ಮಿಸ್ಡ್ ಕಾಲ್ !!

ಬಸ್ ನಿಲ್ದಾಣದಲ್ಲಿ  ಚಂದ್ರು ತನ್ನ ಕೈ ಗಡಿಯಾರದ ಕಡೆ ಪದೇ ಪದೇ ನೋಡುತ್ತಾ, ” ಇಷ್ಟೋತ್ತಿಗೆ ಬಸ್ ಬರಬೇಕಿತ್ತಲ್ವಾ? ಈ ಬಿಎಂಟಿಸಿ ಬಸ್ ಯಾವಾಗಲು ಹಿಂಗೇನೆ,  ಯಾವಾಗ ಬೇಗ ಹೋಗಬೇಕೋ ಅವಾಗ ತಡವಾಗಿ ಬರುತ್ತೆ” ಅಂತ ಗೊಣಗುತ್ತ ಬಸ್ ಬರುವ ದಿಕ್ಕನ್ನು ನೋಡುತ್ತಾ  ನಿಂತಿದ್ದನು.  ಅವನ ಅಕ್ಕಪಕ್ಕದಲ್ಲಿ ಇವನಂತೆ ಬರುವ ಬಸ್ ಗೆ ಕಾಯುತ್ತ  ಹಲವರು ನಿಂತಿದ್ದರು.  ಆಗ  ಎದುರುಗಿದ್ದ ರಸ್ತೆಯ ಇನ್ನೊಂದು ಭಾಗದಿಂದ ರಸ್ತೆಯ ವಿಭಜಕವನ್ನು ಹಾರಿ ಒಬ್ಬ ವ್ಯಕ್ತಿ ಚಂದ್ರು ಕಾಯುತ್ತಿದ್ದ ಬಸ್ ನಿಲ್ದಾಣಕ್ಕೆ ಬಂದನು. ತುಂಬ ಚೆನ್ನಾಗಿ ಬಟ್ಟೆ ಹಾಕಿದ್ದನು. ಕುತ್ತಿಗೆಯಲ್ಲಿ  ಯಾವುದೋ ಕಂಪನಿಯಾ ಗುರುತಿನ ಚೀಟಿ ನೇತಾಡುತ್ತಿತ್ತು.  ಅವನು ಹಾಕಿದ್ದ ಶೂ ಫಳ ಫಳ ಹೊಳೆಯುತ್ತಿತ್ತು.  ಚಂದ್ರುವಿನ ಪಕ್ಕದಲ್ಲಿ ಬಂದು ನಿಂತು ಚಂದ್ರುಗೆ ”  hai ,  is there any volvo bus to  kempegowda bus stand now  ? ” ಅಂತ ಕೇಳಿದ.  ಚಂದ್ರು ” ಹೌದು”  ಅಂತ ಹೇಳಿ ಆಮೇಲೆ ” yes, in  five minutes ”  ಅಂತ ಇಂಗ್ಲಿಷ್ನಲ್ಲಿ ಉತ್ತರ ಕೊಟ್ಟ. ಅದಕ್ಕೆ ” ನೀವು ಕನ್ನಡದವರ?, ನಾನು ಕನ್ನಡದವನೇ, ಈಗಂತೂ  ಉತ್ತರ ಭಾರತದವರೇ ಜಾಸ್ತಿ ಇರತಾರೆ, ಹಾಗಾಗಿ ಇಂಗ್ಲಿಷಿನಲ್ಲಿ  ಮಾತನಾಡಿಸಿದೆ ಅಷ್ಟೇ,  ನನ್ನ ಹೆಸರು ಪ್ರತಾಪ್,  ಇನ್ಫೋಸಿಸ್ ನಲ್ಲಿ ಕೆಲಸ ಮಾಡುತ್ತಿದ್ದೇನೆ ಅಂತ ತನ್ನ ಪರಿಚಯ ಹೇಳಿದ. ಚಂದ್ರುವು ಕೂಡ ಅವನಿಗೆ ತನ್ನ ಪರಿಚಯ ಮಾಡಿಕೊಂಡನು. 

ಪ್ರತಾಪ್ ತನ್ನ ಊರು, ಯಾವಾಗ ಬೆಂಗಳೂರಿಗೆ ಬಂದಿದ್ದು, ಎಲ್ಲಿ ಇರುವುದು, ಕೆಲಸದ ಬಗ್ಗೆ, ಹೀಗೆ ಮಾತನಾಡುತ್ತಲೇ ಇದ್ದನು. ಚಂದ್ರು  ಹೂಂ, ಹೌದ, ಓಕೆ… ಹೀಗೆ ಇಷ್ಟೇ ಉತ್ತರ ಕೊಡುತ್ತ ನಿಂತಿದ್ದನು. ಚಂದ್ರುವಿಗೆ ಎಷ್ಟೋತ್ತಿಗೆ ಬಸ್ ಬರುವುದೋ, ಯಾವಾಗ ಹೊರಡುತ್ತೀನೋ ಅಂತ ಮನಸ್ಸಿನಲ್ಲಿ ಯೋಚನೆ ಮಾಡುತ್ತಿದ್ದನು.   ಮತ್ತೆ ಪ್ರತಾಪ್ ” ನೋಡಿ ಚಂದ್ರು ಇನ್ನು ಸ್ವಲ್ಪ ಹೊತ್ತಿಗೆ ಬಸ್ ಬರುತ್ತೆ, ಬೇಗ ನುಗ್ಗಿ  ಹತ್ತಿಕೊಂಡು ಬಿಡಿ,  ಇಲ್ಲ  ಅಂದ್ರೆ ಕೂರಲಿಕ್ಕೆ ಸೀಟ್ ಸಿಗಲ್ಲ,  ಮೊದಲು ನಾನು ಹತ್ತಿದರೆ ನಿಮಗೆ ಸೀಟ್ ಹಿಡಿಯುತ್ತೇನೆ, ನೀವು ಮೊದಲು ಹತ್ತಿದರೆ ನನಗೆ ಸೀಟ್ ಹಿಡಿಯಿರಿ ” ಅಂತ ಹೇಳಿದ. ಅದಕ್ಕೆ ಚಂದ್ರು ಜಾಸ್ತಿ ಏನು ಹೇಳದೆ  ಆಯಿತು ಹಾಗೆ ಮಾಡೋಣ ಅಂದ.  ಪ್ರತಾಪ್ ಚಂದ್ರುವಿನ  ಫೋನ್ ನಂಬರ್ ಕೇಳಿ, ತನ್ನ ಫೋನ್ ನಿಂದ  ಕಾಲ್ ಮಾಡಿದ.   ಆಮೇಲೆ  “ನಂಬರ್ ಸೇವ್ ಮಾಡಿಕೊಳ್ಳಿ,  ಯಾವಾಗಲಾದರೂ ಫೋನ್ ಮಾಡಿ,   ಮತ್ತೆ  ಭೇಟಿ ಮಾಡೋಣ ” ಅಂತ ಅಂದನು.  ಚಂದ್ರು ತನ್ನ ಫೋನ್ ತೆಗೆದು ಅವನ ನಂಬರ್ ಸೇವ್ ಮಾಡಿಕೊಂಡು   ” ಆಯಿತು ಮೀಟ್ ಮಾಡೋಣ”  ಅಂತ ಹೇಳಿ ಸುಮ್ಮನಾದನು. ಪ್ರತಾಪ್ ” ನಿಮ್ಮ ಭೇಟಿ  ಖುಷಿ ಕೊಟ್ಟಿತು”  ಎನ್ನುತ್ತಾ ಚಂದ್ರುವಿನ ಕೈ  ಕುಲುಕಿದನು.  ಚಂದ್ರು ಕೂಡ ” ನಿಮ್ಮ ಜೊತೆ ಮಾತನಾಡಿದ್ದು ತುಂಬಾ ಸಂತೋಷವಾಯಿತು” ಎಂದು ಕೈಲಿದ್ದ ಫೋನ್ ಅನ್ನು ಮೇಲಿನ ಜೇಬಿನಲ್ಲಿಟ್ಟು  ಪ್ರತಾಪನ ಕೈ ಕುಲುಕಿದನು. 

ಅಷ್ಟರಲ್ಲಿ ಪ್ರತಾಪ್ ಹೇಳಿದಂತೆ  ಬಸ್ ಬಂತು. ಚಂದ್ರು ಜೊತೆಗೆ ಪ್ರತಾಪ್ ಕೂಡ ಬಸ್ ಎಲ್ಲಿ ನಿಲ್ಲುತ್ತದೆ, ಬಸ್ಸಿನ ಭಾಗಿಲು ಎಲ್ಲಿಗೆ ಬರುತ್ತದೆ ಅಂತ ಲೆಕ್ಕಾಚಾರ ಹಾಕಿಕೊಂಡು ಅದರಂತೆ ಬಸ್ಸಿನ ಜೊತೆ ನಿಧಾನವಾಗಿ ಓಡತೊಡಗಿದನು.  ಬಸ್ಸಿನ ಭಾಗಿಲು ತೆಗೆಯುತ್ತಿದ್ದಂತೆ ಚಂದ್ರು ಮೊದಲು ನುಗ್ಗಿ ಬಸ್ ಹತ್ತಿ,  ಮೊದಲು  ಕಾಲಿ ಕಾಣಿಸಿದ  ಸೀಟಲ್ಲಿ ಕುಳಿತು,   ತನ್ನ ಪಕ್ಕದ ಸೀಟನ್ನು  ಪ್ರತಾಪ್ಗೆ  ಹಿಡಿದನು. ಅಷ್ಟರಲ್ಲಿ ಬಸ್ಸಿನ ಬಾಗಿಲ ಬಳಿ ಯಾರೋ  ” ಕಳ್ಳ ಕಳ್ಳ ಹಿಡಿಯಿರಿ”  ಅಂತ ಕೂಗಿದರು. ಚಂದ್ರು ಯಾರೋ ಪರ್ಸ್ ಎಗರಿಸಿರಬೇಕು, ಅಂತ ತನ್ನ ಪ್ಯಾಂಟಿನಲ್ಲಿದ್ದ ಪರ್ಸ್ ಚೆಕ್ ಮಾಡಿದ. ಪರ್ಸ್ ಭದ್ರವಾಗಿತ್ತು. ನಂತರ ಪ್ರತಾಪ್ ಎಲ್ಲಿ ಅಂತ ಬಸ್ಸಿನ ಹಿಂದೆ ನೋಡಿದ ಆದರೆ ಅವನು ಕಾಣಲಿಲ್ಲ. ಎಲ್ಲಿ ಹೋದ ಇವನು ಅಂತ ಮುಂದೆ ಎದ್ದು ನೋಡಿದ, ಆದರೆ ಮುಂದೆ ಕೂಡ ಇರಲಿಲ್ಲ. ಎಲ್ಲಿ ಹೋದ ಇವನು ಅಂತ ಅಂದುಕೊಳ್ಳುತ್ತ  ತನ್ನ ಸೀಟಿನಲ್ಲಿ ಕುಳಿತು ಬಸ್ಸಿನ ಕಿಟಕಿಯಿಂದ ರಸ್ತೆಯ ಆ ಬದಿ ನೋಡಿದಾಗ,  ಅಲ್ಲಿ ರಸ್ತೆಯ ವಿಭಜಕವನ್ನು ಹಾರಿ ಪ್ರತಾಪ್ ಆ ಕಡೆ ನಡೆದುಕೊಂಡು ಹೋಗುತ್ತಿದ್ದ. ಅದನ್ನು ನೋಡಿ ಚಂದ್ರು  ಬಸ್ ಬಿಟ್ಟು ಅಲ್ಲಿ ಯಾಕೆ ಹೋಗುತ್ತಿದ್ದಾನೆ, ಸರಿ ಫೋನ್ ಮಾಡೋಣ ಅಂತ ಮೇಲಿನ ಜೇಬಿಗೆ ಕೈ ಹಾಕಿದ. ಮೇಲಿನ ಜೇಬಿನಲ್ಲಿದ್ದ  ಐ ಫೋನ್ ಕಾಣೆಯಾಗಿತ್ತು. 

ಚಂದ್ರು ” ಏ ಕಳ್ಳ ಕಳ್ಳ” ಅಂತ ಜೋರಾಗಿ ಕೂಗಿದ, ಅಷ್ಟರಲ್ಲಿ  ಚಂದ್ರು ಹತ್ತಿದ ಬಸ್ ನಿಲ್ದಾಣದಿಂದ  ಹೊರಟ್ಟಿತ್ತು. ಇಳಿದು ಹೊರಟರು ಅವನು ಸಿಗುವುದಿಲ್ಲ ಅಂತ ಅರಿವಾಗಿ,   ಪ್ರತಾಪ್ ಮರೆಯಾಗುವವರೆಗೂ ಚಂದ್ರು ಅವನನ್ನು ಅವಕ್ಕಾಗಿ ನೋಡುತ್ತಾ ಹಾಗೆ ಕುಳಿತ. 

ಚಂದ್ರುವಿನ ಕಣ್ಣ ಮುಂದೆಯೇ ಕಳ್ಳ ಹೋಗುತ್ತಿದ್ದ.  ಪಕ್ಕದಲ್ಲಿ ಅವನಿಗೆ ಹಿಡಿದ ಸೀಟು ಚಂದ್ರುವನ್ನು ನೋಡಿ ನಗುತ್ತಿತ್ತು. 

ಅವನು  ಮಿಸ್ಡ್ ಕಾಲ್ ಕೊಟ್ಟು,  ನಂಬರ್ ಸೇವ್ ಮಾಡಿಕೊಳ್ಳಲು ಹೇಳಿದ್ದು ಚಂದ್ರುವಿನ ಫೋನ್ ಯಾವುದು, ಎಲ್ಲಿ ಇಟ್ಟುಕೊಳ್ಳುತ್ತಾನೆ ಅಂತ ನೋಡಲು!!

– ಶ್ರೀನಾಥ್ ಹರದೂರ ಚಿದಂಬರ 

2 thoughts on “ಮಿಸ್ಡ್ ಕಾಲ್ !!

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s