
ತೀರ್ಥಹಳ್ಳಿಯ ತುಂಗಾ ಮಹಾ ವಿದ್ಯಾಲಯದಲ್ಲಿ ಓದುತ್ತಿದ್ದ ಸಮಯ ಅದು. ಸಿಕ್ಕಾಪಟ್ಟೆ ಕಷ್ಟ ಪಟ್ಟು ಪಿಯುಸಿ ಮುಗಿಸಿ ಫಸ್ಟ್ ಇಯರ್ ಬಿಎಸ್ಸಿಗೆ ಕಾಲಿಟ್ಟಿದ್ದೆ. ಕಾಲೇಜಿನಲ್ಲಿ ಓದುವಾಗ ಕ್ಲಾಸ್ ರೂಮಿ ಗಿಂತ ಹೊರಗಡೆ ಕಾಲ ಕಳೆಯುತ್ತಿದ್ದುದೇ ಜಾಸ್ತಿ. ನಾನು ನನ್ನ ಸ್ನೇಹಿತ ನವೀನ ಮೊದಲೆರಡು ಕ್ಲಾಸ್ ಆದ ಕೂಡಲೇ ಹೊರಗಡೆ ಬಂದು ಕಾಲೇಜಿನ ಕ್ಯಾಂಟೀನ್ಗೆ ಹೋಗಿ ಏನಾದರೂ ತಿಂದು, ಅಲ್ಲಿ ಇಲ್ಲಿ ತಿರುಗಿ ನಂತರ ಪ್ರಾಕ್ಟಿಕಲ್ ಕ್ಲಾಸ್ ಅಟೆಂಡ್ ಮಾಡಿ, ನಂತರ ಮನೆ ದಾರಿ ಹಿಡಿಯುತ್ತಿದ್ವಿ. ವಾರವಿಡೀ ನಮ್ಮ ದಿನಚರಿ ಹೀಗೆ ಇರುತ್ತಿತ್ತು. ಮೂರು ವರುಷ ಅಟೆಂಡೆನ್ಸ್ ಶಾರ್ಟೆಜ್ ಆಗಿ, ದಂಡ ಕಟ್ಟಿ ಪರೀಕ್ಷೆ ಬರೆದಿದ್ದು ನನ್ನ ಸಾಧನೆ. ಎರಡನೇ ಬಿಎಸ್ಸಿ ಓದುವಾಗ, ನನಗೆ ಒಂದು ಇಂಗ್ಲಿಷ್ ತರಗತಿ ನಡೆಯುತ್ತಿದ್ದ ಬಗ್ಗೆ ಗೊತ್ತೇ ಇರಲಿಲ್ಲ. ತರಗತಿಯಲ್ಲಿ ಆ ಉಪನ್ಯಾಸಕರು ನನ್ನ ಹೆಸರು ಹೇಳಿ, ಇವರು ಕಾಲೇಜಿಗೆ ಬರುತ್ತಿಲ್ವಾ ಅಂತ ಕೇಳಿದ ಮೇಲೆ, ನನ್ನ ಸ್ನೇಹಿತ ಇದರ ಬಗ್ಗೆ ನನಗೆ ಹೇಳಿದ. ನಂತರ ಇಡೀ ವರುಷ ಅವರ ಒಂದೇ ಒಂದು ಕ್ಲಾಸ್ ಮಿಸ್ ಮಾಡದೆ ಅಟೆಂಡ್ ಮಾಡಿ, ಅವರ ಹತ್ತಿರ ಏನೇನೋ ಸುಳ್ಳು ಹೇಳಿ ಬಚಾವಾದೆ ಬಿಡಿ.
ನನಗೆ ಕಾಲೇಜಿನಲ್ಲಿ ಅತಿ ಪ್ರಿಯವಾದ ಜಾಗ ಅಂದರೆ ಆಗ ಇದ್ದ ಕಾಲೇಜಿನ ಭಟ್ಟರ ಕ್ಯಾಂಟೀನ್. ಈಗ ಕಾಲೇಜು , ಕಾಲೇಜಿನ ಕ್ಯಾಂಟೀನ್ ಎಲ್ಲ ತುಂಬ ಬದಲಾಗಿದೆ ಬಿಡಿ. ಯಾರಾದರೂ ಉಪನ್ಯಾಸಕರು ಬಂದಿಲ್ಲ ಅಂದ್ರೆ ಸ್ನೇಹಿತರಾದ ನಾಗೇಶ ಮತ್ತು ಶಿವೂ ಕೂಡ, ಹೊರಗಡೆನೇ ಇರುತ್ತಿದ್ದ ನನ್ನ ಮತ್ತು ನವೀನನ ಜೊತೆಗೆ ಕ್ಯಾಂಟೀನ್ ಗೆ ಬರುತ್ತಿದ್ದರು. ಕ್ಯಾಂಟೀನ್ ಒಳಗಡೆ ಹೋಗಿ ” ಭಟ್ರೇ, ಎರಡು ಅರ್ಧ ಟೀ , ಜೊತೆಗೆ ಎರಡು ಲೋಟ ಎಕ್ಸ್ಟ್ರಾ ಅಂತ ಹೇಳಿ, ಅವರು ಸಣ್ಣ ಸಣ್ಲ ಲೋಟದಲ್ಲಿ ಕೊಡುತ್ತಿದ್ದ ಟೀ ತೆಗೆದುಕೊಂಡು ಕಾಲಿ ಲೋಟಕ್ಕೆ ಮತ್ತೆ ಅರ್ಧ ಹಾಕಿ ನಾಲ್ಕು ಜನ ಕುಡಿಯುತ್ತಿದ್ದೆವು. ಒಂದು ಉಪ್ಪಿಟ್ಟು ಅವಲಕ್ಕಿ ಹೇಳಿ ನಾಲ್ಕು ಜನ ಸೇರಿ ತಿಂದಿದ್ದು ಉಂಟು. ನಮಗೆ ಆಗ ಕ್ಯಾಂಟೀನ್ ಅಲ್ಲಿ ಕೊಡುತ್ತಿದ್ದ ತಿಂಡಿಯ ಕ್ವಾಲಿಟಿ ಗಿಂತ ಕ್ವಾಂಟಿಟಿ ತುಂಬ ಮುಖ್ಯವಾಗಿತ್ತು. ಮಧ್ಯಾಹ್ನ ಒಂದು ಉಪ್ಪಿಟ್ಟು ಅವಲಕ್ಕಿ ತಿಂದರೆ ಸಂಜೆ ತನಕ ಹೊಟ್ಟೆ ಕಮಕ್ ಕಿಮಕ್ ಅಂತ ಅನ್ನುತಿರಲಿಲ್ಲ.
ಭಟ್ಟರ ಕ್ಯಾಂಟೀನ್ ಅಲ್ಲಿ ಒಂದು ವಿಶೇಷ ಏನೆಂದರೆ, ಅವರು ಟೀ ಮಾಡಲು ಉಪಯೋಗಿಸುತ್ತಿದ್ದ ಹಾಲು. ಭಟ್ಟರು ಟೀ ಮಾಡುತ್ತಿದ್ದ ಜಾಗದಲ್ಲಿ , ಒಂದು ದೊಡ್ಡ ಪಾತ್ರೆಯಲ್ಲಿ , ಸ್ಟವ್ವಿನ ಮೇಲೆ ಯಾವಾಗಲೂ ಹಾಲು ಇಟ್ಟಿರುತ್ತಿದ್ದರು. ವಿಶೇಷ ಏನೆಂದರೆ ಅವರ ಹಾಲು ಯಾವತ್ತಿಗೂ ಉಕ್ಕುತ್ತಿರಲಿಲ್ಲ, ಕುದಿಯುತ್ತಿತ್ತು. ನಾವು ಕ್ಯಾಂಟೀನ್ ಒಳಗಡೆ ಹೋಗುವಾಗ, ಭಟ್ರೇ, ಹಾಲು ಕುದೀತಾ ಇದೆ ನೋಡಿ, ಅಂದ್ರೆ ಸಾಕು ಭಟ್ರು ಪಕ್ಕದಲ್ಲಿ ಇಟ್ಟಿರುತ್ತಿದ್ದ ಒಂದು ಜಗ್ಗಿನಲ್ಲಿದ್ದ ನೀರನ್ನು ತೆಗೆದು ಹಾಲಿಗೆ ಹಾಕುತ್ತಿದ್ದರು. ಆಗ ಕುದಿಯುತ್ತಿದ್ದ ಹಾಲು ಮತ್ತೆ ಶಾಂತವಾಗುತ್ತಿತು. ಭಟ್ರು ನಮಗೆ ” ನೋಡಿ ಈಗ ಸರಿಯಾಯ್ತು” ಅನ್ನುತ್ತಿದ್ದರು. ನಾವು ನಗಾಡುತ್ತಾ, ಭಟ್ರೇ , ಎರಡು ಅರ್ಧ ಟೀ, ಎರಡು ಲೋಟ ಎಕ್ಸ್ಟ್ರಾ, ಅಂತ ಆರ್ಡರ್ ಹೇಳಿ ಕ್ಯಾಂಟೀನ್ ಒಳಗಡೆ ಹೋಗುತ್ತಿದ್ದೆವು. ಆ ಹಾಲಿನಲ್ಲಿ ಹಾಲಿಗಿಂತ ನೀರಿನ ಅಂಶ ಜಾಸ್ತಿ ಇರುತ್ತಿತ್ತು ಹಾಗು ನೀರಿಗೆ ಹಾಲು ಬೆರೆಸುತ್ತಿದ್ದ ಕಾರಣ ಆ ನೀರು ( ಹಾಲು) ಉಕ್ಕುತ್ತಿರಲಿಲ್ಲ ಅಷ್ಟೇ. ನಾವು ಕಾಲೇಜು ಮುಗಿಸುವವರೆಗೂ ಕ್ಯಾಂಟೀನ್ ಒಳಗಡೆ ಹೋಗುವಾಗ ನಾವು ” ಭಟ್ರೇ, ಹಾಲು ಕುದೀತಾ ಇದೆ ನೋಡಿ” ಅನ್ನುವುದು , ಭಟ್ಟರು ನೀರು ಹಾಕುವುದು ನಡೆಯುತ್ತಲೇ ಇತ್ತು.
ಇವತ್ತಿಗೂ ಮನೆಯಲ್ಲಿ ಹಾಲು ಉಕ್ಕುವಾಗ ಭಟ್ಟರ ಕುದಿಯುವ ಹಾಲು ನೆನಪಾಗುತ್ತೆ. ಸ್ನೇಹಿತರ ಜೊತೆ ಸೇರಿದಾಗ ಕಾಲೇಜಿನ ವಿಷಯ ಬಂದಾಗೆಲ್ಲ ಭಟ್ಟರ ಕುದಿಯುವ ಹಾಲಿನ ಬಗ್ಗೆ ಒಂದು ನೆನಪು ಇದ್ದೆ ಇರುತ್ತೆ.
– ಶ್ರೀನಾಥ್ ಹರದೂರ ಚಿದಂಬರ
Beautiful memories🙏
LikeLike
Thank you 😊 college days memories are always beautiful
LikeLike
ಸವಿ ಸವಿ ನೆನಪು ಸಾವಿರ ನೆನಪು.. ಎದೆಯಾಳದಲಿ ಬಚ್ಚಿಕೊಂಡಿರುವ ಅಚ್ಚಳಿಯದ ನೂರೊಂದು ನೆನಪು 😍
LikeLike
Yes… memories are always sweet 😊
LikeLike