದಳು. ಗೇಟಿನಲ್ಲಿದ್ದ  ಸುಮತಿ ಅಮ್ಮ  ” ಏನೇ, ಅಷ್ಟು ಜೋರಾಗಿ ನಗುತ್ತ ಇದ್ದೀಯ ” ಅಂತ ಕೇಳಿದರು.  ಸುಮತಿ  ” ಹೇಳುತ್ತೇನೆ,  ಒಳಗೆ ಬಾ” ಎಂದು ಹೇಳಿ ಮನೆ ಒಳಗಡೆ ಹೋದಳು. 

ಸುಮತಿಯ ಚಪ್ಪಲಿಯ ಸೋಲ್ ಕಿತ್ತು ಬಂದು,  ಸುಮತಿ ಹೆಜ್ಜೆ ಇಟ್ಟು  ಕಾಲು ಎತ್ತಿದಾಗ ಸೋಲ್ ನೆಲಕ್ಕೆ ಬಡಿದು ಸದ್ದು  ಮಾಡುತ್ತಿತ್ತು ಅಷ್ಟೇ.  ಕತ್ತಲು,  ನಿಶ್ಯಬ್ದ ಮತ್ತು ಮನಸಿನಲ್ಲಿದ್ದ ಭಯಕ್ಕೆ ಸುಮತಿಗೆ ಹಿಂದೆ ಯಾರೋ ಹೆಜ್ಜೆ ಹಾಕಿದ ಹಾಗೆ ಅನಿಸುತ್ತಿತ್ತು. 

– ಶ್ರೀನಾಥ್ ಹರದೂರ ಚಿದಂಬರ 

4 thoughts on “ಹೆಜ್ಜೆಯ ಸದ್ದು !!

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s