ಮಧ್ಯಾಹ್ನ ಮೂರು ಗಂಟೆ!! ಬಾಗ – ೩

ರಘುವಿಗೆ  ” ಕೊಲೆಗಾರರು ಸಿಕ್ಕಿದ್ದಾರೆ  ನೀವು ಪೊಲೀಸ್ ಠಾಣೆಗೆ ಬರಲು ಎಸ್ಐ  ಕ್ರಾಂತಿಯವರು ಹೇಳಿ ಕಳಿಸಿದ್ದಾರೆ”  ಎಂದು ಪೊಲೀಸ್ ಪೇದೆ ಹೇಳಿದಾಗ ಕೂಡಲೇ ಪೊಲೀಸ್ ಠಾಣೆಗೆ ಹೊರಟ.  ಪೊಲೀಸ್ ಠಾಣೆ ಒಳಗಡೆ ಹೋಗಿ ಒಳಗಡೆ ಲಾಕ್ ಅಪ್ ನಲ್ಲಿ ಕುಳಿತ್ತಿದ್ದ ಅವರಿಬ್ಬರನ್ನು ನೋಡಿ ನಂಬಲು ಸಾಧ್ಯವೇ ಆಗಲಿಲ್ಲ, ಹಾಗೆ ಕುಸಿದು ಕುಳಿತ.   

 ಸ್ವಲ್ಪ ಹೊತ್ತು ಆದ ಮೇಲೆ ರಘು ” ನನ್ನ ತಂಗಿ ಮತ್ತು ಅವಳ ಗಂಡ  ಹೀಗೆ ಮಾಡಲು ಸಾಧ್ಯವೇ?  ಯಾಕೆ ಕೊಲೆ ಮಾಡಿದರು?”  ಅಂತ ಕೇಳಿದ. ಎಸ್ಐ  ಕ್ರಾಂತಿಯವರು ಅವರು ಬಾಯಿ ಬಿಟ್ಟ ಸತ್ಯ ಏನು  ಎಂದು  ಅವರು ಹೇಳಿದ ಹಾಗೆ ಹೇಳಲು ಶುರು ಮಾಡಿದರು. 

ರಘು ಪವಿತ್ರಾಳನ್ನು ಮದುವೆ  ಆಗಿ ಬಂದಾಗ  ರಘುವಿನ ತಂಗಿ ರಮಣಿ ಗೆ ಇನ್ನು  ಮದುವೆ ಆಗಿರಲಿಲ್ಲ. ರಘುವಿನ ಅಪ್ಪ ಅಮ್ಮ ತೀರಿಕೊಂಡು ಬಹಳ ವರುಷಗಳಾಗಿತ್ತು. ರಮಣಿ ಅನ್ನು ರಘು  ತುಂಬಾ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದ. ಪವಿತ್ರಾ ಮತ್ತು ರಘುವಿನ ತಂಗಿ ರಮಣಿ ಇಬ್ಬರು ಒಂದೇ ವಯಸ್ಸಿನವರು. ಹಾಗಾಗಿ ಅತ್ತಿಗೆ ನಾದಿನಿ ಸಂಬಂಧಕ್ಕಿಂತ, ಅವರಿಬ್ಬರೂ ಒಳ್ಳೆಯ ಸ್ನೇಹಿತೆಯರಾಗಿ ಇದ್ದರು. ಒಬ್ಬರಿಗೊಬ್ಬರು ತಮ್ಮ ತಮ್ಮ ವ್ಯಯುಕ್ತಿಕ ವಿಷಯಗಳನ್ನು ಹಂಚಿಕೊಳ್ಳುವ ಮಟ್ಟಿಗೆ ಸ್ನೇಹ ಬೆಳೆದಿತ್ತು. ರಘು ತನ್ನ ವ್ಯವಹಾರದಲ್ಲಿ ಬಂದ ಕಪ್ಪು ಹಣವನ್ನು ತಂದು ಯಾರಿಗೂ ಗೊತ್ತಾಗದಂತೆ ಬೀರುವಿನ ಕೆಳಗೆ ಇದ್ದ ಲಾಕರ್ನಲ್ಲಿ ಇಡುತ್ತಿದ್ದ ವಿಷಯವನ್ನು ಕೂಡ ರಮಣಿಯೊಂದಿಗೆ ಪವಿತ್ರ ಹಂಚಿಕೊಂಡಿದ್ದಳು.  ಅಲ್ಲಿಟ್ಟ ಒಡವೆಗಳನ್ನು  ಅವಳ ಮುಂದೇನೆ ತೆಗೆದು ತೋರಿಸಿದ್ದಳು. ಆಗ ರಮಣಿ ಗೆ ಲಾಕರ ಕೋಡ್ ಗೊತ್ತಾಗಿತ್ತು. ರಮಣಿ ತಾನು ಒಬ್ಬನನ್ನು ಪ್ರೀತಿಸುತ್ತಿದ್ದ ವಿಷಯವನ್ನು ಪವಿತ್ರಾಳಿಗೆ ಹೇಳಿದ್ದಳು. ಆದರೆ ಅವನು ಮುಸ್ಲಿಂ ಹುಡುಗ ಆಗಿದ್ದರಿಂದ ಮನೆಯಲ್ಲಿ ಹೇಳಲು ಹೆದರಿ ಅದನ್ನು ಮುಚ್ಚಿಟ್ಟಿದ್ದಳು. ಆ ವಿಷಯ ಪವಿತ್ರಾಳಿಂದ ರಘುವಿಗೆ ಗೊತ್ತಾಗಿ ತುಂಬ ಗಲಾಟೆ ಮಾಡಿ ರಮಣಿ ಗೆ ಹೊಡೆದಿದ್ದ ಕೂಡ. ಮನೆಯಲ್ಲಿ ಒಪ್ಪುವುದಿಲ್ಲ ಅಂತ ರಮಣಿ  ಸಾದಿಕ್ ಜೊತೆ ಓಡಿ ಹೋಗಿ ಮದುವೆ ಆಗಿದ್ದಳು. ಸಾದಿಕ್ಕಿಗೆ ಮಾಡಲು ಏನು ಕೆಲಸವಿರಲಿಲ್ಲ, ಅವರಿಬ್ಬರನ್ನು ಸಾದಿಕ್ ಮನೆಯವರು ಕೂಡ ಒಪ್ಪಿಕೊಳ್ಳಲಿಲ್ಲ.  ದುಡ್ಡಿರುವ ತನಕ ಹೋಟೆಲ್ ನಲ್ಲಿ ಇದ್ದು ದುಡ್ಡು ಕಾಲಿಯಾದ ನಂತರ ಸಾದಿಕ್ ರಮಣಿ ಗೆ ಅವಳ ಅಣ್ಣನ ಹತ್ತಿರ  ದುಡ್ಡು ಇಸಿದುಕೊಂಡು ಬರಲು ಹೇಳಿದ.  ರಮಣಿ ತನ್ನಿಂದ ಆದ ತಪ್ಪಿನ ಅರಿವಾಗಿ ಅಣ್ಣನ ಹತ್ತಿರ ಬಂದು ಅಳಲು ಶುರು ಮಾಡಿದಳು.  ತಂಗಿಯ ಕಷ್ಟಕ್ಕೆ ಕರಗಿ ರಘು ಅವರಿಬ್ಬರನ್ನು ತನ್ನ ಔಟ್ ಹೌಸ್ನಲ್ಲಿ ಇರಲು ಹೇಳಿದ. ಸಾದಿಕ್ ಯಾವುದೋ  ಗ್ಯಾರೇಜಿನಲ್ಲಿ ಕೆಲಸ ಶುರು ಮಾಡಿದ.  ಒಂದು ವರುಷಗಳ ಕಾಲ ಅವರಿಬ್ಬರೂ ಅಲ್ಲಿಯೇ ಇದ್ದರು. ಪವಿತ್ರ ಕೂಡ ಆಗಾಗ ರಮಣಿ ಗೆ ದುಡ್ಡಿನ ಸಹಾಯ ಮಾಡುತ್ತಿದ್ದಳು.  ಸಾದಿಕ್ಕಿಗೆ ಕಷ್ಟ ಪಟ್ಟು ದುಡಿಯುವ ಇರಾದೆ ಇರದ ಕಾರಣ ಕಳ್ಳತನಕ್ಕೆ ಇಳಿದ.  ಈ ವಿಷಯ ಯಾವಾಗ ರಘುವಿಗೆ ತಿಳಿಯಿತೋ, ತನ್ನ ತಂಗಿಗೆ ಸಾದಿಕ್ ಬೇಕಾ ಅಥವಾ  ನಾನು ಬೇಕಾ ನಿರ್ಧಾರ ಮಾಡು ಅಂದು ಹೇಳಿದ. ರಮಣಿ ಗೆ ಸಾದಿಕ್ಕಿನ ಪ್ರೀತಿ ಅದೇನು ಮರಳು ಮಾಡಿತ್ತೋ ಗೊತ್ತಿಲ್ಲ ಅವನ ಜೊತೆ ಹೊರಟು  ಹೋದಳು. ಅನಂತರ ರಘು ರಮಣಿಯಾ ಜೊತೆಗೆ ಸಂಪರ್ಕ ಕಡಿದು ಕೊಂಡಿದ್ದ. ಆದರೆ ಪವಿತ್ರಳ ಜೊತೆ ಮಾತ್ರ ರಮಣಿ ಸಂಪರ್ಕ ಇಟ್ಟುಕೊಂಡಿದ್ದಳು.  

ಕೆಲವೇ ತಿಂಗಳಲ್ಲಿ  ರಮಣಿಯನ್ನು ಕೂಡ  ಸಾದಿಕ್  ಕಳ್ಳತನಕ್ಕೆ ಇಳಿಸಿದ್ದ.   ಆವಾಗಲೇ ತನ್ನ ಅಣ್ಣನ ಮನೆಯಲ್ಲಿ ಇಟ್ಟಿದ್ದ ಒಡವೆಗಳು ಹಾಗು ದುಡ್ಡಿನ ಬಗ್ಗೆ ಸಾದಿಕ್ಕಿಗೆ ಹೇಳಿದಳು.  ಇಬ್ಬರು ಸೇರಿ ಹೇಗೆ ಅದನ್ನು ಲೂಟಿ ಮಾಡುವುದು ಅಂತ ಯೋಜನೆ ತಯಾರು ಮಾಡಿದರು. ಹೇಗಿದ್ದರೂ ರಮಣಿ ಪವಿತ್ರಳ ಜೊತೆ ಸಂಪರ್ಕದಲ್ಲಿ ಇದ್ದಳು. ಹಾಗಾಗಿ  ರಘು ಇಲ್ಲದ ಸಮಯ ನೋಡಿ ಪವಿತ್ರಾಳನ್ನು ಭೇಟಿ ಮಾಡಿದಳು. ಪವಿತ್ರ ಮತ್ತು ರಘುವಿನ ಸಂಬಂಧ ಆಗಲೇ ಹಳಸಿತ್ತು, ಅದನ್ನು ರಮಣಿ ಗೆ ಹೇಳಿ ಪವಿತ್ರ  ಸ್ವಲ್ಪ ಸಮಾಧಾನ ಪಟ್ಟುಕೊಂಡಳು. ರಮಣಿ ಕೂಡ ಅವಳನ್ನು ಸಮಾಧಾನ ಮಾಡಿದಂತೆ ನಾಟಕ ಮಾಡಿ ಇದರಿಂದ ಹೇಗೆ ಹೊರಗಡೆ ಬರಬಹುದು ಅಂತ ನಾನು ಮತ್ತು ಸಾದಿಕ್ ಯೋಚನೆ ಮಾಡಿ ಹೇಳುತ್ತೇವೆ ಅಂತ ಧೈರ್ಯ ತುಂಬುವ ನಾಟಕ ಮಾಡಿದಳು. ಯಾವಾಗ ಪವಿತ್ರ ಅದಕ್ಕೆ ಒಪ್ಪಿಕೊಂಡಳೋ, ಸಾದಿಕ್ ಮತ್ತು ರಮಣಿ ಲೂಟಿಗೆ ಮೂಹೂರ್ತ ಇಟ್ಟರು.  ಕೊಲೆ ನಡೆದ ದಿವಸ ಮಧಾಹ್ನ ಒಂದು ಗಂಟೆಗೆ ಆದಷ್ಟು ಅಕ್ಕ ಪಕ್ಕದ ಮನೆಯವರಿಗೆ  ಕಾಣಿಸದಂತೆ  ಮನೆಗೆ ಬಂದರು.  ಪವಿತ್ರಳ ಜೊತೆ ತುಂಬ ಆತ್ಮೀಯರಾಗಿ ನಡೆದುಕೊಂಡು  ನಾವಿಬ್ಬರು ರಘುವಿಗೆ ಬುದ್ದಿ ಹೇಳಿ ಸರಿ ಮಾಡುತ್ತೇವೆ ಅಂದು ಅವಳಿಗೆ ಧೈರ್ಯ ತುಂಬಿದರು.  ನಂತರ ಅಡುಗೆ ಮನೆಯಲ್ಲಿ ಪವಿತ್ರ ಬ್ಯುಸಿಯಾಗಿದ್ದು ನೋಡಿ,  ಸಾದಿಕ್ ಮತ್ತು ರಮಣಿ  ರೂಮಿನ ಒಳಗಡೆ ಹೋಗಿ ಲಾಕರ ಓಪನ್ ಮಾಡಿ ದುಡ್ಡು ಮತ್ತು ಒಡವೆ ತೆಗೆದುಕೊಂಡರು. ಮೊದಲೇ ಲಾಕರಿನ ಕೋಡ್ ಗೊತ್ತಿದ್ದರಿಂದ ಓಪನ್ ಮಾಡುವುದು ಅಷ್ಟು ಕಷ್ಟವಾಗಲಿಲ್ಲ ಅವರಿಗೆ.  ಯಾವಾಗ ಒಡವೆ ಮತ್ತು ದುಡ್ಡು ಕೈಗೆ ಸಿಕ್ಕಿತೋ,  ಅವರಿಬ್ಬರೂ  ಪವಿತ್ರಾಳಿಗೆ ಯಾವುದೊ ಅರ್ಜೆಂಟ್ ಕೆಲಸ ಬಂದಿದೆ,  ಅರ್ಧ ಗಂಟೆಯಲ್ಲಿ ವಾಪಸು ಬರುತ್ತೇವೆ, ನಂತರ ಒಟ್ಟಿಗೆ ಊಟ ಮಾಡೋಣ  ಅಂತ ಹೇಳಿ ಅಲ್ಲಿಂದ ಕಾಲ್ಕಿತ್ತಿದ್ದಾರೆ. ಅವರು ಗಡಿಬಿಡಿಯಿಂದ ಮುಖ ಮುಚ್ಚಿಕೊಂಡು ಹೋಗುವಾಗಲೇ ಆ ಬೀಡಾ ಅಂಗಡಿಯವನು ನೋಡಿದ್ದು ಅಂತ ಎಸ್ಐ  ಕ್ರಾಂತಿಯವರು ಹೇಳಿ ನಿಲ್ಲಿಸಿದರು. 

ಆಗ ರಘು ” ದುಡ್ಡು ಮತ್ತು ಒಡವೆ ಸಿಕ್ಕ ಮೇಲೆ, ಕೊಲೆ ಯಾಕೆ ಮಾಡಬೇಕಿತ್ತು” ಎಂದು ಕೇಳಿದ. ಅದಕ್ಕೆ ಎಸ್ಐ  ಕ್ರಾಂತಿಯವರು “ಅವರು ಕೊಲೆ ಮಾಡಿದ್ದರೆ ಅದನ್ನು ಕೇಳಬಹುದಿತ್ತು, ಆದರೆ ಅವರು ಕೊಲೆ ಮಾಡಿಲ್ಲ, ಹಾಗಾಗಿ ಅವರನ್ನು ಕೇಳಲು ಆಗಲ್ಲ” ಎಂದು ಹೇಳಿದರು. ಅದಕ್ಕೆ ರಘು ” ಹಾಗಾದರೆ ಯಾರು ಕೊಲೆ ಮಾಡಿದ್ದು” ಅಂತ ಕೇಳಿದ. 

ಎಸ್ಐ  ಕ್ರಾಂತಿಯವರು ” ಕೊಲೆ ಹೇಗೆ ನಡೆಯಿತು  ಅಂತ ಮೊದಲು ಹೇಳುತ್ತೀನಿ, ಆಮೇಲೆ ನಿಮಗೆ ಗೊತ್ತಾಗುತ್ತೆ ಯಾರು ಮಾಡಿದ್ದು” ಅಂತ ಹೇಳಲು  ಶುರು ಮಾಡಿದರು. 

” ರಮಣಿ ಮತ್ತು ಸಾದಿಕ್ ದುಡ್ಡು ಒಡವೆ ಕದ್ದು ಹೋದ ಮೇಲೆ ಪವಿತ್ರ ಯಾರಿಗೋ ಒಬ್ಬರಿಗೆ ಕಾಲ್ ಮಾಡಿದ್ದಾಳೆ, ಆತ ಮನೆಯ ಹಿಂದಿನ ಬೀದಿಯಿಂದ ಬಂದು ಔಟ್ ಹೌಸಿನ ಬಾಗಿಲು ತೆಗೆದು, ಅಲ್ಲಿಂದ ಮನೆಯ ಗ್ಯಾರೇಜಿಗೆ ಬಂದಿದ್ದಾನೆ. ಅದೇ ಗ್ಯಾರೇಜಿನ ಇನ್ನೊಂದು ಬಾಗಿಲು ರಘು ಮತ್ತು ಪವಿತ್ರ ಇದ್ದ ಮನೆಗೂ ಹೋಗುತ್ತೆ ಅಂತ  ಅವನಿಗೆ ಮೊದಲೇ  ಗೊತ್ತಿದ್ದರಿಂದ,  ಆ ಬಾಗಿಲ ಮೂಲಕ ಮನೆ ಒಳಗಡೆ ಬಂದು ಅಡುಗೆ ಮನೆಯಲ್ಲಿದ್ದ ಪವಿತ್ರಾಳನ್ನು ಅಲ್ಲಿದ್ದ ಚಾಕುವಿನಿಂದ ಕುತ್ತಿಗೆ ಕತ್ತರಿಸಿ ಕೊಲೆ ಮಾಡಿ, ನಂತರ ಕೋಣೆಗೆ ಹೋಗಿ, ಮಗುವನ್ನು ಕೊಲೆ ಮಾಡಿ,  ಒಳಗಡೆಯಿಂದ  ಬಾಗಿಲಿಗೆ ಚಿಲಕ ಹಾಕಿ, ಹೇಗೆ ಬಂದಿದ್ದನೋ ಹಾಗೆ ವಾಪಸು ಹೋಗಿ, ಔಟ್ ಹೌಸಿನ ಬಾಗಿಲಿಗೆ ಬೀಗ ಹಾಕಿ ಹಿಂಬದಿಯ ಬೀದಿಯಿಂದ ವಾಪಸು ಹೋಗಿದ್ದಾನೆ ಕೊಲೆಗಾರ” ಎಂದು ಹೇಳಿದರು. 

ಎಸ್ಐ  ಕ್ರಾಂತಿಯವರು ರಘುವಿನ  ಮುಂದೆ ಅವನ ಮತ್ತು ಪವಿತ್ರಳ ಕಾಲ್ ರೆಕಾರ್ಡ್ ಇಟ್ಟು ಹೇಳಿದರು ” ರಮಣಿ ಮತ್ತು ಸಾದಿಕ್ ಕಳ್ಳತನ ಮಾಡಿ ಅಲ್ಲಿಂದ ಹೋಗುವಾಗ  ಮಧ್ಯಾಹ್ನ ಮೂರು ಗಂಟೆಯಾ ಆಸು ಪಾಸು , ಅವರು ಅಲ್ಲಿಂದ ಹೋಗುವುದನ್ನು ನೋಡಿದ ಸಾಕ್ಷಿ ಇದೆ, ಆದರೆ ಆಶ್ಚರ್ಯ ಅಂದರೆ,  ಅದಾದ  ಮೇಲೆ ನಿಮಗೆ ಪವಿತ್ರಾಳಿಂದ ಕಾಲ್ ಬಂದಿದೆ, ನಾಲಕ್ಕು ನಿಮಿಷಗಳ ಕಾಲ ಮಾತನಾಡಿದ್ದಿರಾ ಕೂಡ, ಅವರು ಕೊಂದಿದ್ದರೆ ಅದು ಹೇಗೆ ಸಾಧ್ಯ”  ಅಂತ ಕೇಳಿದರು. 

ರಘು ಸ್ವಲ್ಪ ತಡಬಡಾಯಿಸಿ ” ಇಲ್ಲ ಆಗ ನನ್ನ ಪ್ರೇಯಸಿಯ ಮನೇಲಿ ಇದ್ದೆ,  ಪವಿತ್ರ ನನಗೆ ಕಾಲ್ ಮಾಡಿದ ಮೇಲೆ ಅವರು ಕೊಲೆ ಮಾಡಿರಬೇಕು”  ಎಂದು ಹೇಳಿದ.  

ಎಸ್ಐ  ಕ್ರಾಂತಿಯವರು ರಘುವಿನ ಮನೆಯ ಹಿಂದಿನ ಬೀದಿಯಲ್ಲಿದ್ದ ಸಿಸಿ ಕ್ಯಾಮೆರಾದ ರೆಕಾರ್ಡಿಂಗ್ ಅವನಿಗೆ ತೋರಿಸಿದರು. ಅದ್ರಲ್ಲಿ  ಮೂರು ಕಾಲಿಗೆ ಅವನು ತನ್ನ ಮನೆ ಕಡೆ ಬರುವ ಹಾಗು ಮೂರು ನಲವತ್ತಕ್ಕೆ ವಾಪಸು ಹೋಗುವ ದೃಶ್ಯ ಇತ್ತು. ಅದನ್ನು ನೋಡಿಯೇ ಮೇಲೆ ರಘು ತಲೆ ತಗ್ಗಿಸಿ ಕುಳಿತ. ಎಸ್ಐ  ಕ್ರಾಂತಿಯವರು” ನೀವೇ ಏನಾಯಿತು ಅಂತ ಹೇಳ್ತೀರಾ? ಅಥವಾ ನಾನೇ ಹೇಳಲಾ?” ಅಂತ ಕೇಳಿದರು. 

ರಘುವಿಗೆ  ತನ್ನ ಬಂಡವಾಳ ಬಯಲಾಯಿತು ಅಂತ ಗೊತ್ತಾದ ಮೇಲೆ, ಏನಾಯಿತು ಅಂತ ಹೇಳಲು ಶುರು ಮಾಡಿದ.  ರಮಣಿ ಮತ್ತು  ಸಾದಿಕ್ ಕದ್ದು ಹೋದ ಮೇಲೆ,  ಪವಿತ್ರಾಳಿಗೆ ಯಾಕೋ ಅನುಮಾನ ಬಂದು ರೂಮಿಗೆ ಹೋಗಿ ಬೀರು ಓಪನ್ ಮಾಡಿ ನೋಡಿದಾಗ ಕಳ್ಳತನ ಮಾಡಿಕೊಂಡು  ಹೋಗಿದ್ದು  ಗೊತ್ತಾಗಿದೆ, ಕೂಡಲೇ ಅವಳು ನನಗೆ ಫೋನ್ ಮಾಡಿ ತಿಳಿಸಿದಳು. ಕೂಡಲೇ ಬೇಗ ಮನೆಗೆ ಬನ್ನಿ ಅಂತ ಅಂದಳು.  ಆಗ ದಿನ ಅವಳ ಜೊತೆ ಜಗಳ ಆಡಿ  ಬೇಸತ್ತಿದ್ದ  ನನಗೆ,   ತಕ್ಷಣ ಪವಿತ್ರಾಳಿಂದ ಬಿಡುಗಡೆ ಹೊಂದಲು ಇದೆ ಸರಿಯಾದ ಸಮಯ ,  ಅವಳ ಕಾಟದಿಂದ ಮುಕ್ತಿ ಹೊಂದಿ ತನ್ನ ಪ್ರೇಯಸಿಯೊಂದಿಗೆ ಆರಾಮಾಗಿ  ಇರಬಹುದು ಅಂತ ದುರಾಲೋಚನೆ ಬಂತು. ಕೂಡಲೇ ನನ್ನ  ಫೋನ್ ಅಲ್ಲೇ  ಪ್ರೇಯಸಿಯ ಮನೆಯಲ್ಲೇ ಬಿಟ್ಟು, ಹಿಂದಿನ ಬೀದಿಯಿಂದ ಬಂದು ಔಟ್ ಹೌಸ್ ಒಳಗಡೆ ಇಂದ ಮನೆ ಒಳಗೆ  ಬಂದು ಕೊಲೆ ಮಾಡಿದೆ  ಎಂದು ಹೇಳಿದನು. 

ಆಗ ಎಸ್ಐ  ಕ್ರಾಂತಿಯವರು ” ಯಾವಾಗ ನನಗೆ ನಿನ್ನ ತಂಗಿ ರಮಣಿ ಮತ್ತು ಸಾದಿಕ್ ಬಗ್ಗೆ ಮಾಹಿತಿ ಸಿಕ್ಕಿತೋ, ಕೂಡಲೇ ಪವಿತ್ರಳ ಕಾಲ್ ರೆಕಾರ್ಡ್ ಮತ್ತು ಅವತ್ತು ಮನೆಯ ಹತ್ತಿರ ಆಕ್ಟಿವ್ ಇದ್ದ ಎಲ್ಲ ನಂಬರ್ ತಾಳೆ ಮಾಡಿ ನೋಡಿದಾಗ, ರಮಣೀಯ ನಂಬರ್ ಮನೆ ಹತ್ತಿರ ಆಕ್ಟಿವ್ ಇತ್ತು. ಅವರೇ ಕಳ್ಳತನ ಮಾಡಿ ಕೊಲೆ ಮಾಡಿದ್ದು ಅಂತ ಗೊತ್ತಾಗಿ, ಅವರ ನಂಬರ್ ಇಂದ ಅವರನ್ನು ಟ್ರೇಸ್ ಮಾಡಿ ಬಂದಿಸಿದೆವು. ಅವರಿಗೂ ಕೂಡ  ಔಟ್ ಹೌಸಿನಿಂದ  ನಿಮ್ಮ ಮನೆಗೆ ಬರಬಹುದು ಅಂತ ಗೊತ್ತಿತ್ತು.  ಆದರೆ ಅವರು ನಾವು ಕಳ್ಳತನ ಮಾಡಿದ್ದು ಹೌದು,  ಕೊಲೆ ಮಾಡಿಲ್ಲ ಅಂದಾಗ ನನ್ನ ಅನುಮಾನ ನಿನ್ನ ಮೇಲೆ ತಿರುಗಿತು”ಎಂದು ಹೇಳಿದರು. 

” ಅವತ್ತು  ನಿನ್ನ ಮನೆಗೆ ಬಂದು ಔಟ್ ಹೌಸ್ ಪರಿಶೀಲನೆ ಮಾಡಿದಾಗ,  ಬಹಳ ದಿನದಿಂದ ಔಟ್ ಹೌಸ್ ಮುಚ್ಚಿದ್ದರಿಂದ ನೆಲದಲ್ಲಿ ದೂಳು ತುಂಬಿತ್ತು, ಹಾಗು ಅದರಲ್ಲಿ ಒಂದೇ ರೀತಿಯ ಶೂ ಗುರುತು, ಒಳಗೆ  ಹೋಗಿದ್ದ ಹಾಗೆ ಮತ್ತು   ಹೊರಗೆ  ಬಂದಿದ್ದ ಹಾಗೆ  ಗುರುತು ಇತ್ತು.  ಇವರಿಬ್ಬರು ಓಡಾಡಿದ್ದರೆ , ನಾಲಕ್ಕು ಹೆಜ್ಜೆಗಳ ಗುರುತು ಇರಬೇಕಿತ್ತು ಆದರೆ ಅಲ್ಲಿದ್ದಿದ್ದು ಕೇವಲ ಒಬ್ಬನ ಹೆಜ್ಜೆ ಗುರುತು.  ಔಟ್ ಹೌಸಿನ ಬೀಗದ ಮೇಲೆ, ಹಾಗು ಚಾಕುವಿನ ಮೇಲೆ ನಿನ್ನ ಬೆರಳಚ್ಚು ಇತ್ತು, ಆ ಮೂರನೆಯ ಬೆರಳಚ್ಚು ರಮಣಿ ಯದು, ಅವಳು ಪವಿತ್ರಾಳಿಗೆ ಅಡುಗೆ ಮಾಡುವಾಗ ತರಕಾರಿ ಹೆಚ್ಚಿ ಕೊಟ್ಟಿದ್ದಳು, ಅದನ್ನು ಅವಳು ಸ್ಟೇಟಮೆಂಟ್ನಲ್ಲಿ ಹೇಳಿದ್ದಾಳೆ, ಇನ್ನು ನಿನ್ನ ಮೇಲಿನ ಅನುಮಾನ ಗಟ್ಟಿಯಾಗಿದ್ದು, ಪವಿತ್ರಳು  ಮೂರು ಗಂಟೆಗೆ ನಿನಗೆ ಮಾಡಿದ್ದ  ಕಾಲ್,  ಯಾಕೆಂದರೆ  ಅದೇ ಸಮಯದಲ್ಲಿ ಬೀಡಾ  ಅಂಗಡಿಯವನು ಯಾರೋ ಇಬ್ಬರು ಮುಖ ಮುಚ್ಚಿಕೊಂಡು ಹೋಗುತ್ತಿದ್ದರು ಎಂದು ಹೇಳಿದ್ದು, ಅವರು ಕೊಲೆ ಮಾಡಿದ್ದರೆ ಪವಿತ್ರ ಕಾಲ್ ಮಾಡಲು ಸಾಧ್ಯವಾಗುತ್ತಿರಲಿಲ್ಲ,   ಇವತ್ತು ಬೆಳಿಗ್ಗೆ ನಮಗೆ ನಿಮ್ಮ ಮನೆ ಹಿಂದಿನ ಬೀದಿಯ ಸಿ ಸಿ ಕ್ಯಾಮೆರಾ ರೆಕಾರ್ಡ್ ಸಿಕ್ಕಿದ ಮೇಲೆ ನೀನೆ ಕೊಲೆ ಮಾಡಿದ್ದು ಎಂಬುದು ಖಚಿತವಾಯ್ತು.  ” ಎಂದು ಹೇಳಿ ರಘುವನ್ನು ಅರೆಸ್ಟ್ ಮಾಡಿದರು. 

ಮದ್ಯಾಹ್ನ ಮೂರು ಗಂಟೆಗೆ  ಪವಿತ್ರ ಮಾಡಿದ ಒಂದು ಫೋನ್ ಕಾಲ್ ರಘು ಕೊಲೆ ಮಾಡಿದ ರಹಸ್ಯವನ್ನು ಬಯಲು ಮಾಡಿತ್ತು. 

ಆಗ ಎಸ್ಐ  ಕ್ರಾಂತಿಯವರು ” ಆ ಪುಟ್ಟ,  ನಿನ್ನದೇ ಮಗುವನ್ನು ಕೊಲ್ಲಲು, ಅದು ಕೇವಲ  ನಿನ್ನ ಸುಖಕ್ಕಾಗಿ ಹೇಗೆ ಕೊಲ್ಲಲು ಮನಸ್ಸು ಬಂತು, ಆ ದೇವರು ನಿನ್ನನ್ನು ಖಂಡಿತ ಕ್ಷಮಿಸಲ್ಲ,  ಆ  ಮಗು ಮತ್ತು ಪವಿತ್ರಳ ಆತ್ಮಕ್ಕೆ ಶಾಂತಿ ಸಿಗಲಿ, ಜೀವನ ಪರ್ಯಂತ ಜೈಲಿನಲ್ಲಿ ನಿನ್ನನ್ನು ಕೊಳೆಯುವಂತೆ ಮಾಡುತ್ತೇನೆ” ಅಂತ ಹೇಳಿ ಎದ್ದು ಹೊರಟರು. 

– ಶ್ರೀನಾಥ್ ಹರದೂರ  ಚಿದಂಬರ 

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s