ಮಧ್ಯಾಹ್ನ ಮೂರು ಗಂಟೆ!! ಬಾಗ – ೨

ಆಗಲೇ ಪವಿತ್ರ ಮತ್ತು ಮಗುವಿನ ಕೊಲೆ ನಡೆದು ಎರಡು ದಿನಗಳಾಗಿತ್ತು. ಎಸ್ಐ  ಕ್ರಾಂತಿಯವರಿಗೆ ಇದುವರೆಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಹಾಡು ಹಗಲಲ್ಲೇ ಕೊಲೆ ನಡೆದಿದ್ದರಿಂದ ಎಲ್ಲ ಪತ್ರಿಕೆಗಳಲ್ಲಿ ವರದಿಯಾಗಿ ಜನರು ಭಯಬೀತರಾಗಿದ್ದರು.  ಊಹಾಪೋಹಗಳು ಒಬ್ಬರಿಂದ ಒಬ್ಬರಿಗೆ ಹರಡಿ,  ಬೇರೆ ಬೇರೆ ರೀತಿಯ ಕಥೆಗಳು ಹುಟ್ಟಿಕೊಳ್ಳತೊಡಗಿದ್ದವು.   ಎಸ್ಐ  ಕ್ರಾಂತಿಯವರಿಗೆ  ಅವರ ಮೇಲಿನ ಅಧಿಕಾರಿಗಳಿಂದ  ಒತ್ತಡ ಜಾಸ್ತಿಯಾಗತೊಡಗಿತು.   ಛಾಯಾಚಿತ್ರಗಳು,  ಮರಣೋತ್ತರ ವರದಿ, ವಿಧಿ ವಿಜ್ಞಾನ ವರದಿ, ರಘುವಿನ ಹೇಳಿಕೆ, ಅಕ್ಕ ಪಕ್ಕದ ಮನೆಯವರ ಹೇಳಿಕೆ, ಮಾಹಿತಿದಾರರು ಕೊಟ್ಟ ಮಾಹಿತಿಗಳು ಹೀಗೆ ಎಲ್ಲವನ್ನು ಮೇಜಿನ ಜೋಡಿಸಿಕೊಂಡು ಕೂಲಂಕುಷವಾಗಿ ಪರಿಶೀಲನೆ ಮಾಡಲು ಶುರು ಮಾಡಿದರು.  ಮನೆಯಲ್ಲಿ ಯಾವುದೇ ಕಳ್ಳತನ ಆಗಿಲ್ಲ,  ಪವಿತ್ರಳ ಬಲಾತ್ಕಾರ ಆಗಿಲ್ಲ,  ಮನೆಯಲ್ಲಿದ್ದ ಬೀರುಗಳು ಯಥಾ ಸ್ಥಿತಿಯಲ್ಲಿತ್ತು, ಅಡುಗೆ ಮನೆಯಲ್ಲಿ ಅಡುಗೆ ತಯಾರಾಗಿತ್ತು,   ಸಿಕ್ಕಿರುವ ಸಾಕ್ಷಿಗಳು, ಹೇಳಿಕೆಗಳು ಯಾವುದೇ ಸುಳಿವು ನೀಡುತ್ತಿಲ್ಲ, ಯಾವುದೋ ಕೊಂಡಿ ಬಿಟ್ಟು ಹೋಗಿದೆ, ಅದು ಯಾವುದು ಅಂತ ಯೋಚನೆ ಮಾಡಲು ಶುರು ಮಾಡಿದರು. ಕೊಲೆಗೆ ಏನು ಉದ್ದೇಶ ಅಂತ ಗೊತ್ತಾಗದೆ ಕೊಲೆಗಾರನ್ನ ಹುಡುಕುವುದು ಕಷ್ಟ. ಸದ್ಯಕ್ಕೆ ಕೊಲೆಯ ಉದ್ದೇಶ ರಘುವಿಗೆ ಇರಬಹುದು ಅಂತ ಅನುಮಾನ ಬಿಟ್ಟರೆ, ಬೇರೆ ಯಾವುದೇ ಸುಳಿವು ಇಲ್ಲ, ಹಾಗಾದರೆ ಏನು ಉದ್ದೇಶ ಇರಬಹುದು ಕೊಲೆಗಾರನಿಗೆ? ಅಂತ ಎಸ್ಐ  ಕ್ರಾಂತಿಯವರು ಯೋಚಿಸುತ್ತ  ಕುಳಿತರು. 

ಹೊರಗಡೆಯಿಂದ ಅವರ ಸಹಾಯಕ ಬಂದು ” ರಘು ಬಂದಿದ್ದಾರೆ, ನಿಮ್ಮನು ಭೇಟಿ ಮಾಡಬೇಕಂತೆ, ತುಂಬ ಮುಖ್ಯವಾದ  ವಿಷ್ಯ ಹೇಳಬೇಕಂತೆ” ಎಂದು ಹೇಳಿದ.  ಎಸ್ಐ  ಕ್ರಾಂತಿ ” ಆಯಿತು, ಒಳಗೆ ಕಳುಹಿಸು ” ಎಂದು ಹೇಳಿ ಮೇಜಿನ ಮೇಲೆ ಜೋಡಿಸಿದ್ದ ಎಲ್ಲ ವರದಿಗಳನ್ನು ಒಳಗಡೆ ಇಟ್ಟರು. ಒಳಗಡೆ ಬಂದ ರಘು ” ಸರ್, ನಮ್ಮ ಮನೇಲಿ ಕಳ್ಳತನ ಕೂಡ ಆಗಿದೆ, ನಮ್ಮ ಬೀರುವಿನಲ್ಲಿ ಇಟ್ಟಿದ್ದ ನಂಬರ್ ಲಾಕಿಂಗ್ ಇರುವ ಒಂದು ಲಾಕರ ಇದೆ, ಅದರ ಕೋಡ್ ನನ್ನ ಬಿಟ್ಟು ಪವಿತ್ರಾಳಿಗೆ ಮಾತ್ರ ಗೊತ್ತು,  ನಿನ್ನೆ ತನಕ ಅದನ್ನು ತೆಗೆದು ನೋಡಿರಲಿಲ್ಲ, ಯಾಕೆಂದರೆ ಅದನ್ನು ಒಡೆದು ತೆಗೆದಿದ್ದರೇ ಅವತ್ತೇ ನಮಗೆ ಕಳ್ಳತನ ಆಗಿದೆ ಅಂತ ಗೊತ್ತಾಗುತ್ತಿತ್ತು,  ಇವತ್ತು ಬೆಳಿಗ್ಗೆ ಅದನ್ನು ತೆಗೆದು ನೋಡಿದರೆ, ಅದರಲ್ಲಿದ್ದ  ಮೂರು ಲಕ್ಷ ದುಡ್ಡು ಹಾಗು ಸುಮಾರು ಐದು ಲಕ್ಷದ ಒಡವೆಗಳು ಕಾಣೆಯಾಗಿವೆ” ಅಂತ ಹೇಳಿದನು. ಎಸ್ಐ  ಕ್ರಾಂತಿಯವರು  ” ಅವತ್ತು ಮನೆ ಪೂರ್ತಿ ನಾವು ಪರಿಶೀಲನೆ ಮಾಡಿದಾಗ ಈ ಲಾಕರ ಕಾಣಲಿಲ್ಲ, ಇವತ್ತು ಎಲ್ಲಿಂದ ಬಂತು ಈ ಲಾಕರ ಹಾಗಿದ್ರೆ ” ಎಂದು ರಘುವಿಗೆ ಕೇಳಿದರು.  ರಘು ” ಸರ್, ಈ ಲಾಕರನ್ನು ನಮ್ಮ ಬೀರುವಿನ ಅಡಿಯಲ್ಲಿ ಯಾರಿಗೂ ಕಾಣದೆ ಇಡುವ ವ್ಯವಸ್ಥೆ ಮಾಡಿಕೊಂಡಿದ್ದೆವು, ಹಾಗಾಗಿ ನಿಮಗೆ ಕಾಣಿಸಿರಲಿಲ್ಲ” ಎಂದು ಹೇಳಿದನು. ಎಸ್ಐ ಕ್ರಾಂತಿಯವರಿಗೆ ಕೂಡಲೇ ಇದು ಇವರಿಗೆ   ತುಂಬ ಗೊತ್ತಿರುವವರದೇ ಕೆಲಸ, ಬೇರೆಯವರಿಗೆ  ಈ ಲಾಕರ ಸಿಕ್ಕರೂ, ಒಡೆದು ತೆಗೆಯಬೇಕು, ಆದರೆ ಕೋಡ್ ಸರಿಯಾಗಿ ಹಾಕಿ, ಲಾಕರ ಓಪನ್ ಮಾಡಿ ಎಲ್ಲ ಕದ್ದು ಹೋಗಿದ್ದಾರೆ ಅಂದರೆ ಅವರಿಗೆ ಕೋಡ್ ಸಹಿತ ಗೊತ್ತಿರಬೇಕಲ್ಲವೇ ? ಎಂದು ಅನಿಸಿತು.  ಅವರು ರಘುವಿಗೆ ” ಒಡವೆಗಳ ಮಾಹಿತಿ ಎಲ್ಲ ಬರೆದುಕೊಟ್ಟು ಹೋಗಿ” ಎಂದು ರಘುವನ್ನು ಕಳುಹಿಸಿದರು. 

ಅಷ್ಟೋತ್ತಿಗೆ ರಘುವಿನ ಕಾಲ್ ಡೀಟೇಲ್ಸ್ ಎಲ್ಲ ತೆಗೆದುಕೊಂಡು ಪೊಲೀಸ್ ಪೇದೆ ಒಳಗಡೆ ಬಂದ. ಆ ಕಾಲ್ ಡೀಟೇಲ್ಸ್ ಪ್ರಕಾರ ರಘು ಮಧ್ಯಾಹ್ನ ಅವನ ಪ್ರೇಯಸಿ ಮನೆಯಲ್ಲಿಯೇ ಇರುವುದನ್ನು ತೋರಿಸುತ್ತಿತ್ತು. ಎಸ್ಐ  ಕ್ರಾಂತಿಯವರಿಗೆ ಆದರೂ ರಘುವಿನ ಮೇಲಿದ್ದ ಅನುಮಾನ ಇನ್ನು ಜಾಸ್ತಿ ಆಯಿತು, ಅವನ ಪ್ರೇಯಸಿ ಮನೆಯಲ್ಲಿಯೇ ಮೊಬೈಲ್ ಇಟ್ಟು ಬಂದು ಕೊಲೆ ಮಾಡಿ ಯಾಕೆ ವಾಪಸು ಹೋಗಿರಬಾರದು ಎಂದು ಅನಿಸಿತು. ಆದರೆ ಅವನೇ ಬಂದು ಕಳ್ಳತನ ಆಗಿದ್ದು ಹೇಳಿದ್ದು ಯಾಕೆ? ಅನ್ನುವ ಪ್ರಶ್ನೆಯು ಕಾಡತೊಡಗಿತು. ಎಸ್ಐ  ಕ್ರಾಂತಿಯವರು ಅವರ ಸಹಾಯಕನನ್ನು ಕರೆದು ಪವಿತ್ರಳ ಕಾಲ್ ಡೀಟೇಲ್ಸ್ ಹಾಗು ಅವಳ ಬಗ್ಗೆ ಪೂರ್ಣ ಮಾಹಿತಿ ಕಲೆ ಹಾಕಲು ಹೇಳಿದರು. ಮತ್ತೆ ಸಿಕ್ಕ ಎಲ್ಲ ಮಾಹಿತಿಗಳನ್ನು ತಮ್ಮ ಮೇಜಿನ ಮೇಲೆ ಜೋಡಿಸಿಕೊಂಡು ನೋಡತೊಡಗಿದರು. 

ಸಂಜೆಯ ವೇಳೆಗೆ ಎಸ್ಐ  ಕ್ರಾಂತಿಯವರ ಸಹಾಯಕ ಬಂದು ಪವಿತ್ರಳ ಬಗ್ಗೆ ಕೆಲವು ಮಾಹಿತಿಗಳನ್ನು ನೀಡಿದ. ಆ ಮಾಹಿತಿಯ ಪ್ರಕಾರ ಪವಿತ್ರಳ ತಂದೆ ತಾಯಿ ಇಬ್ಬರು ಅದೇ ಊರಿನಲ್ಲಿ ಪವಿತ್ರಳ ಅಣ್ಣನ ಜೊತೆಯಲ್ಲಿ ಇದ್ದರು.  ಪವಿತ್ರಳ ಅಣ್ಣ ಬ್ಯಾಂಕಿನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ.  ರಘು ರಿಯಲ್ ಎಸ್ಟೇಟ್ ಬಿಸಿನೆಸ್ ಅಲ್ಲಿ ತುಂಬ ಹಣ ಮಾಡಿ ಒಳ್ಳೆ ಸ್ಥಿತಿವಂತನಾಗಿದ್ದರಿಂದ ಅವನಿಗೆ  ಪವಿತ್ರಾಳನ್ನು ಮದುವೆ ಮಾಡಿ ಕೊಟ್ಟಿದ್ದರು.  ಪವಿತ್ರಾಳಿಗೆ ಮಗು ಆಗುವವರೆಗೂ ಎಲ್ಲ ಸರಿ ಇತ್ತು, ಆದರೆ ರಘುವಿನ ಇನ್ನೊಂದು ಸಂಭಂದದ ಬಗ್ಗೆ ತಿಳಿದ ಮೇಲೆ ದಿನವೂ ಮನೆಯಲ್ಲಿ ಗಲಾಟೆ ನೆಡೆಯುತ್ತಿತ್ತು. ಪವಿತ್ರ ರಘುವಿಗೆ ಆ ಹೆಂಗಸನ್ನು ಬಿಟ್ಟು ಬಿಡಲು ದಿನವೂ ಅವನ  ಜೊತೆ ಜಗಳ ಮಾಡುತ್ತಿದ್ದಳು. ಪವಿತ್ರ ಅಕ್ಕ ಪಕ್ಕದ ಜನರ ಜೊತೆ ಅಷ್ಟಾಗಿ ಬೆರೆಯುತ್ತಿರಲಿಲ್ಲ ಮತ್ತು ಹೇಳಿಕೊಳ್ಳುವಂತ ಸ್ನೇಹಿತೆಯರು ಯಾರು ಇಲ್ಲ ಅಂತ ಗೊತ್ತಾಗಿತ್ತು. ರಘುವಿನ ತಂಗಿ ಜೊತೆಗೆ ಮಾತ್ರ ತುಂಬ ಆಪ್ತಳಾಗಿದ್ದಳು ಎಂಬ ವಿಷಯ ತಿಳಿದು ಬಂದಿತ್ತು. ಒಂದು ವರುಷದ ಹಿಂದೆ  ರಘುವಿನ  ತಂಗಿ ಮದುವೆ ಆಗಿ ಹೋದ ಮೇಲೆ ಅವಳಿಗೆ ಯಾರು ಸ್ನೇಹಿತೆಯರು ಇರಲಿಲ್ಲ ಎಂಬ ಮಾಹಿತಿ ಸಿಕ್ಕಿತು. 

ಎಸ್ಐ  ಕ್ರಾಂತಿಯವರ ಅನುಮಾನದ ವೃತ್ತದೊಳಗೆ ರಘು, ಅನಾಮಿಕ ಗಂಡಸು ಮತ್ತು ಹೆಂಗಸು  ಬಿಟ್ಟರೆ ಬೇರೆ  ಯಾರು ಇರಲಿಲ್ಲ. ಪೇದೆ ಬಂದು ಅವರ ಮನೆ ಹಾಗು ಸುತ್ತಮುತ್ತ ಎಲ್ಲೂ ಸಿಸಿ ಕ್ಯಾಮೆರಾ ಇಲ್ಲ ಎಂದು ಹೇಳಿದ. ಎಸ್ಐ   ಕ್ರಾಂತಿಯವರಿಗೆ ಆ ಅನಾಮಿಕ ಗಂಡಸು ಮತ್ತು ಹೆಂಗಸು ಯಾರು ಅಂತ ಕಂಡುಹಿಡಿಯುವುದಕ್ಕೆ ಇದ್ದ ಒಂದು ದಾರಿಯು ಇಲ್ಲದಾಯಿತು. ಎಸ್ಐ ಕ್ರಾಂತಿ ಅವರು ರಘು ಕೊಟ್ಟು ಹೋದ ಒಡವೆಗಳ ಮಾಹಿತಿ  ಅನ್ನು ಎಲ್ಲ ಆಭರಣ ಮಾಡುವ ಅಂಗಡಿಗೆ ಕಳುಹಿಸಿ, ಯಾರಾದರೂ ಮಾರಲು ಬಂದರೆ ನಮಗೆ ತಿಳಿಸಲು ಹೇಳಿ,  ಅಲ್ಲಿಂದ ನಮಗೆ ಏನಾದರೂ ಸುಳಿವು ಸಿಗುವ ಅವಕಾಶ ಜಾಸ್ತಿ ಇದೆ  ಎಂದು ಅವರ ಸಹಾಯಕನಿಗೆ ಹೇಳಿದರು.  ಸಹಾಯಕ ಹೋದ ಮೇಲೆ ಮತ್ತೆ ಎಲ್ಲ ಮಾಹಿತಿಗಳನ್ನು ತಮ್ಮ ಮುಂದೆ ಇಟ್ಟುಕೊಂಡು ಕುಳಿತರು. 

ಒಂದೊಂದೇ ಮಾಹಿತಿಯನ್ನು ಕೂಲಂಕುಷವಾಗಿ ನೋಡುತ್ತಾ ಇದ್ದಾಗ ಅವರಿಗೆ ಒಂದು ವಿಷ್ಯದ ಬಗ್ಗೆ ಗಮನ ಸೆಳೆಯಿತು. ಚಾಕು ಮೇಲೆ ಇದ್ದ ಬೆರಳಚ್ಚು ಹಾಗು ರಘುವಿನ ಔಟ್ ಹೌಸಿನ ಹೊರಗಡೆ ಬಾಗಿಲ ಬೀಗದ ಮೇಲಿನ ಬೆರಳಚ್ಚು ಒಂದೇ ಆಗಿತ್ತು. ಎಸ್ಐ  ಕ್ರಾಂತಿ ಅವರಿಗೆ ಕೊಲೆಯ ರಹಸ್ಯ ಬಿಡಿಸಿದೆ ಅಂತ ಅನಿಸತೊಡಗಿತು.  ಕೂಡಲೇ ತಮ್ಮ ಜೀಪಿನಲ್ಲಿ ಅವರ ಸಹಾಯಕರನ್ನು  ಕರೆದುಕೊಂಡು  ರಘುವಿನ ಮನೆ ಕಡೆ ಹೋದರು.  ರಘು ಮನೆಯಲ್ಲಿಯೇ ಇದ್ದ. ಎಸ್ಐ  ಕ್ರಾಂತಿಯವರು ರಘುವಿಗೆ ಔಟ್ ಹೌಸಿನ ಬಾಗಿಲು ತೆಗೆಯಲು ಹೇಳಿದರು. ಅವನು ಕೀ ತೆಗೆದುಕೊಂಡು ಅವರನ್ನು ಕರೆದುಕೊಂಡು ಔಟ್ ಹೌಸಿನ ಹತ್ತಿರ ಕರೆದುಕೊಂಡು ಹೋದನು.  ಬೀಗ ತೆಗೆದು ಒಳಗಡೆ ಹೋಗಿ ಮನೆಯ ಮೂಲೆ  ಮೂಲೆಯನ್ನು ಸರಿಯಾಗಿ ಗಮನ ಇಟ್ಟು ನೋಡಿದರು. ಅವರ ಮುಖದಲ್ಲಿ ಒಂದು ಸಣ್ಣ ಗೆಲುವಿನ ನಗು ಕಾಣಿಸಿತು. 

ಠಾಣೆಗೆ ವಾಪಸು ಬರುವಷ್ಟರಲ್ಲಿ ಪವಿತ್ರಳ ಕಾಲ್ ಡೀಟೇಲ್ಸ್ ಬಂದಿತ್ತು.  ಅವಳ ಕಾಲ್ ಡೀಟೇಲ್ಸ್ ತೆಗೆದು ಅವಳು ಯಾರು ಯಾರಿಗೆ ಫೋನ್ ಮಾಡುತ್ತಿದ್ದಳು, ಅವಳ ಫೋನ್ನಲ್ಲಿ ಇದ್ದ ಯಾವ ನಂಬರ್ ಕೊಲೆ ನಡೆದ ದಿವಸ  ರಘುವಿನ ಮನೆಯ ಹತ್ತಿರ ಆಕ್ಟಿವ್ ಆಗಿತ್ತು ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕಲು ಹೇಳಿದರು. ಎಸ್ಐ  ಕ್ರಾಂತಿಯವರಿಗೆ  ಕೊಲೆ  ಹೇಗೆ ಮಾಡಿರಬಹುದು ಎಂಬುವುದರ ಬಗ್ಗೆ ಒಂದು ಅಂದಾಜು ಸಿಕ್ಕಿ ಹೋಗಿತ್ತು. ಅವರು ಕೂಡಲೇ ಅವರ ಸಹಾಯಕನಿಗೆ ಇಬ್ಬರ ಬೆರಳಚ್ಚು ಪಡೆಯಲು ಹೇಳಿದರು. ಇನ್ನು ರಘುವಿನ ಮನೆಯ ಹತ್ತಿರ ಆಕ್ಟಿವ್ ಆಗಿರುವ ಆ ಫೋನ್ ನಂಬರ್ ಡೀಟೇಲ್ಸ್ ಕೈಗೆ  ಬಂದರೆ  ಕೊಲೆಗಾರ ಸಿಕ್ಕಂತೆ ಎಂದು ಮನಸ್ಸಿನಲ್ಲೇ ಹೇಳಿಕೊಂಡರು. 

ಔಟ್ ಹೌಸಿನ ಬಾಗಿಲ  ಬೀಗದ  ಮೇಲೆ ಇದ್ದ ಬೆರಳಚ್ಚು ಕೊಲೆಗಾರ ಹೇಗೆ ಕೊಲೆ ಮಾಡಿ ಒಳಗಡೆ ಚಿಲಕ ಹಾಕಿ ಹೊರಗಡೆ ಬಂದ ಎಂಬ ಸುಳಿವು ಕೊಟ್ಟಿತ್ತು. 

ಮರುದಿನ ರಘುವಿಗೆ  ” ಕೊಲೆಗಾರರು ಸಿಕ್ಕಿದ್ದಾರೆ,  ನೀವು ಪೊಲೀಸ್ ಠಾಣೆಗೆ ಬರಲು ಎಸ್ಐ  ಕ್ರಾಂತಿಯವರು ಹೇಳಿ ಕಳಿಸಿದ್ದಾರೆ” ಅಂತ ಪೊಲೀಸ್ ಪೇದೆ ಬಂದು ಹೇಳಿದ.  ಕೂಡಲೇ ರಘು ಪೊಲೀಸ್ ಠಾಣೆಗೆ ಹೋಗಿ ಅವರು ಯಾರು ಅಂತ ನೋಡಿ ತಲೆ ತಿರುಗಿದಂತಾಗಿ, ನಂಬಲು ಸಾಧ್ಯವಾಗದೆ ಅಲ್ಲೇ ಕುಸಿದು ಕುಳಿತ. 

ಯಾರವರು ಮದ್ಯಾಹ್ನ  ಮೂರು ಗಂಟೆಗೆ ಬಂದು ಕೊಲೆ ಮಾಡಿದ  ಕೊಲೆಗಾರರು? ಹೇಗೆ ಕೊಲೆ ಮಾಡಿ, ಒಳಗಡೆಯಿಂದ  ಚಿಲುಕ ಹಾಕಿ ಹೊರಗಡೆ ಹೋದರು? ಕೊಲೆ ಮಾಡಿದ ಉದ್ದೇಶವಾದರೂ ಏನು? ಎಸ್ಐ  ಕ್ರಾಂತಿಯವರು ಹೇಗೆ ಕೊಲೆಗಾರರನ್ನು ಕಂಡು ಹಿಡಿದರು?

ಮುಕ್ತಾಯ –  ಮುಂದಿನ ಭಾಗದಲ್ಲಿ 

– ಶ್ರೀನಾಥ್ ಹರದೂರ ಚಿದಂಬರ  

4 thoughts on “ಮಧ್ಯಾಹ್ನ ಮೂರು ಗಂಟೆ!! ಬಾಗ – ೨

    • ನಿಮ್ಮ ಅನಿಸಿಕೆಗೆ ಧನ್ಯವಾದಗಳು… ನಾಳೆಯ ಬಾಗದಲ್ಲಿ ಮುಗಿಸುತ್ತಿದ್ದೇನೆ. ಓದಿ ನಿಮ್ಮ ಅಭಿಪ್ರಾಯ ತಿಳಿಸಿ. ಇದು ನನ್ನ ಮೊದಲ ಪ್ರಯತ್ನ.

      Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s