ಮಧ್ಯಾಹ್ನ ಮೂರು ಗಂಟೆ!!

ಸಂಜೆ ಕೆಲಸ ಮುಗಿಸಿ ಬಂದ  ರಘು,  ಎಷ್ಟು ಹೊತ್ತು  ಮನೆಯ ಬೆಲ್ ಒತ್ತಿದರು,  ಒಳಗಿದ್ದ ಪವಿತ್ರ ಬಾಗಿಲು ತೆಗೆಯಲಿಲ್ಲ. ರಘುವಿಗೆ ಸ್ವಲ್ಪ ಗಾಬರಿಯಾಯಿತು, ಯಾಕಂದರೆ ಮಗು ಮಲಗಿದ್ದರೆ ರಘು ಬರುವ ಸಮಯದಲ್ಲಿ  ಬಾಗಿಲ ಬಳಿಯಲ್ಲೇ ಕುಳಿತಿರುತ್ತಿದ್ದಳು. ಮಗು ಮಲಗಿಲ್ಲ ಅಂದರೆ ಮಗುವನ್ನು ಎತ್ತಿಕೊಂಡು ಬಂದು ಬಾಗಿಲು ತೆಗೆಯುತ್ತಿದಳು. ಆದರೆ ಇವತ್ತು ಯಾಕೆ ಎಷ್ಟು ಬೆಲ್ ಮಾಡಿದರು ಬಾಗಿಲು ತೆಗೆಯುತ್ತಿಲ್ಲ ಅಂತ ಗೊತ್ತಾಗದೆ ಕಿಟಕಿಯಿಂದ ಬಗ್ಗಿ  ಮನೆಯ ಒಳಗಡೆ  ನೋಡಿದ. ಒಳಗಡೆ ಹಾಲಿನ ಅರ್ಧಭಾಗ ಮಾತ್ರ ಕಾಣಿಸುತ್ತಿತ್ತು. ಅಡುಗೆ ಮನೆಯಲ್ಲಿ ಮಲಗಿದಾಗ ಕಾಲು ಚಾಚುವಂತೆ ಪವಿತ್ರಳ ಕಾಲು ಕಾಣಿಸುತ್ತಿತ್ತು. ರಘು ಬಹಳ ಗಾಬರಿಯಾಗಿ ಕೂಗತೊಡಗಿದ. ಅವನ ಕೂಗು ಕೇಳಿ ಅಕ್ಕ ಪಕ್ಕದ ಮನೆಯವರು ಬಂದು ಏನಾಯಿತು ಅಂತ ಕೇಳಿದರು. ರಘು ಹೇಳಿದ್ದನ್ನು ಕೇಳಿ ಅವರು ಕೂಡ ಕಿಟಕಿಯಿಂದ ಬಗ್ಗಿ ನೋಡಿ, ಬಾಗಿಲನ್ನು ಒಡೆದು ಒಳಗಡೆ ಹೋಗುವ ಅಂತ ಹೇಳಿದರು. ಅದರಂತೆ ಎಲ್ಲರು ಸೇರಿ ಬಾಗಿಲನ್ನು ಒಡೆದು ಒಳಗಡೆ ಹೋದರು. ಅಲ್ಲಿನ ದೃಶ್ಯ ನೋಡಲು ಭಯಂಕರವಾಗಿತ್ತು.  ಅಡುಗೆ ಮನೆ ಪೂರ್ತಿ ರಕ್ತ ಸಿಕ್ತವಾಗಿತ್ತು. ಪವಿತ್ರಳ ಕುತ್ತಿಗೆ ಕತ್ತರಿಸಿದ್ದರಿಂದ ರಕ್ತ ಹರಿದು  ನಿಂತು ಹೋಗಿತ್ತು. ಕೂಡಲೇ ರಘು ಮಗುವನ್ನು ಹುಡುಕುತ್ತ ಕೋಣೆಯ ಒಳಗಡೆ ಹೋದನು. ಆದರೆ ಅಲ್ಲಿನ ದೃಶ್ಯ ಮಾತ್ರ ಹೃದಯ ಕಲಕುವಂತೆ  ಇತ್ತು. ಮಗುವನ್ನು ಕೂಡ ಕುತ್ತಿಗೆ ಕತ್ತರಿಸಿ ಕೊಲ್ಲಲಾಗಿತ್ತು .  ರಘು ಆ ದೃಶ್ಯವನ್ನು ನೋಡಲಾಗದೆ ಅಲ್ಲಿಯೇ ಕುಸಿದು ಬಿದ್ದನು. 

ರಘುವಿಗೆ ಎಚ್ಚರವಾದಾಗ ಆಗಲೇ ಪೊಲೀಸರು ಮನೆಗೆ ಬಂದಿದ್ದರು. ಮನೆಯಲ್ಲಿ ಪೊಲೀಸರನ್ನು ಬಿಟ್ಟರೆ ಯಾರು ಇರಲಿಲ್ಲ. ರಘು ಎದ್ದ ಕೂಡಲೇ ಪವಿತ್ರಳ ಹತ್ತಿರ ಜೋರಾಗಿ ಅಳುತ್ತ ಹೋಗಲು ಪ್ರಯತ್ನಿಸಿದನು. ಆದರೆ ಪೊಲೀಸರು ಸಿಗುವ ಸಾಕ್ಷಿಗೆ ತೊಂದರೆ ಆಗುತ್ತೆ ಅಂತ  ಅವನನ್ನು ಹೋಗಲು ಬಿಡದೆ ತಡೆದರು. ರಘು ಅಲ್ಲಿಯೇ ಅಳುತ್ತ ಕುಳಿತ. ಪವಿತ್ರ ಮತ್ತು ಮಗುವಿನ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ತೆಗೆದುಕೊಂಡು ಹೋದರು. ವಿಧಿ ವಿಜ್ಞಾನ ತಂಡ ಆಗಲೇ ಯಾವುದಾದರು ಬೆರಳಚ್ಚು ಸಿಗುವುದೇ, ಏನಾದರು ಸುಳಿವು ಸಿಗುವದೇ ಅಂತ ಮನೆ ತುಂಬ ಹುಡುಕಾಡುತ್ತಿದ್ದರು. ಮನೆಯಾ ಮೂಲೆ ಮೂಲೆಯ   ಛಾಯಾಚಿತ್ರ ತೆಗೆದುಕೊಳ್ಳುತ್ತಿದ್ದರು.  ಎಸ್ಐ  ಕ್ರಾಂತಿ ರಘುವಿನ ಪಕ್ಕ ಬಂದು ಕುಳಿತುಕೊಂಡು ರಘುವಿಗೆ ಸಮಾಧಾನ ಮಾಡಿ, ನೀವು ನಾಳೆ  ಪೊಲೀಸ್ ಠಾಣೆಗೆ ಬನ್ನಿ ಸ್ವಲ್ಪ ಮಾತನಾಡಬೇಕು ಅಂತ ಹೇಳಿ ಹೋದರು.  ಹೊರಗಡೆ ನಿಂತ್ತಿದ್ದ ರಘುವಿನ ಸ್ನೇಹಿತರು, ಪವಿತ್ರಳ ತಂದೆ ತಾಯಿ ಎಲ್ಲರು ಮನೆಯೊಳಗೆ ಬಂದರು. ಯಾರು ಯಾರಿಗೆ ಸಮಾಧಾನ ಮಾಡಬೇಕು ಅನ್ನುವುದೇ ಗೊತ್ತಾಗದೆ ಒದ್ದಾಡುತ್ತಿದ್ದರು. 

ಎಸ್ಐ  ಕ್ರಾಂತಿ ತಮ್ಮ ತನಿಖೆಯನ್ನು ಶುರು ಮಾಡಿದ್ದರು. ಅವರು  ಮೊದಲ ಅನುಮಾನ ಪಡುತ್ತಿದ್ದುದೇ ರಘುವಿನ ಮೇಲೆ. ಎಸ್ಐ  ಕ್ರಾಂತಿ ಅಲ್ಲಿನ ಅಕ್ಕ ಪಕ್ಕದ ಮನೆಯಲ್ಲಿ ವಿಚಾರಿಸಿದಾಗ,  ಅವರಿಗೆ ಸಿಕ್ಕ ಮಾಹಿತಿ ಪ್ರಕಾರ  ರಘು ಮತ್ತು ಪವಿತ್ರ ಪ್ರತಿ ದಿವಸ ಮನೆಯಲ್ಲಿ ಜಗಳ ಮಾಡಿಕೊಳ್ಳುತ್ತಿದ್ದರು, ರಘು ಅನೇಕ ಬಾರಿ ಪವಿತ್ರಾಳಿಗೆ ಹೊಡೆದಿದ್ದ ಅನ್ನುವುದು. ಮಾರನೇ ದಿವಸ ರಘು ಪೊಲೀಸ್ ಠಾಣೆಗೆ ಬರುವ ಮುಂಚೆನೇ ಎಸ್ಐ  ಕ್ರಾಂತಿ ರಘುವಿನ ಆಫೀಸಿಗೆ ಹೋಗಿ ಕೊಲೆ ನಡೆದ ದಿವಸದ ಅವನ  ದಿನಚರಿಯಾ ಬಗ್ಗೆ  ಮಾಹಿತಿ ಕಲೆ ಹಾಕಿದ್ದರು. ಬೆಳಿಗ್ಗೆ ಕೆಲಸಕ್ಕೆ ಬಂದ ರಘು ಮಧ್ಯಾಹ್ನ   ಎರಡು ಗಂಟೆಗಳ ಕಾಲ ಆಫೀಸ್ನಲ್ಲಿ ಇರಲಿಲ್ಲ. ಯಾವುದೊ ಕೆಲಸದ ಮೇಲೆ ಹೊರಗಡೆ ಹೋಗಿದ್ದ ಎಂಬುದು ತಿಳಿದು ಬಂದಿತ್ತು.  ಅಕ್ಕ ಪಕ್ಕದ ಮನೆಯವರ ಪ್ರಕಾರ ಮಧ್ಯಾಹ್ನ ಹನ್ನೆರೆಡು ಗಂಟೆಗೆ ಮನೆಯ ಹೊರಗಡೆ ಪವಿತ್ರ ತನ್ನ ಮಗುವಿಗೆ ಊಟ ಮಾಡಿಸುವುದನ್ನು ನೋಡಿದ್ದರು. ಅಂದರೆ ಆ ಮಾಹಿತಿಯ ಪ್ರಕಾರ ಪವಿತ್ರ ಮತ್ತು ಮಗುವಿನ ಕೊಲೆ  ಹನ್ನೆರಡು ಗಂಟೆಯ ನಂತರ  ನಡೆದಿರಬೇಕು, ರಘು ಕೂಡ ಮಧ್ಯಾಹ್ನದ ವೇಳೆಗೆ ಆಫೀಸಿನಿಂದ ಹೊರಗಡೆ ಹೋಗಿದ್ದ, ಅಂದರೆ ಕೊಲೆ ಮಾಡಲೇ ಯಾಕೆ ಅವನು ಬಂದಿರಬಾರದು ಅಂತ ಅನುಮಾನ ಶುರುವಾಗಿತ್ತು. ಎಸ್ಐ  ಕ್ರಾಂತಿ ರಘುವನ್ನು ಬಂದರೆ ಅವನನ್ನು  ವಿಚಾರಿಸಲು ತಯಾರು ಮಾಡಿಕೊಂಡು ಕುಳಿತಿರುವಾಗಲೇ ರಘು ಪೊಲೀಸ್ ಠಾಣೆಗೆ ಬಂದನು. 

ರಘು ಸ್ವಲ್ಪ ಸುಧಾರಿಸಿಕೊಂಡಿದ್ದ ಹಾಗು ಆದ ಆಘಾತದಿಂದ ಹೊರಬಂದು  ಮಾತನಾಡುವ ಸ್ಥಿತಿಯಲ್ಲಿದ್ದ. ಎಸ್ಐ ಕ್ರಾಂತಿ ನೇರವಾಗಿ ರಘುವಿಗೆ ” ನಿಮ್ಮ ಪವಿತ್ರಳ ಸಂಬಂಧ  ಚೆನ್ನಾಗಿರಲಿಲ್ಲ, ಹಾಗಾಗಿ ನೀವೇ ಯಾಕೆ ಕೊಲೆ ಮಾಡಿರಬಾರದು “ಅಂತ ಕೇಳಿದರು. ಅದಕ್ಕೆ ರಘು ಅದನ್ನು ನಿರಾಕರಿಸಿ ”  ನಮ್ಮಿಬ್ಬರ ಮದ್ಯೆ ಜಗಳ ನಡೆಯುತ್ತಿತ್ತು, ಅದನ್ನು ನಾನು ಒಪ್ಪಿಕೊಳ್ಳುತ್ತೇನೆ, ಆದರೆ ನಾನು ಅವಳನ್ನು ಮತ್ತು ನನ್ನ ಮಗುವನ್ನು ಕೊಲ್ಲುವುದು ನನ್ನನ್ನೇ ಕೊಂದು ಕೊಂಡಂತೆ, ನಾನು ಕೊಲ್ಲಲಿಲ್ಲ ”  ಎಂದು ಅಳುತ್ತಾ ಕುಳಿತನು. ಎಸ್ಐ ಕ್ರಾಂತಿ  ರಘುವಿಗೆ ” ನಿನ್ನೆ ಮಧ್ಯಾಹ್ನ ನೀವು ಎಲ್ಲಿಗೆ ಹೋಗಿದ್ರಿ ” ಅಂತ ಕೇಳಿದ್ದಕ್ಕೆ, ರಘು ” ನಾನು ನನ್ನ ಸ್ಕೂಟರನ್ನು ರಿಪೇರಿಗೆ ಕೊಡಲು ಹೋಗಿದ್ದೆ” ಎಂದು ಉತ್ತರ ಕೊಟ್ಟನು.  ಎಸ್ಐ ಕ್ರಾಂತಿ ” ಯಾವ ಗ್ಯಾರೇಜು, ಅದರ ಅದರ ಅಡ್ರೆಸ್ ಕೊಡಿ” ಎಂದು ಪೆನ್ನು ಮತ್ತು ಹಾಳೆ ಕೊಟ್ಟರು. ರಘು ಗ್ಯಾರೇಜಿನ ಅಡ್ರೆಸ್ ಕೊಟ್ಟು ” ನಾನು ಹೊರಡಬಹುದಾ ” ಅಂತ ಕೇಳಿದನು.  ಅದಕ್ಕೆ ಎಸ್ಐ ಕ್ರಾಂತಿ” ನಿಮಗೆ ಯಾರ ಮೇಲಾದರೂ ಅನುಮಾನ ಇದೆಯಾ? ಯಾರು ಇದನ್ನು ಮಾಡಬಹುದು ?  ಯೋಚಿಸಿ ಹೇಳಿ, ಇತ್ತೀಚಿಗೆ ನಡೆದ ಯಾವುದೇ ಅನೆಪೇಕ್ಷಿತ ಘಟನೆ ಯಾವುದಾದರೂ ನಡೆದ್ದಿದ್ದರೆ ಹೇಳಿ ” ಅಂತ ಕೇಳಿದರು. ಅದಕ್ಕೆ ” ಸದ್ಯಕ್ಕೆ ಯಾವುದು ನೆನಪಾಗುತ್ತಿಲ್ಲ, ನೆನಪಾದರೆ ಹೇಳುತ್ತೇನೆ” ಎಂದು ಹೇಳುತ್ತಾ ಹೊರಡಲು  ಅನುವಾದನು.  ” ಈಗ ಹೋಗಿಬನ್ನಿ,  ಹೋಗುವ ಮುನ್ನ ನಿಮ್ಮ ಬೆರಳಚ್ಚಿನ ಸ್ಯಾಂಪಲ್ ಕೊಟ್ಟು ಹೋಗಿ, ಮತ್ತೆ ಏನಾದರು ಬೇಕಾದರೆ ಕರೆಯುತ್ತೇವೆ” ಅಂತ ಹೇಳಿ ಎಸ್ಐ ಕ್ರಾಂತಿ ರಘುವನ್ನು ಕಳುಹಿಸಿದರು. 

ರಘು ಬೆರಳಚ್ಚಿನ ಸ್ಯಾಂಪಲ್  ಕೊಟ್ಟು  ಹೋದ ಕೂಡಲೇ, ಎಸ್ಐ ಕ್ರಾಂತಿ ರಘು ಹೇಳಿದ ಗ್ಯಾರೇಜಿನ ವಿಷ್ಯ ಎಷ್ಟು ಸತ್ಯ ಅಂತ ತಿಳಿದುಕೊಳ್ಳಲು ಹಾಗು ರಘುವಿನ ಕಾಲ್ ರೆಕಾರ್ಡ್ ತೆಗೆಯಲು  ಒಬ್ಬ ಪೊಲೀಸ್ ಪೇದೆಗೆ ಹೇಳಿದರು.  ನಂತರ  ಕೊಲೆ ನಡೆದ ಆ ಮನೆಯಲ್ಲಿ ಸೆರೆ ಹಿಡಿದ  ಎಲ್ಲ ಛಾಯಾಚಿತ್ರಗಳನ್ನು ನೋಡುತ್ತಾ ಕುಳಿತರು. ಮನೆಯ ಬಾಗಿಲು ಯಾರು ಒಡೆದಿರಲಿಲ್ಲ, ಅಲ್ಲಿನ ಜನ ಹೇಳುವಂತೆ ಒಳಗಡೆಯಿಂದ ಚಿಲಕ ಹಾಕಿತ್ತು, ಅಡುಗೆ ಮನೆಯಲ್ಲಿ  ಸುಮಾರು ಐದು ಜನಕ್ಕೆ ಆಗುವಷ್ಟು ಅಡುಗೆ ತಯಾರು ಆಗಿತ್ತು, ಅಂದರೆ  ರಘು ಮತ್ತು ಪವಿತ್ರ ಇಬ್ಬರಿಗೆ ಅಡುಗೆ  ಸೇರಿಸಿ  ಮಾಡಿದರೂ ,  ಖಂಡಿತ ಇಬ್ಬರಂತೂ ಮನೆಗೆ ಬಂದಿರಬೇಕು,   ಊಟಕ್ಕೆ ಉಳಿದಿದ್ದಾರೆ ಅಂದರೆ, ಬಹಳ ಪರಿಚಯ ಇರಲೇ ಬೇಕು,  ಬಂದುಗಳು ಅಥವಾ ಸ್ನೇಹಿತರೂ  ಆಗಿರಬೇಕು,  ರಘು ಮತ್ತು ಅವನ ಸ್ನೇಹಿತರು ಸೇರಿ ಮಾಡಿರಬಹುದಾ? ಅವನು ಅಲ್ಲದಿದ್ದರೆ ಮತ್ತ್ಯಾರು? ಕೊಲೆ ಮಾಡಿ ಹೋದರೆ ಒಳಗಡೆ ಚಿಲಕ ಯಾರು ಹಾಕಿದರು? ಹೀಗೆ ಯೋಚನೆ ಮಾಡುತ್ತಾ ಸಿಕ್ಕ ಮಾಹಿತಿ ಜೊತೆಗೆ ತಾಳೆ ಹಾಕಲು ಶುರು ಮಾಡಿದರು. 

ಮಾರನೆಯ ದಿವಸ ಮರಣೋತ್ತರ ಪರೀಕ್ಷೆಯ ವರದಿ ಬಂದಿತು. ಅದರಲ್ಲಿ ಹರಿತವಾದ ವಸ್ತುವಿನಿಂದ  ಕುತ್ತಿಗೆ ಕತ್ತರಿಸಿದ್ದರಿಂದ   ಸತ್ತಿದ್ದಾರೆ  ಹಾಗು  ಮಧ್ಯಾಹ್ನ  ಒಂದರಿಂದ  ನಾಲಕ್ಕು ಗಂಟೆಯ ಸಮಯದಲ್ಲಿ ಕೊಲೆ ಮಾಡಿರಬಹುದು ಎಂದು ವರದಿ ಆಗಿತ್ತು. ಅಡುಗೆ ಮನೆಯಲ್ಲಿ ಸಿಕ್ಕ  ಚಾಕು ಮತ್ತು  ಚಾಕು ಮೇಲೆ ಇದ್ದ ರಕ್ತದ ಕಲೆಯನ್ನು ವಿಧಿ ವಿಜ್ಞಾನ ತಂಡದವರು ಸಂಗ್ರಹಿಸಿದ್ದರು. ಅದರ ವರದಿ ಬರುವುದು ಇನ್ನು ಬಾಕಿ ಇತ್ತು. ಎಸ್ಐ ಕ್ರಾಂತಿ ಕ್ರಾಂತಿಗೆ ಆಗ್ಲೇ ಮೇಲಧಿಕಾರಿಯಿಂದ ಕೊಲೆ ಕೇಸನ್ನು ಬೇಗ ಮುಗಿಸಲು ಒತ್ತಡ ಹಾಕಲು ಶುರು ಮಾಡಿದ್ದರು.  ಎಸ್ಐ ಕ್ರಾಂತಿ ಕ್ರಾಂತಿ ವಿಧಿ ವಿಜ್ಞಾನ ತಂಡಕ್ಕೆ ಫೋನ್ ಮಾಡಿ ವರದಿ ಬೇಗ ನೀಡಲು ಮನವಿ ಮಾಡಿದ್ದಕ್ಕೆ, ಅವರು ಸಂಜೆಯ ವೇಳೆಗೆ ಕೊಡುತ್ತೇವೆ ಅಂತ ಹೇಳಿದರು. ಅಷ್ಟರಲ್ಲಿ ಗ್ಯಾರೇಜಿನ ವಿಷಯ ತಿಳಿಯಲು ಹೋದ ಪೊಲೀಸ್ ಪೇದೆ ಬಂದು ರಘು ಹೇಳಿದ ವಿಷಯ ಸುಳ್ಳು, ಅವನು ಅಲ್ಲಿ ಯಾವ ಸ್ಕೂಟರನ್ನು ರಿಪೇರಿಗೆ ಕೊಟ್ಟಿರಲಿಲ್ಲ ಅಂತ ಹೇಳಿದನು. ಎಸ್ಐ  ಕ್ರಾಂತಿಗೆ ರಘುವಿನ ಮೇಲಿನ ಅನುಮಾನ ಜಾಸ್ತಿ ಆಯಿತು. ರಘುವಿನ ಸಂಪೂರ್ಣ ಮಾಹಿತಿ ಕಲೆ ಹಾಕಲು ಹೇಳಿದರು.  ಆಗ ಅವರ ಮಾಹಿತಿದಾರ ಅಲ್ಲಿಗೆ ಬಂದು, ರಘುವಿನ ಮನೆ ರಸ್ತೆಯ ಕೊನೆಯಲ್ಲಿದ್ದ ಬೀಡಾ ಅಂಗಡಿಯವನು ಮಧ್ಯಾಹ್ನ  ಮೂರು ಗಂಟೆಯ ವೇಳೆಗೆ ರಘುವಿನ ಮನೆಯ ಕಡೆಯಿಂದ ಒಬ್ಬ ಗಂಡಸು ಮತ್ತು ಹೆಂಗಸು ಮುಖ ಮುಚ್ಚಿಕೊಂಡು  ಹೋಗುತ್ತಿದ್ದದ್ದನ್ನು  ನೋಡಿದೆ  ಅಂತ ಹೇಳಿದ್ದಾನೆ  ಎಂದು ಮಾಹಿತಿ ಕೊಟ್ಟ. ಮನೆಯ ಸುತ್ತಮುತ್ತಲು ಎಲ್ಲಾದರೂ ಸಿಸಿ ಕ್ಯಾಮೆರಾ  ಇದ್ದರೆ ಅದರ ರೆಕಾರ್ಡ್ ತೆಗೆದುಕೊಂಡು ಬರಲು ಪೊಲೀಸ್ ಪೇದೆಗೆ  ಹೇಳಿದರು.  ಅದರಿಂದ ಅವರ ಗುರುತು ಏನಾದರು ಪತ್ತೆ ಆಗುತ್ತಾ ನೋಡೋಣ ಅಂತ ಅಂದುಕೊಂಡರು. 

ಸಂಜೆಯ ವೇಳೆಗೆ ವಿಧಿ ವಿಜ್ಞಾನದ ತಂಡದಿಂದ ವರದಿ ಎಸ್ಐ ಕ್ರಾಂತಿ ಕ್ರಾಂತಿಯವರಿಗೆ ತಲುಪಿತು. ವರದಿಯ ಪ್ರಕಾರ ಮನೆಯಲ್ಲಿ ಸಿಕ್ಕ ಚಾಕುವಿನ ಮೇಲೆ ಮೂರು  ಜನರ ಬೆರಳಚ್ಚು ಸಿಕ್ಕಿತ್ತು.  ಒಂದು ಪವಿತ್ರಳದು,  ಇನ್ನೊಂದು ರಘುವಿನದು. ಇನ್ನೊಂದು x  ಅಂತ ಮಾರ್ಕ್ ಮಾಡಿದ್ದರು.  ಅದನ್ನು ನೋಡುತ್ತಿರುವಾಗಲೇ ಪೊಲೀಸ್ ಪೇದೆ ಬಂದು ರಘು  ಮಧ್ಯಾಹ್ನ  ಹೋಗಿದ್ದು ಅವನ ಪ್ರೇಯಸಿಯ  ಮನೆಗೆ, ಅದೇ ಕಾರಣಕ್ಕೆ ಅವನು ಮತ್ತು ಪವಿತ್ರ ಜಗಳ ಆಡುತ್ತಿದ್ದದು ಎಂದು ಮಾಹಿತಿ ಕೊಟ್ಟನು. 

ಎಸ್ಐ ಕ್ರಾಂತಿಯ ಮುಂದೆ ಅನೇಕ ಪ್ರಶ್ನೆಗಳು ಮೂಡಿದವು.  ರಘು  ಗ್ಯಾರೇಜಿಗೆ  ಹೋಗಿದ್ದು ಅಂತ ಯಾಕೆ ಸುಳ್ಳು ಹೇಳಿದ?  ಪ್ರೇಯಸಿಯ ಬಗ್ಗೆ ಯಾಕೆ ಮುಚ್ಚಿಟ್ಟ?  ಮಧ್ಯಾಹ್ನ  ರಘು ಮತ್ತು ಅವನ ಪ್ರೇಯಸಿಯೇ  ಕೊಲೆ ಮಾಡಿ ಮುಖ ಮುಚ್ಚಿಕೊಂಡು ಹೋಗಿದ್ದಾ ? ರಘುವಿನ ಬೆರಳಚ್ಚು ಕೂಡ ಚಾಕುವಿನ ಮೇಲೆ ಇದೆ, ಹಾಗಾದರೆ ಅವನೇ ತನ್ನ ಮಗುವನ್ನು ಕೂಡ ಕೊಲೆ ಮಾಡಿದನೇ? ರಘು ಮತ್ತು ಅವನ ಪ್ರೇಯಸಿ ಅಲ್ಲದಿದ್ದರೆ ಹಾಗಾದರೆ ಯಾರು? ಮನೆಯ ಒಳಗಡೆಯಿಂದ ಚಿಲಕ ಯಾರು ಹಾಕಿದರು? ಅದು ಹೇಗೆ ಸಾಧ್ಯ?

ಮಧ್ಯಾಹ್ನ  ಮೂರು ಗಂಟೆಗೆ ಹೋಗುತ್ತಿದ್ದ ಆ ಗಂಡಸು ಮತ್ತು ಹೆಂಗಸು ಯಾರು?

ಮುಂದಿನ ಭಾಗ -ನಾಳೆಯ ಸಂಚಿಕೆಯಲ್ಲಿ 

– ಶ್ರೀನಾಥ್ ಹರದೂರ ಚಿದಂಬರ 

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s