ಯಾರೋ ಪ್ರೋಕ್ಷಣೆ ಮಾಡಿದ್ದರು … ಆದರೆ ತೀರ್ಥದಿಂದ ಅಲ್ಲ!!

ಅವತ್ತು ಇಡೀ ಮನೆ ಬಹಳ ಚೆನ್ನಾಗಿ ಹೂವು, ಮಾವಿನ ಸೊಪ್ಪಿನಿಂದ  ಅಲಂಕಾರಗೊಂಡು  ಕಂಗೊಳಿಸುತ್ತಿತ್ತು. ಮದುವೆ ಮನೆಯ ಸಡಗರ ಎಲ್ಲಡೆ ಕಾಣಿಸುತ್ತಿತ್ತು. ಹುಡುಗರೆಲ್ಲ  ಬಹಳ ಗಡಿಬಿಡಿಯಿಂದ  ಒಂದೊಂದು ಕೆಲಸ ವಹಿಸಿಕೊಂಡು ಓಡಾಡುತ್ತಿದ್ದರು. ಮನೆಯ ಪಕ್ಕದಲ್ಲಿಯೇ ಇದ್ದ ದೇವಸ್ಥಾನದಲ್ಲಿ  ಮದುವೆ ಮಾಡುವುದು ಅಂತ ನಿರ್ಧಾರ ಆಗಿದ್ದರಿಂದ,  ಕಲ್ಯಾಣ ಮಂಟಪದ ಬದಲು ಮನೆಯಲ್ಲಿಯೇ ಎಲ್ಲ ನೆಂಟರು ಉಳಿದುಕೊಳ್ಳುವ  ವ್ಯವಸ್ಥೆಯನ್ನು ಮಾಡಿದ್ದರು. ಮರು ದಿನ ಮದುವೆ ಇದ್ದುದ್ದರಿಂದ ಒಬ್ಬೊಬ್ಬರೇ ನೆಂಟರು ಊರಿನಿಂದ  ಮನೆಗೆ ಬರುತ್ತಿದ್ದರು. ರಮೇಶ ಮತ್ತು ಅವನ ಸ್ನೇಹಿತರು ಮನೆಗೆ ನೀರನ್ನು ಒದಗಿಸುವ ಕೆಲಸವನ್ನು ವಹಿಸಿಕೊಂಡಿದ್ದರು. ನೀರು ತರಲು ಹಳ್ಳಿಯ ಹೊರಗಡೆ ಇದ್ದ ದೊಡ್ಡ ಭಾವಿಯಿಂದ ನೀರು ಸೇದಿ, ಕೊಡಗಳಲ್ಲಿ ತುಂಬಿಸಿಕೊಂಡು ಬಂದು, ಮನೆಯ ಹೊರಗಡೆ ಇಟ್ಟ ದೊಡ್ಡ ಡ್ರಮ್ ಗಳಲ್ಲಿ ತುಂಬಿಸ ಬೇಕಿತ್ತು.  ಮನೆಗೆ ಬಂದ ನೆಂಟರ ಸ್ನಾನಕ್ಕೆ , ಕುಡಿಯಲು , ಪಾತ್ರೆ ತೊಳೆಯಲು, ಬಟ್ಟೆ ಒಗೆಯಲು ನೀರು ತಂದು ತುಂಬಿಸಿ ಇಡಬೇಕಾಗುತ್ತಿತ್ತು.  ಆಗಲೇ ಬೆಳಗ್ಗಿನಿಂದ ಮೂರು ಬಾರಿ ಭಾವಿಯಿಂದ ನೀರು ತಂದು ಡ್ರಮ್ ಗಳನ್ನೂ  ತುಂಬಿಸಿ ರಮೇಶ ಮತ್ತು ಅವನ ಸ್ನೇಹಿತರು ಸುಸ್ತಾಗಿ ಹೋಗಿದ್ದರು. ಚೆನ್ನಾಗಿ ಬಟ್ಟೆ ಧರಿಸಿ, ಮದುವೆ ಮನೆಯಲ್ಲಿ ಓಡಾಡಿಕೊಂಡು, ಊಟ ಮಾಡಿ ಆರಾಮಾಗಿ ಇರಬೇಕೆಂದುಕೊಂಡಿದ್ದ ಅವರ ಯೋಜನೆ ನೀರು ತುಂಬಿಸುವ ಕೆಲಸದಿಂದ ತಲೆ ಕೆಳಗಾಗಿತ್ತು. 

ರಾತ್ರಿ ಊಟ ಮುಗಿದ ಮೇಲೆ ರಮೇಶ ಮತ್ತು ಅವನ ಸ್ನೇಹಿತರು, ಬೆಳಿಗ್ಗೆ ಯಾರಿಗೂ ಸ್ನಾನಕ್ಕೆ ತೊಂದರೆ ಆಗಬಾರದು ಅಂತ ಎಲ್ಲ ಡ್ರಮ್ ಗಳನ್ನೂ ತುಂಬಿಸಿ ಇಟ್ಟರು. ನೀರು ತುಂಬಿಸಿ ಮುಗಿಯುವಾಗ ರಾತ್ರಿ ಒಂದು ವರೆ ಆಗುತ್ತಾ ಬಂದಿತ್ತು. ಸ್ನೇಹಿತರು ಸಿಕ್ಕ ಸಿಕ್ಕ ಜಾಗದಲ್ಲಿ ಚಾಪೆ ಹಾಸಿಕೊಂಡು ಮಲಗಿಬಿಟ್ಟರು. ಮನೆಯಲ್ಲಿ ಎಲ್ಲರು ಆಗಲೇ ಮಲಗಿಬಿಟ್ಟಿದ್ದರು. ಸಣ್ಣಕೆ  ಬೆಡ್ ಲೈಟ್  ಬಿಟ್ಟರೆ  ಬೇರೆ ಯಾವ ಬೆಳಕು ಇರಲಿಲ್ಲ.  ರಮೇಶನು  ಇನ್ನು ಲೈಟ್  ಹಾಕಿದರೆ ಎಲ್ಲರಿಗು ತೊಂದರೆ ಆಗುತ್ತೆ ಅಂತ  ಅಂದುಕೊಂಡು ಆ ಮಬ್ಬು ಬೆಳಕಲ್ಲೇ   ಮಲಗಲು ಜಾಗ ಹುಡುಕುತ್ತ ಮನೆಯಲ್ಲ ಒಂದು ಬಾರಿ ಸುತ್ತು ಹಾಕಿದನು. ರಮೇಶನಿಗೆ ಎಲ್ಲಿಯೂ ಮಲಗಲು ಜಾಗ ಕಾಣಿಸಲಿಲ್ಲ, ಇಡೀ ಮನೆಯಲ್ಲಿ ಏನಿಲ್ಲ ಅಂದರು ಐವತ್ತು ಜನ ಮಲಗಿದ್ದರು.  ಹಾಗೆ ಹುಡುಕುತ್ತಿದ್ದ ರಮೇಶನಿಗೆ ಒಂದು ಮೂಲೆಯಲ್ಲಿ ಒಬ್ಬರು ಮಲಗುವಷ್ಟು ಜಾಗ ಕಾಣಿಸಿತು. ರಮೇಶ ಅಲ್ಲಿಗೆ ಹೋಗಿ ನೆಲಕ್ಕೆ ಸಣ್ಣ ಬಟ್ಟೆ ಹಾಸಿಕೊಂಡು ಮಲಗಿಬಿಟ್ಟ. ರಮೇಶನಿಗೆ  ಸಿಕ್ಕಾಪಟ್ಟೆ ಸುಸ್ತಾಗಿದ್ದರಿಂದ  ಜೋರಾಗಿ ಗೊರಕೆ ಹೊಡೆಯಲಾರಂಭಿಸಿದ.  ರಮೇಶ ಮಲಗಿ ಸ್ವಲ್ಪ ಹೊತ್ತು ಆಗಿತ್ತು ಅಷ್ಟೇ, ಇದ್ದಕ್ಕಿದ್ದಂತೆ ಅವನ ಮೇಲೆ ಯಾರೋ ಜೋರಾಗಿ ನೀರು ಪ್ರೋಕ್ಷಣೆ ಮಾಡಿದಂತೆ   ಅನಿಸಿ   ಗಡಬಡಿಸಿ ಎದ್ದು ಕೂತ. ಅವನ ಮುಖ ಪೂರ್ತಿ  ಒದ್ದೆ ಆಗಿತ್ತು.  ಮೊದಲಿಗೆ ಯಾರೋ ತಮಾಷೆ ಮಾಡಿದ್ದಾರೆ ಅಂದುಕೊಂಡ, ಆದರೆ ಎಲ್ಲರು ಮಲಗಿದ್ದನ್ನು  ನೋಡಿ,  ಎಲ್ಲಿಂದ ನೀರು ಬಂತು ಅಂತ ಗಮನಿಸಿ ನೋಡಿದ. ಅವನು ಮಲಗಿದ್ದ ಜಾಗದ ಮೇಲಿನಿಂದ  ನೀರು ತೊಟ್ಟಿಕ್ಕುತ್ತಿತ್ತು. 

ಆಗ ಅವನಿಗೆ ಗೊತ್ತಾಯಿತು ಅವನು ಮಲಗಿದ್ದು  ಒಂದು ಜೋಲಿಯ ಕೆಳಗೆ ಅಂತ.  ಜೋಲಿಯಲ್ಲಿದ್ದ ಮಗು ಅವನ ಗೊರಕೆಗೆ ಎದ್ದು ಸುಸು  ಮಾಡಿತ್ತು.  ಸೀರೆಯ ಜೋಲಿಯಾಗಿದ್ದರಿಂದ ಮಗು ಮಾಡಿದ ಸುಸು ಸೀದಾ ರಮೇಶನ ಮುಖದ ಮೇಲೆ ಪ್ರೋಕ್ಷಣೆ ಆಗಿತ್ತು.   

 – ಶ್ರೀನಾಥ್ ಹರದೂರ ಚಿದಂಬರ

2 thoughts on “ಯಾರೋ ಪ್ರೋಕ್ಷಣೆ ಮಾಡಿದ್ದರು … ಆದರೆ ತೀರ್ಥದಿಂದ ಅಲ್ಲ!!

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s