ತಾಳಿ ಕಟ್ಟುವ ಶುಭ ವೇಳೆ !!

ಬೆಳಿಗ್ಗಿನಿಂದಲೇ ಕಲ್ಯಾಣ ಮಂಟಪದಲ್ಲಿ ಗಂಡು  ಮತ್ತು ಹೆಣ್ಣಿನ  ಕಡೆಯವರ ಓಡಾಟ ಜೋರಾಗಿತ್ತು. ಹುಡುಗಿಯ ಕಡೆಯವರಂತೂ ತಲೆ ಮೇಲೆ ಆಕಾಶವೇ ಬಿದ್ದವರಂತೆ ಒಬ್ಬೊಬ್ಬರು ಒಂದೊಂದು ಜವಾಬ್ಧಾರಿ ಹೊತ್ತುಕೊಂಡು ಓಡಾಡುತ್ತಿದ್ದರು. ಅದರಲ್ಲಿ ಒಬ್ಬ ಯುವಕ ಅಂತೂ ಬಹಳ ಗಡಿಬಿಡಿಯಿಂದ ಓಡಾಡುತ್ತಿದ್ದ. ಬಂದವರನ್ನು ತಿಂಡಿಗೆ ಕಳುಹಿಸುತ್ತಿದ್ದ, ಬಂದವರನ್ನು ಕೂತುಕೊಳ್ಳಲು ಹೇಳುತ್ತಿದ್ದ, ಅಡುಗೆ ಮನೆಗೆ ಹೋಗಿ ಭಟ್ಟರನ್ನು ಮಾತನಾಡಿಸಿ,  ಬಂದವರಿಗೆ ಕಾಫಿ ಕೊಡಲು ಹೇಳುತ್ತಿದ್ದ. ಮಂಟಪದಲ್ಲಿ ಕೂತ  ಪುರೋಹಿತರಿಗೆ ಮಾತನಾಡಿಸಿ, ಏನಾದರೂ ಬೇಕಾ ಹೇಳಿ ಅಂತ ಕೇಳುತ್ತಿದ್ದ, ಹೆಣ್ಣಿನ ಕಡೆಯವರ ರೂಮಿಗೆ ಹೋಗಿ ಹುಡುಗಿ ತಯಾರು ಆದ್ಲಾ  ಅಂತ ಕೇಳುತ್ತಿದ್ದ. ಗಂಡಿನ ಕಡೆಯ ತಂದೆಯ ಹತ್ತಿರ ಹೋಗಿ ಮಾತನಾಡಿಸುತ್ತಿದ್ದ. ಹೆಣ್ಣಿನ ತಾಯಿಯ ಹತ್ತಿರ ಅವಾಗವಾಗ ಹೋಗಿ ಏನೋ ಕೇಳಿ ಅವರು ಹೇಳಿದ್ದಕ್ಕೆ ಆಯಿತು ಎಂಬಂತೆ ತಲೆ ಅಲ್ಲಾಡಿಸಿ ಬರುತ್ತಿದ್ದ.  ನೋಡಲು ಬಹಳ ಸ್ಪುರದ್ರೂಪಿ ಆಗಿದ್ದರಿಂದ ಏನೋ ಅವನ ಓಡಾಡ  ಎದ್ದು ಕಾಣಿಸುತ್ತಿತ್ತು. ಸಿಲ್ಕ್ ಶರ್ಟ್ ಮತ್ತು ಸಿಲ್ಕ್ ಪಂಚೆ ಉಟ್ಟು ನೋಡಲು ಸ್ವಲ್ಪ ಕಟ್ಟು ಮಸ್ತಾಗಿ ಇದ್ದ ಬೇರೆ.  ಹೆಣ್ಣು ಮಕ್ಕಳು  ವಾರೆ ಕಣ್ಣಿಂದ ಅವನು ಹೋಗುವಾಗ ಬರುವಾಗ ಅವನನ್ನೇ ನೋಡುತ್ತಿದ್ದರು.  ಮದುವೆಗೆ ಬಂದ ಹೆಣ್ಣುಮಕ್ಕಳ ತಂದೆ ತಾಯಿಗಳ ಒಂದು ಕಣ್ಣು ಅವನ ಮೇಲೆನೇ  ಇತ್ತು.  ಮಹೂರ್ತ ಆದ ಮೇಲೆ ಅವನ ಬಗ್ಗೆ ವಿಚಾರಿಸಿ ತಮ್ಮ ಮಗಳಿಗೆ ಜೋಡಿ ಮಾಡಲು ಸಾದ್ಯವಾಗುತ್ತ  ಅಂತ ಕೇಳೋಣ ಎಂದು ಅಂದುಕೊಳ್ಳುತ್ತಿದ್ದರು.  

ಎಲ್ಲರು ಕಾಯುತ್ತಿದ್ದ ಮಹೂರ್ತದ ಸಮಯಕ್ಕೆ ಸರಿಯಾಗಿ   ಪುರೋಹಿತರು ಮಂತ್ರ ಪಠನೆ ಮಾಡುತ್ತಾ,   ಗಂಡಿನ ಕೈಗೆ ತಾಳಿ ಕೊಟ್ಟು ಅದನ್ನು ಹೆಣ್ಣಿನ ಕುತ್ತಿಗೆಗೆ  ಕಟ್ಟಲು ಹೇಳಿದರು.  ಮಂಟಪದ ಹತ್ತಿರ ಇದ್ದ ಎಲ್ಲ ಹತ್ತಿರದ ನೆಂಟರು ಆ ಶುಭಗಳಿಗೆಯನ್ನು ನೋಡಲು ಸುತ್ತ ನೆರೆದಿದ್ದರು.  ಮದುವೆ  ಗಂಡಿನ  ಸ್ನೇಹಿತರು ಮತ್ತು  ಮದುವೆ ಹೆಣ್ಣಿನ  ಸ್ನೇಹಿತೆಯರು ಮದುಮಕ್ಕಳ  ಕಾಲುಎಳೆದು ತಮಾಷೆ ಮಾಡುತ್ತಿದ್ದರು.   ಕ್ಯಾಮೆರಾಮೆನ್ ಚಿತ್ರೀಕರಣ ಮಾಡಲು ತೊಂದರೆ ಆಗುತ್ತಿದ್ದೆ, ಸ್ವಲ್ಪ ಸರಿದು ನಿಲ್ಲಿ ಎಂದು ಗೋಗೆರೆಯುತ್ತಿದ್ದ. ಆದರೂ ಅವನ ಮಾತನ್ನು ಲೆಕ್ಕಿಸದೆ ತಾವೇ ತಾಳಿ ಕಟ್ಟುವ ಹಾಗೆ  ಮಂಟಪವನ್ನು ಎಲ್ಲರು ಸಿಹಿಗೆ ಇರುವೆ ಮುತ್ತಿದ ಹಾಗೆ  ಮುತ್ತಿದ್ದರು. ಪುರೋಹಿತರು ಹೆಣ್ಣಿನ ತಂದೆ ತಾಯಿಗೆ  ಏನೋ  ಶಾಸ್ತ್ರಕ್ಕೆ  ಕರೆದರು.    ಹೆಣ್ಣಿನ ತಾಯಿ ತನ್ನ ಕೈಲಿದ್ದ ವ್ಯಾನಿಟಿ ಬ್ಯಾಗನ್ನು  ಅಲ್ಲೇ  ತಮ್ಮ ಕಾಲ ಬಳಿ  ಕೆಳಗಿಟ್ಟು ಪುರೋಹಿತರು ಹೇಳಿದ ಶಾಸ್ತ್ರ ಕಾರ್ಯವನ್ನು ಮಾಡಲು ಶುರು ಮಾಡಿದರು.  ಕೇವಲ ಎರಡು ನಿಮಿಷಗಳಲ್ಲಿ ಆ ಕಾರ್ಯ ಮುಗಿಯಿತು. ಕೂಡಲೇ  ಹೆಣ್ಣಿನ ತಾಯಿ ಬೆಳಗ್ಗಿನಿಂದ ತಮ್ಮ  ಕೈಯಿಂದ ಒಂದು ನಿಮಿಷವೂ ಕೆಳಗಿಡದ  ವ್ಯಾನಿಟಿ ಬ್ಯಾಗನ್ನು ತೆಗೆದುಕೊಳ್ಳಲು ತಮ್ಮ ಕಾಲ ಬಳಿ ನೋಡಿದರು. ಆದರೆ ಆ ವ್ಯಾನಿಟಿ ಬ್ಯಾಗ್ ಅವರಿಗೆ ಕಾಣಿಸಲಿಲ್ಲ.   ಗಾಬರಿಯಿಂದ ಹೆಣ್ಣಿನ ತಾಯಿ ತನ್ನ ವ್ಯಾನಿಟಿ  ಬ್ಯಾಗ್ ಎಲ್ಲಿ ಅಂತ  ಹುಡುಕಲು ಶುರು ಮಾಡಿದರು.  ಅವರು ಗಾಬರಿಯಿಂದ ಹುಡುಕುವುದನ್ನು ಕಂಡು   ಏನಾಯಿತು ಅಂತ ಮಂಟಪದ  ಹತ್ತಿರ ಸೇರಿದ್ದ ಎಲ್ಲರು ಹೆಣ್ಣಿನ ತಾಯಿಗೆ ಕೇಳಿದರು. ಆಗ ಹೆಣ್ಣಿನ ತಾಯಿ ತಮ್ಮ ವ್ಯಾನಿಟಿ ಕಾಣುತ್ತಿಲ್ಲ ಎಂದಾಗ, ಎಲ್ಲರು ಹುಡುಕಲು ಶುರು ಮಾಡಿದರು. ಹೆಣ್ಣಿನ ತಾಯಿ ಜೋರಾಗಿ ಅಳತೊಡಗಿದರು. ವ್ಯಾನಿಟಿ ಬ್ಯಾಗಿನ ಜೊತೆಗೆ ಅದರಲ್ಲಿಟ್ಟದ್ದ ಮೂರು ಲಕ್ಷ ರೂಪಾಯಿ ಮತ್ತು ಕೆಲವು ಒಡವೆಗಳು ಕಳ್ಳತನವಾಗಿತ್ತು. 

ಆದರೆ ವ್ಯಾನಿಟಿ  ಬ್ಯಾಗ್ ಮಾತ್ರ ಎಲ್ಲಿಯೂ  ಕಾಣ ಸಿಗಲಿಲ್ಲ. 

ಹಾಗೆ ಬೆಳಗ್ಗಿನಿಂದ ಓಡಾಡುತ್ತಿದ್ದ ಸ್ಪುರದ್ರೂಪಿ ಯುವಕ ಕೂಡ ಕಾಣ ಸಿಗಲಿಲ್ಲ. 

ಗಂಡಿನ ಕಡೆಯವರು ಅವನನ್ನು ಹೆಣ್ಣಿನ ಕಡೆಯವನು ಮತ್ತು ಹೆಣ್ಣಿನ ಕಡೆಯವರು ಅವನನ್ನು ಗಂಡಿನ ಕಡೆಯವರು ಅಂತ ಅಂದುಕೊಂಡಿದ್ದರು. ಕದಿಯಲು ಗಂಟು ಎಲ್ಲಿದೆ ಎಂದು ಬೆಳೆಗ್ಗಿನಿಂದ ಓಡಾಡಿ ತಿಳಿದುಕೊಂಡಿದ್ದ ಅವನು ಕದಿಯಲು ಸರಿಯಾದ ಸಮಯ ಕಾಯುತ್ತಿದ್ದ,  ಅದೇ 

ತಾಳಿ ಕಟ್ಟುವ ಶುಭ ವೇಳೆ.. 

– ಶ್ರೀನಾಥ್ ಹರದೂರ ಚಿದಂಬರ 

2 thoughts on “ತಾಳಿ ಕಟ್ಟುವ ಶುಭ ವೇಳೆ !!

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s