ನಾ ನಟಿಸಿದ ಮೊದಲ ಸಿನಿಮಾಗೆ ರಾಜ್ಯ ಪ್ರಶಸ್ತಿ !!

ಅವತ್ತು ಊರಲೆಲ್ಲಾ ಬರಿ ಅದೇ  ಸುದ್ದಿ,  ಯಾರೋ ಸಿನಿಮಾ ಚಿತ್ರೀಕರಣಕ್ಕೆ  ಬರುತ್ತಾ  ಇದ್ದಾರೆ ಅಂತ.  ಕನ್ನಡ ಸಿನೆಮಾದ ಚಿತ್ರೀಕರಣ ಅಂತೇ,    ಸಾಹಸಮಯ ಚಿತ್ರ ಅಂತೇ,  ನಾಗಭರಣ ಅವರ ನಿರ್ದೇಶನ ಅಂತೇ, ಶ್ರೀಧರ ಹೀರೊ ಅಂತೇ, ದತ್ತಾತ್ರೇಯ ಕೇಡಿ ಅಂತೇ ,… ಹೀಗೆ ಅಂತೇ ಕಂತೆಗಳು ಹರಿದಾಡುತ್ತಿದ್ದವು.  ನಾನು ಯಾವತ್ತೂ ಸಿನಿಮಾ ಚಿತ್ರೀಕರಣ  ನೋಡಿರಲಿಲ್ಲ, ಹಾಗಾಗಿ ಚಿತ್ರೀಕರಣ  ನೋಡಲು ಸಿಕ್ಕಾಪಟ್ಟೆ ಉತ್ಸಾಹದಲ್ಲಿ ಇದ್ದೆ.  ಮೊದಲಿನಿಂದಲೂ ನನಗೆ  ಸಿನಿಮಾ ನೋಡುವುದೆಂದರೆ ಬಹಳ ಇಷ್ಟ.  ಸಾಹಸಮಯ ಸಿನಿಮಾಗಳೆಂದರೆ ಮುಗಿತು, ಬಾಯಿ ಬಿಟ್ಟುಕೊಂಡು ನೋಡುತ್ತಿದ್ದೆ. ಹೇಗೆ ಸಿನಿಮಾ ಚಿತ್ರೀಕರಣ ಮಾಡುತ್ತಾರೆ ಅನ್ನುವ ಕುತೂಹಲ ಪ್ರತಿ ಸಿನಿಮಾ ನೋಡುವಾಗಲೂ ಇರುತ್ತಿತ್ತು. ಅಂತೂ ಇಂತೂ  ಸಿನಿಮಾ ಚಿತ್ರೀಕರಣ  ನೋಡುವ ಅವಕಾಶ ಬಂದೊದಗಿತ್ತು. 

ಕೆಲವು ದಿನಗಳ ನಂತರ ಸಿನಿಮಾ ಚಿತ್ರೀಕರಣ  ತಂಡ  ಊರಿಗೆ ಕಾಲಿಟ್ಟಿತು. ಆದರೆ ಒಂದು ವಾರವಾದರೂ ಚಿತ್ರೀಕರಣ  ನೋಡುವ ಅವಕಾಶ ನನಗೆ ಸಿಗಲಿಲ್ಲ. ಶಾಲೆಗೆ ಹೋಗಿ ಬರುವಷ್ಟರಲ್ಲಿ ಚಿತ್ರೀಕರಣ  ಮುಗಿದು ಹೋಗಿರುತ್ತಿತ್ತು.  ರಾತ್ರಿಯ ಚಿತ್ರೀಕರಣ  ನೋಡಲು ಮನೆಯಲ್ಲಿ ಬಿಡುತ್ತಿರಲಿಲ್ಲ. ಬಹಳ ಬೇಜಾರು ಆಗಿಬಿಟ್ಟಿತ್ತು. ಒಂದು ಶನಿವಾರ ಊರಿನಲ್ಲಿಯೇ ಚಿತ್ರೀಕರಣ  ನಡೀತಾ ಇತ್ತು. ಅವತ್ತು ಅರ್ಧ ದಿನ ಮಾತ್ರ ಶಾಲೆ ಇದ್ದಿದ್ದರಿಂದ ಚಿತ್ರೀಕರಣ  ನೋಡುವ ಮಹೂರ್ತ ಕೂಡಿ ಬಂತು.  ಅವತ್ತು ಅಲ್ಲಿ  ಪೊಲೀಸರು ವ್ಯಾನ್ ನಿಂದ ಇಳಿಯುವ ದೃಶ್ಯ ಚಿತ್ರೀಕರಣವಾಗುತ್ತಿತ್ತು. ರಸ್ತೆಯಲ್ಲಿ ಕೆಲವು ಟೈರ್ಗಳನ್ನು ಸುಟ್ಟಿದ್ದರು. ವ್ಯಾನ್ ಬಂದು ನಿಲ್ಲುತ್ತೆ, ಪೊಲೀಸರು ಅದರಿಂದ ದಡದಡನೆ  ಇಳಿಯಬೇಕು.  ಸರಿ ಸುಮಾರು ಮೂರು ಗಂಟೆಗಳ ಕಾಲ ಅದೇ ದೃಶ್ಯ ಪದೇ ಪದೇ ಚಿತ್ರೀಕರಣ  ಮಾಡುತ್ತಿದ್ದರು. ನನಗಂತೂ ಅದನ್ನು ನೋಡಿ ಸಿನಿಮಾ ಚಿತ್ರೀಕರಣ  ಅಂದರೆ ಏನು ಅಂತ  ಅಂದುಕೊಂಡಿದ್ದನೋ ಅದಲ್ಲ ಅಂತ ಗೊತ್ತಾಯಿತು. ಅಲ್ಲಿಗೆ ನನ್ನ ಕುತೂಹಲ ಕರಗಿ ಸಿನಿಮಾ ಚಿತ್ರೀಕರಣ ನೋಡುವುದಕ್ಕಿಂತ ಸಿನಿಮಾ ಮಂದಿರದಲ್ಲಿ ಸಿನಿಮಾ  ನೋಡುವುದೇ ಮೇಲು  ಅಂತ ಅನಿಸಿತು.  ಅದಾದ ಮೇಲೆ  ಸಿನಿಮಾ ಚಿತ್ರೀಕರಣ  ನೋಡಲು ಹೋಗಲೇ ಇಲ್ಲ. 

ಸುಮಾರು ಹದಿನೈದು ದಿನ ಕಳೆದ  ಮೇಲೆ,  ಒಂದು ಭಾನುವಾರ ನಾವು ಮೈದಾನದಲ್ಲಿ ಆಡುವಾಗ ನನ್ನ ಸ್ನೇಹಿತನ ತಂದೆ ಅಲ್ಲಿಗೆ ಬಂದರು.  ಅವರು ಅವನಿಗೆ  ಏನೋ ಹೇಳಿದರು. ನನ್ನ ಸ್ನೇಹಿತ ಓಡಿಬಂದು ಸಿನಿಮಾದಲ್ಲಿ ನಟನೆ  ಮಾಡುತ್ತೀಯಾ ಅಂತ ಕೇಳಿದ. ನಾನು ಮನೆಯಲ್ಲಿ ಅಪ್ಪ ಅಮ್ಮನ ಹತ್ತಿರ ಅಪ್ಪಣೆ ಕೇಳಬೇಕು ಅಂತ ಕೂಡ ಯೋಚನೆ ಮಾಡದೆ ಮಾಡುತ್ತೀನಿ ಅಂತ ಹೇಳಿದೆ. ಅವರು ನಮ್ಮನ್ನು ಸಿನಿಮಾ ಚಿತ್ರೀಕರಣ ನಡೆಯುತ್ತಿದ್ದ ಜಾಗಕ್ಕೆ  ಕರೆದುಕೊಂಡು ಹೊರಟರು. ಆಗಲೇ ಅಲ್ಲಿ ನಮ್ಮಂತೆ ನೂರಾರು ಜನ ಸೇರಿದ್ದರು. ನಿರ್ದೇಶಕ ನಾಗಾಭರಣ ಒಂದು ವ್ಯಾನಿನಲ್ಲಿ ಕ್ಯಾಮೆರಾದ ಜೊತೆ ಮೈಕ್ ಹಿಡಿದುಕೊಂಡು ನಿಂತಿದ್ದರು. ನನ್ನ ಸ್ನೇಹಿತನ  ಅಪ್ಪ ಬಂದು ನಿರ್ದೇಶಕರು  ಆಕ್ಷನ್ ಅಂದ ಕೂಡಲೇ ಮುಖದಲ್ಲಿ ಕೋಪ ತೋರಿಸುತ್ತ ಜೋರಾಗಿ ಕೂಗುತ್ತ ಆ ವ್ಯಾನಿನ ಹಿಂದೆ ಓಡಬೇಕು ಆಯ್ತಾ ಅಂದರು. ನಾವು ಅವರು ಹೇಳಿದ ಕೂಡಲೇ ಮುಖದಲ್ಲಿ ಕೋಪ ತೋರಿಸುತ್ತ ನಿಂತೆವು. ಸ್ವಲ್ಪ ಹೊತ್ತಿಗೆ ನಾಗಾಭರಣ ಆಕ್ಷನ್ ಅಂದರು, ನಾವು ವ್ಯಾನಿನ ಹಿಂದೆ ಮುಖದಲ್ಲಿ ಕೋಪ ತೋರಿಸುತ್ತ ಜೋರಾಗಿ ಕೂಗುತ್ತಾ ಓಡಿದೆವು.   ಐವತ್ತು ಮೀಟರ್ ಓಡಿದ  ಮೇಲೆ ಎಲ್ಲರು ನಿಂತರು. ನಮ್ಮನ್ನು ಮತ್ತೆ  ವಾಪಸು ಕಳುಹಿಸಿ, ಮತ್ತೆ ಓಡಿಸಿದರು.  ಇದೆ ರೀತಿ ಐದಾರು ಬಾರಿ ಆದ ಮೇಲೆ ನಮ್ಮ ಮುಖದ ಮೇಲಿದ್ದ ಕೋಪ ಹೋಗಿ ಅಸಹನೆ ಶುರುವಾಗಿ, ಅವರು ಆಕ್ಷನ್ ಅಂದರೆ  ಸುಮ್ಮನೆ  ಓಡಲು ಶುರು ಮಾಡಿದೆವು. ಅಂತೂ ಹದಿನೈದು ಬಾರಿ ಓಡಿದ ಮೇಲೆ ಕೊನೆಗೆ ಮುಗಿಯಿತು ಅಂದರು. ಅಂತೂ ಆ ಸಿನಿಮಾದಲ್ಲಿ ನನ್ನ ನಟನೆ ಮುಗಿದಿತ್ತು. ನನ್ನ ಸ್ನೇಹಿತನ ಅಪ್ಪ ನಮ್ಮಿಬ್ಬರಿಗೂ ಒಂದೊಂದು ಬಿಸ್ಕತ್ ಪ್ಯಾಕೆಟ್ ಕೊಟ್ಟು ಕಳುಹಿಸಿದರು. 

ಮುಂದೆ ಒಂದು ತಿಂಗಳ ತನಕ ನಾವು ಯಾರು ಸಿಕ್ಕಿದರು ಸಿನೆಮಾದಲ್ಲಿ ನಟಿಸಿದ ಬಗ್ಗೆ ಹೇಳುತ್ತಿದ್ದೆವು. ನನಗಂತೂ ಯಾವಾಗ ಸಿನಿಮಾ ಸಿನಿಮಾ ಮಂದಿರಕ್ಕೆ  ಬರುತ್ತೆ,  ನಾನು ಹೇಗೆ ಕಾಣಿಸುತ್ತೇನೆ ಅನ್ನುವ ಕುತೂಹಲ ಬಹಳ ಇತ್ತು. ಸ್ವಲ್ಪ ದಿನ ಕಳೆಯುವುದರೊಳಗೆ, ನಮ್ಮ ಆಟ  ಪಾಠದ ನಡುವೆ ನಾವು ನಟಿಸಿದ್ದು ನಮಗೆ ಮರೆತು ಹೋಗಿತ್ತು. ನಾಲ್ಕೈದು ತಿಂಗಳು ಆದ ಮೇಲೆ ಸಿನಿಮಾ ಬಿಡುಗಡೆ ಆಗಿ ನಮ್ಮ ಊರಿನ ಸಿನಿಮಾ ಮಂದಿರದಲ್ಲಿ  ಬಿಡುಗಡೆ ಆಯಿತು.  ನಾನು ನನ್ನ ತಾಯಿಯ ಜೊತೆ  ಸಿನಿಮಾ ನೋಡಲು ಹೋದೆ.  ಇಡೀ ಸಿನಿಮಾ ಮುಗಿಯುವವರೆಗೂ  ನಾನು  ನಟಿಸಿದ ದೃಶ್ಯಕ್ಕಾಗಿ ಕಾಯುತ್ತಿದ್ದೆ.  ಆದರೆ ನಾನು ಎಲ್ಲಿಯೂ ಕಾಣಿಸಲಿಲ್ಲ.  

ಸಿನೆಮಾದ ಕೊನೆಯ ದೃಶ್ಯದಲ್ಲಿ ಜನರ ಗುಂಪು  ಕೇಡಿಯನ್ನು ಅಟ್ಟಿಸಿಕೊಂಡು ಹೋಗುವ ದೃಶ್ಯದಲ್ಲಿ ನೂರಾರು ಜನರ ಜೊತೆಯಲ್ಲಿ ನಾನು ಕೂಡ ಒಬ್ಬನಾಗಿದ್ದೆ. 

ನಾನು ನಟಿಸಿದ ಸಿನೆಮಾದ ಹೆಸರು ” ಆಸ್ಫೋಟ” ಹಾಗು ೧೯೮೮ ರಲ್ಲಿ ಬಿಡುಗಡೆ ಆಗಿತ್ತು ಮತ್ತು  ರಾಜ್ಯ ಪ್ರಶಸ್ತಿ   (ಕಥೆ, ಚಿತ್ರಕಥೆ ಹಾಗು ಪೋಷಕ ನಟ)  ಕೂಡ ಬಂದಿದೆ.    ಸಿನಿಮಾ ಚಿತ್ರೀಕರಣ ನಡೆದ ಸ್ಥಳ  ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನಲ್ಲಿ.  

ಬಿಡುವಾದರೆ  ಒಮ್ಮೆ ಸಿನಿಮಾ ನೋಡಿ.  ಕೊನೆಯ ದೃಶ್ಯದಲ್ಲಿ  ಏನಾದರು  ನನ್ನನ್ನು ಕಂಡರೆ ಮರೆಯದೆ ತಿಳಿಸಿ.  

ನನ್ನ  ಮೊದಲ ಸಿನೆಮಾದ ಸಂಭಾವನೆ  ಒಂದು ಬಿಸ್ಕತ್ ಪ್ಯಾಕೆಟ್ ಹಾಗು  ನಾನು ನಟಿಸಿದ ಕೊನೆಯ ಸಿನಿಮಾ ಕೂಡ ಅದೇ. 

– ಶ್ರೀನಾಥ್ ಹರದೂರ ಚಿದಂಬರ 

2 thoughts on “ನಾ ನಟಿಸಿದ ಮೊದಲ ಸಿನಿಮಾಗೆ ರಾಜ್ಯ ಪ್ರಶಸ್ತಿ !!

  1. ಅಭಿನಂದನೆಗಳು. ನಿಮ್ಮ ಮೊದಲನೇ ಸಿನಿಮಾವೇ ರಾಜ್ಯ ಪ್ರಶಸ್ತಿಯನ್ನು ಪಡೆದಿದೆ.

    ಹೊಟೆಲ್ಲಿನಲ್ಲಿ ಟೇಬಲ್‌ ‌ಮೇಲೆ ಕುಳಿತು ಮಸಾಲೇ ದೋಸೆ ತಿನ್ನಲು ‌ಮಜವಾಗಿರುತ್ತದೆಯೇ ಹೊರತು ದೋಸೆ ಮಾಡುವುದನ್ನು ನೋಡಿದರೆ ವಾಕರಿಕೆ ಬಂದು ಬಿಡುತ್ತದೆ ಅದೇ ರೀತಿ ಚಿತ್ರವನ್ನು ಚಿತ್ರ ಮಂದಿರದಲ್ಲಿ ಮಾತ್ರ ನೋಡಬೇಕೇ ಹೊರತು, ಚಿತ್ರೀಕರಣ ನೋಡಲೇ ಬಾರದು

    Like

    • ಧನ್ಯವಾದಗಳು… ಅದಾದ ಮೇಲೆ ಇವತ್ತಿನವರೆಗೂ ನಿಂತುಕೊಂಡು ಚಿತ್ರೀಕರಣ ನೋಡೇ ಇಲ್ಲ. ನೀವು ಹೇಳಿದಂತೆ ಕೆಲವನ್ನು ನೋಡಿ ಅರಗಿಸಿಕೊಳ್ಳುವುದು ಕಷ್ಟ.

      Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s